ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಜಯ್ ದಾರಿಹೋಕ
ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)

ಆತ್ಮೀಯ ಕನ್ನಡಿಗ ಮಿತ್ರರೇ, ಹಿರಿಯ ಚಿಂತಕರೇ, ಶಿಕ್ಷಣ ತಜ್ಞರೇ, ಸರಕಾರಿ ಹಾಗೂ ಆಡಳಿತ,ಯೋಜನಾ ಕರ್ತೃರೇ,
ವಿಷಯ ಪ್ರಸ್ತಾಪ ಮಾಡುವ ಮುಂಚೆ ಒಂದು ನಿದರ್ಶನ ಕೊಡಲು ಬಯಸುತ್ತೇನೆ
.
ಒಮ್ಮೆ (೧೯೨೩ ಮಾರ್ಚ್ ಸುಮಾರಿಗೆ) ಸ್ಪೇನ್ ನ ಮ್ಯಾಡ್ರಿಡ್ ಯೂನಿವರ್ಸಿಟಿಯೊಂದರಿಂದ ಆಲ್ಬರ್ಟ್ ಐನ್ ಸ್ಟೈನ್ ಅವರಿಗೆ ವಿಜ್ಞಾನದ ವಿಷಯದಲ್ಲಿ ಮಾತನಾಡಲು ಆಹ್ವಾನ ಬಂದಿತ್ತು. ಅದನ್ನು, ಐನ್ ಸ್ಟೈನ್ ಒಂದು ಷರತ್ತಿನೊಂದಿಗೆ ಒಪ್ಪಿಕೊಳ್ಳುತ್ತಾರೆ. “ನಿಮ್ಮ ಆಹ್ವಾನಕ್ಕೆ ಧನ್ಯವಾದ.ಆದರೆ ನಾನು ನನ್ನ ಪ್ರವಚನವನ್ನು ಕೇವಲ ವೈಜ್ಞಾನಿಕ ಚಿತ್ರಗಳು ಹಾಗೂ ಪ್ರಮೇಯಕ್ಕಷ್ಟೇ ಸೀಮಿತಗೊಳಿಸುವೆ, ಯಾಕೆಂದರೆ, ನನ್ನ ಅಧ್ಯಯನದ ವಿಷಯಗಳನ್ನು ವೈಚಾರಿಕವಾಗಿ, ಬೌದ್ಧಿಕವಾಗಿ ಮಂಡಿಸಲು ನನಗೆ ನನ್ನ ಮಾತೃಭಾಷೆ ಜರ್ಮನ್ ನಲ್ಲಿ ಮಾತ್ರ ಸಾಧ್ಯ.ನನಗೆ ಇತರ ಭಾಷೆಗಳಲ್ಲಿ ಹಿಡಿತ ಇಲ್ಲ ಎಂದು ತಿಳಿಸಲು ಖೇದವಾಗುತ್ತಿದೆ.. ನಿಮ್ಮನ್ನು , ನಿಮ್ಮ ದೇಶವನ್ನು ಸಂದರ್ಶಿಸಲು ಉತ್ಸುಕನಾಗಿದ್ದೇನೆ “

ಹೀಗೆ ಹೇಳಿಯೇ ಆಯೋಜಕರ ಅನುಮತಿ ಪಡೆದು ತಮ್ಮ ಸ್ಪೇನ್ ಪ್ರವಾಸವನ್ನು ಮುಗಿಸುತ್ತಾರೆ.
೧೯೩೦ ರಲ್ಲಿ, ಹಿಟ್ಲರ್ ನ ಜರ್ಮನಿ ಯಿಂದ ತಪ್ಪಿಸಿಕೊಂಡು ಅಮೆರಿಕಕ್ಕೆ ಬಂದಿಳಿದ ಐನ್ ಸ್ಟೈನ್ ಮಾತಾಡಿದ್ದು ಮಾತೃ ಭಾಷೆಯಲ್ಲಿ.. ವಿಡಿಯೋ ಕೆಳಗೆ ಕೊಟ್ಟಿದ್ದೇನೆ.

ಐನ್ ಸ್ಟೈನ್ ಯಾವತ್ತೂ ಹೇಳುತ್ತಿದ್ದದ್ದು … “ನನ್ನ ಯಾವುದೇ ವೈಜ್ಞಾನಿಕ ಅನ್ವೇಷಣೆಗಳು ಕೇವಲ ವೈಚಾರಿಕ ವಿಶ್ಲೇಷಣೆ, ವಿಮರ್ಶೆ ಗಳಿಂದಲೇ ಹುಟ್ಟಿದ್ದಲ್ಲ.. ಕೆಲವೊಮ್ಮೆ ಇದ್ದಕಿದ್ದಂತೆ ಹೊಳಹುಗಳು(intuition) ಮೂಡಿ ಹೊಸ ಆಲೋಚನೆಗಳು, ಸಾಧ್ಯತೆಗಳು ಹಾಗೂ ಆವಿಷ್ಕಾರಕ್ಕೆ ಕಾರಣವಾಗುತ್ತವೆ . ಆದರೆ ಇಂಥ ಸ್ಥಿತಿ ಉಂಟಾಗಲು ,ಹಿಂದೆ ಕಲಿತ, ಸಂಗ್ರಹಿತ, ದಾಖಲಿತ ಬೌದ್ಧಿಕ ಅನುಭವಗಳು,ಗಮನಿಕೆಗಳು ಖಂಡಿತವಾಗಿಯೂ ಕಾರಣೀಭೂತ ವಾಗಿರುತ್ತವೆ ..”ಎನ್ನುತ್ತಾರೆ.
ಹಾಗೆ ನೋಡಿದರೆ, ಐನ್ಸ್ಟೆಯಿನ್ ರ ಅದ್ಭುತ ಕಲ್ಪನಾ ಶಕ್ತಿಯ ಹಿಂದೆ ಒಂದಕ್ಕೊಂದು ತೌಲನಿಕವಾಗಿ ಸಂಬಂಧಪಡದ abstract ವಿಷಯಗಳು ಪ್ರಮುಖ ಪಾತ್ರ ವಹಿಸುತ್ತಿದ್ದುದು ಮಹತ್ವದ ಸಂಗತಿ. ಸಂಗೀತದ chords , ಯಾವುದೋ ಕಲಾಕೃತಿ, ಏನೋ ವಿಚಾರ, ಒಂದು ಐಡಿಯಾ, ಯಾವುದೋ ವಿದ್ಯಮಾನ ಇತ್ಯಾದಿಗಳೂ ಚಿತ್ತಾಕಾಶದಲ್ಲೆಲ್ಲೋ ಒಂದೆಡೆ ಸಂಧಿಸಿದಾಗ ಅವು ಬೇರೆಯದೇ ಹೊಸ ಶೋಧನೆಗೆ ಇಂಬು ಕೊಡುತ್ತವೆ ಹಾಗೂ ಹೊಸ ಸಾಧ್ಯತೆಗಳಿಗೆ ದಾರಿ ಮಾಡಿಕೊಡುತ್ತವೆ ಹಾಗೂ ಐನ್ ಸ್ಟೈನ್ ರಂತಹ ಮೇಧಾವಿಗಳು ಇಂತಹವಕ್ಕೆ ವಿಜೃಂಭಣೆಯ ನಿದರ್ಶನಗಳಾಗಿದ್ದಾರೆ.

ಇಲ್ಲಿ ನಾನು ಹೇಳ ಬಯಸುವ ವಿಷಯ ಇಷ್ಟೇ. Innovation ಅನ್ನುವ ಒಂದು ಉತ್ಪನ್ನದ ಹಿಂದೆ ಅವನ್ನೆಲ್ಲ ಆಳವಾಗಿ ರೆಕಾರ್ಡ್ ಮಾಡಿಕೊಳ್ಳುವ ಅವಸ್ಥೆ ಒಂದಿರುತ್ತೆ. ಇಂತಹ ಪ್ರಕ್ರಿಯೆಗೆ ದಕ್ಷತೆ, ವ್ಯಾಪ್ತಿ, ಆಳ,ನಿಖರತೆ ತಂದುಕೊಡುವುದು ಮಾತೃ ಭಾಷೆಯ ಮಾಧ್ಯಮಕ್ಕೆ ಮಾತ್ರ ಸಾಧ್ಯ.
ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಶಿಕ್ಷಣ ಅನ್ನುವ ಬಗ್ಗೆ ಹೋದ ತಿಂಗಳು ಮಾತಾಡಿದವಷ್ಟೇ. ಇದನ್ನು ಮತ್ತೆ ಮುಂದುವರೆಸುವ ಅಳಿಲು ಯತ್ನ ಮತ್ತೆ ಮಾಡುತ್ತಿದ್ದೇವೆ.
ನಮಗಿರುವ ಗಮನಾರ್ಹ ಬಾಧ್ಯತೆ ಅಂದರೆ , ಈ ವಿಷಯದ ಬಗ್ಗೆ ನಿಖರವಾದ ಜಾಗೃತಿ ಮೂಡಿಸುವುದು. ಯಾಕೆಂದರೆ ಇದು ನೀವು ಮುಂಚೆ ಕೇಳಿ ತಿಳಿದುಕೊಂಡಿರುವ ಕನ್ನಡ ಪರ ಹೋರಾಟದ ತರಹ ಅಲ್ಲ . ಕನ್ನಡದಲ್ಲಿ ಶಿಕ್ಷಣ ಅಂದರೆ, ವಿಜ್ಞಾನದ ಪುಸ್ತಕವನ್ನು ಸಾರಾ ಸಗಟಾಗಿ ತರ್ಜುಮೆ ಮಾಡಿ ಮುಗಿಸುವುದು ಅನ್ನುವ ಪೂರ್ವಾಗ್ರಹ ಬಿಡಬೇಕು.
ನಿಮ್ಮ ಮಕ್ಕಳು ಇಂಗ್ಲಿಷ್ ಶಾಲೆಗೇ ಹೋಗುತ್ತಿದ್ದಾರೆ, ಅವರನ್ನು ಬಿಡಿಸಿ ಕನ್ನಡ ಶಾಲೆಗೇ ಹಾಕಿ ಅಂತ ಕೂಡ ನಾವ್ಯಾರೂ ಹೇಳುತ್ತಿಲ್ಲ.

ನಾವು ಹೇಳುತ್ತಿರುವುದು ಇಷ್ಟೇ. ಇವತ್ತಿಗೂ ಲಕ್ಷಗಟ್ಟಲೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಾ ಇದ್ದಾರೆ ತಾನೇ. ಅವರಲ್ಲಿ ವಿಜ್ಞಾನ, ಗಣಿತ ವಿಷಯದಲ್ಲಿ ಆಸಕ್ತಿಯುಳ್ಳವರೂ ಇದ್ದಾರೆ ತಾನೇ. ಅವರಲ್ಲಿ ಬ್ರಿಲಿಯಂಟ್ ಆದವರಿಗೆ ಕನ್ನಡ ದಲ್ಲಿ ಶಿಕ್ಷಣಕ್ಕೆ ಅವಕಾಶ ಮಾಡಿ ಕೊಡಿ . ಅಂದರೆ ಇಂಗ್ಲಿಷ್ ಟರ್ಮಿನಾಲಜಿ ಅನುವಾದಿಸದೆ,ಹಾಗೆಯೇ ಇಟ್ಟುಕೊಂಡು ಆದರೆ ಅರಿಯುವ, ಯೋಚಿಸುವ,ಚಿಂತಿಸುವ, ಮಂಥಿಸುವ ಉತ್ತರಿಸುವ ಪ್ರಕ್ರಿಯೆಯನ್ನು ಕನ್ನಡದಲ್ಲಿ ನಡೆಸುವ ಅವಕಾಶ ಮಾಡಿ ಕೊಡಿ. ಬೇಸಿಕ್ ಇಂಗ್ಲಿಷ್ ಜ್ಞಾನ ಇರುವುದರಿಂದ ಕಲಿಯುವಾಗ ಮಧ್ಯೆ ಇಂಗ್ಲಿಷ್ ನುಸುಳಿದರೆ ಸಮಸ್ಯೆ ಇಲ್ಲ. ಆದರೆ, ಮೂಲ ಭೂತವಾಗಿ ಯೋಚಿಸುವದನ್ನು ಕನ್ನಡದಲ್ಲಿ ಮಾಡಲಿ..ಮನಸಾರೆ ಅರ್ಥ ಮಾಡಿಕೊಂಡು ಚರ್ಚಿಸುವುದನ್ನು ಕನ್ನಡದಲ್ಲಿ ಮಾಡಲಿ.

ಕಲಿತು ಪದವಿ ಪಡೆದ ವಿದ್ಯಾರ್ಥಿಗಳು, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರಿಗಿಂತ ಹೆಚ್ಚು ತೀಕ್ಷ್ಣ ರಾಗಿದ್ದು,ಉದ್ಯೋಗದಲ್ಲಿ, ಗ್ಲೋಬಲ್ ಲೆವೆಲ್ ನಲ್ಲಿ ಸ್ಪರ್ಧಾತ್ಮಕ ವಾಗಿ ಮುಂಚೂಣಿಯಲ್ಲಿರುವುದು ಖಂಡಿತ.
ಇಂತವರಿಂದ ಹೊಸ ಐಡಿಯಾ ಗಳು, ಸ್ಟಾರ್ಟ್ ಅಪ್ ಗಳು ಹೆಚ್ಚಿನ ಪ್ರಮಾಣದಲ್ಲಿ ಶುರುವಾಗಿ, ಯಶಸ್ವಿ ಯಾಗಿ ,ಅದರಿಂದ ಔದ್ಯೋಗಿಕ ಉನ್ನತಿಯಾಗಿ ರಫ್ತು,ನೌಕರಿಗಳು ಹೆಚ್ಚಾಗುವವು ಅನ್ನುವದನ್ನು ಬಿಡಿಸಿ ಹೇಳಬೇಕಾಗಿಲ್ಲ… ವಿಜ್ಞಾನ , ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೆಚ್ಚಿನ ಇಂಗ್ಲಿಷ್ ಬೇಕಿಲ್ಲ. ಮುಂಚಿನಿಂದ ದ್ವಿಬಾಷಾ ಸೂತ್ರ ಉಪಯೋಗಿಸಿ , ಆಡು ಮಾತಿನ ಬೇಸಿಕ್ ಇಂಗ್ಲಿಷ್ ಕೊಟ್ಟರೆ ಅಷ್ಟು ಸಾಕು. ಆಕ್ಸ್ಫರ್ಡ್, ಶೇಕ್ಸ್ ಪಿಯರ್ ಇಂಗ್ಲಿಷ್ ಇವರಿಗೆ ಅವಶ್ಯ ಇಲ್ಲ.

ಇದನ್ನು ರಾತ್ರೋ ರಾತ್ರಿ ಮಾಡಲು ಸಾಧ್ಯವಾಗದೆ ಇರಬಹುದು. ಈ ವಿನೂತನ ಪದ್ಧತಿಯಲ್ಲಿ, ರಾಜ್ಯದಲ್ಲಿ ನಾಲ್ಕು ದಿಕ್ಕಿನಲ್ಲಿ ನಾಲ್ಕು ಪ್ರಾಯೋಗಿಕ ವಿಭಾಗಗಳನ್ನು ಐಐಟಿ ಮಾದರಿಯಲ್ಲಿ ತೆರೆಯಿರಿ. ಒಟ್ಟು ನಾಲ್ಕು ಬ್ಯಾಚ್ ನ ಮಕ್ಕಳನ್ನು ಎಂಟ್ರನ್ಸ್ ಟೆಸ್ಟ್ ಮೂಲಕ ಆಯ್ದು ಕೊಳ್ಳಿ. ಈ ಮೇಲೆ ತಿಳಿಸಿದ ಹಾಗೆ ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಿ.. ಇದರ ಫಲಿತಾಂಶದಿಂದ ಉತ್ತೇಜನ ದೊರೆತು ಇನ್ನಷ್ಟು ಸೀಟ್ ಗಳನ್ನೂ ಹೆಚ್ಚಿಸಬಹುದು. ಹೆಚ್ಚು ಕಮ್ಮಿ ಬೈಲಿಂಗ್ಯುವಲ್ (bilingual) ತರವೇ ಇರುವುದರಿಂದ ಭವಿಷ್ಯದ ದೃಷ್ಟಿಯಿಂದ ಕೂಡ ಯಾವುದೇ ಸಮಸ್ಯೆ ಆಗುವುದಿಲ್ಲ. ಸರಕಾರೀ ಕೆಲಸಗಳಲ್ಲೂ ಇವರಿಗೆ ಆದ್ಯತೆ ಕೊಡಬಹುದು.


ಇಷ್ಟು ಹೇಳಿದ ಮೇಲೆ ಒಂದು ವಿಷಯ ಜ್ಞಾಪಕ ದಲ್ಲಿಟ್ಟುಕೊಳ್ಳಿ. ಸ್ವಿಟ್ಜರ್ ಲೆಂಡ್ ನ ಒಟ್ಟಾರೆ ಜನ ಸಂಖ್ಯೆ ಯಷ್ಟು ಎಂಜಿನಿಯರುಗಳು ಭಾರತದಲ್ಲಿ ತಯಾರಾಗುತ್ತಿದ್ದಾಗ್ಯೂ , ರೀಸರ್ಚ್ ಹಾಗೂ ಇನ್ನೋವೇಶನ್ ಗಳಲ್ಲಿ ಆ ದೇಶ ನಮಗಿಂತ ತುಂಬಾನೇ ಮುಂದಿದೆ.ಯಾಕೆ? ಸ್ವಾತಂತ್ರ್ಯ ನಂತರ ನಮ್ಮ ದೇಶದಲ್ಲೇ ಕೆಲಸ,ಅಧ್ಯಯನ,ಸಂಶೋಧನೆ ಮಾಡಿ ನೊಬೆಲ್ ಪುರಸ್ಕೃತರಾದ ವರು ಸೊನ್ನೆ ಯಾಕೆ?. 83% ಕ್ಕೋ ಹೆಚ್ಚಿನ ಪ್ರತಿಶತ ಎಂಜಿನಿಯರ್, ವಿಜ್ಞಾನದ ಪದವೀಧರರು ವೃತ್ತಿಗೆ ಯೋಗ್ಯರಲ್ಲ, ಗುಣಮಟ್ಟ ಕಳಪೆ ಎನ್ನುವ ಸಂಶೋಧನಾ ವರದಿ ಸರ್ವ ವಿದಿತ. ಹೀಗೆ ಯಾಕೆ?


ನಮ್ಮ ಒಂದು ರಾಜ್ಯವನ್ನೇ ತೆಗೆದುಕೊಂಡರೆ ಜನ ಸಂಖ್ಯೆಯಲ್ಲಿ ಒಂದು ಜರ್ಮನಿ ಅಥವಾ,ಸ್ವಿಟ್ಜರ್ ಲ್ಯಾಂಡ್ ಗಳಿಗೆ ಸಮ. ಒಂದು ಉತ್ತಮ ಮಾತೃ ಭಾಷೆಯಲ್ಲಿ ಶಿಕ್ಷಣ ವ್ಯವಸ್ಥೆ ಮಾಡದೆ ಇಡೀ ಪೀಳಿಗೆ ಪೀಳಿಗೆಗಳನ್ನೆ ನಿಕೃಷ್ಟ , ಅದಕ್ಷತೆಯ, unproductive ಶಿಕ್ಷಣ ವ್ಯವಸ್ಥೆ ಗೆ ನೂಕಿದ ಐತಿಹಾಸಿಕ ಅಕ್ಷಮ್ಯ ಪ್ರಮಾದ ಕ್ಕೆ ಯಾರು ಹೊಣೆ? ಇದನ್ನು ಸರಿಯಾದ ರೀತಿಯಲ್ಲಿ ಪ್ರಶ್ನಿಸುವ ಅಥವಾ ಸೂಚಿಸುವ ಗೋಜಿಗೆ ಹೋಗದ ಪ್ರಾಜ್ಞರು ವಾಸ್ತವತೆಯ ಆಧಾರದ ಮೇಲೆ ವೈಜ್ಞಾನಿಕವಾಗಿ ಮಾತಾಡದೇ ಣ. ಹಾಗಾಅಕ್ಗಿ್ಕ್e, ಈ ನಿಟ್ಟಿನಲ್ಲಿ ಭಾವಾವೇಶ ಕ್ಕೆ ಒಳಗಾಗದೇ ಕ್ರಿಯಾಶೀಲ ರಾಗುವುದು ಇಂದಿನ ಅಗತ್ಯ,ಕರ್ತವ್ಯ,ಜವಾಬ್ದಾರಿ…!
ಒಂದು ತಿಂಗಳ ಒಳಗೆ ಸರಕಾರಕ್ಕೆ ಬಂದಿರುವ ಪೆಟಿಶನ್ ಗಳ ಮೂಲಕ ಸಂದೇಶ ಕಳಿಸುವ ಕೆಲಸವಂತೂ ಮಾಡಿಯೇ ಮಾಡುತ್ತೇವೆ..
ಸಾಧ್ಯ ವಾದರೆ, ಇನ್ನಷ್ಟು ಸಿಗ್ನೇಚರ್ ಗಳನ್ನ ಸಾಂಕೇತಿಕವಾಗಿ ಸಲ್ಲಿಸಲು ಪ್ರಯತ್ನಿಸಿ.. ಲಿಂಕ್ ಇಲ್ಲಿದೆ..👇🏻