ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೀ ಪುರಂದರದಾಸರ ಆರಾಧನೆ -೨೦೨೧

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)


ಹೈದರಾಬಾದ್:
ಸ್ಥಳೀಯ ಕರ್ನಾಟಕ ಸಾಹಿತ್ಯ ಮಂದಿರದಲ್ಲಿ ಈ ತಿಂಗಳ ೧೧ ರಂದು ದಾಸಶ್ರೇಷ್ಠರು, ಕರ್ನಾಟಕ ಸಂಗೀತ ಪಿತಾಮಹರು ಆದ ಶ್ರೀ ಪುರಂದರ ದಾಸರ ಆರಾಧನಾ ದಿನದ ಪ್ರಯುಕ್ತ ಅವರಿಗೆ ನಮನ ಸಲ್ಲಿಸುವ ಕಾರ್ಯಕ್ರಮ ನಡೆಯಿತು. ಅಂದಿನದ ಮುಖ್ಯ ಅತಿಥಿಯಾಗಿ ದಾಸ ಸಾಹಿತ್ಯದ ಪರಂಪರೆಯನ್ನು ಮುಂದುವರೆಸುತ್ತಾ ಇದು ವರೆಗೆ ೫ ಸಾವಿರಕ್ಕೂ ಹೆಚ್ಚು ಕೀರ್ತನೆಗಳನ್ನು ಬರೆದಿರುವ ಶ್ರೀಮತಿ ಸುಶೀಲಾ ಕಾಂತಾರಾವ್ ಅವರು ಉಪಸ್ಥಿತರಿದ್ದರು.
ಸಾಹಿತ್ಯ ಮಂದಿರದ ಸಭಾಂಗಣ ತುಂಬಿದ್ದು ಕನ್ನಡಿಗರಲ್ಲಿ ಕನ್ನಡ ಕಾರ್ಯಕ್ರಮಗಳಲ್ಲಿ ಮತ್ತು ಪುರಂದರ ದಾಸರ ಮೇಲಿರಿಸಿದ ಅಭಿಮಾನವನ್ನು ಸಾರುತ್ತಿತ್ತು.

ಡಾ. ವಿನಯ ನಾಯರ್ ಮತ್ತು ಕು. ಬಿ‌. ಆಶ್ರಿತ ಅವರಿಂದ ದಾಸವಾಣಿ.

ಜ್ಯೋತಿ ಪ್ರಜ್ವಲನೆಯ ಮೂಲಕ ಪ್ರಾರಂಭವಾದ ಕಾರ್ಯಕ್ರಮಕ್ಕೆ ಮಂದಿರದ ಅಧ್ಯಕ್ಷರಾದ ಶ್ರೀ ಸುರೇಂದ್ರ ಕಟಗೇರಿಯವರು ಸ್ವಾಗತ ಭಾಷಣವನ್ನು ಮಾಡುತ್ತ ಕರೋನಾದ ಕಾರಣ ಕಳೆದ ವರ್ಷ ಕಾರ್ಯಕ್ರಮಗಳು ಮಾಡಲಾಗದಿದ್ದು ಆ ಕೊರತೆಯನ್ನು ಈ ವರ್ಷ ನೀಗಿಸುವ ತಮ್ಮ ಯೋಜನೆಯನ್ನು ಸಭಿಕರಿಗೆ ತಿಳಿಸಿದರು. ನಂತರ ಮಾತನಾಡಿದ ಶ್ರೀಮತಿ ಸುಶೀಲಾ ಕಾಂತಾರಾವ್ ಅವರು ತಮಗೆ ಹೇಗೆ ೨೦೦೭ ರಲ್ಲಿ ಇದೇ ದಿನ ಕೀರ್ತನೆಗಳನ್ನು ಬರೆಯುವ ಪ್ರೇರಣೆ ಸಿಕ್ಕಿತು ಎಂದು ಹೇಳುತ್ತ ಪ್ರಖ್ಯಾತ ಮಹಿಳಾ ಹರಿದಾಸರಾದ ತಮ್ಮ ಮುತ್ತಜ್ಜಿ ಹರಪನಹಳ್ಳಿ ಭೀಮವ್ವನ ಆಶೀರ್ವಾದ ತಮ್ಮ ಮೇಲಿರುವುದನ್ನು ನೆನೆಸಿದರು.

ಶ್ರೀಮತಿ ಸುಶೀಲಾ ಕಾಂತಾರಾವ್ ಅವರ ಸಂದೇಶ.

ಹಾಗೇ ಪುರಂದರ ದಾಸರು ಹೇಗೆ ತಮ್ಮ ಸಂಪತ್ತನ್ನೆಲ್ಲಾ ದಾನಮಾಡಿ ಹಂಪೆಗೆ ಸೇರಿ ವ್ಯಾಸರಾಯರ ಶಿಷ್ಯತ್ವ ಪಡೆದು ಊಂಛವೃತ್ತಿ ಮಾಡುತ್ತ ಹಾಡುಗಳನ್ನು ಕಟ್ಟಿದರು ಎನ್ನುವ ವಿಷಯವನ್ನು ಹೇಳಿದರು. ಹರಿಗೆ ದಾಸರಾಗುವುದೇ ಹರಿದಾಸ ವೃತ್ತಿ ಎಂದು ತಿಳಿಸಿದರು. ಅವರು ತಮಗೆ ಸುವಿದ್ಯೇಂದ್ರ ತೀರ್ಥರು “ಮಧ್ವೇಶ ಕೃಷ್ಣ” ಅಂಕಿತ ನಾಮವನ್ನು ನೀಡಿ.ಆಶೀರ್ವದಿಸಿದ ಮೇಲೆ ತಾವು ಅದೇ ಅಂಕಿತ ನಾಮದೊಂದಿಗೆ ಹಾಡಗಳನ್ನು ಬರೆಯುತ್ತಿರವುದನ್ನು ಹೇಳಿದರು. ತಾವೇ ಬರೆದ ಪುರಂದರ ದಾಸರ ಒಂದು ಹಾಡನ್ನು ಹಾಡಿದರು.
ನಂತರ ನಡೆದ ದಾಸವಾಣಿ ಕಾರ್ಯಕ್ರಮದಲ್ಲಿ ಶ್ರೀಮತಿ ವಿನಯಾ ನಾಯರ್ ಮತ್ತು ಕುಮಾರಿ ಬಿ.ಆಶ್ರಿತ ಅವರು ತಮ್ಮ ಮಧುರ ಕಂಠಗಳಿಂದ ಅನೇಕ ಪುರಂದರ ದಾಸರ ಕೀರ್ತನೆಗಳನ್ನು ಹಾಡಿ ಸಭಿಕರ ಮನಗಳನ್ನು ತಣಿಸಿದರು. ಕೊನೆಯಲ್ಲಿ ಅವರು ಹಾಡಿದ ಎರಡು ಭಜನೆಗಳಿಗೆ ಅಲ್ಲಿ ನೆರೆದಿದ್ದ ಮಹಿಳಾ ಮಂಡಳಿಗಳ ಸದಸ್ಯರುಗಳು ಹೆಜ್ಜೆ ಹಾಕುತ್ತ ನೃತ್ಯ ಮಾಡಿ ತಮ್ಮ ಭಕ್ತಿಯನ್ನು ಸಾರಿದರು. ನಂತರ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕಳೆದ ಭಾನುವಾರ ಸಾಹಿತ್ಯಮಂದಿರ ನಡೆಸಿದ ಗಾಯನ ಸ್ವರ್ಧೆಗಳಲ್ಲಿ ವಿಜಯಿಗಳಿಗೆ (ವೈಯಕ್ತಿಕ ಮತ್ತು ಮಂಡಳಿಗಳಿಗೆ ) ಬಹುಮಾನ ನೀಡಲಾಯಿತು. ಕಾರ್ಯದರ್ಶಿಗಳಾದ ನರಸಿಂಹಮುರ್ತಿ ಜೋಯಿಸ್ ಅವರು ವಂದನಾರ್ಪಣೆ ಮಾಡಿದರು.

ದಾಸವಾಣಿಯ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಮಹಿಳಾ ಮಂಡಲಿ ಸದಸ್ಯೆಯರು.

ಬಹಳ ಕಾಲ ಕಾರ್ಯಕ್ರಮಗಳಿಲ್ಲದೇ ಬಳಲಿದ ರಸಿಕ ಕನ್ನಡಿಗರಿಗೆ ಈ ಕಾರ್ಯಕ್ರಮ ಒಂದು ಮಧುರ ಅನುಭವವನ್ನು ನೀಡಿತ್ತು. ನೆರೆದ ಸಭಿಕರೆಲ್ಲರೂ ಕೊನೆಯ ಭಜನೆಗೆ ತಾವು ಸಹ ಚಪ್ಪಾಳಿ ತಟ್ಟುತ್ತ ತಮ್ಮ ಮೆಚ್ಚುಗೆ ಮತ್ತು ಪಾಲ್ಗೊಳ್ಳವಿಕೆಯನ್ನು ತೋರಿದ್ದರು. ಒಟ್ಟಾರೆ ಕಾರ್ಯಕ್ರಮ ತುಂಬಾ ಜನರ ಮನ ಸೆಳೆದಿತ್ತು.