ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಬ್ಳಿ ಹೆಗಡೆಯವರ ಕವಿತೆಗಳು

ಅಬ್ಳಿ ಹೆಗಡೆ
ಇತ್ತೀಚಿನ ಬರಹಗಳು: ಅಬ್ಳಿ ಹೆಗಡೆ (ಎಲ್ಲವನ್ನು ಓದಿ)

ಒಂದು ಪಾಠ

ಮೂಡಣದ ಮನೆಯಲ್ಲಿ
ಮುದ್ದು ಕಂದನ ಜನನ
ಎಲ್ಲೆಲ್ಲೂ ಸಂಭ್ರಮವು
ಬೆಳಗಿನಲ್ಲಿ

ಹೊತ್ತು ಕಳೆದಂತೆಲ್ಲ
ವಯಸಿನಾಟಾಟೋಪ
ಧಗ,ಧಗಿಪ ಬೆಂಕಿಯುರಿ
ಹಗಲಿನಲ್ಲಿ.

ತಾರುಣ್ಯ ಕಳೆದಿರಲು
ಊರುಗೋಲಿನ ನಡಿಗೆ
ಕಳೆದ ವೈಭವವೆಲ್ಲ
ಕಳೆವುದಲ್ಲಿ

ದಾರಿಕೊನೆಯಲಿ ಕುಳಿತು
ತಿರುಗಿ ನೋಡಲು ಕಳಿತು
ಮ್ಲಾನಮುಖ,ಕ್ಷೀಣ​ನಗು
ಉಳಿವುದಲ್ಲಿ

ಮುಗ್ಧತೆಯು,ಸೌಂದರ್ಯ
ಯೌವ್ವನವು ಉನ್ಮಾದ
ನಾಶಗೊಳ್ವುದು ಒಂದು
ಬಿಂದುವಲ್ಲಿ

ಇದು ಸತ್ಯ,ಇದು ನಿತ್ಯ
ಪ್ರಕೃತಿ ಹೇಳುವ ಪಾಠ
ಮೂಡಣವು ಸಾಯುವದು
‘ಸಿಂಧು’ವಲ್ಲಿ

*******

ಜಾತ್ರೆ

ಜಾತ್ರೆಯೊಳಗೆ ಯಾತ್ರೆ
ಹೊರಟೆ ಒಂದು ದಿನ
ಜೋಬಿನೊಳಗೆ ಕುಣಿಯುವ
ಕುರುಡು ಕಾಂಚಾಣ-
ಕುಣಿಸಲು,ಕುಣಿಯುತ್ತಾ
ಜನರ ಗಿಜಿ,ಗಿಜಿ ನಡುವೆ
ಸುತ್ತಾಡಿದೆ ಖುಷಿಯಲ್ಲಿ.
ಏನೇನೊ ಖರೀದಿಸುವ
ಹಂಬಲದೊಂದಿಗೆ.

ಬೇಕಾದದ್ದು,ಬೇಡವಾದದ್ದು,
ಕೆಲವು ನನಗೆ,
ಸಿಹಿ,ಸವಿ ಮಿಠಾಯಿ,ಹಣ್ಣು,
ಬಣ್ಣ,ಬಣ್ಣದ ಬಲೂನು,
ಪೀಪಿ,ಆಟಿಕೆಗಳು ಮಕ್ಕಳಿಗೆ.
ಬಳೆ,ಹಣೆಗೆ ‘ಟಿಕಲಿ’
ಮುಖಕ್ಕೆ ವರ್ಣಾಲಂಕಾರ
ಸಾಮಗ್ರಿಗಳು ಹೆಂಡತಿಗೆ.

ಇನ್ನು ನನಗೋ….
ತರಹೆವಾರಿ ಮುಖವಾಡ
ಗಳೊಟ್ಟಿಗೆ…
ಸುಖ-ದುಃಖ,ದ್ವೇಷ-ಪ್ರೀತಿ,
ದೇವರು-ಧರ್ಮ,ಭಕ್ತಿ-ಶಕ್ತಿ,-
ಎಲ್ಲ…ಎಲ್ಲ ಖರೀದಿಸಿ,
ಸೋತು ಬಸವಳಿದು
ಸಂಜೆ,ಹೊರಟಲ್ಲಿಗೆ
ಸೇರುವಾಗ…ಉಳಿದದ್ದು-
ಖಾಲಿ ಕಿಸೆ,ತುಂಬಿದ ಚೀಲ
ಮತ್ತೂ……………..!!!!!

ಮತ್ತು ‘ನಾನು’ ಅಷ್ಟೆ.

*******

ತೆರವಾದ ಬಲಿಪೀಠ

ಓ,,,,ಭಾರತಾಂಬೆಯ
ವೀರ ಪುತ್ರ…..
ನೀ ಉಗ್ರರ ಗುಂಡಿಗೆ
ಗುಂಡಿಗೆಯೊಡ್ಡಿದ್ದು
ವ್ಯರ್ಥವಾಗುವುದಿಲ್ಲ
ಎಂದಿಗೂ.

ನೀ ಸತ್ತರೂ ಬದುಕಿ
ಬದುಕಿ ಬರುತ್ತೀಯ
ವರ್ಷದಲ್ಲಿ ಕೆಲವು ಸಲ–
ರಾಷ್ಟ್ರೀಯ ಹಬ್ಬಗಳಲ್ಲಿ…
ಅಗಸ್ಟ್ ೧೫, ಜನವರಿ೨೬
ಇತ್ಯಾದಿಗಳಲ್ಲಿ…..
ಚುನಾವಣೆ ಸಮಯದಲ್ಲಿ,
ರಾಜಕೀಯ ಬದಲಾವಣೆಗಳಲ್ಲಿ.
‘ಪರಮವೀರಚಕ್ರ’ ಪೋಟೋ
ರಾಜಕೀಯ ನಾಯಕರ
ಘೋಷಣೆ, ಭಾಷಣಗಳಲ್ಲಿ…!

ಬೇಸರಿಸಬೇಡ ಗೆಳೆಯ..
ಇದು…ಸಹಜ, ಆಟದ-
ಮೈ’ದಾನ’ದಲ್ಲಿ ಆಟಗಾರ
ಸತ್ತರೂ, ಸೋತರೂ
‘ಕ್ಯಾಪ್ಟನ್’ಗಳ ಮುಗುಳ್ನಗು,
ಕೈ ಕುಲುಕುವಿಕೆ,
ಸಹಜ ನಡೆ ,ನಡೆಯುತ್ತದೆ–
ಇನ್ನೊಂದು ‘ಆಟ’ದವರೆಗೆ.

ನಾವು ಭಾರತೀಯರು,
ನಮ್ಮ ಹಿಂದೆ ನಿನ್ನಂಥ​-
ಸಹಸ್ರಾರು ಬಲಿದಾನಿಗಳ
ಇತಿ ‘ಹಾಸ’ ಇದೆ ಗೆಳೆಯಾ….
ತೆರವಾಗಿದೆ ಬಲಿಪೀಠ.
ರಕ್ತದ ಕಲೆಗಳನ್ನೆಲ್ಲಾ
ಕಣ್ಣೀರಿನಿಂದ ಉಜ್ಜಿ
ಸ್ವಚ್ಛಗೊಳಿಸಲಾಗಿದೆ.

ಕಣ್ಣಕಟ್ಟಿದ ಬಲಿಪಶು
ಮುಂದೊಂದು ದಿನ,
ಬರಲೇಬೇಕು. ನಮ್ಮೆಲ್ಲರ
ಒಳಿತಿಗಾಗಿ ಬರಲೇಬೇಕು
ತೆರವಾದ ಬಲಿಪೀಠಕ್ಕೆ.
ಆವೇಶದಿಂದ ಕೂಗಾಡುತ್ತೇವೆ,
ತ್ರಿವರ್ಣ ಧ್ವಜಹಿಡಿದು….–
“ಭಾರತ ಮಾತಾಕಿ ಜೈ”

ಎಂದಿನ ಪರಿಪಾಠದಂತೆ
ಎಲ್ಲ ಸುಸೂತ್ರವಾಗಿ
ನಡೆಯುತ್ತದೆ…ಇಂದೂ
ಎಂದೆಂದೂ.

ಗೆಳೆಯಾ, ನೀ ಕಾಣದೂರಿನಲ್ಲಿ
ಕುಳಿತು ,ಮುಗುಳ್ನಗುತ್ತಾ
ನೋಡುತ್ತಿರು,ನಿನ್ನ,ನಿನ್ನಂಥವರ
ಸಾವಿನ ಸಾರ್ಥಕತೆಯ
‘ಭಾರತೀಯತೆ’ಯ.

******