- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
ಕಲಾಮಂದಿರದ ಹೊರಗೆ ಜನಜಂಗುಳಿ ನೋಡಿ ಅನಿಸಿತು ,ಓಹೋ ಯಾರೋ ಹೀರೋ ಅಥವಾ ಹೀರೋಯಿನ್ ಬರುತ್ತಿರಬೇಕು ಎಂದು.
ತಿಳಿದು ಬಂದಿದ್ದು ಇಲ್ಲಿ ಇಂದು ಅಭಿಜ್ಞಾನ ಶಾಕುಂತಲ ನಾಟಕದ
ನಾಲ್ಕನೇಯ ಅಂಕದ ಕೊನೆಯ ಪ್ರದರ್ಶನ ನಡೆಯಲಿದೆ ಅಂತ.
ಓಹೋ , ಹೌದಲ್ಲ !!
“ಕಾವ್ಯೇಷು ನಾಟಕಂ ರಮ್ಯಂ
ತತ್ರ ರಮ್ಯಾ ಶಕುಂತಲಾ
ತತ್ರಾಪಿ ಚತುರ್ಥ: ಅಂಕ:
ತತ್ರ ಶ್ಲೋಕ ಚತುಷ್ಟಯಮ್.”
ಈ ಜಗತ್ಪ್ರಸಿದ್ಧ ಪ್ರಶಂಸೆ ಮರೆಯಲಾದೀತೆ ! ನಾಲ್ಕನೇ ಅಂಕದ ಸಾರಾಂಶ ಮೊದಲು ತಿಳಿದರೆ ಒಳಿತಲ್ಲವೇ?
ತಪೋವನದಲ್ಲಿ ಹುಟ್ಟಿ ಬೆಳೆದು, ಮಹರ್ಷಿಗಳಿಂದ ಪೋಷಿತಳಾಗಿ, ಶಿಕ್ಷಿತಳಾಗಿ, ಗಿಡಮರಗಳಿಗೆ ನೀರೆರೆಯುತ್ತಾ, ಜಿಂಕೆಮರಿಗಳನ್ನು ಆಡಿಸಿಕೊಂಡು ಅಖಂಡ ಪುಣ್ಯದ ಫಲದಂತೆ ಬೆಳೆದವಳು ಶಕುಂತಲೆ. ದುಷ್ಯಂತನನ್ನು ಕಂಡಾಗ,ಪ್ರಣಯ ಎಂಬುದು ಏನೆಂದು ಅರಿಯದ ಮುಗ್ಧೆ ಇವಳು. ಇವರಿಬ್ಬರಲ್ಲಿ ಗಾಂಧರ್ವ ವಿವಾಹ ಜರುಗಿದೆ.
ಕೆಲವು ಕಾಲ ಅಲ್ಲಿ ಕಳೆದ ದುಷ್ಯಂತ, ತನ್ನ ಕರ್ತವ್ಯ ನಿರ್ವಹಣೆಗೆ
ರಾಜಧಾನಿಗೆ ಹಿಂದಿರುಗುವಾಗ, ಯೋಗ್ಯ ಅಂಗರಕ್ಷಕರನ್ನು ಕಳುಹಿಸಿ
ಶಕುಂತಲೆಯನ್ನು ಅರಮನೆಗೆ ಬರಮಾಡಿಕೊಳ್ಳುವ ಭರವಸೆ ನೀಡಿದನು.
ದುಷ್ಯಂತನದೇ ಆಲೋಚನೆಯಲ್ಲಿ ಮುಳುಗಿದ ಅವಳಿಗೆ, ಮಹರ್ಷಿ ದುರ್ವಾಸರ ಆಗಮನ ತಿಳಿಯದೇ ನಿರ್ಲಕ್ಷ್ಯತೆಗಾಗಿ ಶಾಪಗ್ರಸ್ತಳಾದಳು.
ಕಣ್ವರು ಬಂದು ಪರಿಸ್ಥಿತಿಯನ್ನು ಅಂಗೀಕರಿಸಿ , ರಾಜಧಾನಿಯಿಂದ ಯಾವ ಸಮಾಚಾರ ಬರದೇ ಇದ್ದಾಗ, ಗರ್ಭಿಣಿಯಾದ ಮಗಳನ್ನು ಅರಮನೆಗೆ ಕಳಿಸುವ ನಿರ್ಧಾರ ತೆಗೆದುಕೊಂಡರು. ಆಗ ಆಶ್ರಮವಾಸಿಗಳಿಗೆ ಹಾಗೂ ಕಣ್ವರಿಗೆ ಆದ ದು:ಖ, ಪರಿತಾಪ ಅಲ್ಲದೇ ಆಶ್ರಮದ ಗಿಡಬಳ್ಳಿಗಳೂ ಆದ ದು:ಖಗಳ ವರ್ಣನೆ ಈ ಅಂಕಣದಲ್ಲಿ ಅತ್ಯಂತ ಮನೋಜ್ಞವಾಗಿ ಮೂಡಿಬಂದಿದೆ.
ಕಣ್ವರ ಉಪದೇಶದ ಮಾತುಗಳು ಇಂದಿಗೂ ಪಂಚಶೀಲ ಎಂದು ಪರಿಗಣಿಸಬೇಕಾದ ಅಂಶಗಳು. ಆ ನಾಲ್ಕು ಸುಪ್ರಸಿದ್ದ ಶ್ಲೋಕಗಳನ್ನು ಅಭ್ಯಸಿಸಿಯೇ ಆನಂದಿಸೋಣ .
ಅನಸೂಯ, ಪ್ರಿಂಯವದೆಯರು ಪೂಜೆಗಾಗಿ ಹೂವುಗಳನ್ನು ಕೂಡಿ ಹಾಕುತ್ತಾ ಶಕುಂತಲೆಯ ವಿಷಯವಾಗಿ ಮಾತುಕತೆ ನಡೆಸಿದ್ದಾರೆ. ಪೂಜ್ಯ ಕಾಶ್ಯಪರು ಯಜ್ಞವನ್ನು ಪರಿಸಮಾಪ್ತಿ ಮಾಡಿ ಆಶ್ರಮಕ್ಕೆ ಮರಳಿ ಬರುತ್ತಾರೆ. ಅವರಿಗೆ ಶಕುಂತಲೆಯ ವಿಷಯವನ್ನು ಹೇಗೆ ತಿಳಿಸಬೇಕೆಂಬ ಚಿಂತೆಯಲ್ಲಿ ಇರುವರು ಸಖಿಯರು. ಗುಣವತೀ ಮಗಳನ್ನು ಯೋಗ್ಯವರನಿಗೆ ಒಪ್ಪಿಸುವದೇ ಗುರುಜನರ ಸಂಕಲ್ಪ ಅಲ್ಲವೇ !
ಆಗ ನೇಪಥ್ಯದಿಂದ
“ಅಯಂ ಅಹಮ್ ಭೊ:“
“ನಾನು ಇಲ್ಲಿಗೆ ಬಂದಿರುವೆ “
ಅತಿಥಿಗಳ ಆಗಮನವಾಗಿದೆ ಎಂದು ಅರಿತ ಸಖಿಯರು ಸತ್ಕಾರದ ಸಿದ್ಧತೆಗೆ ಅನುವಾಗುವರು. ಅಷ್ಟರಲ್ಲಿ ಮತ್ತೊಂದು ಗುಡುಗು ಕೇಳಿಬರುವದು.
“ಅತಿಥಿಯನ್ನು ನಿರ್ಲಕ್ಷ್ಯ ಮಾಡಿರುವೀ.ನೀನು ಯಾರ ಚಿಂತನೆಯಲ್ಲಿ ಮುಳುಗಿ, ನಿನ್ನ ಎದುರು ಉಪಸ್ಥಿತರಿದ್ದ ಅತಿಥಿಯನ್ನು ಕಡೆಗಣಿಸಿರುವಿಯೋ, ಅವರು ನಿನ್ನನ್ನು ಮರೆಯುವಂತಾಗಲಿ “
ಸುಲಭ ಕೋಪಿಷ್ಠರಾದ ದುರ್ವಾಸ ಮಹರ್ಷಿಗಳು, ಶೂನ್ಯ ಮನಸ್ಕಳಾದ ಶಕುಂತಲೆಗೆ ಶಾಪ ಕೊಟ್ಟರೂ ಇದರ ಅರಿವೇ ಅವಳಿಗಿಲ್ಲ.
ಗಾಂಧರ್ವ ವಿವಾಹದ ನಂತರ ಕೆಲವು ದಿನ ಇದ್ದು, ಇಂದೇ ರಾಜಧಾನಿಗೆ ಮರಳಿ ಹೋಗಿರುವನು. ವಿರಹದಿಂದ, ಅವನದೇ ನೆನಪಿನಲ್ಲಿ ಮಗ್ನಳಾದ ಶಕುಂತಲೆಗೆ ಶಾಪದ ಸುಳಿವೂ ಸಿಕ್ಕಿಲ್ಲ. ಶಾಪವನ್ನು ಕೇಳಿಸಿಕೊಂಡ ಸಖಿಯರು ಗಾಬರಿಗೊಂಡಾಗ ಅವರ ಕೈಯಿಂದ ಹೂವಿನ ಬುಟ್ಟಿ ಕೆಳಗೆ ಬಿತ್ತು. ಅಪಶಕುನವಾಯಿತು ಎಂದು ಅನಿಸಿತಾದರೂ, ಶೀಘ್ರವಾಗೀ ಓಡಿಹೋಗಿ, ಪ್ರಿಯಂವದೆ ಋಷಿಗಳ ಚರಣಕ್ಕೆ ಬಿದ್ದು ಕ್ಷಮೆ ಯಾಚಿಸುವಳು ಶಕುಂತಲೆಯ ಪರವಾಗಿ. ದುಷ್ಯಂತ ವಿರಹದಿಂದ ಸಖಿಯ ಹೃದಯ ಶೂನ್ಯವಾಗಿದೆ ಆದರೆ ಅವಳಲ್ಲಿ ದ್ವೇಷ ಭಾವನೆ ಇಲ್ಲ. ಶಕುಂತಲೆಯ ಈ ಮೊದಲ ಅಪರಾಧವನ್ನು ಕ್ಷಮಿಸಬೇಕು ಎಂದು ಕೇಳಿಕೊಂಡಳು.
ಸುಲಭ ಕೋಪಿಷ್ಠರಾದ ದುರ್ವಾಸರನ್ನು
“ಪ್ರಕೃತಿ ವಕ್ರ:“
ಎಂದಿದ್ದಾನೆ ಕವಿ.
“ಅಯಮಹಮ್ ಭೋ:” ಎಂಬ ನುಡಿಯಿಂದಲೇ ಅವರ ಅಹಂಕಾರದ ಸ್ವಭಾವ ತೋರಿಸಿದ್ದಾನೆ. ಅವಮಾನ ಸಹಿಸರು ಈ ಅಹಂವಾದಿಗಳು.
ಐತಿಹಾಸಿಕ ಶಾಪ ಕೊಟ್ಟಾಯಿತು. ಅರಿಷಡ್ ವರ್ಗ ವಿರಹಿತ ಋಷಿಗಳು ಹೀಗೆ ಕೋಪ ಮಾಡಬಹುದೇ ? ಆದರೆ ದುರ್ವಾಸರು ಮಹದೇವನ ತೇಜಸ್ಸಿನಿಂದ ಹುಟ್ಟಿದವರು, ಅಗ್ನಿಯೇ ಅವರು. ಅನಸೂಯಾ , ಅತ್ರಿಯರ ಪುತ್ರ.
ದುರ್ವಾಸಾ: ಎಂದರೆ
“ದುಷ್ಟ: ದು: ಸಾಧ್ಯ: ವಾ ವಾಸ: ಯಸ್ಯ ಸ: “
ಯಾರನ್ನು ಒಂದು ಸ್ಥಳದಲ್ಲಿ ಉಳಿಯುವಂತೆ ಮಾಡುವದು ಅಸಾಧ್ಯದ ಕಾರ್ಯವೋ, ಅವರೇ ದುರ್ವಾಸ ಎಂದು ಬಹುವ್ರೀಹೀ ಸಮಾಸದಲ್ಲಿ ಪದ ವಿಚ್ಛೇದನ ಮಾಡುವರು.
ಇನ್ನು ಒಂದು ವಿಶ್ಲೇಷಣೆ ಅಂದರೆ
“ದುಷ್ಟಂ ವಾಸ: ಯಸ್ಯ ಸ: ದುರ್ವಾಸ:” ಯಾರು ತಮ್ಮ ಧರಿಸುವ ಬಟ್ಟೆ ಬರೆಯ ಬಗ್ಗೆ ಕಾಳಜಿ ವಹಿಸುವುದಿಲ್ಲವೋ ಅವನು ದುರ್ವಾಸನು.
ಅಂತೂ ದುರ್ವಾಸರು ಕೋಪದಿಂದ ಶಾಪ ಕೊಟ್ಟರು. ಅದನ್ನು ಹಿಂತೆಗೆದುಕೊಳ್ಳಲು ಪ್ರಿಯಂವದೆ ಅಂಗಲಾಚುವಳು. ಆದರೆ ಸಾನುಕ್ರೋಶರಾದ ಮುನಿಗಳು ಕೊಟ್ಟ ಶಾಪ ಹಿಂದೆ ತೆಗೆದುಕೊಳ್ಳಲಾರದೇ ,ಅದಕ್ಕೊಂದು ಪರಿಹಾರ ಮಾತ್ರ ಸೂಚಿಸಿದರು.
ಶಕುಂತಲೆಯನ್ನು ಶಾಪದಿಂದ ಮುಕ್ತಳನ್ನಾಗಿ ಮಾಡಲು, ವಾದಕ್ಕಿಳಿದು ಸೋತಳು. ಶಾಪದ ಪ್ರಭಾವ ಆಗೇ ಆಗುತ್ತದೆ.
ದುಷ್ಯಂತ ಶಕುಂತಲೆಯನ್ನು ಮರೆಯುವ ಅಪರಾಧವನ್ನು ಮುಚ್ಚಲು ದುರ್ವಾಸರ ಶಾಪದ ಕೋಟೆಯನ್ನು ನಿರ್ಮಿಸಿದ್ದಾನೆ ಕಾಲಿದಾಸ ಕವಿ. ಈ ಪ್ರಸಂಗ ಮಹಾಭಾರತದ ಮೂಲ ಕಥೆಯಲ್ಲಿ ಇಲ್ಲ ಎಂದು ಆರಂಭದಲ್ಲಿ ಹೇಳಿದ್ದೇನೆ, ಇರಲಿ.
ಅಂತೂ ಪ್ರಿಯಂವದೆ ದುರ್ವಾಸರಿಂದ ಒಂದು ಪರಿಹಾರ ಪಡೆದೇ ಬಿಟ್ಟಳು. ಅವರು ಉಶ್ಯಾಪ ಸೂಚಿಸಿದರು.
“ಅಭಿಜ್ಞಾನಾಭರಣ ದರ್ಶನೇನ ಶಾಪ: ನಿವರ್ತಿಷ್ಯತ “
ಯಾವುದಾದರೊಂದು ಆಭರಣ ನೋಡಿದಾಗ ಸ್ಮೃತಿ ಮರುಕಳಿಸುತ್ತದೆ. ಆಗ ಶಾಪ ವಿಮೋಚನೆ ಆಗುವದು ಎಂದು ದುರ್ವಾಸರು, ಮುಂದೆ ಒಂದು ಕ್ಷಣವೂ ಅಲ್ಲಿ ನಿಲ್ಲದೆ, ಆತಿಥ್ಯವನ್ನು ನಿರಾಕರಿಸಿ , ಹೊರಟೇಬಿಟ್ಟರು.
ಈ ಘಟನೆಯನ್ನು ಹೇಳಿ ,ಸುಕೋಮಲೆಯಾದ ಶಕುಂತಲೆಯ ಮನಸ್ಸನ್ನು ಘಾಸಿಗೊಳಿಸಲು ಇಚ್ಛಿಸದೆ ಸಖಿಯರು ರಹಸ್ಯವನ್ನು ಬಯಸಿದರು. ಹೇಗಾದರೂ ದುಷ್ಯಂತ ಕೊಟ್ಟ ಉಂಗುರ ತಮ್ಮ ಹತ್ತಿರ ಇದೆ, ಅದನ್ನೇ ತೋರಿಸಿದರೆ ಸಮಸ್ಯೆ ಪರಿಹಾರ ಆಗುವದೆಂದು ಅವರ ಎಣಿಕೆ.
ದುರ್ವಾಸರ ಆಗಮನ, ಶಾಪ, ಉಶಾಪ ಇದನ್ನು ರಂಗದ ಮೇಲೆ ತೋರಿಸುವುದಿಲ್ಲ. ಅನಸೂಯಾ, ಪ್ರಿಯಂವದೆಯರ ಸಂಭಾಷಣೆಯ ಮೂಲಕ ವ್ಯಕ್ತ ಮಾಡಲಾಗಿದೆ.
ಮೂರನೆಯ ಅಂಕದ ಕೊನೆಯಲ್ಲಿ ಸೂಚಿಸಲಾದ ಗಾಂಧರ್ವ ವಿವಾಹವೂ ವೇದಿಕೆಯಲ್ಲಿ ತೋರಿಸುವುದಿಲ್ಲ. ಈ ಪ್ರಸ್ತುತಿ ತಂತ್ರಕ್ಕೆ ವಿಷ್ಕಂಭಕ ಎನ್ನುವರು.
ದುರ್ವಾಸರ ಶಾಪದ ವಜ್ರಘಾತದಿಂದ ಬಳಲಿ ಹೋದಾಳು, ಕೋಮಲವಾದ ಬಳ್ಳಿಗೆ ಬಿಸಿನೀರು ಸುರಿದಂತೆ ಆದೀತು, ಶಾಪಾಗ್ನಿಯಿಂದ ಸಖಿ ಒಣಗಿ ಹೋದಾಳೆಂದು ಅನಸೂಯ, ಪ್ರಿಯಂವದೆಯರು ಅವಳ ರಕ್ಷಣೆಯೇ ತಮ್ಮ ಕರ್ತವ್ಯ ಎಂದು ಭಾವಿಸಿದರು. ನೀರಲ್ಲಿ ಮುಳುಗುವವನಿಗೆ ಕಡ್ಡಿಯ ಸಹಾಯ ಸಿಕ್ಕಂತೆ, ಉಂಗುರದ ಸಹಾಯದಿಂದ ದುಷ್ಯಂತನಿಗೆ ಸ್ಮೃತಿ ಮರುಕಳಿಸುವ ಭರವಸೆ ಅವರಿಗಿತ್ತು. ಇಲ್ಲಿ ಸಖಿಯರಲ್ಲಿ ಇದ್ದ ಉತ್ಕಟ ಪ್ರೇಮ, ವಾತ್ಸಲ್ಯ ಕಂಡು ಬರುತ್ತದೆ.
ಇಲ್ಲಿಗೆ ಮೊದಲ ವಿಷ್ಕಂಭಕ ಮುಗಿದಾಗ, ಕಣ್ವರ ಶಿಷ್ಯ, ಅದೇ ನಿದ್ರೆಯಿಂದ ಎಚ್ಚೆತ್ತು ಹೊರಗೆ ಬಂದು ಆಗಸವನ್ನು ನಿರೀಕ್ಷಿಸುವನು.
ಹೊತ್ತು ಎಷ್ಟಾಯಿತು , ಯಜ್ಞಕಾರ್ಯಕ್ಕೆ ಸಿದ್ಧತೆ ಮಾಡಬೇಕಾದವನು ಸೃಷ್ಟಿ ಸೌಂದರ್ಯವನ್ನು ಸವಿಯುತ್ತಾ ಇರುವನು. ಅವನು ಕೊಡುವ ಸೂರ್ಯೋದಯದ ವರ್ಣನೆ ಸುಂದರವಾಗಿದೆ.
“ಯಾತಿ ಏಕತ: ಅಸ್ತ ಶಿಖರಂ
ಪತಿರೋಷಧೀನಾಮ್ ಅವಿಷ್ಕೃತ
ಅರುಣ ಪುರ: ಸರ ಏಕತೋ ಅರ್ಕ:
ತೇಜೋ ದ್ವಯಸ್ಯ ಯುಗಪತ್ ವ್ಯಸನೋದಯಾಭ್ಯಾಮ್
ಲೋಕೋ ನಿಯಮ್ಯತ ಇವಾತ್ಮದಶಾಂತರೇಷು.“
ಒಂದೆಡೆ ಪಶ್ಚಿಮ ಘಟ್ಟದ ಪರ್ವತಸಾಲಿನ ತುದಿಯಲ್ಲಿ ಓಷಧಗಳ ಪತಿ, ಚಂದಿರ, ಅದೇ ಹೊತ್ತಿಗೆ ಪೂರ್ವ ಘಟ್ಟಗಳ ಶ್ರೇಣಿಯಿಂದ ಅರುಣನ ಸಾರಥ್ಯದಲ್ಲಿ ಸೂರ್ಯ ಮೇಲಕ್ಕೆ ಬರುತ್ತಿರುವ ರಮಣೀಯ ದೃಶ್ಯ.
ಒಂದೆಡೆ ಅಸ್ತ ,ಇನ್ನೊಂದೆಡೆ ಉಗಮ ಸಂಭವಿಸುವ ದೃಶ್ಯದಿಂದ
ಈ ಜಗತ್ತಿನ ಸೃಷ್ಟಿ ಲಯದ ತತ್ವಗಳನ್ನು ಮನಗಾಣುತ್ತಿದ್ದಾನೆ ಶಿಷ್ಯ, ಅಲ್ಲದೇ, ನಿರಂತರ ಬದಲಾಗುತ್ತಿರುವ ಜಗತ್ತಿನ ವ್ಯಾಪಾರವನ್ನು ನಮಗೂ ನೆಪಿಸುತ್ತಾ ಇದ್ದಾನೆ ಕವಿ ಕಾಲಿದಾಸ.
ಇಂಥದೇ ಸೂರ್ಯ ಚಂದ್ರರ ಉದಯ, ಅಸ್ತಗಳನ್ನು ಏಕ ಕಾಲಕ್ಕೆ ವೀಕ್ಷಿಸುತ್ತಾ ಕವಿಯ ಕಲ್ಪನೆ ಎಷ್ಟು ಸುಂದರವಾಗಿದೆ ನೋಡಿ!.
“ಎರಡು ಗಂಟೆಗಳನ್ನು ಕೊರಳಲ್ಲಿ ಕಟ್ಟಿಕೊಂಡ ಆನೆಯಂತೆ ಪರ್ವತ ಕಾಣುತ್ತಿದೆ.”
ಓಷಧಿಗಳು, ಅಂದರೆ Herbs ಚಂದಿರನ ಕಿರಣದಿಂದ ಸಸ್ಯಗಳು ಔಷಧೀ ಗುಣಗಳನ್ನು ಪಡೆಯುತ್ತವೆ.
“ಪುಷ್ಣಾಮಿ ಚ ಔಷಧೀ: ಸರ್ವಾ:
ಸೋಮ: ಭೂತ್ವಾ ರಸಾತ್ಮಕ: “
ಎಂದು ಭಗವಂತ ಭಗವದ್ಗೀತೆಯಲ್ಲಿ ಹೇಳಿದ್ದನ್ನು ಮನಗಾಣಬೇಕು.
“ನಾನು ಸೋಮನಾಗಿ (ಚಂದಿರನಾಗಿ) ಮೂಲಿಕೆ, ಎಲೆ , ಮರಗಳಲ್ಲಿ ಇದ್ದು
ಪೌಷ್ಟಿಕಾಂಶದಿಂದ ಜನರಿಗೆ ಬಲವನ್ನು ನೀಡಿ ಅವರನ್ನು ಪೋಷಿಸುತ್ತೇನೆ.” ಎಂದಿದ್ದಾನೆ ಕೃಷ್ಣ.
ಆದ್ದರಿಂದ ಚಂದ್ರನನ್ನು ಇಲ್ಲಿ ‘ಓಷಧಿನಾಮ್ ಪತಿ:’ ಎಂದು ಕರೆದಿದ್ದಾನೆ ಕವಿ.
ಚಂದಿರ ಅಸ್ತ ಆದ ಮೇಲೆ ಕುಮುದ್ವತಿ (ಕಮಲ) ಪುಷ್ಪ ಕಳೆಗುಂದುವದು.
‘ದೃಷ್ಟಿಂ ನ ನಂದಯತಿ’, ಅಂದರೆ,
ಮನಸ್ಸಿಗೆ ಆನಂದವನ್ನು ಉಂಟು ಮಾಡಲಾರದು.
ಚಂದಿರನ ಇನ್ನೊಂದು ಹೆಸರು ಶಶಿ.
ಕಲೆಯಿಂದ ಕಲಂಕಿತನು ಶಶಿ.
ಕವಿ ದುಷ್ಯಂತನನ್ನು ಶಶಿಗೆ ಹೋಲಿಸಿದ್ದಾನೆ. ಶಕುಂತಲೆಯನ್ನು ಬರಮಾಡಿ ಕೊಳ್ಳದೇ ದುಷ್ಯಂತ ಕಲಂಕಿತನು ಎಂದು ಎಣಿಸಿದ್ದಾನೆ ಶಿಷ್ಯ.
“ಕುಮುದ್ವತಿಯಂತಿರುವ ಅಬಲೆ ಶಕುಂತಲೆ ಬಾಡಿರುವಳು, ಅವಳನ್ನು ನೋಡಲು ಆಗುತ್ತಿಲ್ಲ” ಎನ್ನುವನು.
ಇಲ್ಲಿಗೆ ಎರಡನೇಯ ವಿಷ್ಕಂಭಕ ಮುಗಿಯುತ್ತದೆ.
ಅರುಣೋದಯದ ವರ್ಣನೆಯಲ್ಲಿಯೇ ಇಷ್ಟೆಲ್ಲ ರಹಸ್ಯವನ್ನು ಪ್ರತಿಮಾತ್ಮಕವಾಗಿ ಹೇಳಿದ್ದಾನೆ ಕವಿ ಕಾಲಿದಾಸ!!!!
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ