- ಬದುಕಿನ ಶಾಲೆ ಮತ್ತು ಮಾಂಟೆಸರಿ - ನವೆಂಬರ್ 22, 2023
- ಸಣ್ಣದೆಲ್ಲಾ ಸಣ್ಣದಲ್ಲ… - ಜೂನ್ 24, 2023
- ‘ಪಾಕಶಾಲೆ’ಯ ನಳ! - ಮೇ 22, 2022
ಅಮ್ಮ ಆ ಕಾಲಕ್ಕೇ ಟಿ.ಸಿ.ಎಚ್. ಮಾಡಿದ್ದರೂ ಯಾವ್ಯಾವುದೋ ಕಾರಣ ನೆಪವಾಗಿ ಗೃಹಿಣಿಯಾಗಿಯೇ ಉಳಿಯಬೇಕಾಯಿತು. ಅಮ್ಮ ಆ ಬಗ್ಗೆ ವಿಷಾದ ವ್ಯಕ್ತಪಡಿಸಿದಾಗೆಲ್ಲಾ ಒಳಗೊಳಗೇ ದೇವರಿಗೆ ಥ್ಯಾಂಕ್ಸ್ ಹೇಳಿಕೊಳ್ಳುತ್ತಿದ್ದೆ ನಾನು. ಕೆಲಸಕ್ಕೆ ಹೋಗುವುದಿರಲಿ , ಶಾಲೆಯಿಂದ ಮನೆಗೆ ಬರುವ ಹೊತ್ತಿಗೆ ಅಮ್ಮ ಮನೆಯಲ್ಲಿ ಇಲ್ಲದಿದ್ದರೆ ಅಲ್ಲೊಂದು ರಣರಂಗವನ್ನೇ ಸೃಷ್ಟಿ ಮಾಡಿಬಿಡುತ್ತಿದ್ದೆ! ಆರ್ಥಿಕ ಸ್ವಾತಂತ್ರ್ಯವನ್ನು ಅತೀವವಾಗಿ ಆಶಿಸುತ್ತಿದ್ದವಳು ಅಮ್ಮ! ಸ್ವಾವಲಂಬನೆ, ಸ್ವಂತ ದುಡಿಮೆ ಎಲ್ಲವುಗಳ ಪ್ರಾಮುಖ್ಯತೆಯನ್ನು ನಂಗೆ ಅಕ್ಕನಿಗೆ ಎಷ್ಟೇ ಹೇಳಿಕೊಡುತ್ತಾ ಬಂದರೂ, ಅದೆಲ್ಲವೂ ಅಕ್ಕನನ್ನು ತಾಗಿತೇ ಹೊರತು ನನ್ನ ಸೋಕಲೂ ಇಲ್ಲ.
‘ಚೆನ್ನಾಗಿ ಓದಬೇಕು! ಇಷ್ಟವೋ ಕಷ್ಟವೋ ಯಾವುದಾದರೂ ಕೆಲಸಕ್ಕೆ ಸೇರಿ ದುಡಿಯಬೇಕು. ತನ್ನ ಕಾಲ ಮೇಲೆ ತಾನು ನಿಂತು ಸ್ವತಂತ್ರವಾಗಿ ಬದುಕಬೇಕು. ಮದುವೆ ಮಕ್ಕಳು ಎಲ್ಲ ಸೆಕೆಂಡರಿ!! ‘ ಅನ್ನೋ ಜನಗಳ ನಡುವೆ ಅದ್ಯಾವುದೇ ಸಣ್ಣ ಗಿಲ್ಟ್ ಸಹ ಇಲ್ಲದೆ ೨೩-೨೪ ವರ್ಷಕ್ಕೆ ಮದುವೆಯಾಗಿ, ಎರಡೋ ಮೂರೋ ಮಕ್ಕಳನ್ನು ಹೆತ್ತು ಆರಾಮಾಗಿ ಜೀವನ ನಡೆಸಬೇಕು ಅನ್ನೋ ಬದುಕ ಸೂತ್ರ ಹೊಂದಿದ್ದವಳು ನಾನು. ಕೆಲಸದ ಬಗ್ಗೆ ಆಗಾಗ ಕನಸು ಕಂಡಿದ್ದರೂ ಭವಿಷ್ಯದ ಯೋಚನೆಗಳೆಲ್ಲಾ ಗಂಡ ಮಕ್ಕಳದ್ದೇ ಆಗಿರುತ್ತಿತ್ತು.
ಹೇಗೆ ೨೫ ವರ್ಷದ ಹಿಂದೆ ಮಹಿಳೆ ಕೆಲಸ ಮಾಡಿದರೆ ಎಷ್ಟು ಕೀಳರಿಮೆ ಮೂಡಿಸುವುದಕ್ಕೆ ಸುತ್ತಲಿನ ಸಮಾಜ ಪ್ರಯತ್ನ ಮಾಡುತ್ತಿತ್ತೋ ಹಾಗೆಯೇ ಈಗ ಗೃಹಿಣಿಯಾಗಲು ಇಷ್ಟಪಡುವ ಹೆಣ್ಣು ಮಕ್ಕಳಿಗೆ ಕಿರಿ ಕಿರಿ ಮಾಡುತ್ತದೆ. ಯಾರ ಮಾತಿಗೂ ಕಿವಿಗೊಡದೆ ನನ್ನ ಪಾಡಿಗೆ ನಂಗನಿಸಿದ್ದನ್ನೇ ಜೀವನದುದ್ದಕ್ಕೂ ಮಾಡುತ್ತಾ ಬಂದಿದ್ದಂತೂ ಹೌದು! ಅಂತೆಯೇ ೨೩ ವರ್ಷಕ್ಕೆ ಮದುವೆಯಾದೆ. ‘ಇಷ್ಟ್ ಬೇಗ ಮದುವೆಯಾಗಿದ್ದು ಯಾಕೆ? ಒಂದೆರಡು ವರ್ಷ ದುಡಿಯಬಹುದಿತ್ತಲ್ಲ!’ ಅಂದ ಜನಗಳೇ ಮತ್ತೆರಡು ವರ್ಷಕ್ಕೆ ಮಗುವಾದಾಗ ‘ಇನ್ನೊಂದೆರಡು ವರ್ಷ ಕಾಯಬಹುದಿತ್ತು.. ಯಾಕಿಷ್ಟು ಅವಸರ’ ಅಂತಲೂ ಕೇಳಿದ್ದರು. ಬದುಕು ನಂದಾ ಅವ್ರದ್ದಾ ಅಂತೆಷ್ಟೋ ಸಲ ಅನ್ನಿಸಿದ್ದಿದೆ ನಂಗೆ!
ಪುಣ್ಯಕ್ಕೆ ನನಗೆ ಇದ್ಯಾವುದನ್ನೂ ಕೇಳಿಸಿಕೊಳ್ಳುವಷ್ಟು ಪುರುಸೊತ್ತಿರಲಿಲ್ಲ.
ಓದಿದ್ದು ಇಂಜಿನಿಯರಿಂಗ್ ಆದರೂ ಆಸಕ್ತಿ ಇದ್ದದ್ದು ಮಾತ್ರ ಅಪ್ಪಟ ಕಲೆಯಲ್ಲಿ. ಓದು ಮುಗಿದ ತಕ್ಷಣ ಬೆಂಗಳೂರಿಗೆ ಓಡಿಬಂದು ರಂಗಭೂಮಿಯಲ್ಲಿ ತೊಡಗಿಕೊಂಡಿದ್ದೆ. ಅಲ್ಲಿಂದಲೇ ಸಂಬಂಧವೂ ಕೂಡಿಬಂದು, ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಮದುವೆಯೂ ಆಗಿ ಹೋಯಿತು. ಮಾಡಲಾಗದೇ ಒದ್ದಾಡುತ್ತಿದ್ದ ಐಟಿ ಕೆಲಸವನ್ನೂ ಬಿಟ್ಟು ಬಾಲ್ಯದ ಕನಸಿನಂತೆ ಗೃಹಿಣಿಯೂ ಆಗಿದ್ದಾಯಿತು. ಆರು ತಿಂಗಳು, ವರ್ಷಕ್ಕೆಲ್ಲಾ ಅದೂ ಬೋರಾಗಿ ಮತ್ತೆ ಸ್ನಾತಕೋತ್ತರ ಪದವಿಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ಹಾದಿ ಹಿಡಿದೆ. ಇನ್ನೇನು ಯೋಗ ಕಲಿತು, ವೃತ್ತಿ ಜೀವನ ರೂಪಿಸಿಕೊಳ್ಳುತ್ತೇನೆ ಎಂದುಕೊಳ್ಳುವಷ್ಟರಲ್ಲಿ ಬದುಕು ತನ್ನದೇ ತಿರುವು ಪಡೆದುಕೊಂಡಿತು.
ಚಿಕನ್ ಫಾಕ್ಸ್ ಆಗಿದ್ದರಿಂದ ಪಿರಿಯಡ್ಸ್ ಮುಂದು ಹೋಗುತ್ತಿದೆ ಎಂದುಕೊಂಡೇ ದಿನ ಕಳೆಯುತ್ತಿದ್ದವಳಿಗೆ , ಲ್ಯಾಬ್ ರಿಪೋರ್ಟ್ಸ ‘ವೀಕ್ಲಿ ಪಾಸಿಟಿವ್ (Weakly Positive)’ ಎಂದು ಬಂದಾಗ ಸುತ್ತಲಿನ ಜಗತ್ತು ಅರೆ ಕ್ಷಣಕ್ಕೆ ಸ್ತಬ್ಧವಾಗಿತ್ತು. ಆಗಿನ್ನೂ ಒಡಲೊಳಗಿನ ಕೂಸಿಗೆ ಹದಿನೈದೇ ದಿನ. ಅದೊಂದು ವಿವರಿಸಲಾಗದ ಭಾವ. ನನಗಿಂತಾ ಮೊದಲು ಮದುವೆಯಾದರೂ ಇನ್ನೂ ಮಗುವಿನ ಬಗ್ಗೆ ಯೋಚನೆ ಮಾಡಿರದ ಅಕ್ಕ, ಸ್ಥಿರವಿಲ್ಲದ ಆರ್ಥಿಕ ಪರಿಸ್ಥಿತಿ, ಅರ್ಧಕ್ಕೆ ಬಿಟ್ಟ ಕೆಲಸ, ಆಗ ತಾನೇ ಸೇರಿದ ಕಾಲೇಜು, ಹೊಟ್ಟೆಯೊಳಗೆ ತಿಂಗಳೂ ತುಂಬಿರದ ಎಳೆಗೂಸು, ಕಣ್ಣಲ್ಲಿ ಬೆಟ್ಟದಷ್ಟು ಕನಸು!
‘ಆರ್ ಯು ಪ್ಲ್ಯಾನಿಂಗ್ ಟು ಕಂಟಿನ್ಯೂ ವಿಥ್ ದಿ ಬೇಬಿ? (Are you planning to continue with the baby?)’ ಎಂದು ಡಾಕ್ಟರ್ ಕೇಳುತ್ತಿದ್ದರೆ ಅಕ್ಷರಶಃ ಮೂಕಿಯಾಗಿದ್ದೆ. ಮನಸ್ಸು ‘ಹೌದು’ ಎಂದರೆ ಬುದ್ಧಿ ‘ಇನ್ನೊಂದು ಕ್ಷಣ ಕೂತು ಯೋಚಿಸು’ ಎನ್ನುತ್ತಿತ್ತು. ಆದರೆ ಬೇಡ ಅನ್ನುವಷ್ಟು ಕಠಿಣ ನಿರ್ಧಾರ ತೆಗೆದುಕೊಳ್ಳುವಷ್ಟು ಧೈರ್ಯ ಇರಲಿಲ್ಲ ನನಗೆ..
ಕಲ್ಪನಾ ಲೋಕದಲ್ಲಿ ಅತಿ ಮಧುರ ಎನಿಸಿದ್ದ ತಾಯ್ತನ ವಾಸ್ತವಕ್ಕೆ ಮರಳಿದಾಗ ಸ್ವಲ್ಪ ಕಷ್ಟವೇ ಆಗಿತ್ತು. ಮೊದಲ ಮೂರು ತಿಂಗಳು ಎಲ್ಲೂ ಪ್ರಯಾಣ ಮಾಡುವಂತಿಲ್ಲ ಎಂಬುದು ಬಿಸಿ ತುಪ್ಪದಂತೆ! ಇದಕ್ಕೂ ಮೊದಲೇ ಒಪ್ಪಿಕೊಂಡ ಗಮಕ ವ್ಯಾಖ್ಯಾನದ ಕಾರ್ಯಕ್ರಮಗಳಿದ್ದವು ಕಣ್ಮುಂದೆ. ಹಾಗೂ ಹೀಗೂ ಎರಡು ತಿಂಗಳು ತುಂಬಿದ ತಕ್ಷಣ ಮೆಲ್ಲಗೆ ಟ್ರೈನ್ ಏರಿದ್ದೆ. ಆಮೇಲಿನದ್ದೆಲ್ಲಾ ಸುಲಲಿತ. ಕಾಲಿಗೆ ಚಕ್ರ ಕಟ್ಟಿಕೊಂಡೇ ಒಂಬತ್ತು ತಿಂಗಳೂ ಪೂರೈಸಿಬಿಟ್ಟೆ.
ವೇದಿಕೆ ಏರಿ ವ್ಯಾಖ್ಯಾನ ಮಾಡುವುದಕ್ಕಾಗಲೀ, ನಿರೂಪಣೆ-ನಟನೆಗಾಗಲೀ, ರಂಗಶಂಕರದಲ್ಲಿ ನಾಟಕಗಳನ್ನು ನೋಡುವುದಾಗಲೀ, ಯಾವುದಕ್ಕೂ ಒಳಗಿರುವ ಕೂಸು ತೊಂದರೆ ಕೊಟ್ಟಿದ್ದಿಲ್ಲ. ಯೋಗ, ಸಾಹಿತ್ಯ , ಕಾಲೇಜು ಎಲ್ಲವೂ ಲೀಲಾಜಾಲವಾಗಿ ನಡೆದುಹೋಯಿತು.
ಹೊಟ್ಟೆಯಲ್ಲಿ ಮಗುವಿಟ್ಟುಕೊಂಡು ಕಳೆದ ೯ ತಿಂಗಳೂ ದಿವ್ಯಾನುಭೂತಿಯನ್ನು ಹೊಂದಿದ್ದೆ ಎಂದರೆ ತಪ್ಪಾಗಲಾರದು.
ತಾಯ್ತನ ಅನ್ನುವುದು ಇವತ್ತು ನಿನ್ನೆಯಲ್ಲಿ ಹುಟ್ಟಿ ಬೆಳೆದ ಭಾವವಲ್ಲ! ಅದೊಂದು ದೀರ್ಘ ಕಾಲದ ತಪಸ್ಸು.. ಮೊದಲಿಂದಲೂ ಯಾವುದೇ ಮಕ್ಕಳನ್ನು ಕಂಡರೂ ಖುಷಿ ಖುಷಿ ಫೀಲಿಂಗ್ (feeling).
ಹೈಸ್ಕೂಲಿನಲ್ಲಿದ್ದಾಗ ಬರುತ್ತಿದ್ದ ಯಾವುದೋ ಧಾರಾವಾಹಿಯ ಟೈಟಲ್ ಕಾರ್ಡ್ ನಲ್ಲಿ ಪುಟಾಣಿ ಪಾದವೆರಡನ್ನು ಮೂಡಿಸಿದ್ದರು. ಅಲ್ಲೆಲ್ಲೋ ಟಿಸಿಲೊಡೆದ ಭಾವ ಒಡಲಲ್ಲಿ ಜೀವವಿದೆ ಎಂದಾಗ ಹೆಮ್ಮರವಾಗಿ ಹಬ್ಬಿತ್ತು. ಎಷ್ಟೇ ಸಿದ್ಧತೆ ಮಾಡಿಕೊಂಡಿದ್ದರೂ ಮಗು ಹುಟ್ಟಿದ ಒಂದಷ್ಟು ತಿಂಗಳು ಏನೂ ಮಾಡಲು ತೋಚದೆ ಕಕ್ಕಾಬಿಕ್ಕಿಯಾಗಿದ್ದಂತೂ ಸತ್ಯ. ಅದೆಷ್ಟೋ ರಾತ್ರಿಗಳು ತೆಗೆದುಕೊಂಡ ನಿರ್ಧಾರದ ಬಗೆಗೆ ಅನುಮಾನವುಂಟಾಗಿ , ಆತಂಕ – ಕಣ್ಣೀರಿನ ನಡುವೆಯೇ ಕಳೆದು ಹೋದವು. ಎಲ್ಲ ವಿಷಯದಲ್ಲೂ ನನ್ನನ್ನು ನಾನು ಪ್ರಿಯೊರಿಟೈಸ್ (prioritise) ಮಾಡಿಕೊಳ್ಳುತ್ತಿದ್ದ ದಿನಗಳು ಕಳೆದು ಮಗಳಿಗಾಗಿಯೇ ಎಲ್ಲ ಎಂಬ ಭಾವ ಆವರಿಸತೊಡಗಿತು. ನನ್ನ ಸಮಯವೆಂಬುದು ಕರಗಿ ಹೋಗಿ ದಿನದ ೨೪ ಗಂಟೆಯೂ ಮಗಳ ಮುಂದೆಯೇ ಕಳೆಯುವಂತಾಯಿತು. ಊಟ ತಿಂಡಿ ಬಿಟ್ಟು ಹಿಡಿದ ಪುಸ್ತಕ ಮುಗಿಯುವವರೆಗೆ ಕೂತಲ್ಲಿಂದ ಏಳದಿರುತ್ತಿದ್ದ ದಿನಗಳು ಹೇಳಹೆಸರಿಲ್ಲದಂತೆ ಮಾಯವಾದವು. ಅವಳು ಮಲಗಿದಾಗಲೆಲ್ಲಾ ಕೈ ಸೇರುವ ಪುಸ್ತಕ, ಎದ್ದ ತಕ್ಷಣ ಮೂಲೆ ಹಿಡಿಯುತ್ತಿತ್ತು. ಫಿಲ್ಮ್ ಫೆಸ್ಟಿವಲ್ ನಲ್ಲಿ ದಿನಕ್ಕೆ ಐದರಿಂದ ಆರು ಸಿನಿಮಾ ನೋಡುತ್ತಿದ್ದ ದಿನಗಳೆಲ್ಲಿ, ಮೂರು ಘಂಟೆಯ ಸಿನಿಮಾ ನೋಡಲು ಸತತ ನಾಲ್ಕು ದಿನಗಳು ಬೇಕಾಗುವುದೆಲ್ಲಿ! ಬದುಕಲ್ಲಿ ಏಕಾಏಕಿ ಅಲ್ಲೋಲಕಲ್ಲೋಲ ಉಂಟಾದ ಹಾಗಾಗಿತ್ತು.. ಕಾಲಿಗೆ ಚಕ್ರ ಕಟ್ಟಿಕೊಂಡು ಓಡುತ್ತಿದ್ದ ನಾನು, ನಿಧಾನವಾಗಿ ಬದುಕ ಇನ್ನೊಂದು ಮಗ್ಗುಲಿಗೆ ತಿರುಗಿಕೊಂಡೆ!
ಮಗು ಸ್ವಲ್ಪ ದೊಡ್ಡದಾಗಿದ್ದೇ ಮತ್ತದೇ ಸುತ್ತಲಿನ ಜನಗಳ ‘ಇನ್ನೂ ಕೆಲಸಕ್ಕೆ ಸೇರುವ ಆಲೋಚನೆ ಮಾಡಿಲ್ವಾ? ಅನ್ನೋ ಕುಹಕ. ಜೊತೆಗೆ ‘ಮುಂದೆ ಕಷ್ಟ ಆಗುತ್ತೆ ನೋಡು ‘ ಅನ್ನೋ ಸಲಹೆ ಕೂಡಾ.. ಮೊದಲೇ ಕಂಗಾಲಾಗಿದ್ದ ನನ್ನ ಇನ್ನಷ್ಟು ದಿಕ್ಕೆಡಿಸುವ ಪ್ರಯತ್ನ ಮಾಡಿದರು.
ಆಗೆಲ್ಲಾ ಜೊತೆ ನಿಂತದ್ದು ಅದೇ ಆರ್ಥಿಕ ಸ್ವಾವಲಂಬನೆಯ ಪಾಠ ಮಾಡುತ್ತಿದ್ದ ಅಮ್ಮ ಮತ್ತು ಇಷ್ಟವಿರದ ಕೆಲಸವನ್ನು ಮಾಡಲು ಯಾವತ್ತೂ ಒತ್ತಾಯಿಸದ ಗಂಡ.
ಯೋಗಾಯೋಗದಂತೆ ನಂಗಿಷ್ಟವಾದ ಕೆಲಸವೂ ಅದೇ ಸಮಯಕ್ಕೆ ಕೈ ಬೀಸಿ ಕರೆದಾಗ ಮತ್ತೆ ಸಂದಿಗ್ಧತೆ. ಒಂದೂವರೆ ವರ್ಷದ ಕೂಸು ಒಂದು ಕಡೆಯಾದರೆ , ಮುಂದೆ ಸಿಗದೇ ಹೋಗಬಹುದಾದ ಅವಕಾಶ! ಬದುಕಿನ ಇನ್ನಷ್ಟು ಅನಿವಾರ್ಯತೆಗಳೂ ಜೊತೆಯಾಗಿ, ಆಗಿದ್ದಾಗಲಿ ಎಂದು ಕೆಲಸಕ್ಕೆ ಸೇರಿದ್ದಾಯಿತು. ಆದರೆ ಆ ಅನ್ಇಂಟೆರೆಪ್ಟೆಡ್ ಟೈಮ್ (uninterrupted time) ಕೊಟ್ಟ ನೆಮ್ಮದಿ ವಿವರಿಸಲಾಗದ್ದು.
ಬರೀ ಬೆಳಿಗ್ಗೆ ಅವಳು ಮಲಗುವ ಸಮಯದಲ್ಲಿ ಮಾತ್ರ ಹೋಗಿ ಬರುತ್ತಿದ್ದ ಕೆಲಸ, ಮಧ್ಯದಲ್ಲೊಂದು ದಿನ ಇಡೀ ದಿನ ಮಗಳನ್ನು ಬಿಟ್ಟಿರಬೇಕಾಯಿತು. ಸಂಜೆಯಾಗುತ್ತಿದ್ದಂತೆ ಕೆಲಸ ಮಾಡಲಾಗದೇ, ದುಃಖವನ್ನು ಒಳಗಿಟ್ಟುಕೊಳ್ಳಲಾಗದೇ ‘ಹೋss’ ಎಂದು ಅಳುತ್ತಾ ನಿಂತುಬಿಟ್ಟ ಘಳಿಗೆ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಕಡೆಗೆ ಸಹೋದ್ಯೋಗಿಗಳೇ ಆಟೋ ಹತ್ತಿಸಿ , ಆ ಕಡೆಯಿಂದ ಅರ್ಧ ದಾರಿಯವರೆಗೆ ಗಂಡನೂ ಬಂದು ಮಗಳ ಮುಖ ನೋಡುವವರೆಗೂ ಕಣ್ಣಿಂದ ಧಾರಾಕಾರವಾಗಿ ನೀರು ಸುರಿಯುತ್ತಲೇ ಇತ್ತು.
ಪ್ರತಿ ದಿನ ಹೊಸ ಹೊಸ ಜನರ ಜೊತೆಗೆ ಸಂವಹಿಸುವ , ಬೇರೆ ಬೇರೆ ಥರದ ಜನರ ಜೊತೆ ಒಡನಾಡುವ ಕೆಲಸ ಕೊಡುತ್ತಿರುವ ಖುಷಿ ಅನನ್ಯವಾದುದ್ದು. ಆದರೂ ಇದರ ನಡುವೆಯೂ ದಿನಾ ಆಫೀಸಿಗೆ ಹೊರಡುವಾಗಲೂ ‘ನಾನೂ ಬತ್ತೀನೀsssss..’ ಎಂದು ಕುಣಿಯುತ್ತಾ ಬರುವ ಮಗಳ ಮುಖ ಆಫೀಸಿಗೆ ತಲುಪಿದ ಎಷ್ಟೋ ಹೊತ್ತಿನ ನಂತರವೂ ಕಣ್ಣೆದುರು ಕಾಣುತ್ತಲೇ ಇರುತ್ತದೆ. ಮಗಳನ್ನು ಬಿಟ್ಟು ಹೋಗುವ ಸಂಕಟ ಮತ್ತು ಬದುಕ ಜವಾಬ್ದಾರಿ ಎರಡರ ನಡುವಿನ ಸಂಘರ್ಷ ದೊಡ್ಡದು.
ಈಗ ಕೂತು ಯೋಚನೆ ಮಾಡುವಾಗ ಅನಿಸುತ್ತದೆ! ಅಮ್ಮ ಅವಳ ವೃತ್ತಿಯನ್ನಷ್ಟೇ ಅಲ್ಲ, ಪ್ರವೃತ್ತಿಯನ್ನೂ ಎಷ್ಟೋ ಸಲ ನಮ್ಮ ಬೆಳವಣಿಗೆಗಾಗಿ ಕಡೆಗಣಿಸಿಬಿಟ್ಟಿದ್ದಳು. ಅಮ್ಮನಷ್ಟಲ್ಲದಿದ್ದರೂ ಅವಳ ಅರ್ಧದಷ್ಟಾದರೂ ಮಗಳಿಗೆ ನನ್ನ ಸಮಯ ಹಾಗೂ ಬದುಕನ್ನು ಕೊಡಲಾದೀತಾ ಎಂಬ ಗೊಂದಲ ಕಾಡುತ್ತದೆ.
ಮಗಳು ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಬದುಕು ಬೇಕಾದಷ್ಟು ಬದಲಾಗಿದೆ. ಬದುಕ ಬಗೆಗಿದ್ದ ಫ್ಯಾಂಟಸಿ (fantasy) ಕರಗಿ, ವಾಸ್ತವಿಕ ಪ್ರಪಂಚಕ್ಕೆ ಕೈ ಹಿಡಿದು ಕರೆತಂದವಳು ಮಗಳು. ಕಂಫರ್ಟ್ ಝೋನ್ (Comfort zone)ನ ಆಚೆಯೂ ಬಾಳುವುದು ಅರ್ಥವಾಗಿದ್ದು ಮಗಳಿಂದಲೇ.. ಹುಚ್ಚುಚ್ಚು ಆಲೋಚನೆಗಳು ಕರಗಿ ಮನಸು ಪಕ್ವತೆಗೆ ಮಾಗಿದೆ. ಮಗಳು ದಿನದಿನಕ್ಕೂ ಬೆಳೆಯುತ್ತಿದ್ದಾಳೆ. ಈಗ ಹಿಂದಿರುಗಿ ನೋಡಿದರೆ ‘ಮಿಂಚಂಥಾ ಕ್ಷಣಗಳವು.. ಇನ್ನೆಂದೂ ಬಾರವು’ ಎನಿಸುತ್ತದೆ.
ಮಗಳೆಂದರೆ ಮನೆಯ ಮುದ್ದು ಗೊಂಬೆಯೂ ಹೌದು, ಬದುಕು ಕಲಿಸುವ ಭಗವತಿಯೂ ಹೌದು.
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..