- ವಿಷ್ಣು ತುಳಸಿ - ಫೆಬ್ರುವರಿ 26, 2024
- ಎಸ್.ಪಿ. ಜತೆ, ಎದೆ ತುಂಬಿ.. - ಸೆಪ್ಟೆಂಬರ್ 26, 2020
ಕಳೆದ ನಾಲ್ಕು ದಶಕಗಳಿಂದ ೪೦,೦೦೦ಕ್ಕೂ ಹೆಚ್ಚು ಹಾಡುಗಳನ್ನು ನಾನಾ ಭಾಷೆಯಲ್ಲಿ ಹಾಡುತ್ತಾ ಬಂದು ಸಿನೆ ಮಾಧುರ್ಯದ ಒಂದು ಮೇರು ದನಿಯಾಗಿ ನಮ್ಮ ಶ್ರವಣ ಸಂಸ್ಕೃತಿಯನ್ನು ರೂಪಿಸಿರುವ ಎಸ್.ಪಿ. ಬಾಲಸುಬ್ರಮಣ್ಯಂ ಸದಾ ಕಿಶೋರ ಹೃದಯ ಹೊಂದಿರುವ ‘ಸುಸಂಪನ್ನ’ ಗಾಯಕ. ಹೃದಯ ‘ಕಿಶೋರ’ವಾಗಿದ್ದರೂ ಮನಸಾರೆ ರಫಿಯನ್ನು ಇಷ್ಟ ದೇವತೆಯಾಗಿ, ಸ್ಫೂರ್ತಿ ಮಾದರಿಯಾಗಿ ಆರಾಧಿಸುವ ಎಸ್.ಪಿ. ದನಿ ನೀಡದಿರುವ ನಾಯಕರೇ ದಕ್ಷಿಣ ಭಾರತದಲ್ಲಿಲ್ಲ ಎಂದರೆ ಖಂಡಿತ ಉತ್ಪ್ರೇಕ್ಷೆ ಅಲ್ಲ. ನಮ್ಮ ಕನ್ನಡದಲ್ಲೇ ತಗೊಳ್ಳಿ, ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ರವಿಚಂದ್ರನ್, ಅನಂತನಾಗ್.. ಇವರೆಲ್ಲರ ಚಹರೆಗಳ ಜತೆಜತೆಗೆ ನಮ್ಮ ಕಿವಿಯಲ್ಲಿ ಮೊಳಗುವ ಮುಕ್ತ ಕಂಠದ ಅನುರಣಶೀಲ ದನಿ ಎಸ್.ಪಿ. ಅವರದು. ಹಿಂದಿಯಲ್ಲೂ ಸಲ್ಮಾನ್ ಖಾನ್ (ಮೈನೆ ಪ್ಯಾರ್ ಕಿಯಾ), ಸಂಜಯ್ ದತ್ (ಸಾಜನ್), ಕಮಲಹಾಸನ್ (ಏಕ್ ದೂಜೆ ಕೇಲಿಯೆ) ಇವರೆಲ್ಲರ ಎಂಬತ್ತರ ದಶಕದ ಅಚ್ಚಳಿಯದ ತಾರುಣ್ಯದ ದನಿ ಎಸ್.ಪಿ.!
ಕಣ್ಣದಾಸನ್‌ರಿಂದ ರೆಹಮಾನ್ ತನಕ ಅಗಣಿತ ಅಪ್ರತಿಮ ಪ್ರಯೋಗಶೀಲ ಸಂಗೀತ ನಿರ್ದೇಶಕರೆಲ್ಲರ ಕಣ್ಮಣಿಯಾಗಿರುವ ಎಸ್.ಪಿ. ನಿರ್ದೇಶಕರ ಆಶಯಗಳನ್ನೂ ಮೀರಿ ಹೊಸ ಭಾವತೀವ್ರತೆಯನ್ನು, ಮೌಲ್ಯವರ್ಧನೆಯನ್ನು ಹಾಡುಗಳಿಗೆ ಕೊಟ್ಟು ಚಿತ್ರ ಸಂಗೀತದ ವ್ಯಾಕರಣದ ವಿಕಾಸಕ್ಕೂ ಕಾರಣರಾದವರು. ಸಂಗೀತದ ನಾನಾ ವಿಚಾರ ಶಾಲೆಗಳಿಗೆ ತಮ್ಮನ್ನು ಮುಕ್ತವಾಗಿ ತೆರೆದುಕೊಂಡು ಪ್ರತಿ ಹಾಡಿಗೂ ಅತ್ಯಂತ ಸಹಜವಾಗಿ ತಮ್ಮ ಉತ್ಕೃಷ್ಟತೆಯನ್ನು ಧಾರೆ ಎರೆದವರು. ಈ ಸ್ವರದಾರ ತಮ್ಮ ಸಾಧನೆಯ ಹಾದಿಯ ಗತವೈಭವವನ್ನೆ ಆಸ್ಯಾದಿಸುತ್ತ ಆರಾಮು ಕುರ್ಚಿಯಲ್ಲಿ ಕೂರದೇ, ಹೊಸ ಪೀಳಿಗೆಯ ಎಳೆ ಪ್ರತಿಭೆಗಳನ್ನು ಪ್ರದರ್ಶಿಸಿ, ಒರೆಗೆ ಹಚ್ಚಿ ಪ್ರೋತ್ಸಾಹಿಸುವ “ಎದೆ ತುಂಬಿ ಹಾಡುವೆನು..”ದಂಥ ಕಾರ್ಯಕ್ರಮಗಳನ್ನು ಮೂರು ಭಾಷೆಗಳಲ್ಲಿ (ಕನ್ನಡ, ತಮಿಳು, ತೆಲುಗು) ನಡೆಸುತ್ತಾ ಕ್ರಿಯಾಶೀಲನಾಗಿ ಮುನ್ನಡೆದಿರುವುದು ನಿಜಕ್ಕೂ ಒಂದು ಹೃದಯಂಗಮ ವಿದ್ಯಮಾನ. “ಬದುಕಿನಂತೆ ಸಂಗೀತದಲ್ಲೂ ಕಲಿಕೆ ನಿರಂತರ. ಕಲಿಸುತ್ತಲೇ ಕಲಿಯುತ್ತೇವೆ, ಕಲಿಯುತ್ತಲೇ ಕಲಿಸುತ್ತೇವೆ” ಎಂದು ನಂಬಿದ ಎಸ್.ಪಿ. ಅವರ ಜತೆ ಮೂರು ವರುಷಗಳ ಕಾಲ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಸಹಸ್ಪಂದಿಯಾಗಿ ನನಗೆ ಲಭಿಸಿರುವ ಅವರ ಒಡನಾಟ ತುಂಬ ಅಪ್ಪಟ, ಅಮೂಲ್ಯ.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳನ್ನು ಅವರು ಆರ್ತರಾಗಿ ಆಲಿಸುವ, ಉತ್ಕಂಠಿತರಾಗಿ ತಿದ್ದುವ ರೀತಿಯ ಬಗ್ಗೆ ನಾನು ಬಣ್ಣಿಸಬೇಕಾದ್ದು ಏನೂ ಇಲ್ಲ. ಅದು ಈಗಾಗಲೇ ಕನ್ನಡವೆಂಬ ಪರಿಸರದ ಪೋಷಕ ಮೌಲ್ಯವಾಗಿ ಮನೆ ಮನೆಯ ಮಾತಾಗಿದೆ. ಕಳೆದೈದು ದಶಕಗಳ ಭಾರತೀಯ ಚಿತ್ರಸಂಗೀತದ ಒಂದು ವಿಶ್ವಕೋಶದಂತಿರುವ ಅವರ ಮನಸ್ಸು, ಉಸ್ಫೂರ್ತವಾಗಿ, ಸ್ವರಗಳ ಸ್ಪರ್ಶಕ್ಕೆ ತೆರೆದು ಅಪೂರ್ವ ಸ್ಮೃತಿ ವಿನ್ಯಾಸಗಳನ್ನು ಬಿಟ್ಟುಕೊಡುವ ರೀತಿಯೇ ವಿಶಿಷ್ಟವಾಗಿದೆ. ಶಂಕರ ಜೈಕಿಶನ್, ಸಲೀಲ್ ಚೌಧರಿ, ಇಳೆಯ ರಾಜ, ರಾಜನ್ ನಾಗೇಂದ್ರ, ಜಿ.ಕೆ. ವೆಂಕಟೇಶ್, ಕೀರವಾಣಿ, ಎಸ್.ಡಿ. ಬರ್ಮನ್, ಅರ್.ಡಿ. ಬರ್ಮನ್, ಮದನ್ ಮೋಹನ್ – ಇವರೆಲ್ಲರ ಸಂಯೋಜನೆಗಳ ಆಂತರಿಕ ನಂಟನ್ನು ಥಟ್ಟಂತ ಅಲ್ಲೇ ಆಗಷ್ಟೇ ಮನಗಂಡವರಂತೆ ಮಗುವಿನ ಮುಗ್ಧ ಅಚ್ಚರಿಯಲ್ಲಿ ಹಂಚಿಕೊಳ್ಳುತ್ತಾರೆ. ಕಾರ್ಯಕ್ರಮದಲ್ಲಿ ಮಕ್ಕಳ ಜತೆ ಮಾತಾಡುವಾಗ ಶುರುವಾದ ಈ ಪ್ರಸ್ತಾಪ, ಶೂಟಿಂಗ್ ನಡುವಿನ ವಿವಿಧ ಬಿಡುವಿನಲ್ಲಿ, ವಿರಾಮದ ಅಡೆತಡೆಯಲ್ಲಿ ಮುಂದುವರೆಯುತ್ತದೆ. ಶೂಟಿಂಗ್ ನಡುವಿನ ಈ ವ್ಯತ್ಯಯದ ಬಿಡುವಿನಲ್ಲಿ ಅವರಿಂದ ಅಚಾನಕ್ ಆಗಿ ಹೊಮ್ಮುವ ಸಂಗತಿಗಳೇ ಅದ್ಭುತ, ಅಪರೂಪ. ಆಗ ಇವರ ಇಶಾರೆಗೇ ಕಾದವರಂತೆ ಇರುವ ಗಿಟಾರ್ ಶ್ರೀನಿವಾಸ್, ತಬಲಾ ವೇಣು, ಕೀಬೋರ್ಡ್ ಉಮಿ, ಡ್ರಮ್ ಪದ್ಮನಾಭ, ಬೇಸ್ ಗಿಟಾರ್ ಕ್ಯಾಲಬ್, ಕೊಳಲಿನ ರಾಜೇಶ್.. ಇವರೆಲ್ಲಾ ಅವರಿಗೆ ಬೇಕಾದ ಹಳೆಯ ಹಾಡಿನ ಸುಳಿವನ್ನು ನುಡಿಸುತ್ತಾರೆ ಮತ್ತು ಎಸ್.ಪಿ. ಹಾಡಿಂದ ಹಾಡಿಗೆ, ಹೂವಿಂದ ಹೂವಿಗೆ ಹಾರುವ ಮಧುಕರನಂತೆ ಹಾರುತ್ತಾ ಹೋಗುತ್ತಾರೆ. ಯಾವ ಹಾಡಿನಲ್ಲಿ ಯಾವ ರಾಗ ಮಿಶ್ರಗೊಂಡಿದೆ, ಹಾಡಿನ ಯಾವ ಜಾಗ ಸೂಕ್ಷ್ಮ.. ಇತ್ಯಾದಿ. ಯಮನ್ ಕಲ್ಯಾಣ್ ರಾಗದ ಹಾಡು ಬಂದರೆ ಸಾಕು, ಹೂವಿಂದ ಹೂವಿಗೆ ಹಾರುವ ದುಂಬಿ.. ಜಬ್ ದೀಪ್ ಜಲೇ ಆನಾ.. ಓ ಹಸಕೇ ಮಿಲೇ ಹಮ್ ಸೇ.. ರಂಜಿಶ್ ಹೀ ಸಹೀ.. ಪೂಜಿಸಲೆಂದೇ ಹೂಗಳ ತಂದೆ.. ಹೀಗೆ ಇಂಪಾದ ಹಾಡುಗಳ ಸರಮಾಲೆಯೇ ಶುರು. ಮತ್ತೆ ಪ್ರಖರ ಬೆಳಕು ಬಂದು ಶೂಟಿಂಗ್‌ಗೆ ರೆಡೀ ಕರೆ, ನಿರ್ದೇಶಕರ ಅಶರೀರ ಮೈಕ್ ವಾಣಿಯಲ್ಲಿ ಬಂದಾಗಲೇ ಈ ಸ್ವರ ಸಮಾಧಿಯ ಭಂಗ! ಮುಂದಿನ ಬಿಡುವಿನಲ್ಲಿ ಮತ್ತೆ ಬೇರೆ ಸ್ವರ ಸಲ್ಲಾಪ.
ಎಸ್.ಪಿ. ಗೆ ಭಾಷೆಯ ಬಗ್ಗೆ ತೀವ್ರ ಆಸಕ್ತಿ. ಕನ್ನಡದ ಹೊಸ ಪದಗಳು ಕಿವಿಗೆ ಬಿದ್ದರೆ ತಕ್ಷಣ ತಮ್ಮ ಎದುರಿನ ಕಾಗದದಲ್ಲಿ ಬರೆದುಕೊಳ್ಳುತ್ತಾರೆ. ಬಂದ ಅತಿಥಿಗಳ ಮಾತಿನಲ್ಲಿ ಯಾವುದೋ ಹೊಸ ಪದಪುಂಜ ಸಿಕ್ಕರೆ, ನಂತರ ಗುಟ್ಟಾಗಿ ನನ್ನ ಕಿವಿಯಲ್ಲಿ ಅದರ ಅರ್ಥ ಕೇಳಿಕೊಳ್ಳುತ್ತಾರೆ. ಆಶೀಶ್ ಪೂರ್ವಕ, ಹರ್ಷಧ್ವಾನ ಇತ್ಯಾದಿ ಪದಗಳನ್ನು ತಂದು ಅವರು ಕನ್ನಡವನ್ನು ಸುಸಂಪನ್ನಗೊಳಿಸಿದ್ದಾರೆ. ಪೋಟಿ ಶಬ್ದವನ್ನು ಸ್ಪರ್ಧೆಗೆ ಬಳಸುತ್ತಿದ್ದವರು ಕನ್ನಡದಲ್ಲಿ ಪೈಪೋಟಿ ಎಂದು ನಾನು ವಿನಮ್ರವಾಗಿ ಸೂಚಿಸಿದಾಗ ತಕ್ಷಣ ತಿದ್ದಿಕೊಂಡರು. ಅಭ್ಯರ್ಥಿ ಎಂಬ ಪದ contestantಗೆ, ಸ್ಪರ್ಧಿಗಿಂತ ಚೆನ್ನಾಗಿದೆ, ಅದನ್ನೀಗ ತೆಲುಗಿನಲ್ಲೂ ನಾನು ಬಳಸುತ್ತಿದ್ದೇನೆ ಎಂದರು. ಹೀಗೆ ಸದಾ ಹೊಸತನ್ನು ಆಲಿಸಲು ಅವರ ಕಿವಿ ಶ್ರುತಿಗೊಂಡಿರುತ್ತದೆ.
ಕಳೆದ ನಾಲ್ಕು ದಶಕಗಳಲ್ಲಿ ಅವರ ಹಾಡುಗಳಿಗೆ ನುಡಿಸಿರುವ ದಕ್ಷಿಣ ಭಾರತ ಮತ್ತು ಮುಂಬಯಿಯ ಎಲ್ಲ ವಾದ್ಯ ವೃಂದದವರ ಪ್ರತಿ ವಿವರವೂ ಅವರಿಗೆ ಹೃದ್ಗತ. ಕೆಲ ತಿಂಗಳ ಹಿಂದೆ ಮುಂಬಯಿಯ ವಿಖ್ಯಾತ ಸ್ಯಾಕ್ಸೋಫೋನ್ ವಾದಕ ಮನೋಹರಿ ಸಿಂಗ್ ತೀರಿಕೊಂಡಾಗ ಅವರ ಒಡನಾಟವನ್ನು ನೆನೆಸಿಕೊಳ್ಳುವುದರ ಜತೆಗೆ ಆತ ಎಸ್.ಡಿ. ಬರ್ಮನ್‌ರ ಯಾವ್ಯಾವ ಹಾಡಿನಲ್ಲಿ (ತೇರೆ ಮೇರೇ ಸಪನೇ ಅಭ್ ಏಕ್ ರಂಗ ಹೈ, ಗಾತಾ ರಹೇ ಮೇರಾ ದಿಲ್..) ಅದ್ಭುತವಾದದ್ದನ್ನು ನೀಡಿದ್ದಾನೆ ಎಂಬುದನ್ನು ಹಾಡಿ ಹಾಡಿ ಮೈಮರೆತರು. ಮನೋಹರಿ ಸಿಂಗ್‌ಗೆ, ಸ್ಯಾಕ್ಸೋಫೋನ್ ನುಡಿಸುವಾಗ ಸ್ಟುಡಿಯೋದಲ್ಲಿ ಎಲ್ಲ ಕಡೆ ಕತ್ತಲು ಮಾಡಿ ಕೇವಲ ಅವರ ಮೇಲಷ್ಟೆ ಬೆಳಕು ಬೀರುವಂತೆ ಮಾಡಿದಾಗ ಹೆಚ್ಚು ಆವೇಶ, ತನ್ಮಯತೆ ಬರುತ್ತಿತ್ತಂತೆ. ತಂದೆ ಕಿಶೋರ್ ಕುಮಾರ್‌ನ ಎಲ್ಲ ಗುಣಾಂಶಗಳ ಬದಲಿಗೆ ಕೇವಲ ಕೀಟಲೆ ಉಡಾಫೆಯನ್ನು ಹೆಚ್ಚಿಗೆ ಅಳವಡಿಸಿಕೊಂಡಿದ್ದರಿಂದ ಅಮಿತಕುಮಾರ್ ಪ್ರತಿಭೆಯಿದ್ದೂ ಹೇಗೆ ತನ್ನ ಕೆರಿಯರ್ ಕೆಡಿಸಿಕೊಂಡ ಎಂಬುದನ್ನು ಎಸ್.ಪಿ. ಹಳಹಳಿಕೆಯಿಂದ ಹೇಳುತ್ತಾರೆ. ಆರ್.ಡಿ. ಬರ್ಮನ್ ‘೧೯೪೨ ಲವ್‌ಸ್ಟೋರಿ’ ಮಾಡುವಾಗ ಅದರಲ್ಲಿಯ ಎಲ್ಲ ಹಾಡುಗಳಿಗೂ ಅಮಿತಕುಮಾರ್‌ನನ್ನೇ ಮನಸ್ಸಿನಲ್ಲಿಟ್ಟುಕೊಂಡು, ವಾರಗಟ್ಟಲೆ ಅವನಿಗಾಗಿ ಕಾದು, ಕೊನೆಗೂ ಅವನು ಹಾಜರಾಗದೇ ಹೋದಾಗ ಕುಮಾರ್‌ಶಾನುನನ್ನು ಮನಸ್ಸಿಲ್ಲದೆ ಬಳಸಿಕೊಳ್ಳಬೇಕಾಗಿ ಬಂದ ಪ್ರಸಂಗವನ್ನು, ತುಂಬಾ ನಿರಾಸೆಯಿಂದ ಎಸ್.ಪಿ. ಜತೆ ಹಂಚಿಕೊಂಡಿದ್ದರಂತೆ.
ಎಸ್.ಪಿ. ಬಲು ದೊಡ್ಡ ಅಣಕ ಕಲಾವಿದ ಕೂಡ. ತಮ್ಮ ಒಡನಾಟದ ಎಲ್ಲ ವ್ಯಕ್ತಿಗಳ ವರ್ತನೆಯನ್ನು ಹುಬೇಹೂಬು ನಟಿಸಿ ತೋರಿಸಬಲ್ಲ ಎಸ್.ಪಿ. ಮತ್ತೆ ಮತ್ತೆ ಅಣಕಮಾಡಬಯಸುವ ವ್ಯಕ್ತಿಗಳು ಜಿ.ಕೆ. ವೆಂಕಟೇಶ್ ಮತ್ತು ರಾಜನ್. ಎಷ್ಟೇ ಅದ್ಭುತವಾಗಿ ಹಾಡಿದರೂ ತನಗೆ ತೃಪ್ತಿಯಾಗುವ ತನಕ, ನಿರ್ವಿಕಾರ ಭಾವದಿಂದ “ಸೇಫ್ಟಿಗೊಂದು ಇರಲಿ” ಎಂದು ಮತ್ತೆ ಮತ್ತೆ ಪುನರ್ ಟೇಕ್‌ಗೆ ಒತ್ತಾಯಿಸುವ ರಾಜನ್‌ರ ಏಕಾಗ್ರ ಆಗ್ರಹ ಎಸ್.ಪಿ. ಗೆ ಅಚ್ಚುಮೆಚ್ಚು. ರಾಜನ್ ನಾಗೇಂದ್ರರ ಪ್ರತಿಯೊಂದು ಸಂಯೋಜನೆಗಳೂ ಅನನ್ಯ ಎನ್ನುವ ಎಸ್.ಪಿ. ‘ಬಯಲು ದಾರಿ’ಯ, ಬಾನಲ್ಲಿ ನೀನೆ ಬಯಲಲ್ಲಿ ನೀನೆ ಹಾಡನ್ನು, ತಮಿಳಿನ ಚಿತ್ರವೊಂದಕ್ಕೆ ಹಟಮಾಡಿ ಹಾಕಿಸಿಕೊಂಡು ಹಾಡಿದ್ದನ್ನು ಅಭಿಮಾನದಿಂದ ನೆನೆಯುತ್ತಾರೆ.
ಲತಾ ಮಂಗೇಶಕರರ ಜತೆಗಿನ ವಿದೇಶ ಯಾತ್ರೆಯಲ್ಲಿ ಆಕೆಯ ಸಮಯಪ್ರಜ್ಞೆ ಅವರನ್ನು ತುಂಬಾ ಪ್ರಭಾವಿಸಿದ ಸಂಗತಿ, ಹೇಳಿದ ಸಮಯಕ್ಕೆ ಕಾರ್ಯಕ್ರಮ ಆರಂಭವಾಗುವಂತೆ ಲತಾಜೀ ವಹಿಸುತ್ತಿದ್ದ ಎಚ್ಚರ, ಹಟ ಅನುಕರಣೀಯ ಎನ್ನುತ್ತಾರೆ. ಒಮ್ಮೆ ಅಮೆರಿಕೆಯ ಸಂಗೀತ ಸಂಜೆಯೊಂದರಲ್ಲಿ ಕಾರ್ಯಕ್ರಮ ಶುರುವಾಗಿ ಮುಕ್ಕಾಲು ಗಂಟೆಯಾದರೂ ತಡ ತಡವಾಗಿ ಬರುತ್ತಿದ್ದ ಠೀವಿ ಠೇಂಕಾರಗಳ ಭಾರತೀಯರನ್ನು “ನೀವು ಹೈಟೆಕ್ ಕಾರುಗಳಲ್ಲಿ ನಿಮ್ಮ ನಿಮ್ಮ ಕೆಲಸದ ಆಫೀಸುಗಳನ್ನು ಮುಂಜಾನೆ ಸರಿಯಾದ ಸಮಯಕ್ಕೆ ಹೇಗೆ ತಲುಪುತ್ತೀರೋ, ಅಷ್ಟೇ ಎಚ್ಚರ ಮತ್ತು ಮುತುವರ್ಜಿಯಿಂದ ಸಾಂಸ್ಕೃತಿಕ ಸಭೆ ಸಮಾರಂಭಗಳಿಗೂ ಹೋಗಬೇಕು. ಅದೇ ನೀವು ಕಲಾವಿದರಿಗೆ, ಗಾಯಕರಿಗೆ ಸಲ್ಲಿಸುವ ದೊಡ್ಡ ಗೌರವ” ಎಂದು ತರಾಟೆಗೆ ತೆಗೆದುಕೊಂಡ ಲತಾಜೀ ಅವರ ನಿಲುವು ಈಗಲೂ ಒಂದು ಎಚ್ಚರಿಕೆಯ ಗಂಟೆಯಂತೆ ತನ್ನನ್ನು ಜಾಗ್ರತವಾಗಿರಿಸಿದೆ ಎನ್ನುತ್ತಾರೆ ಎಸ್.ಪಿ.
ಮಹಮ್ಮದ್ ರಫಿ ಎಂದರೆ ಸಾಕು, ಎಸ್.ಪಿ. ಆವಾಹನೆಗೊಳಗಾದ ಭಕ್ತನಂತಾಗುತ್ತಾರೆ. “ರಫಿಯ ಹಾಡು ಕೇಳುವುದೇ ನನ್ನ ಪಾಲಿನ ಭಗವತ್ ಅನುಭೂತಿ” ಎನ್ನುವ ಎಸ್.ಪಿ. ಗೆ ರಫಿಯ ಪ್ರತಿ ಹಾಡುಗಳೂ ಜೀವಕ್ಕಿಂತ ಸನಿಹ. ಪುಕಾರತಾ ಚಲಾ ಹೂಂ ಮೈ, ಮೈ ಪ್ಯಾರ್ ಕಾ ರಾಹೀ ಹೂಂ, ದಿನ ಢಲ ಜಾಯೇ.., ತೂ ಕಹಾಂ ಹೈ ಬತಾ.., ಕೌನ್ ಹೈ ಜೋ ಸಪನೋಂ ಮೇ ಆಯಾ..ದಂಥ ವಿಖ್ಯಾತ ಹಾಡುಗಳ ಜೊತೆ ಅಷ್ಟಾಗಿ ಜನಮಾನಸದಲ್ಲಿ ಉಳಿದಿರದ ಅನರ್ಘ್ಯ ರತ್ನಗಳಂಥ ಅಪರೂಪದ… ಹುಯೀ ಶಾಮ್ ಉನಕಾ ಖಯಾಲ್ ಆಗಯಾ, ವಹೀ ಜಿಂದಗೀ ಕಾ ಸವಾಲ್ ಆಗಯಾ..ದಂಥ ಹಾಡುಗಳನ್ನು ಅದರ ಸಾರ ಸರ್ವಸ್ವದೊಂದಿಗೆ ಮೈಮರೆತು ಹಾಡುತ್ತಾರೆ. ಮತ್ತು ಪ್ರತಿ ಸಾಲುಗಳ ನಡುವಿನ ಮ್ಯೂಸಿಕನ್ನೂ, ವಯೋಲಿನ್ ವೃಂದವಿದ್ದರೆ ಆ ಥರ ಅಭಿನಯಿಸಿ, ಪಿಯಾನೋ ಇದ್ದರೆ ಆ ಥರ ಅಭಿನಯಿಸಿ – ಹಾಡುತ್ತಾರೆ. ರಫಿಯ ದನಿಯ ‘ದಿಲ್ ಜೋ ನ ಕೆಹ ಸಕಾ’.. ಎಂಬ ಹಾಡಿನ textureಗೂ, ‘ಸರ್ ಜೋ ತೆರಾ ಚಕರಾಯೆ’.. ಹಾಡಿನ textureಗೂ, ‘ನ ಕಿಸೀ ಕಿ ಆಂಖ ಕಾ ನೂರ್ ಹೂಂ’.. ಹಾಡಿನ textureಗೂ ಇರುವ ಸೂಕ್ಷ್ಮ ವ್ಯತ್ಯಾಸವನ್ನು ತಿಳಿಸುತ್ತಾರೆ. ಶಮ್ಮಿಕಪೂರ್‌ಗೆ ಹಾಡುವಾಗ ಚಿಮ್ಮಿ ಮಂಗಾಟ ಮಾಡುವಂಥ ಉತ್ಸಾಹದ ಭಂಗಿ (ತಾರೀಫ್ ಕರೂಂ..), ದಿಲೀಪ್ ಕುಮಾರ್‌ಗೆ ಹಾಡುವಾಗ ಹೇಗೆ ಬೇರೆಯಾಗುತ್ತದೆ, ಆಯಾ ನಾಯಕರ ಲಕ್ಷಣಗಳನ್ನು ರಫಿ ಹೇಗೆ ತನ್ನ ಕಂಠದಲ್ಲಿಯೇ ಹೊಮ್ಮಿಸುತ್ತಿದ್ದ ಎಂಬುದರ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಾರೆ.
ಎಸ್.ಪಿ. ಗೆ ಕ್ರಿಕೆಟ್ ಅಂದ್ರೆ ತುಂಬ ಹುಚ್ಚು. ಶೂಟಿಂಗ್ ನಡುವೆ ಅವರ ಸಹಾಯಕನೊಬ್ಬ ಬಂದು ಕಿವಿಯಲ್ಲಿ ಅವರಿಗೆ ಆಗಾಗ ಏನೇನೋ ಹೇಳಿ, ಅವರು ಗಂಭೀರವಾಗಿ ‘ಪರವಾಗಿಲ್ಲ ಸರಿ ಹೋಗುತ್ತದೆ’ ಎನ್ನುವಂತೆ ಸಮಾಧಾನ ಮಾಡುವುದು ನಡೆಯುತ್ತಿತ್ತು. ಯಾರಿಗೋ ಹುಷಾರಿಲ್ಲ ಬಹುಶಃ ಎಂದುಕೊಂಡಿದ್ದೆ ನಾನು. ಆಮೇಲೆ ನೋಡಿದರೆ ಯಾವುದೋ ಕ್ರಿಕೆಟ್ ಮ್ಯಾಚಿನ ಸ್ಕೋರ್ ಸುದ್ದಿ ಸ್ಪಂದನ ಅದು. ರಫಿ ಬಿಟ್ಟರೆ ಅವರ ಇನ್ನೊಂದು ಆರಾಧ್ಯ ದೈವ ಸಚಿನ್. ಓ.ಪಿ. ನಯ್ಯರ್ ಒಮ್ಮೆ ಅವರ ಚೆನ್ನೈ ಮನೆಯಲ್ಲಿ ಅತಿಥಿಯಾಗಿ ಬಂದವರು, ಹಾರ್ಮೋನಿಯಂ ನೋಡಿ ಅದನ್ನು ನುಡಿಸುತ್ತ ನಡುರಾತ್ರಿಯ ತನಕ ಮೆಹಫಿಲ್ ನಡೆಸಿದ್ದು ಎಸ್.ಪಿ. ಯವರ ಅಭಿಮಾನದ ನೆನಪುಗಳಲ್ಲೊಂದು. ಮೆಹದಿ ಹಸನ್ ಜೊತೆ ಊಟ ಮಾಡುವಾಗ ಇವರು ಸಸ್ಯಾಹಾರ ಸೇವಿಸುವುದನ್ನು ನೋಡಿ.. “ಅರೆ ಭಾಯ್, ವೆಜಿಟೇರಿಯನ್ ಹೋ.. ಫಿರ್ ಆಪ್ ಕೇ ಗಾನೆಂ ಮೆಂ ಇತನೀ ತಾಖತ್ ಕಹಾಂ ಸೇ ಆತೀ ಹೈ?” ಎಂದು ಅಚ್ಚರಿಯಿಂದ ಕೇಳಿದ್ದು ಇನ್ನೊಂದು ಅಂಥ ನೆನಪು. “ಎಂತೆಂಥ ಸಾಧಕರು ಇಲ್ಲಿ ಆಗಿಹೋಗಿದ್ದಾರೆ. ಅಂಥವರಿಗೇ ಸಿಗದ ಈ ಪ್ರಶಸ್ತಿ ಬಿರುದು ಸನ್ಮಾನ ನನಗೇಕೆ?” ಎಂದು ತಮಗೆ ಬಂದ ಪ್ರಶಸ್ತಿ ಫಲಕಗಳನ್ನು ಮನೆಯ ಹಿತ್ತಲಿನ ತೋಟದಲ್ಲಿ ಬಿಸಾಕುವ ಕೀರವಾಣಿ ಕುರಿತು ಎಸ್.ಪಿ. ಗೆ ವಿಶೇಷ ಹೆಮ್ಮೆ.
ಎನಿತೂ ಕಪಟವಿಲ್ಲದೆ ಎಳೆಯ ಗಾಯಕ, ಗಾಯಕಿಯರಿಗೆ “ನಾನು ಆಗ ಹಾಡಿದ್ದಕ್ಕಿಂತ ಚೆನ್ನಾಗಿ ಹಾಡಿದ್ದೀಯ” ಎಂದು ಹೇಳುವ ಈ ಸ್ನೇಹ ವತ್ಸಲ ಗಾಯಕನಿಗೆ, ಒಂದು ಹಾಡನ್ನು ಇನ್ನೂ ಚೆನ್ನಾಗಿ ಹಾಡಲು ಯತ್ನಿಸುವುದಕ್ಕಿಂತ ಮಿಗಿಲಾದ ಸುಖ ಬೇರಿಲ್ಲ.
ಅವರಿಗೆ ನಮಸ್ಕಾರ..
(‘ಮನೋಹರ ಗ್ರಂಥ ಮಾಲಾ’ದಿಂದ ಪ್ರಕಟವಾಗಿರುವ “ಟೂರಿಂಗ್ ಟಾಕೀಸ್” ಪುಸ್ತಕದಿಂದ)
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ