ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಆಚೀಚಿನ ಆಯಾಮ – ೧೯ : ಬಯೋಪಿಕ್ ಗಳು

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ಪುಸ್ತಕಗಳಲ್ಲಿ ನಾವು ಬಯೋಗ್ರಫಿ ಮತ್ತು ಆಟೋ ಬಯೋಗ್ರಫಿ ಎನ್ನುವ ಪದಗಳ ಬಗ್ಗೆ ತಿಳಿದಿದ್ದೇವೆ. ಇವೆರಡೂ ಮಹನೀಯರ ವ್ಯಕ್ತಿ ಚಿತ್ರದ ಪುಸ್ತಕಗಳಾಗಿರುತ್ತವೆ. ಬಯೋಗ್ರಫಿಯನ್ನು ಬೇರೆಯವರು ಬರೆಯುತ್ತಾರೆ. ತಾವೇ ಬರೆದುಕೊಂಡಲ್ಲಿ ಅದು ಆಟೋ ಬಯಾಗ್ರಫಿಯಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಮಿಂಚಿದ ಮಹನೀಯರ ಜೀವನ ಚರಿತ್ರೆಯನ್ನು ಮುಂದಿನ ತಲೆಮಾರಿನ ಜನಕ್ಕೆ ತಲುಪಿಸುತ್ತ ಅವರ ಹಾಗೆ ತಮ್ಮ ಜೀವನವನ್ನು ಸಾರ್ಥಕ ಪಡೆಸಿಕೊಳ್ಳಬೇಕೆಂಬ ಸಂದೇಶದೊಂದಿಗೆ ಇವುಗಳನ್ನು ಬರೆಯುವುದು ನಡೆಯುತ್ತದೆ. ಈ ಪುಸ್ತಕಗಳು ಹಲವಾರು ಸಾಧಕರ ಪ್ರೇರಣಾ ಗ್ರಂಥಗಳಾಗಿರುವುದು ಸಹ ಸಾಧಕರು ಇವುಗಳ ಬಗ್ಗೆ ಉಲ್ಲೇಖಸಿದಾಗ ತಿಳಿಯುತ್ತದೆ.

ಈ ಧಾಟಿಯಲ್ಲೇ ಚಿತ್ರಗಳು ಬರಲಾರಂಭಿಸಿದವು. ಭಾರತದ ಈ ಥರದ​ ವ್ಯಕ್ತಿ ಚಿತ್ರಣ ಪುರಾಣ ಪುರುಷರ ಪಾತ್ರಗಳಿಂದ ಆರಂಭವಾಯಿತೆನ್ನಬಹುದು. ಬಹುಶಃ ಭಾರತದ ಎಲ್ಲ ಭಾಷೆಗಳಲ್ಲಿ ಶ್ರೀರಾಮ, ಶ್ರೀಕೃಷ್ಣ, ಆಂಜನೇಯ ಈ ರೀತಿಯ ಪುರಾಣ ಪುರುಷರ ಕತೆಗಳು ಚಿತ್ರಗಳಾಗಿ ಬಂದವು. ಇವೆಲ್ಲವೂ ಪೌರಾಣಿಕ ಚಿತ್ರಗಳೆನಿಸಿದವು. ನಂತರ ಹೆಸರಾಂತ ಮಹಾರಾಜರ ಚಿತ್ರಗಳೂ ಬಂದವು. ಶ್ರೀಕೃಷ್ಣದೇವರಾಯ, ರಣಧೀರ ಕಂಠೀರವ ಹೀಗೆ. ಇವಕ್ಕೆ ಐತಿಹಾಸಿಕ ಚಿತ್ರಗಳೆನ್ನಲಾಯಿತು. ಆದರೆ ಇತ್ತೀಚಿನ ವ್ಯಕ್ತಿ ಚಿತ್ರಗಳಲ್ಲಿ ನಮ್ಮ ದೇಶದ ವ್ಯಕ್ತಿಯ ಮೊದಲ ವ್ಯಕ್ತಿಚಿತ್ರ ಬಹುಶಃ ಹಾಲಿವುಡ್ ನಿರ್ಮಿಸಿದ “ ಗಾಂಧೀ” ಚಿತ್ರ. ನಂತರ ಅದೇ ರೀತಿಗಳ​ಲ್ಲಿ ಸರ್ದಾರ್ ಪಟೇಲರ ಚಿತ್ರವೂ ಬಂತು. ಆದರೆ ಈ ಚಿತ್ರಗಳನ್ನು ಏನಂತ ಕರೆಯುವುದು ಎಂದು ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ಈ ಒಂದು ದಶಕದಲ್ಲಿ ಕೆಲ ಸಮಕಾಲೀನ ವ್ಯಕ್ತಿಗಳ ಬಗ್ಗೆ ಚಿತ್ರಗಳು ಬರಲು ಶುರುವಾದಾಗ ಅವುಗಳಿಗೊಂದು ಹೆಸರಿಟ್ಟು ಅವುಗಳನ್ನು ಆ ವಿಭಾಗಕ್ಕೆ ಸೇರಿಸಿದರು. ಹಾಗೆ ಬಂದ ಇವುಗಳ ಹೆಸರು “ ಬಯೋಪಿಕ್” ಎಂದು. ಇವುಗಳಲ್ಲಿಯ ಸಾರಾಂಶ ಯಾವುದೋ ಒಂದು ಕ್ಷೇತ್ರದಲ್ಲಿ ಹೆಸರುವಾಸಿಯಾದ ವ್ಯಕ್ತಿಯ ವ್ಯಕ್ತಿಚಿತ್ರಣ.

ಈ ಥರದ​ ಚಿತ್ರಗಳನ್ನು ತೆಗೆಯುವುದು ಸ್ವಲ್ಪ ಕತ್ತಿಯ ಅಲಗಿನ ಮೇಲಿನ ಸವಾರಿಯೇ ಎನ್ನಬಹುದು. ಇದಕ್ಕೆ ತುಂಬಾ ಸಂಶೋಧನೆ ನಡೆಸಬೇಕಾಗುತ್ತದೆ. ಆ ವ್ಯಕ್ತಿ ಹುಟ್ಟಿದ, ಬೆಳೆದ, ಓದಿದ ಸ್ಥಳಗಳನ್ನು ಸಂದರ್ಶಿಸಿ ಜೀವಂತವಿರುವ ಅವರ ಮನೆಯವರನ್ನು, ಗೆಳೆಯರನ್ನು ಇನ್ನಿತರ ಪರಿಚಯದ ವ್ಯಕ್ತಿಗಳನ್ನು ಕಂಡು ಸದರಿ ವ್ಯಕ್ತಿಯ ಬಗ್ಗೆ ಅಧಿಕೃತ ಮಾಹಿತಿಯನ್ನು ಸಂಗ್ರಹಿಸಬೇಕು. ಯಾವುದನ್ನು ಚಿತ್ರಕ್ಕೆ ತರಬೇಕು, ಯಾವುದು ವಿವಾದಾಸ್ಪದವಾಗಬಹುದು ಎಂದು ನಿಶ್ಚಿತವಾಗಿ ನೋಡಿ ಚಿತ್ರ ತೆಗೆಯಬೇಕು. ರಾಜಕಾರಣಿಗಳ ಚಿತ್ರವಾದರೆ ಇನ್ನೂ ಕಷ್ಟ. ಒಂದು ಸ್ತರದ ಕೀರ್ತಿ ಪಡೆದ ಮನುಷ್ಯನ ವ್ಯಕ್ತಿತ್ವದಲ್ಲಿ ಯಾವುದೇ ಥರದ​ ವಿರುದ್ಧವೆನಿಸುವ ಅಂಶ ಕಂಡು ಬಂದಲ್ಲಿ ಸರಕಾರವಾಗಲಿ, ಜನರಾಗಲಿ ಆ ಚಿತ್ರವನ್ನು ನಡೆಯಲು ಬಿಡುವುದಿಲ್ಲ.  ಈ ಸಂದರ್ಭದಲ್ಲಿ ತೆಲುಗಿನ ಹೆಸರಾಂತ ನಾಯಕ ನಟನೂ ನಂತರದ ರಾಜ್ಯದ ( ಅದು ಐಕ್ಯ ಆಂಧ್ರ ಪ್ರದೇಶವಾಗಿದ್ದಾಗ) ಮುಖ್ಯಮಂತ್ರಿಯಾಗಿ ಮಿಂಚಿದ ಶ್ರೀ ಎನ್.ಟಿ. ರಾಮಾರಾವ್ ಅವರ ಬಯೋಪಿಕ್ ಬಗ್ಗೆ ಹೇಳಬೇಕೆನಿಸಿತು. ಅವರ ಬಯೋಪಿಕ್ ತೆಗೆಯಬೇಕಾದರೇ ಅದು ಎರಡು ಅಧ್ಯಾಯಗಳಾಗಿ ಮಾಡಬೇಕಾಯಿತು. ಒಂದು ಅವರ ಚಿತ್ರರಂಗದ ಜೀವನ. ಇದನ್ನು ತೆಗೆಯಲು ಯಾರಿಗೂ ಕಷ್ಟವೆನಿಸಲಿಲ್ಲ. ಆದರೆ ಅವರ ರಾಜಕೀಯ ಜೀವನದ ಒಂದು ತಿರುವು ಅಂದರೆ ಅವರ ಅಳಿಯನೇ ಅವರ​ ವಿರುದ್ಧ ಬಂಡಾಯ ಮಾಡಿ ಅವರನ್ನು ಕೆಳಗಿಳಿಸಿದ್ದು. ಅದರಿಂದ ಅವರು ತುಂಬಾ ನೊಂದು ಮನಸ್ಸಿಗೆ ಹಚ್ಚಿಕೊಂಡು ಅದರ ಚಿಂತೆಯಲ್ಲೇ ಅಸು ನೀಗಿದ್ದರು. ಅವರ ಅಳಿಯ ಈಗಿನ ಆಂಧ್ರ ಪ್ರದೇಶದ ಪ್ರತಿಪಕ್ಷ ನಾಯಕರಾದ ಶೀ ಚಂದ್ರಬಾಬು ನಾಯುಡು ಅವರು. ಈ ಪ್ರಕರಣವನ್ನು ಬಯೋಪಿಕ್ ನಲ್ಲಿ ಹೇಗೆ ಅಳವಡಿಸಬೇಕೋ ನಿರ್ಮಾಪಕರಿಗೆ ಹೊಳೆಯಲಿಲ್ಲ. ಆದಕಾರಣ ಅವರು ಬರೀ ಅವರ ಚಲನಚಿತ್ರ ಜೀವನವನ್ನು ಮತ್ತು ಅವರು ರಾಜಕೀಯಕ್ಕೆ ಕಾಲಿಡುವವರೆಗೆ ಮಾತ್ರ ತೆಗೆದು ಅದಕ್ಕೆ ಭಾಗ-೧ ಒಂದು ಹೆಸರಿಸಿ ಪಾರಾದರು. ಆದರೆ ಅವರ ರಾಜಕೀಯ ಜೀವನದ ಪರಿಚಯ ಮಾಡಬೇಕಾದ್ದು ಸಹ ನಿರ್ಮಾಪಕರ ಕರ್ತವ್ಯವಾಗಿತ್ತು. ಅದರ ಭಾಗ-೨ರನ್ನು ಅವರ ರಾಜಕೀಯ ಜೀವನ ಮೊದಲಿನಿಂದ ಪ್ರಾರಂಭಿಸಿ ಅವರು ಎರಡನೆಯ ಬಾರಿ ಮುಖ್ಯಮಂತ್ರಿಯಾದ ಘಟ್ಟದವರೆಗೆ ಮಾತ್ರ ತೆಗೆದು ವಿವಾದಾಸ್ಪದವಾಗದಂತೆ ನಿಲ್ಲಿಸಿದರು. ನನಗನಿಸಿದ್ದು ಇದು ನಿರ್ಮಾಪಕರ ಉದ್ದೇಶ ಸಫಲವಾಗಲಿಲ್ಲ ಎಂದು. ಬಯೋಪಿಕ್ ಚಿತ್ರದ ನಾಯಕರ ಸಮಗ್ರ ಜೀವನವನ್ನು ಅಂದರೆ ಅವರ ಗೆಲುವು, ಸೋಲು, ಸುಖ ದುಃಖ ಎಲ್ಲವನ್ನೂ ಕಾಣಿಸಬೇಕು. ಆದರೆ ಇಲ್ಲಿ ಆದ ಸನ್ನಿವೇಶವೇ ಬೇರೇ. ಹೀಗೆ ಬರೀ ಅವರ ವ್ಯಕ್ತಿತ್ವದ ಹಿರಿಮೆಗಳದ್ದೇ ಚಿತ್ರ ಅಂತಾದರೆ ಬೀಚಿಯವರು ಹೇಳಿದಂತೆ “ಅದು ಕಾದಂಬರಿಯಾಗುತ್ತದೆಯೇ ವಿನಃ ವ್ಯಕ್ತಿಚಿತ್ರವಾಗುವುದಿಲ್ಲ”

ನನಗಂತೂ ಈ ತರದ ಪುಸ್ತಕಗಳ ಚಿತ್ರಗಳ ಬಗ್ಗೆ ಒಂದು ಜಿಜ್ಞಾಸೆ ಇದೆ. ವಿಶೇಷವಾಗಿ ಕಲಾಕಾರರ ಬಗ್ಗೆ. ನಾವು ಕಲಾಕಾರರನ್ನು ಅವರ ಕಲೆಯನ್ನು ನೋಡಿ ಅಥವಾ ಕೇಳಿ ಅಥವಾ ಓದಿ ಅಭಿಮಾನಿಸುತ್ತೇವೆ. ಅವರ ಬಗ್ಗೆ ಇಷ್ಟ ಬೆಳೆಯುತ್ತ ಹೋದಂತೆಲ್ಲ ಅವರ ವೈಯಕ್ತಿಕ ಜೀವನವನ್ನು ತಿಳಿಯ ಬಯಸುತ್ತೇವೆ. ಆಗ ನಮಗೆ ಸಿಗುವ ಮಾಹಿತಿಗಳಿಂದ ಅವರ ಕಲೆಯನ್ನು ಅಳೆಯತೊಡಗುತ್ತೇವೆ. ಇದೇ ನನಗೆ ವಿಚಿತ್ರವೆನಿಸತೊಡಗಿತು.

ನಮಗೆ ಬರಹಗಳಿಂದ ಅಥವಾ ಸಂಗೀತದಿಂದ ಮಾತ್ರ ಅವರ ಅಭಿಮಾನಿಸಲು ಸಾಧ್ಯವಿಲ್ಲವೇ ? ಅವರ ವೈಯಕ್ತಿಕ ವಿಷಯಗಳು ಸಹ ಅವರ ಕಲೆಯನ್ನು ಮೆಚ್ಚಲು, ಅಭಿನಂದಿಸಲುಬೇಕೇ? ನಾವೆಲ್ಲ ಅವರ ಕಲೆಗಳಲ್ಲಿ ಇಣುಕುವ ಅವರ ವ್ಯಕ್ತಿತ್ವವನ್ನು ವೈಯಕ್ತಿಕದಲ್ಲಿ ಸಹ ಏಕೆ ಕಾಣಬಯಸುತ್ತೇವೆ?  ನಮ್ಮ ನಿಲುವು ಏನು? ಈಗ ಸಾಹಿತ್ಯ ಕ್ಷೇತ್ರದಲ್ಲಿ ತೊಗೊಂಡರೆ ಒಬ್ಬ ಬರಹಗಾರನ ಕೃತಿಗಳು ಅವರ ವ್ಯಕ್ತಿಗತ ಜೀವನಕ್ಕೆ ಹೊರತಾಗ ಬಾರದೇ ? ಅವು ಅವನ ಬರಹಗಳ ಪ್ರತಿಫಲನವಾಗಲೇಬೇಕೇ? ಅವರ ಬರಹಗಳನ್ನು ಓದಿ ಮೆಚ್ಚಿದ ನಾವು ಅವರ ಇತರೆ ಸ್ವಭಾವಗಳ ಆಧಾರದ ಮೇಲೆ ಅವರ ಬರಹಗಳನ್ನು ಅಳೆಯುವುದೇ? ಎರಡನ್ನೂ ಬೇರೇ ಬೇರೇ ನಿಲ್ಲಿಸಲಾಗದೇ?

ಸಾಹಸಗಾರರ ಬಯೋಪಿಕ್ ಗಳು ನಮಗೆ ಪ್ರೇರಣೆ ನೀಡುತ್ತಿರಬಹುದು ಆದರೆ. ಅಲ್ಲಿ ಸತತ ಪ್ರಯತ್ನ ಕಾಣುವುದಿಲ್ಲ. ಒಂದು ಸಾಹಸ ಸನ್ನಿವೇಶ ಅಥವಾ ಅನಿರೀಕ್ಷಿತವಾಗಿ ಗೆದ್ದು ಬಂದ ಪಂದ್ಯಾವಳಿಯೋ ಆದಲ್ಲಿ ಅದು ಎಷ್ಟರ ಮಟ್ಟಿಗೆ ಪ್ರೇರಣಾ ಶಕ್ತಿಯಾಗುತ್ತದೆ ಎನ್ನುವುದು ಚರ್ಚನೀಯಾಂಶ. ಉದಾಹರಣೆಗೆ ನೀರಜಾ ಚಿತ್ರ ಒಬ್ಬ ಗಗನ ಸಖಿ ಕೆಲ ಪ್ರಯಾಣಿಕರ ಪ್ರಾಣ ಉಳಿಸಲು ತಾನು ಬಲಿಯಾದ ಕಥೆ. ಇದನ್ನು ಬಯೋಪಿಕ್ ಮಾಡಲಾಯಿತು. ಅದು ಹೊರಬಂದ ಮೇಲೆ ನೀರಜಾಳ ತಂದೆ ತಾಯಿ ಚಿತ್ರದಲ್ಲಿ ತೋರಿಸಲಾದ ಕೆಲವಾರು ವೈಯಕ್ತಿಕ ವಿಷಯಗಳ ಬಗ್ಗೆ ತಮ್ಮ ಅಸಂತೋಷ ವ್ಯಕ್ತಪಡಿಸಿದ್ದರು. ನಮ್ಮ ಪತ್ರಿಕೆಗಳವರು ಬಿಡುತ್ತಾರೆಯೇ? ಅವುಗಳನ್ನು ವರದಿಗಳಿಗೆ ತಂದರು. ಇವುಗಳನ್ನು ಓದಿದ ಮೇಲೆ ಚಿತ್ರ ನೋಡುವಾಗ ನಮಗೆ ಇವುಗಳೇ ತಲೆಯಲ್ಲಿ ಓಡುತ್ತ ಚಿತ್ರದ ಇತರೆ ಸನ್ನಿವೇಶಗಳ ಪ್ರಾಮಾಣಿಕತೆಗಳ ಬಗ್ಗೆ ಸಂಶಯ ಬರಲು ಶುರುವಾಗುತ್ತದೆ. ಹೀಗಿದ್ದಲ್ಲಿ ಈ ಚಿತ್ರದ ಉದ್ದೇಶ ಹೇಗೆ ಕೈಗೂಡಿದ ಹಾಗಾಯಿತು?  ತೀರ ಇತ್ತೀಚಿನ ವಿವಾದವೆಂದರೆ ಸೈನಾ ನೆಹ್ವಾಲ್ ಅವರ ಬಗ್ಗೆ ತೆಗೆಯಲಾದ ಮತ್ತು ಬಿಡುಗಡೆಗೆ ಕಾಯುತ್ತಿರುವ ಬಯೋಪಿಕ್. ಇದರ ಪೋಸ್ಟರ್ ಮೊನ್ನೆ ಚಿತ್ರದ ತಂಡವು ಬಿಡುಗಡೆ ಮಾಡಿತು. ಆದ ತಕ್ಷಣ ನೆಟಿಜನ್ನರು ಆ ಪೋಸ್ಟರ್ ನಲ್ಲಿ ಕಾಣುವ ಸರ್ವ್ ಬ್ಯಾಂಡ್ಮಿಂಟನ್ ದಲ್ಲ, ಟೆನ್ನಿಸ್ ದು ಎಂದು ವಿವಾದ ಶುರು ಮಾಡಿದರು. ಅದಕ್ಕೆ ಚಿತ್ರದ ದರ್ಶಕರು ತಮ್ಮದೇ ಆದ ವಿವರಣೆ ನೀಡಿದ್ದರೂ ಈ ತಾಂತ್ರಿಕತೆಯ ಬಗ್ಗೆ ಕೊಂಚ ದೃಷ್ಟಿ ಹರಿಸಿದ್ದರೆ ಈ ವಿವಾದಕ್ಕೆ ಆಸ್ಪದ ಕೊಟ್ಟಹಾಗಾಗುತ್ತಿರಲಿಲ್ಲ ಅಲ್ಲವೇ ?

ಮತ್ತೊಂದು ನೆಟ್ ಫ್ಲಿಕ್ಸ್ ನ ಧಾರಾವಾಹಿ ’ನಾರ್ಕೋಸ್’ ನೋಡುತ್ತಿದ್ದಾಗ ನನಗನಿಸಿದ್ದು ನಿಮ್ಮೊಡನೆ ಹಂಚಿಕೊಳ್ಳುವೆ. ಅದು ಒಬ್ಬ ಕುಖ್ಯಾತ ಮಾದಕ ವಸ್ತುಗಳ ವ್ಯಾಪಾರಿಯ ಬಗ್ಗೆಗಿನ ಧಾರಾವಾಹಿ. ಅವನ ಹೆಸರು ಪ್ಯಾಬ್ಲೋ ಎಸ್ಕೊಬಾರ್. ಅವನು ಕೊಲಂಬಿಯಾ ದೇಶದವನು. ಅವನು ತನ್ನ ವ್ಯಾಪಾರಕ್ಕಾಗಿ ಎಷ್ಟೋ ಜನರನ್ನು ನಿಷ್ಕರುಣೆಯಿಂದ ಹೊಸಕಿ ಹಾಕುತ್ತಾನೆ. ತನಗಿರುವ ಜನ ಬಲದಿಂದ ಸಂಸತ್ತಿಗೆ ಆರಿಸಿ ಬಂದರೂ ಅವನ ಈ ಮಾದಕ ದ್ರವ್ಯದ ವ್ಯಾಪಾರ ಬಯಲಿಗೆ ಬಂದಾಗ ಅವನು ರಾಜೀನಾಮೆ ನೀಡಿ ಹೊರಬರುತ್ತಾನೆ. ಆದರೆ ಅದು ಹೊರ ಬರಲು ಕಾರಣನಾದ ವ್ಯಕ್ತಿಯನ್ನು ಇಲ್ಲದಾಗಿ ಮಾಡುತ್ತಾನೆ. ಭೂಗತ ಗುಂಪುಗಳ ಜೊತೆ ಕೈ ಜೋಡಿಸಿ ಹಲವಾರು ಸರಕಾರಿ ನೌಕರರನ್ನು, ನ್ಯಾಯಾಧೀಶರನ್ನು ಕೊಲೆಗೈಸುತ್ತಾನೆ. ನ್ಯಾಯಾಲಯದ ಮೇಲೆ ದಾಳಿ ನಡೆಸುತ್ತಾನೆ. ರಂಗುರಂಗಾದ ಜೀವನ ನಡೆಸುತ್ತಿರುತ್ತಾನೆ. ಇಷ್ಟೆಲ್ಲ ಅವನ ಬಗ್ಗೆ ತಿಳಿದ ಮೇಲೆ ವೀಕ್ಷಕ​ರಿಗೆ ಅವನ ಬಗ್ಗೆ ಆಸಕ್ತಿ ಹುಟ್ಟುತ್ತದೆ. ಕೊನೆಯಲ್ಲಿ ಪೋಲೀಸರು ಅವನನ್ನು ಬೇಟೆಯಾಡಿ ಸುಟ್ಟು ಸಾಯಿಸುವಾಗ ಅವನ ಮೇಲೆ ಒಂದು ರೀತಿಯ ಮರುಕ ಬರಲಿಕ್ಕೂ ಸಾಕು. ಹಾಗಾದರೆ ಈ ಚಿತ್ರ ಸರಣಿಯ ಉದ್ದೇಶವೇನೆಂತಾಯಿತು? ಯಾವ ತರದ ಭಾವನೆಯನ್ನೂ ಅವನ ಮೇಲೆ ತಾಳದೇ ಬರೀ ಅವನ ಜೀವನ ಚರಿತ್ರೆಯನ್ನು ನೋಡುವುದಾ ? ಇದೇ ರೀತಿ ನಮ್ಮಲ್ಲಿ ಬಂದ “ಸಂಜು” ಚಿತ್ರವೂ ಈ ಸಾಲಿಗೆ ಸೇರುತ್ತದೆ.

ಕ್ರಿಕೆಟ್ಟಿನ ಸಂಚಲನ ಆಟಗಾರ ಮತ್ತು ನಾಯಕರಾದ ಮಹೇಂದ್ರಸಿಂಗ್ ಧೋನಿಯವರ ಬಗ್ಗೆ ಬಯೋಪಿಕ್ ಬಂತು. ಒಂದು ಸಾಮಾನ್ಯ ವಾಚ್ ಮನ್ ಮಗನಾದ ಧೋನಿ ಹೇಗೆ ತನ್ನ ಸಂಕಲ್ಪ ಬಲದಿಂದ ಮೇಲೆ ಬಂದದ್ದು ಎಂದು ತೋರಿಸುವ ಉದ್ದೇಶ ಈ ಬಯೋಪಿಕ್ ನದ್ದಿರಬಹುದು. ತಮ್ಮ ಹಿನ್ನೆಲೆಯನ್ನು ಗಣನೆಗೆ ತಗೊಳ್ಳದೇ ಹುಡುಗರು ತಮ್ಮ ಹಟದಿಂದ ಇವರ ಮಟ್ಟಕ್ಕೇರಬಹುದೆಂದು ಪ್ರೇರಣೆ ನೀಡುವ ಉದ್ದೇಶವಿದ್ದಿರಬಹುದು ಈ ಚಿತ್ರದ್ದು. ಆದರೆ ಆದ ವಿಪರ್ಯಾಸ ನೋಡಿ. ಈ ಚಿತ್ರದ ನಾಯಕನಾಗಿ ಅಭಿನಯಿಸಿದ ಸುಶಾಂತ್ ಸಿಂಗ್ ರಾಜ್ ಪೂತ್ ತಾವೇ ಆತ್ಮಹತ್ಯೆ ಮಾಡಿಕೊಂಡರು. ಇನ್ನು ಯಾವ ತರದ ಪ್ರೇರಣೆ ನೀಡೀತು ಈ ಚಿತ್ರ.?

ಆದರೆ ಈ ತರದ ವ್ಯಕ್ತಿಚಿತ್ರಗಳು ಅಥವಾ ವ್ಯಕ್ತಿಚಿತ್ರಣದ ಬರಹಗಳು ಬೇಡವೆನ್ನಲಾಗುವುದಿಲ್ಲ. ಇವುಗಳಿಂದ ಪ್ರೇರಣೆ ಪಡೆದು ತಾವು ಸಹ ಜೀವನದಲ್ಲಿ ಮೇಲೆ ಬಂದವರು ಇವುಗಳನ್ನು ಕೊಂಡಾಡುತ್ತಾರೆ. ತಂದೆ ತಾಯಿಯರು ಮಕ್ಕಳಿಗೆ ಈ ಚಿತ್ರಗಳನ್ನು ಮಾದರಿಯಾಗಿಸುತ್ತಾರೆ. ನನಗನಿಸುವುದು ಒಬ್ಬ ವ್ಯಕ್ತಿಯ ಬಗ್ಗೆ ಬರೆಯುವುದೋ ಅಥವಾ ಅವರ ಚಿತ್ರ ತೆಗೆಯುವುದೋ ನಡೆದಾಗ ಅದರ ಸಾಮಾಜಿಕ ಪರಿಣಾಮಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಮುಂದುವರೆಯಬೇಕು ಅಂತ. ಒಂದುವೇಳೆ ಆ ವ್ಯಕ್ತಿಯ ಜೀವನದ ಯಾವುದೋ ದಶೆ ವಿವಾದಾಸ್ಪದವಾಗಬಹುದೆಂದು ಕಂಡರೆ ಮೊಟುಕುಗೊಳಿಸಿದ ವ್ಯಕ್ತಿ ಚಿತ್ರಣಕ್ಕಿಂತ ಆ ಸಾಹಸವನ್ನು ಕೈ ಬಿಡುವುದೇ ಒಳ್ಳೆಯದು ಅಂತ. ಓದುಗರ ಅಭಿಪ್ರಾಯಗಳು ಭಿನ್ನರೀತಿಯಲ್ಲಿರಬಹುದು.

ಲೋಕೋಭಿನ್ನ ರುಚಿಃ ಅಲ್ಲವೇ !

ನಮಸ್ಕಾರ