- ನನ್ನ ಈ…ಮನೆ - ಜುಲೈ 25, 2022
- ಬದುಕ ಮಧ್ಯ - ಆಗಸ್ಟ್ 22, 2021
- ಒಂದು ಸ್ವಗತ - ಜೂನ್ 30, 2021
ಈ….ಬೇಸಿಗೆಯಲ್ಲಿ..
ಎಂದಿನಂತಲ್ಲ ಈ….ಬೇಸಿಗೆ
ನೋಡ,ನೋಡುತ್ತಿದ್ದಂತೆ ಕಣ್ಣೆದುರು
ಧಗ,ಧಗಿಸಿ ಉರಿವ ಚಿತೆ
ಮುಗಿಲೆತ್ತರದ ಬೆಂಕಿಯಲ್ಲಿ ಬೇಯುತ್ತಿದೆ
ಹಗಲು ರಾತ್ರಿಗಳಲ್ಲಿ ಹೆಣೆದ
ಸುಂದರ ಕನಸುಗಳ ಹೆಣ.
ಉರಿಯಾರಿದ ಮೇಲೆ ಉಳಿಯುವದು
ಬರೀ ಬೆಚ್ಚಗಿನ ಬೂದಿ ಮತ್ತೂ…
ಅಸಹ್ಯ ಕಮಟು ವಾಸನೆ.
ನಡುವೆಯೇ ತದೇಕ ಚಿತ್ತನಾಗಿ
ಕುಕ್ಕುರುಗಾಲಲ್ಲಿ ಕುಳಿತು
ಬೂದಿಯೊಳಗಿನ ಅಳಿದುಳಿದ
ಮೂಳೆ ಬೇರ್ಪಡಿಸುತ್ತಿರುವೆ,
ಅಂತ್ಯಕ್ರಿಯೆ ನಡೆಸುವವನ
ನಿರ್ಲಿಪ್ತ ಭಂಗಿಯಲ್ಲಿ.
ಅಬ್ಬ…..ಸುತ್ತ ಅದೆಂಥ ಬೆಂಗಾಡು..!!
ಕಟುವಾಸ್ತವ.
ಹಸಿರು ಗಿಡ,ಮರ,ಹೂವು,ಹಣ್ಣು
ಪ್ರಾಣಿ,ಪಕ್ಷಿ, ಸ್ರಷ್ಟಿಯ ಅನಂತ ಅಂದ,ಚೆಂದ
ವೈಭವಗಳೆಲ್ಲ ಎಲ್ಲಿ ಮರೆಯಾದವೋ…..
ಸುತ್ತ ಮುತ್ತ ದಹಿಸಲ್ಪಟ್ಟ ಖಾಂಡವ ವನ
ನನ್ನೊಳ ಹೊರಗೂ.
ಕಣ್ಣು ಬತ್ತಿದ ಕೊಳ,ಬೆರಳಿಂದ ತಿವಿದರೂ,
ಸೂಜಿ ಚುಚ್ಚಿದರೂ,ಚೂರಿ ತಿವಿದರೂ,
ಒಸರದು ಒರತೆ,ಇಂದು ನೋವು ನಲಿವು
ಎರಡರದ್ದೂ ಕೊರತೆ.
ಬಿರು ಬಿಸಿಲಲ್ಲಿ ‘ಕಾದು’ ಅಂಗಾತ
ಮಲಗಿದ ಹೆಬ್ಬಂಡೆ ನಾ….
ಬಿಸಿಲ ಬೇಸಿಗೆ ಬೇಗನೆ ಕಳೆದು
ಬರುವ ತಣ್ಣಗಿನ ಮಳೆಯಲ್ಲಿ ನೆನೆದು
ತಂಪಾಗಲು ಕಾಯುತ್ತಿರುವೆ ನಾ…
ಬೇರ್ಪಡಿಸಿದ ಬೂದಿ ಮಣ್ಣಲ್ಲಿ ಕಲಸುತ್ತ
ಏಕಾಗ್ರತೆಯಿಂದ ಕಾದಿರುವೆ ನಾ….
ಯಾವುದೋ ಒಂದು ಅನಾಮಧೇಯ
ಬೀಜ ಬೂದಿ ಮಿಶ್ರಿತ ಫಲವತ್ತಾದ
ಮಣ್ಣಲ್ಲಿ ಬಿದ್ದು,ತೇವಕ್ಕೆ ಮೊಳೆತು
ಒಮ್ಮೆಯಾದರೂ ಹಸಿರು
ಉಸಿರಾಡೀತೆಂದು.
******
ಕವಿತೆ ಕಾಯುತ್ತಿದೆ
ಕವಿತೆಯೊಂದು ಒಂಟಿಯಾಗಿ,
ಹೊಂಚಿ,ಕಾಯುತ್ತಿದೆ…
ಅರ್ಥವಾಗದ್ದನ್ನು- ಅರ್ಥಮಾಡಿಸುವವರಿಗಾಗಿ.
ಅನುಕಂಪಕ್ಕಾಗಿ ಅಲ್ಲ.
ತಾನೇ ಕಟ್ಟಿಕೊಂಡ ಬೆಚ್ಚಗಿನ ಗೂಡಲ್ಲಿ,
ಒಂಟಿ ಹಕ್ಕಿಯೊಂದು ಕುಳಿತು-
ಹಾಡುತ್ತಿದೆ.
(ಅದು ಹಾಡಲ್ಲದೆಯೂ ಇರಬಹುದು.)
ಅನುಕಂಪಕ್ಕಾಗಿ ಅಲ್ಲ.-
ಮರಚಿಗುರುವದು,
ಹೂ ಅರಳುವದು,
ಮಳೆಸುರಿಯುವದು,-
ಕಾಲ,ಕಾಲಕ್ಕೆ ಸೃಷ್ಟಿಯ ಬಣ್ಣ
ಬದಲಾಗುವದು.
ಕವಿತೆ ಕಾತುರದೊಂದಿಗೆ –
ಕಾಯುತ್ತಿದೆ,ಹರಿವ ಹೊಳೆಯ-
ಸೆಳವಿನಗುಂಟ ಈಜಿ –
ಕಡಲ ಸೇರಲು,ದಡ ಸೇರಲಿಕ್ಕಲ್ಲ.
ಪದಗಳ ಜಾತ್ರೆಯಲಿ ಸುತ್ತಾಡಿ,
ಸುಸ್ತಾಗಿ,ಕೊನೆಗೆ ಬಣ್ಣ ಬಣ್ಣದ-
ಟೊಳ್ಳುಗಳ ಖರೀದಿಸಿ,ಅದರಲ್ಲಿ-
ತನಗಿಷ್ಟ ಭಾವಗಳ ತುಂಬಲು.
ಕವಿತೆ ಒಮ್ಮೊಮ್ಮೆ ಒಳಗೊಳಗೇ
ನಗುತ್ತದೆ ಕೂಡ.
ಅರ್ಥವಾಗದ್ದನ್ನು ಅರ್ಥವಾಗಿಸ-
ಹೊರಟವರ ಅನುಕಂಪಕ್ಕಾಗಿ ಅಲ್ಲ.
ಅಸಹಾಯಕತೆಗೆ.-
ಕವಿತೆ ಕಾಯುತ್ತಿದೆ.
******
ಸಾವಿನಂಚಿನ ಕನಸು.
ಯಾಕೋ ಇಂದು,
ಇದ್ದಕ್ಕಿದ್ದಂತೇ…..
‘ಸಾವಿನಂಚಿನ ಕನಸು’-
ಗಾಢ,ನಿಶ್ಚಿಂತ ಬೆಳಗಿನ-
ಜಾವದ,ಸವಿ,ಸವಿ
ಸಕ್ಕರೆ ನಿದ್ದೆಯಲ್ಲೂ.
…………………..
ಅಂಗಾತ ಮಲಗಿದ ನನ್ನ-
ಕತ್ತಿಗೊಂದು ಯಮಪಾಶ
ಕುಣಿಕೆ,ಸಿಕ್ಕಿಸಿ ವಿಕೃತ ನಗು-
ನಗುತ್ತಾ,ನಿಂತಿದ್ದಳೊಬ್ಬ
ಹೆಮ್ಮಾರಿ ನನ್ನೆದುರು.
ಗುಡಾಣದಂಥ ಹೊಟ್ಟೆ,
ನಗ್ನ ದೇಹಕ್ಕೆಅರೆ-ಬರೆ
ಮುಚ್ಚಿದ ಜಡೆಗಟ್ಟಿದ
ಕೂದಲೇ ಬಟ್ಟೆ.
ಮುಖವೋ ಮೃತ್ಯುಕೂಪ.
ಕಣ್ಣು ಕೆಂಡದುಂಡೆ.
ಬಾಯಲ್ಲಿ,ಉದ್ದದ
ಕೋರೆ ದಾಡೆಗಳ ಮದ್ಯೆ
ಹೊರಚಾಚಿರುವ
ನಾಲ್ಕಿಂಚಗಲದ,
ಜೊಲ್ಲು ಸುರಿಸುವ
ಕೆನ್ನಾಲಗೆಗೆ..ರಕ್ತದ
ದಾಹ.ಬಾಯಿಂದ-
ಗೊರ,ಗೊರ ಶಬ್ಧ.
ನಿಗುರಿದುಗುರ ಮುಷ್ಟಿ-
ಯಲ್ಲಿ ಯಮಪಾಶ.
ಕುಣಿಕೆ ಬಿಗಿಗೊಳಿಸುವ
ಆತುರ ಮುಖದಲ್ಲಿ….
ಅಬ್ಬಾ…ಇದೆಂಥ ಭೀಭತ್ಸ
ಕನಸಲ್ಲಿ………!
ಇಷ್ಟು ಸಾಕು ವರ್ಣನೆ-
ಕ್ಷಣದ ಕಣ್ಣು ಕಂಡಿದ್ದು
ಥೇಟ್’ಅಜ್ಜಿ ಹೇಳಿದ
‘ಚೌಡಿ’ಯೋ…’ಹಬ್ಸಿ’ಯೋ..
ಅಲ್ಲಲ್ಲ…ಯಕ್ಷಗಾನದ
ರಾಕ್ಷಸಿ..
……………..
ಗಹ,ಗಹಿಸಿ ನಗುವಾಗ
ಹಾಕಿದ್ದ ಚಡ್ಡಿ ಒದ್ದೆ-
ಯಾಗುವದೊಂದೇ ಬಾಕಿ.
ಅಂಗಾತ ಮಲಗಿದಲ್ಲೇ
ಬೆವರ ಮುದ್ದೆ.
ಥರಗುಡುವ ಚಳಿ
ನಡುಕದಲ್ಲೂ ನಿದ್ದೆ-
ಯಲ್ಲೂ ಬಿಟ್ಟಕಣ್ಣು-
ಬಿಟ್ಟ ಹಾಗೆ,ವಿಭ್ರಾಂತ
ಸ್ಥಿತಿಯಲ್ಲಿ ನಾನು..
…………..
ನನ್ನ ಕೇಳುತ್ತಿದ್ದಳಾಕೆ
‘ಕೊನೆಯಾಸೆ’ ಏನೆಂದು.
ಕ್ರೌರ್ಯಕ್ಕೂ ಕನಿಕರ.
ನನ್ನ ಮನಕೀಗ
ಖಚಿತವಾಯ್ತು,
ಇಂದೆನ್ನ ದೊಂಬರಾಟದ
ಬದುಕಿನ ಕೊನೆ-
ಕ್ಷಣ. ನೋವು,ನಲಿವು,
ಮೋಹ,ಕಾಮ,ಆಸೆ-
ನಿರಾಸೆ,ಸಿಟ್ಟು,ಸೆಡವು,
ತಟವಟ,’ದಗಲ್ಬಾಜಿ’ಗಳ
ತೀರ್ಮಾನ ಇಂದೆಂದು.
ಬದುಕಿ,ಬದುಕ-
ಸಾಯಿಸುವದಕ್ಕಿಂತ,
ಸತ್ತು,ಬದುಕಬೇಕೆಂದುಕೊಂಡೆ….
………….
ಸ್ಮತಿಪಟಲದಲ್ಲಿ
ಬಾಲ್ಯದಲ್ಲಿ ‘ಆಯಿ’,
ರಾತ್ರಿ, ನಕ್ಷತ್ರಪುಂಜ
ತುಂಬಿದ ಸುಂದರ
ಆಕಾಶದತ್ತ ಕೈ
ತೋರಿಸುತ್ತಾ,
ಸತ್ತಮೇಲೆಲ್ಲರೂ ಅಲ್ಲಿ
ಅವುಗಳೊಟ್ಟಿಗೆ
ಯಾವಾಗಲೂ
ಮಿನುಗುತ್ತಿರುತ್ತಾರೆ.
ಎಂದದ್ದು ನೆನಪಾಗಿ,
ಇದ್ದುದರಲ್ಲೇ ಸ್ವಲ್ಪ
ಧೈರ್ಯ,ಅವುಗಳೊಟ್ಟಿಗೆ
ಯಾವಾಗಲೂ
ಅಜರಾಮರವಾಗಿ
ಮಿನುಗು-
ತ್ತಿರಬಹುದೆಂದು.
ಒಣಗಿದ ತುಟಿಯ
ನಾಲಗೆಯಿಂದ
ತೇವಗೊಳಿಸುತ್ತಾ…
‘ನನ್ನ ಕೊನೆಯಾಸೆ
ಸಾವು,’ನೀನಾರು?
ತಾಯೆ?’ಎಂದೆ.
ಅದಕ್ಕವಳು-
ವಿಕಾರವಾಗಿ ನಗುತ್ತಾ-
‘ನಾ..ಯಮರಾಜನ
ಹೊಸ ನೇಮಕ,
ನನ್ನ ಹೆಸರು’ಕೊರೋನಾ’
ವಿದೇಶದಿಂದ-
ಬಂದವಳು’ ಎನ್ನುತ್ತಾ
ಕೊರಳ ಕುಣಿಕೆ
ಸಡಿಲಿಸಿ,”ಮತ್ತೂ..-
ಬದುಕಿ ಸಾಯಿ.ನೀ
ಮಾಡಿದ ತಪ್ಪಿಗದೇ
ಶಿಕ್ಷೆ”ಎನ್ನುತ್ತಾ,ಇದ್ದಲ್ಲೇ
ಕ್ಷಣದಲ್ಲಿ ಮಾಯ”
‘ದಢಕ್ಕ್’ನೆ ಎದ್ದುಕುಳಿತು
ಬೆವರೊರೆಸಿ-
ಕೊಂಡು,ಕಣ್ಣುಜ್ಜಿ,
ಹೊರ ನೋಡಿದಾಗ…
ಬೆಳಕಾಗಿತ್ತು….
ಬೆಳಗೂ ಆಗಿತ್ತು.
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ