ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಜ್ಜನ ಯುಗಾದಿ.

ಅಬ್ಳಿ ಹೆಗಡೆ
ಇತ್ತೀಚಿನ ಬರಹಗಳು: ಅಬ್ಳಿ ಹೆಗಡೆ (ಎಲ್ಲವನ್ನು ಓದಿ)

ಮಬ್ಬು ಬೆಳಕ ಹಾದಿಯಲ್ಲಿ
ಸಂಜೆ ಕೆಂಪು ಬೀದಿಯಲ್ಲಿ
ಅಜ್ಜನೊಬ್ಬ ತಗ್ಗಿ,ಬಗ್ಗಿ
ಹುಡುಕುತಿದ್ದನು.

ಕೈಯ್ಯಲೊಂದು ಕೋಲು ಹಿಡಿದು
ನಡೆದು ಕಾಲು ನೋಯುತಿರಲು
ಕಳೆದ ನೆನಪ ರಾಶಿಯನ್ನು
ಕೆದಕುತಿದ್ದನು.

ಸುತ್ತ, ಮುತ್ತಲೆಲ್ಲ ತಿರುಗಿ,
ಮೂಲೆ, ಮೂಲೆಯಲ್ಲು ಜರುಗಿ
ಕಾಂತಿಯಿರದ ಕಣ್ಣಿನಿಂದ
ನೋಡುತಿದ್ದನು.

ಕಳೆದುಕೊಂಡ ವಸ್ತುವನ್ನು
ಪಡೆವ ಆಸೆ ಮನದ ತುಂಬ
ಬೇಗ ಸಿಗಲು ದೇವರಲ್ಲಿ
ಬೇಡುತಿದ್ದನು.

ಹುಡುಕಿ,ಹುಡುಕಿ ದಣಿದ ದೇಹ
ದಾರಿ ಬದಿಯ ಕಟ್ಟೆ ಮೇಲೆ
ತನ್ನ ಸ್ಥಿತಿಗೆ ತಾನೇ ನೊಂದು
ಕುಳಿತು ಬಿಟ್ಟನು.

ಸ್ವಲ್ಪ ದೂರ ಬಯಲಿನಲ್ಲಿ
ತಂಪು ಸಂಜೆ ಬೆಳಕಿನಲ್ಲಿ
ಆಡುತಿರುವ ಚಿಣ್ಣರೆಡೆಗೆ
ದೃಷ್ಟಿ ನೆಟ್ಟನು.

ಕುಳಿತ ಅಜ್ಜನನ್ನು ಕಂಡು
ಚಿಣ್ಣನೊಬ್ಬ ಓಡಿಬಂದು
“ಯಾಕೆ ಅಜ್ಜ,ಇಲ್ಲಿ ಕುಳಿತೆ?”
ನಗುತ ಕೇಳಿದ.

ಮುದ್ದು ಕಂದನನ್ನು ನೋಡಿ
ಮನದ ನೋವು ಮಾಯವಾಗಿ
“ಕಳೆದುದನು ಹುಡುಕಿ ದಣಿದೆ”
ಅಜ್ಜ ಹೇಳಿದ.

“ಕಳೆದುದೇನು..?”ಎಂದು ತುಂಟ
ಬಿಟ್ಟು ಬಿಡದೆ ಕೇಳಿದಾಗ
ಚಿಗುರಿ ನಿಂತ ಮರವ ಕಂಡು
ಅಜ್ಜ ನಗುತಲಿ..

“ವರುಷದಾದಿ ನಾಳೆ ಯುಗಾದಿ
ಕಳೆದ ಖುಷಿಯನೆಲ್ಲ ಹುಡುಕಿ
ವರ್ಷಪೂರ್ತಿ ಪಟ್ಟಪಾಡ
ಕಳೆವೆ ಕ್ಷ​ಣದಲಿ.

ದೂರ ಇರುವ ಕುಡಿಗಳೆಲ್ಲ
ನಾಳೆ ಬಹರು ಹಬ್ಬಕಾಗಿ
ಸಿಕ್ಕ ಖುಷಿಯ ಅವರ ಕೂಡ
ಹಂಚಿಕೊಂಬೆನು.

ಇಂದು ಕಳೆದು ಹಳೆಯ ರಾತ್ರಿ
ನಾಳೆ ಬಹುದು ಹೊಸತು ಹಗಲು
ಹೋಳಿಗೆಯ ಹಬ್ಬದೂಟ
ಸಿಹಿಯ ಸವಿವೆನು.”

ಒಂಟಿ ಅಜ್ಜ ನುಡಿದ ನುಡಿಯ
ತುಂಟ ಚಿಣ್ಣರೆಲ್ಲ ಕೇಳಿ
“ಹುಚ್ಚು ಅಜ್ಜ”ಗೆಂದು ನಕ್ಕು
ಮನೆಗೆ ಕರೆದರು.

“ಕತ್ತಲಾಯಿತೇಳು ಅಜ್ಜ
ನಾಳೆ ಹೊಸತು ಬೆಳಕಿನಲ್ಲಿ
ಹುಡುಕಿದಾಗ ಸಿಕ್ಕೇ ಸಿಗುವು”-
ದೆಂದು ನಕ್ಕರು.

“ಒಲ್ಲೆ”ನೆಂದ ಅಜ್ಜನನ್ನು
ಬಿಟ್ಟು ಬಿಡದೆ ಎಳೆದು ತಂದು
ಒಂಟಿಯನ್ನು ಒಂಟಿ ಮನೆಗೆ
ಬಿಟ್ಟು ಹೋದರು.

ಹಸಿದ ಹೊಟ್ಟೆ ದಣಿದ ದೇಹ
‘ಹುಚ್ಚ’ನೆಂಬ ಮಾತ ‘ಚುಚ್ಚು’
ನಿದ್ದೆ ಬರದ ಒದ್ದೆ ಕಣ್ಣು
ರಾತ್ರಿ ಕಳೆಯಿತು.

ಹೊಸತು ವರ್ಷ,ಹೊಸ ಯುಗಾದಿ
ಬರಿಯ ಬೇವು ಕೆಲವು ಜನಕೆ
ಬೆಲ್ಲಕಾಗಿ ಕಾದು,ಕಾದು
ವರ್ಷವುರುಳಿತು.