ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಳೆ ನಕ್ಷತ್ರಗಳ ಗಾದೆಗಳಲ್ಲಿ ಮತ್ತು ತ್ರಿಪದಿಗಳಲ್ಲಿ ರೈತ

ಸುಮಾ ವೀಣಾ

ಆದಿಮಾನವನ ಮಾತಿನೊಡನೆ ಜಾನಪದ ಸಾಹಿತ್ಯದ ಉಗಮವಾಯಿತೆಂದೂ ನಾಗರಿಕತೆಯೊಡನೆ ಶಿಷ್ಟಸಾಹಿತ್ಯ ಉದಯಿಸಿತೆಂದೂ  ಹೇಳಬಹುದು. ಬಿ.ಎಂ.ಶ್ರೀಯವರು ಜಾನಪದ ಸಾಹಿತ್ಯವನ್ನು “ಜನವಾಣಿ ಬೇರು ಕವಿವಾಣಿ ಹೂ” ಎಂದಿದ್ದಾರೆ. ಜನಪದ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಜನಪದ ಗೀತೆಗೆ ಅಗ್ರಸ್ಥಾನಸಲ್ಲುತ್ತದೆ. ಜನಪದಸಾಹಿತ್ಯ ಪ್ರಕಾರಗಳಿಗಿಂತ ಅತ್ಯಂತ ಪ್ರಾಚೀನವಾದುದು. ಜನಪದರು ಭಾವನಾಜೀವಿಗಳು ಲಯಬದ್ಧವಾದ ಅವರ ಭಾವೋದ್ಗಾರವೇ ರಾಗವಾಗಿ ಪರಿಣಮಿಸಿ ಪದಗಳ ರೂಪದ ಗೀತೆಗಳಾಗಿವೆ. ಗ್ರಾಮೀಣ ಜನತೆಯ ಜೀವನದರ್ಶನವನ್ನು ತ್ರಿಪದಿಗಳಲ್ಲಿ ನಾವು ಕಾಣಬಹುದಾಗಿದೆ. ಸಿ.ಪಿ.ಲಿಂಗಣ್ಣನವರು ಜನಪದ ಗೀತೆಗಳನ್ನು “ಜನಾಂಗದ ಜೀವಾಳ”ವೆಂದು ಕರೆದಿದ್ದಾರೆ. ವೈಜ್ಞಾನಿಕ ಸಂಸ್ಕೃತಿಗೆ ಕೃಷಿ ಸಂಸ್ಕೃತಿಯೇ ಮೂಲನೆಲೆ ಹಾಗು ಮುನ್ನೆಲೆ. ಕೃಷಿಗೆ ಮೂಲ ಭೂಮಿ. ಆಕೆ ಮಹಾಮಾತೆ ಮನುಷ್ಯರನ್ನು ಪೋಷಿಸುವ ಭಾರವೂ ಅಳದೇ ಕೊನೆಗಾಲದಲ್ಲಿಯೂ ನಾವು ಅವಳಿಗೇ ಶರಣು. ಆದುದರಿಂದ “ರೈತ ಬಡವನಾದರೆ,ಭೂಮಿ ಬಡವಿಯೇ?” ಎಂದು ತಿಳಿದು ಭೂಮಿತಾಯಿಯನ್ನು ಹರಸು ಎಂದು ವಿನಮ್ರನಾಗಿ ನಮಿಸುತ್ತಾನೆ.

ಎದ್ದೊಂದು ಗಳಿಗೇಲಿ   ಯಾರ್ಯಾರ ನೆನೆಯಲಿ
ಎಳ್ಳುಜೀರಿಗೆ ಬೆಳೆಯೋಳ ಭೂಮಿತಾಯ
ಎದ್ದೊಂದು ಗಳಿಗೆ ನೆನೆದೇನು |

ಎಂದು ಭೂಮಿತಾಯಿಯನ್ನು ನೆನೆಯದೆ ಇರುವವರೆ ಇಲ್ಲ. ಅಂತಹ ಭೂಮಿಯ ನಿಜ ಔರಸ ಪುತ್ರರು ಎಂದರೆ ರೈತರೆ. ರೈತ, ಕೃಷಿ, ಜಾನಪದ ಈ ಮೂರು ಒಂದನ್ನೊಂದುಬಿಟ್ಟು ಇರಲು ಅಸಾಧ್ಯ. ಹಾಗೆ ಕೃಷಿಗೆ ತನ್ನ ಒಗ್ಗಿಸಿಕೊಂಡಿರುವ ರೈತನ ಕುರಿತಾಗಿ ಇರುವ ತ್ರಿಪದಿಗಳು ಹಾಗು ಜನಪದರ ವೇದ ಗಾದೆಗಳು ಅದರಲ್ಲೂ   ರೈತನ ಒಡನಾಡಿ ಮಳೆ ಈ ಮಳೆಗೆ ಸಂಬಂಧಿಸಿದ ಮಳೆ ನಕ್ಷತ್ರಗಳಗೆ ಸಂಬಂಧಿಸಿ ಗಾದೆಗಳ ಹಿನ್ನೆಲೆಯಿಂದ ರೈತನನ್ನು ನೋಡುವ ಚಿಕ್ಕ ಪ್ರಯತ್ನವೇ ಇದು.

“ಕಾಲದೊಳು ಮಳೆಗಾಲ, ಮಾಲೆಯೊಳು ಮಲ್ಲಿಗೆ ಲೇಸು” ಎಂಬ ಸರ್ವಜ್ಞನ ಮಾತು ಸಾರ್ವಕಾಲಿಕವಾದದ್ದು. ಅದಕ್ಕೆ ಸಂವಾದಿಯೆಂಬಂತೆ ನಮ್ಮ ಜಾನಪದ ತಾಯಂದಿರು “ಮಗ ಉಂಡರೆ  ಕೆಟ್ಟಲ್ಲ ಮಳೆ ಆದರೆ ಕೆಟ್ಟಲ್ಲ” ಎಂಬ ಗಾದೆಯನ್ನು ಹೇಳಿದ್ದಾರೆ. ಯುಗಾದಿಯ ಸಂಭ್ರಮದೊಂದಿಗೆ ನಮ್ಮ ಅನ್ನದಾತರಾದ ರೈತರು ವರ್ಷದ ಕೃಷಿ ಚಟುವಟಿಕೆಗಳಿಗೆ ಪೂರ್ವಭಾವಿಯಾಗಿ ವರ್ಷದ ಪಂಚಾಂಗ ಶ್ರವಣ ಮಾಡುತ್ತಿದ್ದರು. ಮಳೆ ನಕ್ಷತ್ರಗಳು, ಸಸ್ಯಾಧಿಪತಿಗಳು, ಧನಾಧಿಪತಿಗಳು, ಧಾನ್ಯಾಧಿಪತಿಗಳು ಇತ್ಯಾದಿ ಇತ್ಯಾದಿಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಆಧುನಿಕರು ಉಪಗ್ರಹಾಧಾರಿತ ಮಾಹಿತಿಗಳನ್ನು ಸಂಗ್ರಹಿಸಿಕೊಂಡು ಮುಂಗಾರು ಇಂತಹ ದಿನವೇ ಆರಂಭವಾಗುತ್ತದೆ, ಮಳೆಯ ಪ್ರಮಾಣ ಹೀಗೇ ಇರುತ್ತದೆ, ಮಣ್ಣಿನ ಗುಣವನ್ನು ನೋಡಿಕೊಂಡು ಇಂತಹುದೇ ಬೆಲೆ ಬೆಳೆಯಬಹುದು ಎಂಬ ಅಭಿಪ್ರಾಯಕೊಡುತ್ತಾರೆ. ಇಲ್ಲಿ ಕೃಷಿ ಇಲಾಖೆ, ಕೃಷಿ ವಿಜ್ಞಾನಿಗಳ ಸಂಶೋದನೆ, ಸಲಹೆ, ಅನುಭವಗಳು ಮುಖ್ಯವಾಗುತ್ತವೆ. ನಾಗರೀಕತೆ ಎಷ್ಟು ಅನಾದಿಯೋ ಅಂತೆಯೇ ಕೃಷಿ, ಕೃಷಿಕರ ಅನುಭವವೂ ಅಷ್ಟೇ ಅನಾದಿ.

 ನೂತನ ಸಂವತ್ಸರದಲ್ಲಿ ಪ್ರಥಮ ಮಳೆ ಬಿದ್ದಾಗ ಹೊನ್ನಾರು (ಹೊನ್ನೇರು) (ಮುಂಗಾರು ಹಂಗಾಮಿನಲ್ಲಿ ಹೊಲದಲ್ಲಿ ಮಾಡುವ ಪ್ರಥಮ ಉಳುಮೆ) ಕಟ್ಟುವುದೆಂದರೆ ರೈತನಿಗೆ ಎಲ್ಲಿಲ್ಲದ ಸಂಭ್ರಮ. ಹೊನ್ನಾರಿನ ದಿನವನ್ನು ರೈತರ ಬೆಳೆಯ ದಿನ ಎನ್ನುತ್ತಾರೆ.  ಮುಂದಿನ ಒಂದು ವರ್ಷದ ಅನ್ನ, ಆದಾಯ ಎಲ್ಲವೂ ಅವನ ಯೋಚನಾಲಹರಿಯಲ್ಲಿ ಬೇಡಿಕೆ, ಬದುಕಾಗಿರುತ್ತಿದ್ದವು. ದನಕರುಗಳಿಗೆ ಶೃಂಗಾರ ಮಾಡಿ ನೇಗಿಲು ನೋಗ ಮುಂತಾದ ಕೃಷಿ ಪರಿಕರಗಳನ್ನು ಒಪ್ಪವಾಗಿ ಜೋಡಿಸಿ ಅದಕ್ಕೆ ಪೂಜೆ ಮಾಡಿ,ಸಿದ್ಧಪದಿಸಿದ ಹಬ್ಬದಡುಗೆಯನ್ನು ಜಾನುವಾರುಗಳಿಗೂ ತಿನ್ನಿಸುವುದಿದೆ. ನಂತರ ಊರಿನ ಪ್ರಮುಖರು ಮೆರವಣಿಗೆಯಲ್ಲಿ ಹೋಗಿ ಭೂದೇವಿಗೂ ಪೂಜೆ ಸಲ್ಲಿಸಿ ಉಳುಮಗೆ ನಾಂದಿ ಹಾಡುತ್ತಾರೆ. ಸೆಗಣಿಯ ಬೆನಕನನ್ನು ಇಟ್ಟು ನೇಗಿಲು ಮತ್ತು ಭೂಮಿಯನ್ನು ಪೂಜಿಸುತ್ತಾರೆ. ಫಲವತ್ತತೆಗೆ ‘ಸೆಗಣಿ’, ಸಸ್ಯ ಸಂಕುಲದ ಸಂಕೇತವಾಗಿ ‘ಗರಿಕೆ’ ಈ ಎರಡರ ಸಮತೂಕದ ಸಂಯೋಜನೆ ಹೊಸವರ್ಷದ ಹೊಸ ಬೇಸಾಯಕ್ಕೆ ನಾಂದಿಯಾಗುತ್ತದೆ. ನಂತರ ದೀಪಾವಳಿ ಹಾಗು ಸಂಕ್ರಾಂತಿಯಲ್ಲಿ ಗೋಪೂಜೆ ನೆರವೇರಿಸುವುದಿದೆ. ಮಣ್ಣೆತ್ತಿನ ಅಮವಾಸ್ಯೆ, ಕಾರುಹುಣ್ಣಿಮೆ, ನೂಲು ಹುಣ್ಣಿಮೆ, ಭೂಮಿಹುಣ್ಣಿಮೆ, ಶೀಗೀ ಹುಣ್ಣಿಮೆ ಇವುಗಳು ಕೃಷಿಯನ್ನು ಕುರಿತೇ ಇರುವ ಪ್ರಮುಖ ಹಬ್ಬಗಳು.

ಹೂಡೋದು ಹೊಸ ಎತ್ತು ಹೂಡ್ಯಾನು ಹೊಸಮಗ
ಕೂಗು ಕೇಳಮ್ಮ ಭೂದೇವಿ ನಿನ ಮಗ
ಸೆರಗ ಕಟ್ಟವನೆ ದುಡಿಯೋಕೆ ಎಂದು ಭೂಮಿತಾಯಿಯನ್ನು ಭಕ್ತಿ ಪೂರ್ವಕವಾಗಿ ಪ್ರಾಥನೆಮಾಡುತ್ತ ದುಡಿಮೆಗೆ ಇಳಿಯುತ್ತಿರುವ ಮಗನ ಮೇಲೆ ನಿನ್ನ ಕೃಪೆ ಆಶೀರ್ವಾದ ಸದಾ ಇರಲಿ ಎಂದು ಬಯಸುತ್ತಿದ್ದರು.

ಭೂದೇವಿ ನೀಡು ಈ ಭಾರಿ ಪೈರಾಗಲವ್ವ
ಬಡವನ ಹರಕೆ ಕೇಳವ್ವ ಭೂಮಿತಾಯಿ
”ನಿನ್ಗೆ ಜೋಡಿ ಹಣ್ಕಾಯಿ ಹೊಡಿಸೇನು” ಎಂದು ಮಾಡುವ ಕೃಷಿ ಚಟುವಟಿಕೆ ಫಲನೀಡಲಿ ಎಂದು ನಮ್ರತೆಯಿಂದ, ಬೇಡಿಕೊಳ್ಳುತ್ತಿದ್ದರು. ಎಂಥಾ ಅವಿನಾಭಾವ ಸಂಬಂಧ ಒಕ್ಕಲು ಮಕ್ಕಳು ಹಾಗು ಭೂಮಿತಾಯಿಯದ್ದು.

“ರೈತನದ್ದು ಗದ್ದಲವಿಲ್ಲದ ಬಾಳು, ಬಿಡುವಿಲ್ಲದ ದುಡಿಮೆ”. “ನಃಫಲೇಶು ಕದಾಚನ” ಎಂದು ಪ್ರತಿಫಲಕ್ಕೆ ಅಪೇಕ್ಷಿಸದೆ ಭೂಮಿಯಲ್ಲಿ ಬೆವರು ಹರಿಸಿ ಇದ್ದುದ್ದರಲ್ಲೇ ಸಂತೃಪ್ತಿ ಹೊಂದುವ ಜೀವ ಭಾವ.

ಮಣ್ಣನ್ನು ನಂಬಿ ನಾ ಮಣ್ಣಿಂದ ಬದುಕೇನು
ಮಣ್ಣೆ ನನಗೆ ಮುಂದೆ ಹೊನ್ನು
ಮಣ್ಣೆ ಲೋಕದಲ್ಲಿ ಬೆಲೆಯಾದದ್ದು ಎಂಬ ತ್ರಿಪದಿಯಲ್ಲಿ ಹೇಳಿರುವಂತೆ ಸಕಲ ಐಶ್ವರ್ಯಕ್ಕೂ ಮಣ್ಣೇ ಹೊಣೆ, ಅದಕ್ಕಿಂತ ಅಮೂಲ್ಯದ ವಸ್ತು ಮತ್ತೊಂದು ಇಲ್ಲ ಎಂದು ಮಣ್ಣಿನ ನಿಜ ಅರಾಧಕನಾಗಿ ಜೀವ ಸವೆಸಿದವನು ರೈತ.

ಬೆಳಗು ಚಿಲಿಪಿಲಿಗುಟ್ಟುವಲ್ಲಿಂದ ರಾತ್ರಿ ಮೌನವಾವರಿಸುವವರೆಗೆ ನಿರಂತರ  ದುಡಿಮೆ ಮಾಡುವ ನಮ್ಮ ಪಾಲಿಗೆ ಅನ್ನಧಾತ, ಜೀವಧಾತ, ತ್ಯಾಗರೂಪಿಯಾಗಿರುವ ರೈತ ಅಕ್ಷರಷಃ ಭೂಮಿ ತಾಯಿಯ ಔರಸ ಪುತ್ರ. ಅದ್ದಕ್ಕೆ ಜಾನಪದರು “ಹುಲ್ಲೇ ಹಾಸಿಗೆ, ಬದುವೇ ದಿಂಬು” ಎನ್ನುವ ಮಾತಿನಲ್ಲಿ ಸದಾ ಭೂಮಿ ತಾಯಿಯ ಮಡಿಲಲ್ಲೇ ಇರುತ್ತೇವೆ ಎಂದಿರುವುದು.

ಕೋಟಿವಿದ್ಯೆಗಳಲಿ ಮೇಟಿ ವಿದ್ಯಯೆ ಮೇಲು
ಮೇಟಿಯಿಂ ರಾಟಿ ನಡೆದುದಲ್ಲದೆ ದೇಶ
ದಾಟವೆ ಕೆಡಗು ಸರ್ವಜ್ಞಾ|| ಎಂಬಂತೆ ಇಡೀ ದೇಶದ ಮೇಟಿಯೇ ರೈತ ಕೃಷಿ ಸಲಕರಣೆಗಳು ಈತನ ಕೈಯ್ಯಲ್ಲಾಡಿದರೆ ಇಡೀ ದೇಶವೇ ಸುಭಿಕ್ಷವಾಗಿರುತ್ತದೆ. ನೇಗಿಲು, ನೊಗ, ಕುಂಟೆ, ಮರ, ರೋಣಗಲ್ಲು, ರೆಂಟೆ ಹೊಚ್ಚು, ಮೂಗುದಾರ, ಚಾಟಿ, ಗಾಡಿ, ಮೂಕಿ ಇತ್ಯಾದಿ ಪದಗಳು ಕೃಷಿ ಚಟುವಟಿಕೆಗಳಿಗೆ ಸಂಬಂದಿಸಿದ್ದು. ಆದರೆ ನಾಗರಿಕತೆ ಹೆಚ್ಚಾದಂತೆ ಇವುಗಳೆಲ್ಲ ಸದ್ದಿಲ್ಲದೆ ನೇಪಥ್ಯಕ್ಕೆ ಸರಿಯುತ್ತಿವೆ. ಪೇಪರ್, ಮೆಂತ್ಯ ಅರೆದು ನುಣ್ಣಗೆ ಸಾರಿಸಿ ಅಲಂಕರಿಸಿದ ಬಿದಿರಿನ ಬುಟ್ಟಿಗಳಲ್ಲಿ ಬಿತ್ತುವ ಬೀಜಗಳನ್ನೂ ಪೂಜಾಪರಿಕರಗಳನ್ನು ನಮ್ಮ ಹಿರಿಯರು ಸಂಭ್ರಮದಿಂದ ತೆಗೆದುಕೊಂಡು ಹೋಗುತ್ತಿದ್ದುದ್ದನ್ನು ನಾವು ಕಣ್ತುಂಬಿಕೊAಡಿದ್ದೇವೆ. ಆದರೆ ಈಗ ಸಂಭ್ರಮ  ಇಲ್ಲ ಈಗೇನಿದ್ದರೂ ಅಂಗಡಿಯಿಂದ ತಂದು ಸೀಲ್ಡ್ ಪಾಕೆಟ್ (sealed packet)ಗಳನ್ನು ಹೊಲದಲ್ಲಿ ಕತ್ತರಿಸಿ ಅಲ್ಲೇ ಬಿತ್ತಿ ಬುರುವುದು. ಹಾಗಂತ ಅಧುನಿಕತೆಯ, ವೈಜ್ಞಾನಿಕತೆಯ ತಿರಸ್ಕಾರವಲ್ಲ ಮರೆಯಾಗುತ್ತಿರುವ ಸಂಭ್ರಮ, ಅದನ್ನು ಮಿಸ್ (miss) ಮಾಡಿಕೊಳ್ಳುವ ಭಾವವಷ್ಟೆ.

ರೈತನ ಜೋಡಿವೀರ ಎಂದು ಕರೆಸಿಕೊಂಡಿರುವುದು ಬಸವಣ್ಣ ಅರ್ಥಾತ್ ಬಸವ ಅಂದರೆ ಎತ್ತುಗಳು. “ದೇವರು ದೇವರಿಗೂ ದೇವೇಂದ್ರ ಮೇಲು, ನರಲೋಕಕ್ಕೆ ನೀ ಮೇಲು ನಮ್ಮ ಪ್ರಜೆಗೆಲ್ಲ” ಎಂಬಂತೆ ರೈತನಿಗೆ ಉಳುವ ಎತ್ತೇ ಜೀವ. ಆದರೀಗ ಟ್ರಾಕ್ಟರ್, ಟಲ್ಲರ್‌ಗಳು ಉಳುಮೆಗೆ ಬಂದು ನಿಂತಿವೆ ಸ್ವಾಗತಾರ್ಹ. ಇದರ ಜೊತೆಗೆ ರೈತ ಸಾವಯವ, ಸಹಕಾರಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡರೆ ಚೆನ್ನಾಗಿರುತ್ತದೆ.

ಕರಿ ಎತ್ತು ಕಾಳಿಂಗ ಬಿಳಿ ಎತ್ತು ಮಾಲಿಂಗ
ಸರದಾರ ನನ್ನೆತ್ತ್ತು ಸಾರಂಗ ಬರುವಾಗ
ಸರಕಾರವೆಲ್ಲಕ್ಕೆ ನಡುಕ|| ಎಂದು ತಾನು ಸಾಕಿದ ಎತ್ತಿನ ಹೆಮ್ಮೆಯನ್ನು ರೈತರು ಪಡುತ್ತಿದ್ದರು ಇಂದಿಗೂ ಇದ್ದಾರೆ. ಅಂಥ ಎತ್ತಿಗೆ ಶಕ್ತಿ ಬರಲಿ ಎಂದು ಮುಂಗಾರಿನ ಹಂಗಾಮಿನಲ್ಲಿ ಹುರುಳಿ ಬೇಯಿಸಿ ತಿನ್ನಿಸುವುದು ವಾಡಿಕೆ. ಅದರ ಕಟ್ಟು, ಸಾಂಬಾರ್ ಬಹಳ ರುಚಿಕರ. ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ದಿನ ಹುರುಳಿ ಸಾಂಬಾರಿನ ಊಟ. ಅ ಊಟಕ್ಕೆ ಹೋಗುವುದೆಂದು ಹೆಚ್ಚುಗಾರಿಕೆ. ಇಂತಹ ಪದ್ಧತಿ ಈಗಲೂ ಉಡುಪಿ ಕರಾವಳಿ ತೀರಲ್ಲಿದೆ.

ಜನಪದರು “ಎತ್ತಿಲ್ಲದವನಿಗೆ ಎದೆಯಿಲ್ಲ” ಎಂದಿದ್ದಾರೆ ಅಂದರೆ ರೈತರಿಗೆ ಎತ್ತು ಎದೆ ಇದ್ದಹಾಂಗೆ, ಬಹುಮುಖ್ಯ ಎಂದು ಹೇಳುತ್ತಿದ್ದರು. ಅಂತಹ ಉಳುವ ಎತ್ತುಗಳನ್ನು ಸಾಕುವುದು ಹಳ್ಳಿಗಳಲ್ಲಿ ಪ್ರತಿಷ್ಠೆಯ ಸಂಕೇತ. ಊರಿನ ಎಲ್ಲಾರ ಮನೆಯಲ್ಲಿ ಕೆಲವನ್ನು ಎಲ್ಲಾರು ಹಂಚಿಕೊಂಡು ಮಾಡುತ್ತಿದ್ದರು “ಮುಯ್ಯಿಆಳು” ಎಂಬ ಹೆಸರಿನಲ್ಲಿ ನಾವೀಗ ಸಹಕಾರಕೃಷಿ ಪದ್ಧತಿ ಎಂದು ಏನನ್ನು ಕರೆಯುತ್ತೇವೆಯೋ ಆ ಪದ್ಧತಿ ನಮ್ಮ ಕೃಷಿಕರಿಗೆ ಬಹಳ ಹಳೆಯದು ಹೆಸರು ಮಾತ್ರ ಬೇರೆಯಷ್ಟೆ. ಈಗ ಕೃಷಿ ಕಾರ್ಮಿಕರೂ ಅoಟಿಣಡಿಚಿಛಿಣ ಪ್ರಕಾರ ಸಿಗುವುದು ಬೇರೆ ವಿಚಾರ.

ಜಾನಪದ ಸಾಹಿತ್ಯಕ್ಕೂ, ಕೃಷಿಗೂ ಅವಿನಾಭಾವ ಸಂಬಂಧ, ಕೃಷಿಯ ಕಾರಣದಿಂದಲೇ ನಮ್ಮ ಜಾನಪದ ಸಾಹಿತ್ಯ ಶ್ರೀಮಂತವಾಗಿರುವುದು, ಹಾಗೆಯೇ ಜಾನಪದ ಸಾಹಿತ್ಯದ ದಿಸೆಯಿಂದಲೇ ಕೃಷಿಕಾರ್ಮಿಕರು ತಮ್ಮ ಶ್ರಮವನ್ನು ಮರೆಯುತ್ತಿದ್ದದು. “ಸೊಸೆ ಚೊಚ್ಚಲ ಗಂಡು ಹಡೆಯಬೇಕು, ಎಮ್ಮೆ ಯಾವಾಗಲೂ ಹೆಣ್ಣುಕರುವಿಗೆ ಜನ್ಮ ನೀಡಬೇಕು, ಹಾಗೆಯೇ ಆಕಳು ಹೋರಿಕರುವನ್ನು ಈಯಬೇಕು” ಇವು ಗ್ರಾಮಿಣ ರೈತನ ನಂಬಿಕೆಯ ಮಾತುಗಳಾಗಿದ್ದವು. ವೃತ್ತಿ-ಪ್ರವೃತ್ತಿಗಳಂತೆ ಕೃಷಿ, ಹೈನುಗಾರಿಕೆ ಅಲ್ಲವೇ! ಎಮ್ಮೆ ಹಸುವಿಗಿಂತ ಹೆಚ್ಚು ಹಾಲನ್ನು ನೀಡುವುದರಿಂದ ಹೈನಿಗಾಗಿ ಎಮ್ಮೆಕರು ಬೇಕೆಂದು ಬಯಸುತ್ತಿದ್ದರು. ಕೃಷಿ ಚಟುವಟಿಕೆಗಳಲ್ಲಿ ಅದರಲ್ಲೂ ಬಯಲು ಸೀಮೆಯಲ್ಲಿ ಎತ್ತುಗಳಿಗೇ ಹೆಚ್ಚು ಬೆಲೆ ಆದ ಕಾರಣ ಆಕಳು ಹೋರಿಕರುವನ್ನು ಈಯಬೇಕೆಂದು ಬಯಸುತ್ತಿದ್ದರು. ಎಮ್ಮೆ ಗಬ್ಬಾದರೆ ಮನೆಯೊಡತಿ ಹೆಣ್ಣುಕರುವನ್ನೇ ಈಯ್ಬೇಕೆಂದು ಊರದೇವಿಗೆ ಹರಕೆ ಹೊರತ್ತಿದ್ದಳು. ಒಂದು ವೇಳೆ ಅದಾಗಲಿಲ್ಲ ಎಂದರೆ “ನೆಚ್ಚಿದ ಎಮ್ಮೆ ಕೋಣ ಈಯಿತು”  ಎಂಬ ಗಾದೆಯನ್ನು ಹಾಸ್ಯಕ್ಕೆ ಬಳಸುವುದಿತ್ತು. ಒಟ್ಟರ್ಥದಲ್ಲಿ ರೈತನ ದಿನ ಖರ್ಚಿನ ಮೂಲ ಹೈನುಗಾರಿಕೆಯೇ ಆಗಿರುತ್ತಿತ್ತು. “ಉಣಬೇಕು ಉಡಬೇಕು ಎಂಬೋದಾದರೆ ಎಮ್ಮೆ ಕಟ್ಟಬೇಕು ಆಕಳಿದ್ದವ ಮಕ್ಕಳ ಸಾಕ್ಯಾನ” ಎಂಬ ಗಾದೆಗಳು ಹೈನುಗಾರಿಕೆ ರೈತರ ಅವಿಭಾಜ್ಯ ಅಂಗ ಎಂಬುದನ್ನು ಸಾದರ ಪಡಿಸುತ್ತವೆ. “ಮಳೆಯಿಲ್ಲದ ಬೆಳೆಯಿಲ್ಲ ನೀರಿಲ್ಲದ ಹೊಳೆಯಲ್ಲ” ಅಂದರೆ ರೈತನಿಗೆ ಮಳೆ ಅವಶ್ಯಕ ಎಂದಲ್ಲವೇ!

“ಹದವೆದ್ದು ಆರಂಭ ಮಾಡ್ತೀನಿ” ಎನ್ನುವ ರೈತನಿಗೆ ಮಳೆ ಆಸರೆ. ಮಳೆಯನ್ನು ನಂಬಿ ಕೃಷಿ ಚಟುವಟಿಕೆಗೆ ಕೈಹಾಕುವ ರೈತನಿಗೆ ಕಾರ್ಮೋಡ ಕವಿದರೆ ಎಲ್ಲಿಲ್ಲದ ಸಂತಸ. ಇಳೆಯ ಜೀವ ಮಳೆ. ಮಳೆ ಇದ್ದರೆ ಬೆಳೆ. ಬೆಳೆ ಬದುಕು ತಾನೆ!, ಅಂತಹ ಮಳೆ ಬಾರದೆ ಇದ್ದಾಗ “ಅತ್ತರ ಮಳೆ ಎತ್ತಲಂದಾದರೂ ಬರಬಾರದ” ಎಂಬ ರೈತನ ಆಶಯ ಅವನ ಬದುಕನ್ನೇ ನಮಗೆ ಅರ್ಥೈಸುತ್ತದೆ. ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಎರಡು ಕೈಕೊಡಲ್ಲ ಎಂಬ ಅಚಲ ವಿಶ್ವಾಸ ನಮ್ಮ ಜಾನಪದರದ್ದು. “ಉತ್ತು ಬಿತ್ತಿದ ಭತ್ತವಾದರೂ ಮಳೆಯಿಲ್ಲದೆ ಮೊಳೆಯದು”. ಎಂಬ ಅನುಭವದ ಮಾತು ಮಳೆಯ ಅವಶ್ಯಕತೆಯನ್ನು ಕುರಿತು ಹೇಳುತ್ತದೆ.

ಮಳೆಗಾಲವೆಂದರೆ ಇಂತಿಂಥ ನಕ್ಷತ್ರದಲ್ಲಿ ಸುರಿಯುವ ಮಳೆಗೆ ಇಂತಿಂಥ ಬೆಳೆ, ಇಂಥ ಕೃಷಿ ಚಟುವಟಿಕೆಯೇ ಆಗಬೇಕು ಎಂಬ ತಿಳುವಳಿಕೆ ನಮ್ಮ ರೈತರಲ್ಲಿತ್ತು. ಕೃಷಿ ಕಾರ್ಯ ಆರಂಭಿಸುವಾಗ ಮೂಲ, ವಿಶಾಖ, ಮುಖ, ಸ್ವಾತಿ. ಪೂನರ್ವಸು, ಶ್ರವಣ, ಧನಿಷ್ಠ, ಶತಭಿಷ, ಉತ್ತರಭಾದ್ರ, ರೋಹಿಣಿ ನಕ್ಷತ್ರಗಳಲ್ಲಿ, ಶನಿವಾರ, ಭಾನುವಾರ ಬಿಟ್ಟು ಉಳಿದ ವಾರಗಳು ಚಂದ್ರನ ಪ್ರಬಲವಾದ ಕಾಲ ಮತ್ತು ಗುರುವಿರೋಧವಲ್ಲದ ಕಾಲದಲ್ಲಿ ಕೃಷಿ ಕಾರ್ಯ ಆರಂಭಿಸಬೇಕೆಂದು ಪಂಚಾಂಗಗಳು ಹೇಳುತ್ತವೆ.  ಮಳೆ ಎಂದರೆ ಆಕಾಶ ಮತ್ತು ಭೂಮಿಯ ಸಮ್ಮಿಲನದ ಕಾಲ ಎಂದೇ ನಮ್ಮ ಹಿರಿಯರು ತಿಳಿದಿದ್ದರು.ನಕ್ಷತ್ರಗಳನ್ನು ಸೂರ್ಯನಕ್ಷತ್ರ, ಮಳೆ ನಕ್ಷತ್ರ ಹಾಗು ಮಾಹನಕ್ಷತ್ರಗಳೆಂದು ವಿಂಗಡಿಸಲಾಗಿದೆ. ಅಶ್ವಿನಿಯಿಂದ ರೇವತಿ ನಕ್ಷತ್ರದವರೆಗೆ ರವಿಯು ಒಂದೊಂದೇ ನಕ್ಷತ್ರವನ್ನು ಕ್ರಮಿಸುತ್ತಾನೆ. ಇದನ್ನು ಆಧರಿಸಿ ಮುಂಗಾರು ಹಾಗು ಹಿಂಗಾರು ಎಂದು ನಿರ್ಧಾರ ಮಾಡಲಾಗುತ್ತದೆ.

ಕನ್ನಡ ಜನಪದ ಗೀತೆಗಳಲ್ಲಿ ಮಳೆ ಪ್ರಾಕೃತಿಕ ವಿದ್ಯಮಾನವಾಗಿದೆ. ಮಳೆ ರಾಯ ಇಲ್ಲಿ ತಂದೆಯಂತೆ ಕಂಗೊಳಿಸಿದ್ದಾನೆ. ಹಾಗಾಗಿ ಜನಪದರು ಈತನನ್ನು “ಗೊಂಬೆ ಹಚ್ಚಡದವನೆ, ರಂಭೆ ತೊಡೆಮೇಲೆ ಮಲಗಿರುವ ಮಳೆದೇವ” ಎಂದು ಪ್ರೀತಿಯಿಂದ ಕೊಂಡಾಡಿದ್ದಾರೆ. ಮಳೆಯನ್ನು ದೇವತೆಯನ್ನಾಗಿ ನೋಡಿದ ಜನಪದರು “ಅಸೂನಿ ಮಳೆಗೆ ಸಿಸುಗಳಿಗೂ ನೀರು ಕೊಡೊ ಶಕ್ತಿ ಇಲ್ಲದೆಹೋದ್ರೆ, ಭರಣಿ ಮಳೆ ಬಂಗಾರದ ಕರಣಿ, ಕೃತಕಿ ಮಳೆ ಕೆಳೋರೆ ಇಲಾಂದ್ರೆ, ರೋಹಿಣಿ ಮಳೆ ಒಣಿಯೆಲ್ಲ ಕಾಳು, ಆರಿದ್ರ ಮಳೆ ಗದ್ದರಿಸಬಾರದು, ಮಗಾ ಮಳೆ ಮುಗಿಲೆ ನೀರು ಸುರುವಿದಂತೆ ಉತ್ತರಿ ಮಳೆ ಬಿಳದಿದ್ದರೆ ಸತ್ತಹಾಗೆ” ಎಂದು ಪ್ರತಿ ಮಳೆಯ ವಿಶೇಷವನ್ನು  ಹೇಳುತ್ತಾರೆ. 

ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ ನಕ್ಷತ್ರಗಳು ಬೇಸಿಗೆಯ ಮಳೆ ನಕ್ಷತ್ರವಾಗುತ್ತವೆ. ಮೃಗಶಿರಾ ನಕ್ಷತ್ರದಿಂದ ಹಸ್ತ ನಕ್ಷತ್ರವರೆಗಿರುವ ೯ ನಕ್ಷತ್ರಗಳು ಮಳೆಗಾಲದ ನಕ್ಷತ್ರವಾಗುತ್ತವೆ. ನಂತರದ ನಕ್ಷತ್ರಗಳು ಹಿಂಗಾರಿನ ಮಳೆ ನಕ್ಷತ್ರಗಳಾಗುತ್ತವೆ. ಮುಖ್ಯವಾಗಿ ಆಶ್ವಿನಿಯಿಂದ ಪ್ರಾರಂಭಗೊಳ್ಳುವ ೧೧ ನಕ್ಷತ್ರಗಳನ್ನು ಮಾತ್ರ ಮಳೆ ಸುರಿಸುವ ನಕ್ಷತ್ರಗಳೆಂದು ಕರೆಯುತ್ತಾರೆ.  

“ಆಶ್ವಿನಿ ಮಳೆಗೆ ಆರು ಕಟ್ಟು ಭರಣಿ ಮಳೆಗೆ ಬೀಜ ಬಿತ್ತು”  ಇದು ಜಾನಪದರ ವೇದವಾಕ್ಯ ಎಂದೇ ಹೇಳಬಹುದು. “ಅಶ್ವಿನಿ ಅರಿಶಿನಕ್ಕೆ ಮೇಲು, ಅಡಿಕೆಗೆ ಹಾಳು”ಎಂಬ  ಮಾತು ವಾಣಿಜ್ಯ ಬೆಳೆಗೆ ಇಲ್ಲಿ ಹಾನಿಯುಂಟಾಗುತ್ತದೆ ಎಂದು ಹೇಳುತ್ತದೆ.ಆದರೆ ಭಾವವಿತ್ತು. “ಅಸಲೆ ಮಳಗೆ ನೆಲವೆಲ್ಲ ಹಸಲೆ”,  “ಅಸಲೆ ಮಳೆಗೆ ಹೆಂಚಿನ ಮೇಲೆಲ್ಲ ಹುಲ್ಲು” ಎಂಬ ಮಾತುಗಳು ಸದಾ ಸಮೃದ್ಧಿಯನ್ನು ಕುರಿತು ಹೇಳುತ್ತವೆ.

“ಭರಣಿ ಮಳೆ ಬಂದರೆ ಧರಣಿಯಲ್ಲಿ ಬೆಳೆ”, “ಭರಣಿ ಸುರಿದು ಧರಣಿ ಬದುಕೀತು”, “ಭರಣಿ ಸುರಿದರೆ ಬರಗಾಲದ ಭಯವಿಲ್ಲ” ಎಂಬ ಗಾದೆಗಳಿವೆ. ಅಂದರೆ ವರ್ಷಪೂರ್ತಿ ರೈತಾಪಿ ವರ್ಗದ ಧವಸಧಾನ್ಯಕ್ಕೆ ಈ ಮಳೆ ಅಗತ್ಯ ಎಂದಾಯಿತಲ್ಲ. “ಭರಣಿ ಮಳೆಯಲ್ಲಿ ಬಡವ ಆರು ಕಟ್ಟು” ಎಂಬ ಗಾದೆ ಏಳು ಏನಾದರೂ ಮಾಡು ಎಂದು ರೈತನಿಗೆ ಪ್ರೋತ್ಸಾಹ ನೀಡುವಂತಿದೆ.

ಕೃತ್ತಿಕ ನಕ್ಷತ್ರದ ಮಳೆ ಸರಿಯಾಗಿ ಬಾರದೆ ಇದ್ದರೆ “ ಕೃತ್ತಕೆ ಮಳೆಯು ಕಿರುಬನ ಹಿಡಿದಂತೆ” ಹುಳುಕಕೃತ್ತಿಕೆ ಎಂದು ವ್ಯಂಗ್ಯವಾಡುತ್ತಾರೆ. ಒಂದು ವೇಳೆ ಒಳ್ಳೆ ಮಳೆ ಬಂದರೆ “ಕೃತಿಕೇಲಿ ಮಳೆ ಬಂದರೆ ಕೇರಿದಷ್ಟು ಎಳ್ಳು”  ಎಂದು ಹೊಗಳುತ್ತಾರೆ.  ಅಂದರೆ ಈ ಮಳೆಯಲ್ಲಿ ಹುಚ್ಚೆಳ್ಳು ಚೆನ್ನಾಗಿ ಬರುವಂತಹ ಕಾಲ ಇಲ್ಲಾವಾದರೆ ಖಾದ್ಯತೈಲಗಳ ಬೆಲೆ ಗಗನಮುಟ್ಟುತ್ತವೆ ಎಂಬ ತಿಳಿವಳಿಕೆ ಜನಪದರಲ್ಲಿ ಇತ್ತು. “ಕೃತ್ತಿಕ ನಕ್ಷತ್ರ ಕಾದರೆ ಗದ್ದೆಗೆ ಒಳ್ಳೆಯದು” ಎನ್ನುತ್ತಾರೆ. ಆ ಸಮಯಕ್ಕೆ ಅರಿದರೆ ಕೃತ್ತಿಕೆಯ ಮಳೆಯ ಸಂದರ್ಭದಲ್ಲಿ ಭತ್ತವನ್ನು ಬಿತ್ತಿ ಸಸಿ ಮಾಡಿಕೊಂಡರೆ ಗದ್ದೆ ಬೆಳೆಯಲು ಅನುಕೂಲ ಎಂಬ ಮಾತುಗಳು  ರೈತರ ಅನುಭವವನ್ನು ಹೇಳುತ್ತವೆ.

ಮುಗಿಲ ಮಳೆ ಬೀಳದೆ ಇದ್ದಾಗ ರೈತರ ಬದುಕು ಕಣ್ಣೀರು ಪ್ರವಾಹವೇ ಸರಿ ಅಂತಹ ಮಳೆಯನ್ನು ಕರೆಯಲು ಮಳೆರಾಯನಿಗೆ ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಅದರಲ್ಲಿ ತಿಂಗಳ ಮಾಮನ ಪೂಜೆ, ಕಪ್ಪೆ, ಕತ್ತೆಗಳ ಮದುವೆಗಳನ್ನು ಮಾಡುತ್ತಾರೆ. ಹಾಗೆ ಅರಳಿ-ಬೇವಿನ ಮರಗಳಿಗೆ ಮದುವೆ ಮಾಡಿಸುವುದು ವಾಡಿಕೆ. ರೈತನ ಒಡನಾಡಿ ಈ ಮಳೆಗೆ ಇನ್ನಿಲ್ಲದ ಸ್ಥಾನವಿದೆ. ರೋಹಿಣಿ ಮಳೆ ಬರುವ ಪೂರ್ವದಲ್ಲಿ ಭೂಮಿ ಸತತವಾಗಿ ಎಂಟು ತಿಂಗಳು ಬಿಸಿಲಲ್ಲಿ ಬೆಂದು ಹೋಗಿರುತ್ತದೆ. ಈ ಮಳೆ ಬಂದಾಗ ಭೂಮಿ ತನ್ನ ಒಡಲಲ್ಲೇ ಇರಿಸಿಕೊಂಡ ಬೀಜಗಳನ್ನು ಹೊರಚೆಲ್ಲಿ ಪ್ರತಿಯೊಂದು ಕಡೆಗೂ ಪಸರಿಸಿ, ಮೊಳಕೆಯೊಡೆದು ಹಸಿರ ಹಾಸಿಗೆಯಂತಾಗುತ್ತದೆ.

ಅಷಾಢ ಮಾಸದ ಸಂದರ್ಭದ ಮಳೆ ನಕ್ಷತ್ರ ರೋಹಿಣಿ “ರೋಹಿಣಿ ಮಳೆ ಬಂದರೆ ಒಣಿಯಲ್ಲಿ ಕೆಸರು.” “ರೋಹಿಣಿ ಅರೋಹಣಿ” , “ ರೋಹಿಣಿ ಮಳೆ ಬಂದರೆ ಓಣಿಯೆಲ್ಲಾ ಜೋಳ”, ‘ರೋಹಿಣಿ ಮಳೆ ಬಂದರೆ ಕಣವೆಲ್ಲ ರಾಗಿ’ ಅಂದರೆ ದಕ್ಷಿಣ ಕರ್ನಾಟದ ಮುಖ್ಯ ಬೆಳೆ ರಾಗಿಗೂ, ಉತ್ತರ ಕರ್ನಾಟಕಕ್ಕೂ ಜೋಳಕ್ಕೂ ಈ ಮಳೆ ಅನುಕೂಲವೆಂದು ಹೇಳುವ  ಈ ಮುಂತಾದ ಗಾದೆಗಳು ಪ್ರಚಲಿತವಾಗಿವೆ. ಸೋನೆ ಮಳೆಯ ಆರಂಭದ ಕಾಲ ಜೋಳ ಬಿತ್ತಿದರೆ ಉತ್ತಮ ಫಸಲು ಕೈಸೇರುತ್ತದೆ ಎಂಬ ನಿರೀಕ್ಷೆ ರೈತನದಾಗಿತ್ತು. ಹಾಗಾಗಿ ಆಹಾರ ಧಾನ್ಯದ ಬಿತ್ತನೆಗೆ ರೈತ ಈ ಮಳೆಗೆ ಕಾತರಿಸುತ್ತಿದ್ದನು.

ಮುಂದಿನ ನಕ್ಷತ್ರ ಮೃಗಶಿರಾ. ಮೃಗಶಿರಾ ಮಳೆ ಜಾನಪದರಲ್ಲಿ  ಮಿರ್ಗಿಮಳೆ ಎಂದು ಕರೆಸಿಕೊಂಡಿದೆ. ಈ ನಕ್ಷತ್ರದ ಹುಟ್ಟುವ ಸಂದರ್ಭದಲ್ಲಿ ನಾಟಿ ವೈದ್ಯರು ಉಬ್ಬಸ, ಅಲರ್ಜಿ ಮುಂತಾದ ರೋಗಗಳಿಗೆ ಔಷಧಿ ಕೊಡುವುದಿದೆ. “ಮೃಗದ ಶಿರದಲ್ಲೂ ಮಳೆ”  “ಮೃಗಶಿರೆಯಲ್ಲಿ ಮಿಸುಕಾಡಿದರೆ ನೆರೆ ಬಂತು” ಎಂಬ ಮಾತುಗಳು ಇವೆ ಅಂದರೆ ಎಲ್ಲಾ ಪಾದಗಳಲ್ಲೂ ಒಳ್ಳೆಮಳೆ ಸುರಿದರೆ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿರುತ್ತದೆ. ಸಾಧಾರಣವಾಗಿ ಮೃಗಶಿರ ಮಳೆ ರಭಸದಿಂದ ಬಿದ್ದು ಹೋಗುವುದು ಇಲ್ಲ, ಕಣ್ಣು ಕುಕ್ಕುವ ಬಿಸಿಲೂ, ಬೆವರು ಸುರಿಯುವಂಥ ಸೆಖೆಯೂ ಇರುವುದಿಲ್ಲ, ಹದವಾದ ಮಿತವಾದ ಮಳೆ ಈ ನಕ್ಷತ್ರದಲ್ಲಿ ಬರುತ್ತದೆ ಹಾಗಾಗಿ ಈ ನಕ್ಷದಲ್ಲಿ ನೆಟ್ಟ ಸಸಿಗಳು ಸಾಯುವುದಿಲ್ಲ.

“ಆರಿದ್ರಾ ಮಳೆ ಹೊಯ್ದರೆ ಆರು ನಕ್ಷತ್ರ ಮಳೆ ಹೊಯ್ತದೆ” ಎನ್ನುತಾರೆ. ಆರಿದ್ರ ನಕ್ಷತ್ರಕ್ಕೆ ರುದ್ರನು ಅಧಿದೇವತೆ, ಈತ ಭೂಮಿಗೆ ನೀರು ಕುಡಿಸಿ ಹೋಗುತ್ತಾನೆ. ಅನಂತರದ ಮಳೆಗಳಲ್ಲಿ ಭೂಮಿದೇವಿ ಹುಲ್ಲು ಪೈರುಗಳಿಂದ ಆಚ್ಛಾದಿತಳಾಗುತ್ತಾಳೆ. ಆರಿದ್ರ, ಪುನರ್ವಸು, ಪುಷ್ಯ, ಆಶ್ಲೇಷ, ಮಘೆ, ಪುಬ್ಬ ಈ ಆರು ಮಳೆ ಸತತವಾಗಿ ಬಂದರೆ ಭೂಮಿ ಸಂಪತ್ತಿನ ಒಡಲಾಗುತ್ತದೆ. ಆರಿದ್ರಾ ಮಳೆ ಸರಿಯಾಗಿ ಬರಲಿಲ್ಲವೆಂದರೆ ವರ್ಷವಿಡೀ ಬರಗಾಲ ಕಟ್ಟಿಟ್ಟಬುತ್ತಿ. ಅಂದರೆ ಧರಿತ್ರಿಯ ರಸೋತ್ಪತ್ತಿಗೂ ಮತ್ತು ಆರಿದ್ರಾ ಮಳೆಗೂ ಅವಿನಾಭಾವ ಸಂಬಂಧವಿದೆಯೆಂದಾಯಿತು ಅಲ್ಲವೇ?. ಇಲ್ಲಿ “ಆರಿದ್ರಾ ಮಳೆ ಆರದೆ ಹುಯ್ಯುತ್ತೆ”,  “ಅಮ್ಮನ ಮನಸ್ಸು ಬೆಲ್ಲದ ಹಾಗೆ ಆರಿದ್ರ ಹನಿ ಕಲ್ಲಿನಹಾಗೆ” ಎಂಬ ಮಾತುಗಳನ್ನು ಜನಪದರು ಸಂದರ್ಭವನ್ನು ಅನುಸರಿಸಿ ಹೇಳುತ್ತಿದ್ದರು.     

 “ಆಷಾಢದ ಗಾಳಿ ಬೀಸಿ ಬೀಸಿ ಬಡಿವಾಗ ಹೇಸಿ ನನ್ನ ಜೀವ ಹೆಂಗಸಾಗಬಾರದ” ಇದೇ ಗಾದೆಯ ಪಠಾಂತರ “ಆರಿದ್ರಾ ಗಾಳಿ ಬೀಸುವಾಗ ಹಾಳುಜೀವ ನಾನಾದ್ರು ಹೆಣ್ಣಾದ್ನ” ಎಂದು ಇದರರ್ಥ  ಒಂದು ಗಳಿಗೆಯಾದರು ಹೆಣ್ಣಾಗಬೇಕೆಂಬ¨ ಬಯಕೆ ರೈತನದಾಗಿರುತ್ತದೆ ಎಂದು  ಚಳಿಗಾಳಿ, ಮಳೆಗಾಳಿಗೆ ಕೆಲಸ ಮಾಡಲಾರದೆ ಹೆಂಗಸರಂತೆ ಬೆಚ್ಚಗೆ ಹಾಯಾಗಿ ಮನೆಯೊಳಗೇ ಇರಬಹುದಲ್ಲ ಎಂಬ ಬಯಕೆಯ ಭಾವ ರೈತನದ್ದು. ಆರಿದ್ರಾ ಮಳೆ ಹೆಚ್ಚಾದರೆ ದಾರಿದ್ರ್ಯ ಬರುತ್ತದೆ, ಸರಿಯಾದ ಪ್ರಮಾಣದಲ್ಲಿ ಮಳೆ ಬಂದರೆ ದಾರಿದ್ರ್ಯ ಹೋಗುತ್ತದೆ. “ಆರಿದ್ರ ಆದಾಂಗ ಹಿರಿಸೊಸಿ ಒಳಗೆ ಮಾಡಿದ್ದಾಂಗ “ ಎಂಬ ಗಾದೆ ಮಳೆಯ ಅನಿಶ್ಚಿತತೆಯನ್ನು ಸೂಚಿಸಿದರೆ  “ಆದರೆ ಆರಿದ್ರಾ ಇಲ್ಲಾಂದ್ರೆ ದರಿದ್ರ” ಎಂಬುದು ನಷ್ಟವನ್ನು ಸೂಚಿಸುತ್ತದೆ.

ಪುನರ್ವಸು ಮಳೆಗೆ ಭೂಮಿ ರಜಸ್ವಲೆಯಾಗುತ್ತಾಳೆಂದು ವರಹಾಮಿರಾಚಾರ್ಯರು ಬರೆದಿದ್ದಾರೆ. ನೆರೆ ಬಂದರೂ ಕಾಡು ಮೋಡಗಳಲ್ಲಿ ಹರಿದು ಬಂದು ಅಲ್ಲಿಯ ಜೀವಸತ್ವಗಳನ್ನೆಲ್ಲಾ ತಂದು ಭೂಮಿಯನ್ನು ಫಲವತ್ತಾಗಿಸುತ್ತಾಳೆ. ಸ್ತ್ರೀ ಪ್ರತಿತಿಂಗಳು ಬಹಿಷ್ಠೆಯಾಗಿ ದ್ರವಿಸುತ್ತಾಳೆ ಹಾಗೆ ಪುನರ್ವಸು ಮಳೆಯ ಸಂದರ್ಭದಲ್ಲಿ ಭೂಮಿ ರಜಸ್ವಲೆಯಾಗಿ ದ್ರವಿಸುತ್ತಾಳೆ. ಆ ದ್ರವದಿಂದ ಭೂಮಿಗೆ ಒಳ್ಳಯದೇ ಆಗುತ್ತದೆ. ಹಾಗಾಗಿ “ಪುನರ್ವಸೂನಾಂ ರಜಸ್ವಲಿ: ಧರಿತ್ರಿ”  ಎಂದಿರುವುದು ಮಳೆಯ ಅರ್ಭಟ ಈ ನಕ್ಷತ್ರದಲ್ಲಿ ಹೆಚ್ಚಾಗಿಯೇ ಇರುತ್ತದೆ.

“ಪುನರ್ವಸು ಬಿತ್ತೋ ಹೆಣಕ್ಕೂ ಸುಸ್ತು” ಎಂಬ ಮಾತುಗಳಿವೆ. ಆಟಿ ಮಳೆ ಈ ಕಾಲದಲ್ಲಿ ಇರುತ್ತದೆ. ಮೋಡ ಯಾವಗಾಲೂ ಕವಿದೇ ಇರುತ್ತದೆ. ಮತ್ತೆ ಭರಣಿಮಳೆಯಲ್ಲಿ ದೊಡ್ಡ ಮೋಡಗಳು ಕವಿಯುವುದನ್ನು ಜಾನಪದರು ಹೇಳುತ್ತಾರೆ. ಪುಷ್ಯ ಮಳೆ ಬಂದರೆ “ಹೆಣ ಎತ್ತಲೂ ಬಿಡುವುದಿಲ್ಲ”  ಎಂದರೆ ಜಡಿ ಮಳೆ ಇರುತ್ತದೆ ಎಂದದರ್ಥ ಒಂದುವೇಳೆ ಈ ಮಳೆ ಸರಿಯಾಗಿ ಬಾರದೆ ಇದ್ದರೆ “ಪುಷ್ಯೇ ಪುಸ್ಸೇ” ಎನ್ನುತ್ತಾರೆ.

“ಆಶ್ಲೇಷ ಮಳೆ ಹೊಯ್ದು ಸೊಸ್ಲು ಬೆಟ್ಟಕೇರಿತು”  ಎಂಬ ಗಾದೆಯಲ್ಲಿ ಮಳೆ ವಾಡಿಕೆಗಿಂತಲೂ ಹೆಚ್ಚಾಗಿ ಬಂದು ಕೆರೆಕಟ್ಟೆಗಳಲ್ಲಿ ನೀರು ಆವಕವಾಗಿ ಚಿಕ್ಕಚಿಕ್ಕ ಮೀನಿನ ಮರಿಗಳೆಲ್ಲ  ಹೊರಬಂದು ಅಡ್ಡಾಡುವುದನ್ನು ಗಮನಿಸಿ ಈ ಮಾತನ್ನು ಹೇಳಿದಂತಿದೆ. “ಆಸ್ಲೆ ಮಳೆ ಕೈ ತುಂಬ ಬೆಳೆ”  ಎಂಬ ಗಾದೆ ಲಾಭವನ್ನು “ಆಸ್ಲೆ ಮಳೆ ಈಸಾಲಾರದ ಹೊಳೆ” ಮಳೆಯಲ್ಲಿನ ಹೆಚ್ಚಳವನ್ನು ಸೂಚಿಸುತ್ತದೆ.

ಮಖ ನಕ್ಷತ್ರದ ಮಳೆಗೂ ಗೌರಿಹಬ್ಬಕ್ಕೂ ಅವಿನಾಭಾವ ಸಂಬಂಧ​ ಇದನ್ನು “ಮಘೆ ಮಳೆ” ಎಂದು ಕರೆಯುತ್ತಾರೆ ಶ್ರೀಗೌರಿ ಭೂಮಿಗೆ ಇಳಿದು ಬರುವ ಕಾಲ ಎಂಬ ನಂಬಿಕೆ ಜಾನಪದರದ್ದು ಈ ಮಳೆ ಯಾವ ಮುನ್ಸೂಚನೆಯನ್ನೂ ಕೊಡದೆ ಗಂಟೆ/ಎರಡುಗಂಟೆಗಳ ಕಾಲ ಧೋ ಎಂದು ಸುರಿದು ಥಟ್ಟನೆ ನಿಂತುಬಿಡುತ್ತದೆ. “ಮಘೆಮಳೆ ಬಂದರೆ ರೈತನಿಗೆ ಉಡಿದಾರ ಕಟ್ಟಿದ್ದಂಗೆ”  ಈ ಗಾದೆ ರೈತನಿಗೆ ಬಿಡುವಿಲ್ಲದ ಕೆಲಸವನ್ನು ಸೂಚಿಸುತ್ತದೆ. “ಬಂದರೆ ಮಘೆ ಇಲ್ಲದಿದ್ದರೆ ಧಗೆ”, “ಬಂದರೆ ಮಘೆ ಹೋದ್ರೆ ಹೊಗೆ” ಎಂಬ ಗಾದೆಗಳು ರೈತನಿಗೆ ಆಗುವ ಆನಾನುಕೂಲವನ್ನು ಸೂಚಿಸುತ್ತವೆ.. ಹಾಗೊಂದು ವೇಳೆ ಈ ಮಳೆಯಿಂದ ರೈತರಿಗೆ ಬಾರಿ ಅನುಕೂಲವಾಗಿ ಬಿಟ್ಟರೆ “ಮಘೆ ಮಳೆ ಮೊಗೆ ಮೊಗೆದು ಕೊಡುತ್ತದೆ” ಎನ್ನುತ್ತಾರೆ. ಹಾಗೆ ಮಾತಿಗೆ ಯಾರಾದರು ಕೆರೆ ತುಂಬಿದೆಯೆ? ಎಂದರೆ “ತುಂತುರು ಮಳೆಗೆ ತೂಬು ಒಡೆಯುತ್ತಾ” ಎಂದು ಮಳೆಯನ್ನು ರೈತರು ಅಣಕಿಸುತ್ತಾರೆ.

ಪುಬ್ಬೇ ಮಳೆ (ಪೂರ್ವಾಭಾದ್ರನಕ್ಷತ್ರ) ಬಂದು  “ಗುಬ್ಬಿ ಕೆರೆ ತುಂಬ್ತು” ಎಂಬ ಗಾದೆ ವಿಶಾಲವಾದ ಕೆರೆ ಗುಬ್ಬಿಕೆರೆ ತುಂಬಿದೆ ಅಂದರೆ ಅಷ್ಟೋಂದು ಧಾರಕಾರ ಮಳೆ ಸುರಿದಿದೆ ಎಂಬುದನ್ನು ಧ್ವನಿಸುತ್ತದೆ. ಒಂದು ವೇಳೆ ಮಳೆ ಸರಿಯಾಗಿ ಬಾರದೆ ಇದ್ದರೆ “ಪುಬ್ಬೆ ಮಳೆ ಬಂದರೆ ಗುಬ್ಬಿ ತಲೆಯೂ ತೋಯದು” “ಹುಬ್ಬೆ ಮಳೆಯಲ್ಲಿ ಬಿತ್ತಿದರೆ ಹುಲ್ಲು ಇಲ್ಲಿ ಕಾಳೂ ಅಲ್ಲಿ” ಎಂಬ ಗಾದೆಗಳು ಜಾನಪದದಲ್ಲಿ ಕಾಣಬಹುದು. “ಹುಬ್ಬೆ ಮಳೆ ಅಬ್ಬೆ ಹಾಲು ಸವಿದಂತೆ” ಪ್ರಯೋಜನವಿಲ್ಲ ಎಂಬುದೇ ಇದರ ಅರ್ಥ.

“ಉತ್ತರೆ ಮಳೆ ಹೊಯ್ದು ಉತ್ತೋ ಎತ್ತು ಕೆರೆಗೆ ಬಿತ್ತು”.  ಈ ಗಾದೆ ಮಳೆಯ ತೀವ್ರತೆಯನ್ನು ವಿವರಿಸುತ್ತದೆ. ಹೆಚ್ಚಾಗಿ ಸುರಿದ ಮಳೆಯಿಂದ ಕೆರೆ ತುಂಬಿ ಹರಿಯುವಾಗ ಹೊಲದ ಕಡೆಯಿಂದ ಕೆರೆಯ ಏರಿಯ ಮೇಲೆ ನಡೆದು ಬರುವಾಗ ರಸ್ತೆಯಾವುದು ಕೆರೆಯಾವುದು ಎಂದು ತಿಳಿಯದೆ ಉಳೊ ಎತ್ತುಗಳು ಕೆರೆಪಾಲಾಗುತ್ತಿದ್ದವು ಎಂಬುದನ್ನು ವಿವರಿಸುತ್ತದೆ. ಈ ಗಾದೆಯನ್ನೇ ವಿವರಿಸುವ ಇನ್ನೊಂದು ಗಾದೆ “ಉಬ್ಬೆ ಮಳೆಗೆ ಉಬ್ಬು ತಗ್ಗು ಸಮ” ಎಂಬ ಗಾದೆಯನ್ನು ಸಂವಾದಿಯಾಗಿ ತೆಗೆದುಕೊಳ್ಳಬಹುದು.  ಒಕ್ಕಲಿಗನಾದವನಿಗೆ ಆಶೀರ್ವಾದದ ಮಳೆ ಎಂದು ಈ  ಉತ್ತರೆ ಮಳೆಯನ್ನೇ ಕರೆಯುತ್ತಾರೆ. ಇದನ್ನು ಉಬ್ಬೆ ಮಳೆ ಎಂದೂ ಕರೆಯುವುದಿದೆ.  “ಉಬ್ಬೆ ಮಳೇಲಿ ಮೋಡ ಉಬ್ಬುಬ್ಬಿ ಬೀಳುತ್ತದೆ”,  “ಉತ್ತರೆ ಮಳೆ ಬಿದ್ದರೆ ನಾಯಿಯೂ ಅನ್ನ ತಿನ್ನುತ್ತದೆ”.  ಎಂಬ ಗಾದೆಗಳು  ಮಳೆಯ ಸಂವೃದ್ಧಿಗೆ ಕನ್ನಡಿ ಹಿಡಿದಂತಿದೆ. ಜಾನಪದ ಕಥನ ಗೀತದ ಉತ್ತರದೇವಿಗೂ ಉತ್ತರೆ ಮಳೆಗೂ ಅವಿನಾಭಾವ ಸಂಬಂಧ. ಆಕೆಯ ತಾಯಿ ‘ನೀನುತ್ತರೆ ಮಳೆಯಾಗಿ ಹೊರಡವ್ವ’ ಎಂದಿದ್ದನ್ನು ಇಲ್ಲಿ ಗಮನಿಸಬಹುದು. “ಉತ್ತರೆ ಮಳೆ ಬಂದರೆ ಬಿತ್ತಿದೆಲ್ಲ ಫಲ ಉತ್ತರೆ ಮಳೆಗೆ ಹುಟ್ಟುವ ಹುಲ್ಲೆಲ್ಲಾ ಹೊಡೆ” ಮುಂತಾದ ಮಾತುಗಳು ಫಲವತ್ತತೆಯ ಸಂಕೇತ ಉತ್ತರೆ ಮಳೆ ಎಂಬುದನ್ನು ಧ್ವನಿಸುವುದಾದರೆ “ಉತ್ತರೆ ಸುರಿದರೆ ಹೆತ್ತವ್ವ ಪೊರೆದಂತೆ” ಎಂಬ ಮಾತುಗಳು ರೈತರು ಉತ್ತರೆ ಮಳೆಯನ್ನು ತಾಯಿಯಂತೆ ನಂಬಿರುವುದು ತಿಳಿಯುತ್ತದೆ.

 “ಹಸ್ತ ಇಲ್ದಿದ್ರೆ ಒಕ್ಕಲಿಗ ಹಲ್ಲು ಕಿಸ್ದ” ಅಂದರೆ ಹಸ್ತ ನಕ್ಷತ್ರದ ಮಳೆ ರೈತರಿಗೆ ಅತ್ಯವಶ್ಯಕವಾಗಿ ಬೇಕು ಧಾನ್ಯದಲ್ಲಿ ಕಾಳುಕಟ್ಟುವ ಸಮಯ ಎಂದು ಇದನ್ನು ಉಲ್ಲೇಖಿಸುತ್ತಾರೆ. “ಹಸ್ತದ ಮಳೆ ಬೀಳದಿದ್ದರೆ ಹೆತ್ತ ತಾಯಿಯೂ ಹಿಟ್ಟುಹಾಕಲ್ಲ”.  ಮಳೆ ಬಾರದಿದ್ದರೆ ವರ್ಷಪೂರ್ತಿ ತಿನ್ನುವ ಹಿಟ್ಟಿಗೆ ಬರ ಬರುತ್ತದೆ ಎಂಬ ಹಿನ್ನೆಯಿಂದ ಈ ಮಾತು ಹೇಳುವುದಿದೆ. “ಹಸ್ತೆಗೆ ಆರು ಕಾಯಿ ಚಿತ್ತೆಗೆ ಮೂರು ಕಾಯಿ” ಎಂಬ ಮಾತು ಬಾರದ ಮಳೆಯನ್ನು ಸಂಕೇತಿಸುತ್ತದೆ. ಹಸ್ತ ಚಿತ್ತೆ ಒಕ್ಕಲು ಮಗನಿಗೆ ಭಾಷೆಕೊಟ್ಟ ಮಳೆಗಳು ಯಾವ ಮಳೆ ಬಾರದಿದ್ದರು ಈ ಎರಡು ಮಳೆ ಬಂದು ರೈತರ ಹಿತ ಕಾಪಡುತ್ತವೆ. ಚಿತ್ತೆ ಮಳೆಯನ್ನು “ಕುರುಡು ಚಿತ್ತೆ” “ಅಣ್ಣನ ಮನೆಯಲ್ಲಿ ಬಿದ್ದರೆ ತಮ್ಮನ ಮನೆಯಲ್ಲಿ ಬೀಳಲ್ಲ” ಎಂದು ಜರಿಯುತ್ತಾರೆ ಇದರರ್ಥ ಈ ಮಳೆಯಲ್ಲಿ ವೈರುಧ್ಯವಿರುತ್ತದೆ ಎಂದು.

ಸ್ವಾತಿ ಮಳೆಗೂ ಮತ್ತು ರೈತರಿಗೂ ಅವಿನಾಭಾವ ಸಂಬಂಧ ಬಯಲುಸೀಮೇಯ ರೈತರಿಗೆ ಉತ್ತರೆ, ಸ್ವಾತಿ ಮಳೆಗಳ ಆಶ್ರಯವಾದರೆ ಮಲೆನಾಡ ರೈತನಿಗೆ ಪುನರ್ವಸು, ಪುಷ್ಯ ನಕ್ಷತ್ರಗಳು ಆಶ್ರಯ. ಮಳೆ ದೇವತೆ ಇಂದ್ರನನ್ನು ಕಂಡರೆ ನಮ್ಮ ಜಾನಪದರಿಗೆ ವೀಶೆಷ ಅಸ್ಥೆ ಹಾಗಾಗಿ ಮಳೆರಾಯ ದೇವೇಂದ್ರ ಎಂದು ಕರೆಯುವುದಿದೆ. “ಹೆತ್ಯಯ್ಯ ಅರ್ಜುನನಾಧರೆ ಮುತ್ತಯ್ಯ ದೇವೇಂದ್ರ” ಎಂಬ ಗಾದೆಯ ಮಾತು ಎಲ್ಲರಿಗೂ ತಿಳಿದಿರುವಂತಹದ್ದೆ. “ಸ್ವಾತಿ ಮಳೆ ಎಂದರೆ ಮುತ್ತಿನ ಮಳೆ” ಎಂದು ಕರೆಯುವುದು ಒಂದು ಕಡೆಯಾದರೆ, ಔಷಧೀಯ ಗುಣಗಳು ಈ ಸ್ವಾತಿ ಮಳೆ ನೀರಲ್ಲಿ ಇರುತ್ತದೆ ಎಂದು ಹಿರಿಯರು ಹೇಳುತ್ತಾರೆ. ನಮ್ಮ ಜಾನಪದರು ಸ್ವಾತಿ ಮಳೆ ನಕ್ಷತ್ರದಲ್ಲಿ ರೇಷ್ಮೆವಸ್ತ್ರವನ್ನು ಹೊರಹಾಕಿ ಗಾಳಿಯಾಡಿಸಿ ತೆಗೆದಿರಿಸಿದರೆ ಆ ವಸ್ತಗಳಿಗೆ ನುಸಿ ಹಿಡಿಯುವುದಿಲ್ಲ ಎಂಬ ಕಲ್ಪನೆಯನ್ನು ಹೊಂದಿದ್ದರು.

“ಸ್ವಾತಿ ಮಳೆ ಬಂದರೆ ಮುತ್ತಿನಂಥ ಬೆಳೆ”, “ಸ್ವಾತಿ ಮಳೆಯಾದರೆ ಚಾಪೆ ಕೆಳಗಿನದೂ ತೆನೆಯಾಗುತ್ತದೆ”  “ಸ್ವಾತಿ ಮಳೆ ಹೋದ ಮ್ಯಾಗ ಐತೇನಿ”  ಮುಂತಾದ ಗಾದೆ ಮಾತುಗಳನ್ನು ಅಕ್ಷರರ್ಷ ರೈತರ ಪಾಲಿಗೆ ಸ್ವಾತಿ ಮುತ್ತಿನಂತೆ ಅಮೂಲ್ಯವಾದದ್ದುಎಂಬುದು ಅರ್ಥೈಸುತ್ತದೆ. ದನಕರುಗಳನ್ನು ಉಣ್ಣೆಗಳು ಬಾಧಿಸುತ್ತಿದ್ದಲ್ಲಿ ಸ್ವಾತಿ ಮಳೆ ನೀರು ತಾಗಿದ ಕೂಡಲೆ ಅವುಗಳಿಗೆ ಅದರಿಂದ ಮುಕ್ತಿ ದೊರಕುತ್ತದೆ ಎಂಬ ನಂಬಿಕೆಯೂ ಇತ್ತು. ಸ್ವಾತಿ ಮಳೆ ನೀರನ್ನು ಮಣ್ಣಿನ ಅಥವಾ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ ೧೦ ಭಾಗ ಸಾಧಾರಣ ನೀರಿಗೆ ೧ ಭಾಗ ಈ ಮಳೆ ನೀರನ್ನು ಸೇರಿಸಿ ಬೆಳೆಗಳಿಗೆ ಸಿಂಪಡಿಸಿದರೆ ಕೀಟ ಭಾದೆ ನಿಯಂತ್ರಣಕ್ಕೆ ಬರುತ್ತದೆ ಎಂಬುದು ಹಿರಿಯರ ಮಾತು.

ಹಾಗೆ ನೇರವಾಗಿ ಬರುವ ಮಳೆ ನೀರನ್ನು ಸಂಗ್ರಹಿಸಿ ಹತ್ತಿ ಬಟ್ಟೆಯಲ್ಲಿ ಶೋಧಿಸಿ ಹಾಗೆ ನೇರವಾಗಿ ಬರುವ ಮಳೆ ನೀರನ್ನು ಸಂಗ್ರಹಿಸಿ ಹತ್ತಿಬಟ್ಟೆಯಲ್ಲಿ ಶೋಧಿಸಿ ಔಷಧಿಯಂತೆ ಬೇಕಾದಾಗ ಅಂದರೆ ಸುಟ್ಟಗಾಯಗಳಿಗೆ, ಕಿವಿನೋವಿಗೆ ಬಿಂದು ಬಿಂದುಗಳಾಗಿ ಉಪಯೋಗಿಸುವ ಜಾಣ್ಮೆ ಜಾನಪದಲ್ಲಿತ್ತು. ನೋವು ನಿವಾರಕ ಹಾಗು ನಂಜುನಿವಾರಕ ಗುಣ ಈ ಮಳೆ ನೀರಿಗೆ ಇರುತ್ತದೆ ಎಂಬ ಕಾರಣವನ್ನವರು ಕೊಡುತ್ತಿದ್ದರು. ಇತ್ತೀಚೆಗೆ ಈ ಸ್ವಾತಿ ಮಳೆ ನೀರು, ನೀರಿನ ಬಗ್ಗೆ ಹೆಚ್ಚು ಹೆಚ್ಚು ಸಂಶೋಧನೆಗಳಾಗಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. “ಸ್ವಾತಿ ಮಳೆಯಾದರೆ ನೂತವ್ವ ಹೋಗಳು”, “ಸ್ವಾತಿ ಮಳೆಯಲ್ಲಿ ಕಾಸುಗೊಂದು ಕುರಿ” ಎಂಬ ಗಾದೆಗಳು ಜನಜನಿತವಾಗಿದೆ.

“ವಿಶಾಖ ಮಳೆ ಗಿಡವಲ್ಲ ವಿಶ” ಎಂಬ ಮಾತೂಇದೆ. ಅಂದರೆ ಕಂಬಳಿಹುಳು ಈ ಮಳೆಯಿಂದ ಉತ್ಪತ್ತಿಯಾಗುತ್ತದೆ ಎಂಬ ಮಾತು, “ವಿಶಾಖಿ ಮಳೆ ಪಿಶಾಚಿ ಹಾಗೆ” ಎಂದು ಮಳೆ  ಎಡಬಿಡದೆ ಸುರಿದರೆ ಜಾನಪದರು ಗೊಣಗುತ್ತಾರೆ. ವಿಶಾಖಿ ಮಳೆ ಬಂದು ಮನೆ ಹಾಳೂ ಮಾಡಿತು ಎಂದು ಆದ ನಷ್ಟಕ್ಕೆ ನೇರವಾಗಿ ಜಾನಪದರು ಕೋಪಿಸಿಕೊಳ್ಳುತ್ತಾರೆ.   “ರಾಗಿ ಕೊಯ್ಲಿಗೆ ಅನೋರಾಗಿ ಬಂದು ಮನೇರಾಗಿ ಹೊತ್ತೋಯ್ತು” ಎಂಬ ಗಾದೆ ಮಾತು ರಾಗಿ ಕೊಯ್ಲಿಗೆ ಬಂದಾಗ ಈ ಮಳೆ ಬಂದರೆ ನಷ್ಟ ಎನ್ನುವುದನ್ನು ಸೂಚಿಸುತ್ತದೆ. “ಅನೂರಾಧ ಸುರಿದರೆ ಮನೋರೋಗ ಹೋಗುತ್ತೆ” ಎಂಬ ಗಾದೆಯನ್ನು ಇಲ್ಲಿ ಉಲ್ಲೇಖಿಸಬಹುದು. ಅನುರಾಧ ನಕ್ಷತ್ರ ಹುಳುಗಳನ್ನು ನಾಶ ಮಾಡುತ್ತದೆ ಎಂಬ ನಂಬಿಕೆ ಇದೆ.

ಇವೆಲ್ಲ​ಕ್ಕೆ ಹೊರತಾಗಿ ಪ್ರತಿಯೊಂದು ಮಳೆಯೂ ಒಂದೊಂದು ಜನಾಂಗದ ಮನೆಗಳಿಗೆ ಸಂಬಂಧಿಸಿದ್ದು ಎನ್ನುತ್ತಾರೆ. ಅಶ್ವಿನಿ ಮಳೆಯು ಹೂಗಾರರಿಗೆ, ಕೃತ್ತಿಗೆ ಮಳೆ ತಳವಾರರಿಗೆ, ಭರಣಿ ಮಳೆ ಅಗಸರಿಗೆ, ರೋಹಿಣಿ ಮಳೆ ಬಣಜಿಗರಿಗೆ, ಮೃಗಶಿರ ಮಳೆ ಸುಣ್ಣದವರಿಗೆ ಸಂಬಂಧಿಸಿದ್ದು ಎಂದು ಹೇಳುವುದಿದೆ. ಭರಣಿ ರೋಹಿಣಿ ಮಳೆಯಲ್ಲಿ ಜೋಳ, ಎಳ್ಳು, ತೊಗರಿ, ಅಲಸಂದೆ, ಸೂರ್ಯಕಾಂತಿ ಬಿತ್ತಿದರೆ ಮೃಗಶಿರ, ಆರಿದ್ರ ನಕ್ಷತ್ರದ ಮಳೆಯಲ್ಲಿ ಕಡಲೆಕಾಯಿ ಸಜ್ಜೆಯನ್ನು, ಮಘೆ ಮಳೆಯ ಕಾಲದಲ್ಲಿ ನವಣೆ ಹತ್ತಿಯನ್ನು ಉಳಿದ ಮಳೆಗಳಲ್ಲಿ ಬೇಳೆಕಾಳುಗಳನ್ನು ಬಿತ್ತುವುದು ವಾಡಿಕೆಯಾಗಿದೆ.

ಮಲೆ ಮಹದೇಶ್ವರ ಜಾನಪದ ಕಾವ್ಯದಲ್ಲಿ “ಕಾರೆಂಬೋ ಕತ್ತಲ್ಯ ಮಾಡವ್ನೆ ಜೋರೆಂಬ ಮಳೆಯ ಕರುದವರೆ, ಒನೊನ್ ಚಂಡುನ ಗಾತ್ರದ ಹನಿಗಳು ಅಟ್ಟಬೆಟ್ಟಾಕೆ ಸುರಿಯಾವು ಗಂಗೆ ಸುರಿಯುವ ರವುಸೀಗೆ ಭೂಮಿ ಆಕಾಸ ಒಂದಾದೊ” ಎಂಬ ಮಾತುಗಳಲ್ಲಿ ವಿವರಿಸಿ, ಶಿಷ್ಟ ಸಾಹಿತ್ಯವನ್ನು ಹಿಂದಿಕುಕ್ಕವ ಅರ್ಥಭರಿತವಾದ, ಸುಲಭವಾದ ಮಾತುಗಳು ಅಕ್ಷರಸ್ಥರೂ ಅನಕ್ಷಸ್ಥರೂ ಒಂದೇ ಸಲಕ್ಕೆ  ಅರ್ಥಮಾಡಿಕೊಳ್ಳಬಹುದಾದ ವರ್ಣನೆ ಇದನ್ನು ಕಟ್ಟಿದ ನಮ್ಮ ಜಾನಪದರಿಗೆ ಉಘೇ ಎನ್ನಲೇಬೇಕು.

ಮುಂಗಾರು ಮಳೆಯು ಅರ್ಭಟವನ್ನು ವರ್ಣಿಸುವ ಗಾದೆಯನ್ನು ನಾವು ಕಾಣಬಹುದು “ಮುಂಗಾರು ಮಳೆಗೆ ಸಿಗಬೇಡ ಮರೆತು ಮಾತಿಗೆ ಸಿಗಬೇಡ” ಇವೆರಡೂ ದೇಹ ಹಾಗು ಮನಸ್ಸಿನ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ ಎಂದಿದ್ದಾರೆ ಜಾನಪದರು. “ಮಳೆ ಬಂದರೆ ಕೇಡೇ! ಮಗ ಉಂಡರೇ ಕೇಡೇ!” ಎಂಬಲ್ಲಿ ಮಳೆ ಜೀವಮಾನದ ಸಂಕೇತ ಎಂಬ ಭಾವವಿರುವುದನ್ನು ಗಮನಿಸಬಹುದು. ಬಿಳೋ ಮಳೆಗಳಲ್ಲೂ ಅನೇಕ ವಿಧಗಳನ್ನು ಕಾಣಬಹುದು. ಧೂಳಡಗೋ ಮಳೆ, ಹನಿ ಮಳೆ, ಹದ ಮಳೆ, ಜಡಿ ಮಳೆ, ಸೋನೆ ಮಳೆ, ಬಟ್ಟೆ ಹದ, ಬಟ್ಟೆ ತೇವ, ಕಂಬಳಿ ಹದ, ದೋಣಿ ಹದ, ಉಕ್ಕೆ ಹದ, ಬಿತ್ತನೆ ಹದ ಮುಂದಾದ ಪದಗಳನ್ನು ಜಾನಪದರು ಮಳೆಯ ಪ್ರಮಾಣಕ್ಕೆ ಅನುಗುಣವಾಗಿ ತಮ್ಮ ಅನುಭವದ ಹಿನ್ನೆಲೆಯಿಂದ ಬೇರೆ ಬೇರೆ ಹೆಸರಿನಿಂದ ಕರೆಯುತ್ತಿದ್ದರು.

ಆಡ್ಡ ಮಳೆಯೆಂಬ ಪದ ಎಲ್ಲರಿಗೂ ತಿಳಿದಿರುವಂತದೆ. ಶಿಷ್ಟರು ಇದನ್ನು ಅಕಾಲಿಕ ಮಳೆ ಎನ್ನುತಾರೆ. “ಅಕಾಲಿಕ ಮಳೆಯಿಂದ, ಮತಿಹೀನ ಮಕ್ಕಳಿಂದ ಸುಖವಲ್ಲ” ಎಂಬ ಮಾತು ಅಕಾಲಿಕ ಮಳೆ ಸೃಷ್ತಿಸುವ ಅವಾಂತರಗಳನ್ನು ಕಣ್ಣಿಗೆ ಕಟ್ಟಿಕೊಡುತ್ತದೆ. ಈ ಮಳೆ ಯಾವಗ ಬರುತ್ತದೆಯೋ ಹೇಳಲಾಗದು ಅದಕ್ಕೆ ಜಾನಪದರು “ಅಡ್ಡ ಮಳೆ ಬಂದು ದೊಡ್ಡ ಕೆರೆ ತುಂಬಿತು” ಎಂಬ ಗಾದೆಯನ್ನು ಹೇಳಿದ್ದಾರೆ. ವಿಪರೀತ ಮಳೆ ಬಂದು ಬೆಳೆಯನ್ನು ಹಾಳು ಮಾಡಿದರೆ “ಮೆದೆಗೆಡುಕ, ಕಣಗೆಡುಕ” ಎಂದು ಬಯ್ದು ತಮ್ಮ ಅಸಮಾಧಾನ ಹೊರಹಾಕುತ್ತಾರೆ. ಒಂದು ವೇಳೆ ಮಳೆ ಕೈಕೊಟ್ಟರೆ ಮಳಿಹೊಯಿತು ಎಂದು “ಮಳೆರಾಯನ ಬಯ್ಯಬೇಡ, ಒಕ್ಕಾಳ ಹೊನ್ನ ಸೆರಗಲ್ಲಿ ಕಟ್ಟಕೊಂಡು ಸಾಲಕ್ಕೆಹೊಗ್ವನೆ ಮಳೆರಾಯ”  ಎಂದು ಸಾಲಮಾಡಿಯಾದರು ಮಳೆರಾಯ ಮಳೆತಂದು ರೈತರನ್ನು ಕಾಪಾಡುತ್ತಾನೆ ಎಂಬ ವಿಶ್ವಾಸವಿತ್ತು.ಆದರೆ ಈಗ  ಕಾಲಕ್ಕೆ ಸರಿಯಾಗಿ ಮಳೆ ಬಾರದೆ ಇದ್ದರೆ ಮೋಡ ಬಿತ್ತನೆ ಮಾಡಿಯದರೂ ಮಳೆ ತರಿಸುತ್ತಾರೆ. ವಿಜ್ಞಾನಿಗಳ ಸಂಶೋಧನೆ ಅಷ್ಟು ಮುಂದುವರೆದಿದೆ.

“ಹೊಳೆಯಿಂದಾಚೆ ಹೆಣ್ಣುತರಬೇಡ, ತೊರೆದಂಡೆ ಹೊಲ ಬೇಡ” ಎಂಬ ಮತ್ತೊಂದು ಗಾದೆ ಇದರಲ್ಲಿ ಹೊಳೆಯಿಂದಾಚೆಯ ಹೆಣ್ಣನ್ನು ಆಗಾಗ ತವರಿಗೆ ಕಳಿಸುವುದು ಕಷ್ಟ ಎಂದಾಗ  ತೊರೆಯ ಬದಿಯ ಹೊಲ ಯಾವಾಗಲೂ ಅಪಾಯಕಾರಿ ಎಂಬುದನ್ನು ಧ್ವನಿಸುತ್ತದೆ. ಈಗ ಹೊಳೆಯಾಚೆ ಹೋಗಿ ಸಾಗರದಾಚೆಯ ಟ್ರೆಂಡ್ ಬಂದಿದೆ ಬಿಡಿ. ರೈತರಿಗೂ ಕೃಷಿಗೂ ಅವರ ಸಾಂಸಾರಿಕ ಜೀವನವನ್ನು ಬೆಸೆಯುವ ಗಾದೆ ಮಾತುಗಳು ನಮ್ಮಲ್ಲಿವೆ. ‘ಗದ್ದೆಗೆ ತೆವರು ಇರಬೇಕು ಹೆಣ್ಣಿಗೆ ತವರು ಇರಬೇಕು’  ಎಂಬ ಗಾದೆ ಹೇಳುವವರು ಕೇಳುವರಿಗೆ ಒಂದು ಪರಿಧಿ ಇರಬೇಕು ಎಂಬುದನ್ನು ಅರ್ಥೈಸುತ್ತದೆ. “ಮಳೆ ಇಲ್ಲದ ಪೈರು ಮಾತೆ ಇಲ್ಲದ ಕೂಸು ಸಮ”. ಈ ಗಾದೆ ಮಳೆ ಹಾಗು ತಾಯಿಯ ಮಹತ್ವವನ್ನು ಸಾರುತ್ತದೆ. “ಮಳೆಗಾಲದ ಮಳೆ ನಂಬಲಾಗದು ಮನೆಹೆಂಡತಿ ನಗೆ ನಂಬಲಾಗದು” ಎಂಬ ಮಾತು ಅತಿನಂಬಿಕೆ ಒಳೆಯದಲ್ಲ ಎಂದು ಹೇಳುತ್ತದೆ.

“ಅನ್ನಹಾಕಿದ ಮನೆ ಗೊಬ್ಬರ ಹಾಕಿದ ಹೊಲ” ಎಂದೂ ಕೆಡಲ್ಲ ಎಂಬ ಗಾದೆಯಲ್ಲಿ ಉಳುವ ಹೊಲಕ್ಕೆ ಬೆಳೆವ ಹೊಲಕ್ಕೆ ಪೋಷಕಾಂಶ ಮುಖ್ಯ ಎಂದಿದ್ದಾರೆ. ರೈತರು  ಅಂದು ಬಳಕೆ ಮಾಡುತ್ತಿದ್ದ ಅಂದಿನ ಸಾವಯವ, ಸಗಣಿ ಗೊಬ್ಬರ, ಗಂಜಲ ಹಾಗು ಬೇವಿನ ಮಿಶ್ರಣ ದೊಡ್ಡ ಕೀಟನಾಶಕ ಇಂದು ಹೆಚ್ಚು ಬಳಕೆಯಾಗಬೇಕಾಗಿದೆ. ಹಾಗಾದರೆ ಬೆಳೆದ ಬೆಳೆ ಪೌಷ್ಠಿಕತೆಯಿಂದ ಕೂಡಿರುತ್ತದೆ. ಹಾಗೆ ಭೂಮಿಯನ್ನು ಉತ್ತು ಹದಮಾಡಿಕೊಂಡು  ಉತ್ತು ಬಂದ ಮಗನನ್ನು ಮಾತನಾಡಿಸುವಂತಿರಲಿಲ್ಲ. ಕಾರಣ ಆಯಾಸದಿಂದ ಕಿಡಿಕಿಡಿಯಾಗುತ್ತಾನೆ ಎಂಬ ಕಾರಣ ಇರಬಹುದು. “ಹದ ಬಂದಾಗ ಹರಗಬೇಕು,” “ಬೆದೆ ಬಂದಾಗ ಬಿತ್ತಬೇಕು”

“ಬಿತ್ತನೆ ಕಾಲದಲ್ಲಿ ವಿರಾವವಿಲ್ಲ ಮರಣದ ನಂತರ ಭಯವಿಲ್ಲ”, “ಬಿತ್ತದೆ ಬೆಳೆಯಾಗದು  ಉಡದೆಕೊಳೆಯಾಗದು”, “ಒಂದು ಅಗೆತ ಹತ್ತು ಉಳುಮೆಗೆ ಸಮ” ಎಂಬ ಮಾತುಗಳು ರೈತ ಪರಿಶ್ರಮ ವಹಿಸಬೇಕು ಎಂಬುದನ್ನು ಸೂಚಿಸುತ್ತವೆ.

ರೈತ ಹೊಲದಲ್ಲಿ ಬೀಜ ಬಿತ್ತಿ ಮರ ಹೊಡೆಯುವಾಗ ಚಿಕ್ಕ ಮಕ್ಕಳಿಗೆ ಅದರ ಮೇಲೆ ಕುಳಿತುಕೊಳ್ಳುವುದೆಂದರೆ ಎಲ್ಲಿಲ್ಲದ ಸಂತೋಷ. ಹಾಗೆ ಮಳೆಯಲ್ಲಿ ಉಳಿಮೆ ಮಾಡುವ ರೈತ ಅಂದಿಗೆ ಗೋಣಿಚೀಲವನ್ನೊ, ಅಡಿಕೆಹಾಳೆಯ ಟೋಪಿಗಳನ್ನು ಹಾಕಿಕೊಳ್ಳುತ್ತಿದ್ದ ಆದರೀಗ ನಾಗರೀಕತೆ ಎಂಬಂತೆ ಖಚಿiಟಿ ಅಚಿoಚಿಣಗಳು  ಟಿಙಟoಟಿ ಛಿಚಿಠಿಗಳು ಬಂದಿವೆ. ಬೀಸುತ್ತಿದ್ದ ಚಾಟಿ ಆಗ ತೆಂಗಿನ ನಾರಿನ ಹಗ್ಗವಾಗಿದ್ದರೆ ಈಗ ನೈಲಾನ್ ದಾರದ್ದು. ಶ್ರಮ ಪರಿಹಾರಕ್ಕೆ ಹಾಡು ಹೇಳಿಕೊಂಡು ಉಳುತ್ತಿದ್ದ ರೈತ ಈಗ ಹಾಡು ಹಾಕಿಕೊಂಡು ಉಳುಮೆ ಮಾಡುತ್ತಿದ್ದಾನೆ.

ಮಾರುದ್ದ ಪೈರಾಗಲಿ ಮೊಳದುದ್ದ ತೆನೆಯಾಗಲಿ
ಬಡವನ ಮನೆಗೆ ಸಿರಿಬರಲಿ ಭೂಮಿತಾಯ
ಕಂದಯ್ನ ಹಸಿವು ಇಂಗೋಗ್ಲಿ||  ಎಂಬ ಬಯಕೆ ರೈತನದಾಗಿತ್ತು ಕಷ್ಟಪಡುವ ರೈತನ ಈ ಬಯಕೆ ಸಾಧುವೇ ಅಲ್ಲವೇ? ನಮ್ಮ ಜಾನಪದರು ಬಹಳ ಗಟ್ಟಿಗರು ಬೆಳೆ ನಷ್ಟವಾದರೂ ಯೋಚನೆ ಮಾಡುತ್ತಿರಲಿಲ್ಲ ಎಂಬುದಕ್ಕೆ “ಆದರೆ ಒಂದು ಅಡಿಕೆ ಮರ ಹೋದರೆ ಒಂದು ಗೋಟು” ಅಡಿಕೆಗೆ ಮಾಡಿದ ಸಾಲ ಬಾಳೆ ಬೆಳೆದು ತೀರಿಸಿದ ಎಂಬ ಗಾದೆಯನ್ನು ಉದಾಹರಿಸಬಹುದು “ಒಣಭೂಮಿಗೆ ಹಟ್ಟಿಗೊಬ್ಬರ,ತೇವದ ಭೂಮಿಗೆ ಹಸುರೆಲೆಗೊಬ್ಬರ, ಸೋನೆಯಲ್ಲಿ ಬಾಳೆಚೆನ್ನ, ಅಡಿಕೆ ಚೆನ”್ನ ಎಂಬ ಗಾದೆಗಳು ಕೃಷಿಕರ ಪರಿಣತಿ ಹೇಳುತ್ತವೆ.   “ತೆಂಗು ಬೆಳೆದವನಿಗೆ ಗಂಡು ಹಡೆದವಳಿಗೆ ಚಿಂತೆ ಇಲ್ಲ” “ತೋಟ ಬೆಳೆದವನಿಗೆ ಕೋಟಲೆಯಿಲ್ಲ”, “ಬಾಳೆ ಬೆಳೆದರೆ ಬಾಳು ಬಂಗಾರ,ಬಡವನಿಗೆಬಾಳೆ,ಬಲವಂತನಿಗೆ ಕಬ್ಬು” ಎಂಬ ಗಾದೆಗಳು ವಾಣಿಜ್ಯ ಕೃಷಿಯ ಮಹತ್ವವನ್ನು ಹೇಳುತ್ತವೆ. ನಾವಂದುಕೊAಡಷ್ಟು ರೈತ ಉದಾರಿಯೂ ಅಲ್ಲ ಖರ್ಚು ವೆಚ್ಚಗಳ ಬಗ್ಗೆ ನಿಗಾ ಇಡುತ್ತಿದ್ದನು ಎಂಬುದಕ್ಕೆ “ನೆಂಟ್ರು ಮನೆಗೆ ಮೂಲ ಕುಂಟೆತ್ತು ಹೊಲ್ಕೆ ಮೂಲ”, “ತಿಪ್ಪೆಗೆ ಎಸೆಯೊದಾದ್ರು ಎಣಿಸಿ ಹಾಕು” ಎಂಬ ಗಾದೆಗಳನ್ನು ನಿದರ್ಶನವನ್ನಾಗಿ ತೆಗೆದುಕೊಳ್ಳಬಹುದು.

ರೈತನ ಈತನ ಹುಟ್ಟುಗುಣ ದುಡಿಮೆ “ದುಡಿಮೆಯೇ ದೇವರು ಕೈಕೆಸರಾದರೆ ಬಾಯಿ ಮೊಸರು” ಎಂದು ನಂಬಿದ್ದವರು ಅದಕಾಗಿಯೇ ಜಾನಪದರು “ಒಕ್ಕುವುದು ರೈತನಗುಣ ನೆಕ್ಕುವುದು ನಾಯಿಗುಣ” ಎಂದಿರುವುದು. “ಕೆಬ್ಬೆ ಹೊಲ ಮಾಡಿದರೆ ಕಿಬ್ಬೊಟ್ಟೆಗೂ ಹಿಟ್ಟು ಸಿಗಲ್ಲ” ಅಂದರೆ ಆ ಮಣ್ಣು ಅಷ್ಟು ಫಲವತ್ತಾದುತಲ್ಲ ಎಂಬುದು ರೈತರ ಅನುಭವದ ಮಾತಾಗಿದೆ. “ಕುರುಡನ ಮಳೆಗೆ ಕಲ್ಲಂಗ್ಡಿ ಉರಿದ್ರೆ ಉರುಳಿ ಉರುರುಳಿ ಕಾಯಿ ಬಿಡ್ತವೆ”  ಎಂಬ ಗಾದೆ ಕೃಷಿ ಸಂಬಂಧ ಜ್ಞಾನವನ್ನು ಭೋದಿಸುತ್ತವೆ. 

ಮುಂಗಾರಿನ ಹಂಗಾಮಿನಲ್ಲಿ ವರ್ಷಕ್ಕಾಗುವಷ್ಟು ಧವಸಗಳನ್ನು ಬೆಳೆದುಕೊಂಡರೆ ಹಿಂಗಾರಿನ ಹಂಗಾಮಿನಲ್ಲಿ ಧಾನ್ಯಗಳನ್ನು ಬೆಳೆದುಕೊಳ್ಳುತ್ತಿದ್ದರು. ಈಗಲೂ ಇದೆ. “ಯೋಗವಾಗಿದ್ರೆ ಮೇಘವೆಲ್ಲ ಮಳೆ”  ಎಂಬ ಗಾದೆ ಮಾತಿನ ಪ್ರಕಾರ ಮಳೆ ಬಂದರೆ ಮೊದಲು ಸೂಜಿ ಮಲ್ಲಿಗೆಯ ಪರಿಮಳ ಮನೆತುಂಬೆಲ್ಲಾ ಇರುತ್ತಿತ್ತು. ನಂತರ ಹೊಲದಲ್ಲಿ ಹುಟ್ಟುವ ತರಾವರಿ ಸೊಪ್ಪುಗಳ ಸಾಂಬಾರ್, ಪಲ್ಯ ಇತ್ಯಾದಿ. ಮಳೆಗಾಲಕ್ಕೆ ಎಂಬಂತೆ ನಮ್ಮ ಪೂರ್ವಿಕರು ತಯಾರಿಗಳನ್ನು ಜತನದಿಂದ ಮಾಡಿಕೊಳ್ಳುತ್ತಿದ್ದರು. ಮಳೆಗಾಲದಲ್ಲಿ ಒಲೆಹೊತ್ತಿಸಲು ಸುಲಭವಾಗಲೆಂದು ಒಣಸೌದೆ ತರಗುಗಳನ್ನು ಸಂಗ್ರಹಿಸುವುದು, ಹಲಸಿನ ಬೀಜಗಳನ್ನು ಎತ್ತಿಡುವುದು, ಹೀಗೆ  ಜಿಟಿ ಜಿಟಿ ಮಳೆಯ ನಡುವೆ ಸೌದೆಒಲೆಯ ಚಟಚಟ ಸದ್ದು, ಹೊಗೆಯ ಕಮ್ಮನೆ ವಾಸನೆ ಆಹ್ಲಾದಕರವಾಗಿರುತ್ತಿದ್ದು. ಈಗಲೂ ಇದೆ ಅದೇ ಸೊಳ್ಳೆ ಬತ್ತಿಯ ಹೊಗೆ, ಪ್ಲಾಸ್ಟಿಕ್, ರಬ್ಬರ್‌ಗಳನ್ನು ಸುಡುವ ಕಮಟು ವಾಸನೆ.

ಮಳೆಗಾಲದಲ್ಲಿ ಹೊಲಗದ್ದೆಗಳಲ್ಲಿ ಕೆಲಸ ಮಾಡಿ ಬರುವ ಹಿರಿಯರ ಕಾಲಲ್ಲಿ ಕೆಸರು ಹುಣ್ಣಾಗಿ ನರಳುತ್ತಿದ್ದರೆ ಅದುವೇ ಹುಡುಗರಿಗೆ ನಗೆಪಾಟಲು. ಮುಂಗಾರಿನ ಅಡುಗೆಗಳೆಂದರೆ ಅತೀ ವಿಶೇಷ. ಶುಂಠಿ ಕಾಫಿ, ಬೆಲ್ಲದಕಾಫಿ, ಕಳಲೆ, ಹುರುಳಿ, ಕೆಸ, ಬಾಳೆದಿಂಡು, ಬಾಳೆಹೂವಿನ ಪಲ್ಯ ಇತ್ಯಾದಿ ಇತ್ಯಾದಿ. “ಹಾಲಿದ್ದಾಗ ಹಬ್ಬ ಮಾಡು ಗಾಳಿ ಬಂದಾಗ ತೂರಿಕೊ” ಎಂಬ ಗಾದೆ ಅವಕಾಶ ಇದ್ದಾಗ ಯಾವ ವಸ್ತು ಸಿಗುತ್ತದೆಯೋ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂಬುದನ್ನು ಸೂಚಿಸುತ್ತದೆ.  ಸುಗ್ಗಿಯ ಕಾಲದಲ್ಲಿ ಕಣದಲ್ಲಿ ಆಗ ಅಲ್ಲಿ ಕೆಲಸ ಮಾಡುವವರಿಗೆ ಗಡಿಗೆಗಳಲ್ಲಿ ನೀರುಕೊಡುತ್ತಿದ್ದರು. ಈಗ ಆ ಜಾಗ ಪ್ಲಾಸ್ಟಿಕ್ ಬಾಟಲ್‌ಗಳದಾಗಿದೆ. ಯಾರು ಮನೆಯಿಂದ ಅಡುಗೆ ಮಾಡಲ್ಲ ಹೊಟೇಲ್‌ಗಳಿಂದ ಪಾರ್ಸಲ್ ತರಿಸಿಕೊಡುವುದು ರೂಢಿಯಾಗಿದೆ. ಸುಗ್ಗಿ ಅಂಗಡಿಗಳು, ಕಣ ಹಬ್ಬಗಳಂತೂ ಈಗ ನೇಪಥ್ಯಕ್ಕೆ ಸರಿದಾಗಿದೆ. ಬಳ್ಳ, ಸೇರು. ಪಾವು, ಪಡಿ, ಚಟಾಕುಗಳ ಮರೆಯಾಗಿವೆ, ಮನೆಯಲ್ಲಿರುತ್ತಿದ್ದ ಕಣಜಗಳು ಹೋಗಿ ಪ್ಲಾಸ್ಟಿಕ್ ಡ್ರಮ್‌ಗಳಲ್ಲಿ ಧಾನ್ಯ ಶೇಖರಣೆಯಿದೆ. ಮಂಗಳವಾರ, ಶುಕ್ರವಾರ ಧವಸ-ಧಾನ್ಯಗಳನ್ನು ಹೊರತೆಗೆಯದ ರೈತ ಈಗ ಕಣದಲ್ಲೇ ತನ್ನ ಬೆಳೆಯನ್ನು ವಿಲೇವಾರಿ ಮಾಡಿ ಹಣ ಮನೆಗೆ ತರುತ್ತಾನೆ. “ಹೊಸರಾಗಿ ಮುದ್ದೆಗೆ ಎಸರೇಕೆ” ಎಂಬ ಗಾದೆ ಗೌಣವಾಗಿದೆ.

ತುತ್ತಿನಚೀಲ ತುಂಬಿಸಿಕೊಳ್ಳಲು ದುಡಿಯುತ್ತೇವೆ, ಹಣಸಿಗುತ್ತದೆ. ಆದರೆ ಹಣವನ್ನೇ ತಿನ್ನಲು ಸಾಧ್ಯವೇ? ಅನ್ನಬೇಕು! ಅನ್ನ ಬೆಳೆಯಲು ರೈತ ಬೇಕು ಅಂತಹ ರೈತನೇ ನಮ್ಮ ಆರಾಧ್ಯ ದೈವ. ಚಿನ್ನದಂಥ ಬೆಳೆ ಬೆಳೆದರೂ ಆತನ ಕೈ ಬರಿದೋ! ಬರಿದೋ! ಮಧ್ಯವರ್ತಿಗಳ ಹಾವಳಿ ಆತನ ನಿದ್ದೆಗೆಡಿಸಿದೆ. ನಿರಂತರ ಅನ್ನ ಬೆಳೆಯುವ ರೈತ ವಿಷ ಸೇವಿಸುವ ದುರಂತಕ್ಕೆ ಗುರಿಯಾಗಿದ್ದಾನೆ. ಬೆಳೆ ತೆಗೆಯಲು ಸಾಲ ಮಾಡಿ ತೀರಿಸಲಾಗದೆ ರೈತ ಸಾವಿಗೆ ಶರಣಾದರೆ, ಇನ್ನೊಂದೆಡೆ ಪ್ರಕೃತಿ ವಿಕೋಪ ಆತನ ನಿದ್ರೆ ಕಸಿಯುತ್ತದೆ. ಬೇಕಾದಾಗ ಮಳೆ ಬಾರದು ಬೆಳೆ ಕೊಯ್ಲಿಗೆ ಬಂದಾಗ “ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ” ಮಳೆ ಬಂದು ಜಲಸಮಾಧಿಯಾಗುತ್ತದೆ. ಇಲ್ಲವೇ ಕಾಡಾನೆ, ಕಾಡುಹಂದಿಗಳ ಬಾಯಿಗೆ ಬೆಳೆ ಲೂಟಿಯಾಗುತ್ತದೆ. ಅದೂ ಅಲ್ಲದೆ ಎತ್ತರ ಬಣವೆಯನ್ನು ಒಟ್ಟಿರುವ ರೈತನ ಏಳಿಗೆಯನ್ನು ಸಹಿಸದೆ ಪಾಪಿಗಳು ದೈಷದ ಕೊಳ್ಳಿಯನ್ನು ಇಟ್ಟು ಬೆಳೆಯನ್ನು ಹಾಳುಗೆಡುವುತ್ತಾರೆ. ‘ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ’ ಎಂಬ ಗಾದೆಗೆ ಪೂರಕವಾಗುವಂತೆ ಬಲಿ ಪಶು ರೈತನೇ ತಾನೆ!.

‘ಎತ್ತು ಏರಿಗೆ ಕೋಣ ನೀರಿಗೆ’ ಎಂಬ ಮಾತಿನಂತೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಹಿಡಿಸಲ್ಲ ಎಲ್ಲಾ ವಿಭಜಿತ ಕುಟುಂಬಗಳು. “ಮುಂದಲಾರು ಹೋದಂತೆ ಹಿಂದಲಾರು” ಎಂಬ ಕಲ್ಪನೆ ತುಕ್ಕುಹಿಡಿದಿದೆ. ಒಟ್ಟಿನಲ್ಲಿ ನಮ್ಮ ರೈತ ಅನ್ನದಾತ, ಜೀವದಾತ ಅವನ ವಿನಃ ನಮ್ಮ ಬದುಕು ಅನೂಹ್ಯ. ರೈತರ ಬದುಕು “ದುರ್ಭಿಕ್ಷದಲ್ಲಿ ಅಧಿಕ ಮಾಸ” ಎನ್ನುವಂತಾಗಿದೆ ಈ ಗಾದೆ ಖರ್ಚು ಜಾಸ್ತಿ ಆದಾಯ ಕಡಿಮೆ ಎಂಬುದನ್ನು ಧ್ವನಿಸುತ್ತದೆ. ಜಾಗತಿಕರಣ ಪ್ರಭಾವಕ್ಕೆ ಒಳಗಾಗಿ ಮಾನವಪರ ಹೋರಾಟಗಳು ಮೂಲೆಗುಂಪಾಗುತ್ತಿವೆ. ರೈತಪರ ಹೋರಾಟಗಳು ಸ್ವಾರ್ಥಿಗಳ ಪಾಲಾಗಿ ರೈತರು ದಿಕ್ಕೆಡುವಂತಾಗಿದೆ. ಬಂಡವಾಳಶಾಹಿಗಳು ರೈತರಿಗೆ ಆಸೆ ತೋರಿಸಿ ಭೂಮಿ ಕಸಿಯುತ್ತಿದ್ದಾರೆ. ಕೃಷಿ ಭೂಮಿಗಳು ಕೈಗಾರಿಕಾ ಪ್ರದೇಶಗಳಾಗಿ, ಖಾಸಗಿ ಬಡಾವಣೆಗಳಾಗಿ ಪರಿವರ್ತನೆಗೊಂಡು ಅನ್ನದಾತನೆಂದು ಕರೆಸಿಕೊಂಡ ರೈತ ಇನ್ನಿಲ್ಲದಂತಾಗುತ್ತಿದ್ದಾನೆ. ನಗರ ಬದುಕಿನ ಆಮಿಷಕ್ಕೊಳಗಾಗಿ ಬದುಕಿಗೆ ಬೇಕಾಗಿರುವ ಮೂಲ ದ್ರವ್ಯವನ್ನು ಕಳೆದುಕೊಂಡು ಇಕ್ಕಟ್ಟಿನ ಬದುಕಿಗೆ ಸಿಲುಕುತ್ತಿದ್ದಾನೆ. ಅದಕ್ಕೆ “ಕೆಟ್ಟು ಪಟ್ಟಣ ಸೇರು” ಎಂಬ ಗಾದೆ ಇರುವುದು  ರೈತರ ಇಂದಿನ ಎಲ್ಲಾ ಸಮಸ್ಯೆಗಳಿಗೆ ಜಾಗತೀಕರಣವೇ ಮೂಲಕಾರಣವಾಗಿದೆ.ರೈತನ ಆಯುಧ ನೇಗಿಲು ಎಂದೇ ಹೇಳಬಹುದು ಆದರೆ ಪ್ರಸ್ತುತ ದಿನಮಾನಗಳಲ್ಲಿ ಅದುವೆ ನೇಣುಗಂಬವಾಗುತ್ತಿದೆ.  ಏನೆ ಆಗಲಿ ರೈತ ದೇಶದ ಬೆನ್ನೆಲುಬು. “ರೈತನಿಗೆ ಮುಗ್ಗು ಬಂದರೆ ದೇಶವೆಲ್ಲ ಕುಗ್ಗು”  ಎನ್ನುತ್ತಾರೆ. ಅಂದರೆ ರೈತನಿಗೆ ಒಂದು ವೇಳೆ ಅರ್ಥಿಕ ಮುಗ್ಗಟ್ಟು ಬಂದರೆ ಇಡೀ ದೇಶಕ್ಕೆ ಅದರ ಪರಿಣಾಮ ತಟ್ಟುತ್ತದೆ ಎನ್ನುತಾರೆ. “ಒಕ್ಕಲಿಗ ಒಕ್ಕದಿದ್ದರೆ ದೇಶವೆಲ್ಲಾ ಬಿಕ್ಕುತ್ತದೆ ಈ ಗಾದೆಯೂ ರೈತರು ಶ್ರಮಪಟ್ಟು ಒಕ್ಕಲುತನ ಮಾಡದೆ ಇದ್ದರೆ ಅದರ ಪರಿಣಾಮ ದೇಶದ ಮೇಲಾಗುತ್ತದೆ ಎಂದು ಅರ್ಥೈಸುತ್ತದೆ.

ಕುವೆಂಪು ಅವರ ‘ನೇಗಿಲಯೋಗಿ’ ಎಂಬ ಪದ್ಯದಲ್ಲಿ ನೇಗಿಲು ಹಿಡಿದು ಹೊಲದೊಳು ಹಾಡುತ ಉಳುವ ಯೋಗಿಯ ನೋಡಲ್ಲಿ ಫಲವ ಬಯಸದ ಸೇವೆಯ ಪೂಜೆಗೆ ಕರ್ಮವೆ ಇಹಪರ ಸಾಧನವು ಕಷ್ಟದೊಳನ್ನವ ದುಡಿವನೇ ಯೋಗಿ ಸೃಷ್ಠಿ ನಿಯಮದೊಳಗವನೆ ಭೋಗಿ” ಎಂಬ ಮಾತುಗಳು ದೂರಾಲೋಚನೆ ಉಳ್ಳವು ಸಾರ್ವಕಾಲಿಕವಾದವು. ಕಷ್ಟದಲ್ಲಿ ದುಡಿಯುವ ರೈತ ಕುವೆಂಪು ಅವರ ದೃಷ್ಠಿಯಲ್ಲಿ ಚಿರಸ್ಥಾಯಿ.ಲಾಲ್ ಬಹದ್ದೂರ್ ಶಾಸ್ತ್ರಿ ಅವರು “ಜೈ ಜವಾನ್ ಜೈ ಕಿಸಾನ್” ಎಂದು ರೈತರಿಗೆ ಉನ್ನತ ಸ್ಥಾನ ಕೊಟ್ಟಿದ್ದಾರೆ.

“ಉಳುವವನು ಪ್ರಪಂಚದ ಗಾಲಿಯ ಕೀಲು” ಎಂದು ರೈತರಿಗೆ ಮಹತ್ವದ ಸ್ಥಾನ ಕೊಟ್ಟಿದ್ದೇವೆ ಆದರೆ “ರಸ ಬೆಳೆದು ಕಸ ತಿನ್ನುವ ಹಾಗೆ ಹಸ ಕಟ್ಟಿ ಮೊಸರಿಗೆ ಪರದಾಡುವ ಹಾಗೆ” ಆಗಿದೆ ರೈತರ ಪರಿಸ್ಥಿತಿ. ಸರ್ಕಾರದಿಂದ ಸರ್ಕಾರಿ ಅಧಿಕಾರಿಗಳಿಂದ ಅವಜ್ಞೆಗೆ ಗುರಿಯಾಗಿ ಸಾಲದ ಶೂಲಕ್ಕೆ ಏರುತ್ತಿದ್ದಾನೆ. ಕಡಿಮೆ ಭೂ ಹಿಡುವಳಿ, ಹಣದಕೊರತೆ, ತಿಳುವಳಿಕೆಯ ಕೊರತೆ ಆಧುನಿಕ ತಂತ್ರಜ್ಞಾನದ ಮಾಹಿತಿಕೊರತೆಯಿಂದ. ರೈತ ಕಡಿಮೆ ಬೆಳೆದರೆ ಮತ್ತೊಂದೆಡೆ ಮಧ್ಯವರ್ತಿಗಳು, ಬಡ್ಡಿದಂಧೆ ನಡಸುವವರೆ ರೈತರಿಗೆ ಪರಮ ದಾಯದಿಗಳು ಬೆಂಬಲ ಬೆಲೆಯಲ್ಲಿ ತಾರತಮ್ಯ. ಸರ್ಕಾರದ ಕಾರ್ಯಕ್ರಮಗಳ ಫಲಾನುಭವಿಗಳ ಆಯ್ಕೆಯಲ್ಲಿ ಭ್ರಷ್ಟಾಚಾರ, ಸರ್ಕಾರದ ಪರಿಹಾರಗಳು ಅಪಾತ್ರರ ಪಾಲಗುತ್ತಿರುವುದು ದುರಂತವೇ ಸರಿ. “ಒಕ್ಕಲಿಗ ಮಾಡಿದ್ದು ದಂಡಕ್ಕೆ”ಎಂಬ ಗಾದೆಯನ್ನು ನೆನಪಿಸುತ್ತದೆ. “ಮೊದಲೇ ಕಳೆ ಅದರ ಮೇಲೆ ಮಳೆ”ಯೆಂಬ ಗಾದೆ ರೈತನ ಸಮಸ್ಯೆಯ ಬದುಕನ್ನು ಸಂಕೇತಿಸುತ್ತದೆ. ಮುಖ್ಯವಾಗಿ ರೈತನ ಜಮೀನ ಕಾಗದ ಪತ್ರಗಳಲ್ಲೆ ಸಮಸ್ಯೆಗಳೆ ಇರುವುದನ್ನು ಗಮನಿಸಬಹುದು.  ಪ್ರಮುಖವಾಗಿ ರೈತರಿಗೆ ಅವರ ಹಿಡುವಳಿಯ ದಾಖಲೆ ಪತ್ರಗಳು ಅಗತ್ಯವಾಗಿ ಸಿಗಬೇಕು. ಉಳುವ ಭೂಮಿಯ ಸರಿಯಾದ ದಾಖಲೆಗಳಿಲ್ಲದೆ ಸರ್ಕಾರದ ಸಹಾಯ ಪಡೆಯಲಾರದ ಅದೆಷ್ಟೋ ಸಣ್ಣ ಹಿಡುವಳಿದಾರರು ನಮ್ಮ ನಡುವಿದ್ದಾರೆ. ಸಾವಯವ ಕೃಷಿ, ಸಹಕಾರ ಕೃಷಿ ಎಂಬ ಪರಿಕಲ್ಪನೆ ಸಾಕಾರವಾದಾಗ​¸ಅನ್ನದಾತೋ ಸುಖೀಭವ: ಎಂಬ ಮಾತು ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ.

 ನಾವೇನೇ ಆದರೂ ರೈತರ ಮಕ್ಕಳು  ನಾವು ಆದ ಹಾಗೆ ನಮ್ಮ ಮಕ್ಕಳು ಆಗಬಾರದು ಎಂದು ನಮ್ಮ ಹಿರಿಯರು ಅಕ್ಷರಶಃ ತಮ್ಮ ನಂತರದ ಪೀಳಿಗೆಯನ್ನು ಜಾನಪದದ ಸೊಗಡಿನಿಂದ ದೂರ ಉಳಿಸುತ್ತಿದ್ದಾರೆ. ಇದರಿಂದ ಅಮೂಲ್ಯ ಜಾನಪದ ಸಾಹಿತ್ಯಸಂಪತ್ತು ಗೌಣವಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಆಧುನಿಕ ಸಂಸ್ಕೃತಿ. ವೈಜ್ಞಾನಿಕ ಸಂಸ್ಕೃತಿಗಳು ನಮ್ಮ ಪಾಲಿಗೆ ಚಿಕ್ಕಮ್ಮಂದಿರಂತೆ ಜಾನಪದ ಮಾತ್ರ ನಮ್ಮ ಹೆತ್ತಮ್ಮ. ಹೆತ್ತಮ್ಮನನ್ನು ಬಿಟ್ಟು ಉಳಿದವರನ್ನು “ಅಮ್ಮಾ” ಎಂದು ಕರೆಯಲಾರೆವು ಹಾಗೆ ನಮ್ಮ ನೆಲದ ಸಂಸ್ಕೃತಿಯನ್ನು, ಭಾಷೆಯ ಅಂತಃಸತ್ವ ಹೊಂದಿರುವ ಜಾನಪದ ಸಾಹಿತ್ಯ ಎಂಬ ಹೆತ್ತಮ್ಮನನ್ನು ಬಿಗಿದಪ್ಪಿಕೊಳ್ಳಬೇಕಾರುವುದು ನಮ್ಮ ನಿಜವಾದ ಧರ್ಮವಾಗಿದೆ.

*******

ಆಧಾರ  ಗ್ರಂಥ:

ಜನಪದ ಗೀತಾಂಜಲಿ: ದೇ.ಜವರೇಗೌಡ
ನಮ್ಮ ಗಾದೆಗಳು:ರಾಗೌ