- ಸಾಜಿದಾ ಅಲಿಯಾಸ್ ಸಲ್ಮಾ - ಅಕ್ಟೋಬರ್ 29, 2024
- ರೇಟಿಂಗ್ ಗಳ ಧೋರಣೆ - ಅಕ್ಟೋಬರ್ 20, 2024
- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
ಹೊಸ ತಲೆಮಾರಿನ ವಿವಾಹಗಳು ವೈವಿಧ್ಯತೆ ಸಂತರಿಸಿಕೊಂಡಿರುವುದರಿಂದ ಈಗ ನಮ್ಮ ಸಮಾಜದಲ್ಲಿನ ವಿವಾಹ ವ್ಯವಸ್ಥೆಯ ಬಗ್ಗೆ ಒಂಚೂರು ಚರ್ಚೆ ಮಾಡುವ ಎಂತಾಗಿದೆ. ನಮಗೆ ಕಾಣುವ ಹಾಗೆ ವಿವಾಹಗಳಲ್ಲಿ ಎರಡು ರೀತಿಯ ಪ್ರಭಾಗಗಳು ಕಾಣುತ್ತವೆ. ಗಂಡು ಹೆಣ್ಣು ಪ್ರೀತಿಸಿ ತಾವೇ ನಿರ್ಣಯಿಸಿಕೊಂಡು ಮದುವೆ ಯಾಗುವುದು (ಪ್ರೇಮ ವಿವಾಹ) ಮತ್ತೊಂದು ಸಾಂಪ್ರದಾಯಿಕವಾಗಿ ನಡೆದು ಬಂದ ರೀತಿಯಲ್ಲಿ ಮನೆಗೆ ದೊಡ್ಡವರು ಹೆಣ್ಣು ನೋಡಿ ನಿಶ್ಚಯಿಸಿ ಮದುವೆ ಮಾಡುವುದು ( ಅರೇಂಜ್ಡ್ ಮ್ಯಾರೇಜ್) ನಮ್ಮ ವಿವಾಹ ಪದ್ಧತಿಗಳಲ್ಲಿ ಗಾಂಧರ್ವ ವಿವಾಹ, ರಾಕ್ಷಸ ವಿವಾಹ ಅಂತ ಮತ್ತೆ ಸುಮಾರು ತರಗಳಿವೆ. ಆದರೆ ನಾವು ಪ್ರಸಕ್ತ ಸಮಾಜದಲ್ಲಿ ನಡೆಯುತ್ತಿರುವ ರೀತಿ ನೀತಿಗಳಿಗೆ ಸಂಬಂಧಪಟ್ಟಂತೆ ನಡೆಯುವ ವಿವಾಹಗಳ ಬಗ್ಗೆ ಮಾತ್ರ ಮಾತಾಡೋಣ.
ಸದ್ಯದ ದಿನಗಳಲ್ಲಿ ಬಳಕೆಯಲ್ಲಿರುವ ಈ ’ಪ್ರೇ’ ಎನ್ನುವ ಪದದ ಅರ್ಥ ನಿಘಂಟುವಿನ ಪ್ರಕಾರ “ಪ್ರೀತಿ, ಸ್ನೇಹ, ಅನುರಾಗ, ಮಮತೆ” ಅಂತೆಲ್ಲ ಇದೆ. ಸಂಸಾರದಲ್ಲಿಯ ಸದಸ್ಯರ ನಡುವೆ ಪ್ರೀತಿ, ಪ್ರೇಮ ಇರುತ್ತವೆ. ಆದರೆ ಅಲ್ಲಿಯ ಪ್ರೇಮಕ್ಕೂ, ವಿವಾಹ ಸಂಬಂಧೀ ಪ್ರೇಮಕ್ಕೂ ವ್ಯತ್ಯಾಸವಿದೆ. ವಿವಾಹ ಸಂಬಂಧದ ಪ್ರೇಮ ಎಂದರೆ ಗಂಡು ಹೆಣ್ಣಿನ ನಡುವಣ ಪ್ರೀತಿ ಮಾತ್ರ ಅಂತ ಸಿನಿಮಾಗಳಲ್ಲಿ ಬಳಸುವ ಅರ್ಥದಿಂದಲೇ ಹುಟ್ಟಿ ಬಂದಿದೆ. ಇನ್ನೂ ಹೇಳ ಬೇಕೆಂದರೆ ಬೇರೇ ಜಾತಿ, ಬೇರೇ ಪಂಗಡ, ಬೇರೇ ಧರ್ಮದ ಹುಡುಗ, ಹುಡುಗಿಯರ ನಡುವಿನ ಪ್ರೀತಿಗೆ ಮಾತ್ರವೇ ಪ್ರೇಮ ಎನ್ನುವ ಹಾಗೆ ಬಳಕೆ ಯಾಗುತ್ತಿದೆ. ಪ್ರೇಮ ವಿವಾಹ ಎಂದರೆ ಇದೇ ರೀತಿಯ ಮದುವೆ. ಒಂದೇ ಜಾತಿಯ ಹುಡುಗ ಹುಡುಗಿ ಇಷ್ಟಪಟ್ಟು ಮದುವೆಯಾದರೇ ಅದು ಪ್ರೇಮ ವಿವಾಹದ ಕೆಳಗೆ ಬರುತ್ತದಾ ? ಇದಕ್ಕೆ ಉತ್ತರವಿಲ್ಲ. ಮತ್ತೊಂದು ರೀತಿ ಮದುವೆಯ ಬಗ್ಗೆ ಜಾಸ್ತಿ ಹೇಳಬೇಕಿಲ್ಲ. ದೊಡ್ಡವರ ಅನುಭವಕ್ಕೆ ಮಣೆ ಹಾಕಿ, ಅವರು ನಮ್ಮ ಒಳಿತನ್ನೇ ನೋಡುತ್ತಾರೆ ಅಂತ ನಂಬಿ, ಅವರು ನಿರ್ಣಹಿಸಿದ ಹೆಣ್ಣು/ಗಂಡನ್ನು ತಾವೂ ನೋಡಿ, ಒಪ್ಪಿ ಮದುವೆಯಾಗುವುದು..
ಲವ್ ಮ್ಯಾರೇಜ್ ( ಈಗಿನ ಪ್ರೇಮ ವಿವಾಹಗಳ ತುಂಬಾ ಕೇಳಿ ಬರುವ ಹೆಸರು) ಮಾಡಿಕೊಳ್ಳ ಬಯಸುವ ಜೋಡಿಯ ವಾದನೆ “ ದೊಡ್ಡವರು ನೋಡಿ ನಿಶ್ಚಯಿಸಿದ ಮದುವೆಗಳಲ್ಲಿ ಪ್ರೀತಿ ಎಲ್ಲಿರುತ್ತದೆ ?” ಅಂತ. ಯಾಕಿರಬಾರದು ಅಂತ ಅವರಿಗೆ ಅನಿಸುವುದಿಲ್ಲ. ಆ ವಯಸ್ಸೇ ಹಾಗೆ. ದುಡುಕುತನ ತುಂಬಿದ ಪ್ರಾಯ. ತಾವು ಬಲೆಗೆ ಬಿದ್ದ ಆಕರ್ಷಣೆಗೆ ಒಂದು ವಾದನೆಯನ್ನು ಹುಟ್ಟಿಸಿಕೊಂಡು ಅದಕ್ಕೇ ಜೋತು ಬೀಳುವ ಕ್ರಮ. ಆದರೆ ಅದೊಂದೇ ವಾಸ್ತವವಲ್ಲ.
ಕೆಲ ಹುಡುಗ/ಹುಡುಗಿಯರು ತಮ್ಮ ಶಾಲೆ ಕಾಲೇಜುಗಳಲ್ಲಿ ತಾವು ರುಚಿ ನೋಡಿದ ಮಧುರ ಗಳಿಗೆಗಳನ್ನು ಬರೀ ಮಕ್ಕಳ ಆಟಿಕೆಯ ಆಕರ್ಷಣೆ ಎಂದು ಮರೆತು ತಮ್ಮ ತಂದೆ ತಾಯಿ ನೋಡಿದ ಮದುವೆಗಳಿಗೆ ಒಪ್ಪುತ್ತಾರೆ. ಮತ್ತೆ ಕೆಲವರು ಅತ್ತ ಪ್ರೀತಿಸಿದವಳನ್ನು ಮದುವೆಯಾಗಲಾರದೇ ಭಗ್ನ ಪ್ರೇಮಿಗಳಾಗುತ್ತಾರೆ. ಅಥವಾ ದೊಡ್ಡವರು ಹೇಳಿದ ಮದುವೆಗೆ ಒಪ್ಪಿ ಬೇರೇ ಯಾರನ್ನೋ ಮದುವೆಯಾಗಿ ಆ ಬಂಧದಲ್ಲಿಯ ಆತ್ಮೀಯ ಭಾವನೆಗೆ ದೂರವಾಗುತ್ತಾರೆ. ಎರಡೂ ಪದ್ಧತಿಗಳಲ್ಲೂ ಒಳಿತುಗಳಿವೆ, ಕೆಡಕುಗಳಿವೆ. ಯಾವುದನ್ನೂ ನಾವು ಇದೇ ಸರಿಯೆಂದು ಹೇಳಲಾಗುವುದಿಲ್ಲ. ಯಾವುದನ್ನೂ ಬೇಡದ್ದೆಂದು ತೆಗೆದು ಹಾಕಲಾಗುವುದಿಲ್ಲ.
ಪ್ರೇಮ ವಿವಾಹ ( ಲವ್ ಮ್ಯಾರೇಜ್ ) ಗಳು ಮಾತ್ರ ಇಷ್ಟು ದಶಕಗಳು ಕಳೆದರೂ ತಂದೆ ತಾಯಿಗಳ ಮನಸ್ಸಿಗೆ ಬೆಂಕಿ ಹಚ್ಚುವ ಮದುವೆಗಳೇ. ತಾವು ಬೆಳೆಸಿದ ಮಕ್ಕಳು ತಮ್ಮ ಕಣ್ಣೆದುರಲ್ಲೇ ತಮ್ಮನ್ನು ಎದುರಿಸಿ ತಮ್ಮ ಅಭಿಪ್ರಾಯಕ್ಕೆ ಮನ್ನಣೆ ಕೊಡದೇ ತಮಗೆ ತಿಳಿದ ಹಾಗೆ ಮಾಡುವುದು ಯಾವ ತಂದೆ ತಾಯಿಗೂ ರುಚಿಸುವುದಿಲ್ಲ. ಮತ್ತೆ ಅವರ ಅಂತಸ್ತು, ಸಮಾಜದಲ್ಲಿ ಅವರಿಗಿರುವ ಮಾನ ಮರ್ಯಾದೆ ಮತ್ತೆ ಒಮ್ಮೊಮ್ಮೆ ಬರೀ ಅಹಂಕಾರ. ಇವೆಲ್ಲ ಅಡ್ಡ ಬರುತ್ತವೆ. ಕೆಲ ಸೌಮ್ಯ ಸ್ವಭಾವದ ತಂದೆ ತಾಯಿಯರು ತಮ್ಮ ಮಕ್ಕಳ ಆಯ್ಕೆ, ಭವಿಷ್ಯ ನೋಡಿ ಒಪ್ಪುತ್ತಾರೆ. ಅವರ ನಿಲುವು ಇಷ್ಟೇ “ ಮದುವೆಯಾಗಿ ಒಟ್ಟಿಗೆ ಜೀವನ ಮಾಡುವವರು ಅವರಿಬ್ಬರೂ. ನಾವು ಇಂದು ಇದ್ದೇವೆ, ನಾಳೆ ಇಲ್ಲ. ಅವರ ಆಯ್ಕೆಗೆ ನಾವೇಕೆ ಅಡ್ಡಿ ಹೇಳುವುದು “ಅಂತ. ಈ ತರದ ನಿಲುವಿನಲ್ಲಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಅವರಿಗಿರುವ ದೂರದೃಷ್ಟಿ ಮತ್ತು ಅವರ ವೈರಾಗ್ಯ ಕಾಣುತ್ತದೆ. ಆದರೆ ಇಲ್ಲಿ ಬಹುಭಾಗ ನಮಗೆ ಕಾಣ ಸಿಗುವುದು ಮಧ್ಯ ತರಗತಿಯ ಕುಟುಂಬಗಳೇ. ಇವರಿಗಿಂತ ಒಂದು ಮೆಟ್ಟಿಲು ಮೇಲಿರುವ ವರ್ಗದವರು ಆಷ್ಟು ಬೇಗ ಪ್ರೇಮ ವಿವಾಹಕ್ಕೆ ಒಪ್ಪುವುದಿಲ್ಲ. ತಮಗಿರುವ ಎಲ್ಲ ರೀತಿಯ ದಾರಿಗಳಿಂದ ಮಕ್ಕಳನ್ನು ಒಪ್ಪಿಸುವ ಪ್ರಯತ್ನ ಮಾಡುತ್ತಾರೆ. ಒಪ್ಪದಿದ್ದಲ್ಲಿ ಹಿಂಸೆಗೂ ಹೇಸುವುದಿಲ್ಲ. ಇವರಿಗೆ ಸಮಾಜದ ನೋಟ ಮುಖ್ಯ. ಉತ್ತರ ಭಾರತದ ಕೆಲ ಭಾಗಗಳಲ್ಲಿ ಈ ರೀತಿಯ ಪ್ರೇಮ ವಿವಾಹಗಳಾದಲ್ಲಿ ಹೆಣ್ಣು ಕುಟುಂಬದ ಕಡೆಯವರು “ ಆನರ್ ಕಿಲ್ಲಿಂಗ್ ’ ಹೆಸರಲ್ಲಿ ಹುಡುಗನನ್ನು ಅಥವಾ ಇಬ್ಬರನ್ನೂ ಕೊಂದ ಪ್ರಕರಣಗಳು ಸಾಕಷ್ಟಿವೆ. ಅವರನ್ನು ತಮ್ಮ ಮನೆಗೆ ಬರಗೊಡದಿರುವುದು ಮುಂತಾದವುಗಳಿಂದ ಆ ದಂಪತಿಗಳಿಗೆ ಸಾತ್ವಿಕ ಹಿಂಸೆ ಕೊಡುತ್ತಾರೆ.
ಪ್ರೇಮ ವಿವಾಹ ಮಾಡಿಕೊಂಡ ಜೋಡಿಗಳು ಒಮ್ಮೊಮ್ಮೆ ಭಿನ್ನ ಹಿನ್ನೆಲೆಗಳಿಂದ ಹೊಂದಾಣಿಕೆ ಕಾಣದೆ ಕಷ್ಟ ಪಡುತ್ತಾರೆ. ತಮ್ಮ ತಂದೆ ತಾಯಿಯರನ್ನು ಮತ್ತು ಬಂಧುವರ್ಗದವರ ಸಾನ್ನಿಹಿತ್ಯ ಕಳೆದುಕೊಂಡು ಮಾನಸಿಕ ದೌರ್ಬಲ್ಯಕ್ಕೊಳಗಾಗುತ್ತಾರೆ.
ಈಗ ಎರಡೂ ಕಡೆಯ ವಾದಗಳನ್ನು ಒಮ್ಮೆ ತೂಗಿ ನೋಡೋಣ.
ಪ್ರೇಮಿಗಳ ವಾದ: ನಾವು ಯುಕ್ತವಯಸ್ಕರಾಗಿದ್ದೇವೆ. ನಮ್ಮ ಬೇಕು ಬೇಡಗಳು ನಮಗೆ ಗೊತ್ತು. ನಮ್ಮ ವೈವಾಹಿಕ ಜೀವನ ಹೇಗಿರಬೇಕು ಎಂಬುದರ ಬಗ್ಗೆ ನಮಗೆ ಅರಿವಿದೆ. ನೀವೇನೋ ತ್ಯಾಗ ಮಾಡಿದ್ದೇವೆ ಎನ್ನುವುದು ಬೇಡ. ನಮ್ಮ ಬಾಲ್ಯದ ಮಧುರಕ್ಷಣಗಳನ್ನು ನಾವು ನಿಮಗೆ ಕೊಟ್ಟಿಲ್ಲವೇ ? ನನಗೆ ಆ ಹುಡುಗನ/ಹುಡುಗಿಯ ಪರಿಚಯವಿದೆ. ಅವಳ/ಅವನ ಜೊತೆ ನನ್ನ ಬಾಳು ಹಸನಾಗಿರುತ್ತದೆ. ಸಮಾಜ ಬದಲಾಗುತ್ತಿದೆ. ನೀವು ಸಹ ಆಗಿ. ಇನ್ನೆಷ್ಟು ದಿನ ನೀವು ನಿಮ್ಮ ಇಷ್ಟಾಯಿಷ್ಟಗಳನ್ನು ನಮ್ಮ ಮೇಲೆ ಹೇರುತ್ತೀರಿ? ಅಮೆರಿಕ, ಯೂರೋಪ್ ದೇಶಗಳ ಜನರನ್ನು ನೋಡಿ. ತಮಗೆ ಬೇಕಾದವರನ್ನು ಡೇಟಿಂಗ್ ಗಳ ಮೂಲಕ ತಾವೇ ಆರಿಸಿಕೊಳ್ಳುತ್ತಾರೆ. ಹುಡುಗಿಯರಾದರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೀವು ಯಾರೋ ನೋಡಿದ ಅಪರಿಚಿತ ಹುಡುಗನಿಂದ ಕತ್ತು ಬಗ್ಗಿಸಿ ತಾಳಿ ಕಟ್ಟಿಸಿಕೊಳ್ಳಲು ನಾನು ತಯಾರಿಲ್ಲ ಅಂತಲೂ ಹೇಳುವುದಿದೆ.
ದೊಡ್ಡವರ ವಾದಃ ನೀವೆಷ್ಟೇ ದೊಡ್ಡವರಾದರೂ ಸಮಾಜದಲ್ಲಿನ ಒಳಿತು ಕೆಡಕುಗಳ ಪರಿಚಯವಿರುವುದಿಲ್ಲ. ಅದಕ್ಕೆ ನಾವು ಹಿನ್ನೆಲೆ ಎಲ್ಲ ವಿಚಾರಿಸಿ, ನೋಡಿ ಮದುವೆ ಮಾಡುತ್ತೇವೆ. ಅದಕ್ಕೆ ಏಕೆ ಆಕ್ಷೇಪಣೆ? ನಾವೇನು ನಿಮ್ಮ ಶತ್ರುಗಳೇ ? ನಿಮ್ಮ ಒಳಿತು ಕೆಡುಕು ನಮಗೆ ಗೊತ್ತಾಗೋದಿಲ್ವಾ ? ನಾವದೆಷ್ಟು ನಮ್ಮ ಸುಖಗಳನ್ನು ತ್ಯಾಗ ಮಾಡಿ ನಿಮ್ಮನ್ನು ಬೆಳೆಸಿದ್ದೇವೆ ಗೊತ್ತಾ? ಕೊನೆಗೆ ಈ ತರನಾ ಮಾಡೋದು? ನಾವೆಲ್ಲ ಈ ತರದ ಮದುವೆ ಆದವರೇ. ನಾವೇನಾಗಿದ್ದೇವೆ ? ನಮ್ಮ ಜಾತಿಯವರಲ್ಲಿ ನಮ್ಮ ಮರ್ಯಾದೆ ಉಳಿಯುತ್ತದೆಯೇ ? ನಾಲ್ಕು ಜನದ ನಡುವೆ ಜೀವನ ನಡೆಸುವುದು ಹೇಗೆ ? ನಿಮ್ಮ ತಂಗಿಯ ಮದುವೆ ಹೇಗಾದೀತು ನೀನು ಈ ರೀತಿ ಮಾಡಿದರೆ ?
ಎರಡೂ ಕಡೆಯ ವಾದಗಳಲ್ಲಿ ನಿಜಾಂಶಗಳಿಲ್ಲ ಅಂತ ಹೇಳಲಾಗದು.
೨೦ನೆಯ ಶತಮಾನದ ಕೊನೆಯಲ್ಲಿ ಪ್ರಾರಂಭವಾದ ತಂತ್ರಜ್ಞಾನದ ಸ್ಫೋಟ ಇಡೀ ಜಗತ್ತಿನ ಜೊತೆಗೆ ಭಾರತದ ಸಮಾಜಕ್ಕೂ ತನ್ನ ಪ್ರಭಾವ ತೋರಿತು. ಹೆಣ್ಣುಮಕ್ಕಳಿಗೆ ಕೆಲಸ ಸಿಗಲು ಆರಂಭವಾಯಿತು. ಕೈತುಂಬಾ ಸಂಬಳ ಬರಲು ಶುರುವಾಯಿತು. ಕೆಲಸದ ಸಲುವಾಗಿ ನಗರಗಳಿಗೆ ಹೋಗುವುದು ನಡೆಯಿತು. ಅಲ್ಲಿಯ ವರೆಗೆ ನೆಂಟರಿಷ್ಟರ ಮನೆಗಳಲ್ಲಿ ಇರುತ್ತಿದ್ದ ಹೆಣ್ಣು ಮಕ್ಕಳು ಪೇಯಿಂಗ್ ಗೆಸ್ಟ್ ಗಳಾಗಿ ಇರುತ್ತ ಸ್ವತಂತ್ರವಾಗಿ ಇರಲು ಶುರುವಾಯಿತು. ಇತರೆ ರಾಜ್ಯಗಳ, ಪ್ರದೇಶಗಳ ಹುಡುಗರ ಜೊತೆ ಬೆರೆಯುವುದು ಪ್ರಾರಂಭವಾಯಿತು. ಇದೆಲ್ಲದರ ಜೊತೆ ಅಂತರ್ಜಾಲ ತುಂಬಾ ಸುಲಭದಲ್ಲಿ ಸಿಗುವಂತಾಗಿ ಜಗತ್ತಿನ ಬೇರೇ ಬೇರೇ ಸಮಾಜಗಳ ರೀತಿ ನೀತಿ, ಆಚಾರ ವ್ಯವಹಾರ ಗೊತ್ತಾಗಲು ಮೊದಲಾಯಿತು. ಒಂದು ರೀತಿ ಹೇಳ ಬೇಕೆಂದರೆ ಅಲ್ಲಿಯ ವರೆಗಿದ್ದ ಸಮಾಜದ ಮುಖವೇ ಬದಲಾಯಿತು. ಆಗಲೇ ಈ ರೀತಿಯ ಪ್ರೇಮ ವಿವಾಹಗಳು ಸಹ ಹೆಚ್ಚುತ್ತ ಹೋದವು. ತನಗೆ ಮೆಚ್ಚುಗೆಯಾದ ಹುಡುಗ/ಹುಡುಗಿಯರಲ್ಲಿ ಗುಣ ನೋಡಲಾರಂಭಿಸಿದ ಯುವ ಪೀಳಿಗೆ, ತಾವಿರುವ ಸಮಾಜದ ಕಟ್ಟಳೆಗಳನ್ನು ಗಣನೆಗೆ ತೆಗೆದುಕೊಳ್ಳದಿರುವುದು ಪ್ರಾರಂಭವಾಯಿತು. ಅಲ್ಲಿಂದ ಪ್ರಾರಂಭವಾದ ಈ ಪ್ರೇಮ ವಿವಾಹದ ರಭಸ ದೊಡ್ಡವರು ನೋಡಿ ಮಾಡುವ ವಿವಾಹ ವ್ಯವಸ್ಥೆಯನ್ನು ಮತ್ತು ಅದರಲ್ಲಿಯ ಪ್ರೀತಿಯನ್ನು ಪ್ರಶ್ನಿಸುವ ಮಟ್ಟಕ್ಕೆ ಬಂದಿದೆ.
ಹೀಗೆ ಬದಲಾದ ದೃಷ್ಟಿಕೋನಕ್ಕೆ ಪೂರಕವಾಗಿ ನಮ್ಮ ಚಲನ ಚಿತ್ರಗಳು ಸಹ ಪ್ರೇಮದ ಕತೆಗಳನ್ನು ತೆಗೆದು ಅವುಗಳ ಪರವಾಗಿ ತಮ್ಮ ವಾದವನ್ನು ಮಂಡಿಸುವ ಸಂದೇಶಗಳನ್ನು ನೀಡಲಾರಂಭಿಸಿದವು. ಇದರಿಂದ ಯುವಲೋಕವೆಲ್ಲ ಒಂದು ತರವಾದ ರೆಬೆಲ್ ಮನಸ್ತತ್ವವನ್ನು ಅಳವಡಿಸುಕೊಂಡಿತು. ತಂದೆ ತಾಯಿಯರ ಮಾತು ಲಕ್ಷ್ಯವಿಲ್ಲದಾಯಿತು. ತಮಗೊಂದು ಸ್ಪೇಸ್ ಎಂಬ ಹೊಸ ಪದವನ್ನು ಹುಟ್ಟು ಹಾಕಿಕೊಂಡು ತಾವು ಮಲಗುವ ಕೋಣೆಗೆ ಬಾಗಿಲು ಜಡಿತು ತಮ್ಮದೇ ಲೋಕದಲ್ಲಿ ಇರಲು ಆರಂಭಿಸಿತು. ಅಮ್ಮ ಅಡಿಗೆ ಮಾಡುವುದಕ್ಕೆ, ಅಪ್ಪ ಎಟಿಎಂ ಕಾರ್ಡಿಗೆ ಹಣ ಹಾಕುವುದಕ್ಕೆ ಎನ್ನುವ ಧೋರಣೆ ಜಾಸ್ತಿಯಾಯಿತು. ಸಾಮಾಜಿಕ ಜಾಲತಾಣಗಳು ಬಳಕೆಗೆ ಬಂದ ಮೇಲಂತೂ ಯುವ ಪೀಳಿಗೆ ತಮ್ಮದೇ ಆದ ಲೋಕದಲ್ಲಿ ಸಂಚರಿಸಲಾರಂಭಿಸಿತು. ಇವರಿಗೆ ಮಾಧ್ಯಮಗಳಲ್ಲಿಯ ತಮ್ಮ ಸ್ನೇಹಿತರು ಹೇಳಿದ್ದೇ ವೇದವಾಕ್ಯ, ಅವರು ಮಾಡಿದ್ದೇ ಅನುಕರಣೆಗೆ ಯೋಗ್ಯ. ಹೀಗಿರುವ ಇವರಿಗೆ ಅರೇಂಜ್ಡ್ ಮದುವೆಗಳಲ್ಲಿ ಪ್ರೀತಿ ಇರುವುದಿಲ್ಲ ಎನಿಸುವುದು ಸ್ವಾಭಾವಿಕವಾಯಿತು.
ನಮ್ಮ ದೇಶದಲ್ಲಿಯ ಅಂಕೆ ಸಂಖ್ಯೆಗಳ ಪ್ರಕಾರ ಪ್ರೇಮ ವಿವಾಹಗಳು ಶೇಕಡಾ ೧೮ ಮಾತ್ರ. ಇದರರ್ಥ ಇನ್ನೂ ೮೨% ಹುಡುಗರು ತಮ್ಮ ತಂದೆತಾಯಿಯ ಮಾತಿಗೆ ಬೆಲೆ ಕೊಡುತ್ತಿದ್ದಾರೆ ಅಂತಾಯಿತು. ಅವರು ತಮಗೆ ತೋರುವ ಪ್ರೀತಿ, ಭದ್ರತಾ ಭಾವಕ್ಕೆ ತಮ್ಮ ಮತ ಎಂದು ತೋರಿಸುತ್ತಿದ್ದಾರೆ ಅಂತಾಯಿತು. ಮತ್ತೆ ನಗರಗಳಲ್ಲಿ ಬಿಟ್ಟರೆ ನಮ್ಮ ಸಮಾಜದಲ್ಲಿ ಮದುವೆ ವಿಚ್ಛೇದನೆ ಸಹ ತುಂಬಾ ಕಮ್ಮಿ. ಇನ್ನೂ ಮದುವೆ ಎನ್ನುವ ವ್ಯವಸ್ಥೆಗೆ ಗೌರವ, ಮರ್ಯಾದೆ ತೋರುತ್ತಿದ್ದಾರೆ ಅಂತಾಯಿತು.
ಏನೇ ಇರಲಿ ಎರಡೂ ಕಡೆಯವರು ಅರ್ಥ ಮಾಡಿಕೊಳ್ಳ ಬೇಕಾದ ಕೆಲ ವಿಷಯಗಳ ಕಡೆ ಗಮನ ಕೊಟ್ಟಲ್ಲಿ ಎರಡೂ ತರದ ವಿವಾಹಗಳು ಸಫಲವಾಗಿ ನಿಲ್ಲುತ್ತವೆ.
೧. ಮಕ್ಕಳು ತಮ್ಮ ತಂದೆ ತಾಯಿಯರ ಬಗ್ಗೆ ಗೌರವ ಹೊಂದಿರ ಬೇಕು. ಅವರು ತಮಗೆ ಒಳ್ಳೆಯ ಭಾಗಸ್ವಾಮಿಯನ್ನು ಹುಡುಕುತ್ತಾರೆ ಎನ್ನುವ ಭರವಸೆ ಇಡಬೇಕು. ತಮ್ಮ ಸ್ನೇಹಿತರು ಪ್ರೇಮದಲ್ಲಿ ಸಿಲುಕಿದಾರೆ ಎಂದು ತಾವು ಅನುಕರಿಸ ಬಾರದು.
೨. ಮಕ್ಕಳು ತಾವು ಪ್ರೇಮಿಸಿದ ವ್ಯಕ್ತಿಯನ್ನು ಮದುವೆಯಾಗ ಬೇಕೆಂದು ತಿಳಿಸಿದಾಗ ದೊಡ್ಡವರು ಸಹ ಅವರು ಆರಿಸಿದವರನ್ನು ಪರಿಶೀಲಿಸಿ ಒಪ್ಪಬೇಕು. ಮುಂದಿನ ಜೀವನ ಅವರದ್ದೇ ಅಲ್ಲವೇ ! ಸಮಾಜದಲ್ಲಿ ತಮ್ಮ ಅಹಂ, ಮರ್ಯಾದೆಯ ಬಗ್ಗೆ ಜಾಸ್ತಿ ಕಾಳಜಿ ಮಾಡಿ ಅವರ ಜೀವನಕ್ಕೆ ಕುತ್ತಗಬಾರದು.
೩. ದೊಡ್ಡವರು ನೋಡಿ ಮಾಡುವುದು ನಿಯಂತೃತ್ವ ಧೋರಣೆ ಎಂದು ಇವರು, ಪ್ರೇಮ ವಿವಾಹಗಳು ನಿಲ್ಲಲಾರವು ಎಂದು ದೊಡ್ಡವರು ನಿರ್ಣಯಿಸುವುದನ್ನು ಬಿಡಬೇಕು.
ಎರಡೂ ಕಡೆಯವರು ತಮ್ಮ ಮುಂದಿನ ಪೀಳಿಗೆಗಳ ಭವಿತವ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾರಿಗೂ ನೋವಾಗದಂತೆ ಮದುವೆಗಳು ನಡೆಸ ಬೇಕು. ಬದಲಾಗುತ್ತಿರುವ ಸಮಾಜದ ಬಗ್ಗೆ ಗೌರವವಿಟ್ಟುಕೊಳ್ಳ ಬೇಕು. ಹಠಕ್ಕೆ ಬಿದ್ದು ಕುಟುಂಬಗಳಲ್ಲಿ ನೋವು, ಹಿಂಸೆ ತಂದುಕೊಳ್ಳಬಾರದು. ಮದುವೆ ಎನ್ನುವ ನಮ್ಮ ಸಂಸ್ಕೃತಿಯ ವ್ಯವಸ್ಥೆಯನ್ನು ಮುಂದಿನ ಕೆಲ ಪೀಳಿಗೆಗಳ ವರೆಗೂ ಮುಂದುವರೆಸುವಂತಾಗಬೇಕು.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ