- ಅವರಿಬ್ಬರೂ ಪ್ರೇಮಿಗಳಲ್ಲ - ನವೆಂಬರ್ 20, 2022
- ಸಿಕ್ಕು - ಮೇ 28, 2022
- ಅಮ್ಮ ನೆನಪಾಗುತ್ತಾಳೆ - ಮೇ 8, 2022
ಅವಳ ಮನವೀಗ
ಹುಟ್ಟು ಮರೆತ ದೋಣಿ
ಹೊಯ್ದಾಡುತ್ತಿದೆ ದಿಕ್ಕು ತಪ್ಪಿ
ಗಾಳಿ ಬಂದ ಕಡೆಗೆ
ನಿನ್ನೆಯವರೆಗೆ ಕಾಣುತ್ತಿದ್ದ
ವರ್ಣಮಯ ಕನಸುಗಳು
ಇಂದು ಬಿದ್ದಿವೆ ಚೆಲ್ಲಾಪಿಲ್ಲಿ
ಕಾಲಿಗೆ ಚುಚ್ಚುತ್ತಿವೆ ಅಲ್ಲಿ ಇಲ್ಲಿ
ನಗು, ಅಳು, ರಾಗ, ದ್ವೇಷ
ಕೋಪ, ಅಸೂಯೆ, ಅಸಹನೆ ಹೀಗೆ
ಹತ್ತಾರು ಭಾವಗಳನ್ನು ತೋರಿಸುತ್ತಿದ್ದ
ಅವಳ ಮುಖವೀಗ ನಿರ್ಲಿಪ್ತ, ನಿರ್ವಿಕಾರ
ಬೆನ್ನಿಗಿರಿದ ಚೂರಿಯ ಬಗ್ಗೆ
ಯಾವ ಬೇಸರವೂ ಉಳಿದಿಲ್ಲ
ಅದು ಇಷ್ಟು ವರ್ಷ ಜೋಪಾನವಾಗಿಟ್ಟದ್ದೇ ಅದಕ್ಕಲ್ಲವೇ ಎಂಬಂತೆ
ವಂಚಿಸಿದ ಹೆಜ್ಜೆಗಳ ಮೇಲೆ ಮಾತ್ರ
ಯಾಕೋ ಇನ್ನೂ ತೀರದ ಮಮಕಾರ
ಎಷ್ಟಾದರೂ ತನ್ನೊಂದಿಗೆ
ಏಳು ಹೆಜ್ಜೆ ಹಾಕಿತ್ತಲ್ಲವೇ
ಇಂದು ಕಾಲಿಗೆ ತೊಡರಿದಂತಾದರೂ
ಅಂದು ತನ್ನ ಕಾಲಿಗೆ
ಗೆಜ್ಜೆ ಕಟ್ಟಿ ಕುಣಿಸಿತ್ತಲ್ಲವೇ
ಪಟ್ಟದರಸಿಯಂತೆ ಒಂದೊಮ್ಮೆ
ಮೆರೆಸಿತ್ತಲ್ಲವೇ
ಉಹುಂ..ಅಂತಹ ಯಾವ ಪ್ರಶ್ನೆಗಳೂ
ಈಗ ಅವಳಲ್ಲಿಲ್ಲ
ಉಸಿರು ಬಿಗಿ ಹಿಡಿದಂತಾದರೂ
ಬಂಧ ಕಳಚಿಕೊಳ್ಳಲಾಗುತ್ತಿಲ್ಲ
ಎಂಬುದೊಂದೇ ಅವಳ
ಎದುರಿಗಿರುವ ಸತ್ಯ


ಹೆಚ್ಚಿನ ಬರಹಗಳಿಗಾಗಿ
ಸಂಕ್ರಾಂತಿ
ಹುಣ್ಣಿಮೆ ರಾತ್ರಿ ದೇವರಾಡುವನು
ಮಹಾಸಾಗರವಾದಳು