- ಎಡಿನ್ ಬರೋನಲ್ಲಿ ಒದ್ದೆ ಬಟ್ಟೆ ಒಣಗಿಸಿದ್ದು - ಆಗಸ್ಟ್ 8, 2021
- ಕುಮಾರವ್ಯಾಸ ಭಕ್ತಿರಸ ಚಿತ್ರಣ - ಆಗಸ್ಟ್ 14, 2020
ಈಗಷ್ಟೇ ಮಳೆಯ ಅಬ್ಬರ ಇಳಿಮುಖವಾಗಿದೆ. ಮಳೆಗಾಲ ಬಂದಾಗ, ಎಷ್ಟೇ ಎಚ್ಚರವಹಿಸುವವರಾಗಿದ್ದರೂ ಮಳೆರಾಯನ ಅನಿರೀಕ್ಷಿತ ಧಾಳಿಗೆ ಸಿಲುಕಿ ಒಮ್ಮೆಯಾದರೂ ಎಲ್ಲರಿಗೂ ತೋಯ್ದು ತೊಪ್ಪೆಯಾದ ಅನುಭವ ಆಗಿಯೇ ಇರುತ್ತದೆ . ಅಂತಹ ಕೆಲವು ಅನುಭವಗಳ ಕಥನ ಇಲ್ಲಿ ನಿಮ್ಮೊಡನೆ.
ಲೇಖಕಿ ಶಾಂತಾ ನಾಗಮಂಗಲ
ಎಡಿನ್ ಬರೋನಲ್ಲಿ ಒದ್ದೆ ಬಟ್ಟೆ ಒಣಗಿಸಿದ್ದು
ಏನಿದು ? ಎಡಿನ್ ಬರೋನಲ್ಲಿ ಇವರೇನಾದರೂ ಲಾಂಡ್ರಿ ಸರ್ವೀಸ್ ಮಾಡುವವರಾ ? ಎಂದು ನಿಮಗೆ ಅನ್ನಿಸಬಹುದು. ಇಲ್ಲ ಮಾರಾಯರೇ ಯಾವ ಸರ್ವೀಸೂ ಇಲ್ಲ. ಆದರೆ ಒದ್ದೆ ಬಟ್ಟೆ ಒಣಗಿಸಿದ್ದಂತೂ ನಿಜ.
ಈಗ್ಗೆ ಸುಮಾರು ೧೦ ವರ್ಷಗಳ ಕೆಳಗೆ ಯೂರೋಪ್ ಟೂರಿಗೆ ಹೋಗಿದ್ದಾಗ ನಡೆದದ್ದು ವರುಣ ಕೃಪಾಪೋಷಿತ ಈ ರಜಕ ಪ್ರಸಂಗ. ಆಗ ಸ್ಕಾಟ್ಲಾಂಡ್ ನ ಎಡಿನ್ ಬರೋ ನೋಡಲೆಂದು ಹೋಗಿದ್ದೆವು. ಬೆಳಗಿನ ೧೦ ಘಂಟೆ ಸುಮಾರಿಗೆ ಎಡಿನ್ ಬರೋ ವಿಮಾನ ನಿಲ್ದಾಣದಲ್ಲಿಳಿದೆವು. ಇಳಿದಾಗಲೇ ಮಳೆ ಸುರಿಯುತ್ತಿತ್ತು. ವಸತಿಯನ್ನು ಮೊದಲೇ ಕಾದಿರಿಸಿದ್ದೆವಾದ್ದರಿಂದ, ನಮ್ಮ ಲಗ್ಗೇಜನ್ನು ಮೊದಲು ಹೋಟೆಲ್ನಲ್ಲಿರಿಸಿ ಬಳಿಕ ಸುತ್ತಾಡಲು ಹೋಗೋಣ ಎಂದು ತೀರ್ಮಾನಿಸಿ, ಆ ಹೋಟೆಲ್ ( ಅದೊಂದು ಮನೆಯೇ , ಅದನ್ನು ಲಾಡ್ಜ್ ರೀತಿ ಮಾಡಿದ್ದರು ) ಗೆ ಫೋನ್ ಮಾಡಿದರೆ, ಅವರು ಚೆಕ್ ಇನ್ ಇರುವುದು ೧೨ ಘಂಟೆಗೆ, ಅದಕ್ಕೆ ಮೊದಲು ನಾವು ರೂಮಿಗೆ ಹೋಗಲು ಅವಕಾಶ ಮಾಡಿಕೊಡಲಾರೆವು ಎಂದು ಬಿಟ್ಟರು.
ಲಗ್ಗೇಜನ್ನು ಇರಿಸಲೂ ಒಪ್ಪಲಿಲ್ಲ. ಸರಿ ವಿಧಿಯಿಲ್ಲದೇ ನಮ್ಮೆಲ್ಲ ಸರಕು-ಸಾಂಭಾರದ ಜೊತೆಯಲ್ಲೇ ಎಡಿನ್ ಬರೋ ಕ್ಯಾಸಲ್ ನೋಡಲು ಹೊರೆಟೆವು. ಚಕ್ರಗಳಿರುವ ಸೂಟ್ ಕೇಸ್ ಗಳನ್ನು ಎಳೆದು ಕೊಂಡೆ ಎಡಿನ್ ಬರೋ ದ ಸುಂದರ ಬೀದಿಗಳಲ್ಲಿ , ಅಲ್ಲಿನ ವಿಶಿಷ್ಟ ವಿನ್ಯಾಸದ ಕಲ್ಲುಕಟ್ಟಡಗಳು, ಅಂಗಡಿಗಳು, ಜನಜೀವನ – ಎಲ್ಲವನ್ನೂ ನೋಡುತ್ತಾ ನಡೆದೆವು. ನಾವೇನೂ ರೈನ್ ಕೋಟ್ ಗಳನ್ನು ಹಾಕಿಕೊಂಡಿದ್ದೆವು. ಆದರೆ ಸೂಟ್ ಕೇಸ್ ಗೆ ಯಾವ ರಕ್ಷಣಾ ಕವಚವೂ ನಮ್ಮ ಬಳಿ ಇರಲಿಲ್ಲ. ಪಾಪ ಅವು ನಮ್ಮ ಹಿಂದೆ ಮಳೆಯಲ್ಲೇ ನೆನೆದು ಕೊಂಡು ಬರುತ್ತಿದ್ದವು. ಅಂತೂ ಹೀಗೆಯೇ ಕ್ಯಾಸಲ್ ನ್ನು ನೋಡಿ ಮುಗಿಸಿ, ಹೋಟೆಲ್ಗೆ ಬಸ್ ಹಿಡಿದು ಹೋದೆವು. ರೂಮಿಗೆ ಹೋಗಿ, ನಮ್ಮ ಒದ್ದೆ ಬಟ್ಟೆಗಳನ್ನು ಬದಲಾಯಿಸೋಣ ಎಂದು ಸೂಟ್ಕೇಸ್ಗಳನ್ನ ತೆಗೆದರೆ … ಅಲ್ಲಿ ಅಚ್ಚುಕಟ್ಟಾಗಿ ಜೋಡಿಸಿದ್ದ ಮುಕ್ಕಾಲು ಬಟ್ಟೆಗಳೆಲ್ಲಾ ಒದ್ದೆಮುದ್ದೆ. ಏನು ಮಾಡುವುದು ? ಇನ್ನು ಒಂದುವಾರದ ಪ್ರವಾಸ ಬಾಕಿಯಿತ್ತು. ನಾವಿದ್ದ ಕೊಠಡಿ ಅಷ್ಟೇನು ದೊಡ್ಡದಲ್ಲ. ರೂಮ್ ಹೀಟರ್ ಕೇಳಿ ಪಡೆಯಬೇಕಾಗಿತ್ತು. ಸರಿ ಕೆಳಗೆ ಹೋಗಿ , ಅಷ್ಟೇನೂ ಗ್ರಾಹಕ ಸ್ನೇಹಿಯಲ್ಲದ ಹೋಟೆಲ್ ನವರನ್ನು ಕಾಡಿ ಬೇಡಿ ಹೀಟರ್ ತಂದು ಅದರ ಮುಂದೆ ಹಪ್ಪಳ ಒಣಗಿಸುವಂತೆ ನಮ್ಮ ಬಟ್ಟೆಗಳನ್ನು ಒಣಗಿಸುತ್ತಾ ಆ ದಿನವೆಲ್ಲಾ ಕಳೆದದ್ದಾಯಿತು. ಮರುದಿನ ಹಾಕಿಕೊಳ್ಳಲು ಗರಿಗರಿಯಾದ್ದಲ್ಲದಿದ್ದರೂ, ಒದ್ದೆಯಲ್ಲದ ಉಡುಪುಗಳ ವ್ಯವಸ್ಥೆಯಾಯಿತಲ್ಲ ಎಂದು ನೆಮ್ಮದಿಯಿಂದ ಮಲಗಿದೆವು.
ಅವಳ ಉಡುಗೆ ಇವಳಿಗಿಟ್ಟ ಮಳೆ
ಚೆನ್ನೈಗೆ ಮಳೆ ಬರುವುದು ಈಶಾನ್ಯ ಮಾರುತಗಳಿಂದ. ಈ ಮಾರುತಗಳು ಮಳೆ ಸಕಾಲದಲ್ಲಿ ಮಳೆ ಸುರಿಸಿದರೂ ಸುರಿಸದೇ ಹೋದರೂ, ಈ ನಗರದ ಒಡಲಲ್ಲೇ ಇರುವ ಸಮುದ್ರದಲ್ಲಿ ಆಗ್ಗಾಗ್ಗೆ , ಯಾವಾಗಂದರೆ ಆಗ ಉಂಟಾಗುವ ವಾಯುಭಾರದೊತ್ತಡ, ಎಲ್ಲೋ ಹುಟ್ಟಿ ಭರದಿಂದ ಧಾವಿಸಿ ಬರುವ ಚಂಡಮಾರುತಗಳಿಂದ ಸುರಿಯುವ ಮಳೆಗಳಿಗೆ ಲೆಕ್ಕವೇ ಇಲ್ಲ. ಈ ಮಳೆಯ ಸುರಿತಕ್ಕೆ ಮಾನ್ಸೂನ್ ಮಳೆಯಂತೆ ನಿಗದಿಯಾದ ಕಾಲದ ಹಂಗಿಲ್ಲ. ಈ ಅನಿರೀಕ್ಷಿತ ಅತಿಥಿಯನ್ನು ಎದುರುಕೊಳ್ಳುವ ಸಿದ್ಧತೆಯೂ ಸ್ವಲ್ಪ ಅನಿಶ್ಚಿತವೇ. ಹೀಗೆ ಒಮ್ಮೆ ಇಂಥಹ ಅನಿಶ್ಚಿತವಾದ ಮಳೆರಾಯನ ನನಗೆ ಅಕಾಲದಲ್ಲಿ ಸ್ನಾನಮಾಡಿಸಿ ಪಾವನಗೊಳಿಸಿದ್ದಾ ಅನುಭವ ಮಾತ್ರ ಮರೆಯಲಾಗದ್ದು.
ಟಿ. ನಗರದಲ್ಲಿರುವ ದಕ್ಷಿಣಭಾರತ ಹಿಂದಿ ಪ್ರಚಾರ ಸಭೆಯಲ್ಲಿ ಕೆಲಸಮಾಡುತ್ತಿದ್ದ ನಾನು, ಅಂದೂ ಸಹ ಎಂದಿನಂತೆ ಅಂದೂ ಕೆಲಸಕ್ಕೆಂದು ,ಹೊರಟಿದ್ದೆ ಸ್ಕೂಟಿಯನ್ನೇರಿ. ತಿರುವಾನ್ಮಿಯೂರಿಂದ ನಂದನಂ ಸಿಗ್ನಲ್ ವರೆಗೆ ಬರುವವರೆಗೂ ಆಕಾಶವೆಲ್ಲಾ ತೊಳೆದಿಟ್ಟ ಓಡಿನಂತೆ ಶುಭ್ರವಾಗಿತ್ತು.
ನಂದನಂ ಸಿಗ್ನಲ್ ನಲ್ಲಿ ಕಾಯುತ್ತಾ ನಿಂತಿದ್ದಾಗ ಎಲ್ಲಿಂದ ಬಂದವೋ ಮೋಡಗಳು ಗೊತ್ತಿಲ್ಲ. ಅರೆಗತ್ತಲು ಮುಸುಕಿದಂತಾಗಿ ಇದ್ದಕಿದ್ದಂತೆ ಜಿಟಿ ಜಿಟಿ ಎಂದು ಮಳೆಹನಿಗಳು ಬೀಳತೊಡಗಿದವು. ನಿಧಾನವಾಗಿ ಶುರುವಾದ ಮಳೆ ವೇಗಪಡೆದುಕೊಂಡು ಸುರಿಯತೊಡಗಿತು. ನಂದನಂ ಸಿಗ್ನಲ್ ನಿಂದ ನನ್ನ ಕಛೇರಿ ವಾಹನದಲ್ಲಿ ಕೇವಲ ೫ ನಿಮಿಷಗಳ ಹಾದಿಯಷ್ಟೇ. ಸರಿ ಹಸಿರು ನಿಶಾನೆ ಬಿದ್ದು, ೫ ನಿಮಿಷದಲ್ಲಿ ಸೇರಿದರೆ ಆಯಿತು ಎಂದು ಕಾಯುತ್ತಿದ್ದೆ. ಸಿಗ್ನಲ್ ತೆರೆಯಿತು. ಮುಂದೆ ವಾಹನಗಳೇ ಕಾಣದಷ್ಟು ಮಳೆ. ಹೇಗೋ ಹೊರಟಾಯಿತು. ಅವತ್ತು ಅದೆಷ್ಟು ಮಳೆ ಸುರಿಯಿತೆಂದರೆ, ಕಛೇರಿ ತಲುಪುವೊದರಳೊಗೆ ನಾನು ಇಳಿಯ ಬಳಿಯ ತೋಯ್ದು ಹೋಗಿದ್ದೆ. ಉಟ್ಟ ಸೀರೆಯೆಲ್ಲಾ ಮುದುರಿ ಒಂದುಕಡೆ ಸೇರಿ, ಪೈಪಿನಂತೆ ಅದರಿಂದ ನೀರು ಹರಿಯುತ್ತಿತ್ತು. ಇನ್ನು ಹೇಗೆ ಕೆಲಸ ಮಾಡುವುದು ? ಮನೆಗೆ ಮರಳಿಬಿಡೋಣವೆಂದರೆ ಮಳೆರಾಯ ಆರ್ಭಟಿಸುತ್ತಿದ್ದಾನೆ. ಏನಾದರಾಗಲಿ ಎಂದು ಕಛೇರಿಗೆ ಹೋದೆ. ಪುಣ್ಯಕ್ಕೆ ಅಲ್ಲಿದ್ದ ನನ್ನ ಸಹೋದ್ಯೋಗಿಯೊಬ್ಬಳದು, ಅದೇ ಕ್ಯಾಂಪಸ್ ನ ಕ್ವಾರ್ಟರ್ಸ್ ನಲ್ಲಿ ವಸತಿಯಿತ್ತು. ಅವಳ ಜೊತೆ ಹೋಗಿ ಪೂರ್ತಿಯಾಗಿ ಅವಳದೇ ಸೀರೆ ಉಟ್ಟು ಅಂದಿನ ದಿನವನ್ನು ತಳ್ಳಿದ್ದಾಯಿತು. ಅಂದಿನಿಂದ ನನ್ನ ಸ್ಕೂಟಿಯಲ್ಲಿ ಒಂದು ಬದಲೀ ಉಡುಪಿನ ವ್ಯವಸ್ಥೆ ಮಾಡಿಕೊಂಡೆ ಎನ್ನಿ.
ಒಪ್ಪಾರೇ ಕುಸಿವಂತಾಗಿದ್ದು
ನಾವಾಗ ತಮಿಳುನಾಡಿನ ಮೆಟ್ಟೂರು ಅಣೆಯ ಸಮೀಪದ ಒಂದು ಕೈಗಾರಿಕಾ ವಸತಿ ಸಮುಚ್ಚಯದಲ್ಲಿದ್ದೆವು. ನಮ್ಮ ಮನೆಗೆ ಬರುವ ಬಂಧು ಮಿತ್ರರೆಲ್ಲರನ್ನೂ ಮೆಟ್ಟೂರು ಜಲಾಶಯವನ್ನೂ, ಸಮೀಪದಲ್ಲೇ ಇದ್ದ ಹೋಗೇನಕಲ್ ಜಲಪಾತವನ್ನೂ ತೋರಿಸಲು ಕರೆದುಕೊಂಡು ಹೋಗುವುದು ವಾಡಿಕೆಯಾಗಿತ್ತು. ಈ ಎರಡು ಆಕರ್ಷಣೆಗಳನ್ನು ಬಿಟ್ಟರೆ ಅಲ್ಲಿ ಇನ್ನೇನೂ ತೋರಿಸಲು ಇರಲೂ ಇಲ್ಲ. ಹೀಗೆ ಒಮ್ಮೆ ನಮ್ಮಲ್ಲಿಗೆ ಬಂದಿದ್ದ ನಮ್ಮ ಭಾವ, ಓರಗಿತ್ತಿ ಮಕ್ಕಳನ್ನು ಕರೆದು ಕೊಂಡು ಮೆಟ್ಟೂರು ಜಲಾಶಯಕ್ಕೆ ಹೋಗಿದ್ದೆ. ಆಗ ಕಾರು ಬೋರು ಏನೂ ಇರದಿದ್ದ ಕಾಲ . ಟೌನ್ ಬಸ್ ಎಂದು ಕರೆಯುತ್ತಿದ್ದ ಸ್ಥಾನೀಯ ಪರಿವಹನದಲ್ಲೇ ಹೋಗಿದ್ದೆವು. ಮಧ್ಯಾಹ್ನ ೧೨ ರ ಹೊತ್ತಿಗೇ ಊಟಮಾಡಿ ಹೊರಟು, ಜಲಾಶಯದ ಕೆಳಗಿರುವ ಪಾರ್ಕ್ ಲ್ಲಿ ಸುತ್ತಾಡಿದೆವು. ಹೂವು, ಮರಗಳು, ವಿತಾನಗಳು ಈ ಯಾವ ಆಕರ್ಷಣೆಯೂ ಅಲ್ಲಿರಲಿಲ್ಲ. ಆದರೆ ನಮ್ಮ ಮಕ್ಕಳಿಗೆ ಜಾರುಗುಪ್ಪೆ, ಜೋಕಾಲಿ, ಟಕ್ಕಾ-ಟಿಕ್ಕಿ ಎಲ್ಲಾ ಇದ್ದವು. ಖುಶಿಯಾಗಿ ಮಕ್ಕಳು ಆಡ ತೊಡಗಿದರು. ಜಲಾಶಯದ ಮೇಲೆ ಹೋಗುವ ವ್ಯವಸ್ಥೆ ಇರಲಿಲ್ಲ. ಅಲ್ಲೇ ಇದ್ದ ಕಾಲುವೆ ಅಲ್ಲಿಂದ ಭೋರ್ಗರೆದು ಮೆಟ್ಟಲು ಮೆಟ್ಟಲುಗಳ ಮೇಲೆ ಕುಣಿ ಕುಣಿದು ಹರಿದು ಹೋಗುತ್ತಿದ್ದ ಬೆಳ್ನೊರೆಯ ನೀರನ್ನು ನೋಡಿಯಾಯಿತು. ಆಗಲೇ ನಾಕು ಘಂಟೆಯಾಗ್ತಾ ಬಂತು. ಅದು ಮಾರ್ಚ್ ತಿಂಗಳ ಕೊನೆ ಬೇರೆ. ಮೇಟ್ಟೂರಿನಲ್ಲಿ ಆ ತಿಂಗಳಲ್ಲಿ ಮಳೆ ಬರುತಿತ್ತು. ಆದರೆ ಸಂಜೆ ಮೇಲೆ ಮಳೆ ಹಿಡಿಯೋದು ವಾಡಿಕೆ. ಬೀಸುತ್ತಿದ್ದ ಗಾಳಿಯಿಂದಾಗಿ ಆಗಸದಲ್ಲಿ ಮೋಡವೂ ಕೂಡುತ್ತಿದ್ದವು.
ಸರಿ ಬೇಗ ಮನೆ ಸೇರಿ ಬಿಡೋಣ ಎಂದು ಮಕ್ಕಳನ್ನು ಹೊರಡಿಸಿಕೊಂಡು ಹೊರಟೆವು. ಉದ್ಯಾನವನದ ಮುಖ್ಯದ್ವಾರಕ್ಕೆ ಬರುವ ವೇಳೆಗೆ ಗಾಳಿಯ ವೇಗ ಜಾಸ್ತಿಯಾಗಿ ತೊಟ ತೊಟ ತೊಟ ಎಂದು ದಪ್ಪ ದಪ್ಪ ಮಳೆಹನಿಗಳು ಶುರೂನೇ ಆಗಿಬಿಡ್ತು. ಬಸ್ ನಿಲ್ದಾಣದ ವರೆಗೆ ನಮ್ಮ ಹತ್ತಿರ ಇದ್ದ ಒಂದು ಛತ್ರಿಯಲ್ಲಿ ಹೋಗಲು ಸಾಧ್ಯವಿರಲಿಲ್ಲ. ಗಾಳಿಯ ಹೊಡೆತ ಮಳೆಗಿಂತಲೂ ತೀವ್ರವಾಗಿತ್ತು. ವಿಧಿಯಿಲ್ಲದೇ ಅಲ್ಲೇ ಇದ್ದ ಒಂದು ಟೀ ಅಂಗಡಿಯ ಒಪ್ಪಾರಿನ ಕೆಳಗೆ ನಿಂತೆವು. ಗಾಳಿ ಮಳೆಯ ಬಿರುಸು ಎಷ್ಟಿತ್ತೆಂದರೆ ಆ ಮುಂದಿನ ಒಪ್ಪಾರಿಗೆ ಆಧಾರವಾಗಿದ್ದ ಬೊಂಬು, ಇನ್ನೇನು ಮೇಲಿದ್ದ ಸೋಗೆಗರಿ ಛಾವಣಿ ತಲೆಯ ಮೇಲೆ ಕುಸಿಯುವುದೋ ಎಂಬಂತೆ ಅಲುಗಾಡಲಾರಂಬಿಸಿತು. ಅಂಗಡಿಯವ ಓಡಿ ಬಂದು ಆ ಬೊಂಬನ್ನು ಹಿಡಿದುಕೊಂಡು, ನಮ್ಮ ಭಾವನವರನ್ನೂ ಹಿಡಿದು ಕೊಳ್ಳಲು ಹೇಳಿದ. ನಮಗೆ ವಿಪರೀತ ಘಾಬರಿ ಆತಂಕ. ಮಕ್ಕಳೂ ಛಳಿ-ಗಾಳಿಯ ಜೊತೆ ಭಯವೂ ಸೇರಿ ನಡುಗತೊಡಗಿದವು. ಮನಸ್ಸಿನಲ್ಲಿ ದೇವರನ್ನು ನೆನೆಯುತ್ತಾ, ಜೊತೆಗೆ ರಾಚುತ್ತಿದ್ದ ಇರಚಲಿನಲ್ಲಿ ನೆನೆಯುತ್ತಾ ನಿಂತೆವು. ಈ ಮಳೆಗಾಳಿಗಳ ರುದ್ರನರ್ತನ ಸುಮಾರು ಒಂದು ಘಂಟೆ ನಡೆದು ನಿಧಾನವಾಗಿ ನಿಂತಿತು. ಆ ಛಾವಣಿಗೆ ಆಧಾರವಾಗಿದ್ದ ಬೊಂಬೂ ಸದ್ಯ ನಿಂತೇ ಇತ್ತು. ಆಗಸವು ಏನೂ ನಡೆದೇ ಇಲ್ಲವೇನೋ ಎಂಬಂತೆ ಹೊಳವಾಯಿತು. ಏನೂ ಆಗಬಾರದ್ದು ಆಗಲಿಲ್ಲವಲ್ಲ ಎಂಬ ನೆಮ್ಮದಿಯೊಂದಿಗೆ ಮನೆಗೆ ಮರಳಿದ್ದಾಯಿತು. ಈಗಲೂ ನಾವು ಓರಗಿತ್ತಿಯರು ಒಟ್ಟಿಗೆ ಸೇರಿದಾಗ ಈ ನಮ್ಮ ಮಳೆಯ ಅನುಭವವನ್ನು ನೆನೆಯುತ್ತೇವೆ.
ಹೆಚ್ಚಿನ ಬರಹಗಳಿಗಾಗಿ
ದಡಗ ಗ್ರಾಮದ ಇತಿಹಾಸ
ಅರಿಶಿನಗುಂಡಿ ಜಲಪಾತ
ಟಿಬೆಟಿಯನ್ ಕ್ಯಾಂಪಿಗೆ ಭೇಟಿ