- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
ಚತುರಿಕಾ ಎಂಬ ಸೇವಕಿ ಚಿತ್ರಪಟ ಒಂದನ್ನು ತಂದು ಕೊಡುವಳು. ಆ ಚಿತ್ರ ದುಷ್ಯಂತನೇ ಬರೆದದ್ದು!. ಅದರಲ್ಲಿರುವುದು ಶಕುಂತಲೆಯೊಡನೆ ಆದ ಮೊದಲ ಭೇಟಿಯ ದೃಶ್ಯ.
ಮರೆಯಲ್ಲಿ ನಿಂತು ಚಿತ್ರವನ್ನು ವೀಕ್ಷಿಸಿದ ಸಾನುಮತಿ ದುಷ್ಯಂತನ ಚಿತ್ರ ಕಲೆಯನ್ನು ಬಹುವಾಗಿ ಮೆಚ್ಚುವಳು. ಶಕುಂತಲೆ ಸಾಕ್ಷಾತ್ ಎದುರಿಗೆ ನಿಂತಂತಿದೆ ಎನ್ನುವಳು.
ಚಿತ್ರ ನೋಡೀ ದುಷ್ಯಂತನ ಉದ್ಗಾರ ಕೇಳೀ..!
“ಯದ್ಯತ್ಸಾಧು ನ ಚಿತ್ರೆ ಸ್ಯಾತ್ ಕ್ರಿಯತೆ ,ತತ್ ತದನ್ಯಥಾ .
ತಥಾಪಿ ತಸ್ಯಾ: ಲಾವಣ್ಯಂ
ರೇಖಯಾ ಕಿಂಚಿತ್ ಅನ್ವಿತಮ್.”
“ನಾನು ಪ್ರತ್ಯಕ್ಷವಾಗಿ ಕಂಡ ಚಿತ್ರವನ್ನು ಕಂಡಂತೆಯೇ ಬಿಡಿಸಿದರೂ ಅಲ್ಲಲ್ಲಿ ನ್ಯೂನತೆ, ಅಭಾವ ತೋರುತ್ತದೆ. ಅದನ್ನು ಸರಿಪಡಿಸಲು ಒಂದೆರಡು ಬಾರಿ ಪ್ರಯತ್ನ ಮಾಡಿದರೂ ಅವಳ ಸರಿಯಾದ ಲಾವಣ್ಯ ಎದ್ದು ಬರುತ್ತಿಲ್ಲ.”
ಎಂದು ತನ್ನ ಸಾಮರ್ಥ್ಯದ ಬಗೆಗೇ ಅಸಮಾಧಾನ ವ್ಯಕ್ತಪಡಿಸಿದನು.
ಇಬ್ಬರು ಸಖಿಯರೂ ಚಿತ್ರದಲ್ಲಿದ್ದಾರೆ.
ಶಕುಂತಲೆ, ಮಾಲಿನೀ ನದಿಯಿಂದ ನೀರಿನ ಕೊಡ ಹೊತ್ತು ತಂದು ಗಿಡಗಳಿಗೆ ಹನಿಸುತ್ತಿರುವಳು.
ಮುಖದ ಮೇಲೆ ಆಯಾಸ, ಬೆವರು ಹನಿಗಳು ಕಾಣುತ್ತಿವೆ. ಭೃಂಗವೊಂದು ಅವಳ ಮುಖವನ್ನು
ಚುಂಬಿಸುವಂತಿದೆ.
ಇಷ್ಟೆಲ್ಲವನ್ನೂ ಸುಂದರವಾಗಿ ಚಿತ್ರಿಸಿದ್ದರೂ ರಾಜನಿಗೆ ಅವಳ ಸೌಂದರ್ಯವನ್ನು ಪೂರ್ಣವಾಗಿ ಹೊರತರಲು ಅಸಮರ್ಥ ತಾನು ಎನಿಸಿತು. ಈಗ ಶಕುಂತಲೆಯ ಅಭಿಜ್ಞಾನ ಆಗಿ ಅವಳ ಮೇಲಿನ ರಾಜನ ಪ್ರೀತಿ ಇನ್ನೂ ಉತ್ಕಟವಾಗಿದೆ.
“ಖಿನ್ನಾಂಗುಲಿ ವಿನಿವೇಶ: ರೇಖಾ ಪ್ರಾಂತೇಷು ದೃಶ್ಯತೆ ಮಲಿನ:
ಅಶ್ರು ಚ ಕಪೋಲ ಪತಿತಂ ದೃಶ್ಯಮಿದಂ ವರ್ಣಿಕೋಚ್ಛ್ವಾಶಾತ್. “
“ಚಿತ್ರದ ಒಂದು ತುದಿಯಲ್ಲಿ ತನ್ನ ಬೆವರುತ್ತಿದ್ದ ಬೆರಳುಗಳ ಕಪ್ಪು ಕಲೆ ಕಾಣುತ್ತಿದೆ. ಅವಳ ಕಪೋಲದ ಮೇಲೆ ನನ್ನ ಕಣ್ಣೀರು ಬಿದ್ದು ಬಣ್ಣ ಕದಡಿದೆ”
ದುಷ್ಯಂತ ಚಿತ್ರ ಬರೆಯುವಾಗ ತನ್ನ ಮನ ದು:ಖದಿಂದ ಎಷ್ಟು ಬಾಧಿತ ಆಗಿತ್ತು ಎಂದು ತಿಳಿಸುತ್ತಿರುವನು ಎನಿಸುವುದಿಲ್ಲವೇ?
ಚಿತ್ರವನ್ನು ಪೂರ್ಣಗೊಳಿಸ ಬೇಕಾಗಿದೆ. ತನ್ನ ಕುಂಚ ತೆಗೆದುಕೊಂಡು ಬರಲು ಚತುರಿಕೆಯನ್ನು ಕಳಿಸುವನು. ಶಕುಂತಲೆಗೆ ಪ್ರಿಯವಾದ ದೃಶ್ಯಗಳ ಚಿತ್ರೀಕರಣ ಇನ್ನೂ ಉಳಿದಿದೆ.
ಮಾಲಿನೀ ನದಿ, ಅದರಲ್ಲಿ ಈಜಾಡುತ್ತಿರುವ ಹಂಸಗಳ ಜೋಡೀ, ನದೀ ತೀರದ ಮರುಳು ರಾಶಿ, ದಂಡೆಗೆ ಹೊಂದಿರುವ ಹಿಮಾಲಯ ಪರ್ವತ, ಗಿಡದ ನೆರಳಲ್ಲಿ ವಿಶ್ರಾಂತಿ ಪಡೆಯುತ್ತಿರುವ ಜಿಂಕೆ ಇವನ್ನೆಲ್ಲ ಚಿತ್ರದಲ್ಲಿ ಜೀವಂತಗೊಳಿಸುವ ಆಶೆ ದುಷ್ಯಂತನಿಗೆ.
ಹಾಳೆಯ ಉಳಿದ ಭಾಗವನ್ನೆಲ್ಲ ಜಟಾಜೂಟ ಧಾರಿಗಳಾದ ಸಾಧುಗಳಿಂದ ತುಂಬಿಸಿ ಬಿಡಬಹುದು ಎಂದು ವಿದೂಷಕ ಹಾಸ್ಯ ಮಾಡುವನು.
ಶಕುಂತಲೆಯ ಸುಕೋಮಲ ಅಂಗಕ್ಕೆ ಶೋಭಿಸುವ ನಾಜೂಕಾದ ಪ್ರಸಾಧನೆಗಳನ್ನು ತೊಡಿಸಬೇಕು.
ಕಿವಿಗಳನ್ನು ಶಿರೀಶ ಪುಷ್ಪ ಅಲಂಕರಿಸ ಬೇಕು.ಹೂವುಗಳ ಕೇಸರ ಅವಳ ಕಪೋಲದ ಸೌಂದರ್ಯ ಹೆಚ್ಚಿಸಲಿಕ್ಕಿದೆ. ಸುಂದರ, ಸುಕೋಮಲ ಪುಷ್ಪ ಹಾರ ಅವಳ ಎದೆಯನ್ನು ಅಲಂಕರಿಸಬೇಡವೇ!
ಅಗೋ, ಶಕುಂತಲೆಯ ಕಮಲದ ದಳದಂತಹ ಕೋಮಲ ಹಸ್ತದಿಂದ ಮುಖವನ್ನು ಮರೆಮಾಚುತ್ತಿರುವಳಲ್ಲ ಈ ಸುಂದರಿ ಎಂದು ಉದ್ಗರಿಸಿದ ಸೂಕ್ಷ್ಮ ಮತಿಯಾದ ಮಿತ್ರ ವಿದೂಷಕ.
ಓಹೋ,ಭೃಂಗವೊಂದು
ಅವಳ ಮುಖವನ್ನೇ ಕಮಲ ಎಂದು ಭಾವಿಸಿ ಮಧು ಹೀರಲು ಪ್ರಯತ್ನಿಸುವಂತಿದೆ.
ಸುಂದರ ಉಪಮಾನ!
” ನನು ವಾರ್ಯತಾಮ್ ಏವ ಧೃಷ್ಟ: “
ಓ , ದುಷ್ಟನನ್ನು ದೂರಮಾಡ ಬೇಕು” ಎಂದು ದುಷ್ಯಂತ ಉದ್ಗಾರ ತೆಗೆದಾಗ ಅರಸನ ತನ್ಮಯತೆಯನ್ನು ಗುರುತಿಸ ಬಹುದು.
ತಾನು ಅಲ್ಲಿ ಪ್ರತ್ಯಕ್ಷವಾಗಿ ಇರುವೆನೆಂದೇ ಭಾವಿಸಿದ್ದಂತೆ ತೋರುವದು.
“ಅಕ್ಲಿಷ್ಟ ಬಾಲತರು ಪಲ್ಲವ ಲೋಭನೀಯಮ್ .
ಪೀತಂ ಮಯಾ ಸದಯಮೇವ
ರತತೋತ್ಸವೇಷು.
ಬಿಂಬಾಧರಂ ಸೃಷಸಿ ಚೇತ್ ಭ್ರಯರ
ಪ್ರಿಯಾಯಾ: ತ್ವಾಮ್ ಕಾರಯಾಮಿ
ಕಮಲದಲೋದರ ಬಂಧನಸ್ಥಮ್,”
” ಹೇ ಭ್ರಮರವೇ, ನನ್ನ ಪ್ರಿಯತಮೆಯ, ಮಾವಿನ ಹೊಸ ಚಿಗುರಿನಂತಿರುವ ಬಿಂಬಾಧರವನ್ನು ಮುಟ್ಟದಿರು! ಆ ಅಧರಾಮೃತ ನನಗೇ ಮೀಸಲು. ನೀನು ಆಸ್ವಾದಿಸಲು ಪ್ರಯತ್ನ ಮಾಡಿದರೆ ಕಮಲದ ಅಂತರಂಗದಲ್ಲಿ ನಿನ್ನನು ಬಂಧಿಸಿ ಬಿಡುವೆ.”
ಎಂದು ಬಡಬಡಿಸಿದನು ದುಷ್ಯಂತ.
ಚಿತ್ರದಲ್ಲಿ ಕಾಣುವ ದೃಶ್ಯ ಕಳೆದು ಹೋದದ್ದು ಎಂದು ಅವನಿಗೆ ಎನಿಸುತ್ತಿಲ್ಲ!
ಅದೆಲ್ಲ ಅವನಿಗೆ ವರ್ತಮಾನದಂತೆ ಭಾಸವಾಗುತ್ತದೆ. ವಿದೂಷಕ ಅಂದುಕೊಂಡನು
“ತನ್ನ ಸ್ವಾಮಿಗೆ ಹುಚ್ಚು ಹಿಡಿದಿದೆಯಾ?”
“ಪ್ರಜಾಗರಾತ್ಖಿಲೀ ಭೂತ: ತಸ್ಯಾ:
ಸ್ವಪ್ನೆ ಸಮಾಗಮ: .
ಬಾಷ್ಪಸ್ತು ನ ದದಾತಿ ಏನಾಂ
ದ್ರಷ್ಟುಂ ಚಿತ್ರಗತಾಮಪಿ.”
“ಸ್ವಪ್ನದಲ್ಲಿಯಾದರೂ ಅವಳ ಸಮಾಗಮ ಅನುಭವಿಸಬೇಕೆಂದರೆ
ನಿದ್ರೆಯೇ ಬರುತ್ತಿಲ್ಲ. ಚಿತ್ರಗತವಾದ ಶಕುಂತಲೆಯನ್ನು ನೋಡಬೇಕು ಎಂದರೆ ಕಣ್ಣೀರು ಅಡ್ಡಬರುತ್ತಿವೆ.”
ಇದು ದುಷ್ಯಂತನ ಗೋಳು. ಅಪ್ರತ್ಯಕ್ಷಳಾಗಿ ಇದ್ದ ಸಾನುಮತಿಗೆ ಶಕುಂತಲೆಯ ಮೇಲೆ ರಾಜನಿಗಿದ್ದ ಅಪ್ರತಿಮ ಪ್ರೀತಿಯ ಅರಿವಾಗುತ್ತದೆ.
ಬಣ್ಣದ ಕರಂಡಕ ,ಕುಂಚಗಳನ್ನು ಹಿಡಿದು ಬರುತ್ತಿರುವ ಚತುರಿಕೆಯನ್ನು ರಾಣಿ ವಸುಮತಿ ತಡೆದು, ತಾನೇ ಅರಸನಿಗೆ ಒಪ್ಪಿಸುವೆ ಎಂದು ಇಸಿದುಕೊಂಡು ಇತ್ತ ಬರುವ ಸಮಾಚಾರ ತಿಳಿಯಿತು.
ಇನ್ನು ವಸುಮತಿ ಅಲ್ಲಿ ಬಂದು ಚಿತ್ರ ನೋಡಿದರೆ ಅನಾಹುತವಾದೀತೆಂದು ದುಷ್ಯಂತ, ಅದನ್ನು ರಕ್ಷಿಸುವ ಹೊಣೆ ಮಿತ್ರ ವಿದೂಷಕಗೆ ಒಪ್ಪಿಸಿದನು.
ಅವನು ಹೊರಟು ಹೋಗುತ್ತಲೇ ಇತ್ತ ವಸುಮತಿಯ ಬದಲು ಪ್ರತೀಹಾರೀ ಒಬ್ಬನು, ಕೈಯಲ್ಲಿ ಸಂದೇಶ ಪತ್ರವೊಂದನ್ನು ಹಿಡಿದುಕೊಂಡು ಪ್ರತ್ಯಕ್ಷನಾಗುವನು.
ಅದರಲ್ಲಿರುವ ಒಕ್ಕಣೆಯನ್ನು ತಿಳಿಯಲು ಒಂದು ವಾರ ಸಾಕೇ?
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..