- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
ಇಂದು ಅಭಿಜ್ಞಾನ ಶಾಕುಂತಲದ ೫ ನೆಯ ಅಂಕವನ್ನು ಪ್ರವೇಶಿಸುತ್ತಾ ಇದ್ದೇವೆ. ಇಲ್ಲಿಯವರೆಗೆ ಆಶ್ರಮದ ಪ್ರಕೃತಿ ಸೌಂದರ್ಯ ಹಾಗೂ ಸರಳ ಜೀವನವನ್ನು ಕಂಡೆವು.
ಈಗ ದೃಶ್ಯ ಒಮ್ಮೆಲೆ ಆಶ್ರಮದಿಂದ ದುಷ್ಯಂತನ ರಾಜಧಾನಿಗೆ ಸ್ಥಳಾಂತರ ಆಗುತ್ತೆ.
ಶಾರಂಗರವ ಹಾಗೂ ಶಾರದ್ವತ ಇಬ್ಬರು ಕಣ್ವರ ಶಿಷ್ಯರು ಮತ್ತು ತಾಯಿ ಸ್ಥಾನದಲ್ಲಿ ಇದ್ದ ಗೌತಮಿ, ಶಕುಂತಲೆಯೊಂದಿಗೆ ಅರಮನೆಯ ದ್ವಾರದಲ್ಲಿ ಇದ್ದಾರೆ. ರಾಜನ ಅಪ್ಪಣೆಗೆ ಕಾಯುತ್ತಿದ್ದಾರೆ.
ದುರ್ವಾಸರ ಶಾಪದ ಪರಿಣಾಮವಾಗಿ ಹಿಂದಿನ ಪ್ರಸಂಗ ಮರೆತ ಅವನಿಗೆ ,ಆಶ್ರಮ ವಾಸಿಗಳ ಈ ಭೇಟಿಯ ಕಾರಣ ಗೊತ್ತಾಗದೇ ಇದ್ದರೂ ಒಳಗೆ ಪ್ರವೇಶ ಮಾಡಲು ಹೇಳಿ ಕಳಿಸಿದನು.
ಪಾರಂಪರಿಕ ಅತಿಥಿ ಸತ್ಕಾರ, ಸಮ್ಮಾನಗಳು, ಕ್ಷೇಮ ಸಮಾಚಾರ ಆದ ಮೇಲೆ ಶಾರಂಗರವ ದುಷ್ಯಂತನಿಗೆ
” ತಮ್ಮ ಪತ್ನಿಯಾದ ಶಕುಂತಲೆಯನ್ನು ಸ್ವೀಕರಿಸಬೇಕು “
ಎಂದು ವಿನಮ್ರವಾಗಿ ಕೇಳಿಕೊಂಡನು. ಹಿಂದಿನ ಘಟನೆಗಳನ್ನು ಮರೆತ ದುಷ್ಯಂತ ಶಕುಂತಲೆಯನ್ನು ಸ್ವೀಕರಿಸಲು ನಿರಾಕರಿಸಿದನು.
ಗುರುತಿಗಾಗಿ ಉಂಗುರ ತೋರಿಸಬೇಕು ಎಂದಾಗ ದುರದೃಷ್ಟವಶಾತ್ ಅದು ಪ್ರಯಾಣ ಸಮಯದಲ್ಲಿ ಎಲ್ಲಿಯೋ ಕಳೆದು ಹೋಗಿರುತ್ತದೆ. ರಾಜನನ್ನು ಒಪ್ಪಿಸಲಾರದೇ ನಿರಾಶರಾಗಿ, ಶಕುಂತಲೆಯನ್ನು ದೈವದ ಅಧೀನಕ್ಕೆ ಒಪ್ಪಿಸಿ ತಿರುಗಿ ಹೊರಟರು ಶಾರಂಗರವ ಮೊದಲಾದವರು.
ದು:ಖಿಸುತ್ತಿರುವ ಒಂಟಿಯಾಗಿ ನಿಂತ ಶಕುಂತಲೆಯನ್ನು ಅಪ್ಸರೆ ಒಬ್ಬಳು ಬಂದು ಅವಳನ್ನು ಎತ್ತಿಕೊಂಡು ಹೋದದ್ದನ್ನು ಕಂಡು ರಾಜ ಹಾಗೂ ಅವನ ಪರಿವಾರದವರು ಆಶ್ಚರ್ಯ ಚಕಿತರಾಗುತ್ತಾರೆ.
ಆಗ ಪರದೆ ೫ನೇ ಅಂಕದ ಕೊನೆಯತ್ತ , ಜಾರುತ್ತದೆ.
ನಾಟಕವಿನ್ನೂ ಉಳಿಯುತ್ತದೆ.
ಇದು ಈ ಅಂಕದ ಸಾರಾಂಶ.
ಮೊದಲೇ ಹೇಳಿದಂತೆ ಇದು ಮೂಲ ಕಥೆಯಲ್ಲಿ ಬರುವುದಿಲ್ಲ.
ಅಲ್ಲಿ ಗಾಂಧರ್ವ ವಿವಾಹದ ನಂತರ ಗರ್ಭಿಣಿ ಆದ ಶಕುಂತಲೆ ದುಷ್ಯಂತನ ನಿರೀಕ್ಷೆಯಲ್ಲಿ ಕಣ್ವರ ಆಶ್ರಮದೊಳಗೇ ಕಾಲಕಳೆದು, ಸರ್ವದಮನನಿಗೆ ತಾಯಿ ಆಗುತ್ತಾಳೆ. ಅವನು ದೊಡ್ಡವನಾದ ಮೇಲೆ ಎಲ್ಲರ ಸಮಾಗಮ ಆದದ್ದು ಎಂದು ಮಹಾಭಾರತದ ಕಥೆ ಹೇಳುತ್ತದೆ.
ಹಾಗೆ ತಾತ್ವಿಕ ದೃಷ್ಟಿಕೋನದಿಂದ ವಿಚಾರ ಮಾಡಿದರೆ ನಾವೆಲ್ಲರೂ ದುಷ್ಯಂತರೇ ಅಲ್ಲವೇ !!!
ಶಬ್ದ, ಸ್ಪರ್ಶ, ರಸ, ರೂಪ, ಗಂಧಗಳ ಆಕರ್ಷಣೆಗೆ ಒಳಗಾಗೀ ನಮ್ಮ ಸಚ್ಚಿದಾನಂದ ಸ್ವರೂಪ, ಸ್ವಭಾವವನ್ನೇ ಮರೆತಿರುತ್ತೇವೆ. ದು:ಖಿತರಾಗುತ್ತೇವೆ.
“ಇಲ್ಲಿ ಇರುವದು ಸುಮ್ಮನೆ, ಅಲ್ಲಿ ಇರುವದು ನಮ್ಮ ಮನೆ”
ಎಂದು ಅರಿವಾದಾಗ ನಮ್ಮ ನಿಜಸ್ವರೂಪದ ಅಭಿಜ್ಞಾನ ಆಗುತ್ತದೆ ಅಲ್ಲವೇ !!!!
ದುಷ್ಯಂತ ತನ್ನ ಆಸನದಲ್ಲಿ ಉಪಸ್ಥಿತನು. ವಿದೂಷಕನ ಪ್ರವೇಶ ಸೂಚಿಸುವುದರೊಂದಿಗೆ ೫ ನೆಯ ಅಂಕ ಪ್ರಾರಂಭ ಆಗುವದು.
‘ಹಂಸಪದಿಕಾ’ ಆಸ್ಥಾನ ಗಾಯಕಿಯ, (ರಾಜ ಮೆಚ್ಚುಗೆ ಪಡೆದ ಸ್ತ್ರೀಯರಲ್ಲಿ ಒಬ್ಬಳು) ಸಂಗೀತ ಆಲಿಸುವುದರಲ್ಲಿ ಅರಸ ಮಗ್ನನಾಗಿದ್ದನು.
ಗೀತೆಯ ಒಕ್ಕಣೆ ಹೀಗಿರುತ್ತದೆ.
” ಅಭಿನವ ಮಧು ಲೋಲುಪ: ತ್ವಮ್
ತಥಾ ಪರಿಚುಂಬ್ಯ ಚೂತಮಂಜರೀಮ್
ಕಮಲವಸತಿ ಮಾತ್ರ ನಿರ್ವೃತ: ಮಧುಕರ: ವಿಸ್ಮೃತ: ಅಸ್ಯ ಏನಾಂ ಕಥಮ್ “
ಯಾವಾಗಲೂ ಮಧು ಹೀರಲು ಹೊಸ,ಹೊಸ ಪುಷ್ಪಗಳನ್ನು ಅರಸುತ್ತಾ ಹೋಗುವ ಭೃಂಗವು
ಇಂದು ಕಮಲದಲಿ ಬಂದಿಯಾಗೀ, ಮಾವಿನ ಹೂಗಳ ಮಕರಂದ ಹೀರುವದನ್ನು ಮರೆತು, ಸ್ವಸ್ಥಾನದಲ್ಲಿ ನಿವೃತ್ತ ಆಗಿದೆ.
ಇದರ ಧ್ವನಿಯನ್ನು ಗುರುತಿಸುವುದು ಬಹಳ ಮಹತ್ವದ್ದು. ಕಾರಣ ಇದು ದುಷ್ಯಂತನ ಸ್ವಭಾವದ ಪರಿಚಯ ಮಾಡಿಕೊಡುತ್ತಿದೆ ಎನಬಹುದು !!!
ವಸಂತದಲ್ಲಿ ಮಾವಿನ ಚಿಗುರಿನಿಂದ ಆಕರ್ಷಿತ ಆದ ಭ್ರಮರ ಅದನ್ನು ಚುಂಬಿಸುವದು ,ಮಧು ಹೀರಲು. ಇದೇ ರೀತೀ ದುಷ್ಯಂತನೂ ಸಹ ಆನೇಕ ಸ್ತ್ರೀಯರಿಂದ ಆಕರ್ಷಿತನಾಗಿ ಅವರಲ್ಲಿ ಸ್ನೇಹ ಬಯಸಿ, ಅನುಭವಿಸಿ ನಂತರ ಅವರನ್ನು ಮರೆತು ಬಿಟ್ಟಿರುವದರ ಸೂಚನೆ ಇಲ್ಲಿ ಇದೆ!
ವಸುಮತೀ, ರಾಜನ ಪಟ್ಟ ಮಹಿಷಿ ಇದರಿಂದ ಕೋಪಗೊಂಡು ದುಷ್ಯಂತನನ್ನು ದೂರಿ ,ಈಗ ತನ್ನ ವಶದಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸಿರುವಳು.
ಹಂಸಪದಿಕೆಯೂ ದುಷ್ಯಂತ ಮರೆತ ಸ್ತ್ರೀಯರಲ್ಲಿ ಒಬ್ಬಳು. ಈ ಗೀತೆಯನ್ನು ಆಲಿಸುತ್ತಾ ಇರುವಾಗ, ಹಂಸಪದಿಕೆ ತನ್ನನ್ನು ದೂರುತ್ತಾ ಇರುವಳು ಎಂದು ರಾಜನಿಗೆ ಎನಿಸಿತು.
ಅಥವಾ ಶಕುಂತಲೆಯನ್ನು ಮರೆತಿರುವ ಸಂದರ್ಭದ ಧ್ವನಿ ಸೂಚನೆಯೂ ಆಗಿರಬಹುದು ಅಲ್ಲವೇ !!!
ದುಷ್ಯಂತ, ರಾಣಿ ವಸುಮತಿಯನ್ನು ನೋಯಿಸಲಾರ. ಹಂಸಪದಿಕೆ ತನ್ನನ್ನು ದೂರುತ್ತಾ ಇರುವ ಸತ್ಯ ಗ್ರಹಿಸಿದ. ಅವಳಿಗೆ ತಿಳಿಸಿ ಹೇಳು ಎಂದು ವಿದೂಷಕನನ್ನು ದುಷ್ಯಂತ ಕಳಿಸಿ ಕೊಡುವನು.
ವಿದೂಷಕ ಅತ್ತ ಹೋಗುತ್ತಿದ್ದಂತೆ ಕಂಚುಕೀ ಪ್ರವೇಶಿಸುವನು.
ಇಲ್ಲಿ ಕಂಚುಕಿಯ ಪರಿಚಯ ಮಾಡಿ ಕೊಡಬೇಕಲ್ಲವೇ ?
ಇವನೊಬ್ಬ ಅರಮನೆಯ ಅಧಿಕಾರಿ. ಅಧಿಕಾರ ತೋರಿಸುವ ಬೆಳ್ಳಿ ದಂಡ ಕೈಯಲ್ಲಿ. ಇವನಿಗೆ ಮಾತ್ರ ಅಂತ:ಪುರದಲ್ಲಿ ಪ್ರವೇಶ ಇರುತ್ತದೆ. ಕರ್ತವ್ಯವನ್ನು ಚಾಚೂ ತಪ್ಪದೆ ಪಾಲಿಸುವವನು ! Duty bound. ಇವನು ಸ್ವಲ್ಪ ವಯಸ್ಸಾದವನೂ, ಅನುಭವಸ್ಥನೂ ಆಗಿರುತ್ತಾನೆ. ಅಧಿಕಾರದ ದಂಡವೇ ಊರುಗೋಲೂ ಆಗುವದು.
ಆಶ್ರಮವಾಸಿಗಳು ದ್ವಾರದಲ್ಲಿ ಕಾಯುತ್ತಾ ಇರುವ ವಿಷಯ ರಾಜನಿಗೆ ತಿಳಿಸಿದನು. ದುಷ್ಯಂತ ಅದೇ ತಾನೆ ನ್ಯಾಯಾಲಯದ ಆಸನದಿಂದ , ಕರ್ತವ್ಯ ಮುಗಿಸಿ ಏಳುತ್ತಿದ್ದಾನೆ.
ಆದರೂ ಬೇಸರಿಸದೇ, ಅತಿಥಿಗಳ ಸತ್ಕಾರ ಯೋಗ್ಯ ರೀತಿಯಲ್ಲಿ ನಡೆಸಲು ಪುರೋಹಿತರನ್ನು ಬರಮಾಡಿಕೊಳ್ಳುತ್ತಾನೆ. ಈ ಪ್ರಸಂಗದಲ್ಲಿ ಕಂಚುಕೀ ಹೇಳುವ ಮಾತು ಸುಭಾಷಿತದಂತಿದೆ.
“ಭಾನು: ಸಕೃತ್ ಉದ್ಯುಕ್ತ ತುರಂಗ: ಏವ ರಾತ್ರಿಂ ದಿವಂ ಗಂಧವಹ: ಪ್ರಯಾತಿ.
ಶೇಷ: ಸದೈವ ಆಹಿತ ಭೂಮಿಭಾರ:
ಷಷ್ಠಾಂಶ ವೃತ್ತೆ: ಅಪಿ ಧರ್ಮ ಏಷ: “
” ಕುದುರೆಯನ್ನು ಹೂಡಿ ರಥ ಏರಿದ ಸೂರ್ಯ ತನ್ನ ಪಥವನ್ನು ಬಿಡುವುದಿಲ್ಲ.
ಗಾಳಿ ಹಗಲೂ ರಾತ್ರಿ ಶ್ರಮಿಸುತ್ತ ಬೀಸುತ್ತಲೇ ಇರುತ್ತದೆ. ಒಂದು ಕ್ಷಣವೂ ಬಿಡದೇ ಶೇಷದೇವರು ಭೂಮಿ ಭಾರವನ್ನು ವಹಿಸುತ್ತಾರೆ. ಅರಸ ಪ್ರಜೆಗಳಿಂದ ,ಅವರ ಸಂಪಾದನೆಯ ಒಂದಾರಾಂಶವನ್ನು
ಕರ (tax) ರೂಪದಲ್ಲಿ ಪಡೆಯಯುತ್ತಿರುವಾಗ ಅವರ ಯೋಗ ಕ್ಷೇಮದಲ್ಲಿ ಯಾವುದೇ ವ್ಯತ್ಯಾಸ ಬರದಂತೆ ಪರಿಪಾಲಿಸುವದು ಅವನ ಧರ್ಮ ಆಗಿದೆ. “
ಅಶಾಂತ ಮನದ ರಾಜ ಏಕಾಂತದಲ್ಲಿಯೂ ಶಾಂತಿಯಿಂದ ಇರಲಾರ. ಅರಸನ ಜವಾಬ್ದಾರಿಯನ್ನು ಇಲ್ಲಿ ಸ್ಪಷ್ಟ ಪಡಿಸಲಾಗಿದೆ.
ಕಂಚುಕೀ, ಋಷಿಗಳ ಸಂದೇಶವನ್ನು ತಂದ ಋಷಿಕುಮಾರರನ್ನು ಬರಮಾಡಿ ಕೊಳ್ಳುವನು.
ವೇದಘೋಶಗಳೊಂದಿಗೆ ಸ್ವಾಗತಿಸಲು ಪುರೋಹಿತರಾದ, ಸೋಮರಾತರನ್ನು ಕರೆಸುವನು.
ಕಣ್ವರ ಸಂದೇಶ ಏನು ಎಂದು ಮುಂದಿನ ದೃಶ್ಯದಲ್ಲಿ ಕಾಣುವಾ !!
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ