ಹೊತ್ತಲ್ಲದ ಹೊತ್ತಿನಲಿ
ಹೊತ್ತಿ ಉರಿಯುವ ನೆನಪು
ಕರ್ಪೂರದಂತಲ್ಲ
ತನ್ನೊಂದಿಗೆ ನನ್ನ ಸುಡುವಾಗ
ಮಳೆಹನಿಗಳು ಬಿದ್ದು
ಅರ್ಧಕ್ಕೆ ಶಾಂತವಾಗುವುದೂ ಇಲ್ಲ
ಅರೆಬರೆ ಮಾತಿನಲಿ
ಎದ್ದುಹೋದ ವಾದಗಳೆಲ್ಲಾ
ಪದಪದಗಳನು ಹಿಂಡಿ
ಝಾಡಿಸುತ್ತವೆ ಉಳಿದ ಮಾತುಗಳನು
ಮನಸೆಂಬ ಮಖೇಡಿ
ಆಗ ಮಾತ್ರ ವಾಚಾಳಿ
ಗುಂಯ್ ಗುಡುವ ಶಬ್ದಗಳಲಿ
ಶಾಂತಿ ಹುಡುಕುವುದು ಹೇಗೆ?
ಅರ್ಧಕ್ಕೆ ನಿಂತ
ಗೆಜಾಲ್ಟು*ಗಳನು
ಪೂರ್ಣಗೊಳಿಸುವ ಪಾಠ
ತಿಳಿದಿರಲಿಕ್ಕಿಲ್ಲ ಎಲ್ಲರಿಗೂ
ತಿಳಿದ ನಾವೂ
ಬೇಕೆಂದೇ ಗುದ್ದಾಡುತ್ತೇವೆ
ಬಡಿದಾಡಿ ಕಿರುಚಾಡಿ
ಅತ್ತು ಬೇಸತ್ತು
ತಿಪ್ಪೆ ಸಾರಿಸುತ್ತೇವೆ ಕಡೆಗೆ
ನೆನಪುಗಳ ನೇವರಿಸಿ
ತೊಟ್ಟಿಲ ಕೂಸಾಗಿಸಿ
ಜೋಪಾನ ಮಾಡುವ ನಾವೇ
ಕತ್ತುಹಿಡಿದು ದಬ್ಬಿಬಿಡಬೇಕು
ಜೀವ ತಿನ್ನುವ ನೆನಪುಗಳನು
ಗಟ್ಟಿದನಿಯ ಮಾತಿಗಿಂತ
ಪಿಸುಮಾತು ಕೊರೆಯುವುದು
ಮೌನ ಕೊಲ್ಲುವುದು
ಎಲ್ಲಿ ಹುಡುಕುವುದು
ಒಳಗಿರದ ಭಾವ ಬಂಧ?
ನೆನಪುಗಳ ಭಾರವಿರದೆ
ಕಾಣುವ ಕನಸಿಗೆ
ರೆಕ್ಕೆ ಹೂಹಗುರ
ಈ ಕ್ಷಣ ಮೃದುಮಧುರ
—–“—–0—–“—–
*ಗೆಜಾಲ್ಟ್ : ಮನಃಶಾಸ್ತ್ರದ ಒಂದು ತತ್ವ. ಅರ್ಧಕ್ಕೆ ನಿಂತ ಭೂತಕಾಲದ ಸನ್ನಿವೇಶ/ವಿಷಯಗಳು ನಮ್ಮ ವರ್ತಮಾನದ ಸಮಸ್ಯೆಗಳಿಗೆ ಕಾರಣವಾಗುತ್ತಿರುತ್ತವೆ. ಅದನ್ನು ಕೆಲ ವಿಧಾನಗಳ ಮೂಲಕ ಸೂಕ್ತ ರೀತಿಯಲ್ಲಿ ಪೂರ್ಣಗೊಳಿಸಿದಾಗ ಮಾನಸಿಕ ಕ್ಷೋಭೆಯಿಂದ ರೋಗಿಯು ಹೊರಬರುತ್ತಾನೆ. ಉದಾಹರಣೆಗೆ ಜಗಳವೊಂದರಲ್ಲಿ ನಾವಾಡಬೇಕಿದ್ದ ಮಾತುಗಳನ್ನು ಆಡದಿರುವಾಗ, ಹಲವು ಕಾಲದ ನಂತರವೂ ಆ ಜಗಳ ಮತ್ತೆ ಮತ್ತೆ ತಲೆಯೊಳಗೆ ರಿಂಗಣಿಸಿ, ಇಂತಿಂಥ ಮಾತು ಆಡಬೇಕಿತ್ತೆಂದು ತೀವ್ರವಾಗಿ ಅನ್ನಿಸುತ್ತಾ ಕಾಡುತ್ತಿರುತ್ತದೆ. ಒಂದು ಕೋಣೆಯಲ್ಲಿನ ಖಾಲಿ ಕುರ್ಚಿಯನ್ನು ನೋಡುತ್ತಾ ಆ ಮಾತುಗಳನ್ನು ಆಡಿ ಮುಗಿಸಿದಾಗ ನಿರಾಳವೆನ್ನಿಸುತ್ತದೆ. ಇದನ್ನು ಸೂಕ್ತ ಮಾರ್ಗದರ್ಶನದೊಂದಿಗೆ ಮಾಡಿದಾಗ ಪ್ರಭಾವ ನಿಶ್ಚಿತ.
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ