ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದಿಕ್ಕೇಡಿ

"......ಭರಮ್ಯಾ ಆ ರಾತ್ರಿ ಎಂದೂ ಮುಗಿಲು ನೋಡಿಯೇ ಇಲ್ಲ, ಅನ್ನುವ ರೀತಿಯಲ್ಲಿ ನೋಡುತ್ತಲಿದ್ದ. ಮುಗಿಲ ತುಂಬ ಚುಕ್ಕಿಗಳು ಕಿಕ್ಕಿರಿದು ಪಳಗುಟ್ಟುತ್ತಿದ್ದವು. ಇವೆಲ್ಲ ಸತ್ತವರ ಕಣ್ಣುಗಳು..! ಇದರಲ್ಲಿ ನಮ್ಮವ್ವನ ಕಣ್ಣುಗಳಾವು? ನಮ್ಮ ಅಪ್ಪನ ಕಣ್ಣುಗಳಾವು? ....." ಭರಮ್ಯಾ ಎಂಬ ಪಾತ್ರ, ಅದಕ್ಕೆ ತಕ್ಕಂತೆ ಗ್ರಾಮ್ಯತೆಯ ಸೊಗಸು, ಕಲಾತ್ಮಕ ನಿರೂಪಣಾ ಶೈಲಿಯ ಜತೆಗೆ ಎಲ್ಲಿಯೂ ಹಿಡಿತ ತಪ್ಪದೆ, ಭೇಷ್ ಅನ್ನುವಂತೆ ಬರೆಯುತ್ತಾರೆ ಕಥೆಗಾರ ತಿರುಪತಿ ಭಂಗಿಯವರು. ಪೂರ್ತಿಯಾಗಿ ಓದಿಸಿಕೊಂಡು ಹೋಗುವ ಈ ಕಥೆ ನಮ್ಮ ನಸುಕು ಓದುಗರಿಗಾಗಿ....
ತಿರುಪತಿ ಭಂಗಿ
ಇತ್ತೀಚಿನ ಬರಹಗಳು: ತಿರುಪತಿ ಭಂಗಿ (ಎಲ್ಲವನ್ನು ಓದಿ)

……ಭರಮ್ಯಾ ಆ ರಾತ್ರಿ ಎಂದೂ ಮುಗಿಲು ನೋಡಿಯೇ ಇಲ್ಲ, ಅನ್ನುವ ರೀತಿಯಲ್ಲಿ ನೋಡುತ್ತಲಿದ್ದ. ಮುಗಿಲ ತುಂಬ ಚುಕ್ಕಿಗಳು ಕಿಕ್ಕಿರಿದು ಪಳಗುಟ್ಟುತ್ತಿದ್ದವು. ಇವೆಲ್ಲ ಸತ್ತವರ ಕಣ್ಣುಗಳು..! ಇದರಲ್ಲಿ ನಮ್ಮವ್ವನ ಕಣ್ಣುಗಳಾವು? ನಮ್ಮ ಅಪ್ಪನ ಕಣ್ಣುಗಳಾವು? …..”
ಭರಮ್ಯಾ ಎಂಬ ಪಾತ್ರ, ಅದಕ್ಕೆ ತಕ್ಕಂತೆ ಗ್ರಾಮ್ಯತೆಯ ಸೊಗಸು, ಕಲಾತ್ಮಕ ನಿರೂಪಣಾ ಶೈಲಿಯ ಜತೆಗೆ ಎಲ್ಲಿಯೂ ಹಿಡಿತ ತಪ್ಪದೆ, ಭೇಷ್ ಅನ್ನುವಂತೆ ಬರೆಯುತ್ತಾರೆ ಕಥೆಗಾರ ತಿರುಪತಿ ಭಂಗಿಯವರು. ಪೂರ್ತಿಯಾಗಿ ಓದಿಸಿಕೊಂಡು ಹೋಗುವ ಈ ಕಥೆ ನಮ್ಮ ನಸುಕು ಓದುಗರಿಗಾಗಿ….

ಸಂಪಾದಕ

ದನದ ಮನೆ ಮುಂದಿನ ಅಂಗಳದಲ್ಲಿ ಚಾಪಿ ಹಾಸಿಕೊಂಡು ಅಂಗಾತ ಮಲಗಿ, ತಲೆಗೆ ತನ್ನ ಕೈಗಳನ್ನೆ ದಿಂಬು ಮಾಡಿಕೊಂಡು, ಇಡೀ ತನ್ನ ಚಿತ್ತಶಕ್ತಿಯಲ್ಲವನ್ನು ಮುಗಿಲಿನೊಳಗೆ ಹುಗಿದು,ಬಾಯಿ ತೆರೆದು, ಪಳಪಳ ಹೊಳೆಯುವ ಚುಕ್ಕಿಗಳನ್ನು ತದೇಕಚಿತ್ತದಿಂದ ಕಣ್ಣರೆಪ್ಪೆ ಪಿಳಿಕಿಸದೆ, ಭರಮ್ಯಾ ಆ ರಾತ್ರಿ ಎಂದೂ ಮುಗಿಲು ನೋಡಿಯೇ ಇಲ್ಲ, ಅನ್ನುವ ರೀತಿಯಲ್ಲಿ ನೋಡುತ್ತಲಿದ್ದ. ಮುಗಿಲ ತುಂಬ ಚುಕ್ಕಿಗಳು ಕಿಕ್ಕಿರಿದು ಪಳಗುಟ್ಟುತ್ತಿದ್ದವು. ಇವೆಲ್ಲ ಸತ್ತವರ ಕಣ್ಣುಗಳು..! ಸತ್ತಮೇಲೆ ಎಲ್ಲರ ಕಣ್ಣುಗುಡ್ಡೆಗಳು ಮುಗಿಲಿಗೆ ಹಾರಿ ಚುಕ್ಕೆಗಳಾಗುತ್ತವೆ ಅನ್ನುವ ಭಾವ ಭರಮ್ಯಾನಲ್ಲಿ ಮೂಡಿದ್ದು ಸುಳ್ಳಲ್ಲ. ಇದರಲ್ಲಿ ನಮ್ಮವ್ವನ ಕಣ್ಣುಗಳಾವು? ನಮ್ಮ ಅಪ್ಪನ ಕಣ್ಣುಗಳಾವು? ನಮ್ಮ ಅಜ್ಜ-ಅಜ್ಜಿ ಕಣ್ಣಗುಡ್ಡೆಗಳಾವು?  ಇಷ್ಟು ಮಂದಿ ಕಣ್ಣ ಗುಡ್ಡೆಗಳಲ್ಲಿ ಅವರ ಕಣ್ಣು ಗುಡ್ಡೆ ಗುರುತಿಸುವುದು ಭಾಳ ಕಷ್ಟ ಅಂದುಕೊಂಡ. ಅಪ್ಪ-ಅವ್ವ ಮ್ಯಾಲಿನಿಂದ ನನ್ನ ದಿನಾಲೂ ನೋಡ್ತಿರ್ಬೇಕು..! ಗೌಡರ ಮನೆಯಲ್ಲಿ ಕೆಲಸಾ ಮಾಡೋದು, ದನಾ ಕಾಯೋದು, ಹೆಂಡಿ ಕಸಾ ಮಾಡೋದು,ಮೇವು ತರೋದು, ಕಟಗಿ ವಡಿಯೋದು, ನೀರ ತುಂಬಿಸೋದು ಎಲ್ಲವನ್ನು ನೋಡೇ.. ನೋಡಿರ್ತಾರೆ. ಎಷ್ಟೊಂದು ಚುಕ್ಕೆಗಳು ಏನ ಕತಿ,  ಇನ್ನೊಂದೀಟ ದಿನ ಅವ್ವ ಅಪ್ಪ ನನ್ನ ಜೋಡಿ ಇದ್ದರೆ ಎಷ್ಟ ಚಲೋ ಇರ್ತಿತ್ತು. ಇವ್ನೌನ, ಈ ದೇವರಗೆ ಒಂದೀಟೂ ಬುದ್ಧಿ, ಅಕಲಾ ಇಲ್ಲ, ಲಗೂನ ನಮ್ಮವ್ವನ ಅಪ್ಪನ ನನ್ನಿಂದ ದೂರ ಮಾಡಿ ಮೋಜನೋಡ್ತಾನ ಬೇವರ್ಸಿ ಹಳೆಬೇವರ್ಸಿ ದೇವರನ್ನು ಬೈಯುತ್ತ ಮುಗಿಲಲ್ಲಿ ನೆಟ್ಟ ತನ್ನ ಚಿತ್ತವನ್ನು ಕದಡಿದ. ತನ್ನ ಅನಾಥಪ್ರಜ್ಞೆಯನ್ನು ನೆನೆದು ಭಯಗೊಂಡ, ದುಃಖಿಸಿದ, ತಾನು ನಥದೃಷ್ಟವೆಂದು, ಗೌಡರ ಮನೆ, ಗೌಡರ ದನ, ಬೆಟ್ಟ,ಗುಡ್ಡ, ತುಂಬಿ ಹರೆಯುವ ಫಟಪ್ರಭೆ ನದಿ, ಇವನ್ನು ಬಿಟ್ಟರೆ ನನಗ್ಯಾರೂ ದಿಕ್ಕಿಲ್ಲ. ತಾನು ದಿಕ್ಕಿಲ್ಲದ ದಿಕ್ಕೇಡಿವೆಂದು ಹಳಹಳಿಸಿದ.

ಏಕಾಏಕಿ ಕಟ್ಟಿಕೊಂಡ ಹೆಂಡತಿ ತನ್ನ ಬಿಟ್ಟು ಕೆಲಸಕ್ಕೆ ಬಾರದ ಹುಡುಗನೊಂದಿಗೆ ಓಡಿ ಹೋದದ್ದು,ಭರಮ್ಯಾನಿಗೆ ತುಂಬಾ ಬೇಸರ ತಂದಿತ್ತು. ಈ ದೇವ್ರ ನನ್ನ ಹಣೆ ಬರವೇ ಸರಿಯಾಗಿ ಬರ್ದಿಲ್ಲ ಹಾಳಾದವನು ಮತ್ತೊಮ್ಮೆ ದೇವರನ್ನು ತರಾಟೆಗೆ ತಗೆದುಕೊಂಡ. ಮುಗಿಲಿನಲ್ಲಿರುವ ಒಂದು ಚುಕ್ಕಿ ಇವನನ್ನು ನೋಡಿ ನಕ್ಕಂತನಿಸಿತು. ಅದು ಅವ್ವನ ಕಣ್ಣು ಇರಬಹುದು ಎಂದು ಅದೇ ಚುಕ್ಕಿಯನ್ನು ಭಾಳ ಹೊತ್ತಿನವರೆಗೂ ನೋಡುತ್ತಲಿದ್ದ. ದುಃಖದ ಕಟ್ಟೆ ಸಡಿಲಗೊಂಡು ಭರಮ್ಯಾನ ಕಣ್ಣುಗಳಿಂದ ನೀರು ಸುರಿಯುತ್ತ, ಕಾಪಾಳಿಂದ ಇಳಿದು ಕೊರಳದಾಟಿತ್ತು. ಕಣ್ಣೀರನ್ನು ಅಂಗೈಯಿಂದ ತಿಕ್ಕ್ಯಾಡಿಕೊಂಡ. ಕಣ್ಣು ರೆಪ್ಪೆ ಮುಚ್ಚಿ ಸತ್ತ ಅಪ್ಪ-ಅವ್ವ, ಓಡಿ ಹೋದ ಹೆಂಡತಿಯನ್ನು ಮತ್ತೆ ವಿನಾಕಾರಣ ನೆನಪಿಗೆ ಎಳಿದುಕೊಂಡು ಮಗ್ಗಲು ಬದಲಿಸಿದ.

 ಕುರಗಾರ ಸಿದ್ದನ ನಾಯಿ ಬೌವ್… .. ಬೌವ್ ಬೊಗಳತೊಡಗಿತ್ತು. ಕತ್ತಲ್ದಾಗ ಯಾರಾದ್ರು ತೆಂಗಿನ ಕಾಯಿ, ಬಾಳಿಗಡಾ , ದಾಳಂಬಿ ಕಳ್ಳ ತನಾ ಮಾಡಾಕ ಬಂದ್ರಿರ್ಬೇಕೆಂದು ದಡಗ್ಗನ ಹಾಸಗಿಯಿಂದ ಎದ್ದು ನಾಯಿ ಬೊಗಳುವ ದಿಕ್ಕಿಗೆ ಬ್ಯಾಟ್ರಿ ಹಿಚಗಿದ. ಅಲ್ಲಿ ಯಾರೂ ಇದ್ದಂತೆ ತೋರಲಿಲ್ಲ.  ಎರಡು ಹೆಜ್ಜೆ ಮುಂದು ಹೋಗಿ ದಾಳಂಬ್ರಿ ಪಡದಲ್ಲಿ ನಿಂತುಕೊಂಡು ಬ್ಯಾಟ್ರಿ ಹಿಚಕಿ ನೋಡಿದ, ಹಾಗೆ ಮುಂದು ಹೋಗಿ ಬಾಳಿಯ ಪಡದಲ್ಲಿ ನೋಡಿದ, ಅಲ್ಲಿ ಯಾರ ಸುಳಿವು ಕಾಣಲಿಲ್ಲ. ಮತ್ತೆ ಬಂದು ಹಾಸಿಗೆ ಮೇಲೆ ಉರಳಿದ. ತಣ್ಣಗೆ ಗಾಳಿ ಬೀಸುತ್ತಿತ್ತು. ಅವ್ವನ ಹಣೆಯ ಕುಂಕುಮದಂತೆ ಮುಗಿಲಲ್ಲಿ ಚಂದ್ರ ಹೊಳೆಯುತ್ತಿದ್ದ. ಚುಕ್ಕಿಗಳು ಪಳಗುಟ್ಟುತ್ತಿದ್ದವು.  ಮತ್ತೆ ಕುರಗಾರ ಸಿದ್ದನ ನಾಯಿ ಬೊಗಳತೊಡಗಿತು.ಇದರೌವ್ನ ಇದ್ಯಾಕ ಹಿಂಗ ಹರ್ಕೊಳ್ಳಾಕತ್ತೈತಿ, ಸಿದ್ದ ಇನ್ನ ದಡ್ಡಿಗೆ ಬಂದು ಕೂಳಗೀಳ ಹಾಕಿರಾಕಿಲ್ಲ, ಸೆರೆ ಕುಡದ ಎಲ್ಲೆರ ಬಿದ್ದಿರ್ಬೇಕ ಹುಚಬರಗಿ, ಅಂವಗಂತೂ ಕುರಿ ಚಿಂತಿಲ್ಲಾ, ಮರಿ ಚಿಂತಿಲ್ಲ, ತನಗಟ ತೀರ್ಥ ಸಿಕ್ರ ಸಾಕು, ಅಲ್ಲೆ ಶಿವಾ ಶಿವಾ ಹರಾ ಹರಾ ಅಂತಾನೆ ಮಾರಾಯ ಅನ್ನುತ್ತ  ಭರಮ್ಯಾ ಮೈಮೇಲೆ ಕೌದಿ ಎಳಿದುಕೊಂಡ

ನಾಯಿ ಹಾಗೆ ಬೌವ್ವಗುಡುತ್ತಿತ್ತು…

ಭರಮ್ಯಾನಿಗೆ ನಾಯಿ ಬೊಗಳುವುದು ಭಾಳ ಕಿರಿಕಿರಿ ಅನಿಸಿತು. ಎಂದೂ ಬೊಗಳಲಾರದ ನಾಯಿ ಇಂದ್ಯಾಕ ಇಷ್ಟ ಬೊಗಳಾಕತ್ತೈತಿ ಸಿದ್ದನ ಕುರಿದಡ್ಡಿ ಮಟಾ ಹೋಗಿ ಬರ್ಬೇಕೆಂದು ಮತ್ತೆ ಭರಮ್ಯಾ ಮೇಲೆದ್ದ. ಸಿದ್ದ ಗೌಡರ ಹೊಲದ ಮಗ್ಗಲಿರು ಮಾನಪ್ಪನ ಹೊಲದಲ್ಲಿ ಹಕ್ಕಲಾ ಮೇಸಾಕಂತ ದಡ್ಡಿ ಹಾಕಿದ್ದ. ರಾತ್ರಿ ಆದ್ರ ಸಾಕು ಕಳ್ಳ ಹಾದಿ ಹಿಡದ ಸೆರೆಮಾರು ಗಂಗವ್ವನ ಮನಿಗೆ ಹೋಗಿ ಬರುವುದನ್ನು ದಿನಾ ರೂಢಿ ಹಚಗೊಂಡಿದ್ದ.ಭರಮಣ್ಣಾ ದಡ್ಡಿ ಕಡೆ ಒಂದೀಟ ನೆದರ ಇರ್ಲಿ ಅಪೋ.. .. ಎಂದು ಹುಸಿನಗಿ ನಕ್ಕು ದಿನಾ ಹೇಳಿ ಹೋಗುತ್ತಿದ್ದದ್ದು ಭರಮ್ಯಾನಿಗೆ ಸಹಜವೆನಿಸಿತ್ತು.

ಪಾಪ..! ಇಟ್ಟ ಒದರ್ತೈತಂದ್ರ ನರಿಗಿರಿ,ತ್ವಾಳಗೀಳ ಬಂದಿರ್ಬೇಕು ಮತ್ತೆ ಬ್ಯಾಟ್ರಿ ತಗೆದುಕೊಂಡು ಭರಮ್ಯಾ ಗೌಡರ ಸೀಮೆ ದಾಟಿ ಮಾನಪ್ಪನ ಹೊಲದಲ್ಲಿರುವ ಸಿದ್ದನ ಕುರಿದಡ್ಡಿಯತ್ತ ಹೋದ. ಹಿಟ್ಟು ಚಲ್ಲಿದಂತ ಬೆಳದಿಂಗಳಲ್ಲಿ ದೂರದಲ್ಲಿರುವ ಕುರಿದಡ್ಡಿ ಭರಿಮ್ಯಾನಿಗೆ ಕಾಣತೊಡಗಿತು. ಕುರಿ ಮರಿಗಳು ಬ್ಯಾ.. ಬ್ಯಾ.. ಎಂದು ಭರಿಮ್ಯಾನಿಗೆ ಸ್ವಾಗತ ಕೋರಿದವು. ನಾಯಿ ಮಾತ್ರ ನೀನ್ಯಾರ ಲೇ ಮಗನ ಅನ್ನುವ ರೀತಿಯಲ್ಲಿ ಜೋರಾಗಿ ಬೊಗಳ ತೊಡಗಿತು.  ಬ್ಯಾಟ್ರಿ ಹಿಚಕಿ ಸುತ್ತ ಮುತ್ತಲೆಲ್ಲ ನೋಡಿದ. ಕುರಿ ದಡ್ಡಿಯೊಳಗೂ ಬ್ಯಾಟ್ರಿ ಬೆಳಕು ಹರಿಸಿದ. ಒಂದಕ್ಕೊಂದು ಅಂಟಿ ಕೊಂಡು ಎಲ್ಲ ಕುರಿ ಮರಿ ಮಲಗಿ ಮೆಲಕು ಹಾಕುತ್ತಿದ್ದವು. ನಾಯಿ ದಡ್ಡಿಯಿಂದ ದೂರ ನಿಂತು ಭರಮ್ಯಾನಿಗೆ ಬೊಗಳುತ್ತಲಿತ್ತು. ಯಾರು ಇಲ್ಲ ಅನ್ನುವುದು ಖಾತ್ರಿ ಮಾಡಿಕೊಂಡು ನಾಯಿ ಮೇಲೆ ಸಿಟ್ಟು ಬಂತು, ಅಲ್ಲೆ ಇದ್ದ ಕೈಗೆ ಸಿಕ್ಕ ಹಿಡಿಗಲ್ಲನ್ನು ಎತ್ತಿ ಅದರತ್ತ ಬೀಸಿದಂತೆ ನಟಿಸಿದ, ನಾಯಿ ನಾಕು ಮಾರು ದೂರ ಸರೆದು ಹೋಯಿತು.

ಭರಮ್ಯಾ ಮತ್ತೆ ತನ್ನ ಜಾಗದತ್ತ ಬಂದು ಹಾಸಿಗೆಯಲ್ಲಿ ಮೈಚಲ್ಲಿದ. ನಾಯಿ ಮಾತ್ರ ಒದರುವುದನ್ನು ನಿಲ್ಲಿಸಲಿಲ್ಲ. ಭರಿಮ್ಯಾನೇ ಕಳ್ಳ..! ಅನ್ನುವ ರೀತಿಯಲ್ಲಿ ಕುರಿ ದಡ್ಡಿಯನ್ನು ಬಿಟ್ಟು ಗೌಡರ ಹೊಲದ ಬದುವಿಗೆ ಬಂದು ನಿಂತು ಬೌವ್‌ಗುಡತೊಡಗಿತು. ಭರಮ್ಯಾ ಮಲಗಿಕೊಂಡೆ ಹಚ್ಯಾ.. .. ಹಚ್ಯಾ.. ಎಂದು ಹೆದರಿಸಲು ನೋಡಿದ. ನೀ ಯಾಂವ ಲೇ ನನಗ ಹಚ್ಯಾ ಅನ್ನಾಂವ ಅನ್ನುವ ಹಾಗೆ ಭರಮ್ಯಾನ ಮಾತು ಕಿವಿಗೆ ಹಾಕಿಕೊಳ್ಳದೆ ನಾಯಿ ಬೊಗಳತೊಡಗಿತು. ಭರಮ್ಯಾನ ತಾಳ್ಮೆಯನ್ನು ನಾಯಿ ಪರೀಕ್ಷಿಸಿದಂತೆ ಅನಿಸಿತು. ಅವನ ಮೈಯಲ್ಲಿದ್ದ ಸಿಟ್ಟು ಅಬ್ಬರಸಿ ಹೊರಚಲ್ಲಿದಾಗಲೆ ಮತ್ತೆ ಹಾಸಿಗೆಯಿಂದ ತಾಳ್ಮೆಗೆಟ್ಟು ಮೇಲೆದ್ದ. ಕಾಲ್ದಸಿಯಲ್ಲಿ ಕಲ್ಲಿಗಾಗಿ ತಡಕಾಡಿದ, ಒಂದು ಹಿಡಿಗಲ್ಲು ಸಿಕ್ಕಿತು, ಜೋರಾಗಿ ನಾಯಿಯತ್ತ ಬೀಸಿದ. ಅದು ಹೋಗಿ ಅದಕ್ಕೆ ಬಡೆದೆ ಬಿಟ್ಟಿತು. ಇಷ್ಟೊತ್ತಿನವರೆಗೂ ಒಂದೆ ಸಮನೆ  ಬೊಗಳುತ್ತಿದ್ದ ನಾಯಿ ಭರಮ್ಯಾ ಬೀಸಿದ ಕಲ್ಲಿನ ಏಟಿಗೆ ತತ್ತರಸಿಕುಂಯ್ ಕುಂಯ್ ರಾಗಮಾಡುತ್ತ ದಡ್ಡಿಯತ್ತ ಅಳುತ್ತ ಪಲಾಯನ ಪಠಿಸಿತು.

ನಾಯಿಗೆ ಕಲ್ಲು ಎಸೆದ ಮೇಲೆ ಲುಂಗಿ ಎತ್ತಿ ಉಚ್ಚಿ ಹೊಯ್ದ. ದನದ ಮನಿಯತ್ತ ಹೆಜ್ಜೆ ಹಾಕಿದ. ತರಗತಿಗೆ ಬಂದ ಮಾಸ್ತರನನ್ನು ಕಂಡು ಎಲ್ಲ ಹುಡುಗರು ಮೇಲೆದ್ದು ಗೌರವ ಸೂಚಿಸಿವ ಹಾಗೆ..! ಭರಮ್ಯಾನನ್ನು ನೋಡಿದ್ದೇ ತಡ ಎಲ್ಲ ದನಗಳು ಬುದುಬುದು ಮೇಲೆದ್ದು ಮೈಮುರಿದವು. ಇಳಿಬಿದ್ದ ಲುಂಗಿಯನ್ನು ಮೇಲಕ್ಕೆ ಎತ್ತಿಕಟ್ಟಿ, ಹೆಗಲಮೇಲಿದ್ದ ಟಾವಲ್ಲನ್ನು ತಲೆಗೆ ಸುತ್ತಿಕೊಂಡಾಗ ಎಲ್ಲ ದನಗಳು ನಮಗೇನ ಹಸಿ ಮೇವು ಹಾಕ್ತಾನೋ.. ವನಾ ಕನಕಿ ವಗಿತಾನೋ ಎಂದು ಭರಮ್ಯಾನ ಚಲನವಲನ ಗಮನಿಸಿ ಹುಳುಹುಳು ನೋಡುತ್ತಿದ್ದವು.

ಭರಮ್ಯಾ ತೆಕ್ಕಿ ಬಡೆದು ಗೊಂಜಾಳ ಹಸಿ ಮೇವು ತಗೆದುಕೊಂಡದ್ದೆ ತಡಾ, ಎಲ್ಲ ದನಗಳು ತಮ್ಮ ಬಾಲಗಳಿಂದ ಮೈ ಮೇಲೆ ಬೀಸಾಡಿಕೊಳ್ಳುತ್ತ, ಹಿರಿ ಹಿರಿ ಹಿಗ್ಗಿ ಹೀರಿಕಾಯಾದವು. ಯಾವ ಬೇದಬಾವ ಮಾಡದೆ ತಾಯಿ ಬಾವ ತೋರಿ ಎಲ್ಲದನಗಳಿಗೂ ಸಮಾನವಾಗಿ ಮೇವು ಹಾಕಿದ. ತಲೆ ಮೇಲಿನ ಟಾವಲನ್ನು ಉಚ್ಚಿ ಚಟಚಟ ಜಾಡಿಸಿ, ಕೈ-ಮೈ ಮೇಲೆ ಬಿದ್ದ ಮಣ್ಣು ಜಾಡಿಸಿಕೊಳ್ಳುತ್ತ ತಾನು ಹಾಸಿದ ಚಾಪಿಯತ್ತ ನಡೆದ. ಏನು ಮಾಡಿದರೂ ನಿದ್ದೆ ಬರಲಿಲ್ಲ. ಏಕಾಂತ ಕಾಡತೊಡಗಿತು. ಚಾಪೆತುಂಬೆಲ್ಲಾ ಉರಳಾಡಿದ. ಕಣ್ಣಿಗೆ ಕಣ್ಣು ಹತ್ತಲಿಲ್ಲ.

ಶ್ಯಾರಿ ನೆನಪಾದಳು……

ಮದುವೆಯಾದ ಹೊಸದರಲ್ಲಿ ಶ್ಯಾರಿಯೊಂದಿಗೆ ಕಳೆದ ದಿನಗಳು ಸಿನಿಮಾ ರೀಲಿನಂತೆ ಎಳೆಎಳೆಯಾಗಿ ಬಿಚ್ಚತೊಡಗಿತು. ಶ್ಯಾರಿಯ ಗಿಡ್ಡ ಶರೀರ, ಚಂಡು ಹೂವಿನಂತ ಮೊಕದಲ್ಲಿರುವ ಅವಳ ಮಂಡಮೂಗು, ದಟ್ಟ ಕಾಡಿನೊಳಗಿರುವ ತಿಳಿಗೊಳದಲ್ಲಿ ಅರಳಿದ ಕಮಲದಂತಿರುವ ಅವಳ ಮುದ್ದಾದ ಕಣ್ಣುಗಳು, ತುಸು ದಪ್ಪಗಿದ್ದ ತುಟಿಗಳು ಅವಳ ದುಂಡು ಮೊಕಕ್ಕೆ ಹೊಂದಿಕೆಯಾಗಿದ್ದವು. ಕರ್‌ಗೆ ಬೆನ್ನ ಮೇಲೆ ಇಳಿಬಿದ್ದ ಜೆಡೆ ಅವಳ ಸೊಂಟದ ಕೆಳಗಿನ ಏರು ದಿಬ್ಬಿನಲ್ಲಿ ತಾಗಿತಾಗಿ ನೋಡುವ ಕಣ್ಣುಗಳಿಗೆ ಸುಖ ನೀಡುತ್ತಿತ್ತು. ಭಾಳ ಹೊತ್ತು ಸಮಯ ತಗೆದುಕೊಂಡು ಕೆತ್ತಿದ ಶಿಲ್ಪಿಯ ಶಿಲ್ಪಕಲೆಯಂತಿರುವ ಅವಳ ಮೈಮಾಟ ಭರಿಮ್ಯಾನನ್ನು ಹುಚ್ಚೆದ್ದು ಕುಣಿಸುತ್ತಿತ್ತು. ಭರಿಮ್ಯಾ ಹಸಿದ ಆಸೆಬುರುಕ ದುಂಬಿಯ ಹಾಗೆ, ಅಬ್ಬರಿಸುವ ಕಡಲಿನಂತೆ, ಶ್ಯಾರಿಯ ಪಲವತ್ತಾದ ಮೈ-ಮೈಧಾನಾದಲ್ಲಿ ತಣಿದಿದ್ದ. ತನ್ನ ದೇಹದ ಹಸಿವು ತೀರಿಸಿಕೊಂಡಿದ್ದ. ದಿನಾಲು ದನಗಳನ್ನು ಮೇಯಿಸಿಕೊಂಡು ಬಿಸಿಲಿನ ತಾಪಕ್ಕೆ ಮೈ ಚಲ್ಲಿ ಘಟಪ್ರಭೆಯಲ್ಲಿ ದುಡುಮ್ ಎಂದು ಮುಳುಗಿ ಈಸು ಹೊಡೆದಂತೆ ಸಾಕಷ್ಟು ಭಾರಿ ಶ್ಯಾರಿಯ ದೇಹ ಸಾಗಗರದಲ್ಲಿ ಈಜಾಡಿ ಈಜಾಡಿ ದಡ ಸೇರಿದ್ದ. ಎಷ್ಟು ಈಜಾಡಿದರೂ ಇನ್ನೂ ಈಜಾಡಬೇಕು ಅನ್ನುವ ಉಮೇದದಲ್ಲಿಯೇ, ಕನಸಿನಲ್ಲಿಯೇ, ಭ್ರಮೇಯಲ್ಲಿಯೇ ಇರುತ್ತಿದ್ದ. ದಿನ ಕಳೆದಂತೆ ಶ್ಯಾರಿ ತಕರಾರ, ತಂಟೆ ತಗೆಯತೊಡಗಿದಳು. ಭರಮ್ಯಾನನ್ನು ಹಾಸಿಗೆಯಲ್ಲಿ ಸೇರಿಸಿಕೊಳ್ಳಲು ಹಿಂದೇಟು ಹಾಕತೊಡಗಿದಳು.

ರಾತ್ರಿ ಇಬ್ಬರು ಹಾವಿನಂತೆ ತಳಕುಬಳಕು ಬಿದ್ದಾಗ,ಭರಮ್ಯಾನ ಮೈಯಿಂದ ಗಬ್ಬುವಾಸನೆ ಶ್ಯಾರಿಯ ಮೂಗು ಬಾಯಿತುಂಬ ಅಡರಿ ವಾಕರಿಕೆ ತರಿಸುತ್ತಿತ್ತು. ಭರಮ್ಯಾ ಎಂದೂ ಹಲ್ಲು ಉಜ್ಜಿರುವುದನ್ನು ಶ್ಯಾರಿ ಕಂಡಿರಲಿಲ್ಲ..! ಮಾರುದ್ದ ಕುಳಿತರು ಅವನ ಬಾಯಿ ಗಟಾರದಂತೆ ಗಮಗುಡುತ್ತಿತ್ತು. ಶ್ಯಾರಿ ಬಾಳ ವತ್ತಾಯ ಮಾಡಿದಾಗಷ್ಟೆ ಕಾಟಾಚಾರಕ್ಕೆ ಇದ್ದಲಿ ಪುಡಿಯಿಂದ  ತನ್ನ ನಡುಬೆರಳಿಂದ ಗಸಗಸ ತಿಕ್ಕಿದಂತೆ ನಟಿಸಿ, ನೀರು ಮುಕ್ಕಳಿಸುತ್ತಿದ್ದ. ಕೊಲ್ಗೇಟ ಮುಲಾಮ ಹಚ್ಚಿ, ಚಂದಂಗ ಹಲ್ಲು ಉಜ್ಜು ಎಂದು ಶ್ಯಾರಿ ಜುಲಮಿ ಮಾಡುತ್ತಿದ್ದಳು. ಥೂ.. ಇದರೌವ್ನ ಈ ಪೇಸ್ಟ್ ಯಾವ ದನಗೊಳ ಶಗಣಿ ಹಾಕಿ ಮಾಡಿರ್ತಾರೋ..! ಇದನ್ನ ಬಾಯಾಗ ಹಾಕಿ ತ್ವಳ್ಕೊಬೇಕಾ? ಯಪಾ..ಯಪಾ..ಯಪ್ಪಾ..! ನೆನೆಸ್ಕೊಂಡ್ರ ವಾಕರ್ಕಿ ಬರ್ತೈತಿ ಅನ್ನುತ್ತ ಶ್ಯಾರಿಯ ಮಾತಿಗೆ ಚಾಷ್ಟಿಮಾಡಿ  ನಗುತ್ತಿದ್ದ.ಇದರ ಜೋಡಿ ಬಾಳೆ ಮಾಡುದು ಒಂದ…. ದನಗೋಳ ಜೋಡಿ ಬಾಳೆ ಮಾಡುದೂ ಒಂದ….ಶ್ಯಾರಿ ದಿನಕ್ಕೆ ಈ ವಾಕ್ಯವನ್ನು ಹತ್ತಾರು ಬಾರಿ ಭರಮ್ಯಾನ ಕಮಟುತನವನ್ನು ಕುರಿತು ಮಾತಾಡುತಿದ್ದಳು.

ಒಮ್ಮೆಯಂತು ಭರಮ್ಯಾ ದನಗಳ ಹೆಂಡಿಕಸಾ ಮಾಡಿ ಕೈ-ಮೈ ತೊಳಿದುಕೊಳ್ಳದೆ ಊಟಕ್ಕೆ ಕುಳಿತಿದ್ದ. ಅವನ ಅವತಾರ ನೋಡಿ ಶ್ಯಾರಿ ಕಂಗಾಲಾದಳು.ಸ್ವಚ್ಚಂಗ ಶ್ಯಾಂಪೂ ಹಾಕಿ ತಲಿ ತ್ವಳಕೊ.. ..ಸಾಬನಾ ಹಚ್ಚಿ ಮೈ ತ್ವಳಕೊ.. .. , ಒಂದೀಟ ಹಸನ್ಹಂಗ ಇರು.. ಶ್ಯಾರಿ ಕಣ್ಣು ಕೆಂಪೇರಿಸಿಕೊಂಡು ಭರಿಮ್ಯಾನ ಮೇಲೆ ರೇಗಾಡುತ್ತಿದ್ದಳು.ಹೋಗಲೇ ಹುಚಪ್ಯಾಲಿ…ಹೋಗ.. ನಾಂವ ದುಡ್ಕೊಂದ ತಿನ್ನು ಜನಾ, ಚೈನಿ ಮಾಡು ಮಂದಿಗೆ ಇವೆಲ್ಲ ಶ್ಯಾಂಪು,ಸಬಕಾರ ಭರಮ್ಯಾ ಆಡಿದ ಮಾತು ಶ್ಯಾರಿಗೆ ಕಪಾಳಿಗೆ ಹೊಡೆದಂತೆ ಅನಿಸಿತು.

ಸದಾನಂದಗೌಡರ ಮನೆಯ ಆಳು ಅಂದದ್ದಕ್ಕೆ, ಏನೂ ಎಂಥು ವಿಚಾರಿಸದೆ, ತನ್ನ ಅವ್ವ ಅಪ್ಪ ಯಾವ ಪರಶಿವನ ಅನುಮತಿ ಅಪ್ಪಣೆಗೆ ಕಾಯದೆ, ತನ್ನನ್ನು ಈ ಪ್ರಾಣಿಗುಣದ ಭರಮ್ಯಾನಿಗೆ ಜೋಡುಮಾಡಿ, ತಾವು ತಣ್ಣಗೆ ಕಣ್ಣು ಮುಚ್ಚಿಕೊಂಡಿದ್ದರು. ತಂದೆ-ತಾಯಿಗಳ ಮೇಲೆ  ಶ್ಯಾರಿಗೆ ಸಾಕಷ್ಟು ಸಿಟ್ಟುಬಂದರೂ ಪಾಲಿಗೆ ಬಂದದ್ದು ಪಂಚಾಮೃತವೆಂದು ಬದುಕಿನ ಹರದಾರಿ ಸವೆಸಿದ್ದಳು.

ಶ್ಯಾರಿಗೆ ಮೊದಲಿನಿಂದಲೂ ತನ್ನೊಂದಿಗೆ ಸಂಸಾರ ಮಾಡುವ ಗಂಡು ಹಾಗಿರಬೇಕು, ಹೀಗೀರಬೇಕು ಎಂದು ಕನಸು ಕಂಡಿದ್ದಳು.ಚೈನಿ ಮಾಡುವ ಗಂಡಸರ ಕಂಡು ಹಲ್ಲು ಕಿರಿದು ನಗೆ ಬೀರುತ್ತಿದ್ದಳು. ಭರಮ್ಯಾನಂತು ಹಾಗಿಲ್ಲದ, ಹಂಚಿಗೆ ಇಲ್ಲದ, ಸತತ ದುಡಿಯುವ, ಗೌಡರ ದನಗೊಳೊಂದಿಗೆ ದಿನಾಲೂ ಇವನೂ ಒಬ್ಬ  ದನವಾಗಿರುವಂತೆ ಅವಳಿಗೆ ಅನಿಸುತ್ತಿತ್ತು. ಇಂತವನೊಂದಿಗೆ ಇನ್ನು ಮುಂದೆ ಜೀವನ ಸಾಗಿಸಲು ಅವಳ ಮನಸು  ಹಿಂದೇಟು ಹಾಕತೊಡಗಿತ್ತು.

 ಅನ್ನ ಹಾಕಿದ ಮನೆಯ ಋಣ ತೀರಿಸುವ ನಾಯಿ ಕುನ್ನಿಯಂತೆ..!ಸದಾನಂದಗೌಡರ ಹೊಲಮನೆಯಲ್ಲಿ ಭರಮ್ಯಾ ಹೆಚ್ಚು ಇರುತ್ತಿದ್ದ. ವಾರದಲ್ಲಿ ಒಂದೆರಡು ದಿನ ಮನೆಗೆ ಬಂದ್ರೆ ಅದೇ ಪುಣ್ಯ..!! ಯಾವತ್ತೂ ಗೌಡರ ದನದ ಮನೆಯಲ್ಲಿ ದನಗಳ ಚಾಕ್ರಿ ಮಾಡುತ್ತ, ದಾಳಂಬ್ರಿ, ಬಾಳೆ ತೋಟ ಕಾಯುತ್ತ, ಕಟ್ಟಿಗೆ, ಮೇವು-ಮಿಡಚಿಮಾಡುತ್ತ ಕಾಲುಕಟ್ಟಿಕೊಂಡು ಅಲ್ಲೆಬೀಳುತ್ತಿದ್ದ. ಶ್ಯಾರಿ ಜನತಾ ಪ್ಲಾಟಿನಲ್ಲಿ ಒಬ್ಬಳೆ ಒದ್ದಾಡುತ್ತಿದ್ದಳು. ಒಂದಿತ್ತು ಒಂದಿಲ್ಲ ಅನ್ನುವ ಹಾಗೆ ಇದ್ದದ್ದು ತಿಂದು ಕಳ್ಳು ಮುಸರಿ ಮಾಡಿಕೊಂಡಿರುವುದು ಅಭ್ಯಾಸವಾಗಿತ್ತು. ಆದರೆ ರಾತ್ರಿಯ ಒಂಟಿತನ ಶ್ಯಾರಿಗೆ ಜೀವ ಹಿಂಡುತ್ತಿತ್ತು. ಭರಮ್ಯಾನನ್ನು ಬೈದರೂ, ತಿರಸ್ಕರಿಸಿದರೂ ರಾತ್ರಿ ಹೊತ್ತು ಮಗ್ಗಲದಲ್ಲಿ ಇರಬೇಕಿತ್ತು ಎಂದು ಅವಳ ದೇಹ ವಿಲಿವಿಲಿ ವಿಲಿಗುಟ್ಟುತ್ತಿತ್ತು.ಶ್ಯಾರಿ ಒಮ್ಮೊಮ್ಮೆ ಭರಮ್ಯಾನ ಕಮಟಿಟ್ಟ ದೇಹ ವಾಕಿರಿಕೆ ತರಿಸಿದರೂ ಮತ್ತೊಮ್ಮೆ ಹಾಗೆ  ಇದ್ರೂ ಸಾಕೆನಿಸುವ ನಿರ್ಧಾರಕ್ಕೆ ಬರುತ್ತಿತ್ತು. ಶ್ಯಾರಿ ದೇಹ ಒಂಟಿತನದಿಂದ ನರಳುತ್ತಿದ್ದರೆ…. ಅಲ್ಲಿ ಭರಮ್ಯಾ ಗೌಡರ ದನದ ಮನೆಯ ಅಂಗಳದಲ್ಲಿ ಗಡದ್ಬಾರ ನಿದ್ದೆ ಹೊಡೆಯುತ್ತ ಮಲಗಿರುತ್ತಿದ್ದ.

ಶ್ಯಾರಿಗೆ ಒಂಟಿತನ ಸಾಕಾಗಿತ್ತು. ತಾನೂ ಗೌಡರ ಮನೆಯಲ್ಲಿ ಕೆಲಸಕ್ಕೆ ಸೇರಬೇಕೆಂದರೆ ಭರಮ್ಯಾ ನೀ ಅಲ್ಲಿ ಬರೊದು ಬ್ಯಾಡವೆಂದು ತಕರಾರು ಮಾಡುತ್ತಿದ್ದ. ಗೌಡರ ಮನಿ ಬಿಟ್ಟು ಬೇರೆಯವರ ಜಮೀನಿನಲ್ಲಿ ದುಡಿಯಂದರೆ,ಅದೆಂಗ ಆದಿತು..? ನನ್ನ ಸಾಕಿ ಸಲುಹಿದ ದೇವ್ರ ಅವರು. ನನ್ನ ಅನ್ನದ ಗ್ವಾದ್ಲಿ ಅದು ಎಂದು ಉಪದೇಶ ಕುಟ್ಟುತ್ತಿದ್ದ. ಶ್ಯಾರಿಗೆ ಸಾಕುಸಾಕಾಗಿ ಹೋಗಿತ್ತು. ನಾಳೆ ಮನೆಗೆ ಬಂದ್ರೆ ಕೇಳಬೇಕು. ಎರಡರಲ್ಲಿ ಒಂದಾಗಬೇಕು ಎಂದು ನಿರ್ದರಿಸಿಕೊಂಡು ಮಲಗಿದ್ದಳು.

ಗೌಡರ ಮನೆಯ ಹೆಂಡಿ ಕಸಾ ಬಳೆದು, ಮೇವು ಹಾಕಿ, ತ್ವಾಟದ ಮನೆಯಿಂದ ಊರಿಗೆ ಬಂದಾಗ ಸೂರ್ಯ ಮಾರುದ್ದ ಬಂದಿದ್ದ. ದುಡುದುಡು ಬಂದವನೆ ತಿನ್ನಾಕ ಏನ್ ಮಾಡಿ ಹೊಟ್ಟಿ ಬಾಳ ಹಸದೈತಿ. ನಿನ್ನಿ ರಾತ್ರಿ ಗೊಂಜಾಳ ತೆನಿ ಸುಟ್ಟ ತಿಂದದ್ದಕ್ಕ ಹೊಟ್ಟೆಲ್ಲ ಜಾಡಿಸಿ ಕಾಲಿ ಆಗೇತಿ. ಏನ ಮಾಡಾಕತ್ತಿ ಲಗೂನ ಮಾಡು. ಗೌಡರ ಮನಿಗೆ ಹೋಗಿ ಕಟಗಿ ಕಡದಕೊಡ್ಬೇಕು ಎಂದು ತನ್ನ ವರದಿ ವಾಚನ ಕುಟ್ಟುತ್ತಿದ್ದ.ಶ್ಯಾರಿ ರೊಟ್ಟಿ ಹಿಟ್ಟು ಸಾನಿಸುತ್ತ ಮುಂಜಮುಂಜಾನೆ ಎದ್ದು ಭರಮ್ಯಾನೊಂದಿಗೆ ಮತ್ತೆ  ಜಗಳಕ್ಕೆ ನಿಂತಳು. ನೀ ಸಂಚ್ಯಾನ ಬೇಕಾದ್ರ ಗೌಡರ ಚಾಕ್ರಿ ಮಾಡ ನಾಯೇನ ಬ್ಯಾಡ ಅನ್ನಾಂಗಿಲ್ಲ. ರಾತ್ರಿ ಮಾತ್ರ ನಮ್ಮ ಜನತಾ ಪ್ಲಾಟಿಗೆ ಬರ್ಬೇಕುಎಂದು ಜಿದ್ದಿಗೆ ಬಿದ್ದಳು. ಅದೆಲ್ಲ ಆಗೂ ಮಾತ ಅಲ್ಲ. ಗೌಡ್ರ ಹೇಳಿದ್ಹಂಗ ನಾವ ಕೇಳ್ಬೇಕೋ.. ನಾವ ಹೇಳಿದ್ಹಂಗ ಗೌಡ್ರ ಕೇಳ್ಬೇಕೋ.. ನೀ ಅಂದಂಗ ಅದ್ಯಾಂಗ ಅಕೈತಿ. ರಾತ್ರಿ ನಿನಗೇನ ಅಂಜಕಿ..? ಒಬ್ಬಳ ಮಲಗಾಕ ಏನ ಧಾಡಿ, ಮಗ್ಗಲ ಸಾಕಷ್ಟ ಮನಿಗೊಳ ಇಲ್ಲೇನ.. ಸುಮ್ಮ ಸುಮ್ಮನ ಏನಾರ ಒಂದ ದಿನಾ ಕಾಯ್ದೆ ಮಾಡಬ್ಯಾಡ.. ನಿನಗ ನೀಗಿದಷ್ಟ ಕೂಲಿ ಮಾಡು, ಅದು ಬ್ಯಾಡ ಅಂದ್ರ ಮನಿಯಾಗ ಆಡಾ ಮರಿ ಮೇಸ್ಗೋತ ಇರ, ನಾ ದುಡದ ನಿನ್ನ ಸಾಕತೀನಿ ಅದಕ್ಯಾಕ ಹೆದರ್ತಿ ಭರಮ್ಯಾ ತನ್ನ ಒಂದ ಕೋಲಿ ಮನಿಯಲ್ಲಿ ಗ್ವಾಡಿಗೆ ಬೆನ್ನು ಹಚ್ಚಿಕೊಂಡು ತುದಿಗುಂಡಿಯಲ್ಲಿ ಕುಂತು ಶ್ಯಾರಿ ಮಾತಿಗೆ ಪ್ರತಿಮಾತು ವಾದಿಸುತ್ತಿದ್ದ. ಶ್ಯಾರಿ ಒಲೆಮುಂದು ರೊಟ್ಟಿ ಹಿಟ್ಟು ನಾದುತ್ತ ಕಣ್ಣೀರು ಸುರಿಸಿದಂತೆ ನಾಟಕ ಮಾಡುತ್ತಿದ್ದಳು. ಗೌಡರ ರಿನಾ ನನ್ನ ಮ್ಯಾಲ ಭಾಳ ಐತಿ. ಇದ ಒಂದ ಜನ್ಮದಾಗ ತೀರಿಸಿದ್ರೂ ತೀರುವಂತದ್ದಲ್ಲ ಭರಮ್ಯಾ ಹಾಗೆ ಮಾತು ಮುಂದು ವರೆಸಿದ್ದ. ಶ್ಯಾರಿ ಪಟಪಟ ರೊಟ್ಟಿ ಬಡೆದು ಹಂಚಿನ ಮೇಲೆ ಹಾಕಿ ಅದಕ್ಕೆ ನೀರು ಹಚ್ಚಿ, ಹಾಂ ಹೂಂ ಅನ್ನದೆ ಸುಮ್ಮನಿದ್ದಳು.

             ನಾಕು ರೊಟ್ಟಿ ಆದ ಮೇಲೆ ತಾನೆ ಎದ್ದು ಹೋಗಿ ರೊಟ್ಟಿ ತಟ್ಟೆಯಲ್ಲಿ ಕೈ ಹಾಕಿ ತಗೆದುಕೊಂಡು ತಾಟಿಗೆ ಹಾಕಿ, ಅದರಲ್ಲಿ ಚವಳಿಕಾಯಿ ಪಲ್ಲೆ ಹಾಕಿಕೊಂಡು ತಿನ್ನತೊಡಗಿದ. ಗಬಗಬತಿಂದು ಕೈ ತೊಳೆದು, ಬಾಯಿಯನ್ನು ಹೆಗಲ ಮೇಲಿದ್ದ  ಟಾವಲಿನಿಂದ ವರೆಸಿಕೊಂಡು, ನಾ ಹೋಗಿ ಬರ್ತೀನಿ ಕೈಯಾಗಿದ್ದ ಟಾವಲನ್ನು ಚಟಾಚಟಾ ಜಾಡಿಸಿ ಹೆಗಲ ಮೇಲೆ ಹಾಕಿಕೊಂಡು,ಮತ್ತೆ ಗೌಡರ ಮನಿಯತ್ತ ಹೆಜ್ಜೆ ಬೆಳಿಸಿದ.ಏನ್ ದೊಡ್ಡ ಆಫೀಸರ್ ನೋಡು, ಹೋಗಿ ಬರ್ತಿನಂತ ಹೇಳ್ತಾನ, ಇದಕ್ಕ ಎಷ್ಟ ಹೇಳಿದ್ರು ಅಷ್ಟ ಐತಿ ಅಂದುಕೊಂಡು ಶ್ಯಾರಿ ಗಳಗಳ ಅತ್ತಳು.

            ದಿನಾಲು ಅಟೋ ರಿಕ್ಷಾ ಏರಿ ಹೊನ್ನಪ್ಪನ ಹೊಲಕ್ಕೆ ಕಸಕಡ್ಡಿ ತಗೆಯಲು ಊರ ಆಳಗಳು ಹೋಗುತ್ತಿದ್ದವು. ಅದರಲ್ಲಿ ಶ್ಯಾರಿಯೂ ದಿನ ತಪ್ಪದೆ ಹೋಗುತ್ತಿದ್ದಳು. ಹೊನ್ನಪ್ಪನ ತೋಟ ದೇವನಾಳದಿಂದ ಹತ್ತು ಕಿಲೋಮೀಟರ ದೂರ ಇರುವುದರಿಂದ ಆಳುಗಳನ್ನು ತರಲು ಮತ್ತು ಇಳಿಸಲು ಜಾಂಗೀರನ ರಿಕ್ಷಾ ನೇಮಿಸಿದ್ದ. ಜಾಂಗೀರ ದಿನಾ ಹೋಗುವಾಗ ಬರುವಾಗ ನಗೆ ಚಟಾಕಿ ಮಾತನ್ನು ಸಿಡಿಸಿ ಹೆಂಗಸರನ್ನೆಲ್ಲ ನಗೆಯ ಕಡಲಲ್ಲಿ ತೇಲಾಡಿಸುತ್ತಿದ್ದ. ತುಂಬಾ ತೆಳ್ಳಗಿರುವ ಅವನ ಮೈಕಟ್ಟು, ತಲೆತುಂಬ ಗೇನುದ್ದದ ಕೂದಲನ್ನು ಕುಣಿಸುತ್ತ, ಆಗಾಗ ಸಿನಿಮಾ ಹೀರೋಗಳಂತೆ ತನ್ನೆರಡು ಕೈಯಲ್ಲಿರು ಬೆರಳನ್ನೆ ಬಾಚನಿಕೆಯಂತೆ ಮಾಡಿಕೊಂಡು ಕೂದಲನ್ನು ಮೇಲಕ್ಕೆರಿಸುತ್ತಿದ್ದ. ಚಿಗುರು ಮೀಸೆಯ ಮೇಲೆ ಕೈಯಿಟ್ಟುಕೊಂಡು, ಮುಗುಳುನಗುತ್ತಿದ್ದ. ಜಾಂಗೀರ, ಮಾಡುವ ನಕಲಿ,ಚಾಷ್ಟಿ, ನಗೆ ಚಟಾಕಿ ಶ್ಯಾರಿಯ ಎದೆಯಲ್ಲೊಂದು ಹಣತೆ ಹಚ್ಚಿಟ್ಟಂತೆ ಅನಿಸತೊಡಗಿತು. ದಿನಾ ಹೋಗುವಾಗ ಬರುವಾಗ ಅವನ ಹತ್ತಿರದಲ್ಲಿಯೇ ಅವನ ಮೈಗೆ ಅಂಟಿಕೊಂಡೆ ಬರುತ್ತಿದ್ದಳು. ಜಾಂಗೀರ ತನ್ನ ದೇಹಕ್ಕೆ ಸುಗಂಧ ದ್ರವ್ಯ ಸುರಿದುಕೊಂಡಿರುತ್ತಿದ್ದ. ಶ್ಯಾರಿಗೆ ಆದ್ರವ್ಯ ಮತ್ತೇರಿಸದಂತೆ, ಅವಳ ಎದೆಯಲ್ಲಿ ಉಮೇದ ಹುಟ್ಟಿಸುತ್ತಿತ್ತು. ಭರಮ್ಯಾನ ಹೆಂಡಿ ವಾಸನೆಗೂ ಜಾಂಗೀರನ ಸುಗಂಧಕ್ಕು ಎಲ್ಲಿಂದೆಲ್ಲಿಗೆ ಹೋಲಿಕೆ..! ಎಂದು ಮನದಲ್ಲಿ ತಾಳೆಮಾಡಿ ನೋಡುತ್ತಿದ್ದಳು. ಆಗ ಅವಳ ಎದೆಯ ಬಾಗಿಲಿನಿಂದ ಭರಮ್ಯಾ ಹೊರ ಹೋದಂತೆ ತೋರಿತು. ಜಿಗುರು ಮೀಸೆಯ, ಗೇನುದ್ದ ತೆಲೆಗೂದಲನ್ನು ಹಾರಾಡಿಸಿ ನಗುವ ಚಲುವರಾಯ ಜಾಂಗೀರ ಶ್ಯಾರಿಯ ಎದೆಯ ಬಾಗಿಲಿನಿಂದ ಒಳಬಂದು ನಟ್ಟನಡುವೆ ಕುಳಿತಂತೆ ತೋರಿತು.

ದಿನಾ ಶಾರಿಯ ಸೀಟು ಜಾಂಗೀರನ ಪಕ್ಕಕ್ಕೆ ಪಿಕ್ಷಾಯಿತು. ರಿಕ್ಷಾ ಓಡಿಸುವಾಗ ಅವನ ಮನಕೈ ಅವಳ ಎದೆಯ ಎರಿಗೆ ತಾಗಿತಾಗಿ ಮೈಯಲ್ಲಿ ಬಿಸಿ ಹುಟ್ಟಿಸುತ್ತಿತ್ತು, ತಾನೂ ಸುಖಿಸುತೊಡಗಿದ. ಹುಚ್ಚ ಪ್ರೀತಿಯ ತೆಕ್ಕೆಗೆ ಸಿಕ್ಕಿಹಾಕಿಕೊಂಡು ಶ್ಯಾರಿ ದನದ ಜೋಡಿ ದನವಾಗಿಯೇ ಬದಕುತ್ತಿದ್ದ ಭರಮ್ಯಾನನ್ನು ಬಿಟ್ಟು ಜಾಂಗೀರನೊಂದಿಗೆ ಓಡಿ ಹೋದಳು.

ಸದಾನಂದಗೌಡರ ಆಳಮನಸ್ಯಾನ ಹೆಂತಿ ಜಾಂಗೀರನೊಂದಿಗೆ ಓಡಿ ಹೋಗ್ಯಾಳ ಅನ್ನುವ ಸುದ್ದಿ ಇಡೀ ದೇವನಾಳ ಊರ ತುಂಬ ಹರಡಿ ಎಲ್ಲರು ಬಾಯಿ ಮೇಲೆ ಕೈ ಇಟಗೊಳ್ಳುವಂತಾಯಿತು. ದೇವನಾಳ ಊರ ಮಂದಿ ಭರಮ್ಯಾನ ಹಣೆಬರ ಕಂಡು ಮರುಗಿದರು. ಸದಾನಂದಗೌಡರಿಗೂ ಸುದ್ದಿ ಕೇಳಿ ಬೇಸರವಾಯಿತು. ಹೆಚ್ಚು ಕಡಿಮೆ ಸಾದಾನಂದಗೌಡರು ಭರಮ್ಯಾನ ವಾರಿಗೆಯವರು. ಸದಾನಂದನಗೌಡರ ತಂದೆ ಹನಮಂತಗೌಡರು ಉಪಕಾರಿ ಮನುಷ್ಯ. ಅವತ್ತು ತಂದೆ-ತಾಯಿ ಕಳೆದುಕೊಂಡು ಭರಮ್ಯಾ, ಪರದೇಸಿ ಆದಾಗ ಅವನನ್ನು ತಾವೇ ತುತ್ತು ಅನ್ನ ಹಾಕಿ ಸಾಕಿದರು. ತಮ್ಮ ಮನೆಯಲ್ಲಿಯೆ ಇಟ್ಟುಕೊಂಡು ಬೆಳಸಿದ್ದರು. ಭರಮ್ಯಾನಿಗೆ ದನಾ ಕಾಯುವ ವೃತ್ತಿಯನ್ನು ನೀಡಿದ್ದರು. ತಾವು ಸಾಯುವಾಗ ಧಾರವಾಡದಿಂದ ಸದಾನಂದಗೌಡರಿಗೆ ಕರಿಸಿಈ ಭರಮ್ಯಾ ಸಾವು ಮಟಾ ನಮ್ಮ ಮನಿಯಾಗ ಇರ್ಲಿ, ಅವನಿಂದ ನಮ್ಮ ಮನೆಗೊಂದು ಶುಭವಾರ್ತೆ ಕೇಳಿ ಬರ್ತೈತಿ ಅಂದದ್ದು ಸದಾನಂದನಿಗೆ ಈಗ ನೆನಪಾಯಿತು.ಅಂದು ಅಪ್ಪ ಹೇಳಿ ಹೋದ ಶುಭವಾರ್ತೆ ಇದೇನಾ? ಎಂದು ಗೊಡೆಯ ಪೋಟೋದಲ್ಲಿರುವ ಅವರಪ್ಪನ ನೋಡಿ ನಕ್ಕರು. ಮತ್ತೇನು ತಿಳಿಯಿತೋ ಭರಮ್ಯಾನನ್ನು ನೋಡಬೇಕೆಂದು ತೋಟದ ಮನೆಯತ್ತ ಹೆಜ್ಜೆ ಹಾಕಿದರು.ಪಾಪ.. ! ಭರಿಮ್ಯಾನಿಗೆ ತನ್ನ ಹೆಂಡತಿ ಓಡಿ ಹೋದ ಸುದ್ದಿ ಗೊತ್ತಿರಲಿಲ್ಲ. ಅಂವನಿಗೆ ಯಾರೂ ಹೇಳಲು ಮನಸು ಮಾಡಿರಲಿಲ್ಲ. ಎರಡು ಮೂರು ದಿನಗಳಿಂದ ಭರಮ್ಯಾ ತೋಟದ ಮನೆಯಲ್ಲಿಯೇ ಟಿಕಾನಿ ಹುಡಿದ್ದ.

ದೇವನಾಳ ಊರಾಗ ದೌಳಾರು ಭಾಳವ್ವ

ದಾನ ನೀಡುವ ಕೈಗೆ ಬರವಿಲ್ಲ! ತಾಯವ್ವ

 ಹಸಿದು ಬಂದವರಿಗೆ ಸಾವಿಲ್ಲ!!

      ಎಂದು ಹಾಡುತ್ತ ದನದ ಮನೆಯಲ್ಲಿ ದನಗೋಳಿಗೆ ಕನಿಕಿ ಕೊರೆಯುತ್ತಿದ್ದ. ಸದಾನಂದಗೌಡರನ್ನು ನೋಡಿದ್ದೆ ತಡ ಬಿಲ್ಲಿನಂತೆ ಬಾಗಿ ನಮಸ್ಕಾರ ಮಾಡಿ, ಮತ್ತೆ ತನ್ನ ಕೆಲಸಕ್ಕೆ ಅನಿಯಾದ. ಮತ್ತೆ ಗುಣುಗುಣು ಗುಣಗುತ್ತ ಕನಿಕಿ ಕೊರೆದು  ಎಲ್ಲ ದನಗಳಿಗೆ ಒಂದೊಂದು ತೆಕ್ಕಿ ಕನಕಿ ಹಾಕಿ, ಕೈ ಮೈ ಜಾಡಿಸುತ್ತ ದನದ ಮನೆಯಿಂದ ಹೊರಬಂದ. ಗೌಡರು ದನದ ಮನೆಮುಂದಿರುವ ಕಟ್ಟೆಯ ಮೇಲೆ ಕುಂತು ಭರಮ್ಯಾನನ್ನು ನೋಡಿದರು. ಭರಮ್ಯಾ ಸಣ್ಣ ಮುಗ್ದಮಗುವಿನಂತೆ ಕಂಡ. ಅವರ ಕರಳು ಚುರಕ್ ಅಂದಿತು.

ನಂತರ ಸದಾನಂದಗೌಡರು ಹೇಳಿದ ಮಾತು ಕೇಳಿ, ಭರಮ್ಯಾ ಚಿಕ್ಕಮಕ್ಕಳಂತೆ ದನಿ ತಗೆದು ಬಿಕ್ಕಿಬಿಕ್ಕಿ ಅಳತೊಡಗಿದ, ಗೌಡರು ಮಕ್ಕಳನ್ನು ರಮೀಸಿದಂತೆ ಭರಮ್ಯಾನನ್ನು ರಮಿಸುತ್ತಿದ್ದರು. ಹೆಂಡತಿ ಓಡಿ ಹೋದ್ಳು, ತಂದೆ ತಾಯಿಗಳು ಇಲ್ಲಾ, ನನಗ ಇನ್ನ ಮ್ಯಾಲ ಯಾರುಉ..ಉ..ಉ..ಉ.. ಎಂದು ಉಸ್ವರ ತಗೆದು ಮತ್ತೆ ಅಳತೊಡಗಿದ ಭರಮ್ಯಾ. ನಾವೆಲ್ಲಾ ನಿನ್ನ ಕಣ್ಣಾಗ ಕಾಣವಲ್ಲಿವೇನ? ಯಾರು ಇಲ್ಲ ಅಂತ ಯಾಕ ತಿಳಿತಿ ಎಂದು ಸದಾನಂದಗೌಡರು ಅಳುತ್ತಿದ್ದ ಭರಮ್ಯಾನ ಹೆಗಲಮೇಲೆ ಕೈಹಾಕಿ ಸಾಂತ್ವನ ಹೇಳುತ್ತಿದ್ದರು.

                         ******

ಈಗ ಭರಮ್ಯಾನ ಮನದಲ್ಲಿ ಶ್ಯಾರಿ ಬರೀ ನೆನಪಾಗಿ ಉಳಿದಿದ್ದಾಳೆ. ತನ್ನ ಬದುಕಲ್ಲಿ ನೆಡೆದ ಕತೆಯನ್ನು ಆ ರಾತ್ರಿ ಮತ್ತೊಮ್ಮಿ ಭರಮ್ಯಾ ಮೆಲಕು ಹಾಕುವ ಹೊತ್ತಿಗೆ ಮೂಡಣದಲ್ಲಿ ಬೆಳ್ಳಿ ಚುಕ್ಕಿ ಮೂಡಿತ್ತು.ನಾಕು ಚುಕ್ಕಿಗಳು ಸಮೀಪದಲ್ಲಿ ಕಂಡಂತಾಗಿ ಅವೇ ಅವ್ವ -ಅಪ್ಪಂದಿರ ಕಣ್ಣುಗಳಿರಬೇಕೆಂದು ಅವನ್ನೆ ನೋಡುತ್ತ ಮಲಗಿದಾಗ ಆಗಲೂ ಅವನತ್ತ ನಿದ್ರಾದೇವಿ ಸುಳಿಯಲಿಲ್ಲ.. ಸತ್ತ ಅವ್ವ ಅಪ್ಪಂದಿರೇ ನೆನಪಾದರು.

ಅಂದು ಧೋ ಎಂದು ಸುರಿವ ಮಳೆಗೆ ಇಡೀ ದೇವನಾಳ ಊರೆ ತತ್ತರಿಸಿ ಹೋಗಿತ್ತು. ಕೊಟ್ಟಿಗೆಯಲ್ಲಿ ಕಟ್ಟಿದ ಹಸಿದ ಎಮ್ಮಿ ಕರುವಿನಂತೆ ಮುಗಿಲು ವಾಂವಾ ವಾಂವಾ ಎಂದು ಒದರುತ್ತಲಿತ್ತು. ಇಳಿಹೊತ್ತಿಗೆ ಮೋಡಗಳು ಮುಗಿಲ ತುಂಬ ಆವರಿಸಿ ಇಡೀ ಭೂಮಿಗೆ ಕಪ್ಪು ಬಟ್ಟೆ ಹೊದಸಿದಂತೆ ತೋರತೊಡಗಿತು.

ಇಡೀ ಊರ ಕಾಗಾರದನಗಳನ್ನು ಹೊಡೆದುಕೊಂಡು ಹಿರೇಗುಡ್ಡಕ್ಕೆ ಹೋಗಿದ್ದ ಭರಮ್ಯಾನ ತಂದೆ ರಾಮಣ್ಣನಿಗೂ,ತಾಯಿ ಕಮಲವ್ವಳಿಗೂ ಮುಗಿಲಲ್ಲಿ ಮುಕ್ಕುರಗೊಂಡ ಕಪ್ಪು ಮೊಡಗಳನ್ನು ಕಂಡು ಅಂದು ತುಂಬಾ ವಿಚಲಿತರಾದರು. ಸಂಜಿ ಮಳಿ ಬಿಡುವಂಗ ಕಾಣುದಿಲ್ಲಅಂದ ರಾಮಣ್ಣ. ಹೌದು,  ದನಗಳನ್ನು ಎಬ್ಬಿಸಿಕೊಂಡು ಊರ ಹಾದಿ ಹಿಡದ್ರಾತು ನಡಿ ಎಂದು ಕಮಲಿ ಹೇಳಿದ್ದೆ ತಡಾ ದನಗಳಿಗೆ  ಹುಸ್ಯಾ ಹುಸ್ಯಾ ಅನ್ನತೊಡಗಿದ. ತಂಪತ್ತು ಇರುವುದರಿಂದ ದನಗಳು ತಮ್ಮಪಾಡಿಗೆ ತಾವುಗಬ್ ಗಬ್ ಮೇವು ಮುಕ್ಕುತ್ತಿದ್ದವು. ರಾಮಣ್ಣನ ದನಿ ಕೇಳಿ ಇಂವೇನ್ಲೇ ಮೇಯಿವಾಗ್ಯಾಕ ಜಿಂವಾ ತಿಂತಾನು ಅನ್ನುವ ಹಾಗೆ ದನಗಳು ಅವನನ್ನು ನೋಡುತ್ತಿದ್ದವು. ಆರು ವರುಷದ ಭರಮ್ಯಾ ಕಂಟಿಯಲ್ಲಿ ಕೈ ಹಾಕಿ ಕಾರಿಕಾಯಿ, ಕವಳಿ ಹಣ್ಣು ಹರೆದುಕೊಂಡು ತನ್ನ ಚೆಡ್ಡಿ ಕಿಸೆಗೆ ಇಳಿಸಿಕೊಳ್ಳುತ್ತಿದ್ದ. ಮದ್ಯಾನದಲ್ಲಿ ಸಿಕ್ಕಿದ್ದ ಬೊರಂಗಿಯನ್ನು ಕಡ್ಡಿ ಪಟ್ಟನದಲ್ಲಿ ಹಾಕಿ ಮುಚ್ಚಿಟ್ಟಿದ್ದ. ಒಮ್ಮಿಂದೊಮ್ಮಲೆ ಮುಗಿಲ ತುಂಬ ಮೊಡಗಳು ತುಂಬಿ ಬಂದಾಗ, ಇನ್ನ ಮ್ಯಾಲ ಅವ್ವ-ಅಪ್ಪ ದನಾ ಹೊಡ್ಕೊಂಡು ಊರಿಗೆ ಹೊಕ್ಕಾರ, ನಾ ಈಗ ಇನ್ನಷ್ಟ ಕಾರಿಕಾಯಿ ಹರಕೊಬೇಕೆಂದು ಕಂಟಿಯಲ್ಲಿ ಕೈ ಹಾಕಿ ತಡಕಾಡುತ್ತಿದ್ದ.

ಲೇ ಭರಮ್ಯಾ ಮಳಿಬರುವಂಗಾತು ಮನಿಗೆ ಹೋಗೂನು ಬಾ ಎಂದು ಕಮಲವ್ವ ಕೂಗಿದಳು. ಅವರವ್ವನ ದನಿ ಕೇಳಿ ಬಂದೆ ಬೇ…ಯವ್ವಾ.. ಇನ್ನ ಒಂದೀಸ ಹರಕೊತೀನಿ ತಡಿತಡಿ ಅನ್ನುತ್ತಿದ್ದ. ನಾಳೆ ಹರಕೊಳ್ಳುವಂತೆ ಬಾ, ಆ ಹಾಳಾದ ಕಾರಿಕಾಯಿ, ಗುಡ್ಡಾ ಬಿಟ್ಟ ಎಲ್ಲಿ ಓಡಿ ಹೊಕ್ಕಾವ?ಎಂದು ಮತ್ತೊಮ್ಮೆ ಕೂಗಿದಳು. ಭರಮ್ಯಾ ತನ್ನ ಎರಡು ಚ್ವನ್ನದ ಕಿಸೆ ತುಂಬ ಕಾರಿ ಹಣ್ಣು ತುಂಬಿಕೊಂಡಿದ್ದ. ಕಿಸೆ ಉಬ್ಬುಕೊಂಡಿದ್ದವು. ದುಡು ದುಡು ಓಡಿಬಂದು ಅವರವ್ವನ ಕೈ ಹಿಡಕೊಂಡ. ರಾಮಣ್ಣ ಎಲ್ಲ ದನಗಳಿಗೆ ಕಲ್ಲು ಬೀಸಿ ಇನ್ನ ಮೇವೂದ ಸಾಕು, ಮನಿ ಕಡೆ ನಡಿರೀ ಅನ್ನುವ ಹಾಗೆ ಗಂಟಲ ಹರಿದುಕೊಳ್ಳುತ್ತಿದ್ದ.ಕಲ್ಲು ಬೀಸುತ್ತಿದ್ದ. ಎಲ್ಲ ದನಗಳು ಒಂದರ ಮೋತಿ ಒಂದು ನೋಡಿ ಕೊಳ್ಳುತ್ತ, ಒಂದರ ಮೈಗೆ ಒಂದರ ಮೈ ತಾಗಿಸುತ್ತ, ತಿಕ್ಕುತ್ತ ಹಿರೇಗುಡ್ಡ ಇಳಿದು, ಊರ ಕಡೆ ಮುಕ ಮಾಡಿದವು.

ಕೆಲವು ದನಗಳಿಗೆ ತಮ್ಮ ಮಕ್ಕಳ ನೆನಪಾಗಿ ತಮ್ಮ ಹೆಜ್ಜೆಗಳನ್ನು ತೀವ್ರಗೊಳಿಸಿದವು. ಮಕ್ಕಳು ಮರಿಗಳಿಲ್ಲದ ದನಗಳು ಅಲ್ಲಿ ಹೋಗಿ ಏನ್ ಮಾಡುದೈತಿ, ನಮ್ಮ ಯಜಮಾನಪ್ಪ ಕಟ್ಟುವ ಹಗ್ಗಕ್ಕೆ ಕೊರಳ ಕೊಡಬೇಕಷ್ಟೆ ಎಂದು ಮಂದ ಹೆಜ್ಜೆ ತುಳಿಯುತ್ತಿದ್ದವು. ಆದರೆ ರಾಮಣ್ಣ ಮುಗಿಲಲ್ಲಿ ತುಂಬಿಕೊಂಡ ಕರಿ ಮೋಡಗಳ ದೆಸೆಯಿಂದ, ಹಿಂದಿದ್ದ ದನಗಳ ಮೈ ಮೇಲೆ ಅವರಿ ಜಬಕಿಯಿಂದ ಚಪ್ ಚಪ್ ಇಕ್ಕರಿಸುತ್ತಿದ್ದ. ಏಟು ತಿಂದ ದನಗಳು ಮುಂದಿದ್ದ ದನಗಳನ್ನು ತಮ್ಮ ಕೊಂಬಿನಿಂದ ತಿವಿದು ಲಗು ಲಗು ನಡೀರ.. .. ಈ ಭಾಡ್ಯಾ ನಮ್ಮನ ಕುಂಡಿ ಕುಂಡಿ ಬಡಿಯಾಕತ್ಯಾನು ಅನ್ನುತ್ತ ಒತ್ತುತ್ತಿದ್ದವು.

ಥಟ್..! ಎಂದು ಒಂದು ರೂಪಾಯಿ ಗಾತ್ರದ ಮಳೆ ಹನಿಯೊಂದು ಮೊಡದಿಂದ ಕಳಚಿ ರಾಮಣ್ಣನ ತುದಿಮೂಗಿನ ಮೇಲೆ ಬಿದ್ದು, ಜರ್‌ನೆ ಜರಿದು ನೆಲವನ್ನಪ್ಪಿತು. ಇಂಥಾ ಮೋಡಾ ನಾ ಜೀವನದಾಗ ಕಂಡಿರಲಿಲ್ಲ, ಇದೇನ ಇಡೀ ಊರ ತೇಲಿಕೊಂಡು ಹೋಗುವಂಗ ಬಂದೈತೆಲ್ಲ ಭರಮ್ಯಾನ ಮುಂಗೈ ಹಿಡಿದುಕೊಂಡು  ಮುಗಿಲುಕಡೆಗೊಮ್ಮೆ ನೆಲದಕಡೆಗೊಮ್ಮೆ ನೋಡುತ್ತ ಗಂಡನ ಹಿಂದಿಂದೆ ನಡೆಯುತ್ತಿದ್ದಳು ಕಮಲವ್ವ. ಸುಳುಸುಳು ತಂಪಾದ ಗಾಳಿ ಬೀಸತೊಡಗಿತು. ರಾಮಣ್ಣನ ಮನದಲ್ಲಿ ಮಳಿ ಬರುದು ಖಾತ್ರಿ ಮೂಡಿತು.ಇಂದು ತೊಸ್ಗೊಂಡ ಪಜಿತ್ಯಾಗಿ ಹೋಗುದು ಗ್ಯಾರಂಟಿ ಅಂತ ಅವನ ಮನಸು ಹೇಳುತ್ತಿತ್ತು. ಮಳೆಯಲ್ಲಿ ತೋಯ್ಸಿಕೊಳ್ಳೋದು, ಬಿಸಲಲ್ಲಿ ತೇಕಿಡೊದು, ಚಳಿಯಲ್ಲಿ ನಡಗೊದು ಅವನಿಗೆ ಹೊಸತನವೇನೂ ಅನಿಸಲಿಲ್ಲ. ಆದರೆ ಎಂದಿಗಿಂತಲೂ ಇವತ್ತು ಭಯಂಕರವಾಗಿ ಮುಗಿಲಲ್ಲಿ ಮುಕ್ಕರುಗೊಂಡ ಮೋಡಗಳ ಅಬ್ಬರಕ್ಕೆ ಅವನಲ್ಲಿ ಸಣ್ಣಗೆ ನಡುಕ ಹುಟ್ಟಿತ್ತು.

ಹಿರೆಗುಡ್ಡದಿಂದ ದೇವನಾಳ ಊರು ಬರೊಬ್ಬರಿ ನಾಕುವರೆ ಕಿಲೋ ಮೀಟರ ದೂರದಲ್ಲಿತ್ತು. ಅಲ್ಲಿಂದ ದನಗಳೊಂದಿಗೆ ರಾಮಣ್ಣ ಊರು ಸೇರಬೇಕೆಂದರೆ ದೀಡ ತಾಸಿಗಿಂತಲೂ ಹೆಚ್ಚು ಸಮಯ ಬೇಕಿತ್ತು. ದನಗಳು ಮುಂದೆ ಮುಂದೆ, ಅವುಗಳ ಹಿಂದೆ ರಾಮಣ್ಣ, ರಾಮಣ್ಣನ ಹಿಂದೆ ಕಮಲವ್ವ, ಕಮಲವ್ವನ ತುದಿಗೈ ಹಿಡಿದು ಭರಿಮ್ಯಾ ಸಣ್ಣ ಹೆಜ್ಜೆ ಊರುತ್ತ ಬರುತ್ತಿದ್ದ. ಆಗೊಂದು ಧಡಲ್ ಎಂದು  ಸಿಡಿಲು ಮುಗಿಲಿಗೆ ಯಾರೋ ಬಾಂಬು ಹಾಕಿದಂತೆ ಸಿಡಿಯಿತು. ಭರಮ್ಯಾ ಅದರ ಸಪ್ಪಳಕ್ಕೆ ಚಿಟ್ಟನೇ ಚೀರಿ ನಡುಗಿದ. ಹುಡಗನ ತೆಲಿಮ್ಯಾಲ ತಟ್ಟ ಹೊದಸು,ನೀನು ಹೊತಗೊ ಎಂದು ರಾಮಣ್ಣ ದನಹೊಡೆಯುತ್ತ ಕೂಗಿ ಹೇಳಿದ. ಕಮಲವ್ವ ರಾಮಣ್ಣನಿಗಿಂತ ಹತ್ತು ಮಾರು ದೂರ ಉಳಿದಳು. ಮಳೆ ಧೋ ಎಂದು ಸುರಿಯತೊಡಗಿತು.

ಒಂದೇ ಸಮನೆ ಮುಗಿಲು ಹಸಿದ ಸಿಂಹದಂತೆ ಘೀಳಿಡುತ್ತಿತ್ತು, ಗಾಳಿ ಬರ್ ಎಂದು ಬೀಸುತ್ತಿತ್ತು. ಗಿಡಮರಗಳು ಸಲಾಮ ಹೊಡೆಯುವಂತೆ ತಮ್ಮೆಲ್ಲ ಶರೀರ ಬಾಗಿಸಿ ಭೂಮಾತೆಯ ಪಾದಕಮಲಕ್ಕೆ ತಮ್ಮ ಹಣೆ ಒತ್ತುತ್ತಿದ್ದವು. ಭರಮ್ಯಾ ರೊಂಯಗುಡುತ್ತಿದ್ದ. ಕಮಲವ್ವ ಅವನನ್ನು ರಮಿಸುತ್ತ ನಿಧಾನ ನಡೆಯುತ್ತಿದ್ದಳು. ರಿಪ್ಪ ರಿಪ್ಪ ಸುರಿಯುವ ಮಳೆಯಲ್ಲಿ ಆನೆಕಲ್ಲುಗಳು ಉದರತೊಡಗಿದವು. ಕಮಲಿಯ ತೆಲಿಗೊಂದು ಪಟ್ ಎಂದು ಆನೆ ಕಲ್ಲು ಬಿದ್ದಾಗ ಅಯ್ಯೋ ಸತ್ನೋ ಯಪ್ಪಾ ಎಂದು ಅಲ್ಲೇ ಖುಷಿದಳು, ಭರಮ್ಯಾನಿಗು ಸೊಡ್ಡ ಪಡ್ಡ ಎಂದು ಕೈ, ಮೈ ಮೇಲೆ ಬಿದ್ದಾಗ ಕಿರಚಿ ಕಿರಚಿ ಅಳುತ್ತಿದ್ದ. ರಾಮಣ್ಣ ಆನೆಕಲ್ಲಿಗೆ ತತ್ತರಿಸಿದ. ದನಗಳೆಲ್ಲವು ಆನೆ ಕಲ್ಲಿನ ಹೊಡೆತಕ್ಕೆ ದಿಕ್ಕಾಪಾಲಾಗಿ ತಮಗ್ಯಾರೋ ಕಲ್ಲು ಎಸೆಯುತ್ತಿದ್ದಾರೆಂದು ಅರೆತು ಎಲ್ಲೆಂದರಲ್ಲಿ ಓಡತೊಡಗಿದವು. ರಾಮಣ್ಣನಿಗೆ ದನಗಳ ನಿಯಂತ್ರಣ ತಪ್ಪಿತು. ಹಿಂತಿರುಗಿ ನೋಡಿದ ಹೆಂಡತಿ ಮತ್ತು ಮಗ ಕಾಣಲಿಲ್ಲ. ದನಗಳ ಚಿಂತೆ ಬಿಟ್ಟು ಹೆಂಡತಿ ಮಕ್ಕಳತ್ತ ಹಿಂದುರುಗಿ ಓಡತೊಡಗಿದ. ಕಮಲವ್ವ ತುಳಸಿಗೇರಿ ಶಿವಪ್ಪನ ದೊಡ್ಡ ಬೇವಿನ ಗಿಡದ ಕೆಳಗೆ ಗದಗದ ನಡಗುತ್ತ ಮುದಡಿ ನಿಂತಿದ್ದಳು, ಭರಮ್ಯಾ ಹಾಗೆ ಅಳುತ್ತಿದ್ದ. ಅವರನ್ನು ನೋಡಿದ ರಾಮಣ್ಣನಿಗೆ ಮನದಲ್ಲಿ ಮೂಡಿದ ಹಳಹಳಿ ಕಡಿಮೆಯಾಯಿತು.

ದನಗೋಳ ಎಲ್ಲಿ ಹ್ವಾದು ಎಂದು ಕಮಲಿ ಕೇಳಿದಳು. ಅವೆಲ್ಲಿ ಹೊಕ್ಕಾವ, ಆನೆಕಲ್ಲಿನ ಹೊಡತಕ್ಕೆ ಕಂಗಾಲಾಗಿ ಎಲ್ಲಂದರಲ್ಲಿ ಜಿಗಿತ ಕೊಟ್ಟಾವು, ಎಷ್ಟ ಮನಿ ಕಾಣತಾವೋ, ಎಷ್ಟ ಭೂಮಿ ಸೇರ್ತಾವೋ ದೇವರೆ ಬಲ್ಲ, ಊರಿನಿವರಿಂದ ನನಗೆ ಮಂಗಳಾರತಿ ತಪ್ಪಿದ್ದಲ್ಲ ತಪ್ಪನೆ ತೊಯ್ದ ತಲೆ ಗೂದಲನ್ನು ಜಾಡಿಸಿದ. ಸ್ವಲ್ಪ ಹೊತ್ತಿನ ನಂತರ ಆನೆಕಲ್ಲು ಬೀಳುವುದು ನಿಂತವು. ಮಳೆ ಮಾತ್ರ ಹಾಗೇ ಧೋ ಎನ್ನುತ್ತಿತ್ತು. ಕೋಡಿ ಹಳ್ಳ ಬಿದ್ದಗಿದ್ದೀತು ಲಗೂನ ಹೋಗೂನು ನಡಿ, ಹೊತ್ತ ಬ್ಯಾರೆ ಮುನಗಿದ್ಹಂಗಾತು ರಾಮಣ್ಣ ಚಕ್ಕನೆ ಭರಮ್ಯಾನನ್ನು ಎತ್ತಿಕೊಂಡ. ಸುರಿಯುವ ಮಳೆಯಲ್ಲಿ ಒಂದೊಂದೆ ಹೆಜ್ಜೆ ಬೆಳಸಿದರು.

ಅಗಸರ ದಿಬ್ಬದಾಟಿ ಕೆಳಗೆ ಇಳಿಯುತ್ತಿದ್ದರು. ಕೋಡಿಹಳ್ಳ ಬಿದ್ದದ್ದು ಕಂಡಿತು. ಲಗೂನ ಬಾ ಇನ್ನ ಕೋಡಿ ಅಷ್ಟೊಂದ ಅವಸರಿಲ್ಲ ರಾಮಣ್ಣ ಅವಸರ ಮಾಡಿದ. ಕಮಲವ್ವ ಕೋಡಿ ಬಾಳ ಕಸೂ ಇರ್ತೈತಿ, ಹೋಗುದ ಬ್ಯಾಡ, ಕಸು ಕಡಿಮಿ ಆದ ಮ್ಯಾಲ ಹೋಗೂನು ಎಂದು ಕಮಲಿ ಮರೆಬ್ಯಾಡ ಅಂದರೂ ರಾಮಣ್ಣ ಕೇಳಲಿಲ್ಲ.  ಕತ್ತಲು ಆವರಿಸಿತ್ತು. ಕೋಡಿಯ ರಭಸ ರಾಮಣ್ಣನಿಗೆ ಗೊತ್ತಾಗಲಿಲ್ಲ. ಕಮಲಿಯನ್ನು ಗಟ್ಟಿಯಾಗಿ ಮುಂಗೈ ಹಿಡಿದುಕೊಂಡು, ಭರಮ್ಯಾನನ್ನು ಹೆಗಲ ಮೇಲೆ ಹೊತ್ತುಕೊಂಡು ಕೋಡಿಯಲ್ಲಿ ಇಳಿದ. ನಾಕು ಹೆಜ್ಜೆ ಇಡುವರೆಗಷ್ಟೆ ಸುಮ್ಮನಿದ್ದ ಕೋಡಿ ನಂತರ ಸಿಟ್ಟಿಗೆದ್ದ ನಾಗರ ಹಾವಿನಂತೆ ಕೆರಳಿತು. ಅಯ್ಯೋ ಅಯ್ಯೋ.. ಅನ್ನುವಷ್ಟರಲ್ಲಿ ಕಮಲಿ ಕೋಡಿ ಪಾಲಾದಳು. ಕಮಲಿ.. ಕಮಲಿ.. ಎಂದು ರಾಮಣ್ಣ ಕಿರಚಿದ. ಕ್ಷಣ ಹೊತ್ತಿನಿಂದ ಕೈಹಿಡಿದುಕೊಂಡ ಕಮಲಿ ಕಣ್ಮರೆಯಾದಳೆಂದು ಬಿಕ್ಕತೊಡಗಿದ. ರಾಮಣ್ಣನ ಕಾಲುಗಳು ನೀರಿನ ಕಸುವಿಗೆ ಮೇಲೆ ಹಾರ ತೊಡಗಿದವೂ ಖಂಡಿತ ಕೋಡಿ ನನ್ನನ್ನು ಬಿಡುವುದಿಲ್ಲವೆಂದು ತಿಳಿದು, ನಾ ಸತ್ತರು ಸರಿ, ಮಗನಾದರು ಉಳಿಯಲಿ ಎಂದು  ಹೆಗಲ ಮೇಲೆ ಕುಳಿತು ಬೋರಾಡಿ ಅಳುತ್ತಿದ್ದ ಮಗನನ್ನು ತನ್ನ ಕಸುವಿನಿಂದ ಹೊರ ಚಿಮ್ಮಿದ. ಅವ್ವ ಹೋದದ್ದಕೋ, ಕೋಡಿ ರಭಸಕ್ಕೋ, ಸುರಿಯುವ ಮಳೆಯ ಕಾಟಕ್ಕೋ, ಅವರಪ್ಪ ಎಸೆದ ಏಟಿಗೋ ಭರಮ್ಯಾ ಬೊರ್ಯಾಡಿದ, ಬಿಕ್ಕಿದ, ಯಪ್ಪೋ ಯವ್ವೋ.. ಎಂದು ಹಲುಬಿದ. ಅಷ್ಟೊತ್ತಿಗೆ ರಾಮಣ್ಣನನ್ನು ಕೋಡಿ ಗುಳಮ್ ಅನಿಸಿತ್ತು.ಅವ್ವಾ.. ಅಪ್ಪಾ.. ಎಲ್ಲಿ ಹ್ವಾದ್ರಿ ಬರ್ರಿ.. ನನಗ ಅಂಜಿಕ ಬರಾಕತ್ತೈತಿ ಎಂದು ಅತ್ತು ಅತ್ತು ಭರಮ್ಯಾನ ದನಿ ಬಿದ್ದಿತ್ತು. ಅಲ್ಲಿಯೇ ಖುಷಿದ. ಆ ರಾತ್ರಿ ಅಲ್ಲಿಯೇ ಮೂರ್ಛೆಹೋದ.

 ರಾತ್ರಿ ಮಳೆ ನಿಂತಿತು. ಇಡೀ ದೇವನಾಳೆ ನೀರು ನೀರಾಯಿತು. ಗುಡ್ಡಕ್ಕೆ ಹೋದ ದನಗಳು  ಹೆಂಗೋ ಮನೆ ಸೇರಿದ್ದವು. ನಾಕಾರು ದನಗಳು ಎಲ್ಲೋ ಪರಾರಿಯಾಗಿದ್ದವು. ಮರುದಿನ ಮುಂಜಾನೆ ಮುಗಿಲು ತೆಲೆ ಮೇಲೆ ನೀರು ಹಾಕಿಕೊಂಡು ಎರದುಕೊಂಡ ಯುವತಿಯಂತೆ ಕಾಣುತ್ತಿತ್ತು. ಸೂರ್ಯ ಪಳಪಳ ಮೋತಿ ತೊಳೆದಂತೆ ಕಾಣುತ್ತಿದ್ದ. ಮೂಲಿಮನಿ ಮಲ್ಲಪ್ಪ ತಮ್ಮ ತೋಟದಿಂದ ಮನೆಯತ್ತ ಬರುವಾಗ ಸತ್ತ ಹೆಣವಾಗಿ,  ಬಾಳಿಗಿಡದ ಬಡ್ಡಿಯೊಳಗೆ ಸಿಕ್ಕಾಕಿಕೊಂಡ ರಾಮಣ್ಣನ್ನು ನೋಡಿ ಗಾಬರಿಯಾಗಿ, ಊರ ಜನರಿಗೆ ತೇಕುತ್ತ, ಏದುಸಿರು ಬಿಡುತ್ತ ಬಂದು ಸುದ್ದಿ ಮುಟ್ಟಿಸಿದ.ಆಗ ಇಡೀ ದೇವನಾಳವೇ ಮೂಲಿಮನಿ ಮಲ್ಲಪ್ಪನ ತೋಟದಲ್ಲಿತ್ತು. ಕಮಲಿಯ ದೇಹ ಹುಡಕಾಡಿ ಹುಡಕಾಡಿ ಊರಮಂದಿ ಸುಸ್ತಾದರು, ಅವಳ ದೇಹ ಪತ್ತೆ ಹತ್ತಲಿಲ್ಲ.  ಆರು ವರುಷದ ಭರಮ್ಯಾ ಕೋಡಿ ಹಳ್ಳದ ದಂಡಿ ಬಿದ್ದದ್ದು ಕಂಡು ಊರವರು ಮರಮರ ಮರುಗಿದರು.  ಊರ ಹಿರಿಯಾ ಹನುಮಂತಪ್ಪಗೌಡ ಹುಡುಗನ ಆವಸ್ಥೆ, ಅವನ ಕೈಕಾಲಿಗಾದ ಗಾಯ ನೋಡಿ ಮಮ್ಮಲ ಮರುಗಿದ. ಕೂಡಲೆ ಅವನನ್ನು ವೈದ್ಯರ ಹತ್ತಿರ ಕರಿದುಕೊಂಡು ಹೋಗುವ ವ್ಯವಸ್ಥೆ ಮಾಡಿದ. ಸಂಧಿಮನಿ ಯಲ್ಲಪ್ಪ ಹುಡಗನನ್ನು ಕರೆದುಕೊಂಡು ಕಲಾದಗಿಗೆ ಹೋದ.

ಊರ ದೈವವೇ ಕೂಡಿ ದನಾಕಾಯುವ ರಾಮಣ್ಣನ್ನು ಮಣ್ಣು ಮಾಡಿದರು. ಪಾಪ..! ಕಮಲವ್ವನ ಹೆಣ ಸಿಗದಿದ್ದಕ್ಕೆ ಹಳಹಳಿಸಿದರು. ಪರದೇಸಿ ಹುಡಗನನ್ನು ಕಂಡು ಇಡೀ ಊರೆ ಮರುಗಿತು. ಭರಮ್ಯಾನನ್ನು  ಹನಮಂತಪ್ಪಗೌಡರು ತಮ್ಮ ಮನೆಗೆ ಕರೆದುಕೊಂಡು ಹೋಗಿ ಆಸರೆ ನೀಡಿದರು. ಅವರು ಸಾಯುವರೆಗೂ ಭರಮ್ಯಾನನ್ನು ಮಗನಂತೆ ನೋಡಿಕೊಂಡರು.

ಅಂದು ಚಾಪಿ ಮೇಲೆ ಮಲಗಿದ ಭರಮ್ಯಾನಿಗೆ, ಮೊದಲು ಹೆಂಡತಿ, ನಂತರ ತಂದೆ-ತಾಯಿ ಎಲ್ಲರೂ ಒಬ್ಬರಾದಮೇಲೊಬ್ಬರು ಆ ರಾತ್ರಿ ನೆನಪಾಗಿ ಎದೆ ನೋಯಿಸಿದರು. ಭರಮ್ಯಾನ ಕಣ್ಣು ಮತ್ತೊಮ್ಮೆ ತೊಯ್ದವು.  ಆಗ ಚುಮುಚುಮು ಹೊತ್ತೇರಿತ್ತು. ಸೂರ್ಯ ಮಾರುದ್ದು ದೂರ ಬಂದಿದ್ದ. ವಾರದ ಹಿಂದೆಯಷ್ಟೆ ತಾಯಿ ಕಳಿದುಕೊಂಡ ತಬ್ಬಲಿ ಹಸುಗರು ಒಂದು ಹಸುವಿನಿಂದವೋ.. ನನ್ನ ಹಡೆದವ್ವ ಇಲ್ಲವೆಂದೋ ಒಂದೇ ಸಮನೆ  ಅಂಬಾ..ಅಂಬಾ.. ಎಂದು ಬೋರಿಟ್ಟಿತು. ಭರಮ್ಯಾ  ಚಕ್ಕನೆ ಅದರತ್ತ ಹೋಗಿ, ಅದರ ಮೈ-ಸವರುತ್ತ, ನಿಮ್ಮವ್ವ ಸತ್ತರೂ ನಾಯಿಲ್ಲನ ನಿನ್ನ ಪಾಲಿಗೆ ಸುಮ್ನಿರು ಅಂತ ಆ ಸಣ್ಣ ಕರುವಿಗೆ ಮುತ್ತು ಕೊಡುತ್ತ, ರಮಿಸುತ್ತ ಕಣ್ಣೀರಿಡುತ್ತಿದ್ದ.