ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಆಚೀಚಿನ ಆಯಾಮ – ೨೧ : ಊರುಗೋಲು ಅಲಿಯಾಸ್ ವಾಕಿಂಗ್ ಸ್ಟಿಕ್

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ಹಳೆಯ ಕನ್ನಡ ಚಿತ್ರಗಳಲ್ಲಿ ಆರ್. ನಾಗೇಂದ್ರರಾಯರನ್ನು, ಸಂಪತ್ ಅವರನ್ನು ಒಮ್ಮೆ ನೆನಪಿಸಿಕೊಳ್ಳಿ. ಮೈ ಮೇಲೆ ಒಂದು ಬೆಲೆ ಬಾಳುವ ಸೂಟು, ಎಡಗೈಯಲ್ಲಿ ಹೊಗೆಯಾಡುವ ಪೈಪು, ಬಲಗೈಯಲ್ಲಿ…. ಅದೇ ನಮ್ಮ ಇಂದಿನ ಬರಹದ ಶೀರ್ಷಿಕೆ, ಊರುಗೋಲು. ಆದರೆ ಅವರ ಅಂತಸ್ತಿನವರೆಲ್ಲ ಊರುಗೋಲು ಎನ್ನುವುದು ಮುಪ್ಪಿನ ಸಂಕೇತವೆಂದು, ಆ ಪದವನ್ನು ಒಪ್ಪದೇ ಅದಕ್ಕೆ ಇಂಗ್ಲೀಷಿನ ವಾಕಿಂಗ್ ಸ್ಟಿಕ್ ಎನ್ನುವ ಪದವನ್ನೇ ಬಳಸುತ್ತಿದ್ದರು. ಹಲವಾರು ವರ್ಷಗಳವರೆಗೆ ಚಿತ್ರಗಳಲ್ಲಿ ( ಯಾವುದೇ ಭಾಷೆಯಿರಲಿ) ಹುಡುಗನ  ಶ್ರೀಮಂತ ತಂದೆಯೋ,ಹುಡುಗಿಯ ಶ್ರೀಮಂತ ತಂದೆಯೋ  ತಮ್ಮ ಬಲಗೈಗಳಲ್ಲಿ ಈ ವಾಕಿಂಗ್ ಸ್ಟಿಕ್ಕನ್ನು ಅದೇನೋ ರಾಜ ಗಾಂಭೀರ್ಯದಿಂದ ಹಿಡಿದು ಬರುತ್ತಿದ್ದರು. ಅವರ ವೇಷಭೂಷಣ​ಗಳ ಜೊತೆಗೆ ಅದೂ ಒಂದು ಅವರ ಅಂತಸ್ತಿನ ಸಂಕೇತವಾಗಿತ್ತು. ಆದರೆ ಅವರೇನೇ ಕರೆಯಲಿ ಸಾಮಾನ್ಯ ಜನರ ಬಾಯಲ್ಲಿ ಅದು ಊರುಗೋಲೇ ಆಗಿತ್ತು.

ಊರುಗೋಲು ಎನ್ನುವ ಪದವೇ ಹೇಳುವಹಾಗೆ ಇದು ಊರಲಿಕ್ಕೆ ಬೇಕಾದ ಕೋಲು.  ಯೌವನ ಕಳೆದು, ಮುಪ್ಪಿನಂಚಿಗೆ ಬಂದಾಗ ದೇಹದ ಅವಯವಗಳು ಸಂಪು ಹೂಡುತ್ತವೆ. ಅವುಗಳಲ್ಲಿ ಮೊದಲು ಕೈ ಕೊಡುವುದು ಮೊಣಕಾಲು ಅಥವಾ ಮಂಡಿ. ಕಾಲುಗಳಿಗೆ ಈ ಭಾಗ ಮಧ್ಯದಲ್ಲಿದ್ದು ದೇಹದ ಭಾರ ಇವುಗಳ ಮೇಲೇ ಬೀಳುತ್ತದೆ. ಪಾಪ ಈ ಮಂಡಿಗಳು ದೇಹದ ಭಾರವನ್ನು ಹೊತ್ತೂ ಹೊತ್ತೂ ಅವುಗಳಲ್ಲಿಯ ಮೃದು ಸ್ನಾಯು ಸವೆದುಹೋಗಿ ಕೀಲುಗಳು ಅಸಾಧ್ಯ ನೋವುಂಟು ಮಾಡುತ್ತವೆ. ಆಗ ಸ್ವಲ್ಪ ನಡೆದಾಡಲು ಸಹ ಕೋಲಿನ ಸಹಾಯ ಬೇಕೇ ಬೇಕು. ನೆಲಕ್ಕೇ ಊರಿ ಅದರ ಸಹಾಯದಿಂದ ಹೆಜ್ಜೆ ಹಾಕಬೇಕಾಗುತ್ತದೆ. ಊರಬೇಕಾದ್ದರಿಂದ ಇದು ಊರುಗೋಲಾಗುತ್ತದೆ.

ಈ ಊರುಗೋಲುಗಳು ಅಂತಸ್ತಿಗೆ ತಕ್ಕಂತೆ ಇರುತ್ತಿದ್ದವು. ಬಡವರ ಮನೆಗಳಲ್ಲಿ ಮಾಮೂಲೀ ಬಿದಿರಿನ ಕೋಲೇ ಈ ಉದ್ದೇಶ ನೆರವೇರಿಸುತ್ತಿದ್ದರೆ, ಸ್ವಲ್ಪ ಹೆಚ್ಚಿನ ಸ್ತರದ ತರಗತಿಗಳಲ್ಲಿ ಪಾಲಿಶ್ ಹಾಕಿ ನುಣ್ಣಗೆ ಮಾಡಿದ ಕೋಲು ಉಪಯೋಗವಾಗುತ್ತಿತ್ತು.  ಬಡವರ ಮನೆಯ ಕೋಲು ಬರೀ ಒಂದು ಡೊಂಕು ತಿರುಗಿದ್ದರೆ, ನುಣ್ಣನ ಕೋಲಿಗೆ ನಾಯಿಯದ್ದೋ, ಸಿಂಹದ್ದೋ ಕೆತ್ತನೆಯ ಹಿಡಿ ಇರುತ್ತಿತ್ತು. ಇನ್ನೂ ಎತ್ತರಕ್ಕೆ ಹೋಗುವ ಶ್ರೀಮಂತ ಜನ ತಮ್ಮ ಈ ಹಿಡಿಕೆಗೆ ಬೆಳ್ಳಿ ತಗಡು ಹೊಡೆಸುತ್ತಿದ್ದಿದ್ದು ಅವರ ಅಂತಸ್ತು ಸಾರುತ್ತಿತ್ತು. ಈ ಶ್ರೀಮಂತ ವರ್ಗದ ಕೆಲವರು ತಮ್ಮ ಬೆತ್ತವನ್ನು ನಾಗರ ಹಾವಿನಂತೆ ಅಂಕು ಡೊಂಕಾಗಿ ಮಾಡಿಸಿ ಅದರ ಹಿಡಿಕೆಯಲ್ಲಿ ಹಾವಿನ ಹೆಡೆ ಮಾಡಿಸಿ ಮೆರೆದಿದ್ದು ನೋಡಿದ್ದೇವೆ. ಆದರೆ ಮನೆಯ ಹೆಂಗಸರ ಆಕ್ಷೇಪಣೆ ಇದ್ದದ್ದರಿಂದ ಇವುಗಳು ತುಂಬಾ ಕಮ್ಮಿಯಾಗೇ ಇದ್ದವು.   ಶ್ರೀಮಂತ ವರ್ಗಕ್ಕೆ ಮಾತ್ರ ಈ ವಾಕಿಂಗ್ ಸ್ಟಿಕ್ ಬರೀ ಗತ್ತು ಬಿರಲಿಕ್ಕೆ ಮಾತ್ರ ಇರುತ್ತಿತ್ತು. ಎಲ್ಲೋ ಕೆಲ ಸಂದರ್ಭಗಳಲ್ಲಿ ಮಾತ್ರ ಅವರು ಊರುಗೋಲಾಗಿ ಬಳಸುತ್ತಿದ್ದರು ಎನ್ನಬಹುದು. ಅನೇಕ ಚಿತ್ರಗಳಲ್ಲಿ ತನ್ನ ಕೈಯಲ್ಲಿಯ ಊರುಗೋಲನ್ನು ಬಳಸುತ್ತಾ ಅಜ್ಜಿಯಂದಿರು ಹೆದರಿಸುವುದನ್ನು ನೆನಪಿಸಿಕೊಳ್ಳಬಹುದಾಗಿದೆ.

ಎಲ್ಲ ಪ್ರವಾಸ ಕ್ಷೇತ್ರಗಳಲ್ಲಿ ಎಲ್ಲ ತರದ ಉರುಗೋಲುಗಳು ಮಾರಾಟಕ್ಕೆ ಸಿಕ್ಕುತ್ತಿದ್ದು, ಯಾತ್ರೆಗೆ ಹೋದವರು ಮರಳಿ ಬರುವಾಗ ತಮ್ಮ ಮನೆಯ ಹಿರಿಯರಿಗೆ ಕಾಣಿಕೆಯಾಗಿ ಇವುಗಳನ್ನು ತಂದುಕೊಟ್ಟು ತಮ್ಮ ಗೌರವವನ್ನು ತೋರುತ್ತಿದ್ದರು. ಏನಾದರೂ ತಮಗೆ ಬೇಕಾದ್ದನ್ನು ಮಂಜೂರು ಮಾಡುವುದಾದರೆ ಯುವ ಜನರು ತಮ್ಮ ಅಜ್ಜಂದಿರಿಗೆ ಅಥವಾ ಅಜ್ಜಿಯಂದರಿಗೆ ಈ ತರದ ಒಂದು ಕೋಲು ಮಾಡಿಸಿಕೊಡುವ ಆಶ್ವಾಸನೆ ಮಾಡುತ್ತಿದ್ದರು. ಊರುಗೋಲುಗಳು ಬರೀ ವಯಸ್ಸಾದವರಿಗೇ ಅಲ್ಲ. ಕಾಯಿಲೆ ಬಿದ್ದು ಎದ್ದ ಜನಕ್ಕೆ, ಅಪಘಾತದಲ್ಲಿ ಕಾಲು ಜಖಂ ಆಗಿ ನಡೆಯಲು ಕಷ್ಟ ಆಗುತ್ತಿದ್ದವರಿಗೆ ಸಹ ಬೇಕಾಗುತ್ತಿದ್ದವು. ಕೂಡು ಕುಟುಂಬಗಳೇ ಜಾಸ್ತಿ ಇರುತ್ತಿದ್ದ ಆ ದಿನಗಳಲ್ಲಿ ಬಹಳ ಮಟ್ಟಿಗೆ ಮನೆಗೊಬ್ಬರು ಈ ತರದ ಕೋಲುಧಾರಿ ಇರುತ್ತಿದ್ದರು. ಕೈಯಲ್ಲಿರುತ್ತಿದ್ದ ಈ ಕೋಲುಗಳು ಬರೀ ಊರುಗೋಲುಗಳಾಗಿಯಷ್ಟೇ ಅಲ್ಲ. ನಾಯಿಗಳನ್ನು ಆಚೆ ಅಟ್ಟಲು, ಪುಂಡ ಹುಡುಗರನ್ನು ಹೆದರಿಸಲು ಮತ್ತೆ ತುಂಟ ಮೊಮ್ಮಕ್ಕಳಿಗೆ ಪೆಟ್ಟು ಕೊಡಲು ಅಜ್ಜಂದಿರಿಗೆ ಆಯುಧಗಳಾಗುತ್ತಿದ್ದವು. ಆಗಾಗ ಮಹಿಳೆಯರು ತಮ್ಮ ಸೀರೆಗಳನ್ನು ಮೇಲಿನ ತಂತಿಗೆ ಹಾಕಲು ಅಥವಾ ತೆಗೆಯಲು ಸಹ ನೆರವಾಗುತ್ತಿದ್ದವು. ಈಗಲೂ ಬೆಟ್ಟ ಹತ್ತಲು ಕೋಲುಗಳ ಸಹಾಯ ಬೇಕೇ ಬೇಕು. ಕಾಶ್ಮೀರದ ವೈಷ್ಣೋದೇವಿ ದರ್ಶನಕ್ಕೆ ಬೆಟ್ಟ ಹತ್ತುವಾಗ ಕೆಳಗಿನ ಆಫೀಸಿನಿಂದ ಹತ್ತು ರುಪಾಯಿ ಕೊಟ್ಟು ಕೋಲು ಬಾಡಿಗೆ ಪಡೆದು ಬೆಟ್ಟ ಹತ್ತಿದ್ದೆವು. ಬೆಟ್ಟ ಇಳಿಯುವಾಗ ಕೈಯಲ್ಲಿಯ ಈ ಕೋಲು ಇಳಿಜಾರಿನ ಭಾರವನ್ನು ಮೊಣಕಾಲುಗಳ ಮೇಲೆ ಬೀಳದ ಹಾಗೆ ತಡೆಯುತ್ತದೆ. ಅದೇ ರೀತಿ ಶಬರಿಮಲದ ಬೆಟ್ಟ ಏರುವಾಗಲೂ ಕೋಲು ಉಪಯೋಗಿಸುವುದು ಕಂಡು ಬರುತ್ತದೆ. ಇಲ್ಲಿ ವಯಸ್ಸಿನ ಭೇದವಿಲ್ಲದೇ ಎಲ್ಲರೂ ಇದರ ಸಹಾಯ ಪಡೆಯುತ್ತಿರುವುದು ಕಾಣಬಹುದು.

ಈಗ ಬಹಳ ಮಟ್ಟಿಗೆ ಮರೆಯಾದ ಜಾನಪದ ಚಿತ್ರಗಳಲ್ಲಿಯ ಮಾಂತ್ರಿಕನ ಕೈಯಲ್ಲಿ ಅಂಕು ಡೊಂಕಿನ ಬೆತ್ತವಿರುತ್ತಿದ್ದು ಅದರ ಹಿಡಿಗೆ ಕೆತ್ತಿದ್ದ ನಾಯಿಯ ಬಾಯಿಂದ ಬೆಂಕಿ ಬರುತ್ತಿದ್ದದ್ದು ಸಹ ಇಲ್ಲಿ ಉಲ್ಲೇಖಿಸಬಹುದಾಗಿದೆ. ಅವನು ತನ್ನ ಮಂತ್ರವನ್ನು ಪ್ರಯೋಗಿಸಿ ನಾಯಿಯಾಗಿಯೋ, ಕತ್ತೆಯಾಗಿಯೋ ಮಾಡುವಾಗ ಈ ಬೆತ್ತವನ್ನೇ ಮೇಲಕ್ಕೆತ್ತಿ ಮಂತ್ರ ಪ್ರಯೋಗಿಸುತ್ತಿದ್ದದ್ದು ಬಹುಶ ಇಂದಿನ ಪೀಳಿಗೆ ನೋಡಿರಲಾರದು. ಮತ್ತೊಂದು ವಿಷಯ ! ಅನೇಕ ಪತ್ತೇದಾರಿ ಚಿತ್ರಗಳಲ್ಲಿ ಖಳನಾಯಕ ಹೀಗೇ ಊರುಗೋಲನ್ನು ಬಳಸುತ್ತ ಸಮಯ ಬಂದಾಗ ಅದರ ಹಿಡಿಯನ್ನು ಎಳೆದು ಅದರಿಂದ ಒಂದು ಕತ್ತಿಯನ್ನು ತೆಗೆದು ಯಾರನ್ನಾದರೂ ಕೊಲೆಗೈಯುವುದೋ ಅಥವಾ ತನ್ನ ರಕ್ಷಣೆಗೆ ಉಪಯೋಗಿಸುವುದೋ ಮಾಡುವುದು ಸಹ ಕಂಡು ಬಂದಿದೆ. ಇವೆಲ್ಲ ನಾವು ಚಿತ್ರಗಳಲ್ಲಿ ಮಾತ್ರ ನೋಡಿದ್ದು ಅನ್ನಿ. ನಿಜ ಜೀವನದಲ್ಲಿ ಈ ತರದ ಉಪಯೋಗಗಳನ್ನು ಕಾಣೆವು.

ಮೇಲೆ ಬರೆದ ಇಡೀ ಲೇಖನ ( ಬೆಟ್ಟಗಳ ಏರುವಿಕೆಯ ಪ್ರಸಂಗ ಬಿಟ್ಟು) ಭೂತ ಕಾಲದಲ್ಲಿ ಬರೆದಿರುವುದು ಏಕೆ ಅಂತ ನಿಮಗನಿಸಿರಬಹುದು. ನನ್ನ ಅನಿಸಿಕೆ ಈಗ ಈ ಕೋಲುಗಳು ಕಾಣುವುದು ತುಂಬಾ ಕಮ್ಮಿಯಾಗಿದೆ. ಒಂದು  ಜೀವನವಿಧಾನ ಸುಧಾರಿಸಿದೆ. ಮಂಡೆಗಳಿಗೆ ತುಂಬಾ ಔಷಧಿಗಳು ಬಂದಿವೆ. ಶಸ್ತ್ರಚಿಕಿತ್ಸೆಯ ಉಪಾಯವೂ ಇದೆ. ಹಾಗಾಗಿ ಮುಂಚಿನ ತರ ಸ್ವಲ್ಪ ಮಟ್ಟದ ಮಂಡಿನೋವಿಗೆ ಉರುಗೋಲಿನ ಮೊರೆಹೋಗುವ ಅಗತ್ಯ ಕಮ್ಮಿಯಾಗಿದೆ.  ಮತ್ತೊಂದು ಊರುಗೋಲಿನ ಅವತಾರ ಭಾರದ ಕಟ್ಟಿಗೆಯಿಂದ ಹಗುರದ ಪ್ಲಾಸ್ಟಿಕ್ ಗೆ ಬದಲಾವಣೆ ಪಡೆದು ಕೋಲಿನ ಮಹತ್ವ ಕಳೆದುಕೊಂಡಿದೆ. ಈ ಹೊಸ ರೂಪಾಂತರದ ಊರುಗೋಲಿನಲ್ಲಿ ವಿವಿಧ ತಳಗಳು ಬಂದಿವೆ. ಮೂರು ಕಾಲಿನ, ನಾಲ್ಕುಕಾಲಿನ ಕೋಲುಗಳು (?), ಉದ್ದವನ್ನು ಹೆಚ್ಚು ಕಮ್ಮಿಮಾಡಬಹುದಾದ ಏರ್ಪಾಡುಗಳು ಎಲ್ಲ ಬಂದಿವೆ. ಮತ್ತೆ  ಇವು ಈಗ ಪ್ರವಾಸಿ ತಾಣಗಳಲ್ಲಿ ಸಿಗುವುದಿಲ್ಲ. ಸರ್ಜಿಕಲ್ ಸಾಮಾನಿನ ಅಂಗಡಿಗಳಲ್ಲಿ ಸಿಗುತ್ತವೆ. ಇನ್ನೂ ಹೇಳಬೇಕಾದರೆ ಇವು ಈಗ ಗತ್ತಿನ ಸಂಕೇತಗಳಲ್ಲ. ಯಾವುದೋ ಊನದ ಸಂಕೇತಗಳಾಗಿವೆ. ಚಕ್ರದ ಬಂಡಿಗಳು ಇವುಗಳ ಸ್ಥಾನ ತುಂಬುತ್ತಿವೆ. ಸ್ವಯಂಚಾಲಿತ ಚಕ್ರದ ಬಂಡಿಗಳು ಶ್ರೀಮಂತಿಕೆಯ ಸಂಕೇತ ಈಗ. ಈ ಬಂಡಿಗಳನ್ನು ಮಹಡಿಗೆ ಏರಿಸುವ ಲಿಫ್ಟನ್ನು ಸಹ ಆವಿಷ್ಕರಿಸಲಾಗಿದೆ. ಈ ರೀತಿ ಒಂದಾನೊಂದು ಕಾಲದಲ್ಲಿ ಪ್ರತಿಷ್ಟೆಗೂ,ಅಗತ್ಯಕ್ಕೂ ಸಂಗಾತಿಯಾಗಿದ್ದ ಊರುಗೋಲು, ಈಗ ಬರೀ ಪ್ರತಿಮೆಯಾಗಿ ಸಾಹಿತ್ಯದಲ್ಲಿ ಬಳಕೆಯಾಗುತ್ತಿದೆ ಅಷ್ಟೇ.