- ಒದ್ದೆ ಹಕ್ಕಿಯ ಹಾಡು ಮತ್ತು ಇನ್ನೆರಡು ಕವಿತೆಗಳು - ಸೆಪ್ಟೆಂಬರ್ 11, 2025
- ಹುಣ್ಣಿಮೆ ರಾತ್ರಿ ದೇವರಾಡುವನು - ಜನವರಿ 1, 2025
- ಮರಿಹಕ್ಕಿ ಮರಳಿತು ಕಾಡಿಗೆ… - ಅಕ್ಟೋಬರ್ 29, 2024
ಡಾ. ಚಿಂತಾಮಣಿ ಕೊಡ್ಲೆಕೆರೆ ಅವರ ಮೂರು ಕವಿತೆಗಳ ವಿಶೇಷ ಪ್ರಸ್ತುತಿ ನಮ್ಮ ಕಾವ್ಯಸಕ್ತರಿಗಾಗಿ.
೧. ಒದ್ದೆ ಹಕ್ಕಿಯ ಹಾಡು
ಒದ್ದೆ ಹಕ್ಕಿ ರೆಕ್ಕೆ ಕೊಡವಿ
ಕುಪ್ಪಳಿಸಿದೆ ಅಲ್ಲೆ
ಕತ್ತಾಡಿಸಿ ಹೇಳುತಿದೆ
ಈಗ ಹಾಡಲೊಲ್ಲೆ
ಮತ್ತೆ ಮಳೆ ಸುರಿಯಬಹುದು
ನೋಡಬೇಕು ನಾನು
ಮಳೆ ನೀರಲಿ ನೆನೆಯಬೇಕು
ಆಡಬೇಕು ನಾನು
ಮಳೆ ನೀರಲಿ ಮುಳುಗಿ ಎದ್ದು
ಮತ್ತೆ ಮರದ ಮರೆ
ಮೈ ಕೊಡವುತ ನನ್ನೊಳಗೇ
ಇರಬಯಸುವೆ ಖರೆ
ಬೆಳಗಾಗಲಿ ಮತ್ತೆ ಹೊಸದು
ಹಾಡು ತರುವೆ ನಾನು
ಒಂದು ರಾತ್ರಿ ನನಗೆ ಕೊಡಿ
ಕಾಯಲಾರಿರೇನು?
೨. ಒಡಲ ನುಡಿಗಳು


ನಮ್ಮ ದಾರಿಗಳೀಗ ಬೇರೆಯಾಗುತಿವೆ
ಮುಂದೊಮ್ಮೆ ಸಿಕ್ಕಬಹುದು!
ಆಡದೆ ಮಾತುಗಳು ಒಳಗುಳಿದು ಬಿಟ್ಟವು
ಸಿಕ್ಕಲ್ಲಿ ಹೇಳಬಹುದು!
ಮೂರು ದಿನ ಒಡನಿದ್ದು ಮನ ಬಿಚ್ಚಲಿಲ್ಲ
ಈಗಂತು ತಡವಾಯಿತು
ನಿಮ್ಮಂಥ ಜನ ಜೊತೆಗೆ ಸಿಕ್ಕಿದ್ದು ಭಾಗ್ಯ
ನನಗೀಗ ನೆನಪಾಯಿತು!
ದಾರಿಬದಿ ಮನೆಗಳಲಿ ಕೆಲವು ದಿನ ಮಾತ್ರ
ಆಮೇಲೆ ಹೊರಡಬೇಕು
ಅದು ನನಗೆ ಗೊತ್ತಿದೆ. ಆದರೂ ಹೀಗೆ..
ನನ್ನನು ಕ್ಷಮಿಸಬೇಕು
ಅರೆಗಳಿಗೆ ಉಳಿದಿದೆ ಹೊರಹೆಜ್ಜೆಯಿಡಲು
ಕಿವಿಮಾತು ಹೇಳಬಹುದು:
“ಒಡಲ ನುಡಿಗಳ ಆಡಿ – ತಡ ಮಾಡಬೇಡಿ
ಪಯಣವೇ ಮುಗಿಯಬಹುದು”
೩. ಕೆಟ್ಟಿದ್ದು ಕಾಲವಲ್ಲ
ಕಾಲ ಕೆಟ್ಟಿತು ಎಂದು ಮರುಗುವುದು ಕೇಳಿದೆ
ಕೆಟ್ಟಿದ್ದು ಕಾಲವಲ್ಲ
ಕೆಟ್ಟಿದ್ದು ಏನೆಂದು ಎಲ್ಲರಿಗು ಗೊತ್ತಿದೆ
ಸುಳ್ಳೊಡನೆ ಸಖ್ಯ ಸಲ್ಲ
ಮಳೆಗಾಲ ಚಳಿಗಾಲ ಬೇಸಿಗೆಗಳಾವರ್ತ
ನಡೆಯುತಿದೆ ಎಂದಿನಂತೆ
ಸೂರ್ಯ ಹುಟ್ಟಿದ್ದಾನೆ ಏರಿ ಇಳಿದಿದ್ದಾನೆ
ಮತ್ತೆ ನಿಮಗೇನು ಚಿಂತೆ?
ಗಾಳಿ ಬೀಸುತಲಿದೆ ಹಿಂದಿನಂತೇ ಇಂದೂ
ಧೂಳು ಬೆರೆಸಿದೆವು ನಾವು
ಆಕಾಶ ನೋಡದೆ ವರುಷಗಳೆ ಕಳೆದವು
ರಸಹೀನವಾಯ್ತು ಬಾಳು
ಕಾಡುಮರಗಳ ಕಡಿದು ಬೋಳಾಗಿಸಿದೆವು
ನೆಲ ಕುಸಿಯೆ ತಡೆಯಬಹುದೆ?
ಕೈಯಾರೆ ವಿಷವಿತ್ತು ಜೀವನದಿಗಳಿಗೆ
ಸಿಹಿನೀರ ಕುಡಿಯಬಹುದೆ?
ತಿಂದು ತೇಗಿಯು ನಮಗೆ ತೀರಲಾರದ ಹಸಿವೆ!
ದೂರುವೆವು ಕಾಲವನ್ನು!
ಪೊಡವಿ ಸುಡುತಿದೆ ನೋಡಿ ನಮ್ಮನೂ ದಹಿಸಿ
ಉಳಿಯುವುದು ಸುಟ್ಟ ಮಣ್ಣು!
ಕಾಲ ಕೆಟ್ಟಿತು ಎಂದು ಗೊಣಗುವುದು ಒಣಮಾತು
ಕೆಟ್ಟಿದ್ದು ಕಾಲವಲ್ಲ
ಕೆಟ್ಟಿದ್ದು ನಾವೆಂದು ನಮ್ಮೊಳಗೇ ಗೊತ್ತಿದೆ
ಸತ್ಯ ನಮಗಿಷ್ಟವಿಲ್ಲ
ಹೆಚ್ಚಿನ ಬರಹಗಳಿಗಾಗಿ
ಸಂಕ್ರಾಂತಿ
ಹುಣ್ಣಿಮೆ ರಾತ್ರಿ ದೇವರಾಡುವನು
ಮಹಾಸಾಗರವಾದಳು