- ಸಾಜಿದಾ ಅಲಿಯಾಸ್ ಸಲ್ಮಾ - ಅಕ್ಟೋಬರ್ 29, 2024
- ರೇಟಿಂಗ್ ಗಳ ಧೋರಣೆ - ಅಕ್ಟೋಬರ್ 20, 2024
- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
ಮಹಾಭಾರತದ ಅರ್ಜುನನ ಗುರಿಯ ಬಗ್ಗೆಗಿನ ಕಥೆ ನಮಗೆಲ್ಲ ಗೊತ್ತೇ ಇದೆ ಅಲ್ಲವೇ ? ಗುರಿ ಯಾವುದು ಎಂದು ತಿಳಿಸಿದಾಗ ಅವನ ಕಣ್ಣು ಬರೀ ಆ ಗುರಿಯ ಮೇಲೆಯೇ ನೆಟ್ಟಿದ್ದು, ಸುತ್ತ ಮುತ್ತಲಿರುವ ಮತ್ಯಾವುದೂ ಅವನಿಗೆ ಕಾಣಲಿಲ್ಲ. ಅಂಥಾ ತೀಕ್ಷ್ಣ ಮತ್ತು ಸುನಿಶಿತ ಏಕಾಗ್ರತೆ ಅವನದ್ದು. ಹಾಗಾಗಿ ಅವನು ಆ ಕಾಲದ ಮಹಾಶ್ರೇಷ್ಠ ಧನುರ್ಧರನೆನ್ನುವ ಕೀರ್ತಿ ಗಳಿಸಿದ್ದ. ಯುಧಿಷ್ಟಿರನು ತನ್ನ ಕುರುಕ್ಷೇತ್ರದ ಯುದ್ಧ ಗೆಲ್ಲುವುದು ಅರ್ಜುನನಿಂದಲೇ ಎಂದು ನಂಬಿದ್ದ. ಈ ತರದ ತೀಕ್ಷ್ಣ ಏಕಾಗ್ರತೆ ನಾವು ಕೈಗೆತ್ತಿಕೊಳ್ಳುವ ಪ್ರತಿ ಕೆಲಸದಲ್ಲೂ ನಮಗಿರಬೇಕು ಎನ್ನುವುದು ಎಲ್ಲ ಉಪಾಧ್ಯಾಯರ, ಆಚಾರ್ಯರ ಮತ್ತು ಪ್ರೋತ್ಸಾಹಕರ ಸಲಹೆ.
ಈ ಕತೆಯನ್ನು ನಾವು ಕ್ರೀಡೆಗಳಿಗೆ ತಂದು ನೋಡೋಣ. ದೇಶವನ್ನು ಪ್ರತಿನಿಧಿಸುವ ಕ್ರೀಡಾ ತಂಡಕ್ಕೆ ತಮ್ಮ ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಲು ಆ ಸ್ಪರ್ಧೆಯ ಗುರಿಯನ್ನು ತಲುಪಬೇಕಾಗಿರುತ್ತದೆ. ಫುಟ್ಬಾಲ್ ಅಥವಾ ಹಾಕಿ ಕ್ರೀಡೆಗಳಾದರೆ ಗೋಲ್ ಹೊಡೆದು ಪಂದ್ಯ ಗೆಲ್ಲುವುದು, ಕ್ರಿಕೆಟ್ ಆದರೆ ಜಾಸ್ತಿ ಓಟ ಗಳಿಸಿ ಪಂದ್ಯ ಗೆಲ್ಲುವುದು, ಹೀಗೆ. ಈ ಸ್ಪರ್ಧೆಗಳಲ್ಲಿ ಗುರಿಯ ಮೇಲೆ ನಿಗಾ ಇಡುವುದರ ಜೊತೆಗೆ ತಾವು ದೇಶಕ್ಕೆ ತರಬೇಕಾದ ಕೀರ್ತಿ ಪ್ರತಿಷ್ಠೆಗಳು ಒಂದು ಮುಂದೂಡುವ ಪ್ರೇರಣೆಯಾಗಿ ಕೆಲಸ ಮಾಡುತ್ತದೆ. ಹಲವಾರು ದೇಶದ ಕ್ರೀಡಾಕಾರರು ಈ ಶಕ್ತಿಯ ಬಂಡವಾಳವನ್ನೇ ಹೆಚ್ಚಿಸಿಕೊಂಡು ತಮ್ಮ ಪಂದ್ಯಗಳನ್ನು ಗೆಲ್ಲುತ್ತಾರೆ. ಕೆಲ ದೇಶಗಳಲ್ಲಿ ಅಲ್ಲಿಯ ಸರಕಾರಗಳು ಈ ದೇಶಭಕ್ತಿಯನ್ನು ಕ್ರೀಡಾಪಟುಗಳಲ್ಲಿ ತೀವ್ರವಾಗಿ ಇರಬೇಕೆಂದು ಅಪೇಕ್ಷಿಸುತ್ತಾ, ಅವರು ಭಾಗವಹಿಸಿದ ಪಂದ್ಯಗಳಲ್ಲಿ ಅಥವಾ ಕ್ರೀಡೆಗಳಲ್ಲಿ ಗೆದ್ದು ಬರದೇ ಹೋದಲ್ಲಿ ತೀವ್ರ ಶಿಕ್ಷೆಗೆ ಒಳಪಡಿಸುವ ಸನ್ನಿವೇಶಗಳೂ ಇವೆ. ಏನೇ ಆಗಲಿ ದೇಶವನ್ನು ಪ್ರತಿನಿಧಿಸುವಾಗ ಕ್ರೀಡಾ ಪಟುಗಳಿಗೆ ತಮ್ಮ ಸ್ವಂತ ಪ್ರಾವೀಣ್ಯತೆಯ ಜೊತೆ ದೇಶಭಕ್ತಿ ಎನ್ನುವ ಉತ್ತೇಜಕ ತುಂಬಾ ಕೆಲಸ ಮಾಡುತ್ತದೆ ಎನ್ನುವುದು ನಿರ್ವಿವಾದ.
ನನಗೆ ಮುಂಚಿನಿಂದಲೂ ಒಂದು ಸಂಶಯ ಕಾಡುತ್ತಿತ್ತು. ಜಗತ್ತಿನಲ್ಲಿ ಅತ್ಯಂತ ಪ್ರಚಲಿತವಾದ ಮತ್ತು ತುಂಬಾ ಜನ ವೀಕ್ಷಕರನ್ನು ಹೊಂದಿರುವ ಆಟವೆಂದರೆ ಕಾಲ್ಚೆಂಡು ಅಂದರೆ ಫುಟ್ ಬಾಲ್. ನಾಲ್ಕು ವರ್ಷಕ್ಕೊಮ್ಮೆ ಆಗುವ ಈ ಆಟದ ವಿಶ್ವಕಪ್ಪಿನ ಕೊನೆಯ ಪಂದ್ಯಾವಳಿಯಲ್ಲೇ 36 ತಂಡಗಳು ಭಾಗವಹಿಸುತ್ತವೆ. ಟೊರ್ನಮೆಂಟಿನ ಪೂರ್ವ ಭಾಗವಾಗಿ ಇನ್ನೂ ಅಧಿಕ ತಂಡಗಳು ಸ್ಪರ್ಧೆಗಿಳಿಯುತ್ತವೆ. ಇದು ವಿಶ್ವಕಪ್ಪಿನ ಕತೆಯಾಯಿತು. ಈ ಪಂದ್ಯಗಳಲ್ಲಿ ಮಿಂಚಿದ ಆಟಗಾರರನ್ನು ಯೂರಪಿನ ಅನೇಕ ಕ್ಲಬ್ ಗಳು ಖರೀದಿ ಮಾಡುತ್ತವೆ ಮತ್ತು ಅವುಗಳದ್ದೇ ಆದ ಪಂದ್ಯಾವಳಿಗಳನ್ನು ನಡೆಸುತ್ತವೆ. ನಮ್ಮ ದೇಶದಲ್ಲೂ ಕಲಕತ್ತಾದ ಮೋಹನ್ ಬಗಾನ್, ಮಹಮ್ಮಡನ್ ಸ್ಪೋರ್ಟಿಂಗ್ ಮುಂತಾದ ಕ್ಲಬ್ ಗಳು ಕೆಲ ವಿದೇಶೀ ಆಟಗಾರರನ್ನು ಖರೀದಿಸಿದರೂ ಅಷ್ಟು ಪ್ರಚಾರಕ್ಕೆ ಬಂದಿಲ್ಲ. ಈ ಆಟಗಾರರ ಬಗ್ಗೆ ನನ್ನ ಸಂದೇಹ ಒಂದೇ. ಈ ತರ ಭಿನ್ನ ಭಿನ್ನ ಕ್ಲಬ್ ಗಳಿಂದ ಖರೀದಿಯಾದ ಒಂದೇ ದೇಶದ ಆಟಗಾರರ ಮನಃಸ್ಥಿತಿ ಹೇಗಿರುತ್ತದೆ? ತಮ್ಮ ದೇಶದ ಇನ್ನೊಬ್ಬ ಆಟಗಾರ ಎದುರಾಳಿಯಾದಾಗ ಅವನನ್ನು ಎದುರಿಸುವಾಗ ಅದ್ಯಾವ ಮನಃಸ್ಥಿತಿ ಇರುತ್ತದೆ ಎಂಬುದು.
ನಮ್ಮ ದೇಶದಲ್ಲಿ ಕ್ರಿಕೆಟ್ಟಿನ ಐಪಿಲ್ ಪಂದ್ಯಾವಳಿ ಪ್ರಾರಂಭವಾದ ಮೇಲೆ ಈ ತರದ ಖರೀದಿ ತುಂಬಾ ಹೆಸರಾಯಿತು. ಈ ಪಂದ್ಯಾವಳಿಯ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಈ ವರ್ಷದ ಸಂಚಿಕೆ ಶುರುವಾಗಿ ಅರ್ಧದಲ್ಲೇ ನಿಂತಿರುವುದು ಸಹ ತಿಳಿದಿದೆ. ಈ ಪಂದ್ಯಾವಳಿಯಲ್ಲಿ ಒಂದೊಂದು ತಂಡದಲ್ಲಿ ನಾಲ್ಕು ವಿದೇಶೀ ಆಟಗಾರರು ಆಡುವ ಸವಲತ್ತು ಇದೆ. ಹಾಗಾಗಿ ನಮ್ಮ ದೇಶದ ಆಟಗಾರರ ಜೊತೆಯಲ್ಲಿ ಇತರೆ ದೇಶದ ಆಟಗಾರರ ಖರೀದಿ ಸಹ ನಡೆಯುತ್ತದೆ. ಒಂದೇ ದೇಶದ ( ನಮ್ಮ ದೇಶದ ಆಟಗರರೂ ಸೇರಿ) ಆಟಗಾರರು ಬೇರೇಬೇರೇ ತಂಡಗಳಲ್ಲಿ ಖರೀದಿಯಾಗುತ್ತಾರೆ. ನಮ್ಮ ಆಟಗಾರರು ಸಹ ಅವರ ರಾಜ್ಯಗಳ ತಂಡಗಳಲ್ಲದೇ ಇತರೆ ರಾಜ್ಯಗಳ ತಂಡಗಳಲ್ಲಿ ಖರೀದಿಯಾಗುತ್ತಾರೆ. ಉದಾಹರಣೆಗೆ ನಮ್ಮ ರಾಜ್ಯದ ಆಟಗಾರರರಾದ ಕೆ.ಎಲ್. ರಾಹುಲ್ ಪಂಜಾಬ್ ತಂಡದ ನಾಯಕರಾಗಿದ್ದಾರೆ. ಅಂದರೆ ಎಲ್ಲ ಆಟಗಾರರಿಗೂ ತಮ್ಮದೇ ದೇಶದ ಮತ್ತೊಬ್ಬ ಆಟಗಾರನನ್ನು ಎದುರಾಳಿಯ ತಂಡದಲ್ಲಿ ಎದುರಿಸಬೇಕಾಗುತ್ತದೆ. ಈ ತರದ ಸಂದರ್ಭದಲ್ಲಿ ನಾನು ಶೀರ್ಷಿಕೆಯಲ್ಲಿ ಉಲ್ಲೇಖಿಸಿದ ಅರ್ಜುನನ ಗುರಿ ಅನ್ವಯವಾಗತ್ತದೆ.
ಹೇಗೆ ಎಂದು ನೋಡೋಣ. ಚೆಂಡು ಎಸೆಯುವ ಆಟಗಾರನಿಗೆ ಬರೀ ಎದುರಿಗಿದ್ದ ಮೂರು ವಿಕೆಟ್ ಮಾತ್ರ ಕಾಣಬೇಕು. ಅಲ್ಲಿ ದಾಂಡು ಹಿಡಿದು ನಿಂತ ಆಟಗಾರ ಯಾರೇ ಆಗಿರ ಬಹುದು. ಅದು ಅವನ ದೇಶದವನೇ ಅಥವಾ ಬೇರೇ ಪಂದ್ಯದಲ್ಲಿ ತನ್ನ ಸಹ ಆಟಗಾರನೇ ಆಗಿರಬಹುದು. ಅದು ನಗಣ್ಯ. ತನ್ನ ಗುರಿ ವಿಕೆಟ್ಟಿಗೆ ತಾಗುವಂತೆ ಹಾಕುವುದು. ಅದೇ ರೀತಿ ದಾಂಡು ಹಿಡಿದವನ ಕರ್ತವ್ಯವೂ ಅಷ್ಟೇ. ಅವನ ಗುರಿ ಬರೀ ಚೆಂಡು. ಅದು ಯಾರು ಎಸೆಯುತ್ತಾರೆ ಎಂಬುದು ನಗಣ್ಯ. ಅದನ್ನು ತನ್ನ ತಂಡಕ್ಕೆ ಓಟ ತಂದುಕೊಡುವ ಹಾಗೆ ದಾಂಡು ಬೀಸುವುದು ಅವನ ಕರ್ತವ್ಯ. ತಮ್ಮ ದೇಶದವರೇ ಅಥವಾ ರಾಜ್ಯದವರೇ ಅಥವಾ ತಂಡದವರೇ ಆದ ಆಟಗಾರರ ಬಲ ಮತ್ತು ಬಲಹೀನತೆಗಳ ಬಗ್ಗೆ ತಿಳಿದಿರುತ್ತದೆ ಆಟಗಾರನಿಗೆ. ಆದಕಾರಣ ಅದನ್ನು ತನ್ನ ಬಂಡವಾಳವನ್ನಾಗಿಸಿಕೊಂಡು ತಾನು ಆಡುತ್ತಿರುವ ತಂಡದ ಪ್ರಯೋಜನಕ್ಕಾಗಿ ಆಡುವುದು ಪ್ರತೀ ಆಟಗಾರನ ಕರ್ತವ್ಯ. ಹಾಗಾದರೆ ಇಲ್ಲಿ ಗುರಿಯ ಮೇಲಿನ ಏಕಾಗ್ರತೆ ಎಷ್ಟು ಮುಖ್ಯ ಅಂತ ನಮಗೆ ಅರ್ಥವಾಗುತ್ತದೆ. ನಾವು ನಮ್ಮ ದೇಶದ ಆಧ್ಯಾತ್ಮಿಕ ಪಂಥದಲ್ಲಿ ಈ ತರದ ನಿರ್ವಿಕಾರ ಭಾವನೆಯ ಬಗ್ಗೆ ಓದುತ್ತೇವೆ, ತಿಳಿದುಕೊಳ್ಳುತ್ತೇವೆ. ಆದರೆ ವಿದೇಶೀ ಆಟಗಾರರು ಇದರ ಬಗ್ಗೆ ತಿಳಿಯದೆಯೇ ಈ ತರದ ಭಾವವನ್ನು ಹೊಂದಿ, ಪಂದ್ಯಾವಳಿಗಳಲ್ಲಿ ಆಡುತ್ತ ಹೆಸರು ಗಳಿಸುತ್ತಿದ್ದಾರೆ. ಅಂದರೆ ನಮಗೆ ಅರ್ಥವಾಗುವುದು ಆಟಗಾರರ ಕ್ರೀಡಾಸ್ಫೂರ್ತಿ. ಅವರಿಗೆ ಆಟ ಮುಖ್ಯ. ಎದುರಾಳಿಯಲ್ಲ.
ಈ ತರದ ಭಾವನೆ ಎಲ್ಲ ಆಟಗಾರರಲ್ಲಿ ಹುಟ್ಟು ಹಾಕುತ್ತಿರುವ ಈ ಪಂದ್ಯಾವಳಿಗಳ ಬಗ್ಗೆ ನನ್ನ ಗೌರವ ಜಾಸ್ತಿಯಾಗಿದೆ ಎನ್ನ ಬಹುದು. ನಮಸ್ಕಾರ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ