ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಬ್ಳಿ ಹೆಗಡೆಯವರ ಹನಿಗವಿತೆಗಳು – ೪

ಅಬ್ಳಿ ಹೆಗಡೆ
ಇತ್ತೀಚಿನ ಬರಹಗಳು: ಅಬ್ಳಿ ಹೆಗಡೆ (ಎಲ್ಲವನ್ನು ಓದಿ)

ವಿದಾಯ

ಎಂದೂ ಬಾರದ ಅಪರೂಪದ ಅತಿಥಿ
ದುಃಖ,ದುಗುಡ ತುಂಬಿದ ಮನೆಗೆ
‘ದಿಢೀರ್’ ಭೇಟಿಯಿತ್ತು,
ಇರುವಲ್ಪ ಕಾಲದಲೇ ನೋವ ಮರೆಸಿ
ದುಗುಡ ದೂರಾಗಿಸಿ,ನಗೆಯ ಕಾರಂಜಿ
ಚಿಮ್ಮಿಸಿ ಬೆಂಗಾಡು ಮನೆ,ಮನಗಳಲ್ಲಿ
ಕಣ್ಣಂಚಿನಲಿ ನೀರ ಜಿನುಗಿಸಿ ಹೋಗುವ
ಮೊದಲು ಅಂಗಳದ ತುದಿ ನಿಂತು
ತಿರುಗಿ ಮನೆಯವರೆಡೆಗೆ ಕೈ ಬೀಸಿ
ಮಾಯವಾದಂತೆ…!
ಯಾವಾಗಾದರೊಮ್ಮೆ ಭಣಗುಡುವ
ಒಣ ಮನಸ್ಸುಗಳಲ್ಲಿ ಸುಂದರ,ಸುಮಧುರ
ಭಾವಗಳಾಗಮಿಸಿ,ಅಕ್ಕರಗಳ
ಮೊಳೆಯಿಸಿ,ಗೀತೆಯಾಗಿಸಿ ಭಾವಗಳ,
ಕೊರಡ ಕೊನರಿಸಿ,ಹೂ,ಹಣ್ಣು ತುಂಬಿದ
ಸಮೃದ್ಧ​ ಗಿಡವಾಗಿಸಿ..ಒಳ ಹೊರಗೆ,
ಬೀಳ್ಕೊಡುಗೆಗೂ ಕಾಯದೇ
ವಿದಾಯ ಹೇಳುತ್ತವೆ ಕೆಲವೊಮ್ಮೆ..

*****

ಮಾತು ಮಳೆ

ಹಸಿವು
ನಿಗಿ,ನಿಗಿ
ಕೆಂಡದ ಮೇಲೆ-
ಗುಡುಗು,ಸಿಡಿಲು
ಸಹಿತ,
ಮಾತಿನ ಕುಂಭ-
ದ್ರೊಣ ಮಳೆ.
ನೆಂದು ತೊಪ್ಪೆ-
ಯಾದವರ
ನಿದ್ದೆಯ ತುಂಬ
ಸಮೃದ್ಧ​ ಬೆಳೆ-
ಯ ಕನಸು….!

*****

ತೂತು ಕಾವಲಿ

ತೂತೇ ಇಲ್ಲದ ದೋಸೆ
ಬೇಕೆಂದು ಕಾಡಿ,
ಅಳುತಿರುವ ಮಗುವನ್ನು
ಅವನಮ್ಮ ನೋಡಿ.

ತೋರಿದಳು ನೆರಮನೆಯ
ತೂತು ಕಾವಲಿಯ
ಕ್ಷಣದಲ್ಲಿ ಮಗು ಮುಖದಿ
ಅಳುವೆಲ್ಲ ಮಾಯ

*****

ಚಿನ್ನದ ಸೂಜಿ

ಜೀವಕಿಂತಲೂ ತುಟ್ಟಿ
ಬಂಗಾರವೀಗ.
ಸೂಜಿಯಾದರೂ ಸರಿಯೇ
ಕೊಳ್ಳುವರು ಬೇಗ.

ಚುಚ್ಚಿ,ಚುಚ್ಚಿಸಿಕೊಂಡು
ನಗು,ನಗುತ ನೋವ,
ಸಹಿಸುವರು ಪ್ರತಿನಿತ್ಯ
ಇರುವರೆಗೆ ಜೀವ.

*****

…ಈ…ಹುಚ್ಚು

ಜನಪ್ರಿಯತೆಯ ಹುಚ್ಚು
ತಲೆಗೇರಿ….ಅಣ್ಣ
ಬಳಿದು ಮೈ,ಮನಕೆಲ್ಲ
ಬಗೆ,ಬಗೆಯ ಬಣ್ಣ

ಸುರಿವ ಝಡಿಮಳೆಯಲ್ಲಿ
ಬೇಕೆಂದೇ ಕುಣಿದ,
ತೊಳೆದು ಹೋಗಲು ಎಲ್ಲ,
ನಗೆಪಾಟಲಾದ.