ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರಾಜು ಬಿ‌ಜಿ
ಇತ್ತೀಚಿನ ಬರಹಗಳು: ರಾಜು ಬಿ‌ಜಿ (ಎಲ್ಲವನ್ನು ಓದಿ)

ಬರೇ ಓದಿಕೊಂಡವ​ರಿಗೆ ಬರೆಯುವುದೆಂದರೆ ಭಯವಿದ್ದಂತೆ ಪದಗಳೆಲ್ಲ ಸಿಗದೆ ತಡಕಾಡುವ ಕೈಗೆ ಒಡೆದ ಗಾಜಿನ ಚೂರು ಎಲ್ಲಾದರೂ ಚುಚ್ಚಬಹುದೆಂದು ಓದಿಕೊಂಡೇ ಉಳಿದವನ ಕೈಗೆ ಸಿಕ್ಕ ಕವಿತೆಗಳು ಒಂದಷ್ಟು ಮಾತು ಕಲಿಸಬಲ್ಲವು ,ಮಾತು ಮುಗಿದರೆ ಹೋಯ್ತು ,ಮುತ್ತು ಉದುರಿದರೆ ಹೋಯಿತು ಎನ್ನುವಂತೆ  ಪದ ಒಲಿದರೆ ಕವಿತೆ ಎಂದಂದುಕೊಂಡವನ ಪಾಲಿಗೆ ಸಿಕ್ಕ ಕವಿತೆಗಳಿವು, ವರ್ಷದ ಮಳೆ ಒಮ್ಮೆಲೇ ಬಿದ್ದಷ್ಟು ಅನುಭವ ಕೊಡಬಲ್ಲ ಕವಿತೆಗಳ ಬಗ್ಗೆ ಮಾತನಾಡದೇ ಉಳಿಯ​ಲಾರದೆ ಬರೆಯಲಾರಂಭಿಸಿದೆ.

ಕವಿತೆಯ ಓದನ್ನು ಒಂದು ವ್ರತಧ್ಯಾನದಂತೆ ಓದಿಸಿದ ನರೇಂದ್ರ ಪೈಯವ​ರ ಮುನ್ನುಡಿಯಿದೆ , ಅವರು ಕವಿತೆಗೊಲಿದ ಕವಿಯೆಂದು ನಾಮಕರಣ ಮಾಡಿದ್ದಾರೆ ಮತ್ತು ಇಲ್ಲಿನ ಕವಿತೆಗಳನ್ನು ಕುರಿತು ಅತ್ಯಂತ ವಿಸ್ತಾರವಾಗಿ ವಿಜಯರಾಘವನ್ ಅವರು ಕೆಂಡಸಂಪಿಗೆ ಆನ್ಲೈನ್ ಮ್ಯಾಗಜಿನ್ ಅಲ್ಲಿ ಬರೆದಿದ್ದಾರೆ. ಇಬ್ಬರ ಬರಹಗಳು ಕವಿಗೆ ಒಂದು ರೀತಿಯ ವರವೂ ಹೌದು, ಶಾಪವೂ ಹೌದು  ಅಂತ ನನಗನ್ನಿಸಿತಷ್ಟೆ.

ಇತ್ತೀಚೆಗೆ ಜಯಂತ ಕಾಯ್ಕಿಣಿಯವರ  ಹೊಸ ಕವಿತಾ ಸಂಕಲನ ವಿಚಿತ್ರಸೇನನ ವೈಖರಿ ಓದಿದೆ, ಅದರ ಮೊದಲ ಕವಿತೆ ‘ಕವಿತೆ ಬಿಡಿಸುವ ಮುನ್ನ’ ಓದಿಕೊಂಡಾಗ ಆಗುವ ಅನುಭವವನ್ನು ತನ್ನದೇ ವಿಶಿಷ್ಟ ರೀತಿಯಲ್ಲಿ ಹೇಳಿದ್ದಾರೆ.

ಹಿಡಿಯ ಹೋದರೆ

ಸುಶ್ರಾವ್ಯವಾದ ನಿಶ್ಯಬ್ದವಿತ್ತು
ಹೆಜ್ಜೆ ಇಡದ ಜಾಗದಲ್ಲಿ
ಹಿಡಿಯ ಹೋದರೆ ಹೊರಟು ಬಿಡುತಿತ್ತು

ಅಪಾರವಾದ ಸಪೂರವಿತ್ತು
ಹೋಗದಿರುವ ಬಯಲಿನಲ್ಲಿ
ಕರೆಯಹೋದರೆ ಕರಗಿ ಬಿಡುತಿತ್ತು

ಅಸ್ಪಷ್ಟವಾದ ಪ್ರಾರ್ಥನೆಯಿತ್ತು
ಅಪರಿಚಿತ ರೋಷದಲ್ಲಿ
ಮುಟ್ಟಹೋದರೆ ಮುಖವು ಮೂಡುತಿತ್ತು

ನಿಗೂಢಮಗ್ನ ಬಿಂಬವಿತ್ತು
ನಗ್ನವಾದ ನೀರಿನಲ್ಲಿ
ಇಳಿಯಹೋದರೆ ಭಗ್ನಗೊಳುತಿತ್ತು

ವಿಚ್ಛಿದ್ರವಾದ ಚಿತ್ರವಿತ್ತು
ಕಟ್ಟದಿರುವ ಗೋಡೆಯಲ್ಲಿ
ಮರೆಯಹೋದರೆ ಮುಗುಳುನಗುತಿತ್ತು

ಸ್ವಪ್ನದಂಥ ಗೊಂಬೆಯಿತ್ತು
ನಿದ್ದೆಹೋದ ಬೇಬಿ ಕೈಲಿ
ಕಸಿಯಹೋದರೆ ಬೆರಳು ಬಿಗಿಯುತಿತ್ತು.


– ಜಯಂತ ಕಾಯ್ಕಿಣಿ

ಹೀಗೆ ಕವಿತೆಗಳನ್ನು ಓದುವ ಮೊದಲು ಓದಿದ ನಂತರ ಹೇಳಬಯಸುವುದಕ್ಕಿಂತ, ನೋಡಬಯಸುವ ಕಣ್ಣಿಗೆ ಹೆಚ್ಚೇ ಕಾಣಬಹುದಲ್ಲವೇ ಅಂದುಕೊಂಡು ಬರೆದೆ ಮುಂದೆ.

ಅಸಲಿಗೆ ಈ ಪುಸ್ತಕದ ಯಾವುದೇ ಕವಿತೆ ಓದಿದ್ರೂ ಅದನ್ನು ಕುರಿತು ಬರೆಯಬೇಕೆನ್ನಿಸುತ್ತದೆ, ಅದನ್ನು ಮತ್ತೆ ಮತ್ತೆ ಒತ್ತಿ ಓದಬೇಕೆನ್ನಿಸುತ್ತದೆ, ಮರೆಯದೆ ಉಳಿದು ಬಿಡುವ ಪದಗಳೇ ಪದಾರ್ಥವಾಗಿ ಒಕ್ಕಲೆಬ್ಬಿಸುವ ರಾತ್ರಿಗಳು ಆಕಾಶಗಳು ಮೋಡಗಳು ಮಳೆ ಎದುರು ನಿಂತ ಮನೆಗಳು, ಕಾಡು ಅದರ ಹಾದಿ, ನಿದ್ದೆ ಎಚ್ಚರಕ್ಕಿರುವ ಚೌಕಾಸಿ, ಅಮ್ಮ ಅಪ್ಪನ ಕೂಗು ಕೈಗೆ ಎಟುಕುವ ನಕ್ಷತ್ರ, ಅಪ್ಪ ಹೇಳಿ ಮಾಡಿಸಿದ ಸೊಳೆ ಹುಳಿ ಸಾಸಿವೆ ಒಂದೆಲಗದ ತಂಬುಳಿ ಇಷ್ಟಲ್ಲದೇ ಮತ್ತೆಷ್ಟೋ..

ಗುರುಗಣೇಶರ ಕವಿತೆಗಳನ್ನು ಓದಲು ಯಾವ ಸೂಕ್ಷ್ಮ ದರ್ಶಕಗಳೇನೂ ಬೇಕಾಗುವುದಿಲ್ಲ, ಒಂದು ಕವಿತೆ ಓದಿ ಬಿಟ್ಟರೆ ಮುಗಿತೆ! ಎನ್ನಲಾಗುವುದಿಲ್ಲ ಇಲ್ಲಿನ ಕವಿತೆಗಳೆಂದೂ ಮುಗಿಯಲಾರವು, ಮುಗಿಲಂತೆ ರೆಕ್ಕೆ ಬಗಿಲಿಗೆ ಕಟ್ಟಿಕೊಂಡ ಹಕ್ಕಿಗಳಿಗೆ ಈಜುಕೊಳದಲ್ಲಿ ಬಿದ್ದವಂತೆ ಕಾಡಬಲ್ಲವು, ಹಾಗೆ ಕೂಡಬಲ್ಲವು, ಬದುಕಿನ ಒಂದು ಬಗಲಿಗೆ ಮಾನವನ ಹಲವು ಬುಗ್ಗೆಗಳನ್ನು ಹೊತ್ತು ತರಬಲ್ಲವು.

ನೋಡಲು ಯುವಕವಿಯಂತೆ ಕಂಡರು ಅಜ್ಞಾತವಾಗಿಯೇ ಅವಿತ ಕನ್ನಡದ ಕವಿ ಎ‌.ಕೆ. ರಾಮಾನುಜನ್ ಅವರ ಕವಿತೆಗಳ ನೆನಪನ್ನು ಹತ್ತಿ ಹಾಯಿಸುತ್ತಾರೆ, ಹೌದು ಒಬ್ಬ ಯುವಕವಿ ತನ್ನ ಭಾಷೆಯ ತಲೆಮಾರು ಭಾಷಾವಿಜ್ಞಾನಿಯೂ ಆದ ಕವಿಯನ್ನು ನೆನಪಿಸುವುದೆಂದರೆ ನನಗಂತೂ ಸಾಮಾನ್ಯವಾದ ವಿಚಾರವಲ್ಲ. ರಾಮಾನುಜನ್ ಹೇಳುತ್ತಾರೆ, ಮಾತಿನಾಚೆ ಮಾತಿಲ್ಲದೆ ನಿನ್ನನ್ನು ಮಾತೇ ಮನಸ್ಸಾದ / ನನ್ನಂಥ ವಾಚಾಳಿ ಮಾತಾಡಿಸುವುದು, ತಾನೇ ಹೇಗೆ -ಹೇಳಿ ಕವಿತೆಯ ಗೂಡೊಡೆಯುವ ಕೆಲಸ ಮಾಡದೇ ಉಳಿದಿರಲೆಂದು ಬಹುಶಃ ಮೇಲಿನ ಸಾಲುಗಳನ್ನು ನನ್ನಂಥವನಿಗೆ ಹೇಳಿರಬೇಕು.

ಇಲ್ಲಿನ ಕವಿತೆಗಳ ದೆಸೆಗೆ ಮನ ಹೊಕ್ಕಾಗ ಮಳೆ ಮತ್ತೆ ಮತ್ತೆ ಬೀಳುತ್ತಲೇ ಹೋಗಬಹುದು, ಅದರೊಟ್ಟಿಗಿನ ಕವಿಯೂ ಹೀಗೆ ಕೇಳಬಹುದು,

ಯಾರು ಕೇಳಲಿಲ್ಲ
ಯಾಕೆ ಬೀಳುತ್ತಿಯ? ಗಾಯ ಗೀಯ ಆದರೆ
ಆಗುವುದಿಲ್ಲವೆ ನೋವು ಕನ್ನೆತ್ತರ.
ನಾವೆಲ್ಲ ಬಿದ್ದರಂತೂ ಆಗುತ್ತಪ್ಪ..

ನಾಟಕೀಯವಲ್ಲದ ದೃಷ್ಟಿ  ಚಾಚಿಕೊಂಡ ಭವಿಷ್ಯ ಹೀಗೂ ಕಾಣಬಹುದಲ್ಲವೇ ? ಮುಂದುವರೆದು,

ಅದಕ್ಕೆ
ನಾವು ಮನುಷ್ಯರು
ತೆವಳಿ ಈಗೀಗ ಏಳುವುದನ್ನು ನಡೆಯುವುದನ್ನು
ಎದ್ದುಓಡುವುದನ್ನು
ಬಡಿದಾಡಿ ಸಾಯುವುದನ್ನು ಕಲಿತು

ಕವಿಯ ಮಾತು ರಾತ್ರಿ ಕರಗಬಹುದು, ಕವಿತೆ ಮಳೆಯಂತೆ ಕರಗುವಿಕೆಯಿಂದ ತಪ್ಪಿಸಿಕೊಂಡು ನೆಲ ಹಿಡಿಯಬಹುದಲ್ಲವೇ?

ಕೇವಲ ಅರ್ಥದ ಬೆನ್ನು ಹತ್ತಲಾರದಷ್ಟು ಅನುಭವಗಳನ್ನು ಇಲ್ಲಿನ ಕವಿತೆಗಳು ಕೊಡಬಲ್ಲವು.

ಇವರ ಒಂಬತ್ತನೇ ಕವಿತೆಯೊಂದಿದೆ

ಮಣ್ಣು
ಬೆಳೆವ ಹೆಣ್ಣು


ಹಸಿರು ಹುಲ್ಲು ಕರುಡು ಗಾದಿ
ಅಬ್ಬಿ ಹರಿವ ಜಾರಿಕೆ ಹೊಳೆ


ಒಲೆಯ ಬಿಸಿಲು
ವಸ್ತ್ರ ಒಣಗಲು ಹೊಗೆ
ಖೊ ಖೊ ಖೊ ಕೆಮ್ಮು
ಕರಟದಲ್ಲಿ ರಾತ್ರಿಯ ಕಫ


ಅಮ್ಮ ಸಾಯುವಾಗ ಮೂವತ್ತೆಂಟು ವರ್ಷ

ಇಂದು
ಹೊಸ ಮನೆಯಲ್ಲಿ ಅವಳ ಶ್ರಾದ್ದ

ಇವೆಲ್ಲವನ್ನು ಹೇಗೆ ಅರ್ಥೈಸಬಹುದು ಹೇಳಿ! ಯಾರ ಕೂಗನ್ನು ಹೇಗೆ ಬರೆಯಬಹುದು, ಮಣ್ಣಿಗೂ ಹೆಣ್ಣಿಗೂ ಕಳೆದುಹೋದ ಇತಿಹಾಸ ಅಮ್ಮನಿಗೂ ಇಂದು ಎದುರಾದ ವರ್ತಮಾನದ ಹೊಸ ಬಾಗಿಲು ಅವಳ ನೆನಪಿನ ಶ್ರಾದ್ದಕ್ಕೂ!

ಇದನ್ನು ಓದುವಾಗ ಪದೇ ಪದೇ ಎ‌.ಕೆ. ರಾಮಾನುಜನ್ ನೆನಪಾಗದೆ ಉಳಿಯಲಾರರು, ಅವರದೇ ಕವಿತೆಯೊಂದಿದೆ.

ಕಣ್ಣೆದುರಿಗೆ ಪ್ರತ್ಯಕ್ಷ
ವಾದದ್ದನ್ನು
ನೋಡು
ವುದಕ್ಕು


ಎರಡು ಕಣ್ಣಿದ್ದರು ಸಾಲದು
ಸ್ವಾಮಿ
ಅದೃಷ್ಟ
ಬೇಕು

ಕವಿತೆಯೊಂದನ್ನು ವಿಶ್ಲೇಷಿಸಿ ವ್ಯಾಖ್ಯಾನಿಸಿದರೆ ಓದುಗನನ್ನು ಕೆಣಕಬಹುದು ನಿಜ ಅದನ್ನೇ ನಿಜವೆಂದುಕೊಂಡರೆ  ಭಾಷೆ ಗಟ್ಟಿಯಾಗಿ ಉಸಿರಿಡಿದುಕೊಂಡಂತೆಯೆ ಸರಿ. ಟಿ.ಪಿ ಅಶೋಕರ  ಕಾವ್ಯ ಪ್ರೀತಿ ಪುಸ್ತಕದಲ್ಲಿ ಅನಂತಮೂರ್ತಿಯವರ ಶಬ್ದಸೂತಕ ಎಂಬ ಕವಿತೆಯೊಂದನ್ನು ಹಂಚಿಕೊಂಡಿರುತ್ತಾರೆ.

ಪದ್ಯ ಪದವಿಲ್ಲದಿರಬೇಕು
ಹೆಜ್ಜೆಗುರುತು ಇಲ್ಲದ ಪಕ್ಷಿ ಹಾರುವಂತೆ


ಕಾಲದ ಸ್ತಬ್ದ ಎನ್ನಿಸಬೇಕು ಏರುವ ಚಂದ್ರನಂತೆ

ಹೇಳಕೂಡದು
ಇರಬೇಕು

ಆದರಿಲ್ಲಿ ಗುರುಗಣೇಶರು ನಿಜದ ಕವಿತೆ ಅವಿತು ಕೂರತ್ತೆ ಉಡದಂತೆ ಎನ್ನುತ್ತಾರೆ. ಅದರ ಜೀವನದ ಕ್ರಮವನ್ನೇ ತನ್ನದೊಂದೇ ಕವಿತೆಯೆಂದು ಜಾಗೃತೆಯಾಗಿ ಹಿಡಿದು ಸಿದ್ದಿ ರಾಮನ ನಾಮರೂಪಕದಿಂದ ಉಡವನ್ನು ಕೊಂದು ಮಧ್ಯಾಹ್ನದ ಸಾರಾಗಿಸುತ್ತಾರೆ, ಮತ್ತೆ ಭೂತಳದಲ್ಲಿ ಅದರ ಮರಿಗಳನ್ನು ಕವಿತೆಯಂತೆ ಹುಡುಕುತ್ತಾರೆ.
ಮನುಷ್ಯನ ಬುದ್ದಿ ಮತ್ತು ವಿಕಾಶವನ್ನು ಅಣಕಿಸುವ ಕವಿತೆಯೊಂದಿದೆ,

ಈ ಹಕ್ಕಿಗಳಿಗೆ ಯಾಕೆ
ರೆಕ್ಕೆಯಿದೆ ಪುಕ್ಕವಿದೆ
ಜೊತೆಗೆ ಕೊಕ್ಕು?


.ಆಂ?
ಆನೆಗೆ ಸೊಂಡಿಲು
ಕುದುರೆಗೆಬಾಲ
ಮನುಷ್ಯನಿಗೆ ಬುದ್ದಿ

ಮನುಷ್ಯನ ಬುದ್ಧಿಯನ್ನು ಯಾವ ರೀತಿ ಸುದ್ದಿ ಮಾಡಬಹುದೆಂದು,

ಹೀಗೆ ಒಂದು ದಿನ
ಸುಮ್ಮನೆ ಬರೆದೆ
ಪದ್ಯವಾಯಿತು
ಅಂದರು


ಉಂಡೆ
ಹೊಟ್ಟೆ ತುಂಬಿತು.
ಅಂದರು
ಕಾಣದೆ ಬೀಸಿದ ಗಾಳಿ
ಹಿತ ಎನಿಸಿತು


ರಾತ್ರಿ
ಅಪರೂಪಕ್ಕೆ ಹೆಂಡತಿ
ಪ್ರೀತಿ ಮಾಡಿದಳು


ಯಾವುದು ಪದ್ಯ
ಯಾವುದು ಬದುಕು
ಒಂದು ತಿಳಿಯಲಿಲ್ಲ

ಬದುಕು ಪದ್ಯ ಎರಡು ಬೇರೆಯಲ್ಲ, ಬೇರೆಯಾಗಿದ್ದೇ ಆದರೆ ಅದರ ಬೇರು ಅಲ್ಲಿ ಇಲ್ಲವೇ ಇಲ್ಲ.

ಬಿಡಿ ಬಿಡಿಯಾಗಿ ಓದಿಸುವ ಹಲವು ಪದ್ಯಗಳಿಲ್ಲಿವೆ, ಹೀಗೆ

ದೇವರು
ದೇವರಾಗಿದ್ದಾನೆ
ಇಳಿಯುವುದ ಮರೆತು


ತೀವ್ರ ಸ್ಫೋಟ
ಜನ ಸಾಯಲಿಲ್ಲ
ಕವಿತೆ ಹುಟ್ಟಿತು

ಒಟ್ಟಾರೆ ಕವಿಯ ಜಿಜ್ಞಾಸೆ ಕವಿತೆಯಾಗಿ ಉಳಿಯುತ್ತದೆ, ಹಾಗೆ 

ಕವಿ
ಅಂದರೆ
ಒಬ್ಬ ಮನುಷ್ಯ

ಎಂದೆನ್ನುವಾಗ ಎ.ಕೆ. ರಾಮಾನುಜನ್ ಅವರ

ಮಾತು ಮುಗಿಯುವ ಮೊದಲು
ಮಾತು ಬಿಟ್ಟರೆ
ದೇವರೆ
ಮಾತು ಕಲಿಸಬಾರದೆ
ಸ್ವಭಾವೋಕ್ತಿ ಹೇಳಿಕೊಡಬಾರದೆ


ಪ್ರೀತಿಯ ವಿಷಯದಲ್ಲಾದರೂ
ವಕ್ರೋಕ್ತಿ ಸೌಮ್ಯ ವಿಚಾರ
ಮೈ ಮುಟ್ಟಿದ ಹಾಗೆ
ಮನಸ್ಸು ಮುಟ್ಟಿಸಬಾರದೆ

ಒಂದೊಂದೇ ಓದುತ್ತ ಪ್ರಶ್ನೆ ಹುಟ್ಟಿಕೊಳ್ಳಬಹುದು, ತಾನುತಾನಾಗಿಯೇ ಉತ್ತರಗಳು ಓದುಗರಲ್ಲಿಗೆ ಬೆನ್ನಟ್ಟಬಹುದು, ಮುನ್ನೆಲೆಗೆ ಬರಬೇಕಾದ ಕವಿತೆಗಳಿವು. ಕವಿ ತಾನು ಕಂಡ ಪರಿಸರವೇ ವೈವಿಧ್ಯಮಯ ಹರಿಸುವ ಹಿನ್ನಲೆಯವು.

ಹಲವು ಕವಿತೆಗಳು ಕವಿತೆಯೆಂಬ ಜಿಜ್ಞಾಸೆಗೆ ಹೆಚ್ಚು ಹುಟ್ಟಿರುವಂತೆ ಕಂಡು ಬರುತ್ತವೆ

ಇರಬಹುದು
ಅಮಾನವೀಯ ಕವಿತೆಗಳೂ


ಓದುವವರು?

ಇದಕ್ಕೊಂದು ಪ್ರಶ್ನೆ

ಕೆಲಸ ಮಾಡಿದರೆ
ತಿಂಗಳು ತಿಂಗಳು ಪಗಾರ
ಮದುವೆಯಾದರೆ
ಮಕ್ಕಳು ಮರಿ ಸಂಸಾರ


ಬದುಕಲು
ಕವಿತೆ


ಬೇಕೆ ?

ಬೇಕೆಂಬುದು ಓದುಗನಿಗೆ ಬಿಟ್ಟದ್ದಾ ಅಂತ.

ಕವಿ ತಿರುಮಲೇಶರ ಅವ್ಯಯ ಕಾವ್ಯದಲ್ಲಿ ಇದ್ದಂತೆ ಹಲವು ವ್ಯಾಕುಲಗಳನ್ನು ಹೊರಹಾಕಿದ್ದಾರೆ ಹೀಗೆ,

ಬದುಕೊಂದು ವಿಧವಾದರೆ
ಕವಿತೆ ಇನ್ನೊಂದು ತರವೆ
ಯಾವುದು ವಾಸ್ತವತೆ
ಇದು
ಪಲಾಯನ ವೆ ಪಲ್ಲಟವೇ ?

ಇಲ್ಲಿ ಕವಿ ಮನುಷ್ಯನನ್ನು ಹೆಚ್ಚು ಅಣಕಿಸುತ್ತಾನೆ, ಹಾಗೆ ನಗರವನ್ನು, ಕವಿಗಳನ್ನು ಬಿಟ್ಟರೂ ಬಿಡದ ಬದುಕನ್ನು ಒತ್ತೊತ್ತಾಗಿನ ಪ್ರೀತಿಯನ್ನು ಯಾವ್ಯಾವ ರೀತಿಯಲ್ಲೂ ವರ್ಣಿಸದ ಹಸಿ ಹಸಿ ಉಸಿರನ್ನು ಒಂದಷ್ಟು ಪ್ರಶ್ನೆಗಳ ಮೂಲಕ ಹೇಳಿದ್ದಾರೆ.

ಬಲದವರಿಗೆ ಬಲ
ಎಡದವರಿಗೆ ಎಡ


ಸಾಯಲು
ಬೇರೆ ದಾರಿಯೇ ಇಲ್ಲವೇ
ಗುರುವೇ


ಬದುಕಲೂ

ಕವಿಯ ಹತಾಶೆಯೂ ಜವಾಬ್ದಾರಿಯ ಅಕ್ಷರಗಳಲಿ ಬಲಿಯಾಕಿ ಬಿಡುವ ಅವನ ಕಣ್ಣುಗಳಲ್ಲಿ ಏನೇನು ತುಂಬಿರಬಹುದು, ಜಾಗೃತ ಪ್ರಪಂಚದ ಹಳದಿ ಮೋಡ ಕೆಂಪು ಸೂರ್ಯ ತಂಬಿಗೆಯಂಥ ಚಂದಿರ ಎದೆಯೊಕ್ಕರೆ ಮರ ಅದರೊಳಗಿನ ಎಲೆ, ಎಲೆಯೊಳಗಿನ ಹೂ‌ ಮತ್ತೆ ಮರಕೆ ವರವಾದ ಹುಟ್ಟು ಅದಕ್ಕಿರುವ ಕವಿತೆಗಳ ಗುಟ್ಟು.

ಬದಲಿಸು ಮಗ್ಗಲು
ಒಮ್ಮೆಯಾದರೂ
ಮಿಟುಕಿಸುವ ಕಣ್ಣು


ಶವವೇ

ಬದುಕು ತನ್ನ ದೃಷ್ಟಿಗೆ ಹೇಗೆಲ್ಲಾ ತಾಕಬಹುದೊ ಅದಷ್ಟೆ ಅಲ್ಲದೆ ಮತ್ತೇನೊ ಕೊಡಬಲ್ಲದು, ನಾವೇಕೆ ಅದನ್ನು ದೂರಬೇಕು , ಕವಿಯ ಜಾಡು ಕವಿತೆಯನ್ನು ಎಲ್ಲೂ ಓಡಿಸದೇ ಇಷ್ಟೆಲ್ಲಾ ಮಾತನಾಡುವಂತೆ ಮಾಡಿದ  ಕವಿತೆಗಳನ್ನು ಈ ಹೊಸ ಕವಿಯನ್ನು ಓದುಗ ಸಮೂಹ ನಿಜಕ್ಕೂ ಬೇರೆಯ ಥ​ರವೇ ಸ್ವಾಗತಿಸಬೇಕು.
ಇಲ್ಲಿನ ಹೆಚ್ಚಿನ ಕವಿತೆಗಳು, ಗದ್ಯ ಪದ್ಯಗಳ ಕ್ರಿಯಾಪದವೇ ಕಾಣದೆ ಒಂದು ವಿಶಿಷ್ಟ​ವಾದ ಶೈಲಿಯಲ್ಲಿ ಕಂಡು ಬರುವುದರಿಂದ ಒಂದು ಭಿನ್ನವಾದ ದೃಷ್ಟಿ ಪದ್ಯ ಹೆಚ್ಚು ತೀವ್ರ ಎನ್ನುವ ನೆಲೆಯಲ್ಲಿ, ಕವಿತೆಯ ಕುರಿತೇ ಹೆಚ್ಚೆಚ್ಚು ಬಿಡಿಪದ್ಯಗಳಲ್ಲಿವೆ.

ಅಂಥದ್ದೇ  ಎ.ಕೆ. ಆರ್ ಅವರ ಪದ್ಯವೊಂದಿದೆ

ಕುಸ್ತಿ ಸೋತ
ಪಯಿಲ್ವಾನ


ಕೆಮ್ಮಣ್ಣಿನಲ್ಲಿ
ದಿನವೆಲ್ಲ


ತಲೆವರೆಗೂ
ಹೂತಿಟ್ಟುಕೊಂಡು


ಸಂಜೆ ಎದ್ದ
ಹಾಗೆ


ಕೆಲವು ಪದ್ಯ

ಈ ಪದ್ಯದ ಅರ್ಥ ಅದರ ಅರ್ಥವಂತಿಕೆಯನ್ನು ನಾವು ಬಿಡಿ ಬಿಡಿಯಾಗಿ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಇಂತಹ ಅನೇಕ ಪದ್ಯಗಳನ್ನು ಈ ಪುಸ್ತಕದ ಗುರುಗಣೇಶರು ಸಹ ಬರೆದಿದ್ದಾರೆ. ವಾಸ್ತವ ದೃಷ್ಟಿ ಪ್ರಕೃತಿ ಹರಿದು ಹಂಚುವ ನೆಲದಾಳದ ವ್ಯಾಮೋಹ, ಪುಸ್ತಕದಲ್ಲಿ‌ ನಮ್ಮನ್ನು ಒದೆಯದೆ ಬಿಡುವುದಿಲ್ಲ.