- ಭಾರತದಲ್ಲಿ ಕಳೆದುಹೋಗುತ್ತಿರುವ ವೈಜ್ಞಾನಿಕ ಪ್ರಜ್ಞೆ - ಸೆಪ್ಟೆಂಬರ್ 3, 2022
- ನವ ಭಾರತ ಹಿಂಸೆಯ ತಾಣವಾಗುತ್ತಿದೆಯೇ ? - ಮೇ 1, 2022
- ಯುದ್ಧೋನ್ಮಾದದ ಅಲೆಯೂ ಪ್ರಜಾತಂತ್ರದ ಆಶಯಗಳೂ - ಮಾರ್ಚ್ 1, 2022
ಪ್ರಜೆಗಳ ಸಾರ್ವಭೌಮತ್ವ ಮತ್ತು ಸ್ವಾವಲಂಬಿ ದೇಶದ ಕನಸುಗಳನ್ನು ಹೊತ್ತು ವಿಶ್ವದ ಶ್ರೇಷ್ಠ ಸಂವಿಧಾನವನ್ನು ಅಂಗೀಕರಿಸಿದ ಸ್ವತಂತ್ರ ಭಾರತದಲ್ಲಿ ಅಧಿಕಾರ ರಾಜಕಾರಣ ಸ್ವಾಭಿಮಾನಿ ಜನಪ್ರತಿನಿಧಿಗಳನ್ನು ಹುಟ್ಟುಹಾಕಬೇಕಿತ್ತು. ಜನಪರ ಕಾಳಜಿ, ಸಂವಿಧಾನ ಬದ್ಧತೆ, ಪ್ರಜಾತಂತ್ರದ ಬಗ್ಗೆ ಗೌರವ ಮತ್ತು ಸಾಂವಿಧಾನಿಕ ನಿಯಮ ಹಾಗೂ ಮೌಲ್ಯಗಳಲ್ಲಿ ಶ್ರದ್ಧೆ ಈ ಲಕ್ಷಣಗಳು ಮಾತ್ರ ಇಂತಹ ಸ್ವಾಭಿಮಾನಿ ಪ್ರತಿನಿಧಿಗಳನ್ನು ಸೃಷ್ಟಿಸಲು ಸಾಧ್ಯ. ದುರಂತ ಎಂದರೆ 70 ವರ್ಷಗಳ ಸ್ವತಂತ್ರ ಭಾರತ ಅಧಿಕಾರ ರಾಜಕಾರಣದ ಅಂಗಳದಲ್ಲಿ ಪರಾವಲಂಬಿ ಪ್ರತಿನಿಧಿಗಳನ್ನು ಸೃಷ್ಟಿಸಿದೆ. ಮಾರಿಕೊಂಡ ಸರಕುಗಳನ್ನು ಸೃಷ್ಟಿಸಿದೆ. ಸ್ವಾಭಿಮಾನ ಶೂನ್ಯ ಧನದಾಹಿಗಳನ್ನು ಸೃಷ್ಟಿಸಿದೆ. ಅಧಿಕಾರ ಮೋಹಿಗಳನ್ನು ಸೃಷ್ಟಿಸಿದೆ.
ಭಾರತ ತನ್ನ ಭೌಗೋಳಿಕ ಸ್ವಾತಂತ್ರ್ಯದ ರಕ್ಷಣೆಗೆ ಅಗತ್ಯವಾದ ಎಲ್ಲ ರಕ್ಷಣಾ ಪರಿಕರಗಳನ್ನೂ ಸೃಷ್ಟಿಸಿಕೊಂಡಿದೆ. ವಿಶ್ವದ ಯಾವುದೇ ಪ್ರಬಲ ರಾಷ್ಟ್ರಗಳನ್ನು ಎದುರಿಸಲು ಭಾರತದ ಸೇನೆ ಮತ್ತು ಶಸ್ತ್ರಾಸ್ತ್ರ ಸಂಗ್ರಹಾಗಾರ ಸಿದ್ಧವಾಗಿದೆ. ಬಾಹ್ಯ ಶತ್ರುಗಳು ಭಾರತದ ಮೇಲೆ ದಾಳಿ ನಡೆಸುವುದು ಸುಲಭವಲ್ಲ ಎನ್ನುವುದೂ ವಿಶ್ವ ಸಮುದಾಯಕ್ಕೆ ತಿಳಿದಿದೆ. ಈ ಭೌಗೋಳಿಕ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವ ಸಮಸ್ತ ಭಾರತೀಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿರಲಿಕ್ಕೂ ಸಾಕು. ಆದರೆ ದೇಶ ಎನ್ನುವ ಪರಿಕಲ್ಪನೆ ಭೂಪಟದಲ್ಲಿನ ರೇಖೆಗಳಿಗಷ್ಟೇ ಸೀಮಿತವಾಗುವುದಿಲ್ಲ. ಸುರಕ್ಷಿತ ಗಡಿ ರೇಖೆಗಳು ಭೌಗೋಳೀಕ ದೇಶವನ್ನು ರಕ್ಷಿಸುತ್ತವೆ, ಬೌದ್ಧಿಕ ದೇಶವನ್ನು ರಕ್ಷಿಸಲು ನಮ್ಮ ಅಂತಃಸತ್ವ ಮತ್ತು ಅಂತಃಶಕ್ತಿ ಸುಸ್ಥಿರವಾಗಿರುವುದು ಅವಶ್ಯ.
ಈ ಅಂತಃಶಕ್ತಿ ಅಥವಾ ಅಂತಃಸತ್ವ ಇರುವುದು ನಮ್ಮ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬದುಕಿನಲ್ಲಿ. ಈ ಮೂರೂ ವಲಯಗಳನ್ನು ಪ್ರತಿನಿಧಿಸುವ ಪ್ರತಿನಿಧಿಗಳನ್ನು ನಮ್ಮ ನಡುವಿನಿಂದಲೇ ನಾವು ಕಾಲದಿಂದ ಕಾಲಕ್ಕೆ ಆಯ್ಕೆ ಮಾಡಿ ಶಾಸನ ಸಭೆಗಳಿಗೆ ಕಳಿಸುತ್ತಿದ್ದೇವೆ. ಈ ಪ್ರತಿನಿಧಿಗಳು ವಿಧಾನಸಭೆಗಳಲ್ಲಿ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕುಳಿತು, ಚರ್ಚೆ ನಡೆಸಿ ಕೈಗೊಳ್ಳುವ ತೀರ್ಮಾನಗಳು ಈ ದೇಶದ ಬೌದ್ಧಿಕ ಅಂತಃಸತ್ವವನ್ನು, ಸಾಮಾಜಿಕ ಸ್ವಾಸ್ಥ್ಯವನ್ನು, ರಾಜಕೀಯ ಸುಸ್ಥಿರತೆಯನ್ನು ನಿರ್ಧರಿಸುತ್ತವೆ. ಸ್ವಾತಂತ್ರ್ಯಾನಂತರದ ಮೊದಲ ನಾಲ್ಕು ದಶಕಗಳಲ್ಲಿ ನಿರ್ಮಿಸಲಾದ ಸ್ವಾವಲಂಬಿ ಭಾರತ ಇಂದು ಪರಾವಲಂಬನೆಯತ್ತ ವಾಲುತ್ತಿರುವುದನ್ನು ನೋಡಿದರೆ, ಈ ದೇಶದ ಪ್ರಜೆಗಳ ಆಯ್ಕೆ ತಪ್ಪಾಗಿರುವುದು ಸ್ಪಷ್ಟವಾಗುತ್ತದೆ.
2013ರಲ್ಲಿ ಚುನಾಯಿತ ಉದಾರವಾದಿ ಪ್ರಜಾತಂತ್ರ ರಾಷ್ಟ್ರವಾಗಿದ್ದ ಭಾರತ ಇಂದು ಚುನಾಯಿತ ನಿರಂಕುಶಾಧಿಪತ್ಯದ ರಾಷ್ಟ್ರವಾಗಿದೆ ಎಂದು ಜಾಗತಿಕ ಸಂಸ್ಥೆಯೊಂದು ಹೇಳಿದೆ. ಈ ಅಭಿಪ್ರಾಯ ಯಾವುದೋ ಒಂದು ಸಂಸ್ಥೆಯಿಂದ ವ್ಯಕ್ತವಾಗಿರುವುದರಿಂದ ತಳ್ಳಿಹಾಕುವುದು ಸುಲಭ. ಆದರೆ ಭಾರತದ ವಸ್ತುಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವ ಯಾವುದೇ ಪ್ರಜ್ಞಾವಂತರಿಗೆ, ದೇಶದಲ್ಲಿ ಪ್ರಜಾತಂತ್ರದ ಅವಸಾನ ಸಮೀಪಿಸುತ್ತಿರುವುದು ಸ್ಪಷ್ಟವಾಗುತ್ತದೆ. ದಿಶಾ ರವಿ ತೀರ್ಪಿನ ನಂತರ ಭಾರತದ ನ್ಯಾಯಾಂಗ ವ್ಯವಸ್ಥೆ ಕೊಂಚ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಸರ್ಕಾರದ ವಿರುದ್ಧ ಅಥವಾ ಸರ್ಕಾರದ ಆಡಳಿತ ನೀತಿಗಳ ವಿರುದ್ಧ ಟೀಕೆ ಮಾಡುವುದು ದೇಶದ್ರೋಹ ಎನಿಸಿಕೊಳ್ಳುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಆದರೆ ಸರ್ಕಾರದ ಆಡಳಿತ ನೀತಿಗಳನ್ನು ಟೀಕಿಸಲು, ವಿಮರ್ಶಿಸಲು ಇರುವ ಎಲ್ಲ ವೇದಿಕೆಗಳನ್ನೂ ನಿಯಂತ್ರಿಸುವ ಕಾನೂನುಗಳನ್ನು ರೂಪಿಸಲಾಗುತ್ತಿದೆ. ಈ ಬೆಳವಣಿಗೆ ನ್ಯಾಯಾಂಗದ ಪರಾಮರ್ಶೆಗೆ ಒಳಪಟ್ಟರೆ ಮಾತ್ರ ಸಾಂವಿಧಾನಿಕ ಹಕ್ಕುಗಳ ರಕ್ಷಣೆ ಸಾಧ್ಯ. ಡಿಜಿಟಲ್ ಸುದ್ದಿ ವೇದಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಿಸಲಾಗುವ ಸುದ್ದಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಚಿಸಿರುವ ಆರು ಸದಸ್ಯರ ಸಚಿವರ ಕೂಟ ತನ್ನ ವರದಿಯನ್ನು ಸಲ್ಲಿಸಿದ್ದು, ಈ ವರದಿಯಲ್ಲಿ ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸುವ ಹಲವು ಸಲಹೆಗಳನ್ನು ನೀಡಲಾಗಿದೆ. ಕೋವಿದ್ 19 ಸಂದರ್ಭದಲ್ಲೇ ಆರು ಬಾರಿ ಸಭೆ ನಡೆಸಿರುವ ಈ ಸಚಿವರ ಕೂಟದಲ್ಲಿ ವಿದೇಶಾಂಗ ಸಚಿವರು, ಕಾನೂನು ಸಚಿವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಸರ್ಕಾರದ ಪರ ವಹಿಸದ ಪತ್ರಕರ್ತರನ್ನು, ಪತ್ರಿಕಾ ಸಮೂಹ ಮತ್ತು ಮಾಧ್ಯಮಗಳನ್ನು ಹೇಗೆ ಸೆಳೆಯಬೇಕು ಎನ್ನುವುದರ ಬಗ್ಗೆ ಕೆಲವು ಸಚಿವರು ಸಲಹೆಗಳನ್ನು ನೀಡಿದ್ದು, ಈ ನಿಟ್ಟಿನಲ್ಲಿ ಸುದ್ದಿ ಪ್ರಸರಣವನ್ನು ನಿಯಂತ್ರಿಸುವ ಬಗ್ಗೆ ಈಗಾಗಲೇ ‘ ಗೋದಿ ಮೀಡಿಯಾ ’ ಎಂದೇ ಹೆಸರಾಗಿರುವ ವಂದಿಮಾಗಧ ಮಾಧ್ಯಮಗಳಿಂದಲೇ ಸಲಹೆ ಪಡೆಯಲಾಗಿದೆ. ಪತ್ರಕರ್ತರನ್ನು, ಸರ್ಕಾರದ ಪರ, ವಿರೋಧಿ ಮತ್ತು ತಟಸ್ಠ ಎಂದು ಮೂರು ವರ್ಗಗಳನ್ನಾಗಿ ವಿಂಗಡಿಸುವಂತೆ ಓರ್ವ ಸಚಿವರು ಸಲಹೆ ನೀಡಿದ್ದರೆ, ಮತ್ತೊಬ್ಬರು ಮಾಧ್ಯಮಗಳಲ್ಲಿ ಸರ್ಕಾರದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಸೃಷ್ಟಿಸುವ 50 ಪತ್ರಕರ್ತರನ್ನು ಗುರುತಿಸಿ ಅವರ ಮೇಲೆ ನಿಗಾ ವಹಿಸಲು ಸಲಹೆ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ವರದಿಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಲಾಗುವುದಿಲ್ಲ. ಏಕೆಂದರೆ ಕರ್ನಾಟಕವನ್ನೂ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಸರ್ಕಾರಿ ನೌಕರರಲ್ಲಿ ಇರಬಹುದಾದ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯ ಕತ್ತು ಹಿಸುಕುವಂತಹ ಕಾನೂನುಗಳನ್ನು ಜಾರಿಗೊಳಿಸಿವೆ. ಕಳೆದ ವರ್ಷ ರಾಜ್ಯ ಬಿಜೆಪಿ ಸರ್ಕಾರ ಹೊರಡಿಸಿದ ಆದೇಶದ ಅನ್ವಯ ಯಾವುದೇ ಸರ್ಕಾರಿ ನೌಕರರು ಪೂರ್ವಾನುಮತಿ ಇಲ್ಲದೆ ಸಿನಿಮಾಗಳಲ್ಲಿ, ಟಿ ವಿ ಧಾರಾವಾಹಿಗಳಲ್ಲಿ ನಟಿಸುವಂತಿಲ್ಲ, ಯಾವುದೇ ರೀತಿಯ ಪುಸ್ತಕ ಪ್ರಕಟಿಸುವಂತಿಲ್ಲ, ಕೇಂದ್ರ ಮತ್ತು ಯಾವುದೇ ರಾಜ್ಯ ಸರ್ಕಾರಗಳ ಆಡಳಿತ ನೀತಿಗಳನ್ನು ಟೀಕಿಸಿ ಲೇಖನಗಳನ್ನು ಬರೆಯುವಂತಿಲ್ಲ.
ಮೊದಲಿನಿಂದಲೂ ಈ ರೀತಿಯ ಸೇವಾ ನಿಯಮ ಜಾರಿಯಲ್ಲಿತ್ತಾದರೂ ಕರ್ನಾಟಕ ನಾಗರಿಕ ಸೇವಾ ಕಾಯ್ದೆಯಲ್ಲಿ ನಿರ್ಬಂಧಗಳನ್ನು ನಮೂದಿಸಲಾಗಿರಲಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಅನೇಕ ಅಧ್ಯಾಪಕರು, ಶಿಕ್ಷಕರು, ಸರ್ಕಾರಿ ನೌಕರರು ತಮ್ಮ ಕಾವ್ಯ , ಕಾದಂಬರಿ, ಕಥೆ ಮತ್ತು ಇತರ ರೀತಿಯ ಬರಹಗಳ ಮೂಲಕ ಜನಜಾಗೃತಿ ಮೂಡಿಸುತ್ತಲೇ ಬಂದಿದ್ದಾರೆ. ಸರ್ಕಾರಗಳ ಜನವಿರೋಧಿ ಆಡಳಿತ ನೀತಿಗಳ ವಿರುದ್ಧ ಜನಜಾಗೃತಿ ಮೂಡಿಸುತ್ತಲೇ ಬಂದಿದ್ದಾರೆ. ಇಂದು ಸರ್ಕಾರದ ವಿರುದ್ಧ ಮಾತನಾಡುವುದೇ ದೇಶದ್ರೋಹ ಎನ್ನುವ ಆಡಳಿತ ವ್ಯವಸ್ಥೆಯ ಧೋರಣೆ ಗಟ್ಟಿಯಾಗುತ್ತಿರುವ ಸಂದರ್ಭದಲ್ಲಿ ಈ ರೀತಿಯ ನಿಯಮಗಳು ಸೃಜನಶೀಲ ಮನಸುಗಳನ್ನು ನಿಷ್ಕ್ರಿಯಗೊಳಿಸಿಬಿಡುತ್ತವೆ. ಸರ್ಕಾರದ ಜನವಿರೋಧಿ, ಸಮಾಜ ವಿರೋಧಿ ನೀತಿಗಳನ್ನೂ ಟೀಕೆ ಮಾಡದಂತೆ ಸರ್ಕಾರಿ ನೌಕರರ ಮೇಲೆ ನಿರ್ಬಂಧ ಹೇರಲಾಗಿದೆ. ಈಗ ಸಾಮಾಜಿಕ ಮಾಧ್ಯಮಗಳ ಮೇಲೆ ಸರ್ಕಾರದ ಕಾಕದೃಷ್ಟಿ ಬಿದ್ದಿದೆ. ಆಡಳಿತ ವ್ಯವಸ್ಥೆಯನ್ನು ಪ್ರಶ್ನಾತೀತವನ್ನಾಗಿ ಮಾಡುವ ಇಂತಹ ನಿಯಮಗಳು ಭಾರತವನ್ನು ನಿರಂಕುಶಾಧಿಪತ್ಯದತ್ತ ಕೊಂಡೊಯ್ಯುತ್ತಿರುವುದು ಸ್ಪಷ್ಟ.
ಇತ್ತೀಚೆಗೆ ಭಾರತದ ವಿದೇಶಾಂಗ ಸಚಿವಾಲಯ ಹೊರಡಿಸಿದ ಆದೇಶವೊಂದರ ಅನುಸಾರ ಸಾರ್ವಜನಿಕ ಹಣದಿಂದ ನಿರ್ವಹಿಸಲ್ಪಡುವ ಭಾರತದ ಯಾವುದೇ ವಿಶ್ವವಿದ್ಯಾಲಯಗಳ ಪ್ರೊಫೆಸರ್ ಗಳು, ಅಧ್ಯಾಪಕರು ಅಂತರ ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ನಡೆಸುವ ಮುನ್ನ ಸಚಿವಾಲಯದ ಅನುಮತಿ ಪಡೆಯುವುದು ಕಡ್ಡಾಯ ಮಾಡಲಾಗಿದೆ. ಭಾರತದ ಆಂತರಿಕ ವಿಚಾರಗಳ ಬಗ್ಗೆ ವಿಚಾರಸಂಕಿರಣ ನಡೆಸುವುದಕ್ಕೆ ಬಹುತೇಕ ನಿರ್ಬಂಧ ಹೇರಲಾಗಿದ್ದು, ಜಮ್ಮು ಕಾಶ್ಮೀರ, ಈಶಾನ್ಯ ರಾಜ್ಯಗಳು, ಭಾರತದ ಗಡಿ ರೇಖೆಗಳು ಹೀಗೆ ಹಲವು ವಿಚಾರಗಳನ್ನು ಆಂತರಿಕ ವಿಚಾರಗಳ ಪರಿಧಿಯಲ್ಲೇ ಪರಿಗಣಿಸಲಾಗುತ್ತದೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತ ಮುಷ್ಕರವನ್ನೂ ಭಾರತ ಸರ್ಕಾರ ಆಂತರಿಕ ವಿಚಾರ ಎಂದೇ ಭಾವಿಸುತ್ತದೆ. ಸೂಕ್ಷ್ಮ ವಿಚಾರಗಳನ್ನೂ ಈ ಚೌಕಟ್ಟಿನಲ್ಲೇ ಪರಿಗಣಿಸಲಾಗುವುದರಿಂದ, ಇಂದಿನ ಆಡಳಿತ ವ್ಯವಸ್ಥೆಯನ್ನು ಗಮನಿಸಿದರೆ ಕೋಮುವಾದ, ಮತಾಂಧತೆ, ಹಿಂದುತ್ವ, ಜಾತಿ ದೌರ್ಜನ್ಯ ಇವೆಲ್ಲವೂ ವಿಚಾರ ಸಂಕಿರಣಗಳಿಂದ ಹೊರಗುಳಿಯುವ ವಿಷಯಗಳೇ ಆಗಿಬಿಡುತ್ತವೆ. ಇದು ಬಹುಮಟ್ಟಿಗೆ ವಿಚಾರ ಮಂಥನದ ಹಕ್ಕನ್ನು ಹತ್ತಿಕ್ಕುವ ಪ್ರಯತ್ನ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈಗಾಗಲೇ ವಿಶ್ವವಿದ್ಯಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ, ಸಮಾಜೋ ಸಾಂಸ್ಕೃತಿಕ ವಿಚಾರಗಳ ಬಗ್ಗೆ ವಿಚಾರ ಸಂಕಿರಣಗಳನ್ನು ನಡೆಸುವುದು ಅಸಾಧ್ಯವೇ ಆಗಿಹೋಗಿದೆ.
ಸರ್ಕಾರಿ ನೌಕರರು, ವೈದ್ಯರು, ವಿಜ್ಞಾನಿಗಳು, ಸಂಶೋಧಕರು, ಜಂಟಿ ಕಾರ್ಯದರ್ಶಿಗಿಂತಲೂ ಉನ್ನತ ಹುದ್ದೆ ಹೊಂದಿರುವವರು, ವಿಶ್ವವಿದ್ಯಾಲಯದ ಅಧ್ಯಾಪಕ ವರ್ಗ, ಬೋಧನಾ ಸಿಬ್ಬಂದಿ ಹೀಗೆ ಎಲ್ಲರೂ ಸಹ ಅಂತರ ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವ ಮುನ್ನ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯವಾಗಿ ಪಡೆಯಬೇಕಾಗುತ್ತದೆ. ವಿದೇಶಿ ಗಣ್ಯರ ಉಪಸ್ಥಿತಿ ಇಲ್ಲದ ವಿಚಾರ ಸಂಕಿರಣಗಳಿಗೂ ಈ ನಿಯಮ ಅನ್ವಯಿಸುತ್ತದೆ. ಆನ್ ಲೈನ್ ಸಭೆಗಳನ್ನು ನಡೆಸುವ ಸಂದರ್ಭದಲ್ಲಿ ಬಳಸಲಾಗುವ ಆನ್ ಲೈನ್ ವೇದಿಕೆಗಳು ವಿದೇಶಿ ಕಂಪನಿಗಳ ನಿಯಂತ್ರಣದಲ್ಲಿದ್ದ ಪಕ್ಷದಲ್ಲಿ, ಉದಾಹರಣೆಗೆ ಝೂಂ, ಅದರ ಕೊಂಡಿಯನ್ನು ವಿದೇಶಾಂಗ ಸಚಿವಾಲಯಕ್ಕೆ ಒದಗಿಸುವಂತೆ ಸೂಚಿಸಲಾಗಿದೆ.
ಒಂದು ಕಾರ್ಮಿಕ ಮುಷ್ಕರವನ್ನು, ರೈತ ಹೋರಾಟವನ್ನು, ವಿದ್ಯಾರ್ಥಿಗಳ ಸಂಘರ್ಷವನ್ನು ಬೆಂಬಲಿಸುವುದೇ ದೇಶದ್ರೋಹಿ ಕೃತ್ಯ ಎನ್ನುವ ವಿಕೃತ ಮನೋಭಾವ ಇಂದಿನ ಆಡಳಿತ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿರುವುದು ಜೆಎನ್ಯು ಘಟನೆಗಳಿಂದಲೇ ಸ್ಪಷ್ಟವಾಗಿದೆ. ದೇಶದ ಬೌದ್ಧಿಕ ಸಂಪತ್ತು ಮತ್ತು ಸಂಪನ್ಮೂಲಗಳನ್ನು ಮತ್ತಷ್ಟು ವೃದ್ಧಿಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸುವ ಶೈಕ್ಷಣಿಕ ವಲಯವನ್ನು, ವಿಶೇಷವಾಗಿ ವಿಶ್ವವಿದ್ಯಾಲಯಗಳನ್ನು ನಿಯಂತ್ರಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚಿಂತನ-ಮಂಥನ ಪ್ರಕ್ರಿಯೆಯನ್ನೇ ಅವಸಾನದ ಅಂಚಿಗೆ ಕೊಂಡೊಯ್ಯುತ್ತಿವೆ. ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕು ಕ್ರಮೇಣ ಮರೀಚಿಕೆಯಾಗುತ್ತಿರುವುದು ಸ್ಪಷ್ಟ.
ಈ ಬೆಳವಣಿಗೆ ಅಪೇಕ್ಷಣೀಯವಲ್ಲ ಆದರೆ ಅನಿರೀಕ್ಷಿತವೂ ಅಲ್ಲ. 1990ರ ದಶಕದ ರಾಮಮಂದಿರ ವಿವಾದ, ಧರ್ಮ ಸಂಸತ್ತು, ವಾಜಪೇಯಿ ಸರ್ಕಾರದ ಸಂದರ್ಭದಲ್ಲಿನ ಸಂವಿಧಾನ ಪರಾಮರ್ಶೆಯ ಕಸರತ್ತು ಮತ್ತು ಇತರ ರಾಜಕೀಯ ಬೆಳವಣಿಗೆಗಳು ಇವತ್ತಿನ ಪರಿಸ್ಥಿಗೆ ಪೂರಕವಾಗಿಯೇ ಇದ್ದವು. ಸ್ಪಷ್ಟ ಬಹುಮತ ಇಲ್ಲದಿದ್ದುದು ಒಂದು ಅಡ್ಡಗೋಡೆಯಾಗಿತ್ತು. 2014ರ ಚುನಾವಣೆಗಳಲ್ಲಿ ಭಾರತದ ಪ್ರಜ್ಞಾವಂತ ಮತದಾರರು, ಆಯ್ಕೆಯ ಪರ್ಯಾಯ ಇಲ್ಲದೆ ನೀಡಿದ ಸ್ಪಷ್ಟ ಬಹುಮತ ಇಂದು ನಾವೇ ಸೃಷ್ಟಿಸಿಕೊಂಡ ಪೆಡಂಭೂತದಂತೆ ನಮ್ಮೆದುರು ನಿಂತಿದೆ. ಇಂದಿಗೂ ಸಹ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂವಿಧಾನ ವಿರೋಧಿ ಕ್ರಮಗಳನ್ನು, ಕಾಯ್ದೆ ಕಾನೂನುಗಳನ್ನು ಮೌನವಾಗಿ ಸಹಿಸಿಕೊಳ್ಳುವ ನಿಷ್ಕ್ರಿಯ ಜನಸಮೂಹ ಒಂದೆಡೆ ಇದ್ದರೆ ಮತ್ತೊಂದೆಡೆ ಈ ಜನವಿರೋಧಿ ಕ್ರಮಗಳನ್ನು ಸಮರ್ಥಿಸಿಕೊಳ್ಳುವ ಬೃಹತ್ ಜನಸಮೂಹ ನಮ್ಮ ನಡುವೆ ಇದೆ.
ಸಮೂಹ ಸನ್ನಿಗೊಳಗಾಗಿರುವ ಈ ಸಮರ್ಥಕ ಪಡೆ, ಆಳುವ ವರ್ಗಗಳಿಗಿಂತಲೂ ಹೆಚ್ಚು ಅಪಾಯಕಾರಿಯಾಗಿ ಕಾಣುತ್ತಿದೆ. ಸಮಸ್ತ ಜನಕೋಟಿಯ ಜೀವನೋಪಾಯಕ್ಕೇ ಸಂಚಕಾರ ತರುವಂತಹ ತೈಲ ಬೆಲೆ ಹೆಚ್ಚಳ, ಭವಿಷ್ಯದ ಪೀಳಿಗೆಯ ಉಜ್ವಲ ಬದುಕಿಗೆ ಸಂಚಕಾರ ತರುವ ಎಗ್ಗಿಲ್ಲದ ಖಾಸಗೀಕರಣ ಮತ್ತು ದೇಶದ ಸಂಪತ್ತು-ಸಂಪನ್ಮೂಲದ ಮಾರಾಟ, ಇಂತಹ ಗಂಭೀರ ಸಮಸ್ಯೆಗಳೂ ಈ ಸನ್ನಿಗೊಳಗಾದ ಜನತೆಯನ್ನು ಜಾಗೃತಗೊಳಿಸುತ್ತಿಲ್ಲ. ವ್ಯಕ್ತಿ ಆರಾಧನೆ, ಸ್ವ ಹಿತಾಸಕ್ತಿ, ಸಂಕುಚಿತ ದೃಷ್ಟಿಕೋನ ಮತ್ತು ಸಮಷ್ಟಿ ಪ್ರಜ್ಞೆಯ ಕೊರತೆ ಒಂದು ಸಮಾಜವನ್ನು ಹೇಗೆ ನಿಷ್ಕ್ರಿಯಗೊಳಿಸುತ್ತದೆ ಎನ್ನುವುದಕ್ಕೆ 21ನೆಯ ಶತಮಾನದ ಆತ್ಮ ನಿರ್ಭರ ಭಾರತ ಅಜರಾಮರ ಸಾಕ್ಷಿಯಾಗಲಿದೆ.
ಇಂದು ಅಭಿವ್ಯಕ್ತಿಯ ಎಲ್ಲ ಮಾರ್ಗಗಳೂ ಗ್ರಾಂಥಿಕವಾಗಿ ಮುಕ್ತವಾಗಿವೆ. ಸಂವಿಧಾನ ದತ್ತ ಮೂಲಭೂತ ಹಕ್ಕುಗಳು ಯಥಾಸ್ಥಿತಿಯಲ್ಲಿ ಸಮಸ್ತ ಪ್ರಜೆಗಳಿಗೂ ಲಭ್ಯವಿದೆ. ಏಕೆಂದರೆ ಸಂವಿಧಾನದ ಯಾವ ಪರಿಚ್ಚೇದಗಳೂ ತಿದ್ದುಪಡಿಯಾಗಿಲ್ಲ. ಹಾಗಾಗಿ ನಾವು ಸಂವಿಧಾನವನ್ನು ಎದೆಗವುಚಿಕೊಂಡು ಮನೆಮನೆಗೆ ಹಂಚುತ್ತಿದ್ದೇವೆ. ಇದು ಸ್ತುತ್ಯಾರ್ಹ ಕಾರ್ಯ. ಅತಿಹೆಚ್ಚು ಜನರು ಸಂವಿಧಾನವನ್ನು ಓದಿ, ಗ್ರಹಿಸಿ, ಮನನ ಮಾಡಿಕೊಂಡಷ್ಟೂ ಪ್ರಜಾತಂತ್ರದ ಬೇರುಗಳು ಗಟ್ಟಿಯಾಗುತ್ತವೆ. ನಮ್ಮ ಹಕ್ಕುಗಳು ಏನು ಮತ್ತು ಏಕೆ ನೀಡಲ್ಪಟ್ಟಿವೆ ಎನ್ನುವುದನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಇದು ಅವಶ್ಯವೂ ಹೌದು.
ಆದರೆ ಹೀಗೆ ಸಂವಿಧಾನವನ್ನು ಒಂದು ಕೈಯ್ಯಲ್ಲಿ ಎದೆಗವುಚಿಕೊಂಡೇ ತಮ್ಮ ಮತ್ತೊಂದು ಕೈಯ್ಯನ್ನು ಪ್ರಜೆಗಳ ಸಾಂವಿಧಾನಿಕ ಹಕ್ಕುಗಳನ್ನು ವಾಮಮಾರ್ಗಗಳ ಮೂಲಕ ಕಸಿದುಕೊಳ್ಳುತ್ತಿರುವ, ಪ್ರಜಾತಂತ್ರ ಮೌಲ್ಯಗಳ ಕತ್ತು ಹಿಸುಕುತ್ತಿರುವ , ಆಳುವ ವರ್ಗಗಳ ಹೆಗಲ ಮೇಲೆ ಹಾಕಿ ನಡೆಯುತ್ತಿರುವ ಜನಪ್ರತಿನಿಧಿಗಳನ್ನು ಹೇಗೆ ಬಣ್ಣಿಸುವುದು ? ಜೆಎನ್ಯು, ಪೌರತ್ವ ತಿದ್ದುಪಡಿ ಕಾಯ್ದೆ, ಶಹೀನ್ಭಾಗ್, ರೈತ ಮುಷ್ಕರ ಮತ್ತು ದಿಶಾ ರವಿ ಪ್ರಕರಣದವರೆಗೂ ಪ್ರಜಾತಂತ್ರ ಮೌಲ್ಯಗಳ ಕತ್ತುಹಿಸುಕುವ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ. ಇದು ಮಿತಿ ಮೀರಿ ಹೋಗುತ್ತಿರುವುದರಿಂದಲೇ ಸುಪ್ರೀಂಕೋರ್ಟ್ ಸಹ “ ಸರ್ಕಾರ ಅಥವಾ ಸರ್ಕಾರದ ಆಡಳಿತ ನೀತಿಗಳನ್ನು ಟೀಕಿಸುವುದು ದೇಶದ್ರೋಹ ಎನಿಸುವುದಿಲ್ಲ ” ಎಂದು ಹೇಳಿದೆ.
ಆದಾಗ್ಯೂ ಈ ದಮನಕಾರಿ ನೀತಿಗಳು ಮುಂದುವರೆಯುತ್ತಲೇ ಇವೆ. ಸರ್ಕಾರಿ ನೌಕರರನ್ನು ಮತ್ತು ಸಾರ್ವಭೌಮ ಪ್ರಜೆಗಳನ್ನು, ಲೇಖಕರನ್ನು, ಬರಹಗಾರರನ್ನು, ಕಲಾವಿದರನ್ನು ಕಾಯ್ದೆ, ನಿಯಮ, ಕಾನೂನುಗಳ ಮೂಲಕ ಚಿಂತನಹೀನರನ್ನಾಗಿ ಮಾಡುವ, ಕ್ರಿಯಾಶೀಲತೆಯಿಂದ ವಂಚಿಸುವ, ಸೃಜನಶೀಲತೆಯಿಂದ ವಿಮುಖರಾಗುವಂತೆ ಮಾಡುವ, ಒಂದು ಆಡಳಿತ ವ್ಯವಸ್ಥೆಯಲ್ಲಿ ನಾವಿದ್ದೇವೆ. ಈ ಆಡಳಿತ ವ್ಯವಸ್ಥೆಯನ್ನು ಒಪ್ಪಿಕೊಂಡು ತಮ್ಮ ಸ್ವಾರ್ಥ ಸಾಧನೆಗಾಗಿ, ಅಧಿಕಾರ ರಾಜಕಾರಣದ ಹಂಬಲಕ್ಕಾಗಿ, ಸ್ವ-ಕಲ್ಪಿತ ಸೈದ್ಧಾಂತಿಕ ಬದ್ಧತೆಯ ನೆರಳಲ್ಲಿ ಸಂವಿಧಾನ ವಿರೋಧಿ ಆಡಳಿತ ನೀತಿಗಳನ್ನು ಬೆಂಬಲಿಸುವ ಜನಪ್ರತಿನಿಧಿಗಳು ಪ್ರಜೆಗಳ ದೃಷ್ಟಿಯಲ್ಲಿ ದ್ರೋಹಿಗಳಾಗಿ ಕಾಣುತ್ತಿದ್ದಾರೆ.
ಗಡಿ ಸುರಕ್ಷತೆ, ರಕ್ಷಣಾ ವ್ಯವಸ್ಥೆಯ ಸಬಲೀಕರಣ ಮತ್ತು ಶತ್ರು ರಾಷ್ಟ್ರಗಳನ್ನು ಹಿಮ್ಮೆಟ್ಟಿಸುವ ಆತ್ಮಸ್ಥೈರ್ಯ ಭೌಗೋಳಿಕವಾಗಿ ದೇಶವನ್ನು ರಕ್ಷಿಸುತ್ತದೆ. ಆದರೆ ಪ್ರಜಾಸತ್ತಾತ್ಮಕ ಮೌಲ್ಯಗಳೇ ದುರ್ಬಲವಾಗುತ್ತಿರುವಾಗ ದೇಶ ಆಂತರಿಕವಾಗಿ ಶಿಥಿಲವಾಗುತ್ತಾ ಹೋಗುತ್ತದೆ. ರಾಫೇಲ್, ಕ್ಷಿಪಣಿ, ಅಣುಬಾಂಬುಗಳು ಬಡತನ, ಅಪೌಷ್ಟಿಕತೆಯನ್ನು ಹೋಗಲಾಡಿಸುವುದೂ ಇಲ್ಲ, ಸಾಮಾಜಿಕ ಸಮಾನತೆಯನ್ನು ಕಾಪಾಡುವುದೂ ಇಲ್ಲ, ಸಾಂಸ್ಕೃತಿಕ ವೈವಿಧ್ಯತೆಯನ್ನು ಸಂರಕ್ಷಿಸುವುದೂ ಇಲ್ಲ. ಇದನ್ನು ಸಾಧಿಸಬೇಕಾದರೆ ನಮ್ಮ ಸಂವಿಧಾನದ ಅಂತಃಸತ್ವ ಉಳಿಯಬೇಕು, ತಳಮಟ್ಟದಲ್ಲಿ ಉಳಿಯಬೇಕು, ಸಾರ್ವಭೌಮ ಪ್ರಜೆಗಳ ನಡುವೆ ಉಳಿಯಬೇಕು, ಗ್ರಾಂಥಿಕವಾಗಿ ಉಳಿದರೆ ಸಾಲದು. ಜನರ ನಾಡಿಮಿಡಿತವನ್ನೇ ಗ್ರಹಿಸಲಾರದಷ್ಟು ಭ್ರಷ್ಟರಾಗಿರುವ ಜನಪ್ರತಿನಿಧಿಗಳಿಗೆ ಈ ವಾಸ್ತವದ ಅರಿವು ಮೂಡಬೇಕು. ಆಗ ಮಾತ್ರ ನಾವು ಸಂವಿಧಾನವನ್ನು ಕೈಯ್ಯಲ್ಲಿ ಹಿಡಿದು ಎದೆಗವುಚಿಕೊಂಡು ಅಂಬೇಡ್ಕರರತ್ತ ನಡೆಯುವ ಅರ್ಹತೆ ಪಡೆಯಲು ಸಾಧ್ಯ.
ಹೆಚ್ಚಿನ ಬರಹಗಳಿಗಾಗಿ
ಚಾಚಾ ನೆಹರು ಮತ್ತು ನಮ್ಮ ಮಕ್ಕಳು
ಭವಿಷ್ಯದ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರು
ಹಿಂದಿ ಹೇರಿಕೆ ಸರಿಯೇ?