- ಸ್ವಾತಂತ್ರ್ಯ ಮೆರವಣಿಗೆಯ ಡ್ರಮ್ ಮೇಜರ್; ಮಾರ್ಗರೇಟ್ ಬರೋಸ್ - ಫೆಬ್ರುವರಿ 28, 2021
- ಹಕ್ಕಿಹಾಡು - ಫೆಬ್ರುವರಿ 3, 2021
————”————
ಚಿಮಮಾಂಡಾ (Chimamanda Ngozi Adichie) ಅವರ Birdsong ಕತೆಯನ್ನು ಆರ್ ವಿಜಯರಾಘವನ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
————”————
ಆ ಅಪರಿಚಿತ ಮಹಿಳೆ ನನ್ನತ್ತ ನೋಡುತ್ತಿದ್ದಳು. ಬಿಸಿಲು ಪ್ರಜ್ವಲಿಸುವ ಮಧ್ಯಾಹ್ನದಲ್ಲಿ, ಮೋಟರ್ ಸೈಕಲ್ಗಳು ಮತ್ತು ಬೀದಿವ್ಯಾಪಾರಿಗಳ ಸುಳಿಯಲ್ಲಿ, ಅವಳು ತನ್ನ ಜೀಪಿನ ಹಿಂದಿನ ಸೀಟಿನಿಂದ ನನ್ನನ್ನು ನೋಡುತ್ತಿದ್ದಳು. ಅವಳ ನೋಟ ತುಂಬಾ ಮುಖಾಮುಖಿಯದಾಗಿತ್ತು, ಒಂದಿಷ್ಟೂ ಕದಲದ ನೆಟ್ಟ ನೋಟ. ಲಾಗೋಸ್ ನ ವಾಹನದಟ್ಟಣೆಯಲ್ಲಿ ಸಾಮಾನ್ಯವಾಗಿ ಜನರು ಮಾಡುವಂತೆ ಅವಳು ತನ್ನ ಪಕ್ಕದ ಕಾರಿನ ಮೇಲೆ ಕಣ್ಣು ಹಾಯಿಸುತ್ತಿರಲಿಲ್ಲ; ಅವಳು ನನ್ನನ್ನೇ ನೋಡುತ್ತಿದ್ದಳು. ಮೊದಲಿಗೆ ನಾನು ದೃಷ್ಟಿ ಬದಲಿಸಿ ದೂರ ನೋಡಿದೆ, ನಂತರ ಹಿಂತಿರುಗಿ ಅವಳತ್ತ ನೋಡಿದೆ. ಅವಳ ರೇಷ್ಮೆ ಕೂದಲ ನೇಯ್ಗೆ ಅವಳ ಹೆಗಲಿನಮೇಲೆ ಸಡಿಲವಾದ ಸುರುಳಿಗಳಲ್ಲಿ ಅಹಂಕಾರದಲ್ಲಿ ಬಿದ್ದಿತ್ತು. ಬ್ರೆಜಿಲಿಯನ್ ಕೇಶ ಎಂದು ಕರೆಯಲ್ಪಡುವ ಒಂದು ರೀತಿಯ ಎಕ್ಸ್ ಟೆನ್ಷನ್ ಮತ್ತು ವಿಕ್ಟೋರಿಯಾ ದ್ವೀಪದ ಹೇರ್ ಸಲೂನ್ಗಳಲ್ಲಿ ಡಾಲರ್ಗಳಲ್ಲಿ ಹಣ ಪಾವತಿಸಿ ಮಾಡಿಸಿಕೊಂಡ ವಿನ್ಯಾಸವನ್ನು; ಅವಳ ಸುಂದರವಾದ ಚರ್ಮವನ್ನು; ಅದು ದುಬಾರಿ ಕ್ರೀಮ್ಗಳಿಂದ ಬರುವ ಪ್ಲಾಸ್ಟಿಕ್ ಹೊಳಪನ್ನು ಹೊಂದಿತ್ತು. ಅವಳ ಕೈಯನ್ನು – ಉಂಗುರಗಳಿಂದ ಅಲಂಕೃತ ತೋರುಬೆರಳನ್ನು ಅವಳು ಮ್ಯಾಗಜೀನ್ ವ್ಯಾಪಾರಿಗಳನ್ನು ದೂರವಿರಿಸಲು ಮೇಲೆತ್ತಿದ್ದಳು, ಒಬ್ಬ ವ್ಯಕ್ತಿ ಸುಲಭವಾಗಿ ಜನರನ್ನು ದೂರವಿಡಲು ಬಳಸುವಂತೆ. ಅವಳು ಸುಂದರವಾಗಿದ್ದಳು, ಅಥವಾ ತುಂಬಾ ಅಸಾಮಾನ್ಯವಾಗಿ ಕಾಣುತ್ತಿದ್ದಳು. ವಿಶಾಲವಾದ ಕಣ್ಣುಗಳು ಅವಳ ಮುಖದಲ್ಲಿ ಆಳವಾಗಿ ಕೂತಿದ್ದವು, “ಸುಂದರಿ” ಅವಳನ್ನು
ವಿವರಿಸುವ ಸುಲಭಮಾರ್ಗವಾಗಿ ಕಂಡಿತ್ತು. ಅವಳು ನನ್ನ ಪ್ರೇಮಿಯ ಹೆಂಡತಿ ಎಂದು ನಾನು ಊಹಿಸಿದ ರೀತಿಯ ಮಹಿಳೆ. ಅವಳಿಗಾಗಿ ಎಲ್ಲ ಕೆಲಸಗಳನ್ನು ದುಡಿಸಿದ ಮಹಿಳೆ.
ನನ್ನ ಪ್ರೇಮಿ. ಇದು ಸ್ವಲ್ಪ ಮೆಲೋಡ್ರಮಾಟಿಕ್ ಶಬ್ದವಾಗಿದೆ, ಆದರೆ ಅವನನ್ನು ಹೇಗೆ ಉಲ್ಲೇಖಿಸಬೇಕೆಂದು ನನಗೆ ತಿಳಿದಿರಲಿಲ್ಲ. ನಲವತ್ತೈದು ವರ್ಷ ವಯಸ್ಸಿನ ಆ ನಗರವಾಸಿ ನನ್ನನ್ನು ಮುಟ್ಟುವ ಮೊದಲು ಅವನು ತನ್ನ ಮದುವೆಯ ಉಂಗುರವನ್ನು ಎಚ್ಚರಿಕೆಯಿಂದ ಜಾರಿಸಿದ್ದ. ಅವನನ್ನು “ಬಾಯ್ಫ್ರೆಂಡ್” ಎಂದರೆ ತಪ್ಪಾದೀತು. ಚಿಕ್ವಾಡೋ ಅವನನ್ನು “ನಿನ್ನ ಮನುಷ್ಯ” ಎಂದು ಕರೆಯುತ್ತಿದ್ದಳು, ಮಂದಹಾಸದಿಂದ, ನಾವಿಬ್ಬರೂ ತಮಾಷೆ ಮಾಡುತ್ತಿದ್ದಂತೆ. ಅವನು ನನ್ನವನಲ್ಲ. “ಆಹಾ, ನಿನ್ನ ಈ ಮನುಷ್ಯನ ಕಾರಣದಿಂದಲೇ ನೀನು ಯಾವಾಗಲೂ ಹೊರಡುವ ಧಾವಂತದಲ್ಲಿರುತ್ತೀಯ” ಎಂದು ಅವಳು ಹೇಳುತ್ತಿದ್ದಳು; ಹೇಳಿ ಅವಳ ಕುರ್ಚಿಯಲ್ಲಿ ಹಿಂದೆ ವಾಲುತ್ತಿದ್ದಳು, ತಲೆ ಚಚ್ಚಿಕೊಳ್ಳುತ್ತ. ಅವಳ ಜಡೆಯ ಕೆಳಗೆ ನೆತ್ತಿ ತುರಿಕೆಯಾಗಿತ್ತು, ಅದು ಅವಳು ಅದನ್ನು ಕೆರೆದುಕೊಳ್ಳುಲು ಹತ್ತಿರ ಬರುವ ಏಕೈಕ ಮಾರ್ಗವಾಗಿತ್ತು. “ಓಹ್, ನಿನ್ನ ಚೈತನ್ಯವು ಅದನ್ನು ಸುಖಿಸುವವರೆಗೂ ಆನಂದಿಸು, ಆದರೆ ನನ್ನ ಮಟ್ಟಿಗೆ, ವಿವಾಹಿತ ಪುರುಷನಿಗಾಗಿ ನನ್ನ ಕಾಲುಗಳನ್ನು ಅಗಲಿಸಲು ಸಾಧ್ಯವಿಲ್ಲ.” ನನ್ನ ಫೈಲ್ಗಳನ್ನು ಪ್ಯಾಕ್ ಮಾಡಿ ಆ ದಿನಕ್ಕೆ ನನ್ನ ಕಂಪ್ಯೂಟರ್ ಅನ್ನು ಸ್ಥಗಿತಗೊಳಿಸುತ್ತಿದ್ದಂತೆ, ಸ್ಪಷ್ಟ ದೃಷ್ಟಿಯ ನೈತಿಕ ಶ್ರೇಷ್ಠತೆಯೊಂದಿಗೆ ಅವಳು ಇದನ್ನು ಪದೇಪದೇ ಹೇಳುತ್ತಿದ್ದಳು.
ನಾವು ಸ್ನೇಹಿತೆಯರಾಗಿದ್ದು ಅವಶ್ಯಕತೆಯ ಕಾರಣಕ್ಕೆ. ನಾವಿಬ್ಬರೂ ಎನೂಗು ಕ್ಯಾಂಪಸ್ನಿಂದ ಪದವಿ ಪಡೆದಿದ್ದೇವೆ; ಲಾಗೋಸ್ನ ಸೆಲ್ನೆಟ್ ಟೆಲಿಕಾಂನಲ್ಲಿ ಸಮುದಾಯ ಸಂಬಂಧಗಳ ಘಟಕದ ಮಹಿಳೆಯರಾಗಿ ಇಬ್ಬರೇ ಕೆಲಸ ಮಾಡುತ್ತಿದ್ದೇವೆ. ಇಲ್ಲದಿದ್ದರೆ, ನಾವು ನಿಜಕ್ಕೂ ಸ್ನೇಹಿತೆಯರಾಗುತ್ತಿರಲಿಲ್ಲ. ಅವಳು ಅದೆಷ್ಟು ಸರಳೀಕೃತವಾದ ನಿಶ್ಚಿತತೆಯಿಂದ ತುಂಬಿದ್ದಾಳೆಂಬುದು ನನಗೆ ಕಿರಿಕಿರಿಯುಂಟು ಮಾಡುತ್ತಿತ್ತು. ನನಗೆ ಗೊತ್ತಿತ್ತು, ನಾನು ಬೇಜವಾಬ್ದಾರಿಯುತಳಾಗಿ, ಅಸ್ಪಷ್ಟವಾಗಿಯಾದರೂ ವಿದೇಶೀ ಹದಿಹರೆಯದವಳಂತೆ ವರ್ತಿಸುತ್ತಿದ್ದೇನೆ ಎಂದು ಅವಳು ತಿಳಿದಿದ್ದಳು: ನನ್ನ ಕೂದಲನ್ನು ನೈಸರ್ಗಿಕವಾಗಿ ಲೋ ಕಟ್ ಮಾಡಿಸುತ್ತಿದ್ದೆ, ಕಟ್ಟಡದ ಮುಂಭಾಗದಲ್ಲಿಯೇ ಸಿಗರೇಟು ಸೇದುತ್ತಿದ್ದೆ, ಅಲ್ಲಿನ ಪ್ರತಿಯೊಬ್ಬರೂ ಅದನ್ನು ನೋಡಬಹುದಿತ್ತು. ಸೋಮವಾರದ ಸಭೆಗಳ ನಂತರ ನಮ್ಮ ಬಾಸ್ ನ ನೇತೃತ್ವದ ಪ್ರಾರ್ಥನಾ ಸೆಷನ್ಗಳಲ್ಲಿ ಸೇರಲು ನಿರಾಕರಿಸಿದ್ದೆ. ನನ್ನ ಪ್ರೇಮಿಯ ಬಗ್ಗೆ ನಾನು ಅವಳಿಗೆ ಹೇಳುತ್ತಲೇ ಇರಲಿಲ್ಲ – ನನ್ನ ವೈಯಕ್ತಿಕ ಜೀವನದ ಬಗ್ಗೆ ನಾನು ಅವಳಿಗೆ ಏನನ್ನೂ ಹೇಳಲಿಲ್ಲ – ಆದರೆ ಅವನು ಮೊದಲು ನಮ್ಮ ಕಚೇರಿಗೆ ಕಾಲಿಟ್ಟಾಗ ಅವಳು ಅಲ್ಲಿಯೇ ಇದ್ದಳು, ನೇರಳೆ ಬಣ್ಣದ ಟೈಕಟ್ಟಿದ್ದ. ಹಣ ಕಂಡವರ ರೀತಿಯಲ್ಲಿ ತೆಳ್ಳಗಿನ, ಗಾಢ ವರ್ಣದ ವ್ಯಕ್ತಿ. ಅವನು ಪುರುಷರ ಹೊಳೆವ ಸ್ವಾಭಿಮಾನದಿಂದ ತುಂಬಿದ್ದ, ತನ್ನ ಪ್ರಾಮುಖ್ಯತೆಯನ್ನು ಒತ್ತಿಹೇಳುವ ರೀತಿಯಲ್ಲಿ ಆ ಭಾವವನ್ನು ತೊಡೆದವನಂತೆ ಕಾಣುತ್ತಿದ್ದ. ನಮ್ಮ ಬಾಸ್ ತನ್ನ ಎರಡೂ ಕೈಗಳಿಂದ ಅವನ ಕೈ ಕುಲುಕಿ, “ಸ್ವಾಗತ, ಸರ್, ನಿಮ್ಮನ್ನು ನೋಡುವುದು ಸಂತೋಷ, ಸರ್, ನೀವು ಹೇಗಿದ್ದೀರಿ, ಸರ್, ದಯವಿಟ್ಟು ಬಂದು ಕುಳಿತುಕೊಳ್ಳಿ, ಸರ್.” ಅವನು ನನ್ನ ನೋಡುವಾಗ ಚಿಕ್ವಾಡೋ ಇದ್ದಳು. ನಾನು ಅವನನ್ನು ನೋಡಿದೆ. ಅವನು ಮುಗುಳ್ನಕ್ಕ; ಎಲ್ಲದಕ್ಕಿಂತ ಬೆಚ್ಚಗಿನ, ಮುಕ್ತ ನಗೆ. “ನನ್ನ ಕುಟುಂಬ ಅಮೆರಿಕದಲ್ಲಿದೆ” ಎಂದು ಲೌಕಿಕ ನೈಜೀರಿಯಾದ ಆ ಸಾಮಾನ್ಯ ವಿದೇಶಿ ಉಚ್ಚಾರಣೆಯೊಂದಿಗೆ ನನಗೆ ಕೇಳಲೆಂಬಂತೆ, ಸ್ವಲ್ಪ ಜೋರಾಗೇ ನಮ್ಮ ಬಾಸಿಗೆ ಹೇಳಿದ. ಅವಳು ಅದನ್ನು ಕೇಳಿಸಿಕೊಂಡಳು. ನಂತರ ನಾನು ಕಂಡುಕೊಂಡಿದ್ದು, ಅವನು ಯಾವುದರ ಕುರಿತೋ ಏನೋ ನಿಜವಾಗಿಯೂ ಖುಷಿಗೊಂಡಾಗ ಭಾವ ಮಾಯವಾಗಿತ್ತು. ಅವನು ನಡೆದು ಬಂದು ಅವನ ಬಿಸಿನೆಸ್ ಕಾರ್ಡ್ ನನಗೆ ಕೊಡುವುದನ್ನು ಅವಳು ನೋಡಿದಳು. ಕೆಲವು ದಿನಗಳ ನಂತರ ಅವನ ಕಾರು ಚಾಲಕ ಉಡುಗೊರೆಯ ಚೀಲವೊಂದನ್ನು ನನಗೆ ತಲುಪಿಸಲು ಬಂದಾಗಲೂ ಅವಳು ಅಲ್ಲಿದ್ದಳು. ಅವಳು ನೋಡಿದ್ದರಿಂದ ಮತ್ತು ನನ್ನ ಭಾವನೆಗಳಿಂದ ನಾನು ಆರ್ದ್ರಳಾಗಿ ಹೋಗಿದ್ದುದರಿಂದ, ಆ ಮನುಷ್ಯ ನನಗೆ ಸರಿಯಲ್ಲ ಎಂದು ನನಗೆ ತಿಳಿದಿದ್ದರಿಂದ, ನಾನು ಅವಳಿಗೆ ಅವನು ಕಳಿಸಿದ ಪರ್ಫ್ಯೂಮ್ ಮತ್ತು “ನಾನು ನಿನ್ನ ಬಗ್ಗೆ ಯೋಚಿಸುತ್ತಿದ್ದೇನೆ” ಎಂದು ಹೇಳುವ ಕಾರ್ಡ್ ಅನ್ನು ತೋರಿಸಿದೆ.
“ನಾವಾ! (ಓ…) ಆ ವಿವಾಹಿತ ಮನುಷ್ಯನ ಕಾರಣಕ್ಕೆ ನಿನ್ನ ಕಣ್ಣುಗಳು ಹೇಗೆ ಹೊಳೆಯುತ್ತಿವೆ ನೋಡು. ಈಗ ನಿನಗೆ ವಿಮೋಚನಾ ಪ್ರಾರ್ಥನೆ ಬೇಕು,” ಎಂದು ಚಿಕ್ವಾಡೋ ಅರೆಹಾಸ್ಯದಿಂದ ಹೇಳಿದಳು. ಅವಳು ಆಗಾಗ್ಗೆ ವಿವಿಧ ಚರ್ಚುಗಳಲ್ಲಿ ರಾತ್ರಿ-ಜಾಗರಣೆ ಸೇವೆಗಳಿಗೆ ಹೋಗುತ್ತಿದ್ದಳು. ಆದರೆ ಎಲ್ಲವೂ ಅವಳಿಗೆ ನಿಮ್ಮ ದೇವರು ಕೊಟ್ಟಿರುವ ಸಂಗಾತಿಯನ್ನು ಹುಡುಕುವ ವಿಷಯವೇ ಆಗಿರುತ್ತಿತ್ತು. ಅವಳು ಮರುದಿನ ಬೆಳಿಗ್ಗೆ ತೂಕಡಿಕೆಲ್ಲಿಯೇ ಕೆಲಸಕ್ಕೆ ಬರುತ್ತಿದ್ದಳು. ಅವಳ ಕಣ್ಣುಗಳ ಬಿಳಿಯು ಕೆಂಪು ಬಣ್ಣದಿಂದ ಹಾರಿಹೋಗಿರುತ್ತಿತ್ತು. ಆದರೆ ಅವಳ ಮನಸ್ಸು ಈಗಾಗಲೇ ಮತ್ತೊಂದು ಸೇವೆಗೆ ಹಾಜರಾಗಲು ಯೋಜಿಸುತ್ತಿತ್ತು. ಅವಳಿಗೂ ಮೂವತ್ತೆರಡು ವರ್ಷ. ಅವಳ ಆಸೆಯ ಭಾರಕ್ಕೆ ಅವಳು ಕುಗ್ಗಿಹೋಗುತ್ತಿದ್ದಳು: ಬದುಕಿನಲ್ಲಿ ನೆಲೆನಿಲ್ಲುವ ಆಸೆಯದು. ಅವಳು ಆ ಬಗ್ಗೆ ಮಾತನಾಡಿದ್ದು ಅಷ್ಟೆ. ಕೆಫೆಟೇರಿಯಾದಲ್ಲಿ ಊಟ ಮಾಡುವಾಗ ನಮ್ಮ ಎಲ್ಲ ಮಹಿಳಾ ಸಹೋದ್ಯೋಗಿಗಳು ಮಾತನಾಡುತ್ತಿದ್ದದ್ದೇ ಅದು. ಜುವಾಂಡೆ ಆ ವ್ಯಕ್ತಿಯೊಂದಿಗೆ ತನ್ನ ಸಮಯವನ್ನು ವ್ಯರ್ಥ ಮಾಡುತ್ತಿದ್ದಾಳೆ-ಅವನು ನೆಲೆ ಕಂಡುಕೊಳ್ಳಲು ಸಿದ್ಧನಿಲ್ಲ. ದಯವಿಟ್ಟು ಅವನನ್ನು ಕೇಳು. ಓಹ್, ಹತ್ತಿರದಲ್ಲಿ ಅವನು ಮದುವೆ ಆಗದಿದ್ದರೆ ನೀನು ಬೇರೆಡೆ ನೋಡುವುದು ಉತ್ತಮ; ಯಾರೂ ವಯಸ್ಸಿನಲ್ಲಿ ದಿನದಿನ ಕಿರಿಯರಾಗುತ್ತಿಲ್ಲ.
ಇಗೋಯೆ ಅದೃಷ್ಟಶಾಲಿ, ಕೇವಲ ಆರು ತಿಂಗಳು ಅಷ್ಟೇ, ಅವಳು ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ಅವರು ಮಾತನಾಡುವಾಗ, ನಾನು ಮೇಲಿರುವ ಕಿಟಕಿಯಿಂದ ಹೊರಗೆ ನೋಡುತ್ತಿದ್ದೆ, ಎತ್ತರದ ಲಾಗೋಸ್ನತ್ತ, ಎಕರೆ ಎಕರೆ ತುಕ್ಕು ಹಿಡಿದ ಛಾವಣಿಗಳ ಪ್ರದೇಶದಲ್ಲಿ, ಕಳಂಕಿತ ದೇವತೆಗಳಿಂದ ತುಂಬಿರುವ ಈ ನಗರದಲ್ಲಿ ಭರವಸೆಯ ವರ್ಧಮಾನ ಮತ್ತು ಕುಸಿತಗಳ ನೋಡುತ್ತಿದ್ದೆ.
ನನ್ನ ಪ್ರೇಮಿ ಕೂಡ ಈ ಆಸೆಯ ಬಗ್ಗೆ ಮಾತನಾಡಿದ್ದ. “ನೀನು ಶೀಘ್ರದಲ್ಲೇ ನೆಲೆಯೂರಲು ಬಯಸುತ್ತೀಯ ಅಲ್ಲವಾ” ಎಂದು ಅವನು ಕೇಳಿದ್ದ. “ನಾನು ನಿನ್ನ ದಾರಿಯಲ್ಲಿ ನಿಲ್ಲುವುದಿಲ್ಲ ಎಂದು ನೀನು ಮನಸಲ್ಲಿ ಇಟ್ಟುಕೊಳ್ಳಬೇಕು.” ನಾವು ಹಾಸಿಗೆಯಲ್ಲಿ ಬೆತ್ತಲೆಯಾಗಿದ್ದೆವು; ಇದು ನಮ್ಮ ಮೊದಲ ಬಾರಿಯ ಸಮಾಗಮ. ದಿಂಬಿನ ಒಂದು ಗರಿ ಅವನ ಕೂದಲಿಗೆ ಅಂಟಿಕೊಂಡಿತ್ತು, ನಾನು ಅದನ್ನು ತೆಗೆದು ಅವನಿಗೆ ತೋರಿಸಿದ್ದೆ. ಈಗ ಏನು ನಡೆಯಿತು ಎಂಬುದರ ನಂತರ ನನಗೆ ಏನೊಂದನೂ ನಂಬಲಾಗಲಿಲ್ಲ, ನಾವಿಬ್ಬರೂ ಇನ್ನೂ ಪರಸ್ಪರರ ಮೈಬಿಸುಪಿನಿಂದ ಕರಗುತ್ತಿದ್ದೆವು. ಪದಗಳು ಅವನ ಬಾಯಿಂದ ಎಷ್ಟು ಸುಲಭವಾಗಿ ಉರುಳಿದ್ದವು. “ನಾನು ಇತರ ಪುರುಷರಂತೆ ಅಲ್ಲ, ಅವರು ನಿನ್ನ ಜೀವನದಲ್ಲಿ ಪ್ರಾಬಲ್ಯ ಸಾಧಿಸಬಹುದು, ನಿನ್ನ ಮುಂದೆ ಸಾಗಲು ತಾವು ಬಿಡುವವರಲ್ಲ ಎಂದು ಅವರೆಲ್ಲ ಭಾವಿಸುತ್ತಾರೆ” ಎಂದು ಅವನು ಹೇಳಿದ, ನನ್ನ ಮುಖ ನೋಡಲು ಮೊಣಕೈಯ ಮೇಲೆ ಭಾರ ಹಾಕಿ ಮೈ ಮೇಲೆತ್ತಿಕೊಂಡ. ತಾನು ಇತರರಿಗಿಂತ ಚೆನ್ನಾಗಿ ಆಟವಾಡುವವನೆಂದು ಅವನು ನನಗೆ ಹೇಳಿದ್ದ. ಆದರೆ ನಾನು ಇನ್ನೂ ಆಟದ ಬಗ್ಗೆಯೇ ಯೋಚಿಸಿರಲಿಲ್ಲ. ನಾನು ಅವನನ್ನು ಭೇಟಿಯಾದ ಕ್ಷಣದಿಂದಲೂ ಸಾಧ್ಯತೆಯ ಭಾವ ಹೊಂದಿದ್ದೆ. ಆದರೆ ಅವನಿಗೆ ಮಾರ್ಗವು ಈಗಾಗಲೇ ಮುಚ್ಚಲ್ಪಟ್ಟಿದೆ, ಆಥವಾ ನಿಜಕ್ಕೂ ಅದು ಎಂದಿಗೂ ತೆರೆದಿರಲಿಲ್ಲ; ವಿಷಯಗಳನ್ನು ಮನಸಿನ ಒಳಕ್ಕೆ ಗುಡಿಸಲೋ ಅಡ್ಡಿಪಡಿಸಲೋ ಎಡೆಯಿರಲಿಲ್ಲ.
“ನೀನು ತುಂಬಾ ವಿಚಾರವಂತ” ನಾನು ಹೇಳಿದೆ, ಆಗಿದ್ದ ಹಾನಿಯನ್ನು ಮರೆಮಾಚುವ ಹಳಸು ಅಪಹಾಸ್ಯದೊಂದಿಗೆ. ನನ್ನೊಂದಿಗೆ ಸಮ್ಮತಿಸಿದಂತೆ ಅವನು ತಲೆಯಾಡಿಸಿದ. ನಾನು ಹೊದಿಕೆಗಳನ್ನು ನನ್ನ ಗಲ್ಲದವರೆಗೆ ಎಳೆದುಕೊಂಡಿದ್ದೆ. ನಾನು ಬಟ್ಟೆ ತೊಡಬೇಕು, ಸುರುಲೇನಲ್ಲಿರುವ ನನ್ನ ಫ್ಲ್ಯಾಟ್ಗೆ ಹಿಂತಿರುಗಿ, ಅವನ ಫೋನ್ ನಂಬರನ್ನು ನನ್ನ ಫೋನ್ನಿಂದ ಅಳಿಸಿಹಾಕಬೇಕಿತ್ತು. ಆದರೆ ಉಳಿದುಕೊಂಡೆ. ನಾನು ಹದಿಮೂರು ತಿಂಗಳು ಮತ್ತು ಎಂಟು ದಿನಗಳ ಕಾಲ ಇದ್ದೆ, ಬಹುಪಾಲು ವಿಕ್ಟೋರಿಯಾ ದ್ವೀಪದಲ್ಲಿರುವ ಅವನ ಮನೆಯಲ್ಲಿ-ಬಣ್ಣ ಮಾಸಿದ-ಬಿಳಿ ಮನೆ ಅದು. ಅದು ಪ್ರಶಾಂತವೂ ಭವ್ಯವೂ ಚೆನ್ನಾಗಿ ಗಾಳಿಯಾಡಬಲ್ಲ ಅಂಗಣಗಳನ್ನು ಹೊಂದಿತ್ತು. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ನಿರ್ಮಿಸಲಾಗಿದ್ದದ್ದು. ಹಣ್ಣಿನ ಮರಗಳಿಂದ ತುಂಬಿದ ಕಾಂಪೋಂಡಿನಲ್ಲಿ ಕುಳಿತುಕೊಳ್ಳುತ್ತಿದ್ದೆ. ಗೋಡೆಯ ಮೇಲೆ ಹಬ್ಬಿದ್ದ ಬೌಗೆನ್ವಿಲ್ಲಾದ ಹೂಗಳು ಶವದ ಮೇಲಿಡುವ ಮಾಲೆಯಂತೆ ಅರಳಿದ್ದವು. ಅವನು ನನ್ನನ್ನು ಲೆಬನಾನಿನ ಸ್ನೇಹಿತನ ಗೆಸ್ಟ್ಹೌಸ್ಗೆ ಕರೆದೊಯ್ಯುವುದಾಗಿ ಹೇಳಿದ್ದ. ಅಲ್ಲಿ ಅವನು ಇಕೋಯಿಯಲ್ಲಿರುವ ಅವನ ಮನೆಯನ್ನು ನವೀಕರಿಸುವಾಗ ತಂಗಿರುವುದೆಂದು ಆಗಿತ್ತು. ನಾನು ಕಾರಿನಿಂದ ಇಳಿಯುವಾಗ, ಯಾವುದೋ ರಹಸ್ಯ ತೋಟದೊಳಕ್ಕೆ ಮುಗ್ಗರಿಸಿ ಬಿದ್ದಂತೆ ಭಾಸವಾಗಿತ್ತು. ಕವಡೆ ಕಪ್ಪೆಚಿಪ್ಪು ಮುಂತಾದ ಪೆರಿವಿಂಕಲ್ಗಳ ದಟ್ಟವಾದ ಗುಡ್ಡೆ, ಬಿಳಿ ಮತ್ತು ಗುಲಾಬಿ ಬಣ್ಣದವು ಮನೆಗೆ ಹೋಗುವ ಹಾದಿಯ ಆಚೀಚಿನ ಗಡಿಯಾಗಿತ್ತು. ಗಾಳಿ ಇಲ್ಲಿ ಸ್ವಚ್ಛವಾಗಿತ್ತು, ಪರಿಮಳಯುಕ್ತವಾಗಿತ್ತು, ಅದರ ಬಗ್ಗೆ ಏನಾದರೂ ವಿಶೇಷವಿತ್ತು. ಅದು ನನಗೆ ಹೊಸತಾಗುವುದರ ಬಗ್ಗೆ ಯೋಚಿಸುವಂತೆ ಮಾಡಿತು. ಅವನು ನನ್ನ ನೋಡುತ್ತಿದ್ದ; ಅದನ್ನವನು ನಾನು ಎಷ್ಟು ಇಷ್ಟಪಡಬೇಕೆಂದು ಅವನು ಬಯಸುತ್ತಿದ್ದ ಎಂಬುದು ನನ್ನ ಅರಿವಿಗೆ ಬರುತ್ತಿತ್ತು.
“ಇದು ನಿನ್ನ ಮನೆ, ಸರಿ ತಾನೇ?” ನಾನು ಹೇಳಿದೆ. “ಇದು ನಿನ್ನ ಲೆಬನಾನಿ ಸ್ನೇಹಿತರಿಗೆ ಸೇರಿದ್ದಲ್ಲ.”
ಅವನು ಆಶ್ಚರ್ಯದಿಂದ ನನ್ನ ಹತ್ತಿರ ಬಂದ. “ದಯವಿಟ್ಟು ತಪ್ಪಾಗಿ ಅರ್ಥಮಾಡಿಕೊಳ್ಳಬೇಡ. ನಾನು ನಿನಗೆ ಹೇಳಲು ಹೊರಟಿದ್ದೆ. ಇದು ಏಕೋ ವಿಪರೀತದ್ದಾಗಿದೆ ಎಂದು ನೀನು ಭಾವಿಸಬಾರದು ಎಂದು ನಾನು ಬಯಸುತ್ತೇನೆ. . . ” ಅವನು ಮಾತು ನಿಲ್ಲಿಸಿ ನನ್ನ ಕೈ ಹಿಡಿದ. “ಬೇರೆ ಗಂಡಸರು ಏನು ಮಾಡುತ್ತಾರೆ ಅಂತ ನನಗೆ ತಿಳಿದಿದೆ, ನಾನು ಹಾಗಲ್ಲ. ನಾನು ಹೆಂಗಸರನ್ನು ಇಲ್ಲಿಗೆ ಕರೆತರುವುದಿಲ್ಲ. ನಾನು ಇದನ್ನು ಕೆಡವಿ ಅಪಾರ್ಟ್ಮೆಂಟ್ ಬ್ಲಾಕ್ ನಿರ್ಮಿಸಲು ಕಳೆದ ವರ್ಷ ಖರೀದಿಸಿದೆ, ಆದರೆ ಇದು ತುಂಬಾ ಸುಂದರವಾಗಿತ್ತು. ಇದನ್ನು ಉಳಿಸಿಕೊಳ್ಳುವುಸು ನನ್ನ ಹುಚ್ಚು ಎಂದು ನನ್ನ ಸ್ನೇಹಿತರು ಭಾವಿಸುತ್ತಾರೆ. ಈ ದೇಶದಲ್ಲಿ ಯಾರೂ ಹಳೆಯ ವಿಷಯಗಳನ್ನು ಗೌರವಿಸುವುದಿಲ್ಲ ಎಂದು ನಿನಗೆ ಗೊತ್ತಿದೆ. ಕಚೇರಿಗೆ ಹೋಗುವ ಬದಲು ನಾನು ಈಗ ಹೆಚ್ಚಿನ ದಿನಗಳಲ್ಲಿ ಇಲ್ಲಿಂದಲೇ ಕೆಲಸ ಮಾಡುತ್ತೇನೆ.”
ನಾವು ವರಾಂಡಾಗೆ ಹೋಗುವ ಗಾಜಿನ ಜಾರು ಬಾಗಿಲುಗಳ ಬಳಿನಿಂತಿದ್ದೆವು. ಅದರ ಮೇಲೆ ದೊಡ್ಡ ಮೇ ಮರ ಕೊಂಬೆಗಳನ್ನು ಹರಡಿತ್ತು. ಬಾಡಿದ ಕೆಂಪು ಹೂವುಗಳು ಬೆತ್ತದ ಕುರ್ಚಿಗಳ ಮೇಲೆ ಬಿದ್ದಿದ್ದವು. “ನನಗೆ ಅಲ್ಲಿ ಕೂತು ಪಕ್ಷಿಗಳನ್ನು ನೋಡಲು ಇಷ್ಟ” ಎಂದು ಅವನು ಹೇಳಿದ.
ಅವನಿಗೆ ಪಕ್ಷಿಗಳು ಇಷ್ಟವಾಗಿದ್ದವು. ನನಗೆ ಪಕ್ಷಿಗಳು ಯಾವಾಗಲೂ ಕೇವಲ ಪಕ್ಷಿಗಳಾಗಿದ್ದವು, ಆದರೆ ಅವನೊಂದಿಗೆ ಇರುತ್ತ ನಾನು ಬೇರೊಬ್ಬಳಾಗಿದ್ದೆ: ಪಕ್ಷಿಗಳನ್ನು ಇಷ್ಟಪಡುವ ವ್ಯಕ್ತಿಯಾಗಿದ್ದೆ. ಮುಂದಿನ ಭಾನುವಾರ ಬೆಳಿಗ್ಗೆ, ನಮ್ಮ ಮೊದಲ ವಾರಾಂತ್ಯದಲ್ಲಿ, ಆ ಪಡಸಾಲೆಯ ನೀರವತೆಯಲ್ಲಿ ನಾವು ಒಂದಾದಮೇಲೊಂದರಂತೆ ಮುಂದಿನ ಭಾಗಗಳನ್ನು ಹಾದುಹೋಗುತ್ತಿದ್ದಾಗ, ಅವನು ಆಕಾಶವನ್ನು ನೋಡುತ್ತಾ, “ಅಲ್ಲಿ ಒಂದು ಮ್ಯಾಗ್ಪಿ ಇದೆ. ಅವಕ್ಕೆ ಹೊಳೆಯುವ ವಸ್ತುಗಳು ಇಷ್ಟ. ” ಅವನ ಮದುವೆಯ ಉಂಗುರವನ್ನು ಅವನು ಬೆತ್ತದ ಮೇಜಿನ ಮೇಲೆ ಇಡುವುದನ್ನು ನಾನು ಕಲ್ಪಿಸಿಕೊಂಡಿದ್ದೇನೆ; ಹಕ್ಕಿ ಕೆಳಕ್ಕೆ ಇಳಿದು ಅದನ್ನು ಶಾಶ್ವತವಾಗಿ ಕೊಂಡೊಯ್ದುಬಿಡುತ್ತದೆ ಎಂದು.
“ನೀನು ಎಲ್ಲರಂತಲ್ಲ ಎಂದು ನನಗೆ ತಿಳಿದಿತ್ತು!” – ನಾನು ಪತ್ರಿಕೆಯ ವ್ಯಾಪಾರ ಮತ್ತು ಕ್ರೀಡಾ ವಿಭಾಗಗಳನ್ನು ಓದಿದ್ದೇನೆ ಎಂಬುದನ್ನು ಅವನು ಗಮನಿಸಿ ರೋಮಾಂಚನಗೊಂಡಿದ್ದ. ನನ್ನ ವಿಭಿನ್ನತೆಯು ಅವನ ಉತ್ತಮ ಅಭಿರುಚಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವನು ಭಾವಿಸಿದ್ದ. ಹಾಗಾಗಿ ನಾವು ಪತ್ರಿಕೆಗಳ ಬಗ್ಗೆ ಮತ್ತು ಎಐಟಿ ಮತ್ತು ಸಿಎನ್ಎನ್ನಲ್ಲಿನ ಸುದ್ದಿಪ್ರಸಾರಗಳ ಬಗ್ಗೆ ಕುತೂಹಲದಿಂದ ಮಾತನಾಡುತ್ತಿದ್ದೆವು; ನಮ್ಮ ಅಭಿಪ್ರಾಯಗಳು ಪರಸ್ಪರ ಎಷ್ಟು ಹೋಲುತ್ತವೆ ಎಂದು ಆಶ್ಚರ್ಯಪಡುತ್ತಿದ್ದೆವು. ನನ್ನ ವಾಸ್ತವ್ಯದ ಬಗ್ಗೆ ನಾವು ಎಂದಿಗೂ ಚರ್ಚಿಸಲಿಲ್ಲ. ತಡರಾತ್ರಿ ಸುರುಲೇರ್ಗೆ ಹಿಂತಿರುಗುವುದು ಸುರಕ್ಷಿತವಲ್ಲ. ಅವನು “ನಾಳೆ ನಿನ್ನ ವಸ್ತುಗಳನ್ನು ಏಕೆ ತರಬಾರದು? ನೀನು ಇಲ್ಲಿಂದಲೇ ಕೆಲಸಕ್ಕೆ ಹೋಗಬಹುದು” ಎಂದು ಹೇಳುತ್ತಲೇ ಇದ್ದ; ಎಲ್ಲಿಯವರೆಗೆ ಎಂದರೆ ನನ್ನ ಹೆಚ್ಚಿನ ಬಟ್ಟೆಗಳು ವಾರ್ಡ್ರೋಬ್ನಲ್ಲಿರುವವರೆಗೂ, ನನ್ನ ಮಾಯಿಶ್ಚರೈಸರ್ಗಳು ಬಾತ್ರೂಮ್ ಕಪಾಟಿನಲ್ಲಿರುವವರೆಗೂ. ಅವನು ಹಣವನ್ನು ಮೇಜಿನ ಮೇಲೆ, ಕಂದು ಬಣ್ಣದ ಲಕೋಟೆಗಳಲ್ಲಿಟ್ಟು “ನಿನ್ನ ಪೆಟ್ರೋಲಿನ ಖರ್ಚಿಗೆ” ಎಂದು ಬರೆದಿರುತ್ತಿದ್ದ, ಅದೇನೋ ನಾನು ಪೆಟ್ರೋಲ್ಗಾಗಿ ಐವತ್ತು ಸಾವಿರ ನಾಯರಾಗಳನ್ನು ಖರ್ಚು ಮಾಡಬಹುದೆಂದು. ಕೆಲವೊಮ್ಮೆ, ಅವನು ನನ್ನನ್ನು ನಿನಗೆ ಬಟ್ಟೆ ಬದಲಾಯಿಸಲು ಗೌಪ್ಯತೆಯ ಅಗತ್ಯವಿದೆಯೇ ಎಂದು ಕೇಳುತ್ತಿದ್ದ, ನಾನೇನು ನಿನ್ನ ಬೆತ್ತಲೆಯಾಗಿ ನೋಡಿಲ್ಲವಾ ಎಂಬ ಹಾಗೆ.
ನಾವು ಅವನ ಹೆಂಡತಿ ಅಥವಾ ಮಕ್ಕಳ ಬಗ್ಗೆ ಅಥವಾ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲಿಲ್ಲ ಅಥವಾ ನಾನು ಯಾವಾಗ ನೆಲೆಯೂರಲು ಬಯಸುವೆನೆಂದು ನಾನೂ. ನಾನು ನೆಲೆಯೂರಿದರೆ ಮಾತ್ರ ಅವನು ನನ್ನ ದಾರಿಗೆ ಅಡ್ಡ ನಿಲ್ಲುವುದನ್ನು ತಪ್ಪಿಸಬಹುದು. ಬಹುಶಃ ನಾವು ಹೇಳದೆ ಉಳಿದಿರುವ ಎಲ್ಲ ವಿಷಯಗಳು ಅವನನ್ನು ಗಮನಿಸುವಂತೆ ಮಾಡಿತ್ತು. ಅವನ ಚರ್ಮ ತುಂಬಾ ಗಾಢವಾಗಿತ್ತು, ನಾನು ಅವನನ್ನು ಗ್ಯಾಂಬಿಯಾದಿಂದ ಬಂದಿರುವುದಾಗಿ ಲೇವಡಿ ಮಾಡಿದೆ; ನೀನೇನಾದರೂ ಹೆಂಗಸಾಗಿದ್ದರೆ, ನಿನ್ನ ಬಣ್ಣದ ಛಾಯೆಗೆ ಸರಿಹೊಂದುವ ಪೌಡರ್ ಅಂತೂ ಎಂದಿಗೂ ನಿನ್ನ ಕಣ್ಣಿಗೆ ಕಾಣುತ್ತಿರಲಿಲ್ಲ ಎಂದು ಹೇಳಿದೆ. ಅವನು ತನ್ನ ಕನ್ನಡಕ ಸ್ವಚ್ಛಗೊಳಿಸಲು ಪರಿಮಳಯುಕ್ತ ತೇವದ ಟಿಶ್ಯೂಗಳನ್ನು ಎಚ್ಚರಿಕೆಯಿಂದ ಬಿಚ್ಚಿದಾಗ ಅಥವಾ ಅವನ ತಟ್ಟೆಯಲ್ಲಿ ಕೋಳಿಯ ಅಡುಗೆಯನ್ನು ಕತ್ತರಿಸಿದಾಗ ಅಥವಾ ಅವನ ಟವೆಲ್ ಅನ್ನು ನಿಧಾನವಾಗಿ ಅದೊಂದು ಸುವಿಸ್ತಾರ ಕ್ರಿಯೆಯೆಂಬಂತೆ ಹೊಕ್ಕುಳ ಬಳಿಯ ಉಬ್ಬು ಗಾಯದ ಕೆಳಗೆ ಸೊಂಟದ ಸುತ್ತಲೂ ಒಂದು ಗಂಟುಹಾಕಿ ಕಟ್ಟಿಕೊಳ್ಳುತ್ತಿದ್ದಾಗ ನಾನು ಅವನನ್ನು ಗಮನಿಸುತ್ತಿದ್ದೆ. ನಾನು ಅವನನ್ನು ಜ್ಞಾಪಕದಲ್ಲಿಟ್ಟುಕೊಂಡಿದ್ದೆ, ಏಕೆಂದರೆ ನಾನು ಅವನನ್ನು ತಿಳಿದಿಲ್ಲ. ಅವನು ಸೌಜನ್ಯದ ಮನುಷ್ಯ. ಅವನ ಜೀವನವು ಚೆನ್ನಾಗಿಯೇ ಸಾಗುತ್ತಿತ್ತು, ಅವನ ಕಫ್ಲಿಂಕ್ಗಳು ಯಾವಾಗಲೂ ಸದಭಿರುಚಿಪೂರ್ಣವಾಗಿರುತ್ತವೆ.
ಅವನ ಮೂರು ಸೆಲ್ ಫೋನ್ಗಳು ಪದೇಪದೇ ರಿಂಗಣಿಸುತ್ತಿದ್ದವು; ಅದು ಯಾವಾಗ ಅವನ ಹೆಂಡತಿಯದು ಎಂದು ನನಗೆ ತಿಳಿಯುತ್ತಿತ್ತ್ತು ಏಕೆಂದರೆ ಆಗ ಅವನು ಶೌಚಾಲಯಕ್ಕೆ ಅಥವಾ ಪಡಸಾಲೆಗೆ ಹೋಗಿರುತ್ತಿದ್ದ, ಅದು ಸರ್ಕಾರಿ ಅಧಿಕಾರಿಯದಾಗಿದ್ದಾಗಲೂ ನನಗೆ ತಿಳಿಯುತ್ತಿತ್ತು, ಏಕೆಂದರೆ ಅವನು ನಂತರ ಹೇಳುತ್ತಾನೆ, “ಈ ಗವರ್ನರ್ಗಳು ಅದೇಕೆ ಯಾರನ್ನೂ ಒಬ್ಬಂಟಿಯಾಗಿ ಬಿಡುವುದಿಲ್ಲ?” ಆದರೆ ಅವನು ಗವರ್ನರ್ಗಳ ಕರೆಗಳನ್ನು ಇಷ್ಟಪಡುತ್ತಿದ್ದ. ಹಾಗೆಯೇ ನಮ್ಮ ಟೇಬಲ್ಗೆ ಬಂದ ರೆಸ್ಟೋರೆಂಟ್ ಮ್ಯಾನೇಜರ್, “ಸಾ, ನಿಮ್ಮನ್ನು ನೋಡಿ ನಮಗೆ ತುಂಬಾ ಸಂತೋಷವಾಗಿದೆ” ಎಂದು ಹೇಳುವುದನ್ನು. ಅವನು ತನ್ನ ಫೋಟೋಗಳಿಗಾಗಿ ಭಾನುವಾರದ ನಿಯತಕಾಲಿಕೆಯ ಪುಲ್ ಔಟ್ಗಳನ್ನು ಹುಡುಕುತ್ತಿದ್ದ, ಅಂಥದೊಂದನ್ನು ಕಂಡುಕೊಂಡಾಗ ಅವನು ಸ್ವಲ್ಪ ದೂರು ನೀಡುವ ಸ್ವರದಲ್ಲಿ, “ಇದನ್ನು ನೋಡು, ಅವರು ಉದ್ಯಮಿಗಳನ್ನು ಏಕೆ ಪ್ರಸಿದ್ಧ ವ್ಯಕ್ತಿಗಳನ್ನಾಗಿ ಮಾಡಬೇಕು?” ಎನ್ನುತ್ತಿದ್ದ. ಪತ್ರಿಕೆಗಳ ಛಾಯಾಗ್ರಾಹಕರ ಕಾರಣದಿಂದಾಗಿ ಅವನು ಎರಡು ಸಮಾರಂಭಗಳಿಗೆ ಒಂದೇ ಸೂಟ್ ಧರಿಸುತ್ತಿದ್ದಿಲ್ಲ. ಅವನಿಗೆ ಗ್ಲೋಬ್ನಂತೆ ದುಂಡಗಿನ ಮತ್ತು ದೊಡ್ಡದಾದ ಹೊಳಪು ನೀಡುವುದರ ನಿರಂತರ ಅಗತ್ಯವಿತ್ತು. ಅವನು ಜನರಿಗಾಗಿ ಕೆಲಸ ಮಾಡಿದ. ಅವರಿಗೆ ಹಣ ಕೊಟ್ಟ, ಅವರನ್ನು ಸಂಪರ್ಕಗಳಿಗೆ ಪರಿಚಯಿಸಿದ, ಅವನ ಸಂಬಂಧಿಗಳಿಗೆ ಉದ್ಯೋಗ ಪಡೆಯಲು ಸಹಾಯ ಮಾಡಿದ, ಕೃತಜ್ಞತೆ, ಪ್ರಶಂಸೆ ಬಂದಾಗ ಅವನು ನನಗೆ ಧನ್ಯವಾದದ ಸಂದೇಶಗಳನ್ನು ತೋರಿಸಿದ; “ಇತಿಹಾಸ ನಿಮ್ಮನ್ನು ಒಬ್ಬ ಮಹಾನ್ ವ್ಯಕ್ತಿಯಾಗಿ ಅಮರಗೊಳಿಸುತ್ತದೆ” ಎಂದು ಓದಿದ ಮಾತೊಂದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅವನ ಕಣ್ಣುಗಳು ಅದನ್ನು ಕಂಡು ಬೆಳಗಿದ್ದವು, ನಾನು ಅವನು ಬೆಕ್ಕಿನಂತೆ ಗುರುಗುರು ಅಂದಿದ್ದನ್ನು ಬಹುತೇಕ ಕೇಳಿರಬಹುದು.
ಒಂದು ದಿನ ಅವನು ನನಗೆ ಹೇಳಿದ, ಆಗ ನಾವು ಮಿಂಚುಳ್ಳಿಗಳು ಪೇರಲ ಮರದ ಮೇಲೆ ಸಂಯೋಗದ ನೃತ್ಯವನ್ನು ಮಾಡುತ್ತಿದ್ದವು, ಹೆಚ್ಚಿನ ಪಕ್ಷಿಗಳಿಗೆ ಶಿಶ್ನವೇ ಇರಲಿಲ್ಲ. ಪಕ್ಷಿಗಳ ಶಿಶ್ನಗಳ ಬಗ್ಗೆ ನಾನು ಎಂದಿಗೂ ಯೋಚಿಸಿರಲಿಲ್ಲ.
“ನಾನು ಬೆಳೆಯುತ್ತಿರುವಾಗ ನನ್ನ ತಾಯಿ ಹೊಲದಲ್ಲಿ ಕೋಳಿ ಸಾಕಿದ್ದರು, ನಾನು ಅವುಗಳನ್ನು ಸಂಭೋಗ ಮಾಡುವುದನ್ನು ನೋಡುತ್ತಿದ್ದೆ” ನಾನು ಹೇಳಿದೆ.
“ಖಂಡಿತವಾಗಿಯೂ ಅವರು ಸಂಭೋಗಿಸುತ್ತವೆ, ಆದರೆ ಶಿಶ್ನಗಳೊಂದಿಗೆ ಅಲ್ಲ” ಅವನು ಹೇಳಿದ. “ನೀನು ಎಂದಾದರೂ ಶಿಶ್ನವಿರುವ ಹುಂಜ ನೋಡಿದ್ದೀಯಾ?”
ನಾನು ನಕ್ಕಿದ್ದೆ, ತಮಾಶೆ ಗ್ರಹಿಸಿದ ಅವನು ನಕ್ಕ. ಅದು ನಮಗೆ ಇಷ್ಟವಾಯಿತು. “
“ಕುಮ್ಮಣ್ಣಿ ಹುಂಜ,” ನಾನು ಪಿಸುಗುಟ್ಟುತ್ತಿದ್ದೆ, ಅವನನ್ನು ತಬ್ಬಿಕೊಳ್ಳುತ್ತಿದ್ದೆ. ನಾವು ನಗುವನ್ನು ಸ್ಫೋಟಿಸುತ್ತಿದ್ದೆವು. ಅವನು “ಸಿವಿಥಾಡ್” ಎಂದು ಸಹಿ ಮಾಡಿದ ಟೆಕ್ಸ್ಟ್ ಮೆಸೇಜುಗಳನ್ನು ನನಗೆ ಕಳುಹಿಸುತ್ತಿದ್ದ. ಪ್ರತಿ ಬಾರಿ ನಾನು ವಿಕ್ಟೋರಿಯಾ ದ್ವೀಪದಲ್ಲಿನ ಹಳ್ಳಕೊಳ್ಳದ ರಸ್ತೆಯನ್ನು ದಾಟಿ ಬಾನಾಡಿಗಳ ಹಾಡುಗಳಿಂದ ತುಂಬಿದ ಆ ಕಾಂಪೋಂಡಿನೊಳಕ್ಕೆ ತಿರುಗಿದಾಗ ನಾನು ನನ್ನ ಮನೆಯಲ್ಲಿರುವಂತೆ ಭಾಸವಾಗುತ್ತಿತ್ತು.
ಆ ಮಹಿಳೆ ಇನ್ನೂ ನನ್ನತ್ತಲೇ ನೋಡುತ್ತಿದ್ದಳು. ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು, ಮಧ್ಯಾಹ್ನಕ್ಕೆ ಮೊದಲು ಹೀಗಾಗುವುದು ಸಾಮಾನ್ಯವಾಗಿ ಅಪರೂಪ. ಯಾವುದಾರ ಟ್ಯಾಂಕರ್ ರಸ್ತೆಗೆ ಅಡ್ಡಲಾಗಿ ಬಿದ್ದಿರಬೇಕು-ಟ್ಯಾಂಕರ್ಗಳು ಯಾವಾಗಲೂ ರಸ್ತೆಗಳಿಗೆ ಅಡ್ಡಲಾಗಿ ಬೀಳುತ್ತಿದ್ದವು – ಅಥವಾ ಬಸ್ ಕೆಟ್ಟು ನಿಂತಿರಬಹುದು ಅಥವಾ ಕಾರುಗಳು ಪೆಟ್ರೋಲ್ ಬಂಕ್ ಹೊರಗೆ ಸಾಲುಗಟ್ಟಿ ರಸ್ತೆಯನ್ನು ನಿರ್ಬಂಧಿಸುತ್ತಿದ್ದಾವು. ನನ್ನ ಪೆಟ್ರೋಲ್ ಗೇಜ್ ಟ್ಯಾಂಕ್ ಖಾಲಿಯಾಗಿರುವುದನ್ನು ಸೂಚಿಸುತ್ತಿತ್ತು. ನಾನು ಇಗ್ನಿಷನ್ ಆಫ್ ಮಾಡಿ ಕಿಟಕಿಯ ಗಾಜು ಇಳಿಸಿದೆ, ಆ ಮಹಿಳೆಯೂ ಗಾಜು ಇಳಿಸಿ ನನಗೆ ಏನಾದರೂ ಹೇಳುತ್ತಾರೆಯೇ ಎಂದು ಯೋಚಿಸಿದೆ. ನಾನು ಅವಳತ್ತ ನೋಟ ತಿರುಗಿಸಿದೆ. ಆದರೆ ಅವಳ ನೋಟ ಅಲೆದಾಡಲಿಲ್ಲ, ಅವಳ ಕಣ್ಣುಗಳು ದೃಢವಾಗಿ ಉಳಿದಿದ್ದವು, ನಾನು ದೂರ ನೋಡುವವರೆಗೂ. ಈಗ ಇನ್ನೂ ಅನೇಕ ಮಂದಿ ಬೀದಿ ವ್ಯಾಪಾರಿಗಳು ನೆರೆದಿದ್ದರು, ನಿಯತಕಾಲಿಕೆಗಳು, ಫೋನ್ ಕಾರ್ಡ್ಗಳು, ಬಾಳೆಕಾಯಿ ಚಿಪ್ಸ್, ಪತ್ರಿಕೆಗಳು; ಕೋಕ್ ಕ್ಯಾನ್ಗಳು ಮತ್ತು ಆಮ್ಸ್ಟಲ್ ಮಾಲ್ಟಾಗಳನ್ನು ತಣ್ಣಗಾಗಿರುವಂತೆ ನೀರಿನಲ್ಲಿ ಅದ್ದಿದ್ದರು. ನನ್ನ ಎದುರಿನ ಚಾಲಕ ಫೋನ್ ಕಾರ್ಡ್ ಖರೀದಿಸುತ್ತಿದ್ದ. ಕೆಂಪು ಆರ್ಸೆನಲ್ ಶರ್ಟ್ ಧರಿಸಿದ ಕಾರ್ಡ್ಮಾರುವ ಹುಡುಗ ತನ್ನ ಬೆರಳಿನ ಉಗುರಿನಿಂದ ಕಾರ್ಡ್ ಅನ್ನು ಗೀಚಿ, ನಂತರ ಕಾರ್ಡ್ ನಕಲಿ ಅಲ್ಲ ಎಂದು ಖಚಿತಪಡಿಸಿಕೊಳ್ಳಲು ಚಾಲಕ ತನ್ನ ಫೋನ್ನಲ್ಲಿ ಸಂಖ್ಯೆಗಳನ್ನು ನಮೂದಿಸುವವರೆಗೆ ಕಾಯುತ್ತಿದ್ದ.
ನಾನು ಮಹಿಳೆಯನ್ನು ನೋಡಲು ಮತ್ತೆ ಅತ್ತ ತಿರುಗಿದೆ. ನಮ್ಮ ಕಚೇರಿಗೆ ಬಂದ ಮೊದಲ ದಿನ ನನ್ನ ಪ್ರೇಮಿಯ ಬಗ್ಗೆ ಚಿಕ್ವಾಡೋ ಹೇಳಿದ್ದ ಮಾತು ನನಗೆ ನೆನಪಾಯಿತು: “ಅವನ ಮುಖದ ತುಂಬ ಪರದೇಶಗಳು ತುಂಬಿವೆ.” ಮಹಿಳೆ ಕೂಡ ವಿದೇಶಗಳೇ ತುಂಬಿದ ಮುಖವನ್ನು ಹೊಂದಿದ್ದಳು, ಅವಳ ಜೀವನದ ಸೌಕರ್ಯಗಳ ಮಬ್ಬು ಛಾಯೆ ಅಲ್ಲಿತ್ತು. ಅವಳ ಕೋಕೋ ಲಿಪ್ ಲೈನರ್ ಹಚ್ಚಿದ ತುಟಿಗಳೆರಡರಲ್ಲೂ ಏನೋ ಇತ್ತು, ಅದು ಅತೃಪ್ತಿಕರ ವಿಜಯವನ್ನು ಸೂಚಿಸುತ್ತಿತ್ತು, ಅದು ಅವಳು ಯುದ್ಧವನ್ನು ಗೆದ್ದಿರುವಾಗಲೂ ಹೋರಾಡಬೇಕಾಗಿ ಬಂದಿರುವುದನ್ನು ದ್ವೇಷಿಸುತ್ತಿದ್ದಳು. ಬಹುಶಃ ಅವಳು ನಿಜವಾಗಿಯೂ ನನ್ನ ಪ್ರೇಮಿಯ ಹೆಂಡತಿಯಾಗಿದ್ದಾಳು. ಅವಳು ಮತ್ತೆ ಲಾಗೋಸ್ಗೆ ಬಂದು ನನ್ನ ಬಗ್ಗೆ ತಿಳಿದುಕೊಂಡು, ಆ ನಂತರ, ಕೆಟ್ಟ ಪ್ರಹಸನದಂತೆ, ಟ್ರಾಫಿಕ್ನಲ್ಲಿ ನನ್ನ ಪಕ್ಕದಲ್ಲಿ ಬಂದು ನಿಂತಿದ್ದಾಳು. ಆದರೆ ಅವನ ಹೆಂಡತಿಗೆ ಬಹುಶಃ ವಿಚಾರವಾವುದೂ ತಿಳಿದಿರಲಿಕ್ಕಿಲ್ಲ; ಅವನು ತುಂಬಾ ಜಾಗರೂಕನಾಗಿದ್ದ.
ಶನಿವಾರ ಮಧ್ಯಾಹ್ನ ನನ್ನೊಂದಿಗೆ ಜಾಝ್ ಹೋಲ್ನಲ್ಲಿ ಕಳೆಯಲು ನಾನು ಕೇಳಿದಾಗ, ಭಾನುವಾರ ಟೆರ್ರಾ ಕಲ್ಚರ್ನಲ್ಲಿ ನಾಟಕವೊಂದಕ್ಕೆ ಹೋಗಬೇಕೆಂದು ನಾನು ಸೂಚಿಸಿದಾಗ, ನಾವು ರಾತ್ರಿಯೂಟಕ್ಕೆ ಮಾಮೂಲಿಗಿಂತ ಬೇರೆ ರೆಸ್ಟೋರೆಂಟ್ ಒಂದಕ್ಕೆ ಹೋಗಲು ಪ್ರಯತ್ನಿಸಬಹುದೇ ಎಂದು ನಾನು ಕೇಳಿದಾಗಲೆಲ್ಲ “ಅದು ಸಾಧ್ಯವಾಗಿದ್ದರೆ ನಾನು ಕೂಡ ಸಂತೋಷಪಡುತ್ತಿದ್ದೆ” ಎಂದು ಅವನು ಯಾವಾಗಲೂ ಹೇಳುತ್ತಿದ್ದ. ನಾವು ಅವಲೋವೊ ರಸ್ತೆಯ ಡಾರ್ಕ್ ಸ್ಟ್ರೀಟ್ಗೆ ಒಮ್ಮೆ ಮಾತ್ರ ಹೋಗಿದ್ದೆವು, ಅದು ದುಬಾರಿ ವೈನ್ ಸಿಗುತ್ತಿದ್ದ ಸ್ಥಳ. ಅದರ ಇರುವಿಕೆಯ ಕುರಿತು ಗೇಟ್ನಲ್ಲಿ ಯಾವುದೇ ಚಿಹ್ನೆ ಇರಲಿಲ್ಲ. ಪ್ರಕೃತಿಯ ಯಾವುದೋ ಶ್ರೇಷ್ಠ ಮತ್ತು ಅನಪೇಕ್ಷಿತ ಪ್ರಕ್ರಿಯೆಯು ನನ್ನೊಂದಿಗೆ ಅವನನ್ನು ಸಾರ್ವಜನಿಕವಾಗಿ ನೋಡುವುದನ್ನು ಅಸಾಧ್ಯವಾಗಿಸಿದೆಯೆಂದು ಹೇಳುವಂತೆ ಅವನು “ಅದು ಸಾಧ್ಯವಾಗಿದ್ದರೆ ನಾನು ಕೂಡ ಸಂತೋಷಪಡುತ್ತಿದ್ದೆ” ಎಂದು ಹೇಳಿದ. ಅಲ್ಲದೆ ನನ್ನ ಪಠ್ಯ ಸಂದೇಶಗಳನ್ನು ತನ್ನ ಫೋನಿನಲ್ಲೆ ಬಿಡುವುದು ಸಹ ಅವನಿಗೆ ಅಸಾಧ್ಯವಾಗಿತ್ತು. ನನ್ನ ಪಠ್ಯಸಂದೇಶಗಳನ್ನು ನೀನು ಓದಿದ ಕೂಡಲೇ ಅವನ್ನು ಅಷ್ಟು ಪರಿಣಾಮಕಾರಿಯಾಗಿ ಹೇಗೆ ಅಳಿಸಲು ಸಾಧ್ಯವಾಗುತ್ತದೆಂದು ನಾನು ಕೇಳಲು ಬಯಸಿದ್ದೆ, ಹಾಗೆಯೇ ಕೆಲವೇ ಕೆಲವು ಗಂಟೆಗಳ ಕಾಲ, ಕೇವಲ ಒಂದು ದಿನ ಮಾತ್ರವಾದರೂ, ಅವುಗಳನ್ನು ತನ್ನ ಫೋನ್ನಲ್ಲಿ ಉಳಿಸಲು ಯಾಕೆ ಅವನ ಮನಸ್ಸು ಒತ್ತಾಯಿಸಲಿಲ್ಲ ಎಂದೂ ಸಹ. ನನ್ನ ಗಂಟಲಿನಲ್ಲಿ ಒರಟು ಬೆಣಚುಕಲ್ಲುಗಳಂತೆ ಒಟ್ಟುಗೂಡಿರುವ ಪ್ರಶ್ನೆಗಳು ಪುಟಗಟ್ಟಲೇ ಇದ್ದವು. ಒಬ್ಬ ಗಂಡಸಿಗೆ ತುಂಬಾ ಹತ್ತಿರವಾಗುವುದೇ ಒಂದು ವಿಚಿತ್ರ ಸಂಗತಿ -ನನ್ನ ಹೆತ್ತವರ ಬಗ್ಗೆ ನನಗಿದ್ದ ಅಸಮಾಧಾನದ ಬಗ್ಗೆ ಅವನಿಗೆ ಹೇಳುವುದು, ನನಗೆ ಪರಿಚಯವಿಲ್ಲದ ನೆವದಲ್ಲಿ ಅವನಿಗೆ ಅಪ್ಪಟ ಸುಳ್ಳು ಹೇಳುವುದು-ಇನ್ನೂ ಅವನಿಗೆ ಪ್ರಶ್ನೆಗಳನ್ನು ಕೇಳಲು ನನಗೆ ಸಾಧ್ಯವಾಗುತ್ತಿಲ್ಲ, ಅಭದ್ರತೆ ಮತ್ತು ಹೆಸರಿಸದ ಹಾತೊರೆಯುವಿಕೆಯಿಂದ ಬಂಧಿಸಿಟ್ಟಿದ್ದವಳಂತೆ.
ನಾವು ಮೊದಲ ಬಾರಿಗೆ ಜಗಳವಾಡಿದಾಗ, ಅವನು “ಅಳಬೇಡ” ಎಂದು ಆರೋಪಿಸುವ ದನಿಯಲ್ಲಿ ಹೇಳಿದ್ದ. ಅವನ ಹೆಂಡತಿ ಅಳುತ್ತಾಳೆ, ಅವನು ಕಣ್ಣೀರನ್ನು ನಿಭಾಯಿಸಬಲ್ಲ, ನನ್ನ ತಣ್ಣನೆಯ ಧಿಕ್ಕಾರವಲ್ಲ ಎಂಬುದು ನನಗೆ ಅರಿವಾಗಿತ್ತು.
ಈ ಜಗಳ ಅವನ ಚಾಲಕ, ಇಮ್ಯಾನ್ಯುಯೆಲ್ ಎಂಬ ವಯಸ್ಸಾದ ವ್ಯಕ್ತಿಯ ಬಗ್ಗೆ, ಅವನ ಮುಖಭಾವಗಳು ಅತೃಪ್ತಿಯಿಂದ ಕೂಡಿರದಿದ್ದರೆ ಅವನು ಬುದ್ಧಿವಂತನಾಗಿ ಕಾಣಿಸುತ್ತಿದ್ದನೇನೋ. ಅದು ಶನಿವಾರದ ಮಧ್ಯಾಹ್ನ. ನಾನು ಆ ದಿನ ಬೆಳಿಗ್ಗೆ ಕೆಲಸದಲ್ಲಿದ್ದೆ. ನನ್ನ ಬಾಸ್ ತುರ್ತು ಸಭೆ ಕರೆದಿದ್ದ, ಅದು ಅನಗತ್ಯವೆಂದು ನಾನು ಭಾವಿಸಿದ್ದೆ: ಆ ರಾಯಲ್ ಹೈನೆಸ್, ಲಗೂನ್ ಬಳಿಯ ಒಬಾ ಪಟ್ಟಣದವ, ತೊಂದರೆ ಉಂಟುಮಾಡುತ್ತಿದ್ದ ಎಂದು ನಮಗೆ ತಿಳಿದಿತ್ತು, ಸೆಲ್ನೆಟ್ ಟೆಲಿಕಾಂ ತನ್ನ ಜನರ ಕಣ್ಣಿಗೆ ತಾನು ಕೆಟ್ಟದಾಗಿ ಕಾಣುವಂತೆ ಮಾಡಿದೆ ಎಂದು ಅವನು ಹೇಳಿದ್ದ. ತನ್ನ ಪೂರ್ವಜರ ಭೂಮಿಯಲ್ಲಿ ನಾವು ಅದು ಹೇಗೆ ದೊಡ್ಡ ಬೇಸ್ ಸ್ಟೇಷನ್ ಅನ್ನು ನಿರ್ಮಿಸಬಹುದು ಮತ್ತು ಒಂದು ಸಣ್ಣ ಬೋರ್ಹೋಲ್ ಅನ್ನು ಮಾತ್ರ, ಮಾತ್ರವೇ ತನ್ನ ಜನರಿಗೆ ದಾನ ಮಾಡಬಹುದೆಂದು ಪ್ರಶ್ನಿಸಿ ಅವನು ಅನೇಕ ಸಂದೇಶಗಳನ್ನು ಕಳುಹಿಸಿದ್ದ. ಆ ದಿನ ಬೆಳಿಗ್ಗೆ, ಅವನ ಕಾವಲುಗಾರರು ನಮ್ಮ ಕಟ್ಟಡದ ಸ್ಥಳವನ್ನು ನಿರ್ಬಂಧಿಸಿ, ನಮ್ಮ ಕೆಲವು ಎಂಜಿನಿಯರ್ಗಳನ್ನು ಅತ್ತಿತ್ತ ದೂಡಿ, ಅವರ ವ್ಯಾನ್ನ ಟೈರ್ಗಳನ್ನು ಪಂಕ್ಚರ್ ಮಾಡಿದ್ದರು. ನನ್ನ ಬಾಸ್ ಕೋಪಗೊಂಡಿದ್ದ, ಸಭೆಯಲ್ಲಿ ಮಾತನಾಡುವಾಗ ಅವನು ಮೇಜಿನ ಮೇಲೆ ಹೊಡೆದಿದ್ದ. ನಾನು ಕೂಡ ಅವನನ್ನು ಅನುಕರಿಸುತ್ತಿದ್ದಂತೆ ಬೆತ್ತದ ಮೇಜಿನ ಮೇಲೆ ನನ್ನ ಕೈ ಜಾಡಿಸಿದ್ದೆ, ಆದರೆ ನನ್ನ ಪ್ರೇಮಿ ನಕ್ಕ. “ಈ ದೇವರಿಲ್ಲದ, ರಾಕ್ಷಸ-ಪೂಜಿಸುವ ಸಾಂಪ್ರದಾಯಿಕ ಆಡಳಿತಗಾರರ ಸಮಸ್ಯೆ ಅದು” ಎಂದು ನನ್ನ ಬಾಸ್ ಹೇಳಿದ. “ಮನುಷ್ಯನು ವಂಚಕ. ಸಾಮಾನ್ಯ ವಂಚಕ! ನಾವು ಅವನಿಗೆ ಕೊಟ್ಟ ಒಂದು ಮಿಲಿಯನ್ ನಾಯರಾ ಏನಾಯಿತು? ನಮ್ಮ ಬೇಸ್ ಸ್ಟೇಷನ್ ಅನ್ನು ಸ್ಥಾಪಿಸುವ ಮೊದಲು ನಾವು ಅವರ ಎಲ್ಲಾ ಜನರಿಗೆ ಅಕ್ಕಿಯ ಚೀಲ ಬೀನ್ಸ್ ಚೀಲಗಳನ್ನು ತರಬೇಕೇ? ಅವನಿಗೆ ಪ್ರತಿದಿನ ಮಾಂಸದಡುಗೆಯ ಪೂರೈಕೆ ಮಾಡಬೇಕೇ? ಅಸಂಬದ್ಧ! ”
ನಮ್ಮ ಮುಖ್ಯಸ್ಥ ತಮಾಷೆಯಾಗಿರಲಿಲ್ಲ ಇದ್ದರೂ “ಮಾಂಸದ ಅಡುಗೆಗಳು” ಚಿಕ್ವಾಡೋಳನ್ನ ನನ್ನ ನಗಿಸುವಂತೆ ಮಾಡಿತ್ತು. “ಬ್ರೆಡ್ನಂತೆ ಹೆಚ್ಚು ಸಾಮಾನ್ಯವಾದದ್ದು ಏಕಾಗಬಾರದು?” ಚಿಕ್ವಾಡೋ ನನಗೆ ಪಿಸುಗುಟ್ಟಿದಳು, ನಂತರ ನಮ್ಮ ಬಾಸ್ ತಕ್ಷಣವೇ ಓಬಾವನ್ನು ನೋಡಲು ಸ್ವಯಂಸೇವಕರಾಗಿ ಯಾರು ಹೋಗುವಿರೆಂದು ಕೇಳಿದಾಗ ಕೈಮೇಲೆ ಎತ್ತಿದಳು. ನಾನು ಎಂದಿಗೂ ಸ್ವಯಂಪ್ರೇರಿತಳಾಗಿ ಹೋಗಲು ಸಿದ್ಧಳಿರಲಿಲ್ಲ. ನಾನು ಅಂತಹ ಭೇಟಿಗಳನ್ನು ಇಷ್ಟಪಡುತ್ತಿರಲಿಲ್ಲ-ಹಳ್ಳಿಗರು ನಮ್ಮನ್ನು ಅಚ್ಚರಿಯ ಕಂಗಳಿಂದ ನೋಡುತ್ತಾರೆ, ಯುವಕರು ಉಚಿತ ಫೋನ್ ಕಾರ್ಡ್ಗಳನ್ನು ಕೇಳುತ್ತಾರೆ, ಉಚಿತ ಫೋನ್ಗಳನ್ನು ಸಹ ಕೇಳುತ್ತಾರೆ-ಇದು ನನ್ನನ್ನು ಅಸಹಾಯಕಳನ್ನಾಗಿಸುತ್ತದೆ.
“ಮಾಂಸ ಏಕೆ?” ನನ್ನ ಪ್ರೇಮಿ ಕೇಳಿದ, ಇನ್ನೂ ನಗುತ್ತಾ.
“ನನಗೆ ಗೊತ್ತಿಲ್ಲ.”
“ವಾಸ್ತವವಾಗಿ, ನಾನೀಗ ಮಾಂಸದ ಊಟಮಾಡಲು ಬಯಸುತ್ತೇನೆ.”
“ನಾನೂ ಕೂಡ.”
ನಾವು ನಕ್ಕೆವು, ಸೂರ್ಯ ಹೊಳೆಯುತ್ತಿದ್ದ, ಮೇಲೆ ಹಕ್ಕಿಗಳ ಸದ್ದು, ಜಾರುವ ಬಾಗಿಲಿನ ಮೇಲೆ ಪರದೆ ತಾರಾಡುತ್ತಿದ್ದವು, ಭವಿಷ್ಯದಲ್ಲಿ ಸಿಗಲಿರುವ ಶನಿವಾರಗಳಂದು ನಾವು ಒಟ್ಟಿಗೆ ಕಳೆಯುವುದರ ಬಗ್ಗೆ ಯೋಚಿಸುತ್ತಿದ್ದೆ, ನನ್ನ ಬಾಸ್ ಕುರಿತ ತಮಾಷೆಯ ಕಥೆಗಳ ಬಗ್ಗೆ ನಗುತ್ತಿದ್ದೆವು. ನನ್ನ ಪ್ರೇಮಿ ಎಮ್ಯಾನುಯೆಲ್ನನ್ನು ಕರೆದು ಮಾಂಸದ ಪೈ ಖರೀದಿಸಲು ನನ್ನನ್ನು ಸೂಪರ್ ಮಾರ್ಕೆಟ್ಗೆ ಕರೆದೊಯ್ಯುವಂತೆ ಕೇಳಿದ. ನಾನು ಕಾರು ಹತ್ತಿದಾಗ, ಎಮ್ಯಾನುಯೆಲ್ ನನ್ನನ್ನು ಸ್ವಾಗತಿಸಲಿಲ್ಲ. ಅವನು ಸುಮ್ಮನೆ ನೇರವಾಗಿ ನೋಡುತ್ತಿದ್ದ. ನನ್ನ ಪ್ರೇಮಿ ಜೊತೆಗಿಲ್ಲದೆ ಅವನು ನನ್ನನ್ನು ಕರೆದೊಯ್ಯುತ್ತಿರುವುದು ಇದೇ ಮೊದಲು. ಮೌನ ಉದ್ವಿಗ್ನಕರವಾಗಿತ್ತು. ಬಹುಶಃ ಅವನು ತನ್ನ ಮಕ್ಕಳೆಲ್ಲ ನನಗಿಂತ ದೊಡ್ಡವರು ಎಂದು ಯೋಚಿಸುತ್ತಿರಬಹುದು.
“ಒಳ್ಳೆಯದು, ಎಮ್ಯಾನುಯೆಲ್!” ನಾನೇ ಕೊನೆಗೆ ಹೇಳಿದೆ, ಅವನನ್ನು ಬಲವಂತದ ಖುಷಿಯ ಮುಖಭಾವದಲ್ಲಿ ಸ್ವಾಗತಿಸಿದೆ. “ಕೋಫೊ ಅಬಯೋಮಿ ಸ್ಟ್ರೀಟ್ನಲ್ಲಿರುವ ಸೂಪರ್ ಮಾರ್ಕೆಟ್ ನಿಮಗೆ ಗೊತ್ತಾ?”
ಅವನು ಏನೂ ಹೇಳದೆ ಕಾರನ್ನು ಚಾಲೂ ಮಾಡಿದ. ನಾವು ಸೂಪರ್ ಮಾರ್ಕೆಟ್ ಬಳಿ ಬಂದಾಗ, ಅವನು ಗೇಟ್ ಬಳಿ ಕಾರು ನಿಲ್ಲಿಸಿ “ಇಲ್ಲಿ ಇಳಿಯಿರಿ, ನಾನು ಹೋಗಿ ಪಾರ್ಕ್ ಮಾಡ್ತೇನೆ” ಎಂದು ಹೇಳಿದ.
“ದಯವಿಟ್ಟು ನನ್ನನ್ನು ಪ್ರವೇಶದ್ವಾರದಲ್ಲಿ ಬಿಡಿ,” ನಾನು ಹೇಳಿದೆ. ಪಾರ್ಕಿಂಗ್ ಸ್ಥಳವನ್ನು ಹುಡುಕುವ ಮೊದಲು ಪ್ರತಿಯೊಬ್ಬ ಚಾಲಕರು ಹಾಗೇ ಮಾಡುತ್ತಿದ್ದರು.
“ಇಲ್ಲಿಯೇ ಇಳಿಯಿರಿ.” ಅವನು ಇನ್ನೂ ನನ್ನತ್ತ ನೋಡಲಿಲ್ಲ. ಕೋಪ ನನ್ನ ಚರ್ಮದ ಕೆಳಗೆ ಏರಿತು, ನನಗೆ ನಾನು ಮತ್ತು ನನ್ನ ದೇಹ ಬೇರೆಬೇರೆಯಾದಂತೆ, ನಾನು ರಕ್ತರಹಿತಳಾದಂತೆ ಭಾಸವಾಯಿತು, ಗಾಳಿಯಲ್ಲಿ ತೂಗುತ್ತಿರುವಂತೆ; ನಾನು ಕಾರು ಇಳಿದಾದಾಗ ನನ್ನ ಕಾಲುಗಳ ಕೆಳಗೆ ನೆಲವನ್ನು ಗ್ರಹಿಸಲಾಗಲಿಲ್ಲ. ಡಿಸ್ಪ್ಲೇನಲ್ಲಿದ್ದ ಒಂದಿಷ್ಟು ಮಾಂಸದ ಪೈಗಳನ್ನು ಆಯ್ಕೆ ಮಾಡಿದ ನಂತರ, ನಾನು ನನ್ನ ಪ್ರೇಮಿಗೆ ಕರೆ ಮಾಡಿ ಇಮ್ಯಾನ್ಯುಯೆಲ್ ಅಸಭ್ಯವಾಗಿ ವರ್ತಿಸಿದ್ದಾನೆ, ನಾನು ಟ್ಯಾಕ್ಸಿಯನ್ನು ಹಿಂತಿರುಗಿಸುತ್ತೇನೆ ಎಂದು ಹೇಳಿದೆ.
“ಇಮ್ಯಾನ್ಯುಯೆಲ್ ರಸ್ತೆ ಕೆಟ್ಟದಾಗಿದೆ ಎಂದು ಹೇಳಿದರು,” ನಾನು ಹಿಂತಿರುಗಿದಾಗ ನನ್ನ ಪ್ರೇಮಿ ಹೇಳಿದ, ಅವನ ಸ್ವರ ಸಮಾಧಾನ ತರಲು ಪ್ರಯತ್ನಿಸುತ್ತಿತ್ತು.
“ಆ ಮನುಷ್ಯ ನನ್ನನ್ನು ಅವಮಾನಿಸಿದ” ನಾನು ಹೇಳಿದೆ.
“ಇಲ್ಲ, ಅವನು ಹಾಗೆಲ್ಲ ಮಾಡುವವನಲ್ಲ. ಬಹುಶಃ ಅವನು ನಿನಗೆ ಅರ್ಥವಾಗದೆ ಹೋಗಿರಬಹುದು.”
ನನ್ನ ಪ್ರೇಮಿಯ ಹೆಂಡತಿಯ ಶಕ್ತಿಯನ್ನು ಎಮ್ಯಾನುಯೆಲ್ ನನಗೆ ತೋರಿಸಿದ್ದ; ಇವನು ಖಂಡಿಸಬಹುದೆಂಬ ಭಯವಿದ್ದಿದ್ದರೆ ಅವನು ಅಷ್ಟೊಂದು ಅಸಭ್ಯವಾಗಿ ವರ್ತಿಸುತ್ತಿರಲಿಲ್ಲ. ನಾನು ಮಾಂಸದ ಪೈಗಳ ಚೀಲವನ್ನು ಕಿಟಕಿಯ ಮೂಲಕ ಬಿಸಾಡಲು ಬಯಸಿದ್ದೆ.
“ನೀನು ಏನು ಮಾಡುತ್ತಿದ್ದೀಯ, ನಿನ್ನ ಡ್ರೈವರ್ ನಿನ್ನ ಗೆಳತಿಯರಿಗೆ ಅವರ ಸ್ಥಾನವನ್ನು ನೆನಪಿಸಲು ಬಯಸುತ್ತೀಯಾ?” ನನ್ನ ಧ್ವನಿ ಕೀರಲಾಗಿತ್ತು. ಅದಕ್ಕಾಗಿ ನನ್ನ ಕುರಿತು ನನಗೇ ಇಷ್ಟವಾಗಲಿಲ್ಲ. ಇನ್ನೂ ಕೆಟ್ಟದಾಗಿದ್ದೆಂದರೆ, ನನ್ನ ಕಣ್ಣುಗಳಲ್ಲಿ ನೀರೂರುತ್ತಿರುವುದನ್ನು ಗಮನಿಸಿ ನಾನು ಗಾಬರಿಗೊಂಡೆ. ನಾನು ವಿಚಾರಹೀನ ಮಗುವೆಂಬಂತೆ ನನ್ನ ಪ್ರೇಮಿ ನಿಧಾನವಾಗಿ ತನ್ನ ತೋಳುಗಳನ್ನು ನನ್ನ ಸುತ್ತಲೂ ಹಾಕಿಕೊಂಡ. ‘ನನಗೆ ಮಾಂಸದ ಪೈ ಕೊಡುತ್ತೀಯಾ ಎಂದು ಕೇಳಿದ.
“ನೀನು ಬೇರೆ ಹೆಂಗಸರನ್ನು ಇಲ್ಲಿಗೆ ಕರೆತಂದಿದ್ದೀಯ, ಅಲ್ಲವೇ?” ನಾನು ಕೇಳಿದೆ, ಭಾವ ಬೇರೆ ಹೆಂಗಸರ ಕಡೆಗೆ ಹೇಗೆ ಬದಲಾಯಿತು ಎಂದು ನನಗೆ ಸಂಪೂರ್ಣವಾಗಿ ಖಚಿತವಾಗಿಲ್ಲ.
ಅವನು ತಲೆ ಅಲ್ಲಾಡಿಸಿದ. “ಇಲ್ಲ, ನಾನು ಆ ಕೆಲಸ ಮಾಡಿಲ್ಲ. ಈ ಬಗ್ಗೆ ಮಾತುಕತೆ ಬೇಡ. ನಾವು ಮಾಂಸದ ಪೈ ತಿಂದು ಸಿನಿಮಾ ನೋಡೋಣ”
ನಾನು ಸಮಾಧಾನಿಸಲು, ತಬ್ಬಲು, ಮುದ್ದು ಮಾಡಲು ಅವನಿಗೆ ಅವಕಾಶ ಮಾಡಿಕೊಟ್ಟೆ. ನಂತರ ಅವನು ಹೇಳಿದ, “ನಿನಗೆ ಗೊತ್ತಾ, ನಾನು ಮದುವೆಯಾದಾಗಿನಿಂದ ನನಗೆ ಕೇವಲ ಎರಡು ಸಂಬಂಧಗಳಿವೆ. ನಾನು ಇತರ ಪುರುಷರಂತೆ ಅಲ್ಲ. ”
“ನೀನು ಬಹುಮಾನಕ್ಕೆ ಅರ್ಹ ಎಂದು ನೀನ ಭಾವಿಸುತ್ತೀಯ” ಎಂದೆ.
ಅವನು ನಗುತ್ತಿದ್ದ. “ಆ ಇಬ್ಬರೂ ನಿನ್ನಂತೆಯೇ ಇದ್ದರು.” ಅವನು ಒಂದು ಪದವನ್ನು ಹುಡುಕಲು ಮಾತು ನಿಲ್ಲಿಸಿದ, ಅದು ಸಿಕ್ಕಿಬಿಟ್ಟಾಗ ಸಂತೋಷದಿಂದ ಹೇಳಿದ. “ಚೈತನ್ಯಶೀಲರು. ಹಾಂ ಅವರು ನಿನ್ನಂತೆ ಚೈತನ್ಯಶೀಲರಾಗಿದ್ದರು. ”
ನಾನು ಅವನತ್ತ ನೋಡಿದೆ. ಅವನು ನನಗೆ ಹೇಳಬಾರದ ಸಂಗತಿಗಳಿವೆ. ಅವನೊಂದಿಗೆ ಹೇಳಲು ನಾನು ಹಾತೊರೆಯುವ ವಿಷಯಗಳಿವೆ ಎಂದು ಅವನು ಹೇಗೆ ಅರಿಯಲಿಲ್ಲ? ಇದು ಇಚ್ಛಾಪೂರ್ವಕ ಕುರುಡುತನವಾಗಿತ್ತು; ಅದು ಹಾಗೆಯೇ ಇರಬೇಕಿತ್ತು. ಅವನು ನೋಡದಿರಲು ನಿರ್ಧರಿಸಿದ್ದ. “ನೀನೊಬ್ಬ ಬಾಸ್ಟರ್ಡ್,” ನಾನು ಹೇಳಿದೆ.
“ಏನು?”
ನಾನು ಅದನ್ನೇ ಪುನರಾವರ್ತಿಸಿದೆ.
ಅವನು ಈಗಷ್ಟೇ ಕೀಟವೊಂದು ಕುಟುಕಿದಂತೆ ಕಾಣುತ್ತಿದ್ದ. “ಹೊರ ನಡೆ. ಇದೀಗಲೇ ಈ ಮನೆ ಬಿಟ್ಟು ಹೋಗು,” ಎಂದ. ನಂತರ “ಇದು ಸ್ವೀಕಾರಾರ್ಹವಲ್ಲ” ಎಂದು ಗೊಣಗುತ್ತಿದ್ದ.
ನಾನು ಹಿಂದೆಂದೂ ಮನೆಯಿಂದ ಹೊರಗೆ ದೂಡಲ್ಪಟ್ಟಿರಲಿಲ್ಲ. ಎಮ್ಯಾನುಯೆಲ್ ಗ್ಯಾರೇಜಿನ ನೆರಳಿನಲ್ಲಿ ಕುರ್ಚಿಯಲ್ಲಿ ಕುಳಿತು ಕಲ್ಲಿನ ಮುಖಭಾವದಲ್ಲಿ ನಾನು ನನ್ನ ಕಾರಿಗೆ ಹೋಗುವುದನ್ನೇ ನೋಡುತ್ತಿದ್ದ. ನನ್ನ ಪ್ರೇಮಿ ಐದು ದಿನಗಳವರೆಗೆ ನನಗೆ ಕರೆಮಾಡಲಿಲ್ಲ, ನಾನೂ ಅವನಿಗೆ ಕರೆಮಾಡಲಿಲ್ಲ. ಅವನು ಅಂತಿಮವಾಗಿ ಕರೆಮಾಡಿದಾಗ, ಅವನ ಮೊದಲ ಮಾತು “ಮೇ ಮರದ ಮೇಲೆ ಎರಡು ಪಾರಿವಾಳಗಳಿವೆ. ನೀನು ಅವುಗಳನ್ನು ನೋಡಬೇಕೆಂದು ನಾನು ಬಯಸುತ್ತೇನೆ.”
“ಏನೂ ಆಗಿಲ್ಲ ಎಂಬಂತೆ ನೀನು ವರ್ತಿಸುತ್ತಿದ್ದೀಯ.”
“ನಾನು ನಿನಗೆ ಕರೆಮಾಡಿ ಕರೆದಿದ್ದೇನೆ” ಎಂದು ಹೇಳಿದ, ಕರೆಯೇ ಸ್ವತಃ ಕ್ಷಮೆಯಾಚನೆಯೆಂಬಂತೆ. ನಂತರ, ಅವನು ನನ್ನನ್ನು ಬಾಸ್ಟರ್ಡ್ ಎಂದು ಕರೆಯುವ ಬದಲು ಅತ್ತಿದ್ದರೆ ನಾನು ಉತ್ತಮವಾಗಿ ವರ್ತಿಸುತ್ತಿದ್ದೆ ಎಂದು ಹೇಳಿದ. ನಾನು ಹಿಂತಿರುಗಬಾರದಿತ್ತು- ಆಗಲೂ ನನಗೆ ಅದು ತಿಳಿದಿತ್ತು.
ಆ ಮಹಿಳೆ, ಇನ್ನೂ ನನ್ನನ್ನು ದಿಟ್ಟಿಸುತ್ತಲೇ, ತನ್ನ ಸೆಲ್ ಫೋನ್ನಲ್ಲಿ ಮಾತನಾಡುತ್ತಿದ್ದಳು. ಅವಳ ಜೀಪ್ ಕಪ್ಪು ಮತ್ತು ಬೆಳ್ಳಿ ಬಣ್ಣದ್ದು. ಆಶ್ಚರ್ಯಕರವಾಗಿ ಗೀರುನೆಗ್ಗುಗಳಿಂದ ಮುಕ್ತವಾಗಿತ್ತು. ಈ ನಗರದಲ್ಲಿ ಮೋಟಾರ್ ಸೈಕಲ್ ಟ್ಯಾಕ್ಸಿಗಳಾದ ಒಕಾಡಾ ನಂತರ ಒಕಾಡಾ ದಟ್ಟಣೆಯಲ್ಲಿರುವ ಕಾರುಗಳ ನಡುವಿನ ಕಿರಿದಾದ ಸಂದುಗಳ ಮೂಲಕ ಬೈಕ್ ಎಂದರೆ ಎಷ್ಟೇ ಚಿಕ್ಕ ಸಂದಿಯಿದ್ದರೂ ಆಕಾರ ಕುಗ್ಗಿಸಿಕೊಂಡು ಹೋಗಬಲ್ಲದ್ದೆಂಬಂತೆ ಚಲಿಸುವಾಗ ಅದು ಹೇಗೆ ಸಾಧ್ಯ? ಬಹುಶಃ ಅವಳ ಕಾರಿಗೆ ಏನಾದರೂ ಗುದ್ದಿದಾಗ ಆಕಾಶದಿಂದ ಮೆಕ್ಯಾನಿಕ್ ಇಳಿದು ಬಂದು ಡೆಂಟ್ ಕಣ್ಮರೆಯಾಗಿಸಿ ಹೋಗಿರಬಹುದು. ನನ್ನ ಮುಂದೆ ಇರುವ ಕಾರಿನ ಟೇಲ್ ಲ್ಯಾಂಪ್-ಬೆಳಕಿನಲ್ಲಿ ಅದರ ಸೀಳು ಗಾಯ ಕಾಣುತ್ತಿತ್ತು; ಮಳೆ ಬಂದಾಗ ರಸ್ತೆಗಳನ್ನು ನುಣುಪಾದ ಹಾಳೆಯನ್ನಾಗಿ ಪರಿವರ್ತಿಸುವ ತೈಲವನ್ನು ಹನಿಸಿದ ಅನೇಕ ಕಾರುಗಳಲ್ಲಿ ಇದು ಒಂದು ಕಾಣುತ್ತದೆ. ನನ್ನ ಸ್ವಂತ ಕಾರಿನ ಮೈಯೆಲ್ಲ ಗಾಯಗಳಿಂದ ತುಂಬಿತ್ತು. ಅತಿದೊಡ್ಡದು ನಜ್ಜುಗುಜ್ಜಾಗಿದ್ದ ಬಂಪರ್, ಟ್ಯಾಕ್ಸಿಯೊಂದು ಒಂದು ತಿಂಗಳ ಮೊದಲು ಕಿಂಗ್ಸ್ವೇ ರಸ್ತೆಯ ಕೆಂಪು ದೀಪ ಬಿದ್ದ ಸಿಗ್ನಲ್ ಬಳಿಯಲ್ಲಿ ನನ್ನ ಕಾರಿಗೆ ಗುದ್ದಿತ್ತು. ಚಾಲಕ ತನ್ನ ಅಂಗಿಯ ಗುಂಡಿಗಳನ್ನು ಬಿಚ್ಚಿಕೊಂಡಿದ್ದ, ಮೈಎಲ್ಲಾ ಬೆವರುತ್ತಲಿರುವ ಬ್ರೆವಾಡೋನಂತೆ ಹೊರಗೆ ಹಾರಿ ನನ್ನ ಮೇಲೆ ಕಿರುಚಿದ್ದ.
“ಮೂರ್ಖ ಹುಡುಗಿ! ನೀವೆಲ್ಲಾ ಒಂದೇ ಬಗೆ ಉಪದ್ರವಗಳು. ನೀನು ಯಾಕೆ ಹಾಗೆ ಕಾರು ನಿಲ್ಲಿಸಿದೆ? ನಾನ್ ಸೆನ್ಸ್! ”
ಅವನು ತನ್ನ ಕಾರು ಚಲಾಯಿಸಿಕೊಂಡು ಹೋಗುವವರೆಗೂ. ದಿಗ್ಭ್ರಮೆಗೊಂಡು ನಾನು ಅವನನ್ನು ದಿಟ್ಟಿಸಿ ನೋಡಿದೆ, ನಂತರ ನಾನು ಏನು ಹೇಳಬಹುದಾಗಿತ್ತು, ನಾನು ತಿರುಗಿ ಅವನ ಮೇಲೆ ಏನಂತ ಕೂಗಬಹುದಿತ್ತೆಂದು ಯೋಚಿಸಲು ಪ್ರಾರಂಭಿಸಿದೆ.
ನಾನು ಅವಳಿಗೆ ಈ ಸಂಗತಿ ಹೇಳಿದಾಗ “ನೀನು ಮದುವೆ ಉಂಗುರ ಧರಿಸಿದ್ದಿದ್ದರೆ ಅವನು ನಿನ್ನ ಮೇಲೆ ಹಾಗೆ ಕೂಗುತ್ತಿರಲಿಲ್ಲ” ಎಂದು ಚಿಕ್ವಾಡೋ ಹೇಳಿದಳು, ತನ್ನ ಮೇಜಿನ ಮೇಲಿನ ಫೋನ್ನಲ್ಲಿ ರಿಡಯಲ್ ಗುಂಡಿಯನ್ನು ಒತ್ತುತ್ತ. ಕೆಫೆಟೇರಿಯಾದಲ್ಲಿ ಅವಳು ಸಹೋದ್ಯೋಗಿಗಳಿಗೆ ಅದರ ಬಗ್ಗೆ ಹೇಳಿಬಿಟ್ಟಳು. ಆಹ್, ಆಹ್, ದಡ್ಡ ! ಖಂಡಿತವಾಗಿಯೂ ಅವನು ಕೂಗುತ್ತಿದ್ದದ್ದು ತಾನು ಮಾಡಿದ್ದು ತಪ್ಪು ಎಂದು ತಿಳಿದಿದ್ದ- ಅದು ಲಾಗೋಸ್ ವರಸೆ. ಅವನು ತಾನು ದೊಡ್ಡ ಇಂಗ್ಲಿಷ್ ಮಾತನಾಡಬಲ್ಲವನೆಂದು ಭಾವಿಸುತ್ತಾನೆ. ಅದು ಸರಿ “ಉಪದ್ರವ” ಎಂಬ ಪದವನ್ನು ಅವನು ಎಲ್ಲಿ ಕಲಿತ? ಅವರು ಟ್ಯಾಕ್ಸಿ-ಡ್ರೈವರ್ಗಳ ಬಗ್ಗೆ ತಮ್ಮದೇ ಆದ ಕಥೆಗಳನ್ನು ಹೇಳುತ್ತಿದ್ದರು, ನಂತರ ಅವರ ಆಕ್ರೋಶ ಹೆಚ್ಚಾಯಿತು. ಅವರು ಮಾತನಾಡಲು ಪ್ರಾರಂಭಿಸಿದರು, ಧ್ವನಿಗಳ ಎತ್ತರ ಕಡಿಮೆಯಾಯಿತು, ಆದರೆ ಉತ್ಸುಕವಾಯಿತು: ರಿಡೆಂಪ್ಶನ್ ಚರ್ಚ್ನ ಹೊಸ ಪಾದ್ರಿ ಮಹಿಳೆಯರಿಗೆ ನೀಡುತ್ತಿರುವ ಫಲವತ್ತತೆಯ ಬಿಸ್ಕತ್ತು ಬಗ್ಗೆ ಮಾತು ಹೊರಳಿತ್ತು.
ಅವರಲ್ಲಿ ಒಬ್ಬಳು, ಇಬಾಡಾನ್ನಲ್ಲಿ ಸ್ನಾತಕೋತ್ತರ ಪದವಿ ಅರೆಕಾಲಿಕ ಕೆಲಸ ಮಾಡುತ್ತಿದ್ದ ಗುತ್ತಿಗೆ ಸಿಬ್ಬಂದಿ, ಹೇಳಿದಳು. “ನನ್ನ ತಂಗಿಗೆ ಇದು ಕೆಲಸ ಮಾಡಿತ್ತು. ಮೊದಲು ಅವಳು ಎರಡು ದಿನ ಒಣ ಉಪವಾಸ ಮಾಡಿದಳು, ನಂತರ ಬಿಸ್ಕತ್ತು ತಿನ್ನುವ ಮೊದಲು ಪಾದ್ರಿ ಅವಳಿಗೆ ವಿಶೇಷ ವಿಮೋಚನಾ ಪ್ರಾರ್ಥನೆ ಮಾಡಿದರು. ಅವಳು ಅದನ್ನು ನಿಖರವಾಗಿ ಮಧ್ಯರಾತ್ರಿಯಲ್ಲಿ ತಿನ್ನಬೇಕಾಗಿತ್ತು. ಮುಂದಿನ ತಿಂಗಳು, ಅದರ ಮುಂದಿನ ತಿಂಗಳು… ಹೀಗೆ. ಅವಳಿಗೆ ಮುಟ್ಟು ನಿಂತಿತು. ನಾನು ನಿಜ ಹೇಳುತ್ತಿದ್ದೇನೆ,”
“ಅದು ನಿಜವಾದ ಬಿಸ್ಕತ್ತಾ?” ಇನ್ನೊಬ್ಬಳು ಕೇಳಿದಳು.
“ಹೌದು. ಅವರು ಬಿಸ್ಕತ್ತುಗಳನ್ನು ತಯಾರಿಸುವ ಮೊದಲು ಪದಾರ್ಥಗಳಿಗೆ ಆಶೀರ್ವದಿಸುತ್ತಾರೆ. ದೇವರು ಏನು ಬೇಕಾದರೂ ಮಾಡಬಹುದು, ಶಾ. ಕರವಸ್ತ್ರವನ್ನು ಬಳಸುವ ಪಾದ್ರಿಯ ಬಗ್ಗೆ ನಾನು ಕೇಳಿದ್ದೇನೆ.”
ನಾನು ದೂರ ನೋಡಿದೆ. ನನ್ನ ಪ್ರೇಮಿ ಈ ಕಥೆಯನ್ನು ಏನು ಮಾಡುತ್ತಾನೆ ಎಂದು ಯೋಚಿಸಿದೆ. ಅವನು ಎರಡು ವಾರಗಳ ಕಾಲ ಅಮೆರಿಕದಲ್ಲಿರುವ ತನ್ನ ಕುಟುಂಬದ ಭೇಟಿಗೆ ತೆರಳಿದ್ದ. ಆ ಸಂಜೆ ಅವನು ನನಗೆ ಪಠ್ಯ ಸಂದೇಶ ಕಳುಹಿಸಿದ. “ನನ್ನ ಹೆಂಡತಿಯೊಂದಿಗೆ ಸಂಗೀತ ಕಚೇರಿಯಲ್ಲಿದ್ದೇನೆ. ಸುಮಧುರ ಸಂಗೀತ. ಹತ್ತು ನಿಮಿಷಗಳಲ್ಲಿ ನಿನಗೆ ಕರೆ ಮಾಡ್ತೇನೆ, ನಾನು ಫೋನ್ ಆನ್ ಮಾಡಿಟ್ಟುಬಿಡುವುದರಿಂದ ನೀನೂ ಆಲಿಸಬಹುದು. ಸಿವಿಥಾಡ್. ” ನಾನು ಅದನ್ನು ಎರಡು ಬಾರಿ ಓದಿದೆ. ನಂತರ, ನಾನು ಅವನ ಇತರ ಎಲ್ಲಾ ಪಠ್ಯ ಸಂದೇಶಗಳನ್ನು ಉಳಿಸಿದ್ದರೂ ಸಹ, ಅದನ್ನು ಮಾತ್ರ ಅಳಿಸಿದೆ, ಹಾಗೆ ಮಾಡುವುದರಿಂದ ಅದು ಎಂದಿಗೂ ಕಳುಹಿಸಲ್ಪಟ್ಟಿಲ್ಲ ಎಂದು ಅನಿಸುತ್ತದೆ. ಅವನು ಕರೆ ಮಾಡಿದಾಗ, ನಾನು ನನ್ನ ಫೋನ್ ರಿಂಗ್ ಆಗಲು ಬಿಟ್ಟೆ. ನಾನು ಅವನನ್ನು ಸಂಗೀತ ಕಚೇರಿಯಲ್ಲಿ ಕಲ್ಪಿಸಿಕೊಂಡೆ, ಅವನ ಹೆಂಡತಿ ಅವನ ಕೈಯನ್ನು ಹಿಡಿಯಲು ಹೋಗುತ್ತಾಳೆ ಎಂದು, ಏಕೆಂದರೆ ಅವನು ಅವಳ ಕೈ ಹಿಡಿಯಲು ಹೋಗುವವನು ಎಂಬ ಆಲೋಚನೆಯನ್ನು ನಾನು ಸಹಿಸಲಾರೆ. ಅವನು ಆ ಕ್ಷಣ ನನ್ನನ್ನು ನೋಡಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿತ್ತು, ನನ್ನದು ಅವನಿಗೆ ಅನನುಕೂಲ ವಾಸ್ತವ; ಬದಲಾಗಿ, ಅವನು ನೋಡಿದ್ದು ಎಲ್ಲಾ ತನ್ನನ್ನು ಮಾತ್ರ, ಒಂದು ರೋಚಕ ಕ್ರೀಡೆಯಲ್ಲಿ.
ಅವನು ಅಮೆರಿಕದಿಂದ ಮರಳಿದ, ನಾನು ಕಂಡಿರದ ಬೂಟುಗಳನ್ನು ಧರಿಸಿ, ಒಳ್ಳೆಯ ಕಂದು ಚರ್ಮದಿಂದ ಮಾಡಲ್ಪಟ್ಟ, ಅವನ ಇತರ ಬೂಟುಗಳಿಗಿಂತ ಹೆಚ್ಚು ಮೊನಚಾದ ಬೂಟುಗಳವು, ಬಹುತೇಕ ತಮಾಶೆಯಾಗಿ ಕಾಣುವಷ್ಟು ಮೊನಚು ಬೂಟುಗಳವು. ಅವನು ಉತ್ಸಾಹದಿಂದ ಇದ್ದ, ನಾವು ತಬ್ಬಿಕೊಂಡಾಗ ನನ್ನನ್ನೆತ್ತಿ ಗಿರಗಿರ ಸುತ್ತಿದ್ದ, ನನ್ನ ಕುತ್ತಿಗೆಯ ಹಿಂದಿನ ಸುರುಳಿಯಾಕಾರದ ಕೂದಲನ್ನು ಮುದ್ದಿಸುತ್ತಾ “ಎಷ್ಟು ಮೃದು” ಎಂದು ಹೇಳಿದ್ದ. ಅವನು ರಾತ್ರಿಯ ಊಟಕ್ಕೆ ಹೊರಗೆ ಹೋಗಲು ಬಯಸಿದ್ದ, ಏಕೆಂದರೆ ಅವನು ನನಗೆ ಅಚ್ಚರಿಯದೇನನ್ನೋ ಕೊಡುವವನಿದ್ದೇನೆ ಎಂದು ಹೇಳಿದ್ದ. ಅವನು ಬಚ್ಚಲಿಗೆ ಹೋದಾಗ ಅವನ ಫೋನ್ಗಳಲ್ಲಿ ಒಂದು ಸದ್ದುಮಾಡಿತು. ನಾನು ಅದನ್ನು ತೆಗೆದುಕೊಂಡು ಅವನ ಪಠ್ಯ ಸಂದೇಶಗಳನ್ನು ನೋಡಿದೆ. ಇದನ್ನು ನಾನು ಮೊದಲ ಸಲ ಮಾಡಿದ್ದು. ಈ ಹಿಂದೆ ನಾನೆಂದೂ ಯೋಚಿಸದ ಸಂಗತಿಯಾಗಿತ್ತದು, ಆದರೂ ನಾನು ಹಾಗೆ ಮಾಡಲು ಇದ್ದಕ್ಕಿದ್ದಂತೆ ಒತ್ತಾಯ ಮೂಡಿತ್ತು. ಅವನ “ಕಳುಹಿಸಿದ”ಪಟ್ಟಿಯಲ್ಲಿ ಸಂದೇಶದ ಮೇಲೆ ಸಂದೇಶ ಬೇಬಿಗೆ ಹೋಗಿತ್ತು. ಸುರಕ್ಷಿತವಾಗಿ ಸೇರಿದೆ ಎಂದು ತೀರಾ ಇತ್ತೀಚಿನ ಸಂದೇಶದಲ್ಲಿ ಹೇಳಿದ್ದ. ನನಗೆ ಅಚ್ಚರಿಯುಂಟುಮಾಡಿದ್ದು ಅವನು ಎಷ್ಟು ಬಾರಿ ತನ್ನ ಹೆಂಡತಿಗೆ ಸಂದೇಶ ಕಳುಹಿಸಿದ್ದಾನೆ ಎಂಬುದಲ್ಲ, ಆ ಪಠ್ಯಗಳು ಎಷ್ಟು ಚಿಕ್ಕದಾಗಿದ್ದವು ಎಂಬುದು- “ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದೆ”, “ನಿನ್ನನ್ನು ಮಿಸ್ ಮಾಡಿಕೊಳ್ಳುವೆ”, “ತುಂಬಾ ಹತ್ತಿರದಲ್ಲಿದೇನೆ” – ಆದರೆ ಅವೆಲ್ಲಕ್ಕೂ “ಕ್ವಿಥಾಡ್” ಎಂದು ಸಹಿ ಮಾಡಲಾಗಿತ್ತು. ನನ್ನ ಒಳಗೆ, ಏನೋ ಕುಸಿವಂತೆ ಜಗ್ಗಿದಂತೆ ಆಯಿತು. ಅವನು ಅವಳೊಂದಿಗೆ ಸಂಭಾಷಣೆಯನ್ನು ಕೋರಿಯೋಗ್ರಾಫ್ ಮಾಡಿದ್ದನೆ, “ಕುಮ್ಮಣ್ಣಿಯ ಕೋಳಿ” ಯ ಬಗ್ಗೆ ತಮಾಷೆ ಮಾಡಿದ್ದನೆ, ನಂತರ ಅದನ್ನು ಇಬ್ಬರಿಗೂ ಪ್ರೀತಿಯಾಗುವಂತೆ ಪರಿವರ್ತಿಸುವ ಮಾರ್ಗವನ್ನು ಕಂಡುಕೊಂಡಿದ್ದಾನೆಯೇ? ಅದನ್ನು ಮಾಡಲು ಬೇಕಾದ ಪ್ರಯತ್ನದ ಬಗ್ಗೆ ನಾನು ಯೋಚಿಸಿದೆ. ನಾನು ಫೋನ್ ಕೆಳಕ್ಕೆ ಇರಿಸಿ ಕನ್ನಡಿಯತ್ತ ದೃಷ್ಟಿ ಹಾಯಿಸಿದೆ, ನಿಧಾನವಾಗಿ ನಾನು ಸ್ಟ್ರಿಂಗ್ಲೆಸ್ ಮರಿಯೊನೆಟ್ ಗೊಂಬೆಯಾಗಿ ಪರಿವರ್ತನೆಗೊಳ್ಳುವುದನ್ನು ನೋಡಬೇಕೆಂದು ಅರ್ಧ ನಿರೀಕ್ಷಿಸಿದೆ.
ಕಾರಿನಲ್ಲಿ, “ಏನಾದರೂ ತೊಂದರೆಯೇ? ಹುಶಾರಾಗಿದೀಯ ತಾನೆ? ” ಎಂದು ಅವನು ಕೇಳಿದ.
“ನೀನು ನಿನ್ನ ಹೆಂಡತಿ ಕೇಳುತ್ತಿದ್ದ ಸಂಗೀತವನ್ನು ನಾನು ಕೂಡ ಕೇಳಲಿ ಅಂತ ನೀನು ನನಗೆ ಕರೆ ಮಾಡಿದ್ದು ನನಗೆ ನಂಬಲೇ ಸಾಧ್ಯವಿಲ್ಲ.”
“ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಂಡಿದ್ದರಿಂದ ಆ ಕಾಲ್ ಮಾಡಿದ್ದೆ” ಅವನು ಹೇಳಿದ. “ನಾನು ನಿನ್ನೊಂದಿಗೆ ಇರಲು ಬಯಸಿದ್ದೆ.”
“ಆದರೆ ನೀನು ನನ್ನೊಂದಿಗೆ ಇರಲಿಲ್ಲ.”
“ನೀನು ಕೆಟ್ಟ ಮೂಡಿನಲ್ಲಿದ್ದೀಯ.”
“ನೀನು ನೋಡುತ್ತಿಲ್ಲವೇ? ನೀನು ನನ್ನೊಂದಿಗೆ ಇರಲಿಲ್ಲ. ” ಅವನು ನನ್ನ ಕೈಯನ್ನು ತೆಗೆದುಕೊಂಡು, ತನ್ನ ಹೆಬ್ಬೆರಳನ್ನು ನನ್ನ ಅಂಗೈಗೆ ಉಜ್ಜಿದ. ನಾನು ಮಂದವಾಗಿ ಬೆಳಗಿದ ಬೀದಿಯನ್ನು ನೋಡಿದೆ. ನಾವು ನಮ್ಮ ಎಂದಿನ ಗುಪ್ತ ರೆಸ್ಟೋರೆಂಟ್ಗೆ ಹೋಗುತ್ತಿದ್ದೆವು, ಅಲ್ಲಿ ನಾನು ಮೆನುವಿನಲ್ಲಿರುವ ಎಲ್ಲವನ್ನೂ ನೂರು ಬಾರಿ ತಿಂದಿದ್ದೆ. ನನ್ನ ರಕ್ತ ಕುಡಿದು ಸೋಂಬೇರಿಯಾಗಿರುವ ಸೊಳ್ಳೆ ಕಾರಿನೊಳಗಿತ್ತು. ನಾನು ಅದನ್ನು ಹೊಡೆಯಲು ಪ್ರಯತ್ನಿಸುತ್ತ ನನ್ನನ್ನೇ ಹೊಡೆದುಕೊಂಡೆ .
“ಗುಡ್ ಈವ್ನಿಂಗ್, ಸಾ,” ನಾವು ಕುಳಿತಾಗ ಮಾಣಿ ಹೇಳಿದ. “ನಿಮಗೆ ಸ್ವಾಗತ, ಸಾ.”
“ಅವನು ಎಂದಿಗೂ ನನ್ನನ್ನು ಸ್ವಾಗತಿಸುವುದಿಲ್ಲ ಎಂದು ನೀನು ಗಮನಿಸಿದ್ದೀಯಾ?” ನಾನು ನನ್ನ ಪ್ರೇಮಿಯನ್ನು ಕೇಳಿದೆ.
“ಸರಿ. . . ” ಅವನು ಹೇಳಿ ಕನ್ನಡಕ ಸರಿಮಾಡಿಕೊಂಡ.
ಮಾಣಿ ಹಿಂತಿರುಗಿದ್ದ, ಸಂಭಾವಿತ ವರ್ತನೆಯ ಶಾಂತ ಮುಖದ ವ್ಯಕ್ತಿ, “ನೀವು ನನ್ನನ್ನು ಕೂಡ ಏಕೆ ಸ್ವಾಗತಿಸಬಾರದು” ಎಂದು ಕೇಳಲು ಅವನು ಕೆಂಪು ವೈನ್ ಬಾಟಲಿಯನ್ನು ತೆರೆಯುವವರೆಗೂ ಕಾಯುತ್ತಿದ್ದೆ.
ಮಾರ್ಗದರ್ಶಕನನ್ನು ಹುಡುಕುತ್ತಿದ್ದಂತೆ ಮಾಣಿ ನನ್ನ ಪ್ರೇಮಿಯತ್ತ ದೃಷ್ಟಿ ಹಾಯಿಸಿದ. ಇದು ನನ್ನನ್ನು ಇನ್ನಷ್ಟು ಕೆರಳಿಸಿತು. “ನಾನು ಕಾಣಿಸುತ್ತಿಲ್ಲವಾ? ನಾನು ನಿಮಗೆ ಪ್ರಶ್ನೆ ಕೇಳಿದವಳು. ಈ ಲಾಗೋಸ್ನಲ್ಲಿರುವ ಮಾಣಿಗಳು, ಗೇಟ್ಮೆನ್ ಗಳು, ಕಾರಿನ ಚಾಲಕರು – ನೀವೆಲ್ಲರೂ ನನ್ನನ್ನು ಸ್ವಾಗತಿಸಲು ಏಕೆ ನಿರಾಕರಿಸುತ್ತೀರಿ? ನಿಮಗೆ ನಾನು ಕಾಣುತ್ತಿಲ್ಲವೇ? ”
“ಹತ್ತು ನಿಮಿಷ ಬಿಟ್ಟು ಬನ್ನಿ” ಎಂದು ನನ್ನ ಪ್ರೇಮಿ ತನ್ನ ವಿನಯಶೀಲ, ಆಳವಾದ ಧ್ವನಿಯಲ್ಲಿ ಮಾಣಿಗೆ ಹೇಳಿದ. “ನೀನು ಶಾಂತಳಾಗಬೇಕು,” ಅವನು ನನಗೆ ಹೇಳಿದ. “ನಾವು ಇಲ್ಲಿಂದ ಹೋಗಬೇಕೆಂದು ಬಯಸುವೆಯಾ?”
“ಅವರು ನನ್ನನ್ನು ಏಕೆ ಸ್ವಾಗತಿಸುವುದಿಲ್ಲ?” ನಾನು ಕೇಳಿದೆ, ನನ್ನ ಅರ್ಧದಷ್ಟು ಲೋಟದ ವೈನ್ ಅನ್ನು ಒಮ್ಮೆಲೆ ಕುಡಿದುಬಿಟ್ಟೆ.
“ನಾನು ನಿನಗೆ ಆಶ್ಚರ್ಯದ ವಿಚಾರ ಹೇಳಲಿಕ್ಕಿದೆ, ಅಲ್ವಾ? ಕೇಳು ನಾನು ನಿನಗೆ ಹೊಸ ಕಾರು ಖರೀದಿಸಿದೆ. ”
ನಾನು ಅವನನ್ನು ಖಾಲಿಯಾಗಿ ನೋಡಿದೆ.
“ನೀನು ನನ್ನ ಮಾತು ಕೇಳಿದ್ದೀಯಾ?” ಅವನು ಕೇಳಿದ.
“ಕೇಳಿದೆ.” ನಾನು ಎದ್ದು ಅವನನ್ನು ತಬ್ಬಿಕೊಂಡು ಇತಿಹಾಸವು ಅವನನ್ನು ಒಬ್ಬ ಮಹಾನ್ ವ್ಯಕ್ತಿ ಎಂದು ನೆನಪಿಸಿಕೊಳ್ಳುತ್ತದೆ ಎಂದು ಹೇಳಬೇಕಿತ್ತು. ಹೂಂ ಹೊಸ ಕಾರು. ನಾನು ಇನ್ನಷ್ಟು ವೈನ್ ಕುಡಿದೆ.
“ಆರು ವರ್ಷಗಳ ಹಿಂದೆ ನಾನು ಲಾಗೋಸ್ಗೆ ಬಂದಾಗ ಆದ ನನ್ನ ಮೊದಲ ಬಸ್ ಪ್ರಯಾಣದ ಅನುಭವದ ಬಗ್ಗೆ ಹೇಳಿದ್ದೇನೆಯೇ?” ನಾನು ಕೇಳಿದೆ. “ನಾನು ಬಸ್ಸಿಗೆ ಹತ್ತಿದಾಗ, ಒಬ್ಬ ಹುಡುಗ ಆಘಾತದಿಂದ ಕಿರುಚುತ್ತಿದ್ದ. ಏಕೆಂದರೆ ಅಪರಿಚಿತನೊಬ್ಬ ಅವನ ಕಳೆದುಹೋದ ಪರ್ಸ್ ಕಂಡು ಅದನ್ನು ಅವನಿಗೆ ಹಿಂದಿರುಗಿಸಿದ್ದ. ಹುಡುಗ ನನ್ನಂತೆ ಕಾಣಿಸುತ್ತಿದ್ದ, ಹಚ್ಚಗೆ, ಉತ್ಸಾಹಿ ಉದ್ಯೋಗಾಕಾಂಕ್ಷಿ, ಅವನು ಕೂಡ ತನ್ನ ಊರಿನಿಂದ ಎಲ್ಲ ಎಚ್ಚರಿಕೆಗಳೊಂದಿಗೆ ಬಂದಿರಬೇಕು. ಅವರು ಹೇಳುವ ಎಲ್ಲಾ ವಿಷಯಗಳು ನಿನಗೆ ತಿಳಿದಿವೆ: ಬೀದಿ ಭಿಕ್ಷುಕರಿಗೆ ಹಣ ಕೊಡಬೇಡಿ, ಏಕೆಂದರೆ ಅವರು ಕುಂಟರಂತೆ ನಟಿಸುತ್ತಿರುತ್ತಾರೆ; ಟೊಮೆಟೊ ಪಿರಮಿಡ್ಗಳ ಮೂಲಕ ನೋಡಿ, ವ್ಯಾಪಾರಿಗಳು ಕೆಳಗೆ ಕೊಳೆತ ಹಣ್ಣು ಮರೆಮಾಡುತ್ತಾರೆ; ಕಾರುಗಳು ಕೆಟ್ಟ ಜನರಿಗೆ ಸಹಾಯ ಮಾಡಬೇಡಿ, ಏಕೆಂದರೆ ಅವರು ನಿಜವಾಗಿಯೂ ಶಸ್ತ್ರಸಜ್ಜಿತ ದರೋಡೆಕೋರರು. -ಹೀಗೆ. ಆದರೆ ಯಾರೋ ಅವನ ಪರ್ಸ್ ಕಂಡು ಅದನ್ನು ಅವನಿಗೆ ಹಿಂದಿರುಗಿಸಿದ್ದರು.”
ನನ್ನ ಪ್ರೇಮಿ ಗೊಂದಲದಿಂದ ನೋಡುತ್ತಿದ್ದ.
“ಅಪನಂಬಿಕೆಯ ಆಚರಣೆಗಳು,” ನಾನು ಹೇಳಿದೆ. “ಅಪನಂಬಿಕೆಯ ಆಚರಣೆಗಳ ಮೂಲಕ ನಾವು ಇಲ್ಲಿ ಪರಸ್ಪರರ ಜೊತೆ ಸಂಬಂಧ ಹೊಂದಿದ್ದೇವೆ. ನಾನು ಪೆಟ್ರೋಲ್ ಖರೀದಿಸುವಾಗ ಇಂಧನ ಗೇಜ್ ಅನ್ನು ಎಷ್ಟು ಎಚ್ಚರಿಕೆಯಿಂದ ನೋಡುತ್ತೇನೆ ಎಂದು ನಿಮಗೆ ತಿಳಿದಿದೆಯೇ? ಅಟೆಂಡೆಂಟ್ ಅದನ್ನು ಹಾಳು ಮಾಡಿಲ್ಲ ಎಂದು ಖಚಿತಪಡಿಸಿಕೊಳ್ಳಲು ಹಾಗೆ ಮಾಡುವುದು. ನಾವು ನಿಯಮಗಳನ್ನು ತಿಳಿದಿದ್ದೇವೆ; ಅವುಗಳನ್ನು ಅನುಸರಿಸುತ್ತೇವೆ; ನಾವು ಊಹಿಸಿರದ ವಿಷಯಗಳು ನಮ್ಮನ್ನು ಪ್ರಭಾವಿಸಲು ಎಂದಿಗೂ ಅವಕಾಶ ನೀಡುವುದಿಲ್ಲ. ನಾವು ಬೇಗನೆ ಬಾಗಿಲು ಮುಚ್ಚುತ್ತೇವೆ. ” ನಾನು ಸ್ವಲ್ಪ ಸಿಲ್ಲಿ ಎಂದು ಭಾವಿಸಿದೆ, ನನಗೆ ತಿಳಿದಿರುವ ವಿಷಯಗಳನ್ನು ಅವನು ಅರ್ಥಮಾಡಿಕೊಳ್ಳುವುದಿಲ್ಲ, ಅರ್ಥಮಾಡಿಕೊಳ್ಳಲು ಇಷ್ಟಪಡುವುದಿಲ್ಲ, ಸ್ವಲ್ಪ ಹೇಡಿತನದವನು, ನಾನು ಹೇಳುವ ರೀತಿಯಲ್ಲಿ ಹೇಳಲಾರದವನು. ಅವನು ತನ್ನ ಮೊಣಕೈ ಮೇಜಿನ ಮೇಲೆ ಊರಿ ನನ್ನತ್ತಲೇ ನೋಡುತ್ತಿದ್ದ, ಅವನಿಗೆ ಬೇಕಾಗಿರುವುದು ನನ್ನ ಉತ್ಸುಕತೆ, ನನ್ನ ಕೃತಜ್ಞತೆ, ನಾನು ಯಾವಾಗ ಹೊಸ ಕಾರನ್ನು ನೋಡಬಹುದು ಎಂಬ ನನ್ನ ಪ್ರಶ್ನೆಗಳು ಎಂದು ನನಗೆ ತಿಳಿದಿತ್ತು. ನಾನು ಅಳಲು ಪ್ರಾರಂಭಿಸಿದೆ, ಅವನು ಎದ್ದು ಬಂದು ಅವನ ಸೊಂಟದ ಎದುರು ನನ್ನನ್ನು ತಬ್ಬಿ ಹಿಡಿದ. ನನ್ನ ಮೂಗಲ್ಲಿ ನೀರು ಸುರಿಯುತ್ತಿತ್ತು. ನನ್ನ ಕರವಸ್ತ್ರದಿಂದ ನಾನು ಅದನ್ನು ತೊಡೆಯುತ್ತಿದ್ದಂತೆ ನನ್ನ ಕಣ್ಣುಗಳಲ್ಲಿ ನವೆ ಶುರುವಾಯಿತು . ನಾನು ಎಂದೂ ಸೊಗಸಾಗಿ ಅಳುವುದಿಲ್ಲ, ಅವನ ಹೆಂಡತಿ ಹಾಗೆ ಮಾಡಿದ್ದಾಳೆಂದು ನಾನು ಊಹಿಸಿದ್ದೇನೆ; ಕಣ್ಣೀರು ಅವಳ ಕೆನ್ನೆಗಳಲ್ಲಿ ಇಳಿದರೂ, ಅವಳ ಮೇಕ್ಅಪ್ ಹಾಗೇ ಉಳಿಯುವಂತೆ, ಮೂಗಲ್ಲಿ ನೀರು ಸುರಿಯದಂತೆ ಅಳಲು ಸಾಧ್ಯವಾಗುವಂತಹ ಮಹಿಳೆಯರಲ್ಲಿ ಅವಳು ಬಹುಶಃ ಒಬ್ಬಳು.
ನಿಂತು ಹೋಗಿದ್ದ ವಾಹನ ದಟ್ಟಣೆ ಸ್ವಲ್ಪ ಚಲಿಸಲು ಪ್ರಾರಂಭಿಸಿತ್ತು. ನನ್ನ ಪಕ್ಕದ ಕನ್ನಡಿಯಲ್ಲಿ ಓಕಾಡಾ ಒಂದನ್ನು ನಾನು ನೋಡಿದೆ, ತುಂಬಾ ವೇಗವಾಗಿ ಬರುತ್ತಿತ್ತು, ಸುತ್ತುತ್ತ, ಹಾಂಕಿಂಗ್ ಮಾಡುತ್ತ. ಅದು ನನ್ನ ಕಾರಿಗೆ ಅಪ್ಪಳಿಸುವ ಸದ್ದು ಕೇಳಲು ನಾನು ಕಾಯುತ್ತಿದ್ದೆ. ಆದರೆ ಅದು ಹಾಗಾಗಲಿಲ್ಲ. ಚಾಲಕ ಹೆಲ್ಮೆಟ್ ಧರಿಸಿದ್ದ, ಆದರೆ ಅವನ ಪ್ರಯಾಣಿಕಳು ಅದನ್ನು ತಲೆಯ ಮೇಲೆ ಇಟ್ಟುಕೊಂಡಿದ್ದಳು-ಒಳಗೆ ಇದ್ದ ವಾಸನೆಯ ಫೋಮ್ ಅವಳ ಕೂದಲನ್ನು ಹಾಳುಮಾಡುತ್ತದೆ ಎಂದಿರಬೇಕು – ಅದು ತಲೆಗೆ ಸಾಕಷ್ಟು ಹತ್ತಿರದಲ್ಲಿದೆ, ಇದರಿಂದಾಗಿ ಅವಳು ಮುಂದೆ ಟ್ರಾಫಿಕ್ ಅಧಿಕಾರಿಯನ್ನು ನೋಡಿದ ತಕ್ಷಣ ಅದನ್ನು ಜಾರಿಸಿಬಿಡಬಹುದು. ನನ್ನ ಪ್ರೇಮಿ ಒಮ್ಮೆ ಇದನ್ನು ಮಾರಕ ಕೆಲಸ ಎಂದು ಕರೆದಿದ್ದ. ಅವನು ತನ್ನ ಎಲ್ಲ ಸಿಬ್ಬಂದಿಗೆ ಉಚಿತ ಹೆಲ್ಮೆಟ್ಗಳನ್ನು ನೀಡಿದ್ದ, ಆದರೆ ಅವರಲ್ಲಿ ಹೆಚ್ಚಿನವರು ಒಕಾಡಾದಲ್ಲಿ ಓಡಾಡುದ್ದರು. ಹಿಂದಿನ ದಿನ, ಓಕಾಡಾ ಚಾಲಕ ಹೆಲ್ಮೆಟ್ ಇಲ್ಲದೆ ಹುಚ್ಚುವೇಗದಲ್ಲಿ ಬಂದು, ನಾನು ಒಗುನ್ಲಾನಾ ಡ್ರೈವ್ಗೆ ತಿರುಗುತ್ತಿದ್ದಂತೆ ಗುದ್ದಿದ್ದ; ತನ್ನ ಬೆರಳನ್ನು ತನ್ನ ನಾಲಗೆಗೆ ಅಂಟಿಸಿ ಅದನ್ನು ನನ್ನ ಕಾರಿನ ಬದಿಯಲ್ಲಿ ಆಗಿದ್ದ ಗೀರಿಗೆ ಒರೆಸಿದ್ದ. “ಆಂಟಿ, ಕ್ಷಮಿಸಿ ಓಹ್! ಕಾರಿಗೆ ಏನೂ ಆಗುವುದಿಲ್ಲ,” ಎಂದು ಹೇಳಿ ತನ್ನ ಪ್ರಯಾಣ ಮುಂದುವರಿಸಿದ್ದ.
ನಾನು ನಕ್ಕೆ. ನಾನು ಊಟದ ಸಮಯದಲ್ಲಿ ಕೆಲಸವನ್ನು ಬಿಟ್ಟು ನನ್ನ ಪ್ರೇಮಿಯ ಮನೆಗೆ ಕಾರು ಓಡಿಸಿದ ನಂತರದ ಮೂರು ವಾರಗಳಲ್ಲಿ ನಾನು ನಗಲೇ ಇಲ್ಲ. ನಾನು ನನ್ನ ಬಟ್ಟೆ, ಪುಸ್ತಕಗಳು ಮತ್ತು ಟಾಯ್ಲೆಟರಿ ವಸ್ತುಗಳನ್ನೆಲ್ಲಾ ಪ್ಯಾಕ್ ಮಾಡಿಕೊಂಡು ಮತ್ತೆ ನನ್ನ ಫ್ಲ್ಯಾಟ್ಗೆ ಹೋಗಿದ್ದೆ, ಏನಕ್ಕೋ ಆಹಾರವಾದಂತೆ. ಲಾಗೋಸ್ ಎಷ್ಟು ದರಿದ್ರ ಮತ್ತು ವಿರೂಪಿ ಎಂದರೆ ಕೆಟ್ಟಕೆಟ್ಟದಾಗಿ ಯೋಜನೆಯಿಲ್ಲದೆ ಮನೆಗಳು ನಾಯಿಕೊಡೆಗಳಂತೆ ಏಳುತ್ತಿದ್ದವು,
ಆ ಮೂರು ವಾರಗಳಲ್ಲಿ, ನಾನು ಕೆಲಸದಲ್ಲಿ ಸ್ವಲ್ಪವೇ ಮಾತಾಡಿದ್ದೆ. ನಮ್ಮ ಕಚೇರಿ ಇದ್ದಕ್ಕಿದ್ದಂತೆ ತುಂಬಾ ಅಸುಖದ ತಾಣವಾವಾಗಿತ್ತು, ಹವಾನಿಯಂತ್ರಣ ಯಾವಾಗಲೂ ಥಂಡಿಯಾಗಿತ್ತು. ಹಿಸ್ ರಾಯಲ್ ಹೈನೆಸ್, ಲಗೂನ್ ಬಳಿಯ ಪಟ್ಟಣದ ಓಬಾ ಹೆಚ್ಚಿನ ಹಣವನ್ನು ಕೇಳುತ್ತಿದ್ದರು; ಬೋರ್ಹೋಲ್ ಕಪ್ಪು ನೀರನ್ನು ಚೆಲ್ಲುತ್ತಿದೆ ಎಂದು ಅವರ ಪಟ್ಟಣದ ಮಂಡಳಿ ಪತ್ರವೊಂದನ್ನು ಬರೆದಿತ್ತು. ನನ್ನ ಬಾಸ್ ವಿಪರೀತ ಸಭೆಗಳನ್ನು ಕರೆಯುತ್ತಿದ್ದ.
“ನಾವು ಧನ್ಯವಾದಗಳನ್ನು ನೀಡೋಣ, ಥ್ಯಾಂಕ್ಸ್ ಗಿವಿಂಗ್” ಎಂದು ಅವನು ಸಭೆಯೊಂದರಲ್ಲಿ ಹೇಳಿದ.
“ನಾವು ಕೆಲಸದ ಸ್ಥಳದಲ್ಲಿ ಏಕೆ ಪ್ರಾರ್ಥಿಸಬೇಕು?” ನಾನು ಕೇಳಿದೆ. “ನಾವೆಲ್ಲರೂ ಕ್ರಿಶ್ಚಿಯನ್ನರು ಎಂದು ನೀವು ತಾನೆ ಯಾಕೆ ಭಾವಿಸಬೇಕು?”
ಅವನು ಬೆಚ್ಚಿಬಿದ್ದಂತೆ ಕಂಡ. ನಾನು ಎಂದೂ ಪ್ರಾರ್ಥನೆಗಳಲ್ಲಿ ಸೇರಿಕೊಂಡಿಲ್ಲ, “ಆಮೆನ್” ಎಂದು ಎಂದಿಗೂ ಹೇಳಲಿಲ್ಲ ಎಂದು ಅವನಿಗೆ ತಿಳಿದಿತ್ತು, ಆದರೆ ನಾನು ಅದರ ಬಗ್ಗೆ ಎಂದಿಗೂ ಮಾತನಾಡಿರಲಿಲ್ಲ.
“ಭಗವಂತನಿಗೆ ಧನ್ಯವಾದ ಹೇಳುವುದರಲ್ಲಿ ಪಾಲ್ಗೊಳ್ಳುವುದು ಬಲವಂತದಿಂದ ಅಲ್ಲ” ಎಂದು ಅವನು ಹೇಳಿದ, ನಂತರ ಅದೇ ಉಸಿರಿನಲ್ಲಿ ಮುಂದುವರಿದ” ಯೇಸುವಿನ ಹೆಸರಿನಲ್ಲಿ!”
“ಆಮೆನ್!” ಇತರರು ಕೋರಸ್ ಮಾಡಿದ್ದರು.
ನಾನು ಸಭೆಯ ಕೊಠಡಿಯಿಂದ ಹೊರಡಲು ತಿರುಗಿದೆ.
“ಹೋಗಬೇಡ,” ನನ್ನ ಸಹೋದ್ಯೋಗಿ ಜೆರಾಲ್ಡ್ ಪಿಸುಗುಟ್ಟಿದ. “ಅಕಿನ್ ತನ್ನ ಹುಟ್ಟುಹಬ್ಬದ ಕೇಕ್ ತಂದಿದ್ದಾನೆ.”
ಪ್ರಾರ್ಥನೆ ಮುಗಿಯುವವರೆಗೂ ನಾನು ಸಭೆಯ ಕೊಠಡಿಯ ಹೊರಗೆ ನಿಂತಿದ್ದೆ, ನಂತರ ನಾವು ಅಕಿನ್ಗೆ “ಜನ್ಮದಿನದ ಶುಭಾಶಯಗಳು” ಹಾಡಿದೆವು. ಅವನ ಕೇಕ್ ನಾನು ಇಷ್ಟಪಟ್ಟ ಆಡಂಬರವಿಲ್ಲದ ರೀತಿಯದು. ಬಹುಶಃ ಸ್ವೀಟ್ ಸೆನ್ಸೇಶನ್ನಿಂದ ತಂದಿರಬೇಕು, ಕೆಲವೊಮ್ಮೆ ಅದರಲ್ಲಿ ಹೆಕ್ಕಲು ಮರೆತುಹೋದ ಮೊಟ್ಟೆಯ ಚಿಪ್ಪುಗಳು ಇರುತ್ತವೆ. ನಮ್ಮ ಬಾಸ್ ನನಗೆ ಅಥವಾ ಚಿಕ್ವಾಡೊಗೆ ಎಲ್ಲರಿಗೂ ಕೇಕ್ ನೀಡಲು ಹೇಳಿದ.
“ನಾವು ಯಾವಾಗಲೂ ಕೇಕ್ ಏಕೆ ನೀಡಬೇಕು?” ನಾನು ಕೇಳಿದೆ. “ಪ್ರತಿ ಬಾರಿ ಯಾರಾದರೂ ಕೇಕ್ ತರುವಾಗ, ಅದನ್ನು ಚಿಕ್ವಾಡೋ ಅಥವಾ ನಾನು ಅದನ್ನು ನೀಡುತ್ತೇವೆ. ನೀವು, ಜೆರಾಲ್ಡ್, ಕೇಕ್ ಹಂಚಿ. ಅಥವಾ ನೀವು, ಎಮೆಕಾ, ನೀವು ಹೆಚ್ಚು ಕಿರಿಯರಾಗಿರುವುದರಿಂದ. ”
ಅವರು ನನ್ನನ್ನೇ ದಿಟ್ಟಿಸುತ್ತಿದ್ದರು. ಚಿಕ್ವಾಡೋ ಅವಸರದಿಂದ ಎದ್ದು ಕೇಕ್ ತುಂಡು ಮಾಡಲು ಪ್ರಾರಂಭಿಸಿದಳು. “ದಯವಿಟ್ಟು, ಅವಳ ಮಾತನ್ನು ಮನಸ್ಸಿಗೆ ತೆಗೆದುಕೊಳ್ಳಬೇಡಿ” ಎಂದು ಅವಳು ಎಲ್ಲರಿಗೂ ಹೇಳಿದಳು, ಆದರೆ ಅವಳ ಕಣ್ಣುಗಳು ನಮ್ಮ ಬಾಸ್ ಮೇಲೆ ಇದ್ದವು. “ಅವಳು ಈ ರೀತಿ ವರ್ತಿಸುತ್ತಿದ್ದಾಳೆ, ಏಕೆಂದರೆ ಅವಳು ಇಂದು ತನ್ನ ಹುಚ್ಚಿನ ಔಷಧಿಯನ್ನು ತೆಗೆದುಕೊಳ್ಳಲಿಲ್ಲ.”
ನಂತರ, ಅವಳು ನನಗೆ, “ನೀನು ಯಾಕೆ ಹೇಗೆಹೇಗೋ ವರ್ತಿಸುತ್ತಿದ್ದೀಯ? ಸಮಸ್ಯೆ ಏನು? ನಿನ್ನ ಮನುಷ್ಯನೊಂದಿಗೆ ಏನಾದರೂ ಬೇಡವಾದದ್ದು ಸಂಭವಿಸಿದೆಯೇ? ”
ಒಂದು ಕ್ಷಣ, ನಾನು ಅವಳಿಗೆ ಹೇಗೆ ಅನಿಸುತ್ತಿದೆ ಎಂದು ಹೇಳಲು ಬಯಸಿದೆ: ನನ್ನ ಚರ್ಮದ ತುಂಡುಗಳನ್ನ ಚೂರುಚೂರೇ ಕಿತ್ತು, ಸೀಳಿ ಸಿಪ್ಪೆ ಸುಲಿದಂತೆ, ಕಚ್ಚಾ ಮಾಂಸದ ತೇಪೆಗಳನ್ನು ಬಿಟ್ಟು … ತುಂಬಾ… ಅಸಹನೀಯ ನೋವಿನಿಂದ ನನಗೆ ಏನು ಮಾಡಬೇಕೆಂದು ತಿಳಿದಿರಲಿಲ್ಲ. ನನ್ನ ಫೋನ್ ನತ್ತ ನಾನು ಅದೆಷ್ಟು ಬಾರಿ ನೋಡುತ್ತಿದ್ದೆನೆಂದು ಅವಳಿಗೆ ಹೇಳಲು ಬಯಸಿದ್ದೆ, ಅವನು ಎರಡು ಬಲಹೀನ ಪಠ್ಯಸಂದೇಶಗಳನ್ನು ಕಳುಹಿಸಿದ್ದ ಸಹ, ನೀನು ಯಾಕೆ ಹೊರಟು ಹೋಗಿದ್ದೀಯ ಎಂದು ಅರ್ಥವಾಗುತ್ತಿಲ್ಲ ಎಂದು ಮತ್ತು ನಂತರ ಮತ್ತೇನೂ ಇಲ್ಲ ಎಂದು; ಕನ್ನಡಕವನ್ನು ಸ್ವಚ್ಛಗೊಳಿಸಲು ಅವನು ಬಳಸಿದ ತೇವದ ಟಿಶ್ಯೂಗಳ ಪರಿಮಳವನ್ನು ನಾನು ಸ್ಪಷ್ಟವಾಗಿ, ಅತ್ಯಂತ ಸ್ಪಷ್ಟವಾಗಿ ಹೇಗೆ ನೆನಪಿನಲ್ಲಿಟ್ಟುಕೊಂಡಿದ್ದೇನೆ. ನಾನು ಅವಳಿಗೆ ಹೇಳಲಿಲ್ಲ, ಏಕೆಂದರೆ “ನೀನು ಬೆಂಕಿಯನ್ನು ನೋಡಿದರೆ ನಿನ್ನ ಕೈ ಬೆಂಕಿಯಲ್ಲಿ ಇಟ್ಟರೆ, ಬೆಂಕಿ ನಿನ್ನ ಸುಡುತ್ತದೆ” ಎಂಬಂತಹ ಸಣ್ಣ ಬುದ್ಧಿವಂತಿಕೆಯ ಮಾತುಗಳಲ್ಲಿ ಒಂದನ್ನು ಅವಳು ನನಗೆ ತಲುಪಿಸುತ್ತಾಳೆ ಎಂದು ನನಗೆ ಖಾತ್ರಿಯಿತ್ತು. ಇನ್ನೂ, ಅವಳ ಅಭಿವ್ಯಕ್ತಿಯಲ್ಲಿ ಒಂದು ಕೋಮಲತೆ ಇತ್ತು, ಸಹಾನುಭೂತಿಯಂತೆ, ನಾನು ನನ್ನ ಕಂಪ್ಯೂಟರ್ ಪರದೆಯಿಂದ ಮೇಲಕ್ಕೆ ನೋಡಿದಾಗ ಅವಳು ನನ್ನನ್ನು ನೋಡುತ್ತಿದ್ದಳು; ಅವಳ ಕೈ ಅವಳ ಹಣೆಹಣೆ ಚಚ್ಚಿಕೊಳ್ಳುತ್ತಿತ್ತು ಅವಳ ಜಡೆಯ ಹೆಣಿಗೆ ಹೊಸ ಶೈಲಿಯದಾಗಿದ್ದು, ತುಂಬಾ ಉದ್ದವಾಗಿತ್ತು ಕೆಂಪು ಬಣ್ಣದ ಹೈಲೈಟುಗಳು ಅಗ್ಗದ ಪ್ಲಾಸ್ಟಿಕ್ ಗೊಂಬೆಗಳ ಕೂದಲನ್ನು ಮನಸ್ಸಿಗೆ ತಂದವು. ಆದರೂ ಅದರ ಬಗ್ಗೆ ಪ್ರಾಮಾಣಿಕತೆ ಇತ್ತು; ಜೀಪಿನಲ್ಲಿದ್ದ ಮಹಿಳೆ ತನ್ನ ಬ್ರೆಜಿಲಿಯನ್ ಕೂದಲನ್ನು ತನ್ನದೆಂಬಂತೆ ಹೊಂದಿರಲಿಲ್ಲ, ಆದರೆ ಚಿಕ್ವಾಡೋ ಅದನ್ನು ಹೊಂದಿದ್ದಳು.
ಸೋಪುನೀರು ತುಂಬಿದ ಸಿಂಪಡಿಸುವ ನೀರಿನ ಬಾಟಲಿ ಮತ್ತು ಚಿಂದಿಯ ಶಸ್ತ್ರ ಸಜ್ಜಿತ ಚಿಕ್ಕ ಹುಡುಗ ನನ್ನ ಕಾರಿನ ಹತ್ತಿರ ಬಂದ. ಅವನನ್ನು ನಿರುತ್ಸಾಹಗೊಳಿಸಲು ನಾನು ನೀರುಗ್ಗಿ ಒರೆಸುವ ನನ್ನ ಕಾರಿನ ವೈಪರ್ಗಳನ್ನು ಆನ್ ಮಾಡಿದೆ, ಆದರೂ ಅವನು ನನ್ನ ವಿಂಡ್ಸ್ಕ್ರೀನ್ ಗೆ ನೀರು ಸಿಂಪಡಿಸಿದ. ನಾನು ವೈಪರ್ ವೇಗವನ್ನು ಹೆಚ್ಚಿಸಿದೆ. ಹುಡುಗ ನನ್ನತ್ತ ಕಣ್ಣು ಹಾಯಿಸಿ ನನ್ನ ಹಿಂದಿರುವ ಕಾರಿಗೆ ತೆರಳಿದ. ಕಾರಿಳಿದು ಅವನಿಗೆ ಕಪಾಳಮೋಕ್ಷ ಮಾಡುವ ಭಾವ ಹಠಾತ್ತನೆ ನನ್ನನ್ನು ಆವರಿಸಿತ್ತು. ಒಂದು ಕ್ಷಣ ನನ್ನ ದೃಷ್ಟಿ ಮಸುಕಾಗಿತ್ತು. ಇದು ನಿಜವಾಗಿಯೂ ನಾನು ಕಪಾಳಮೋಕ್ಷ ಮಾಡಲು ಬಯಸಿದ ಮಹಿಳೆ. ನಾನು ಅವಳ ಜೀಪಿನ ಕಡೆಗೆ ತಿರುಗಿದೆ ಮತ್ತು ಅವಳು ದೂರ ನೋಡಿದ್ದರಿಂದ ನಾನು ನನ್ನ ಹಾರ್ನ್ ಒತ್ತಿದೆ. ನಾನು ನನ್ನ ಕಿಟಕಿಯಿಂದ ಹೊರಗೆ ತಲೆ ಹಾಕಿದ್ದೆ.
“ನಿಮ್ಮ ಸಮಸ್ಯೆ ಏನು? ನೀವು ನನ್ನನ್ನು ಏಕೆ ನೋಡುತ್ತಿದ್ದೀರಿ? ನಾನು ನಿಮಗೆ ಏನಾದರೂ ಬಾಕಿ ಕೊಡಬೇಕೇ? ” ನಾನು ಕೂಗಿದೆ. ದಟ್ಟಣೆ ಮತ್ತೆ ಚಲಿಸಲು ಪ್ರಾರಂಭಿಸಿತು. ಅವಳು ಕೂಡ ಅವಳ ಕಿಟಕಿಯ ಗಾಜನ್ನು ಇಳಿಸುತ್ತಾಳೆಂದು ನಾನು ಭಾವಿಸಿದೆ. ಅವಳು ಕಿಟಕಿ ಕಡೆಗೆ ವಾಲುವಂತೆ ಮಾಡಿ, ನಂತರ ನೋಟ ತಿರುಗಿಸಿದಳು, ಅವಳ ಮುಖದ ಮೇಲೆ ಸಣ್ಣದೊಂದು ನಗು, ಅವಳ ತಲೆಯು ಎತ್ತರವಾಗಿತ್ತು, ನಾನು ಅವಳ ಜೀಪ್ ವೇಗವನ್ನು ಹೆಚ್ಚಿಸಿಕೊಂಡು ಸೇತುವೆಯ ಕಡೆಗೆ ಹೋಗುವುದನ್ನು ನೋಡಿದೆ.
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ