ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

“ಖ್ಯಾತ ಕತೆಗಾರರೊಬ್ಬರು ಕರೆ ಮಾಡಿ ನೀವು ಯಾವ ಪಂಥದವರು ಅಂತ ಕೇಳಿದ್ದರು..”

ಪಶು ರೋಗ ಪರೀಕ್ಷಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿ ಪ್ರಾದೇಶಿಕ ಸಂಶೋಧನಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ನಟರಾಜು ಎಸ್.ಎಂ. ಅವರು ಮೂಲತಃ ಕನಕಪುರದವರು. ಶ್ರೀಯುತ ನಟರಾಜು ಅವರು ಅಂತರ್ಜಾಲದಲ್ಲಿ ವೈವಿಧ್ಯಮಯ ಕನ್ನಡ ಬರಹಗಳನ್ನು ಸತತವಾಗಿ ಪ್ರಕಟಿಸುತ್ತಾ ಬಂದಿರುವ ಪಂಜು ಮ್ಯಾಗಜಿನ್ ಮೂಲಕ ಅನೇಕ ಒನ್ಲೈನ್ ಓದುಗರು, ಲೇಖಕರುಗಳಿಗೆ ಚಿರಪರಿಚಿತರು. ವಿಜ್ಞಾನಿಯಾಗಿ ಉನ್ನತ ಸರಕಾರೀ ಹುದ್ದೆಯಲ್ಲಿದ್ದರೂ ಅತ್ಯಂತ ವಿನಯ ಹಾಗೂ ಸ್ನೇಹ ಶೀಲರು. ಪ್ರಾಣಿ, ಪಕ್ಷಿಗಳು ಸೇರಿದಂತೆ ನಿಸರ್ಗ, ಕೃಷಿಯ ಬಗ್ಗೆ ಒಳ್ಳೆಯ ಅಸ್ಥೆಯನ್ನಿಟ್ಟು ಕೊಂಡವರು. ಅವರ ಪಂಜು ಪತ್ರಿಕೆ ನಡೆಯುತ್ತಾ ಬಂದು ಇದೀಗ ಒಂದು ದಶಕದ ಸಂಭ್ರಮದ ಗರಿಯನ್ನು ಮುಡಿಗೇರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ರೂವಾರಿ ಹಾಗೂ ಸಂಪಾದಕರಾದ ಡಾ. ನಟರಾಜು ಎಸ್.ಎಂ. ಅವರೊಂದಿಗೆ ನಸುಕು.ಕಾಂ ನಡೆಸಿದ ಒಂದು ಕ್ಷಿಪ್ರ ಸಂದರ್ಶನ ಇಲ್ಲಿದೆ.

  • ಕಳೆದ ಒಂದು ದಶಕದಿಂದ ತಾವು ಸಾಹಿತ್ಯದ ಪಂಜು ಬೆಳಗಿಸುತ್ತಾ ಬಂದಿದ್ದೀರಿ. ಹೇಗೆ ಅನಿಸ್ತಾ ಇದೆ ಈ ಹತ್ತು ವರ್ಷದ ಸುದೀರ್ಘ ಪಯಣ?
  • Its a beautiful journey. ಹತ್ತು ವರ್ಷದ ಹಿಂದೆ ಅಂತರ್ಜಾಲದಲ್ಲಿ ಬೆರಳೆಣಿಕೆಯಷ್ಟು ಸಾಹಿತ್ಯ ಪತ್ರಿಕೆಗಳಿದ್ದವು. ಆ ದಿನಗಳಲ್ಲಿ ಕನ್ನಡದ ಇರುವಿಕೆ ಅಂತರ್ಜಾಲದಲ್ಲಿ ತುಂಬಾ ಕಡಿಮೆ ಇತ್ತು. ಅಂತಹ ಸಮಯದಲ್ಲಿ ಪ್ರಾರಂಭಿಸಿದ ಪತ್ರಿಕೆ “ಪಂಜು”. ಒಂದು ದಶಕದ ಮೈಲುಗಲ್ಲು ದಾಟಿದ ಕೆಲವೇ ಕೆಲವು ಬೆರಳೆಣಿಕೆಯ ಪತ್ರಿಕೆಗಳಲ್ಲಿ ಪಂಜು ಕೂಡ ಒಂದು ಎಂಬುದು ಹೆಮ್ಮೆಯ ವಿಷಯ. ಕನ್ನಡ ಸಾಹಿತ್ಯವನ್ನು ಅಸಂಖ್ಯಾತ ಓದುಗರಿಗೆ ತಲುಪಿಸುವುದರ ಜೊತೆಗೆ ಸಾವಿರಕ್ಕೂ ಹೆಚ್ಚು ಬರಹಗಾರರಿಗೆ ಪಂಜು ವೇದಿಕೆಯಾಗಿದೆ ಎನ್ನುವುದು ಯಾವತ್ತಿಗೂ ತೃಪ್ತಿ ಕೊಡುತ್ತದೆ.
  • ನಿಮ್ಮ ಈ ನಿಸ್ವಾರ್ಥ, ಲಾಭ ರಹಿತ ಈ ಪ್ರಯತ್ನಕ್ಕೆ ಒದಗುವ ಸತತ ಚೈತನ್ಯ ತುಂಬುವ ಸಂಗತಿಗಳ ಬಗ್ಗೆ ಸ್ವಲ್ಪ ಹೇಳಿ..
  • ಕನ್ನಡದ ಸಹೃದಯಿ ಓದುಗರು ಮತ್ತು ಬರಹಗಾರರು ಯಾವತ್ತಿಗೂ ನನಗೆ ಚೈತನ್ಯ ತುಂಬುವ ಚೇತನಗಳು ಎನ್ನಬಹುದು. ಒಳ್ಳೆಯ ಓದುಗ ಮತ್ತು ಒಳ್ಳೆಯ ಬರಹಗಾರರಿಲ್ಲದಿದ್ದರೆ ಯಾವ ಪತ್ರಿಕೆಯೂ ಹೆಚ್ಚು ಕಾಲ ಉಳಿಯುವುದಿಲ್ಲ. ಕನ್ನಡದಲ್ಲಿ ಎಷ್ಟೋ ಪತ್ರಿಕೆಗಳು ಬಂದಷ್ಟೇ ವೇಗದಲ್ಲಿ ಮಾಯವಾಗಿಬಿಡುತ್ತವೆ. ಆದರೆ ಪಂಜುವನ್ನು ಇಷ್ಟು ದಿನ ಕೈ ಹಿಡಿದು ನಡೆಸುತ್ತಾ ಬಂದಿರುವ ಅವರ ಪಾತ್ರ ದೊಡ್ಡದು. ಒಮ್ಮೊಮ್ಮೆ ಕಾರಣಾಂತರದಿಂದ ಸಂಚಿಕೆ ಬರದಿದ್ದಾಗ ಸರ್ ಈ ವಾರ ಪಂಜು ಬಂದಿಲ್ವಾ ಸರ್” ಅಂತ ಕೇಳೋ ಎಷ್ಟೋ ಓದುಗರ ಬರಹಗಾರರ ಪ್ರೀತಿಗೋಸ್ಕರನಾದ್ರು ಕುಳಿತು ಪಂಜು ಎಡಿಟ್ ಮಾಡಿದ ದಿನಗಳಿವೆ. ನಮ್ಮ ಓದುಗ ಮತ್ತು ಬರಹಗಾರರ ಬಳಗದ ಸಹಕಾರವೇ ಒಂದು ದೊಡ್ಡ ಚೈತನ್ಯ. They are real inspirations.
  • ಪಂಜು ಎಂಬ ಚೆಂದದ ಹೆಸರು ಬಂದಿದ್ದರ ಬಗ್ಗೆ ತಿಳಿಸಿ?
  • ಕನ್ನಡ ಚಲನಚಿತ್ರ ರಂಗದಲ್ಲಿ ಹೆಸರು ಮಾಡಿರುವ ಗೀತರಚನೆಕಾರ ಹೃದಯಶಿವ ನಮ್ಮ ಕನಕಪುರದವರು. ಒಮ್ಮೆ ಅವರು ಬೆಂಗಳೂರಿನಲ್ಲಿ ಮಾತಿಗೆ ಸಿಕ್ಕಿದಾಗ “ಈ ತರಹ ಒಂದು ಅಂತರ್ಜಾಲ ಪತ್ರಿಕೆ ಮಾಡಬೇಕೆಂದಿದ್ದೇನೆ ಒಂದು ಹೆಸರು ಸೂಚಿಸಿ” ಎಂದಿದ್ದೆ. ಅವತ್ತು ಅವರು “ಪಂಜು” ಅಂತ ಹೆಸರಿಡಿ ಎಂದರು. ಆ ಹೆಸರು ನನಗೂ ಇಷ್ಟವಾದ ಕಾರಣ “ಪಂಜು ಮ್ಯಾಗಜಿನ್” ಎಂಬುದು ಫೈನಲ್ ಆಯಿತು.
  • ವೆಟರ್ನರಿ ಕ್ಷೇತ್ರದಲ್ಲಿ ತಜ್ಞರಾಗಿರುವ ತಮಗೆ ಸಾಹಿತ್ಯದ ಒಲವು ಮೂಡಿದ್ದು ಹೇಗೆ?
  • ಶಾಲಾ ಕಾಲೇಜು ದಿನಗಳಲ್ಲಿ ನಮಗೆ ಒಳ್ಳೆಯ ಗುರುಗಳಿದ್ದರು. ಕನ್ನಡದ ಪಾಠವನ್ನಾಗಲಿ ಇಂಗ್ಲೀಷ್ ಪಾಠವನ್ನಾಗಲಿ ತುಂಬಾ ರಸವತ್ತಾಗಿ ಹೇಳಿಕೊಡುತ್ತಿದ್ದರು. ಸಾಹಿತ್ಯದೆಡೆಗೆ ನನಗೆ ಆಸಕ್ತಿ ಮೂಡಿಸುವಲ್ಲಿ ಅವರ ಪಾತ್ರ ದೊಡ್ಡದು. ಕನಕಪುರದ ರೂರಲ್‌ ಕಾಲೇಜಿನಲ್ಲಿ ಓದುತ್ತಿದ್ದಾಗ ಮೊದಲಿಗೆ ಪಿಯುಸಿಯಲ್ಲಿ ಕವನ ಬರೆಯಲು ಶುರು ಮಾಡಿದ್ದೆ. ಪಶುವೈದ್ಯಕೀಯ ಪದವಿ ಸೇರಿದ ಮೇಲೆ ಬೆಂಗಳೂರಿನ ನಮ್ಮ ಕಾಲೇಜಿನಲ್ಲಿದ್ದ “Cat’s Herald” ಎಂಬ ಗೋಡೆ ಪತ್ರಿಕೆಗೆ ನಾಲ್ಕು ವರ್ಷಗಳ ಕಾಲ ವಿದ್ಯಾರ್ಥಿ ಸಂಪಾದಕನಾಗಿದ್ದೆ. ಜೊತೆಗೆ ತುಂಬಾ ರೆಗ್ಯುಲರ್ ಆಗಿ ಅಲ್ಲಿ ಬರೆಯುತ್ತಿದ್ದೆ ಕೂಡ. ಹಾಗೆ ಶುರುವಾದ ಸಾಹಿತ್ಯದ ಒಲವು ಹೀಗೆ ಪಂಜುವಿನ ಮೂಲಕವೂ ನಡೆಯುತ್ತಿದೆ.
  • ಪಂಜು ತೆರೆದ ವೇಳೆ ನೀವು ವೈಚಾರಿಕತೆಯ ನಾಡು ಬಂಗಾಳದಲ್ಲಿ ಸೇವೆ ಸಲ್ಲಿಸುತ್ತಿದ್ದಿರಿ. ಬಂಗಾಳ ನಿಮ್ಮನ್ನು ಹೇಗೆ ಪ್ರಭಾವಿಸಿದೆ?
  • ಹೌದು ಪಂಜುವಿನ ಪರಿಕಲ್ಪನೆ ಹುಟ್ಟಿದ್ದು ನಾನು ಕೋಲ್ಕತ್ತಾದಲ್ಲಿದ್ದಾಗ. ಪಶ್ಚಿಮ ಬಂಗಾಳದ ಜನರ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನನ್ನಲ್ಲಿ ಎಷ್ಟೋ ಬಾರಿ ಬೆರಗು ಮೂಡಿಸಿದೆ. ಅಲ್ಲಿ ಒಂದು ಪುಟ್ಟ ಜಿಲ್ಲಾ ಕೇಂದ್ರದಲ್ಲೂ ತುಂಬಾ ಅಚ್ಚುಕಟ್ಟಾಗಿ ಸಾಹಿತ್ಯದ ಕೆಲಸಗಳು ನಡೆಯುತ್ತವೆ. ಅವರು ಯಾವ ಧರ್ಮದವರೇ ಆದರು, ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಅವರ ಆಡುಭಾಷೆ ಬೆಂಗಾಲಿಯೇ ಆಗಿರುತ್ತದೆ. ಅವರ ಭಾಷಾ ಪ್ರೇಮ ಅನುಕರಣೀಯ. ಹಾಗೆಯೇ ಅಲ್ಲಿನ ಜನರ ಆಡಂಬರವಿಲ್ಲದ ಜೀವನಶೈಲಿ ಕೂಡ ಅಧ್ಬುತ. ಒಟ್ಟಾಗಿ ಇದ್ದುದರಲ್ಲಿ ಖುಷಿಯಾಗಿ ಸರಳವಾಗಿ ಬದುಕುವುದನ್ನು ಪಶ್ಚಿಮ ಬಂಗಾಲ ಕಲಿಸಿದೆ ಎನ್ನಬಹುದು.
  • ನಿಮಗೆ ಅತ್ಯಂತ ತೃಪ್ತಿ ಕೊಟ್ಟ ಸಂಚಿಕೆಗಳ ಬಗ್ಗೆ ಅಥವಾ ಪಂಜು ಗೆ ಸಂಬಂಧಿಸಿದಂತೆ ವಿಶೇಷ ಸಂಗತಿಯ ಬಗ್ಗೆ ಹಂಚಿಕೊಳ್ಳುತ್ತೀರಾ?
  • ಪಂಜು ಇಷ್ಟು ವರ್ಷಗಳಲ್ಲಿ ಅನೇಕ ವಿಶೇಷ ಸಂಚಿಕೆಗಳನ್ನು ತಂದಿದೆ. ಪ್ರತಿ ವಿಶೇಷ ಸಂಚಿಕೆಗಳಿಗೆ ಬರಹಗಾರರು ತಮ್ಮ ಬರಹಗಳನ್ನು ಕಳುಹಿಸುವುದ ನೋಡಿ ಒಮ್ಮೊಮ್ಮೆ ಮೂಕವಿಸ್ಮಿತನಾಗಿದ್ದೇನೆ. ಅಂತರ್ಜಾಲ ಪತ್ರಿಕೆಗಳ ಇತಿಹಾಸದಲ್ಲಿ ಅತಿಥಿ ಸಂಪಾದಕರು ಎಂಬ ಹೊಸಪ್ರಯೋಗದ ಅಡಿಯಲ್ಲಿ ಒಂದಷ್ಟು ವಿಶೇಷ ಸಂಚಿಕೆಗಳನ್ನು ತಂದಿದ್ದೇವೆ. ಅವುಗಳಲ್ಲಿ “ಮಕ್ಕಳ ಹಕ್ಕುಗಳ ಕುರಿತ ವಿಶೇಷ ಸಂಚಿಕೆ”, ಹಾಗು “ವಿಶಿಷ್ಟ ಚೇತನರ ಕುರಿತ ವಿಶೇಷ ಸಂಚಿಕೆ” ನನಗೆ ವಿಶೇಷ ಅನುಭವ ನೀಡಿದ ಸಂಚಿಕೆಗಳು ಎನ್ನಬಹುದು.
  • ಮಾಹಿತಿ ತಂತ್ರಜ್ಞಾನದ ಬಳಿಕ ಸ್ಮಾರ್ಟ್ ಮೊಬೈಲ್ ಯುಗ ಬಂದ ಮೇಲೆ ಅಂತರ್ಜಾಲದ ವ್ಯಾಪ್ತಿ ಕೂಡ ವಿಸ್ತಾರವಾಗಿದೆ. ಇದರಿಂದ ನಿಮ್ಮ ಅಂತರ್ಜಾಲ ಪತ್ರಿಕೆಯ ಮೇಲಾದ ಪರಿಣಾಮದ ಬಗ್ಗೆ ನಿಮ್ಮ ಅಭಿಪ್ರಾಯ?
  • ತಂತ್ರಜ್ಞಾನ ಮುಂದುವರೆದಂತೆ ಕಂಪ್ಯೂಟರ್ ಗೆ ಸೀಮಿತವಾಗಿದ್ದ ಕನ್ನಡ, ಮೊಬೈಲ್ ನಲ್ಲೂ ಸಲೀಸಾಗಿ ಸಿಗುತ್ತಲಿದೆ. ಮೊಬೈಲ್ ನಲ್ಲಿ ಕನ್ನಡವನ್ನು ಓದುವುದು, ಟೈಪ್ ಮಾಡುವುದು ಈಗ ತುಂಬಾ ಸುಲಭವಾಗಿದೆ. ಆ ಕಾರಣಕ್ಕೆ ಮೊಬೈಲ್ ಗಳಲ್ಲಿ ಕನ್ನಡವನ್ನು ಎಲ್ಲರೂ ಸರಾಗವಾಗಿ ಉಪಯೋಗಿಸುತ್ತಿದ್ದಾರೆ. ಸಂಪ್ರದಾಯಿಕವಾದ ಡೆಸ್ಕ್ ಟಾಪ್ ಬಗೆಯ ವೆಬ್ ತಾಣಗಳಿಗಿಂತ ಇವತ್ತು ಮೊಬೈಲ್ ನಲ್ಲಿ ಕಾಣುವ ವೆಬ್ ತಾಣಗಳು ಹೆಚ್ಚು ಜನರನ್ನು ತಲುಪುತ್ತಿವೆ. ಓದುಗರನ್ನು ಹಿಡಿದಿಡಲು ಕಾಲಕ್ಕೆ ತಕ್ಕ ಹಾಗೆ ಯಾವುದೇ ಪತ್ರಿಕೆಯಾದರೂ ತನ್ನ ಡಿಸೈನ್, appearance ಎಲ್ಲವನ್ನು user friendly ಆಗಿ ಮಾಡಬೇಕಾಗುತ್ತದೆ. ಹಳೆಯ ವೆಬ್ ಡಿಸೈನ್ ಗೆ ಜೋತು ಬಿದ್ದರೆ ಓದುಗರನ್ನು ಕಳೆದುಕೊಳ್ಳುವ ಅಪಾಯ ಇರುತ್ತದೆ. ಸ್ಮಾರ್ಟ್ ಫೋನ್ ಗಳಲ್ಲಿನ ಸಾಮಾಜಿಕ ಜಾಲತಾಣಗಳ ಕಾರಣಕ್ಕೆ ಒಂದು ಸಿಂಪಲ್‌ share ಮೂಲಕ ಬರಹಗಳನ್ನು ಓದುಗರಿಗೆ ತಲುಪುವುದು ತುಂಬಾ ಸುಲಭವಾಗಿದೆ. ಒಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿನ ಬೆಳವಣಿಗೆಗಳು ಪಂಜು ಹೆಚ್ಚು ಜನರಿಗೆ ತಲುಪಲು ಸಹಕಾರಿಯಾಗಿದೆ.
  • ಮ್ಯಾಗಝೀನ್ ಪ್ರಕಾರದಲ್ಲಿ ಆನ್ಲೈನ್ ಕನ್ನಡ ಓದುಗರ ವರ್ತಮಾನ ಹಾಗೂ ಭವಿಷ್ಯದ ಬೆಳವಣಿಗೆಗಳ ಬಗ್ಗೆ ನಿಮ್ಮ ಅವಲೋಕನ ಹೇಗಿದೆ.
  • ಅಂತರ್ಜಾಲದಲ್ಲಿ ನೂರಾರು ಕನ್ನಡದ ವೆಬ್ ತಾಣಗಳಿದ್ದರೂ ಕೆಲವೇ ಕೆಲವು ವೆಬ್ ತಾಣಗಳು ಕೇವಲ ಕನ್ನಡ ಸಾಹಿತ್ಯಕ್ಕೆ ಮೀಸಲಾಗಿವೆ. ಒಂದು ವೆಬ್ ತಾಣಕ್ಕೆ ಬರೆಯುವ ಲೇಖಕರು ಮತ್ತೊಂದು ವೆಬ್ ತಾಣಕ್ಕೆ ಬರೆಯಲು ಆಸಕ್ತಿ ತೋರುವುದು ತುಂಬಾ ವಿರಳ. ಕೆಲವು ಓದುಗರು ಸಹ ತಾವು ಓದಿಕೊಂಡು ಬಂದಿರುವ ವೆಬ್ ತಾಣ ಬಿಟ್ಟು ಮತ್ತೊಂದು ವೆಬ್ ತಾಣಕ್ಕೆ ಕುತೂಹಲಕ್ಕೂ ಕಣ್ಣಾಡಿಸುವುದಿಲ್ಲ. ಇದೊಂತರ ಪೂರ್ವಾಗ್ರಹ ಪೀಡಿತ ಮೈಂಡ್ ಸೆಟ್. ಈ ಮೈಂಡ್ ಸೆಟ್ ಬದಲಾಗಬೇಕು. ಬೇರೆ ಬೇರೆ ವೆಬ್ ತಾಣಗಳಲ್ಲಿ ಬರೆಯುವುದನ್ನು ಲೇಖಕರು ರೂಡಿ ಮಾಡಿಕೊಂಡರೆ ಅವರ ಕಾರಣಕ್ಕಾದರೂ ಹೊಸ ಓದುಗರು ಆ ವೆಬ್ ತಾಣಗಳಿಗೆ ಭೇಟಿ ನೀಡುತ್ತಾರೆ. ಒಂದು ಪತ್ರಿಕೆಯ ಏಳಿಗೆಗೆ ಓದುಗರು ಮತ್ತು ಬರಹಗಾರರ ಸಹಕಾರ ಬಹಳ ಮುಖ್ಯ. ಅಂತರ್ಜಾಲದಲ್ಲಿ ಕನ್ನಡ ಕಟ್ಟುವ ಈ ಕೆಲಸಗಳಲ್ಲಿ ಹಣವಿರುವುದಿಲ್ಲ. ಆದರೂ ಆಸ್ಥೆ ವಹಿಸಿ ಆ ಕೆಲಸ ಮಾಡುತ್ತಿರುವವರ ಪತ್ರಿಕೆಗಳನ್ನು ಓದುವುದರ ಮೂಲಕ ಪ್ರೋತ್ಸಾಹಿಸಿದರೆ ಭಾಷೆಯ ಹರಡುವಿಡುಕೆಯಲ್ಲಿ ಅವರು ಮಹತ್ತರ ಪಾತ್ರ ವಹಿಸಿದಂತಾಗುತ್ತದೆ.
  • ಓದುಗರು ಅಷ್ಟೇ ಅಲ್ಲ ಕನ್ನಡದ ಹೆಚ್ಚಿನ ಲೇಖಕರು ಎಡ ಬಲದ ಧ್ರುವೀಕರಣಕ್ಕೆ ತುತ್ತಾಗಿರುವುದು ನಿಮ್ಮ ಅನುಭವಕ್ಕೆ ಬಂದಿದೆಯೇ? ಇದರಿಂದ ಯಾವದೇ ರೀತಿಯ ಪರಿಣಾಮಗಳನ್ನು ಪಂಜು ಎದುರಿಸಬೇಕಾಯಿತ?
  • ಒಮ್ಮೆ ಒಬ್ಬ ಖ್ಯಾತ ಕತೆಗಾರರು ಕರೆ ಮಾಡಿದಾಗ ನೀವು ಯಾವ ಪಂಥದವರು ಅಂತ ಕೇಳಿದರು. ಯಾಕೆ ಹಾಗೆ ಕೇಳ್ತಾ ಇದ್ದೀರಿ ಅಂದಿದ್ದೆ. ಎಡನೋ ಬಲನೋ ಎಂಬ ಕುತೂಹಲ ಅಂದರು. ಒಂದು ಕಾಲದಲ್ಲಿ ಹೆಸರಾಂತ ಕತೆಗಾರರು ಎಂದು ಪ್ರಚಲಿತದಲ್ಲಿದ್ದ ಆ ಕತೆಗಾರನ ಕತೆಗಳು ಇವತ್ತು ಹುಡುಕಿದರೂ ಯಾವ ಪತ್ರಿಕೆಗಳಲ್ಲೂ ಸಿಗುವುದಿಲ್ಲ. ಯಾವಾಗ ಒಬ್ಬ ಲೇಖಕ ಒಂದು ಪಕ್ಷದ, ಒಂದು ಸಿದ್ದಾಂತದ ಅತಿಯಾದ ಓಲೈಕೆಗೆ ಇಳಿಯುತ್ತಾನೋ ಸ್ವಾಭಾವಿಕವಾಗಿ ಅವನಲ್ಲಿ ಸಾಹಿತ್ಯದ ಸೃಜನಶೀಲತೆಯೇ ಇಲ್ಲವಾಗುತ್ತಾ ಹೋಗುತ್ತದೆ. ಆ ತರಹ ಎಡ ಬಲದ ಸಿದ್ಧಾಂತಕ್ಕೆ ಅತಿಯಾಗಿ ಜೋತುಬಿದ್ದು ಪತ್ರಿಕೆಗೆ ಬರೆಯುವುದನ್ನೇ ನಿಲ್ಲಿಸಿರುವ ಅನೇಕ ಬರಹಗಾರರ ಉದಾಹರಣೆಗಳಿವೆ. ಹಾಗೆಯೇ ಯಾವಾಗಲೂ ಒಬ್ಬ ಬರಹಗಾರನ ಬರಹದ ಪರಿಣಾಮ ಅವನ ಓದುಗರ ಮೇಲೆ ಬೀಳುತ್ತಲೆ ಇರುತ್ತದೆ. ಓದುಗರನ್ನು ಎಡ ಬಲ ಎಂದು ಧ್ರುವೀಕರಣಗೊಳಿಸುವಲ್ಲಿ ಯಶಸ್ವಿಯಾಗುವ ಎಷ್ಟೋ ಲೇಖಕರು ಸೃಜನಶೀಲ ಲೇಖಕರಾಗಿ ಸೋಲುತ್ತಾರೆ. ಆ ತರಹದ ಒಬ್ಬ ಲೇಖಕನ ಸೋಲು ನೇರವಾಗಿ ಅವನು ಬರೆಯುವ ಪತ್ರಿಕೆಯ ಮೇಲೂ ಪರಿಣಾಮ ಬೀರುವುದರಿಂದ ಓದುಗರೂ ಕೂಡ ಆ ಪತ್ರಿಕೆಗಳಿಂದ ವಿಮುಖರಾಗಿಬಿಡುತ್ತಾರೆ. ಓದುಗರು ಒಂದು ಪತ್ರಿಕೆಯಿಂದ ವಿಮುಖರಾದರೆ ಆ ಪತ್ರಿಕೆ ಮುಚ್ಚಿ ಹೋಗುತ್ತದೆ‌. ಅಂತಹ ಅಪಾಯಗಳಿಂದ ಪಾರಾಗುವ ಜಾಣ್ಮೆ ಪತ್ರಿಕೆಯ ಸಂಪಾದಕರಿಗೆ ಇರಬೇಕಾದುದು ಅತ್ಯವಶ್ಯಕ. ಅಂತಹ ಅಡೆತಡೆಗಳಿಂದ ಪಾರಾಗಿರುವುದರಿಂದ ಪಂಜು ಇವತ್ತಿಗೂ ಬೆಳಗುತ್ತಿದೆ ಎನ್ನಬಹುದು.
  • ಹತ್ತು ವರ್ಷಗಳಷ್ಟು ಸುಧೀರ್ಘ ಅವಧಿಯ ವರೆಗೆ ನಡೆಸಿಕೊಂಡು ಬಂದ ಪಂಜು ಹಾಗೂ ಅಂತರ್ಜಾಲ ಪತ್ರಿಕೆಯ ಕ್ಷೇತ್ರದಲ್ಲಿ ನಿಮ್ಮ ಅಪೇಕ್ಷೆ , ಕನಸುಗಳ ಬಗ್ಗೆ ತಿಳಿಸಿ. ಇನ್ನಷ್ಟು ವಿಸ್ತಾರ, ಸೇವೆಗಳನ್ನು ವಿಸ್ತರಿಸುವ ಬಗ್ಗೆ ಯೋಚನೆ ಇದೆಯೇ?
  • ಇಷ್ಟು ಸುದೀರ್ಘವಾದ ಪಯಣದಲ್ಲಿ ಎಷ್ಟೋ ಹಿರಿಯ ಹಾಗೂ ಹೊಸ ಹೆಸರು ಮಾಡಿದ ಹೆಸರು ಮಾಡುತ್ತಿರುವ ಕೆಲವು ಲೇಖಕರು ಯಾವತ್ತಿಗೂ ನಮಗೆ ಬರೆಯುವ ಆಸಕ್ತಿ ತೋರಲಿಲ್ಲ. ನಮ್ಮಲ್ಲಿ ಅಂತರ್ಜಾಲದ ವ್ಯಾಪ್ತಿ, ವಿಸ್ತಾರ ತಿಳಿಯದೆ ಅಂತರ್ಜಾಲವೆಂದರೆ ಮೂಗುಮುರಿಯುವ ಅನೇಕ ಲೇಖಕರಿದ್ದಾರೆ. ಅಂತಹವರು ತಮ್ಮ ಹಿಂಜರಿಕೆಗಳನ್ನು ಬಿಟ್ಟು ಪಂಜುವಿನಂತಹ ಅಂತರ್ಜಾಲ ಪತ್ರಿಕೆಗಳಿಗೆ ಬರೆಯಬೇಕೆಂದು ಯಾವತ್ತಿಗೂ ಅಪೇಕ್ಷಿಸುತ್ತೇನೆ. ಇನ್ನು ಕನ್ನಡದ ಓದುಗರಿಗೆ ಇ ಬುಕ್ ರೂಪದಲ್ಲಿಯೂ ಪಂಜುವಿನ ಸಂಚಿಕೆಗಳು ಸಿಗಬೇಕು ಎನ್ನುವ ಕನಸಿದೆ. ಜೊತೆಗೆ ಪಂಜುವಿಗೊಂದು ಆಫೀಸ್ ಮಾಡಿ ನಮ್ಮ ಕಾರ್ಯವೈಖರಿಗಳನ್ನು ಇನ್ನಷ್ಟು ವಿಸ್ತರಿಸುವ ಆಸೆ ಇದೆ.
  • ನಿಮ್ಮ ಮೆಚ್ಚಿನ ಹವ್ಯಾಸಗಳು, ಚಲನಚಿತ್ರ, ಹಾಡುಗಳ ಬಗ್ಗೆ ತಿಳಿಸಿ.
  • ಕೃಷಿ ನನಗೆ ಹೃದಯಕ್ಕೆ ಹತ್ತಿರವಾದ ಕೆಲಸ. ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಅದರಲ್ಲೂ ಹೊಸ ತಲೆಮಾರಿನ ಲೇಖಕರ ಪುಸ್ತಕಗಳನ್ನು ಇತ್ತೀಚೆಗೆ ಹೆಚ್ಚು ಓದುತ್ತಿದ್ದೇನೆ. ನಲವತ್ತರ ದಶಕದಿಂದ ಹಿಡಿದು ಇತ್ತೀಚೆಗೆ ಬಿಡುಗಡೆಯಾದ ಹಲವು ಭಾಷೆಗಳ ಸಿನಿಮಾಗಳನ್ನು ನೋಡಿದ್ದೇನೆ ನೋಡುತ್ತಾ ಇರುತ್ತೇನೆ. ಹತ್ತಾರು ಭಾಷೆಗಳ ಹಾಡುಗಳ ಕೇಳುವ ಹವ್ಯಾಸವಿದೆ. ಮೂಡ್ ಇದ್ದಾಗ ಕನ್ನಡದ ಒಳ್ಳೆಯ ಕವಿತೆಗಳನ್ನು ಓದಿ ನನ್ನದೇ ದನಿಯಲ್ಲಿ ಸುಮ್ಮನೆ ರೆಕಾರ್ಡ್ ಮಾಡಿಕೊಳ್ತೇನೆ. ಒಮ್ಮೊಮ್ಮೆ ಮೀನು ಹಿಡಿಯೋದು, ಹಕ್ಕಿಗಳ ನೋಡೋದು, ಅಡುಗೆ ಮಾಡೋದು ಕೂಡ ಧ್ಯಾನದಂತೆ ಭಾಸವಾಗುವುದರಿಂದ ಇವೂ ಕೂಡ ನನ್ನ ನೆಚ್ಚಿನ ಹವ್ಯಾಸಗಳು ಎನ್ನಬಹುದು.
  • ಕೊನೆಯದಾಗಿ ಪಂಜು ಬೆಳಗಿಸುವಲ್ಲಿ ನಿಮ್ಮ ಕುಟುಂಬದ ಹಾಗೂ ಮಿತ್ರರ ಪಾತ್ರದ ಬಗ್ಗೆಯೂ ಹೇಳಿ.
  • ಪಂಜು ಬೆಳಗುವಲ್ಲಿ ಅನೇಕರ ಪಾತ್ರವಿದೆ. ಹತ್ತು ವರ್ಷದ ಹಿಂದೆ ಅರುಣ್ ಎನ್ನುವ ಮಲಯಾಳಿ ಗೆಳೆಯನಿಂದ ಪಂಜು ವೆಬ್ ಡಿಸೈನ್ ಮಾಡಿಸಿದೆವು. ಅವರನ್ನು ಪರಿಚಯಿಸಿದ್ದು ಮಂಡ್ಯದ ಗೆಳೆಯ ನಂದೀಶ್ ಕುಮಾರ್. ಚೆಂದದ ಪಂಜು ಲೋಗೊವನ್ನು ಗೆಳೆಯ ವಿ ಆರ್ ಕಾರ್ಪೆಂಟರ್ ಮಾಡಿಕೊಟ್ಟರು. ಉರಿಯುವ ಪಂಜುವಿನ ಚಿತ್ರವೊಂದನ್ನು ಎಫ್ ಬಿಯ ಗೆಳೆಯರೊಬ್ಬರು ಕಳಿಸಿದ್ದರು. ಅದನ್ನು ಪಂಜು ಥೀಮ್ ಗೆ ಬಳಸಿಕೊಂಡಿದ್ದೇವೆ. ಒಂದು ಕಾಲಕ್ಕೆ ಪಂಜುವಿನ ಹೋಸ್ಟಿಂಗ್ ಚಾರ್ಚ್ ಕಟ್ಟಲು ತಮ್ಮ ಕ್ರೆಡಿಟ್ ಕಾರ್ಡ್ ನೀಡಿದ್ದ ವಾಸುಕಿ ರಾಘವನ್ ಮತ್ತು ಸೂಗುರೇಶ ಪಾಟೀಲ್, ತಮ್ಮ ಕೆಲಸದ ಒತ್ತಡದ ನಡುವೆಯೂ ಒಮ್ಮೊಮ್ಮೆ ಎಡಿಟಿಂಗ್ ನಲ್ಲಿ ಜೊತೆ ನಿಲ್ಲುತ್ತಿದ್ದ ಪ್ರಸನ್ನ ಆಡುವಳ್ಳಿ, ವೆಂಕಿ, ದಿ.ಗಿರಿಜಾ ಜ್ಞಾನಸುಂದರ್, ವಿಶೇಷ ಸಂಚಿಕೆಗಳಿಗೆ ಡಿಸೈನ್‌ ಮಾಡಿಕೊಡುತ್ತಿದ್ದ ವಿನೋದ್‌ ಕುಮಾರ್‌ ವಿ.ಕೆ, ಮಹಾಂತೇಶ್‌ ಯರಗಟ್ಟಿ ಹೀಗೆ ಪಂಜುವಿನ ಜೊತೆ ನಿಲ್ಲುವ ಅನೇಕ ಗೆಳೆಯರ ಸಹಕಾರವನ್ನು ಎಂದಿಗೂ ಮರೆಯಲಾಗದು. ಪಂಜು ಒಮ್ಮೆ ಹ್ಯಾಕ್ ಆಗಿದ್ದಾಗ ಅದನ್ನು ಅಧ್ಬುತವಾಗಿ ರೆಡಿ ಮಾಡಿಕೊಟ್ಟ ಚೆನ್ನೈನ ಡೇನಿಯಲ್, ಕಳೆದ ಹತ್ತು ವರ್ಷಗಳಿಂದ ಪರೋಕ್ಷವಾಗಿ ಟೆಕ್ನಿಕಲ್ ಸಹಕಾರ ನೀಡುತ್ತಿರುವ sunsys ಸಂಸ್ಥೆಯ ಮಂಜುನಾಥ್ ರವರ ಪಾತ್ರವೂ ಪಂಜುವಿನ ಬೆಳವಣಿಗೆಯಲ್ಲಿ ಇದ್ದೇ ಇದೆ ಎನ್ನಬಹುದು. ಪಂಜು ನಿರ್ವಹಣೆ ಒಮ್ಮೊಮ್ಮೆ ಹೆಚ್ಚು ಸಮಯ ಬೇಡುವ ಕೆಲಸ, ಆ ಕೆಲಸ ಸರಾಗವಾಗಿ ನಡೆಯಲು ಸಹಕರಿಸುವ ನನ್ನ ಕುಟುಂಬದ ಸದಸ್ಯರು ಮತ್ತು ಅನೇಕ ಆತ್ಮೀಯರ ಸ್ಫೂರ್ತಿಯ ಕಾರಣಕ್ಕೂ ಪಂಜು ಚೆನ್ನಾಗಿ ಬೆಳಗುತ್ತಿದೆ ಎನ್ನಬಹುದು. ಕೊನೆಯದಾಗಿ, ಪಂಜುವಿನ ಹಾಗೆ ಪ್ರಾರಂಭವಾಗಿರುವ ನಸುಕು.ಕಾಂ ನ ರೂವಾರಿಯಾದ ತಾವು ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟು ಇಷ್ಟೊಂದು ಪ್ರಶ್ನೆಗಳನ್ನು ಕಳುಹಿಸಿ ಒಂದು ಸಂದರ್ಶನ ಮಾಡಬೇಕೆಂದು ನೀವು ಮಾಡಿರುವ ಸಂಕಲ್ಪವೇ ಒಂದು ಸ್ವೀಟ್‌ ಗೆಸ್ಚರ್.‌ ಆ ಗೆಸ್ಚರ್‌ ಗೆ ಯಾವತ್ತಿಗೂ ನಾನು ಋಣಿ. ಧನ್ಯವಾದಗಳು ತಮಗೆ…

ಪಂಜು ಪತ್ರಿಕೆಗೆ ದಶಕ ತುಂಬುತ್ತಿರುವ ಸಂಭ್ರಮದಲ್ಲಿ ಲೇಖಕರು, ಓದುಗರಾದಿಯಾಗಿ ಎಲ್ಲರಿಗೂ ಅಭಿನಂದನೆಗಳು. ಪಂಜುವಿನ ಬೆಳಕು ಪ್ರಖರವಾಗಿ ಸದಾ ಬೆಳಗುತಿರಲಿ ಎಂದು ಹಾರೈಸುತ್ತೇವೆ. ಸಂದರ್ಶನಕ್ಕೆ ತಮ್ಮ ಅಮೂಲ್ಯ ಸಮಯವನ್ನು ಮೀಸಲಾಗಿರಿಸಿದ್ದಕ್ಕೆ ಸಂಪಾದಕರಾದ ಡಾ. ನಟರಾಜು ಎಸ್.ಎಂ. ಅವರಿಗೆ ಧನ್ಯವಾದಗಳು.