ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕರೋನಾ ಟೈಮ್ ಅಂದು – ಇಂದು.

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ಕರೋನಾ‌ ಕಾಲಿಟ್ಟ ಹೊಸತರಲ್ಲಿ ಸರಕಾರ ತುಂಬಾ ಕಠಿನವಾಗಿ ವರ್ತಿಸಿತು.‌ ಅಲಕ್ಷಿಸಿ ಹೊರಗೆ ಹೊರಟವರಿಗೆ ಲಾಠಿ ಏಟು ಬಿತ್ತು.‌ ಸೋಂಕು ಕಂಡುಬಂದವರನ್ನು ತಾವೇ ದವಾಖಾನೆಗೆ ಸೇರಸಿ ಮದ್ದು ಕೊಡಿಸಿತು.‌ ಮೂರು ವಾರ, ಮತ್ತೆ ಒಂದು ತಿಂಗಳು ಅಷ್ಟೇ. ಎಲ್ಲರೂ ಸಹಕರಿಸಿದರೆ ಕರೋನಾ‌ ಗಡೀಪಾರು ಎನಿಸಿತ್ತು. ಆದರೆ ಕರೋನಾ ಸಾಲಗಾರನ ತರ ಭಾರೀ ಜಿಡ್ಡು ಅಂತ ಗೊತ್ತಾಯ್ತು. ಅದೇನೋ ವಕ್ರರೇಖೆ ಸಾಪು ಸೀದಾ ಆಗತ್ತೆ ಅಂತ ಕಾಯೋದಾಯ್ತು. ಅದೇನೂ ಆಗದೆ ಅದು ತಾರಸಿಯನ್ನು‌ ಮುಟ್ಟುವ ಹಾಗಾಯ್ತು. ಖಾಸಗಿ ಆಸ್ಪತ್ರೆಗಳಿಗೆ ಮುಂಚೆ ಪರವಾನಿಗೆ ಇಲ್ಲ ಅಂತು ಸರಕಾರ. ಮತ್ತೆ ಖಾತೆ ಏರಲು ಶುರುವಾದಾಗ ಎಸ್ ಅಂತು.‌

ಹೇಗೋ ಜೂನ್ ತಿಂಗಳ ಕಳೆದರೆ ಸಾಕು, ಜೂಲೈ ೫ ರ ಗ್ರಹಣದ ನಂತರ ಕರೋನಾ‌ ಪರಾರ್ ಎನ್ನುವ ಸಂದೇಶ ವಾಟ್ಸಪ್ ನಲ್ಲಿ ಓಡಾಡಿತು.‌ ಗ್ರಹಣದ ದಿನ ಹಿರಿಯರಿಗೆ ಬಿಡುವ ತರ್ಪಣದ ಜೊತೆಗೆ ಕರೋನಾಗೂ ಬಿಡಲಾಯಿತು.‌ ಅಷ್ಟರಲ್ಲಿ ಅದರ‌ ಲಸಿಕೆಯ ತಯಾರಿಯಾಗ್ತಾ ಇದೆ, ಇನ್ನೇನು ಬಂದೇಬಿಡುತ್ತದೆ ಎನ್ನು ಆಶಾಜೀವಿಗಳ‌ ಗುಂಪು ಒಂದುಕಡೆ ಹೇಳಿದರೆ, ಇಲ್ಲ ಇದು ಇನ್ನೂ ಆರು ತಿಂಗಳು ನಮ್ಮ‌ಜೊತೆ ಇರುತ್ತದೆ, ನವೆಂಬರ್ ನಲ್ಲಿ ದಿನಕ್ಕೆ ೨ ಲಕ್ಷ ಕೇಸುಗಳು ಕಾದಿಟ್ಟ ಬುತ್ತಿ ಎನ್ನುವ ಅತಿ ಜಾಗ್ರತೆ ಮಾಡುವವರ ಗುಂಪು ಎಲ್ಲರ ಆಸೆಗೆ ತಣ್ಣೀರೆರಚಿತು. ಜಾಗ್ರತೆಗಳು ಹೇಳುವುದು ಜಾಸ್ತಿಯಾಯಿತು. ಆರ್ಥಿಕ ವ್ಯವಸ್ಥೆ ಮಕಾಡೆ ಮಲಗಿದ್ದರಿಂದ ಒಂದೊಂದು ರಂಗಕ್ಕು ತಮ್ಮ ದೈನಂದಿನ ನಾಟಕ ಶುರು ಮಾಡಲು ಹರಿತ‌ ಪತಾಕೆ ಹಾರಿಸಲಾಯಿತು. ಜನ ಜಾಸ್ತಿ ಜಾಸ್ತಿಯಾಗಿ ರಸ್ತೆಗಳ‌ಮೇಲೆ ಓಡಾಡತೊಡಗಿದರು.

ಕರೋನಾ ಹಬ್ಬವಾಗಿ ಕಂಡಿತು. ಮಹಾರಾಷ್ಟ್ರ ಚಿನ್ನದ‌ ಪದಕ, ದೆಹಲಿ ರಜತ, ತಮಿಳನಾಡುನ ಕಾಂಸ್ಯ ಪಡೆದು ರಾರಾಜಿಸಿದವು. ಏತನ್ಮಧ್ಯೆ ಗೋವಾ ಕೇಸುಗಳೆ ಇಲ್ಲವಾದ ರಾಜ್ಯವೆನಿಸಿತು. ಕೇರಳದ ಕಟ್ಟುನಿಟ್ಟು ಕ್ರಮ ಅನುಕರಣೀಯ ಎಂದು ಸಾರಲಾಯಿತು. ನಮೂನೆಗಳು ಸಾಕಷ್ಟು‌ ಪರೀಕ್ಷೆಗಳಾಗುತ್ತಿಲ್ಲ ಎಂದು ಕೇಂದ್ರ ಸರಕಾರ, ಆಯಾ ರಾಜ್ಯಗಳ ಹೈಕೋರ್ಟುಗಳು ತಪ್ಪು ಹಿಡಿದಾಗ ಆಗಸ್ಟ್ ತಿಂಗಳಲ್ಲಿ ಟಿವಿ ಪರದೆ ಹರಿದು ಹೋಗುವಂತೆ, ವಾರ್ತಾ ಪತ್ರಿಕೆಯ ಮುಖಪುಟ ಚಿಂದಿಯಾಗುವಂತೆ ಕೇಸುಗಳು ಗುಡ್ಡೆ ಬೀಳಲಾರಂಭಿಸಿದವು. ಭಾರತ ಬೀಸಿ ಬೀಸಿ ಓಡುತ್ತ ಎರಡನೆಯ ಸ್ಥಾನಕ್ಕೆ ಗುರಿ ಇಡುವಂತಾಯಿತು. ಸರಕಾರ ಕೈಯೆತ್ತಿ ಬಿಟ್ಟಿತು. ಕೆಲ ರಂಗಗಳು ಬಿಟ್ಟರೆ ಉಳಿದೆಲ್ಲವನ್ನೂ ಮುಕ್ತ ಮಾಡಿ ಬೊಕ್ಕಸ ತುಂಬಿಕೊಳ್ಳಲು ಆರಂಭಿಸಿತು. ನಿರ್ಬಂಧಗಳೆಲ್ಲ ಸಡಿಲಾಗಿ ಬರೀ ಮನೆಗಷ್ಟೇ ಸೀಮಿತವಾಯಿತು. ಜನ ಸಹ ಗೊಣಗೋದು ಬಿಟ್ಟರು. ಮುಸುಕಿಲ್ಲದವನನ್ನು ದುರುಗುಟ್ಟಿ‌ ನೋಡುವುದು ಕಮ್ಮಿಯಾಯಿತು.‌ ಸರಕಾರಗಳ ತಿಕ್ಕಾಟ ಶುರುವಾಯಿತು, ನಮಗೆ ಬರಬೇಕಾದಷ್ಟು ಆದಾಯ ಬಂದಿಲ್ಲ ಅಂತ. ಅಷ್ಟರಲ್ಲಿ ಎಲ್ಲರ‌ ಗಮನ ಬಿಗ್- ಬಿ ಕಡೆಗೆ ಹೋಯಿತು. ತಮ್ಮವರ ವಿಚಾರ ಬಿಟ್ಟು ಅವರು‌ ಹೊರಗೆ ಬಂದಾರಾ ಅಂತ ಕಾದರು. ನಂತರ ಎಸ್ ಪಿ ಬಾಲಸುಬ್ರಮಣ್ಯಂ ಅವರಿಗೆ ಕರೋನಾ ಹಲೋ ಅಂತು. ಅವರಿನ್ನೂ ಮನೆಗೆ ಬಂದಿಲ್ಲ . ಆದರೆ ಖತ್ರೆ ಸೆ ಬಾಹರ್ ಹೈ. ಇದಕ್ಕೆ ಚುಕ್ಕೆ‌ ಇಡಲು ಬರುವುದಿಲ್ಲ. ( ಬಹುವಚನಕ್ಕೆ ಹೈ ಗೆ ಚುಕ್ಕೆ ಬೇಕಲ್ಲ ಅದು ).

ಇನ್ನು ಇಂದಿನ ಸ್ಥಿತಿ. ರಷ್ಯಾದ ಪರೀಕ್ಷೆಗಳು ಸಫಲ ವಾಗಿವೆಯಂತೆ. ಅಮೆರಿಕವೂ ಹಿಂದೆ‌ ಬಿದ್ದಿಲ್ಲ ಎನ್ನುತ್ತಿದೆ. ನಮ್ಮ‌ ಪ್ರಧಾನಿಯವರು ಸ್ವಾತಂತ್ರ್ಯದ ದಿನದ‌ ತಮ್ಮ ಭಾಷಣದಲ್ಲಿ‌ ಭಾರತದಲ್ಲಿ ಸಹ‌ ಲಸಿಕೆಯ ತಯಾರಿ ಮೂರು ಕಡೆ ನಡೆಯುತ್ತಿದ್ದು ಬೇರೇ ಬೇರೇ ಹಂತಗಳಲ್ಲಿದೆ ಎಂದಿದ್ದಾರೆ. ನಮ್ಮ ಮನೆಗಳ‌ ವರೆಗೆ ಕರೋನಾ ಬಾರದೆ, ಲಸಿಕೆ ಬರುವ ಹಾಗಾದರೆ ಅಷ್ಟು ಸಾಕು. ನಾವೆಲ್ಲ‌ ಸಾಹಿತ್ಯದ ಸಂಭ್ರಮದಲ್ಲಿ ಕರೋನಾವನ್ನು‌‌ ಮರೆಯಲು‌ ಪ್ರಯತ್ನ ಪಡುತ್ತಿದ್ದೇವೆ. ಸಾಹಿತ್ಯ ಸಂಜೆ, ಕವಿ‌ಗೋಷ್ಠಿ, ಮುಖಾಮುಖಿ ಭೇಟಿ ಎಂದೋ‌ ಅಂತ ಕಾಯುತ್ತಿದ್ದೇವೆ. ಇಷ್ಟು ಸಾಕಲ್ಲ‌ ಕರೋನಾ ಅಂದು- ಇಂದು. ನಮಸ್ಕಾರ.