- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
ಅಭಿಜ್ಞಾನ ಶಾಕುಂತಲದ ಮೊದಲನೇ ಅಂಕದಲ್ಲಿ ದುಷ್ಯಂತ, ಶಕುಂತಲೆಯರು ಒಬ್ಬರನ್ನೊಬ್ಬರು ಕಂಡು ಆಕರ್ಷಿತರಾದರು. ಆಗ ಗ್ರೀಷ್ಮ ಋತು. ಇಲ್ಲಿ ಸಮಾಗಮದಲ್ಲಿ ಕಾಮ ಗೆದ್ದಿದೆ. ಧರ್ಮ ಮೀರಿದ ಕಾಮ ಇತ್ತು.
ಎರಡನೇಯ ಅಂಕದಲ್ಲಿ ಶಕುಂತಲೆ ಕಾಣಿಸಲಿಲ್ಲ.
ಮೂರನೇ ಅಂಕದಲ್ಲಿ ಮತ್ತೆ ಇಬ್ಬರ ಸಮಾಗಮ. ಇಲ್ಲಿ ಗಾಂಧರ್ವ ವಿವಾಹದ ಸೂಚನೆ.
ಮತ್ತೆ ನಾಲ್ಕನೇ ಅಂಕದಲ್ಲಿ ವಿರಹದ ಅನುತಾಪ.
ಈಗ ಐದನೇಯ ಅಂಕದಲ್ಲಿ ಮತ್ತೆ ದುಷ್ಯಂತ ಶಕುಂತಲೆಯರ ಭೇಟಿ. ಆದರೆ ಇಲ್ಲಿ ಆಕರ್ಷಣೆ ಇಲ್ಲ. ತನ್ನ ಪರಿಗ್ರಹವನ್ನೇ ನಿರಾಕರಿಸಿದ ಕಟುತ್ವ ರಾಜನದು. ಇಲ್ಲಿ ಧರ್ಮ ಕಾಮವನ್ನು ಮೀರಿದೆ.
ಶಕುಂತಲೆ ಒಂದೆರಡು ಹಳೆಯ ಘಟನೆಗಳನ್ನು ವಿವರಿಸಿದರೂ ರಾಜನಿಗೆ ನಿಜವನ್ನು ಮನದಟ್ಟು ಮಾಡಲು ವಿಫಲಳಾದಳು. ಇಂಥ ಬಣ್ಣದ ಮಾತುಗಳಿಗೆ ಮೋಸ ಹೋಗುವ ರಾಜ ತಾನಲ್ಲ ಎಂದು ದುಷ್ಯಂತ ಹೇಳಿದನಲ್ಲದೇ ಸ್ತ್ರೀ ಜಾತಿಯನ್ನೇ ಅಲ್ಲಗಳೆದನು.
“ಸ್ತ್ರೀ ಣಾಂ ಅಶಿಕ್ಷಿತ ಪಟುತ್ವಮ್
ಅಮಾನುಷೀಷು.
ಸಂದೃಶ್ಯತೆ ಕಿಮುತ ಯಾ: ಪ್ರತಿಬೋಧವತ್ಯ: .
ಪ್ರಾಗಂತರಿಕ್ಷ ಗಮನಾತ್ ಸ್ವಮಪತ್ಯಜಾತಮ್ ಅನ್ಯೈ: ದ್ವಿಜೈ:
ಪರಭೃತಾ: ಖಲು ಪೋಷಯಂತಿ .“
“ಮೋಸ ಮಾಡುವದು ಹೆಣ್ಣಿನ ಸಹಜ ಸ್ವಭಾವವೇ ಆಗಿದೆ. ಇದು ಕೇವಲ ಮನುಷ್ಯ ಮಾತ್ರರಲ್ಲಿ ಅಲ್ಲ, ಪಕ್ಷಿಗಳಲ್ಲಿಯೂ ಕಂಡುಬರುತ್ತದೆ. ಹೆಣ್ಣು ಕೋಗಿಲೆ ತನ್ನ ತತ್ತಿಗಳನ್ನು ಕಾಗೆಯ ಗೂಡಿನಲ್ಲಿ ಇಟ್ಟು ಮರಿಗಳಾಗುವವರೆಗೂ ರಹಸ್ಯವಾಗೇ ಉಳಿಸುತ್ತದೆ. ಅದಕ್ಕೇ ಕೋಗಿಲೆಗೆ ಇನ್ನೊಂದು ಹೆಸರು ” ಪರಭೃತ” ಎಂದು. ಪರರಿಂದ ಪೋಷಿಸಲ್ಪಟ್ಟಿದ್ದು. ಸ್ತ್ರೀಯರಿಗೆ ಇಂಥ ಪಟುತ್ವ ಕಲಿಸಬೇಕಿಲ್ಲ.”
ಇದು ದುಷ್ಯಂತನ ಮಾತು.
ಇಲ್ಲಿ ಶಕುಂತಲೆ, ಅಪ್ಸರೆ ಮೇನಕೆಯ ಮಗಳು, ತಂದೆ ತಾಯಿಯಿಂದ ತ್ಯಜಿಸಲ್ಪಟ್ಟವಳು, ಕಣ್ವರ ಸಾಕು ಮಗಳು ಎಂಬುದನ್ನು ನೆನಪಿಸಿ ಅವಳ ಸ್ವಭಾವವನ್ನು ಟೀಕಿಸಿದಂತೆ ಇದೆ ಎನ್ನಬಹುದು.
ಅರಸನ ಈ ಕಟುವಾದ ಮಾತಿನಿಂದ ಸಿಡಿದೆದ್ದಳು ಶಕುಂತಲೆ. ಸರೋಷದಿಂದ ರಾಜನನ್ನು “ಅನಾರ್ಯ” ಎಂದೇ ಸಂಬೋಧಿಸುವಳು. ಧರ್ಮದ ಉಡುಪನ್ನು ಧರಿಸಿದ ನೀನು, ಇತರರ ಹೃದಯವೂ ನಿನ್ನ ಹೃದಯದಂತೆಯೇ ಕಲುಷಿತ ಎಂದು ಭಾವಿಸುತ್ತಿರುವೀ ಎಂದು ದೂರಿದಳು. ಅನಾರ್ಯನಾದ ನೀನು ಹುಲ್ಲು ಮುಚ್ಚಿದ ಬಾವಿಯಂತಿರುವೀ ಎಂದು ಹೀಯಾಳಿಸಿದಳು.
“ಧರ್ಮ ಕಂಚುಕ ಪ್ರವೇಶಿನ:
ತೃಣಚ್ಛನ್ ಕೂಪೋಪಮಸ್ಯ ತವ ಅನುಕೃತಿಮ್ ಪ್ರತಿಪಸ್ಯತೆ.“
ರಾಮಾಯಣದಲ್ಲಿಯೂ ಹೀಗೆಯೇ ಧರ್ಮದ ಪೋಷಾಕು ಧರಿಸಿ ಲೋಕಾಪವಾದಕ್ಕೆ ಉತ್ತರ ಕೊಡಲು ರಾಮ, ನಿರಪರಾಧಿ ಸೀತೆಯನ್ನು ಅಡವಿಗೆ ಅಟ್ಟಿದನು.
ಇಲ್ಲಿ ದುಷ್ಯಂತನೂ ಧರ್ಮ ವೇಷದಲ್ಲಿ ಶಕುಂತಲೆಯನ್ನು ಸ್ವೀಕರಿಸುತ್ತಿಲ್ಲ. ಪರಭೃತಳೆಂದೂ, ಅಪ್ಸರೆ ಮೇನಕೆಯ ಮಗಳೆಂದೂ ಹೇಳುವಲ್ಲಿ ತಾಯಿಯ ಹಾಗೆ ಮಗಳು ಎಂದು ಮೂದಲಿಕೆಯ ಮಾತನಾಡಿದಂತಿದೆ. ವೇಶ್ಯೆ ಎಂದು ಆಪಾದಿಸಿದ ಧ್ವನಿ ಇದೆ!
ಈಗ ಶಾರಂಗರವ ಶಕುಂತಲೆಯ ಮೇಲೆಯೇ ಅಸಮಾಧಾನ ವ್ಯಕ್ತಪಡಿಸುತ್ತಾನೆ.
“ಅತ: ಪರೀಕ್ಷ್ಯ ಕರ್ತವ್ಯಂ ವಿಶೇಷಾತ್
ಸಂಗತಂ ರಹ: .
ಅಜ್ಞಾತ ಹೃದಯೇಷು ಏವಂ
ವೈರೀ ಭವತಿ ಸಹೃದಮ್ .”
“ನೋಡು, ಹಿಂದೆ ಮುಂದೆ ವಿಚಾರಿಸದೇ, ಹಿರಿಯರಿಲ್ಲದೇ ಏಕಾಂತದಲ್ಲಿ ನಿರ್ಣಯ ತೆಗೆದುಕೊಂಡದ್ದರ ಫಲ ಇದು. ಅಪರಿಚಿತರ ಕೂಡ ಬೆಳೆಸಿದ ಸ್ನೇಹ ಈಗ ಸಂಕಟ ತಂದಿದೆ. ಅವಸರದಲ್ಲಿ ಮಾಡಿದ ತಪ್ಪು ಈಗ ನಿನ್ನನ್ನು ಸುಡುತ್ತಿದೆ.” ಕಷ್ಟದಲ್ಲಿ ಇದ್ದ ಶಕುಂತಲೆಗೆ ಸಹಾಯ, ಸಮಾಧಾನ ಮಾಡುವ ಬದಲು ಕೋಪದಿಂದ ಕಠಿಣ ಮಾತನ್ನು ಆಡಿದನು.
ಈ ಮಾತು ಕೇಳಿದಾಗ ಆ ಕಾಲದಲ್ಲೂ ಪ್ರೇಮ ವಿವಾಹ ಅಷ್ಟು ಮಾನ್ಯತೆ ಪಡೆದಿರಲಿಲ್ಲ ಎಂದು ಎನಿಸುವದು. ಶಕುಂತಲೆಯನ್ನು ಸ್ವಚ್ಛಂದಚಾರಿಣೀ , ಮೋಸಗಾರ್ತಿ ಎಂದು ದುಷ್ಯಂತ ಹೇಳಿದಾಗ ಶಾರಂಗರವ ಸಹಿಸದಾದನು.
“ಮೋಸ ಎಂದರೆ ಏನು ಎಂಬುದನ್ನು
ಹುಟ್ಟಿನಿಂದ ಅರಿಯಳಿವಳು. ಅದೆಲ್ಲ ನಿನ್ನಂತಹವರಿಗೇ ಮೀಸಲು“
ಎನ್ನುತ್ತಾ ರಾಜನನ್ನೇ ಮೋಸಗಾರ ಎಂದನು.
“ನಾವು ನಮ್ಮ ಗುರುಗಳ ಆಜ್ಞೆಯನ್ನು ಪಾಲಿಸಿ ಆಯಿತು.
ಈ ನಿನ್ನ ಹೆಂಡತಿಯನ್ನ ಬೇಕಾದರೆ ಸ್ವೀಕರಿಸು ಇಲ್ಲವಾದರೆ ನಿರಾಕರಿಸು.
ಗೌತಮೀ, ನಡೆ ಇನ್ನು ಹೊರಡೋಣ.“
ಎಂದು ಹೊರಡಲು ಸಿದ್ಧನಾದನು ಶಾರಂಗರವ.
ಅಳುತ್ತಾ ಹಿಂಬಾಲಿಸಿ ಬರುತ್ತಿರುವ ಶಕುಂತಲೆಯನ್ನು ನೋಡಿ ದು:ಖಿತಳಾದಳು ಗೌತಮಿ. ಅಮಾನುಷ ರೀತಿಯಲ್ಲಿ ಗಂಡನಿಂದ ತಿರಸ್ಕೃತಳಾದ ಮಗಳನ್ನು ಬಿಟ್ಟು ಹೋಗಲು ಗೌತಮಿ ಚಡಪಡಿಸುತ್ತಾ ಇದ್ದಾಳೆ.
“ಸ್ವಾತಂತ್ರ್ಯ ಬಯಸಿ ನಿರ್ಣಯ ತೆಗೆದುಕೊಂಡಿರುವೀ, ಈಗ ಅನುಭವಿಸು.“
ಎಂದು ರೋಷದಿಂದ ಹೇಳುತ್ತಾ
“ಪತಿಕುಲೆ ತವ ದಾಸ್ಯಮ್ ಅಪಿ ಕ್ಷಮಮ್ ” ಎನ್ನುವನು.
ಕ್ಷಿತಿಪ: ಅಂದರೆ ಕ್ಷಿತಿಜವನ್ನೇ ಆಳುವ ಅರಸನೇ ಅವಳನ್ನು ನಿರಾಕರಿಸಿದನು. ತಂದೆಯೂ ಅವಳನ್ನು ಸ್ವೀಕರಿಸಲಾರ. ಅವಳಿಂದ ತಂದೆಯ ಮನೆತನಕ್ಕೆ ಅಗೌರವ.
ಇಂಥ ಬಿಕ್ಕಟ್ಟಿನ ಸ್ಥಿತಿಗೆ, ಶಕುಂತಲೆ ಸ್ವತಂತ್ರವಾಗಿ , ಸ್ವಾರ್ಥಪರವಾಗಿ ತೆಗೆದುಕೊಂಡ ನಿರ್ಧಾರವೇ ಕಾರಣ. ಈಗ ಅವಳು ಸೇವಕಿ ಆಗಿ ಆದರೂ ಪತಿಗೃಹದಲ್ಲೇ ಇರಬೇಕು ಎಂಬುದು ಶಾರಂಗರವನ ಅಂತಿಮ ನಿರ್ಧಾರ.
ಈ ಸಂದಿಗ್ಧ ಪರಿಸ್ಥಿತಿಯಲ್ಲಿ ದುಷ್ಯಂತ ರಾಜಪುರೋಹಿತರ ಸಲಹೆ ಕೇಳುವನು.
ಶಕುಂತಲೆಯನ್ನು ಸ್ವೀಕಾರ ಮಾಡಿದರೆ ಪರಸ್ತ್ರೀಯನ್ನು ಲಪಟಾಯಿಸಿದ ಪಾಪ ಬರುವದು, ಸ್ವೀಕಾರ ಮಾಡದಿದ್ದಲ್ಲಿ ದಾರತ್ಯಾಗೀ ಎಂದೆನಿಸಿಕೊಳ್ಳುವೆ ಎಂಬ ಚಿಂತೆಗೆ ಒಳಗಾದ ದುಷ್ಯಂತ.
ಆಗ ಪುರೋಹಿತರು ಒಂದು ಉಪಾಯ ಸೂಚಿಸುವರು.
“ಇವಳ ಪ್ರಸವ ಆಗುವವರೆಗೆ ನನ್ನ ಮನೆಯಲ್ಲಿ ಇರಲಿ. ಮಗು ಹುಟ್ಟಿದ ಮೇಲೆ ಅವನಲ್ಲಿ ಚಕ್ರವರ್ತಿ ಲಕ್ಷಣಗಳು ಇದ್ದರೆ, ಶಕುಂತಲೆಯನ್ನು ಸ್ವೀಕಾರ ಮಾಡಬೇಕು. ಚಕ್ರವರ್ತಿ ಮಗನಾಗುವನೆಂದು ಮಹರ್ಷಿಗಳೇ ಹೇಳಿರುವರು. ಹಾಗೆ ಆಗದಿದ್ದಲ್ಲಿ ಶಕುಂತಲೆಯನ್ನು ತಂದೆಯ ಮನೆಗೆ ಕಳಿಸಬೇಕು.”
ಗುರುಗಳ ವಿಚಾರ, ಉಪಾಯ ದುಷ್ಯಂತನಿಗೆ ಮಾನ್ಯವಾಯಿತು.
ತನ್ನವರೆಲ್ಲ ಹೊರಟುಹೋದರು. ಸಖಿ ಅನಸೂಯ, ಪ್ರಿಂಯವದೆಯರಿಲ್ಲ ಸಮಾಧಾನಹೇಳಲು. ಅಸಹಾಯಕಳಾಗಿ ಶಕುಂತಲೆ ಹೀಗೆ ಉದ್ಗರಿಸುವಳು.
“ಭಗವತಿ ವಸುಧೆ, ದೇಹಿ ಮೆ ವಿವರಮ್.”
“ಹೇ,ಭೂದೇವಿ, ನನಗೆ ಆಶ್ರಯ ಕೊಡು“.
ಸೀತೆಯೂ ಸಹ ರಾಮನ ಧರ್ಮ ಸಭೆಯಲ್ಲಿ ನಿಲ್ಲಲು ನಿರಾಕರಿಸಿ ಹೀಗೆಯೇ ಭೂದೇವಿಯ ಮೊರೆ ಹೊಕ್ಕಳಲ್ಲವೇ!! ಶಕುಂತಲೆ ರೋದಿಸುತ್ತ ಪುರೋಹಿತರನ್ನು ಹಿಂಬಾಲಿಸಿದಳು. ನೇಪಥ್ಯದಲ್ಲಿ ಗಲಾಟೆ ಕೇಳಿಬಂತು.
“ಆಶ್ಚರ್ಯಮ್ , ಆಶ್ಚರ್ಯಮ್ “
ಏನು ಆಶ್ಚರ್ಯಕರ ಸಂಗತಿ ಎಂದು ರಾಜ ತಿಳಿಯ ಬಯಸುತ್ತಿರುವಾಗ ಪುರೋಹಿತರು ಬಂದು ಹೇಳುವರು.
“ಹೊರಗೆ ಅಪ್ಸರತೀರ್ಥ ಮುಟ್ಟುತ್ತಾ ಇರುವಾಗ ಜ್ಯೋತಿ ಒಂದು ಬಂದು ಹೆಣ್ಣಿನ ರೂಪ ತಾಳಿ ಶಕುಂತಲೆಯನ್ನು ಎತ್ತಿಕೊಂಡು ಹೋದಳು.“
ದುಷ್ಯಂತ ಪುರೋಹಿತರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿ, ತಾನೂ ಶಯನ ಕೋಣೆಗೆ ಹೋಗಲು ಇಚ್ಛಿಸುವನು. ಮಾನಸಿಕ ಸಂಘರ್ಷದಲ್ಲಿ ಆತ ಬಹಳ ಬಳಲಿದ್ದಾನೆ. ಈ ಅಂಕದ ಕೊನೆಯಲ್ಲಿ ದುಷ್ಯಂತನ ಉದ್ಗಾರ ಹೀಗಿದೆ.
“ಕಾಮಂ ಪ್ರತ್ಯಾವಿಷ್ಟಾಂ
ಸ್ಮರಾಮಿ ನ ಪರಿಗ್ರಹಂ ಮುನೆ: ತನಯಾಮ್ .
ಬಲವತ್ತು ದೂಯಮಾನಂ ಪ್ರತ್ಯಾಯಯತೀವ ಮಾಂ ಹೃದಯಮ್.”
“ಮುನಿಯ ಮಗಳನ್ನು ಪರಿಗ್ರಹಿಸಿದ ವಿಷಯ ನಿಜವಾಗಿಯೂ ನೆನಪಿಗೆ ಬಾರದಾಗಿದೆ. ಆದರೂ ನನ್ನ ಹೃದಯ ತಳಮಳಿಸುತ್ತಿದೆ.“
ಅವನಿಗೇ ತನ್ನ ಸ್ಥಿತಿಯನ್ನು ನೋಡಿ ಆಶ್ಚರ್ಯವಾಗುವದು.
ರಾಜಮಾತೆ ಆಗುವ ಸಂತೋಷದಲ್ಲಿ ಹೊರಟ ಶಕುಂತಲೆಯ ಕನಸು ನುಚ್ಚು ನೂರು. ಒಂದೇ ದಿನದಲ್ಲಿ ಇಂಥ ಕ್ರೂರ ಬದಲಾವಣೆ!! ಪತಿಯ ನಿರಾಕರಣೆಯ ಆಘಾತ. ಪಾಪಿ, ಕಠೋರ ಪತಿಯ ಹತ್ತಿರ ಬಿಟ್ಟು ಆಪ್ತರು ಹೊರಟು ಹೋದರು. ತೌರುಮನೆಯ ಸಂಬಂಧ ಮುಗಿಯಿತು. ಆದರೂ ಪುರೋಹಿತರ ಔದಾರ್ಯ ಕಾಪಾಡಿತು. ಶೋಕದಿಂದ ಅಳುತ್ತಾ ಹೊರಟ ಮಗಳನ್ನು ತಾಯಿಯ ಪ್ರೀತಿ ಕಾಪಾಡಿತು. ಈ ಪ್ರಸಂಗ ನಡೆದದ್ದು ರಂಗದ ಆಚೆಗೆ. ನಂಬಬೇಕು. ತೋರಿಕೆ ಬೇಕಾಗಿಲ್ಲ!!! ಕಾಣದ ಕೈ ಯೊಂದು ಕಾಪಾಡುತ್ತದೆ.
ಅಧರ್ಮ ಭೀರು, ದಾರತ್ಯಾಗಿ ಆದ ದುಷ್ಯಂತನ ಹೃದಯದಲ್ಲಿ ಮಾತ್ರ ಎಲ್ಲೋ ದು:ಖ, ಪಶ್ಚಾತ್ತಾಪ ಕಾಡುತ್ತಿದೆ. ಆ ದು:ಖ ಏನನ್ನೋ ನೆನಪಿಸುವಂತಿದೆ.
ಐದನೇಯ ಅಂಕ ಕರುಣಾರಸ ಭರಿತವಾಗಿ, ಶಕುಂತಲೆ ದುಷ್ಯಂತರ ವಿಯೋಗದಿಂದ ಮುಗಿಯುತ್ತ ಪ್ರೇಕ್ಷಕರು ಅಶ್ರುಭರಿತರಾಗಿದ್ದಾರೆ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ