- ಸಾಜಿದಾ ಅಲಿಯಾಸ್ ಸಲ್ಮಾ - ಅಕ್ಟೋಬರ್ 29, 2024
- ರೇಟಿಂಗ್ ಗಳ ಧೋರಣೆ - ಅಕ್ಟೋಬರ್ 20, 2024
- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
ನಾನು ನನ್ನ ಬ್ಯಾಂಕಿನ ವೃತ್ತಿಯಿಂದ ೨೦೧೩ ರಲ್ಲಿ ನಿವೃತ್ತನಾಗಿದ್ದೆ. ೨೦೧೪ ರಲ್ಲಿ ನನ್ನ ಮಗಳು ಇರುತ್ತಿದ್ದ ಕ್ಯಾಲಿಫೋರ್ನಿಯಾ ರಾಜ್ಯದ ಲಿವರ್ ಮೋರ್ ಎನ್ನುವ ಪ್ರದೇಶದಲ್ಲಿ ಒಂದು ನಾಲ್ಕು ತಿಂಗಳ ಪ್ರವಾಸಕ್ಕೆ ದಂಪತಿಗಳಿಬ್ಬರೂ ಹೋಗಿದ್ದೆವು. ನನ್ನ ಕನ್ನಡಾಭಿಮಾನವನ್ನು ಮನಗಂಡ ನನ್ನ ಮಗಳು, ಅಳಿಯ ಅಲ್ಲಿ ನವೆಂಬರ್ ತಿಂಗಳಲ್ಲಿ ನಡೆಯುತ್ತಿದ್ದ ಕನ್ನಡ ರಾಜ್ಯೋತ್ಸವದ ಸಮಾರಂಭಕ್ಕೆ ಕರೆದುಕೊಂಡು ಹೋಗಿದ್ದರು. ಒಂದು ದೊಡ್ಡ ಶಾಲೆಯ ಮೈದಾನದಲ್ಲಿ ಸಮಾರಂಭವನ್ನು ಆಯೋಜಿಸಲಾಗಿತ್ತು. ನಾವು ತಲುಪುವ ವೇಳೆಗೆ ಅಂಬಾರೀ ಸೇವೆ ಆರಂಭವಾಗಿತ್ತು. ತರ ತರದ ಸ್ಟಾಲ್ ಗಳು ಅಲ್ಲಿಯ ಮೈದಾನವನ್ನು ತುಂಬಿದ್ದವು. ಸಮಯಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮ ಆರಂಭವಾಗಿತ್ತು. ಅಧ್ಯಕ್ಷರಾಗಿ ಆ ನಗರದ ಮೇಯರನ್ನು ಕರೆದಿದ್ದರು. ನಮ್ಮ ಮೈಸೂರು ಕಡೆಯ ಪೇಟಾ ಅವರಿಗೆ ಧರಿಸಲು ಹೇಳಿದ್ದರು. ಅವರು ಅದನ್ನು ಧರಿಸಿ ತಮ್ಮ ಭಾಷಣದಲ್ಲಿ ತಮ್ಮ ನಗರಕ್ಕೆ ಕನ್ನಡಿಗರ ದೇಣಿಗೆ ಕುರಿತು ಮಾತನಾಡಿದರು. ನಂತರ ವಿವಿಧ ವಿನೋದಾವಳಿ ಕಾರ್ಯಕ್ರಮಗಳು. ಕಾರ್ಯಕ್ರಮಗಳನ್ನು ಡಾ.ಡಿ.ಎಸ್. ಕರ್ಕಿಯವರ “ ಹಚ್ಚೇವು ಕನ್ನಡದ ದೀಪ “ ಹಾಡಿನೊಂದಿಗೆ ಪ್ರಾರಂಭಿಸಲಾಯಿತು. ನಂತರ ನಾಡಗೀತೆ “ ಭಾರತ ಜನನಿಯ ತನುಜಾತೆ” ಹಾಡಲಾಯಿತು. ನಂತರ ಕುವೆಂಪುರವರ “ಕಿಂದರಿ ಜೋಗಿ” ನಾಟಕ ಪ್ರದರ್ಶಿಸಲಾಯಿತು. ಹಾಸ್ಯ ಕಾರ್ಯಕ್ರಮಗಳು ಕಚಗುಳಿ ಇಟ್ಟಿದ್ದವು. ನಾನು ಮನತುಂಬಿ ಮನೆಗೆ ಬಂದೆ.
ನಾನಿರುವ ಹೈದರಾಬಾದಿನಲ್ಲಿ ಹಲವಾರು ಕನ್ನಡ ಸಂಸ್ಥೆಗಳಿವೆ. ಅವುಗಳಲ್ಲಿ ತಮ್ಮದೇ ಆದ ಸಭಾಂಗಣ ಮತ್ತು ಗ್ರಂಥಾಲಯ ಹೊಂದಿರುವ ಸಂಸ್ಥೆ ನಗರದ ಮಧ್ಯದಲ್ಲಿರುವ “ಕರ್ನಾಟಕ ಸಾಹಿತ್ಯ ಮಂದಿರ”. . ಈ ಸಂಸ್ಥೆಗೆ ಈಗ ೮೪ ವರ್ಷಗಳು.. ಎಷ್ಟೋ ವರ್ಷಗಳಿಂದ ದಸರಾ ಸಮಯದಲ್ಲಿ ಒಂಬತ್ತು ದಿನಗಳ “ ನಾಡ ಹಬ್ಬ “ ಕಾರ್ಯಕ್ರಮಗಳಲ್ಲಿ ಕರ್ನಾಟಕದಿಂದ ಹೆಸರಾಂತ ಕಲಾವಿದರನ್ನು ಕರೆಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಘನತೆ ಈ ಸಂಸ್ಥೆ ಹೊಂದಿದೆ. ಇದಕ್ಕೆ ನಾನು ೨೦೧೫ ರಿಂದ ಒಂದೂವರೆ ವರ್ಷದ ಕಾಲ ಕಾರ್ಯದರ್ಶಿಯಾಗಿದ್ದೆ. ಆಗ ಒಂದು ವರ್ಷದಲ್ಲಿ ೨೧ ಕಾರ್ಯಕ್ರಮ ಮಾಡಿದ್ದೆವು. ಹತ್ತಿರದಲ್ಲೇ ನೃಪತುಂಗ ವಿದ್ಯಾ ಸಂಸ್ಥೆಗಳು ೯೨ ವರ್ಷಗಳಿಂದ ನಡೆದು ಬಂದಿವೆ. ನಗರದ ಮತ್ತೊಂದು ಸಂಸ್ಥ “ ಕನ್ನಡ ನಾಟ್ಯ ರಂಗ” ಇಲ್ಲಿಯ ಕನ್ನಡಿಗರಿಗೆ ಕನ್ನಡ ನಾಟಕಗಳನ್ನು, ಯಕ್ಷಗಾನ ಪ್ರದರ್ಶನಗಳನ್ನು ಒದಗಿಸುತ್ತದೆ. ಇದೇ ರೀತಿಯ ಇತರೆ ಕನ್ನಡ ಸಂಸ್ಥೆಗಳು ಸಹ ತಮ್ಮದೇ ಆದ ವಿಶೇಷ ಕಾರ್ಯಕ್ರಮಗಳಿಂದ ಕನ್ನಡಿಗರಿಗೆ ತಮ್ಮ ತಾಯಿನಾಡಿನ ಅನುಭವವನ್ನು ತರುತ್ತಿವೆ. ಹಾಗಾದರೆ ಹೊರನಾಡಿನ ಈ ತರದ ಕನ್ನಡ ಸಂಸ್ಥೆಗಳ ಪಾತ್ರವೇನು ?
ನಮ್ಮ ನಾಡು, ಹೊರನಾಡು ಎನ್ನುವುದು ಭೌಗೋಳಿಕವಾಗಿ ಏರ್ಪಾಡಾದ ಸೀಮಾರೇಖೆ. ಭಾಷೆ ಮತ್ತು ಸಂಸ್ಕೃತಿಯ ಭಾವನೆಗಳಿಂದ ಎಲ್ಲ ಕನ್ನಡಿಗರು, ಅಂದರೆ ಕರ್ನಾಟಕದಲ್ಲಿದ್ದ ಕನ್ನಡದವರಾಗಲಿ ಅಥವಾ ಹೊರ ರಾಜ್ಯಗಳಲ್ಲಿ ಹಂಚಿ ಹೊಗಿರುವ ಹೊರನಾಡ ಕನ್ನಡಿಗರಾಗಲಿ ಒಂದೇ. ಆದರೆ ಹೊರನಾಡಿನ ಕನ್ನಡಿಗರಿಗೆ ಕೆಲ ಅಡೆತಡೆಗಳಿರುತ್ತವೆ. ಕೆಲ ರಾಜ್ಯಗಳಲ್ಲಿ ಆಯಾ ರಾಜ್ಯದ ಭಾಷೆ ಮಾತ್ರ ಮಾನ್ಯತೆ ಪಡೆದಿದ್ದು, ಮಾತೃಭಾಷೆಯಲ್ಲಿ ಅಭ್ಯಾಸ ಮಾಡುವ ಸವಲತ್ತು ಸಿಗಲಿಕ್ಕಿಲ್ಲ. ಎರಡೂ ರಾಜ್ಯಗಳ ನಡುವೆ ಗಡಿ ವಿವಾದವಿದ್ದಲ್ಲಿ ಈ ಪರಿಸ್ಥಿತಿ ಇನ್ನೂ ಹದಗೆಡುವ ಸಾಧ್ಯತೆ ಜಾಸ್ತಿ. ಈ ತರದ ವಿಪತ್ಕರ ಪರಿಸ್ಥಿತಿಗಳಲ್ಲಿ ಹೊರನಾಡುಗಳಲ್ಲಿರುವ ಜನರು ತಮ್ಮ ಮಾತೃ ಭಾಷೆ ಮತ್ತು ಸಂಸ್ಕೃತಿಯನ್ನು ತಮ್ಮ ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯವಾಗದೆ ವ್ಯಥೆ ಪಡುತ್ತಾರೆ. ಈ ಸಂಕಟವನ್ನು ಎದುರಿಸಲು ಮತ್ತು ತಮ್ಮ ಭಾಷೆ ಮತ್ತು ಸಂಸ್ಕೃತಿಯ ಪರಿಚಯವನ್ನು ತಮ್ಮ ಮಕ್ಕಳಿಗೆ ಮಾಡಿಕೊಡಲು ಒಂದು ಸಂಸ್ಥೆಯನ್ನು ಕಟ್ಟಿ ಒಗ್ಗಟ್ಟಿನಿಂದ ಈ ಇಕ್ಕಟ್ಟನ್ನು ಎದುರಿಸಲು ಮುಂದಾಗುತ್ತಾರೆ. ಹೀಗೆ ಹೊರನಾಡಿನಲ್ಲಿ ಹುಟ್ಟುವ ಸಾಂಸ್ಕೃತಿಕ ಸಂಸ್ಥೆಗಳ ಪಾತ್ರ ಒಳನಾಡಿನ ಸಂಸ್ಥೆಗಳಿಗಿಂತ ಭಿನ್ನವಾಗಿದ್ದು ಅವುಗಳಿಗೆ ತಾಯಿ ನಾಡಿನ ಜನರಿಂದ ಕೆಲ ಸಹಾಯ, ಬೆಂಬಲ ಬೇಕಾಗುತ್ತದೆ.
ಈ ಸಂಸ್ಥೆಗಳು ಭಾಷಾವಾರು, ಸಮುದಾಯವಾರು ಅಥವಾ ಮತ್ತಿನ್ನೇನಾದರು ಸಮಾನವಾದ ತಳಹದಿಯ ಅಂಶವಿರುವ ಪ್ರಾತಿಪದಿಕೆಯ ಮೇಲೆ ಇರಬಹುದು. ಅವುಗಳ ಸದಸ್ಯರು ತಾವು ಬಂದ ನಾಡಿನ ಭಾಷೆ, ಸಂಸ್ಕೃತಿ ಮತ್ತಿತರ ಅಂಶಗಳನ್ನು ಪೋಷಿಸುತ್ತ ಅವುಗಳ ಉಳಿವಿಗಾಗಿ ಶ್ರಮ ಪಡುತ್ತಾರೆ. ಈ ತರದ ಸಂಸ್ಥೆಗಳ ಮೂಲಕ ತಮ್ಮ ಭಾಷೆ ಮತ್ತು ಸಂಸ್ಕೃತಿಗಳನ್ನು ಕಾಪಿಟ್ಟು ಮುಂದಿನ ಪೀಳಿಗೆಗೆ ಇವುಗಳ ಪರಿಚಯ, ಸಾಧ್ಯವಾದರೆ ಪರಿಣತಿ ತಲುಪಿಸುವ ಪ್ರಯತ್ನ ಮಾಡುತ್ತಾರೆ. ಅಮೆರಿಕದಲ್ಲಿ “ ಅಕ್ಕ “ ತುಂಬಾ ಪ್ರಚಲಿತ ಸಂಸ್ಥೆ. ಅಲ್ಲಿ ಆಸಕ್ತಿಯುಳ್ಳ ಮಕ್ಕಳಿಗೆ ಕನ್ನಡ ಕಲಿಸಲಾಗುತ್ತದೆ. ಹೈದರಾಬಾದಿನಲ್ಲಿ ಸಹ ಮಲ್ಕಾಜಗಿರಿಯಲ್ಲಿ ಕನ್ನಡ ಕಲಿಸಲಾಗುತ್ತಿದೆ ಮತ್ತು ಕಸಾಪದ ಕನ್ನಡ ಪರೀಕ್ಷಗಳಿಗೆ ಹುಡುಗರನ್ನು ತಯಾರು ಮಾಡಲಾಗುತ್ತಿದೆ. ಕೆಲವೊಮ್ಮೆ ಇಂಥಾ ಸಂಸ್ಥೆಗಳು ತುಂಬಾ ಜಾಗರೂಕವಾಗಿದ್ದು ಅವು ತಲೆ ತಲಾಂತರಗಳವರೆಗೆ ಮುಂದುವರೆದು ಆ ಜನಾಂಗಕ್ಕೆ ಒಂದು ತರದ ಭದ್ರತಾ ಭಾವ, ಅಸ್ತಿತ್ವವನ್ನು ಕೊಡಲು ಯಶಸ್ವಿಯಾಗುತ್ತವೆ. ಇವುಗಳಲ್ಲಿ ವಿದ್ಯಾ ಸಂಸ್ಥೆಗಳು, ಸಾಂಸ್ಕೃತಿಕ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ನಾವು ಕಾಣ ಬಹುದು. ಎಲ್ಲವುಗಳ ಗುರಿ ಒಂದೇ. ಕನ್ನಡ.
ಈ ಸಂಸ್ಥೆಗಳಲ್ಲಿರುವ ಸದಸ್ಯರ ಹುಮ್ಮಸ್ಸಿನ ಮೇಲೆ ಇವುಗಳ ಮುಂದುವರಿಕೆ ಅವಲಂಬಿಸಿರುತ್ತದೆ. ಸದಸ್ಯರೆಲ್ಲ ತುಂಬಾ ಉತ್ಸಾಹದಿಂದ ತಮ್ಮ ತಾಯಿ ನಾಡಿನ ಜನರ, ಸರಕಾರದ ಜೊತೆ ಸಂಪರ್ಕವಿಟ್ಟುಕೊಂಡು ತಾವಿರುವ ರಾಜ್ಯಗಳಲ್ಲಿ ಅವುಗಳ ಅಸ್ತಿತ್ವವನ್ನು ಸ್ಥಾಪಿಸಲು ಕಷ್ಟಪಡುತ್ತಾರೆ. ಉದ್ದಿಮೆದಾರರು ಮತ್ತು ಕಚೇರಿಗಳಲ್ಲಿ ಉಚ್ಚ ಸ್ಥಾನಗಳಲ್ಲಿರುವ ಅಧಿಕಾರಿಗಳು, ತಮ್ಮ ಪ್ರಭಾವದಿಂದ ಸರಕಾರದಿಂದ ಜಾಗವನ್ನು ಮಂಜೂರು ಮಾಡಿಸಿಕೊಂಡು ದೇಣಿಗೆಗಳನ್ನು ಪಡೆದು ಭವನವನ್ನು ಕಟ್ಟಿಸಿ, ಅದರಲ್ಲಿ ಸಭಾಂಗಣ, ಹೊರ ಊರುಗಳಿಂದ ಬಂದ ಕನ್ನಡ ಕಲಾವಿದರಿಗೆ ತಂಗಲು ವ್ಯವಸ್ಥೆ ಮುಂತಾದವುಗಳನ್ನು ಮಾಡುವುದರಲ್ಲಿ ಮುಂದಾಗುತ್ತಾರೆ. ಹೊರದೇಶಗಳಲ್ಲಿ ಕೆಲಸಕ್ಕಿದ್ದು ಸಾಕಷ್ಟು ವರಮಾನ ಗಳಿಸುತ್ತಿರುವ ಯುವ ಪೀಳಿಗೆಯು ಈ ನಿಟ್ಟಿನಲ್ಲಿ ತಮ್ಮ ಉದಾರ ದೇಣಿಗೆಗಳನ್ನು ಕಳಿಸಿ ಇಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅಥವಾ ಕಟ್ಟಡಗಳಿಗೆ ನೆರವಾಗುತ್ತಿದ್ದಾರೆ.
ಕರ್ನಾಟಕ ಸರಕಾರದ ಭಾಷಾ ಮತ್ತು ಸಾಂಸ್ಕೃತಿಕ ಇಲಾಖೆಯವರು ಹೊರನಾಡಿನ ಕನ್ನಡ ಸಂಸ್ಥೆಗಳಿಗೆ ತಮ್ಮ ಯೋಜನೆಗಳಿಂದ ಸಹಾಯ ಹಸ್ತ ನೀಡುತ್ತಿದ್ದಾರೆ. ಅಲ್ಲಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಮ್ಮ ಸಹಾಯ ಧನ ನೀಡಿ ಪ್ರೋತ್ಸಹಿಸುತ್ತಿದ್ದಾರೆ. ಸಾಹಿತ್ಯ, ನಾಟ್ಯ, ಯಕ್ಷಗಾನ ವ ಬಯಲಾಟ ಅಕೆಡಿಮಿಗಳು ತಮ್ಮ ಕಲಾವಿದರನ್ನು ಸರಕಾರದ ಖರ್ಚಿನಲ್ಲಿ ಕಳಿಸಿ ಹೊರನಾಡ ಕನ್ನಡಿಗರಿಗೆ ಕನ್ನಡವನ್ನು ಹಂಚುವುದರಲ್ಲಿ ನೆರವಾಗುತ್ತಿವೆ. ಆದರೆ ಇದರ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಇನ್ನೂ ಉದಾರ ಭಾವನೆ ತೋರ ಬೇಕಾದ ಅಗತ್ಯ ಕಾಣುತ್ತದೆ. ಸ್ಥಳೀಯ ಮತ್ತು ಹೊರನಾಡಿನ ಸಂಸ್ಥೆಗಳಿಗೆ ನೆರವು ನೀಡುವಲ್ಲಿ ಒಂದೇ ಮಾನದಂಡವನ್ನು ಪರಿಗಣಿಸದೇ ಹೊರನಾಡಿನ ಸಂಸ್ಥೆಗಳಿಗೆ ಕೆಲ ರಿಯಾಯತಿಗಳನ್ನು ತೋರಬೇಕಿದೆ. ಅಲ್ಲಿಂದ ಬಂದ ಮನವಿಗಳನ್ನು ತುರ್ತಾಗಿ ಕೈಗೆತ್ತಿಕೊಳ್ಳುವುದು ನಡೆಯ ಬೇಕಿದೆ. ಯಾವುದೇ ಸರಕಾರ ಬರಲಿ ಅದರಲ್ಲಿಯ ಎಲ್ಲರಿಗೂ ಹೊರನಾಡಿನ ಕನ್ನಡಿಗರ ಬಗ್ಗೆ ಮತ್ತು ಕನ್ನಡ ಸಂಸ್ಥೆಗಳ ಬಗ್ಗೆ ಒಂದು ರೀತಿಯ ಆದರ ಇರಬೇಕು. ಹೊರನಾಡಿನಲ್ಲಿ ಕನ್ನಡದ ಬಾವುಟವನ್ನು ಹಾರಿಸಲು ತಮ್ಮ ಕೈಲಾದ ಪರಿಶ್ರಮ ಮಾಡುತ್ತಿರುವ ಈ ಸಂಸ್ಥೆಗಳಿಗೆ ಸರಕಾರದ ವತಿಯಿಂದ ಸಾಧ್ಯವಾದಷ್ಟು ಜಾಸ್ತಿ ಮತ್ತು ತುರ್ತು ನೆರವು ನೀಡ ಬೇಕು ಎನ್ನುವ ಭಾವನೆ ಬರಬೇಕು. ಪುಣ್ಯಕ್ಷೇತ್ರಗಳಲ್ಲಿ ಕಟ್ಟಡಗಳನ್ನು ಕಟ್ಟಿಸಿ ಯಾತ್ರಿಕರಿಗೆ ಸೌಲಭ್ಯ ಒದಗಿಸುವಂತೆ, ಹೊರನಾಡುಗಳಲ್ಲಿ ಕನ್ನಡ ಭವನ ಕಡ್ಡಾಯವಾಗಿ ಇರಲೇಬೇಕು ಎಂದು ಸರಕಾರ ನಿರ್ಧರಿಸಿ ತಮ್ಮ ಕಡೆಯಿಂದ ಅಲ್ಲಿಯ ಸರಕಾರದೊಂದಿಗೆ ಮಾತುಕತೆ ನಡೆಸಿ ಉಚಿತವಾಗಿ ಜಾಗ ಪಡೆದು, ಅಲ್ಲಿಯ ಕನ್ನಡಿಗರನ್ನು ಕರೆಸಿ ಕನ್ನಡ ಭವನ ಕಟ್ಟಿಸಲು ನಿರ್ದೇಶಿಸಬೇಕು. ಅದಕ್ಕೆ ಬೇಕಾದ ವೆಚ್ಚದಲ್ಲಿ ಸಿಂಹಪಾಲು ಸರಕಾರದಿಂದ ಹಾಕಿ ಉಳಿದದ್ದನ್ನು ಅಲ್ಲಿಯ ಕನ್ನಡಿಗರು ದೇಣಿಗೆ ರೂಪದಲ್ಲಿ ಪಡೆದು ನಿರ್ಮಿಸುವಂತಾಗಬೇಕು. ಆಗ ಕನ್ನಡಕ್ಕೊಂದು ನೆಲೆ ಕಾಣುತ್ತದೆ.
ಕನ್ನಡ ಬೋಧನೆ ಮಾಡುವ ಶಾಲೆಗಳಿಗೆ ಸಹಾಯ ಧನ ನೀಡ ಬೇಕು. ಸರಕಾರದ ನಿಧಿಗಳಿಂದ ಒಂದಿಷ್ಟು ಹೊರನಾಡಿನ ಶಾಲೆಗಳಿಗೆ ಮೀಸಲಿಟ್ಟು ಅವುಗಳಿಗೆ ಸೇರುವ ಹಾಗೆ ಏರ್ಪಾಡು ಮಾಡಬೇಕು. ಶಾಲಾ ಶುಲ್ಕಗಳು, ಪರೀಕ್ಷಾ ಶುಲ್ಕಗಳಿಗೆ ರಿಯಾಯತಿಯಾಗಲಿ ಅಥವಾ ಸಬ್ಸಿಡಿಯಾಗಲಿ ಒದಗಿಸಬೇಕು. ಕನ್ನಡ ವಿದ್ಯಾಸಂಸ್ಥೆಗಳಲ್ಲಿಯ ಉಪಾಧ್ಯಾಯರಿಗೆ ಪ್ರೋತ್ಸಾಹ ನೀಡಬೇಕು. ಕನ್ನಡ ಅಧ್ಯಾಪಕರಿಗೆ ವಿಶೇಷ ಪ್ರೋತ್ಸಾಹ ನೀಡ ಬೇಕು. ಕನ್ನಡಕ್ಕಾಗಿ ದುಡಿದ ಹೊರನಾಡ ಕನ್ನಡಿಗರನ್ನು ಗುರ್ತಿಸಿ ಆವರಿಗೆ ಪ್ರಶಸ್ತಿ, ಸಹಾಯ ಧನ, ವೃದ್ಧಾಪ್ಯ ವೇತನ ಮುಂತಾದವುಗಳನ್ನು ಕೊಡಬೇಕು. ಅಲ್ಲಿಯವರು ಬರೆದ ಪುಸ್ತಕಗಳ ಮುದ್ರಣ ಮತ್ತು ವಿತರಣ ಮಾಡಲು ಸರಕಾರ ಮುಂದೆ ಬರಬೇಕು.
ಒಂದು ಮಾತಂತೂ ಸತ್ಯ, ಕರ್ನಾಟಕದ ಪ್ರಜೆಗೆ ಕನ್ನಡ ಬರೀ ಭಾಷೆಯಾಗ ಬಹುದು. ಆದರೆ ಹೊರನಾಡ ಕನ್ನಡಿಗರಿಗೆ ಕನ್ನಡವೇ ಉಸಿರು. ಕನ್ನಡವೆಂದರೆ ಬರೀ ಒಂದು ಭಾಷೆಯಲ್ಲ. ಅದು ಒಂದು ಸಂಸ್ಕೃತಿ, ಪರಂಪರೆ. ಅದನ್ನು ಉಳಿಸಲು ಶ್ರಮಿಸುತ್ತಿರುವ ಹೊರನಾಡಿನ ಕನ್ನಡ ಸಂಸ್ಥೆಗಳ ಮೇಲೆ ತಾಯಿನಾಡಿನವರು ಎಂದಿಗೂ ಒಂದು ಗೌರವ ಭಾವನೆ ತಾಳಿ ಅಗಲಿದ ಸೋದರರಂತೆ ನಡೆದುಕೊಳ್ಳುತ್ತ ಕನ್ನಡ ಕಟ್ಟುವ ಕೆಲಸಕ್ಕೆ ಪ್ರೋತ್ಸಹಿಸಬೇಕು. ಯಾವುದೇ ಸರಕಾರ ಬಂದರೂ ಇದರ ಆದ್ಯತೆಯನ್ನು ಗುರುತಿಸಿ ಬೇಕಾದ ಸಹಾಯ ಒದಗಿಸಬೇಕು. ಕನ್ನಡದ ಬಾವುಟ ಕನ್ನಡಿಗರ ಬೆಂಬಲದಿಂದ ದೇಶದ ಎಲ್ಲ ಕಡೆಯಲ್ಲೂ ಹಾರುತ್ತಿರಬೇಕು. ಕನ್ನಡದ ಜನರು ಎಲ್ಲಿಯಾದರೂ ಮಾನ್ಯತೆ ಪಡೆಯುವಂತಾಗ ಬೇಕು. ಜೈ ಕರ್ನಾಟಕ ! ಜೈ ಕನ್ನಡ ತಾಯಿ ಭುವನೇಶ್ವರಿ !! ಸಿರಿಗನ್ನಡಂ ಗೆಲ್ಗೆ !!!
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ