- ವಿನಾಯಕರ ಪ್ರತಿಜ್ಞೆ ಎಂಬ ಕವಿತೆ - ಆಗಸ್ಟ್ 9, 2021
- ಒಲವಿಲ್ಲದ ಪೂಜೆ - ಮೇ 14, 2021
- ಪರಿವಾರ ಪ್ರಿಯನಲ್ವೆ ಇಕ್ಷ್ವಾಕು ಸಂಜಾತ? - ಏಪ್ರಿಲ್ 20, 2021
‘ಇಬ್ಬರೂ ಏಕಕಾಲದಲ್ಲಿ ತಿರುಗಿ ಬಿದ್ದರು. ನೀನು ನಾಟಕ ನೋಡೂದು ಕಡಿಮೆ ಮಾಡು, ನಿನ್ನ ತಲಿಯೊಳಗೆ ಫೊಬಿಯಾ ಅಂಟಿಕೊಂಡೇತಿ. ನಿನ್ನ ಮನಸ್ಸು ಏನೇನೋ ಕಲ್ಪನೆ ಮಾಡಿಕೊಳ್ಳಾಕ ಹತ್ತೇತಿ ನಿನಗೆ ವಾಸ್ತವ ಮತ್ತು ಕನಸಿನ ನಡುವೆ ಇರುವ ಅಂತರವನ್ನು ಪ್ರತ್ಯೇಕಿಸುವ ಶಕ್ತಿಯ ನಾಶವಾಗಿದೆ. ಮೊದಲು ಡಿಮಾನ್ಸಿಗೆ ಹೋಗಿ ಬಾ”
ಶ್ರೀಮತಿ ಪ್ರಜ್ಞಾ ಮತ್ತಿಹಳ್ಳಿ ಅವರ ಪ್ರಸ್ತುತ ಬರಹದಿಂದ….
ಮೊನ್ನೆ ರಂಗಭೂಮಿ ದಿನಾಚರಣೆಯ ನಿಮಿತ್ತ ಒಂದು ವಾರ ಮೊದಲಿನಿಂದಲೇ ನಮ್ಮೂರಲ್ಲಿ ನಾಟಕಗಳು ಶುರುವಾಗಿದ್ದವು. ಬೇರೆ ಬೇರೆ ರಂಗತಂಡಗಳು ಬೇರೆ ಬೇರೆ ವೇದಿಕೆಗಳಲ್ಲಿ ಪೈಪೋಟಿಯಿಂದ ನಾಟಕ ಮಾಡಿದ್ದೇ ಮಾಡಿದ್ದು. ಮೊದಲೇ ಸಣ್ಣ ಊರು. ಬಹುತೇಕ ಸಂಘಟಕರೆಲ್ಲರೂ ಪರಿಚಿತರು. ಫೋನು ಮಾಡಿ ಬರಲೇ ಬೇಕು ಅಂದಾಗ ಹೋಗದಿರಲು ಹೇಗೆ ಸಾಧ್ಯ? ಹೀಗಾಗಿ ಹಗಲು-ರಾತ್ರಿ ನಾಟಕ ನೋಡಿ ನೋಡಿ ಒಂಥರಾ ಅಜೀರ್ಣವಾದಂತಾಯಿತು. ತಿಂದು ತಿಂದು ಬರುವ ಅಜೀರ್ಣವು ಹೊಟ್ಟೆಯ ಸಮಸ್ಯೆಯಾದರೆ ಇದು ಮನಸ್ಸಿನ ಅಂದರೆ ಸಂವೇದನೆಯ ಆರೋಗ್ಯಕ್ಕೆ ಬರುವ ಸಮಸ್ಯೆಯಾಗಿರುತ್ತದೆ. ಇದಕ್ಕೆ ಉಪಶಮನಾರ್ಥವಾಗಿ ಮನೆಯ ಹಿಂದಿರುವ ಪಾರ್ಕ ಒಳಗೆ ಹೋಗಿ ಕೂತೆ. ಪಕ್ಕದಲ್ಲೇ ನಮ್ಮ ಕಾಲನಿಯ ಗುಡಿಯಿದ್ದರೂ ಮದ್ಯಾಹ್ನದ ಹೊತ್ತಾದ್ದರಿಂದ ಬೀಗ ಹಾಕಿಕೊಂಡಿತ್ತು. ಅರಳೀ ಮರದ ನೆರಳಲ್ಲಿ ಹಾಕಿದ್ದ ಬೆಂಚಿನ ಮೇಲೆ ಕೂತಿದ್ದರಿಂದ ಬಿಸಿಲಿನ ಸಮಯವಾದರೂ ಗಾಳಿ ತಂಪಾಗಿತ್ತು. ಕಣ್ಣಗಳು ಅರೆಬರೆ ಮುಚ್ಚಿಕೊಳ್ಳತೊಡಗಿದ್ದವು. ಯಾವುದೋ ಒಂದು ಆಕೃತಿ ಗುಡಿಯಿಂದ ಅರಳಿ ಗಿಡದ ಬುಡಕ್ಕೆ ನಡೆದು ಬಂದಂತಾಯಿತು.
ತೆಳ್ಳಗಿನ ಕೃಶಕಾಯ, ತಲೆಮೇಲೆ ಮುಡಿ, ಮಾಸಲು ಪಂಜೆ-ತೋಳಿಲ್ಲದ ತೆಳ್ಳನೆಯ ಮಲ್ಲಿನ ಅಂಗಿ. ಯಾವುದೋ ಅಲೆಮಾರಿ ಗಿರಿಜನರ ತಂಡದವನಿರಬೇಕು ಅಂದುಕೊಂಡೆ. ಆದರೆ ಗುಡಿಯಿಂದ ಹೇಗೆ ಬರಲು ಸಾಧ್ಯ? ಬೀಗ ಹಾಕಿದೆಯಲ್ಲ? ತಕ್ಷಣ ಅನ್ನಿಸಿತು, ನಾಟಕ ನೋಡಿದ್ದು ಹೆಚ್ಚಾಯಿತು ಅಂತ. ಗಟ್ಟಿಯಾಗಿ ಕಣ್ಣು ಮುಚ್ಚಿಕೊಂಡೆ. ಸಣ್ಣ ಧ್ವನಿಯಲ್ಲಿ ಮಂತ್ರಪಠಣ ಕೇಳತೊಡಗಿತು, ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇದಸೆ ಅರೆರೆ ಇವನು ರಾಮನ ಪಾತ್ರದಲ್ಲಿರುವ ನಟನಾ? ಎಂದು ಕಣ್ಣು ಬಿಟ್ಟೆ. ತುಂಬಾ ಚಿಂತೆಯಲ್ಲಿದ್ದ ಮುಖಮುದ್ರೆ. ಯಾವ ನಾಟಕ? ಸೀತಾ ಪರಿತ್ಯಾಗನಾ? ಎಲ್ಲಿದೆ ಶೋ? ವಿದ್ಯಾವರ್ಧಕ ಸಂಘದಲ್ಲಾ? ನನ್ನ ಪ್ರಶ್ನೆಗೆ ಆಸಾಮಿ ಗಲಿಬಿಲಿಗೊಂಡಿದ್ದ.
ನಾನು ಈ ಗುಡಿಯ ವನವಾಸಿ, ನಾಟಕದ ಮನುಷ್ಯ ಅಲ್ಲ ಎಂದ. ಓಹೋ ಇವನೊಬ್ಬ ಭಿಕ್ಷುಕರ ತಂಡದವನಿರಬೇಕು. ಎಷ್ಟು ಹೊಸ ಹೊಸ ತಂತ್ರಗಳನ್ನು ಬಳಸ್ತಾರಪ್ಪ ಈ ಭಿಕ್ಷುಕರು. ಇವರಷ್ಟು ಕ್ರಿಯೇಟಿವ್ ಥಿಂಕರ್ಸ್ ಯಾರೂ ಇಲ್ಲವೇನೋ ಅಂದುಕೊಂಡೆ. ಎಲ್ಲಿದೆ ನಿನ್ನ ತಂಡ? ಯಾವೂರಿಂದ ಬಂದೀದಿರಿ? ಎಂದು ಕೇಳಿದೆ. ನಿಜವಾಗಿಯೂ ನಾನು ಇದೇ ಗುಡಿಯ ದೇವರು. ಬೆಳಿಗ್ಗೆ ಹಾಕಿದ ನಿಮ್ಮ ಮನೆಯ ಹೂ ಕೂಡ ಇದೆ ಎನ್ನುತ್ತ ಅಂಗಿಯೊಳಗಿಂದ ಮಾಲೆ ತೆಗೆದು ತೋರಿಸಿದ. ನಮ್ಮ ಹಿತ್ತಿಲ ಮಲ್ಲಿಗೆ ಹೂವನ್ನು ತನ್ನ ಕಂಪೌಂಡಿನೊಳಗಿಂದಲೇ ಕೊಯ್ದು ಮಾಲೆ ಕಟ್ಟಿ ಹೂಬುಟ್ಟಿಯಲ್ಲಿಟ್ಟುಕೊಂಡು ದಿನಾಲೂ ಗುಡಿಗೆ ಹೋಗುವ ರಿಂದಕ್ಕನದೇ ಕಿತಾಪತಿಯಿದು ಎಂದು ಗೊತ್ತಾಯಿತು.
ನೀನು ದೇವರೆಂದರೆ ಒಡವೆ-ಪೀತಾಂಬರ ಏನೂ ಇಲ್ಲವಲ್ಲ? ಎಂದು ತನಿಖೆಗೆ ಇಳಿದೆ. ವನವಾಸಿ ರಾಮನಲ್ಲವೆ ನಾನು? ಅವತಾರಕ್ಕೆ ತಕ್ಕ ವೇಷವಲ್ಲವೆ? ಎಂದು ನನ್ನನ್ನೇ ಪ್ರಶ್ನಿಸಿ ಕಕ್ಕಾಬಿಕ್ಕಿ ಮಾಡಿದ. ಗುಡಿ ಬಿಟ್ಟು ಹೊರಗೂ ತಿರುಗಾಡಬಹುದೆ? ನನ್ನ ಪ್ರಶ್ನೆ ಅವನನ್ನು ಗಲಿಬಿಲಿಗೊಳಿಸಿತು. ಎಷ್ಟೆಂದರೂ ಸರ್ಕಾರಿ ನೌಕರಿಯಲ್ಲಿಯೇ ಮೂರು ದಶಕ ಕಳೆದಿರುವ ನನಗೆ ಈ ನಿಯಮಾವಳಿಗಳ ಹುಚ್ಚು ವಿಪರೀತ. ನಾನೊಂದು ಸಂಕಟಕ್ಕೆ ಸಿಕ್ಕಿದ್ದೇನೆ. ನೀನದಕ್ಕೆ ಪರಿಹಾರ ಕೊಡಬಹುದೆಂದು ಬಂದೆ ಎಂದ. ತಗಳ್ಳಪ್ಪ ನಾನು ದೇವರಿಗೆ ಪರಿಹಾರ ಕೊಡುವುದಂತೆ. ಇದು ನನ್ನ ಕನಸಲ್ಲದೇ ಬೇರೇನು ಆಗಲು ಸಾಧ್ಯ? ನಾಟಕ ನೋಡಿ ನೋಡಿ ಹಗಲು ಮಂಪರಿನಲ್ಲೂ ಕನಸು ಬೀಳತೊಡಗಿದೆ ಎಂದು ನಗು ಬಂತು.
ಇಲ್ಲ ಇಲ್ಲ ಇದು ನಿನ್ನ ಕನಸಲ್ಲ, ತೆಗೆದುಕೊ ಪ್ರಸಾದ ಎನ್ನುತ್ತ ನೆನೆಸಿದ ಕಡಲೆ ಕೊಟ್ಟ. ಒಹೊ ಇದು ಗಂಗಕ್ಕ ಮಂಗಳವಾರ ನೈವೇದ್ಯ ಹಿಡಿಯುವ ಕಡಲೆಯಲ್ಲವೆ ಎಂದೆ. ನನ್ನದು ಅಂತ ಏನಿರಲು ಸಾಧ್ಯ? ಭಕ್ತ ಕೊಟ್ಟಿದ್ದನ್ನೇ ಭಗವಂತ ಹಿಂತಿರುಗಿಸುತ್ತಾನೆ ಎಂದ. ನಿನ್ನ ಸಮಸ್ಯೆಯೇನು? ಎಂದೆ. ಎರಡೂ ಕಿವಿಗಳನ್ನು ತೋರಿಸುತ್ತ ಬಹಳ ನೋವಾಗುತ್ತಿದೆ ಎಂದ. ಗಟ್ಟಿಯಾಗಿ ನಕ್ಕೆ. ನಾನು ಪಿಎಚ್.ಡಿ ಡಾಕ್ಟರ್, ಪಾಪ ನೀನು ವೈದ್ಯನೆಂದು ಭಾವಿಸಿರಬೇಕು ಎಂದೆ.
ಇದು ವೈದ್ಯರಿಗೆ ತಿಳಿಯುವ ನೋವಲ್ಲ, ಹಾಡಿನಿಂದ ಉಂಟಾಗಿರುವ ಬೇನೆ ಎಂದ. ಆಶ್ಚರ್ಯವಾಯಿತು. ಯಾವ ಹಾಡು? ಎಂದು ಕೇಳಿದೆ. ನಿಮ್ಮ ರಿಂದಕ್ಕ ದಿನಾ ಗುಡಿಗೆ ಬಂದು ಹಾಡುತ್ತಾಳಲ್ಲ ಎಂದ. ಅವಳು ಎಷ್ಟೋ ವರ್ಷದಿಂದ ಹಾಡುತ್ತಿದ್ದಾಳೆ. ನಿನಗೆ ಈಗ ಬೇನೆ ಶುರುವಾಯಿತೆ? ಎಂದು ಕೇಳಿದೆ. ಇಲ್ಲ ಅವಳು ಮೊದಲಿಗೆ ಶಿವ, ಹನುಮಂತರ ಹಾಡನ್ನಷ್ಟೇ ಹಾಡುತ್ತಿದ್ದಳು. ಈಗ ಲಾಕ್ ಡೌನ್ ಆದಾಗ ಹೊಸದಾಗಿ ರಾಮಭಜನೆ ಕಲಿತುಬಿಟ್ಟಿದ್ದಾಳೆ ಎಂದ. ಹೌದು ರಿಂದಕ್ಕನ ಮಗ್ಗಲು ಮನೆಯ ಜಾನಕ್ಕನ ಸೊಸೆ ಲಾಕ್ ಡೌನ್ ಆದಾಗ ವರ್ಕ ಫ್ರಂ ಹೊಂ ಮಾಡಲು ಬಂದಳು. ಅವಳು ತನ್ನ ಲ್ಯಾಪ್ ಟಾಪ್ ತೆಗೆದು ಹೊಸ ಭಜನೆಗಳನ್ನು ಡೌನ್ ಲೊಡ್ ಮಾಡಿ ಕೊಟ್ಟಿದ್ದಾಳೆ ಅಂದೆ. ಆಕೆಗೆ ಮಾಡಲು ಬೇರೆ ಕೆಲಸವಿಲ್ಲವೆ ಎಂದ. ಅರೆ ಹಾಗೇಕೆನ್ನುತ್ತಿ? ಆಕೆ ತನ್ನತ್ತೆ ರುಚಿ ರುಚಿಯಾಗಿ ಅಡಿಗೆ ಮಾಡಿ ಹಾಕಲಿ ಮತ್ತು ಪಕ್ಕದ ಮನೆಯ ರಿಂದಕ್ಕ ತನ್ನ ಮಕ್ಕಳನ್ನು ಆಡಿಸಿಕೊಂಡಿರಲಿ ಎಂಬ ದೂರದೃಷ್ಟಿಯಿಂದ ಅವರನ್ನು ಖುಷಿಪಡಿಸುವ ಉಪಾಯವಾಗಿ ಹೀಗೆ ಮಾಡಿದ್ದಾಳೆ ಎಂದೆ.
ಅವಳಿಗೆ ಈ ಐಡಿಯಾ ಕೊಟ್ಟಿದ್ದು ಯಾರು ಎಂದ. ತಕ್ಷಣ ನನಗೆ ಇಂವ ದೇವರು ಇರಲೂಬಹುದು ಎನ್ನಿಸಿತು. ಏಕೆಂದರೆ ನಾನು ಫೋನಿನಲ್ಲಿ ಪಿಸಿಪಿಸಿ ಮಾತಾಡಿ ಐಡಿಯಾ ಕೊಟ್ಟಿದ್ದು ಯಾರಿಗೆಂದರೆ ಯಾರಿಗೂ ಗೊತ್ತಿರಲಿಲ್ಲ. ಆದರೆ ಅನೇಕ ಮಹಿಳಾಪರ ಹೋರಾಟಗಳನ್ನು ಹತ್ತಿರದಿಂದ ನೋಡಿದ್ದರಿಂದ ನಾನು ಹೆದರಲಿಲ್ಲ. ಸೆರಗು ಸಿಕ್ಕಿಸಲು ಸೀರೆ ಉಟ್ಟಿರಲಿಲ್ಲ. ಕುರ್ತಾದ ಕಾಲರನ್ನೇ ಒಮ್ಮೆ ಎಳೆದುಕೊಂಡು ಧ್ವನಿ ಏರಿಸಿದೆ. “ಹೌದಯ್ಯ ಪಾಪದ ಹೆಣ್ಣು ಹಗಲು ಹನ್ನೆರಡು ತಾಸು ದುಡಿಬೇಕು ಅಂತ ಆಫೀಸಿನವರು ಆನ್ ಲೈನಿನಲ್ಲೇ ಜೀಂವ ತಿಂತಾರೆ. ಸೊಸೆ ಲ್ಯಾಪ್ ಟಾಪಲ್ಲಿ ಆಟ ಆಡಿಕೊಂಡು ಕಾಲಹರಣ ಮಾಡ್ತಾಳೆ ಏನೂ ಕೆಲಸ ಮಾಡಲ್ಲ ಅಂತ ಅತ್ತೆ ಜೀಂವ ತಿಂತಾಳೆ. ಮಮ್ಮಿ ಗೆಟ್ಟಿಂಗ್ ಬೋರ್ ಅಂತ ಮಕ್ಕಳು ಜೀಂವಾ ತಿಂತಾವೆ, ಒಂದು ರಾವಣನ ಕಾಟಕ್ಕೇ ನಿನ್ನ ಹೆಂಡ್ತಿ ಅಷ್ಟು ಕಂಗಾಲು ಆಗಿದ್ದಳಲ್ಲ, ಈ ಥರಾ ಎಲ್ಲರೂ ಕಾಡಿದ್ರೆ ಏನು ಮಾಡ್ತಾ ಇದ್ಲು ಅಂತ ಕೇಳಿಕೊಂಡು ಬಾ” ಅಂದೆ.
“ಈಗ ಅವೆಲ್ಲ ಯಾಕೆ? ನಿಮ್ಮ ಕಾಲನಿಯವರು ಸೀತಾರಾಮ ಮಂದಿರವನ್ನೂ ಕಟ್ಟಿಲ್ಲ, ದುಡ್ಡು ಕಡಿಮೆ ಸಂಗ್ರಹವಾಗಿದೆಯಂತ ಹೇಳಿ ಕೇವಲ ರಾಮನ ವಿಗ್ರಹವಷ್ಟೇ ಪ್ರತಿಷ್ಠಾಪಿಸಿದಿರಿ. ಅದನ್ನು ತರ್ಕಬದ್ಧವಾಗಿ ಸಮರ್ಥಿಸಲಿಕ್ಕೆ ಇಂವನು ವನವಾಸಿ ರಾಮ ಸೀತೆಯನ್ನು ಕಳೆದುಕೊಂಡಿದ್ದಾನೆ ಅಂತ ನನ್ನನ್ನು ಒಂಟಿಯಾಗಿಸಿದ್ದೀರಿ. ಈಗ ಯಾವ ಸೀತೆಯೂ ನನಗೆ ನೆರವಾಗುವುದಿಲ್ಲ. ನಿನ್ನ ಐಡಿಯಾದಿಂದ ನನಗೆ ನಿತ್ಯ ಹಿಂಸೆಯಾಗುತ್ತಿದೆ. ಅದನ್ನು ತಪ್ಪಿಸು ಸಾಕು” ಎಂದ.
ವಾದದಲ್ಲಿ ಸಿಕ್ಕಿಬಿದ್ದೆ ಎನಿಸಿ ಸಿಟ್ಟು ಬಂತು. ಈಗ ಬೇರೆ ರೀತಿಯ ವರಸೆ ತೆಗೆದೆ. “ಅಲ್ಲವಯ್ಯ, ನೀನು ದೇವರು ಎನ್ನುತ್ತಿ, ನಿನಗೆ ನಿನ್ನ ಸಮಸ್ಯೆಯನ್ನು ಬಗೆಹರಿಸಲು ಬರುವುದಿಲ್ಲವೆ? ನಿನ್ನ ಕಷ್ಟವನ್ನೇ ಪರಿಹರಿಸಿಕೊಳ್ಳದಿದ್ದರೆ ಭಕ್ತರ ಕಷ್ಟವನ್ನು ಹೇಗೆ ಪರಿಹರಿಸುತ್ತಿ?” ನನ್ನ ವಾದಕ್ಕೆ ವನವಾಸಿ ಒಂದು ಚೂರೂ ಹೆದರಲಿಲ್ಲ.
“ಕಲಿಯುಗದಲ್ಲಿ ದೇವರು ಸ್ವತ: ಏನನ್ನೂ ಮಾಡುವಂತಿಲ್ಲ. ಎಲ್ಲವನ್ನೂ ಭಕ್ತರ ಮೂಲಕವೇ ಮಾಡಿಸಬೇಕು. ನಾನೀಗ ನಿನ್ನ ಮೂಲಕ ಮಾಡಿಸುತ್ತೇನೆ” ಎಂದ. “ಅಲ್ಲಾ ರಿಂದಕ್ಕ ದಿನಾಲೂ ಬೆಳಿಗ್ಗೆ ಗುಡಿಗೆ ಬಂದು ಹಾಡುವುದನ್ನು ಭಕ್ತಿ ಅಂದುಕೊಂಡಿದ್ದಾಳೆ ಅದನ್ನು ಹೇಗೆ ತಪ್ಪಿಸಲಿ?” ಎಂದೆ.
“ಉಳಿದ ಹಾಡನ್ನು ಹಾಡಿಕೊಳ್ಳಲಿ ನನ್ನ ತಕರಾರಿಲ್ಲ. ಅವೆಲ್ಲ ಅವಳಿಗೆ ಚಿಕ್ಕಂದಿನಿಂದಲೇ ಬಾಯಿಪಾಠ ಆಗಿವೆ. ಅವುಗಳನ್ನು ಸರಿಯಾಗಿಯೇ ಹಾಡುತ್ತಾಳೆ. ಹೊಸದಾಗಿ ಕಲಿತ ರಾಮಭಜನೆಯಿದೆಯಲ್ಲ ಅದನ್ನಾಕೆ ಕನ್ನಡಕ ಹಾಕಿಕೊಂಡು ನೋಟುಬುಕ್ಕು ನೋಡಿಕೊಂಡು ಹಾಡುತ್ತಾಳೆ. ಆ ಕನ್ನಡಕದ ನಂಬರು ಬದಲಿಯಾಗಿದೆ. ಆದರಾಕೆ ವೈದ್ಯರ ಬಳಿ ಹೋಗುವುದಿಲ್ಲ. ತಪ್ಪುತಪ್ಪಾಗಿ ಅರ್ಥ ಅನರ್ಥವಾಗುವಂತೆ ಹಾಡುತ್ತಾಳೆ. ಯೂ ಟ್ಯೂಬಿನ ದಾಟಿಯೂ ಆಕೆಗೆ ಕಲಿಯಲಾಗುವುದಿಲ್ಲ. ತನ್ನದೇ ಸ್ವಂತ ರಾಗ ಹಾಕಿಕೊಂಡಿದ್ದಾಳೆ. ಅದಂತೂ ಹೊಟ್ಟೆಗೆ ಕೈ ಹಾಕಿ ಕಲಕಿ ಕರುಳನ್ನು ಎಳೆದಂತೆ ಸಂಕಟವಾಗುವ ರಾಗ. ಈವರೆಗೂ ನಾನೆಲ್ಲಿಯೂ ಈ ರಾಗವನ್ನು ಕೇಳಿಲ್ಲ. ಮೊದಲೇ ನನಗೆ ಇಲ್ಲಿ ಸೀತೆ, ಲಕ್ಷ್ಮಣ ಇವರ ಸಾಂಗತ್ಯವಿಲ್ಲದ ಒಂಟಿತನದ ನೋವಿದೆ. ಅಂಥದರಲ್ಲಿ ರಿಂದಕ್ಕನ ಊಳಿಡುವ ಹಾಡು ಕೇಳಿದೊಡನೆ ಅನಾಥಪ್ರಜ್ಞೆ ಉಕ್ಕಿ ಹರಿಯುತ್ತದೆ.”
ರಾಮನ ಮಾತು ಕೇಳಿದ್ದೇ ಪಾಪ ಬಡಪಾಯಿ ಅನ್ನಿಸಿತು. ಮೊದಲೇ ಹೆಂಡಿರು ಮಕ್ಕಳನ್ನಗಲಿದ ಒಂಟಿಬಡುಕ. ಆಯಿತು ಏನಾದರೊಂದು ಉಪಾಯ ಮಾಡುತ್ತೇನೆ ಬಿಡು ಎಂದೆ. “ಇವತ್ತೇ ಉಪಾಯ ಫಲಿಸಬೇಕು. ನಾಳೆ ಬೆಳಿಗ್ಗೆ ಆಕೆ ನನ್ನ ಭಜನೆ ಹಾಡುವಂತಿಲ್ಲ” ಎಂದ. ನನ್ನ ಮೊಬೈಲು ಹೊಡೆದುಕೊಳ್ಳತೊಡಗಿತು. “ಮೇಡಂ ವಿದ್ಯಾವರ್ಧಕ ಸಂಘದಲ್ಲಿ ಏಳು ಗಂಟೆಗೆ ಸೀತಾ ಪರಿತ್ಯಾಗ ಶೊ ಇದೆ ತಪ್ಪಿಸಬ್ಯಾಡ್ರಿ ಮುದ್ದಾಂ ಬರಬೇಕು” ಎಂದರು. ರಾಮ ಎಂದು ತೊದಲಿದೆ. “ರಾಮನ ಪಾರ್ಟ ಶಂಕರಣ್ಣ ಮಾಡಾಕೆ ಹತ್ಯಾನ್ರಿ” ಅಂದರು. ಆಯ್ತು ಎನ್ನುತ್ತ ಮನೆಗೆ ಬಂದೆ. ಕಣ್ಣು ಅಪ್ರಯತ್ನವಾಗಿ ಹಿಂದಿನ ಮನೆಯತ್ತ ಹೋಯಿತು. ಓಣಿಯ ಹುಡುಗರೆಲ್ಲ ಹೋ ಎಂದು ಕೂಗುತ್ತ ಆಡುತ್ತಿದ್ದರು. ಥೇಟು ವಾನರ ಸೇನೆ ಲಂಕೆಗೆ ಹೊಕ್ಕಂತೆಯೇ ಓಣಿಯ ದೃಶ್ಯ ಕಾಣುತ್ತಿತ್ತು. ಅಷ್ಟೊತ್ತಿಗೆ ಹುಶ್ ಹುಶ್ ಎಂದು ಪ್ರಾಣಂತಿಕವಾಗಿ ಕೂಗುತ್ತ ರಿಂದಕ್ಕ ಹಿತ್ತಿಲಿಗೆ ಬಂದರು. ಕೈಯಲ್ಲಿ ರಾಮಭಜನೆಯ ಪುಸ್ತಕ, ಕಣ್ಣಲ್ಲಿ ಕನ್ನಡಕ, ಒಹೊ ಹಾಡುತ್ತ ಕೂತಿದ್ದವರು ಹಾಗೆಯೇ ಓಡಿ ಬಂದಿದ್ದಾರೆ. ಯಾಕೆಂದು ಕುತೂಹಲದಿಂದ ಕಣ್ಣೆತ್ತಿ ನೋಡಿದೆ. ಐದಾರು ಮುಶ್ಯಾ ಅಂದರೆ ಕಪ್ಪು ಮುಖದ ಮಂಗಗಳು ಮನೆಯ ಛಾವಣಿಯಿಂದ ಕಂಪೌಂಡಿಗೆ ಜಿಗಿಯುತ್ತಿದ್ದವು. ಥಟ್ಟನೆ ಉಪಾಯವೊಂದು ಹೊಳೆಯಿತು. ಆಹಾ ರಾಮಭಕ್ತ ಹನುಮಂತ ಸ್ವಾಮಿ ನೀನೇ ಸಹಾಯಕ್ಕೆ ಬಂದೆಯೇನೊ ಅನ್ನುತ್ತ ನಮ್ಮ ಹಿತ್ತಿಲಲ್ಲಿದ್ದ ಕೋಲೊಂದನ್ನು ಎತ್ತಿಕೊಂಡು ರಿಂದಕ್ಕ ಈ ಕೋಲು ತಗೊಳ್ರಿ, ಇಲ್ಲಂದ್ರ ಮುಶ್ಯಾ ನಮ್ಮ ಮೇಲೆ ಎಗರಿ ಬರ್ತಾವ ಎಂದು ಕೊಟ್ಟೆ. ರಿಂದಕ್ಕ ಕೋಲು ಇಸಗೊಳ್ಳುವಾಗ ಮತ್ತೊಂದು ಕೈಲಿದ್ದ ಪುಸ್ತಕದ ಕಡೆ ನೋಡಿದೆ. ಅವರ ಲಕ್ಷ ಪೂರ್ತಿ ಮುಶ್ಯಾನ ಮೇಲಿತ್ತು. ಒಂದು ದೊಡ್ಡ ಮುಶ್ಯಾ ತೀರಾ ಹತ್ತಿರ ಬಟ್ಟೆ ಒಗೆಯುವ ಕಲ್ಲಿನ ಮೇಲೆ ಬಂದು ಹಲ್ಲು ಹಿಸಿದು ಗುರ್ ಎಂದಿತು. ಹೇ ಹುಶ್ ಎಂದು ರಿಂದಕ್ಕ ಕೋಲು ತೋರಿದರು. ಚಕ್ಕನೆ ಅಲ್ಲಿಂದ ನೆಗೆದ ಮುಶ್ಯಾ ಪುಸ್ತಕ ಕಸಿದು ಕಂಪೌಂಡ್ ನೆಗೆದು ನಮ್ಮ ಟೆರೆಸು ಏರಿತು. ಮತ್ತೆ ಕ್ಷಣಾರ್ಧದಲ್ಲಿ ಎದುರಿಗಿನ ಮಾವಿನ ತೋಪಿನ ಕಡೆ ಓಟ ಕಿತ್ತಿತ್ತು.
ಅಯ್ಯ ಸುಡ್ಲಿ ಭಜನೆ ಪುಸ್ತಕ ಒಯ್ತಲ್ರೀ ಎಂದು ರಿಂದಕ್ಕ ಚೀರಿಕೊಂಡರು. ಗಲಾಟೆ ಕೇಳಿ ಅಕ್ಕಪಕ್ಕದವರೆಲ್ಲರೂ ಓಡಿ ಬಂದಿದ್ದರು. ಗಂಗಕ್ಕ ಮಂಗ ಹಾರಿ ಹೋದೆಡೆ ನೋಡಿ ಕೈ ಮುಗಿಯುತ್ತ” ಮಾರುತಿ ರಾಮಭಜನೆ ಒಯ್ದಿಯಾ ತಂದೆ” ಎಂದಳು. ಅಯ್ಯ ರಿಂದಕ್ಕ ನಿಮ್ಮ ಪುಣ್ಯನೇ ಪುಣ್ಯರೀ ನಿಮ್ಮ ಭಜನೆ ಕೇಳಿ ಖುಷಿಯಾದ ಹನುಮಪ್ಪ ಪುಸ್ತಕ ಒಯ್ದನಲ್ರಿ ಎಂದು ಜಾನಕ್ಕ ನೆಟಿಕೆ ಮುರಿದರು. ಅಂತೂ ಇಂತೂ ಮರುದಿನದಿಂದ ರಿಂದಕ್ಕನ ಹೊಸ ಹಾಡಿನ ಗಾಯನ ನಿಂತಿತು. ಆದರೆ ಆಕೆ ಜಾನಕ್ಕನ ಸೊಸೆಗೆ ಮತ್ತೆ ಡೌನ್ ಲೋಡ್ ಮಾಡಿಕೊಡು ಎಂದು ಗಂಟುಬಿದ್ದಳು. ಈಗ ನಾನು ಮುನ್ನೆಚ್ಚರಿಕೆಯ ಕ್ರಮವಾಗಿ ಮಧ್ಯಪ್ರವೇಶ ಮಾಡಿದೆ.
ಅಲ್ರಿ ರಿಂದಕ್ಕ, ಯಾವುದೇ ವೃತ ಕೈಗೊಂಡರೂ ಅದಕ್ಕೊಂದು ಉದ್ಯಾಪನೆ ಅಂತ ಇರ್ತದೆ, ಅಂದರೆ ಮುಕ್ತಾಯಗೊಳಿಸುವುದು. ನಿಮ್ಮ ಭಜನೆ ಸೇವಾ ದೇವರನ್ನು ಮುಟ್ಟತು ಅಂತ ಅಂವ ತನ್ನ ಸಂತೃಪ್ತಿ ತೋರಿಶ್ಯಾನ, ಇನ್ನು ನಿಮ್ಮ ಗಾನಸೇವಾ ಜರೂರತ್ತು ಇಲ್ಲ ತಗೊಳ್ರಿ ಎಂದು ಪುಸಲಾಯಿಸಿದೆ. ಹಾಡು ನಿಂತ ಎರಡು ದಿನದ ನಂತರ ನಾಟಕ ನೋಡಿಕೊಂಡು ರಾತ್ರಿ ಮನೆಗೆ ಬರುತ್ತಿದ್ದಾಗ ಗುಡಿಯ ಎದುರಿಗೆ ಥಟ್ಟನೆ ಸ್ಕೂಟಿಯ ಎದುರು ಯಾರೋ ಬಂದು ನಿಲ್ಲಿಸಿದಂತಾಯಿತು. ಗಾಭರಿಯಾಗಿ ನೋಡಿದರೆ ವನವಾಸಿ ರಾಮ. ಈಗ ಆರಾಮ ಇದ್ದೇನಿ ಅಂತ ಹೇಳಲಿಕ್ಕೆ ಬಂದೆ ಅಂದ. ನಾನೇನು ಮಾಡಿಲ್ಲಪ್ಪ ಎಲ್ಲಾ ನಿನ್ನ ಹನುಮ ಸೇನೆಯ ಕರಾಮತ್ತು ಅಂತ ಕೈ ಮುಗಿದೆ. ತಕ್ಷಣ ನೆನಪಾದವರಂತೆ ಕೂಗಿದೆ ಅಪ್ಪಾ ರಾಮ ದಯವಿಟ್ಟು ಹೀಗೆ ಸ್ಕೂಟಿಗೆ ಅಡ್ಡ ಬರಬೇಡಯ್ಯ ಗಾಭರಿಯಲ್ಲಿ ನಾನು ಬಿದ್ದು ಹಲ್ಲು ಮುರಿದುಕೊಂಡರೇನು ಗತಿ ಎಂದೆ.
ಮರುದಿನ ಹಿತ್ತಿಲ ಕಡೆ ಏನೋ ಟಕಟಕ ಕೋಲು ಬಡಿಯುವ ಸದ್ದು ಕೇಳತೊಡಗಿತು. ಮಗಳಿಗೆ ಅದೇನೇ ಪುಟ್ಟಿ? ಅಂದೆ. ಅಮ್ಮಾ ಕೋಲಾಟ ಕಲಿತಾ ಇದಾರೆ ಅಂದಳು. ಯಾರೂ? ಅಂತ ಕೇಳಿದೆ. ರಿಂದಾ ಮಾಮಿ ಜಾನಕ್ಕ ಮಾಮಿ ಗಂಗಾ ಮಾಮಿ ಎಲ್ಲಾ ಅದಾರ. ಈಗ್ಯಾಕೆ ಕೋಲಾಟ ಕಲಿಯಾಕ ಹತ್ಯಾರ? ಅಂದೆ. ಅದೇನೊ ರಾಮನವಮಿ ಬಂತಂತ. ಅದಕ್ಕೆ ಗುಡಿಯೊಳಗೆ ಒಂದು ವಾರ ಕೋಲಾಟ ಮಾಡ್ತಾರಂತ. ಅದೂ ಒಂದು ಸೇವಾ ಅಂತ ಅಂದಳು. ರಾಮ ರಾಮ ಎಂದು ತಲೆಯ ಮೇಲೆ ಕೈ ಹೊತ್ತು ಕೂತೆ. ಯಾಕಮ್ಮಾ ಏನಾತು? ಅಂತ ಕೇಳಿದಳು. ಈ ಅಜ್ಜಿಯರೆಲ್ಲ ಕುಣಿಯೋದು, ಅದನ್ನು ಕಂಡು ಆ ದೇವ್ರು ಹೆದರಿ ಓಡಿ ಬರೋದು ಸಾಕವ್ವ ಸಾಕು ಅಂದೆ. ದೊಡ್ಡ ಜೋಕು ಕೇಳಿದವರಂತೆ ಮಗಳು ಜೋರಾಗಿ ನಕ್ಕಳು. ತಕ್ಷಣ ಒಂದು ವಿಷಯ ನೆನಪಾಯಿತು. ಕಳೆದ ಸಲ ನಾನು ಸಲಹೆ ಕೊಟ್ಟಿದ್ದಕ್ಕೆ ದೇವರು ನಂಗೆ ಗಂಟು ಬಿದ್ದಿದ್ದ. ಈ ಸಲ ನಂಗೇನೂ ಸಂಬಂಧವೇ ಇಲ್ಲ ಬಿಡು ಅಂತ ಖುಷಿಯಾಯಿತು. ಹಿಂದಿನ ಕಿಡಕಿಗೆ ಮುಖ ಒತ್ತಿ ಜೋರಾಗಿ ಕೂಗಿ ಮಾತಾಡಿಸಿದೆ. “ಕೋಲಾಟ ಜೋರಾಗಿ ನಡದದಲ್ರಿ ರಿಂದಕ್ಕ ಇದೊಳ್ಳೆ ನೆನಪಾಗೇದಲ್ರಿ ನಿಮಗೆ.” ಕೋಲಾಟ ಆಡುತ್ತಿದ್ದ ಅಜ್ಜಿಯರು ಒಂದು ಕ್ಷಣ ಏದುಸಿರು ಬಿಡುತ್ತ ನಿಂತವರು ಉಕ್ಕೇರುವ ಉತ್ಸಾಹದಲ್ಲಿ ನನಗೆ ಉತ್ತರಿಸಿದರು. “ಅಯ್ಯ ಹಿಂಗ್ಯಾಕೆ ಕೇಳ್ತೀರಿ ಕಳೆದ ತಿಂಗಳು ಮಹಿಳಾ ದಿನಾಚರಣೆಗೆ ನೀವೇ ಭಾಷಣ ಮಾಡಿದ್ದರೆಲ್ಲ, ಹೆಣ್ಣು ಮಕ್ಕಳು ಸದಾ ಕ್ರಿಯಾಶೀಲರಾಗಿರಬೇಕು, ವಯಸ್ಸು ನಮಗೆಂದೂ ಅಡ್ಡಿಯಾಗಬಾರದು, ಸದಾ ಕಾಲ ಚಟುವಟಿಕೆಯಲ್ಲಿ ತೊಡಗಿರಬೇಕು ಅಂತ. ಅವತ್ತೆ ನಾವೆಲ್ಲ ವಿಚಾರ ಮಾಡಿ ಇಟ್ಟುಕೊಂಡಿದ್ವಿ. ಈ ಸಲ ನಿಮ್ಮ ಸಲಹೆಯನ್ನು ಕಾರ್ಯರೂಪಕ್ಕೆ ತರಲೇ ಬೇಕು ಅಂತ.” ತಲೆ ಗಿರಿಗಿರಿ ತಿರುಗಿದಂತಾಯಿತು. ಅಡುಗೆ ಮನೆಗೆ ಬಂದು ಎರಡು ಲೋಟ ನೀರು ಕುಡಿದೆ.
ನಾನು ಒಂದು ತಿಂಗಳು ಊರಿಗೆ ಹೋಗಿ ಬರಾಕಿ ಇದ್ದೇನಿ ನನ್ನ ಜೋಡಿ ಯಾರು ಬರ್ತೀರಿ ಬರಬಹುದು ಅಂತ ಘೋಷಣೆ ಮಾಡಿದೆ. ಎಂದು ಹೋಗೋದು ಅಂತ ಕೇಳಿದ ಗಂಡನಿಗೆ ಯುಗಾದಿಗೆ ಹೋಗಿ ಹನುಮ ಜಯಂತಿ ಮುಗಿಸಿಕೊಂಡೇ ಬರೋದು ಅಂದೆ. ಈಗ್ಯಾಕೆ ಹೊಂಟಿ? ನನಗೆ ಸೆಮಿಸ್ಟರ್ ಪರೀಕ್ಷೆಗಳು ನಡಿಲಿಕ್ಕೆ ಹತ್ಯಾವಲ್ಲ ನೀನು ಮನೇಲಿ ಇಲ್ಲ ಅಂದ್ರೆ ಊಟ-ತಿಂಡಿ ಎಲ್ಲಾನೂ ತ್ರಾಸು. ಎಂದು ಮಗಳು ಕ್ಯಾತೆ ತೆಗೆದಳು. ನಿಮ್ಮ ತಾಯಿ ಮೇ ಮೊದಲ ವಾರ ಬಾ , ಅಪ್ಪನ ವರ್ಷಾಂತಕ್ಕೆ ಅನುಕೂಲ ಆಗ್ತದ ಅಂದಾರಲ್ಲ, ಈಗ್ಯಾಕೆ ಹೋಗಬೇಕು? ಅವರಿಗೂ ಒಣ ನಿಗ್ರಹ ಅಂತ ಗಂಡ ಗುಡುಗಿದ. ಇಲ್ಲಾ ಅದೇನಂದ್ರ ವನವಾಸಿ ದೇವರು ಹಿಂಗಿಂಗೆ ಬಂದಿದ್ದ ಎಂದು ವಿಷಯ ತಿಳಿಸಿದೆ. ಗಂಡ-ಮಗಳು ಇಬ್ಬರೂ ಏಕಕಾಲದಲ್ಲಿ ತಿರುಗಿ ಬಿದ್ದರು. ನೀನು ನಾಟಕ ನೋಡೂದು ಕಡಿಮೆ ಮಾಡು, ನಿನ್ನ ತಲಿಯೊಳಗೆ ಫೊಬಿಯಾ ಅಂಟಿಕೊಂಡೇತಿ. ನಿನ್ನ ಮನಸ್ಸು ಏನೇನೋ ಕಲ್ಪನೆ ಮಾಡಿಕೊಳ್ಳಾಕ ಹತ್ತೇತಿ ನಿನಗೆ ವಾಸ್ತವ ಮತ್ತು ಕನಸಿನ ನಡುವೆ ಇರುವ ಅಂತರವನ್ನು ಪ್ರತ್ಯೇಕಿಸುವ ಶಕ್ತಿಯ ನಾಶವಾಗಿದೆ. ಮೊದಲು ಡಿಮಾನ್ಸಿಗೆ ಹೋಗಿ ಬಾ ಎಂದರು. ಯಾಕೊ ಇವರನ್ನೆಲ್ಲ ಒಪ್ಪಿಸುವುದು ಆಗದ ವಿಷಯ ಎನಿಸಿತು. ಊರಿಗೆ ಹೋದರೂ ಅದು ತಾತ್ಕಾಲಿಕ ಪಲಾಯನವೇ ಹೊರತು ಶಾಶ್ವತ ಪರಿಹಾರವಲ್ಲ. ಹಾಗೆಯೇ ಯೋಚಿಸುತ್ತ ಕುಳಿತೆ.
ತಕ್ಷಣ ಕೆಲವು ಉಪಾಯಗಳು ಹೊಳೆದವು. ಚಿತ್ರಕಲಾ ಕಾಲೇಜಿನ ಪ್ರಾಚಾರ್ಯರಿಗೆ ಫೋನು ಮಾಡಿದೆ. ಪರಿವಾರ ಸಮೇತನಾಗಿ ಇರುವ ಒಂದು ಶ್ರೀರಾಮನ ಫೋಟೊ ಸಿದ್ಧಪಡಿಸಿ ಕೊಡಿರಿ ಎಂದು ಕೇಳಿಕೊಂಡೆ. ಶಾಲೆಯಿಲ್ಲದೇ ಬೀದಿ ತುಂಬ ಆಟವಾಡುತ್ತ ಸಮಯ ಕಳೆಯುವ ಹುಡುಗರನ್ನು ಒಟ್ಟು ಸೇರಿಸಿಕೊಂಡು ಗುಡಿಯ ಹತ್ತಿರ ಕರೆದೊಯ್ದೆ. ಸುತ್ತಲೂ ಇರುವ ಆವರಣದಲ್ಲಿ ತಗ್ಗು ತೆಗೆದು ತುಳಸಿ ಗಿಡಗಳನ್ನು ನೆಟ್ಟೆವು. ದಿನಾಲೂ ನೀರು ಹಾಕುವ ಜವಾಬ್ದಾರಿಯನ್ನು ದೊಡ್ಡ ಹುಡುಗರು ವಹಿಸಿಕೊಂಡರು. ಈ ಸಸಿಗಳು ದೊಡ್ಡದಾಗುವ ತನಕ ನಾಡಿಗೇರರ ಕಂಪೌಂಡಿನಲ್ಲಿರುವ ತುಳಸಿವನದಿಂದ ತುಳಸಿ ಕೊಯ್ದು ಮಾಲೆ ಮಾಡಿ ದೇವರ ಕೊರಳಿಗೆ ಹಾಕಲು ಕೊಡುವ ಕೆಲಸವನ್ನು ಹುಡುಗಿಯರು ವಹಿಸಿಕೊಂಡರು. ಕೊರೊನಾ ಅಂತ ಕೆಲಸ ಕಳಕೊಂಡು ಮನೆಯಲ್ಲಿದ್ದ ಕೊರೊನಾ ಅಂತ ಕೆಲಸ ಕಳಕೊಂಡು ಮನೆಯಲ್ಲಿದ್ದ ನಿಖಿತಾಗೆ ಈ ಹುಡುಗರಿಗೆ ಕೋಲಾಟ ಕಲಸವ ರಾಮನವಮಿ ದಿವಸ ಮಾಡ್ತಾರ, ಇಲ್ಲೇ ಗುಡಿ ಮುಂದೆ ಪ್ರಯಾಕ್ಟೀಸ ಮಾಡಲಿ ಅಂದೆ. ಆಯ್ತ್ರಿ ಆಂಟಿ ಅಂದಳು. ಫೋಟೊ ದೊರೆತೊಡನೆ ಗುಡಿಯ ಪೂಜೆ ಮಾಡುವ ನಾಗೇಶ ಪೂಜಾರಿಯವರ ಮನೆಗೆ ಹೋದೆ. ಈ ಫೋಟೊನ ಗ್ವಾಡಿಗೆ ನೇತು ಹಾಕಿ ಇದಕ್ಕೂ ಪೂಜಿ ಮಾಡ್ರಿ, ನಾವು ಒಂಟಿ ದೇವರನ್ನು ಪೂಜಾ ಮಾಡಲಿಕ್ಕೆ ಹತ್ತಿ ಭಾಳ ವರ್ಷ ಆದುವು. ಎಷ್ಟೆಂದರೂ ರಾಮ ಪರಿವಾರವಂದಿಗ. ಆಭರಣ ಇರದಿದ್ದರೂ ಅಡ್ಡಿಲ್ಲ, ತುಳಸಿ ಮಾಲಿ, ಮಲ್ಲಿಗೆ ಮಾಲಿ, ಗಂಧ-ಕುಂಕುಮ, ಬೆಣ್ಣಿ ಅಲಂಕಾರ ಇತ್ಯಾದಿ ಮಾಡೋಣಂತ, ಒಟ್ಟಿನಲ್ಲಿ ಮೂರ್ತಿ ಭಣಭಣ ಇಡೂದು ಬ್ಯಾಡ ಏನಂತೀರಿ ಅಂದೆ. ಅವರೂ ಉತ್ಸಾಹದಿಂದ ತಲೆಯಾಡಿಸಿದರು. ಯುಗಾದಿ ದಿವಸ ಹೊಸ ಫೋಟೊ ಗೋಡೆಯೇರಿತು. ಘಮಘಮ ತುಳಸಿ-ಮಲ್ಲಿಗೆ ಮಾಲೆಗಳೊಡನೆ ದೇವರ ಮೂರ್ತಿ ಲಕ್ಷಣವಾಗಿ ಕಾಣುತ್ತಿತ್ತು. ಮಕ್ಕಳು ಸಂಜೆಯಾಗುತ್ತಿದ್ದಂತೆ ಕೋಲು ಹಿಡಿದು ನರ್ತಿಸುತ್ತ ಎರಡು ತಾಸು ಕುಣಿಯುತ್ತಿದ್ದರು. ಇಷ್ಟೆಲ್ಲ ಆದ ಮೇಲೆ ಸ್ವಲ್ಪ ಧೈರ್ಯ ಬಂತು.


ರಾಮ ನವಮಿಯ ದಿವಸ ರಿಂದಕ್ಕನ ಟೋಳಿ ನಸುಕಿನಲ್ಲೇ ಗುಡಿಗೆ ಹೋಗಿ ತೊಟ್ಟಿಲು ಕಟ್ಟಿ ರಾಮಜಯಂತಿ ಆಚರಿಸಿತು. ಬೆಲ್ಲದ ಪಾನಕ ಕೋಸುಂಬರಿಗಳ ಪನಿವಾರ ಹಂಚಿದರು. ಮಕ್ಕಳು ಕೋಲಾಟ ಮಾಡಿದರು. ಹೆಸರು ಬೇಳೆ ಪಾಯಸ-ಮಾವಿನಕಾಯಿ ಚಿತ್ರಾನ್ನಗಳ ಸಮಾರಾಧನೆ ಏರ್ಪಾಡಾಗಿತ್ತು. ಅದೆಲ್ಲ ಮುಗಿದ ನಂತರ ರಿಂದಕ್ಕನ ಟೋಳಿಯಿಂದ ಕೋಲಾಟ ಸೇವೆ ನಿಗದಿಯಾಗಿತ್ತು. ಗುಡಿಯ ಆವರಣದ ತುಂಬಾ ಜನವೋ ಜನ. ಭಯ ಪಡುತ್ತಲೇ ಸುತ್ತಲೂ ಕಣ್ಣಾಡಿಸಿದೆ. ಓ ಅಲ್ಲಿ ಕಲಶದ ಹತ್ತಿರ ಗೋಪುರದ ತುದಿಯಲ್ಲಿ ವನವಾಸಿ ಕೂತಿದ್ದ ಪಕ್ಕದಲ್ಲೇ ಕೂತ ಸೀತೆಯ ತುರುಬಿಗೆ ಮಲ್ಲಿಗೆ ಸುತ್ತುತ್ತಿದ್ದ. ಹೆಗಲ ಮೇಲೆ ಅಳಿಲು ಕಾಲ ಬುಡದಲ್ಲಿ ಹನುಮಂತ ಹೀಗಾಗಿ ದೇವರು ಪ್ರಸನ್ನವದನನಾಗಿದ್ದ. ರಿಂದಕ್ಕನ ಟೋಳಿಯು ವೃತ್ತಾಕಾರವಾಗಿ ಸುತ್ತುತ್ತ ಕುಣಿಯುತ್ತಿತ್ತು. ಅವರ ಹಾಡಿನ ಲಯಕ್ಕೆ ಎರಡೂ ಕೈ ತಟ್ಟಿ ಚಪ್ಪಾಳೆಯಿಂದ ಸಾಥ್ ನೀಡಿದೆ. ಜನರೆಲ್ಲರೂ ಚಪ್ಪಾಳೆಯಿಂದ ಧ್ವನಿಗೂಡಿಸಿದರು. ಮಧುರವಾದ ಚಪ್ಪಾಳೆಯ ಸದ್ದು ಕೇಳಿ ಗೋಪುರದ ಕಡೆ ನೋಡಿದೆ. ದೇವರ ಪರಿವಾರವೂ ಚಪ್ಪಾಳೆ ತಟ್ಟುತ್ತಿತ್ತು.
ಹೆಚ್ಚಿನ ಬರಹಗಳಿಗಾಗಿ
דירות דיסקרטיות בקריות במיקום מרכזי And The Mel Gibson Effect
The Secret For נערות ליווי בבאר שבע למסיבות פרטיות Revealed in Seven Simple Steps
What The Pope Can Teach You About ליווי בחינם בירושלים עם תמונות אמיתיות