- ಕರ್ಣ.. - ಜೂನ್ 13, 2020
ಕರ್ಣನ ಕಥೆ ಎಲ್ಲರಿಗೂ ಗೊತ್ತಿದೆ.ಆದ್ದರಿಂದ ಅವನ ಕಥೆಗಳ ಬಗ್ಗೆ ಮಾತನಾಡುವುದಕ್ಕಿಂತ,ಇವತ್ತು ಬರೀ ಕರ್ಣನ ಬಗ್ಗೆಯೇ ಮಾತನಾಡೋಣ.
ಕರ್ಣ ಮತ್ತು ಅರ್ಜುನ, ಭೀಮ ಮತ್ತು ಧುರ್ಯೋಧನ ಮಹಾಭಾರತದಲ್ಲಿ ಒಂದಕ್ಕೊಂದು contrast ಆಗಿರುವ ಪಾತ್ರಗಳು.ವಿಪರೀತ ಅನ್ನಿಸುವಷ್ಟು ತದ್ವಿರುದ್ಧವಾಗಿರುವಂತಹ ವ್ಯಕ್ತಿತ್ವಗಳು.ಅವರ ವೈರತ್ವ ಆದರೂ ಎಂತಹದ್ದು.ಹಾವು ಮುಂಗುಸಿ ತರಹ ಒಬ್ಬರ ಕಂಡರೆ ಒಬ್ಬರಿಗೆ ಕೊನೆಯವರೆಗೂ ಆಗಲೇ ಇಲ್ಲ.
ಅವರುಗಳನ್ನು ಬಿಡಿ, ಸ್ವತಃ ನೀವು ಭೀಮ ನ ಮೇಲೆ ಅಪಾರವಾದ ಅಭಿಮಾನ ಹೊಂದಿದ್ದರೆ, ಭೀಮ ಎಷ್ಟು ದುರ್ಯೋಧನನ್ನು ದ್ವೇಷಿಸುತ್ತಾನೋ ನೀವು ಕೂಡ ಅಷ್ಟೇ intensive ಆಗಿ ನಿಮಗರಿವಿಲ್ಲದೇ ದುರ್ಯೋಧನನ್ನು ದ್ವೇಷಿಸಿಬಿಡಬಲ್ಲಿರಿ..ಭೀಮ ದುರ್ಯೋಧನನ ತೊಡೆ ಮುರಿದಾಗ ನೀವೇ ಆ ಕಾರ್ಯ ಮಾಡಿದಷ್ಟು ಖುಷಿ ಪಟ್ಟು ತೊಡೆ ತಟ್ಟಬಲ್ಲಿರಿ.
ಅದೇ ರೀತಿ ನೀವು ಕರ್ಣ ನ ಅಭಿಮಾನಿ ಆಗಿದ್ದರೆ,ಕರ್ಣ ಹೇಗೇ ಅರ್ಜುನನ್ನು ಮಹಾಭಾರತದಲ್ಲಿ ದ್ವೇಷಿಸುತ್ತಾನೋ ಅದೇ ರೇಂಜಿಗೆ ನೀವು ಕೂಡ ಅರ್ಜುನನ್ನು ಧ್ವೇಷಿಸಲು ನಿಲ್ಲಬಲ್ಲಿರಿ. ಕುರುಕ್ಷೇತ್ರ ಯುದ್ಧದಲ್ಲಿ ಕರ್ಣನಿಂದ ಅರ್ಜುನನಿಗೆ ಸೋಲಾಗಲಿ,ಅವನಿಗೆ ಸಾವಾಗಲಿ ಎಂದು ತೀವ್ರವಾಗಿ ಹಪಹಪಿಸಬಲ್ಲಿರಿ. ಇಲ್ಲಿ ನಮಗೆ ಕೆಲವೊಮ್ಮೆ ಧರ್ಮ ಅಧರ್ಮ ಗಳು ಕೂಡ ಕಣ್ಣಿಗೆ ಕಾಣುವುದೇ ಇಲ್ಲ!
ಆದರೂ ಮಹಾಭಾರತದ ಸೊಗಸು ಏನು ಗೊತ್ತಾ ಯಾವುದಾದರೂ ಪಾತ್ರ ಇಷ್ಟವಾಗಿ ಬಿಟ್ಟರೆ,ಓದುತ್ತಾ ನೋಡುತ್ತಾ ಕೊನೆ ಕೊನೆಗೆ ನೀವೇ ಆ ಪಾತ್ರ ಆಗಿಬಿಡಬಲ್ಲಿರಿ! ಒಮ್ಮೆ ಇಷ್ಟ ಆಗಿ ಬಿಟ್ಟರೆ ಅದು ನಿಮ್ಮನ್ನು ಗಾಢವಾಗಿ ಕಾಡುತ್ತದೆ! ಸೋತು ಹೋದಾಗ ಇಲ್ಲವೇ ಮರಣ ಹೊಂದಿದಾಗ ಬೇಜಾರು ಮೂಡಿಸುತ್ತದೆ, ಗೆದ್ದಾಗ ನೀವೇ ಗೆದ್ದಷ್ಟು ಖುಷಿ, ಸಂಭ್ರಮ.
ಕರ್ಣ ಎಂಬ ಹೆಸರು ಬಂದ ಕೂಡಲೇ ಯಾವಾಗಲೂ ಎರಡು ವಾದ ಒಟ್ಟಿಗೆಯೇ ತೂರಿ ಬರುವುದು.ಒಂದು ಆತ ಅಧರ್ಮಿ ಆಗಿದ್ದ ಎಂದಾದರೆ, ಇನ್ನೊಂದು ವಾದ ಧುರ್ಯೋಧನನ ಸ್ನೇಹಕ್ಕೆ ಗಂಟುಬಿದ್ದು ಆತ ಅಧರ್ಮಿ ಆದನೇ ಹೊರತು ಇಲ್ಲದಿದ್ದರೆ ಕರ್ಣ ಕೂಡ ಒಳ್ಳೆಯವನೇ ಎಂದು.
ಬೇಕಿದ್ದರೆ ಗಮನಿಸಿ, ಕರ್ಣನ ಪರ ಮತ್ತು ವಿರೋಧ ಇರುವವರು ಸಿಕ್ಕಾಪಟ್ಟೆ ಜನ ಸಿಗುತ್ತಾರೆ,ಒಟ್ಟೊಟ್ಟಿಗೆಯೇ ಸಿಗುತ್ತಾರೆ.ಕೆಲವರು ಕರ್ಣ ಅಂದರೆ ಮೂಗು ಮುರಿದರೆ, ಇನ್ನೂ ಕೆಲವರಿಗೆ ಆತ ಅಂದರೆ ಏನೋ ಸಿಕ್ಕಾಪಟ್ಟೆ ಅಭಿಮಾನ.ಕೂಲಂಕುಶವಾಗಿ ಗಮನಿಸಿದರೆ ಸುತ್ತಾ ಮುತ್ತ ನಿಮಗೆ ಕರ್ಣ ನ ಅಭಿಮಾನ ಹೊಂದಿರುವವರೇ ಜಾಸ್ತಿ ಸಂಖ್ಯೆಯಲ್ಲಿ ಕಂಡುಬರುತ್ತಾರೆ!!
ಯಾಕೆ ಹೀಗೇ?
ಹಾಗಾದರೆ ಯಾರು ಸರಿ.. ಯಾರು ತಪ್ಪು? ಗೊತ್ತಿರುವಂತೆ ನಾವೆಲ್ಲ ಹೆಚ್ಚಿನವರು ಓದಿರದ,ಆದರೆ ಅವರಿವರು ಹೇಳಿದುದನ್ನು ಕೇಳಿದ ಪ್ರಕಾರ ಮೂಲಭಾರತದಲ್ಲಿ ಕರ್ಣ ಕೆಟ್ಟವನು.ಅದರ ಬಗ್ಗೆ ಸಂದೇಹವೇ ಇಲ್ಲ. ಮೂಲ ಮಹಾಭಾರತ ವನ್ನು ಓದಿಲ್ಲದೇ ಇದ್ದರೂ ವಿದ್ವಾಂಸರುಗಳ ಉಪನ್ಯಾಸ, ಹಲವಾರು ಗುರುಗಳ ಪ್ರವಚನದಲ್ಲೂ ಕೂಡ ನಾವು ನೀವೆಲ್ಲಾ ಕರ್ಣ ಅಧರ್ಮಿ,ದುಷ್ಟ ಚತುಷ್ಟೆಯರಲ್ಲಿ ಒಬ್ಬ ಎಂದು ಖಂಡಿತವಾಗಿಯೂ ಕೇಳಿದ್ದೇವೆ. ನಾವು ನೀವು ಒಪ್ಪುತೆವೆಯೋ ಬಿಡುತ್ತೆವೆಯೋ ಕರ್ಣ ಮಾತ್ರ ನಿಜವಾಗಿಯೂ ಅಧರ್ಮಿಯೇ ಆಗಿದ್ದ,ಅದಂತು ಸತ್ಯ. ಏನೇ ಸಬೂಬು ಕೊಟ್ಟರು, ವಾದ ಮಾಡಿದರೂ ಈಗ ಸತ್ಯವನ್ನು ಬದಲಿಸಲಾಗದು.
ಆದರೂ ಕರ್ಣನ ಅಭಿಮಾನಿ ಆಗಿದ್ದರೆ ಮನಸ್ಸು ಕೇಳುವುದಿಲ್ಲ ನೋಡಿ,ಅದು ಕರ್ಣನಿಗಾಗಿ ಮಿಡಿಯುತ್ತದೆ.ಯಾಕೆಂದರೆ ಆ ಪಾತ್ರವೇ ಅಂತಹದ್ದು, ಕೆಟ್ಟವ ಎಂದು ಗೊತ್ತಾದರೂ ನಮಗೆ ಅವನಲ್ಲಿಯ ಒಳ್ಳೆಯತನವನ್ನು ಬಗೆದು ತೆಗೆಯುವ ಆಸೆ. ಕರ್ಣನ ಬಗ್ಗೆ ಆಗದವರು ಅದನ್ನು ಅಜ್ಞಾನ ಎಂದೇ ಹೇಳುತ್ತಾರೆ.
ಇಂತಹ ಸಂದರ್ಭದಲ್ಲಿ ಅನಿಸುವುದು ಏನೆಂದರೆ,ಇದರಲ್ಲಿ ಕರ್ಣನ ಬಗ್ಗೆ ಅಭಿಮಾನ ಹೊಂದಿರುವವರ ತಪ್ಪು ಅಷ್ಟಾಗಿ ಇಲ್ಲವೆಂದು! ಯಾಕೆ ಗೊತ್ತಾ, ಏಕೆಂದರೆ ಚಿಕ್ಕವರಿಂದಲೇ ನಾವು ನೀವೆಲ್ಲಾ ಓದಿದ ಕೃತಿಗಳಲ್ಲಿ ನಮಗೆ ಕರ್ಣ ನನ್ನು ಇಷ್ಟವಾಗುವಂತೆಯೇ ಚಿತ್ರಿಸಲಾಗಿತ್ತು! ಸೀರಿಯಲ್ ಗಳಲ್ಲಿ,ಚಲನಚಿತ್ರಗಳಲ್ಲೂ ಕೂಡ ಹಾಗೆಯೇ ತೋರಿಸಲಾಗಿತ್ತು.ನಾವು ಓದಿದ್ದೇ ಅಂತವುಗಳನ್ನು,ನೋಡಿದ್ದೇ ಅಂತಹ ದೃಶ್ಯ ವೈಭವವನ್ನು.
ಬಹುಶಃ ತಪ್ಪು ನಡೆದದ್ದು ಅಲ್ಲಿಯೇ ಎಂದು ಕಾಣುತ್ತೆ,ದುರ್ಯೋಧನ ಶಕುನಿಯರಂತೆ ಕರ್ಣ ನನ್ನು ಕೂಡ ಅದೇ ರೀತಿಯಲ್ಲಿ present ಮಾಡಿದಿದ್ದರೆ,portray ಮಾಡಿದಿದ್ದರೆ ಈ ತೊಳಲಾಟ ತಪ್ಪುತ್ತಿತ್ತು,ನಮಗೂ ಎಂದೆಂದಿಗೂ ಕರ್ಣ ಧುರ್ಯೋಧನನಂತೆ ಕೆಟ್ಟವನಂತೆಯೇ ಕಾಣುತ್ತಿದ್ದ. ಯಾರೂ ಕರ್ಣ ನಿಗಾಗಿ ಮರುಗುತ್ತಿರಲಿಲ್ಲ,ಅಭಿಮಾನ ತೋರಿಸುತ್ತಿರಲಿಲ್ಲ!
ಬರವಣಿಗೆಯ ಮತ್ತು ದೃಶ್ಯ ಮಾಧ್ಯಮ ಗಳ ತಾಕತ್ತು ಅದೇ.ಹೇಗೆ ಬೇಕಾದರೂ ಬರೆಯಬಹುದು.ಇಷ್ಟ ಬಂದಂತೆ ವರ್ಣರಂಜಿತವಾಗಿ ಚಿತ್ರಿಸಬಹುದು.ಬೇಕಿದ್ದರೆ ದುರ್ಯೋಧನ ಬಗ್ಗೆ ಅಭಿಮಾನ ಮೂಡುವಂತೆಯೂ ಬರೆದು ಹಾಕಬಹುದು! ಕೆಲವೊಮ್ಮೆ ಕ್ರಿಯೇಟಿವಿಟಿ, ಮನರಂಜನೆ ಕಾರಣಗಳಿಗಾಗಿ ನಿಜವಾದ ಸತ್ಯ ಮಿಥ್ಯ ದ ಅಡಿಯಲ್ಲಿ ಹೂತುಹೋಗುತ್ತದೆ! ಕರ್ಣ ನಂತಹ ಪಾತ್ರವನ್ನು ಕಥೆಯನ್ನಾಗಿ ಬರೆಯುವಾಗ ಮೂಲಭಾರತವನ್ನು ಬಿಟ್ಟು ಹೆಚ್ಚಿನವರು ಇದೇ ರೀತಿ ಕರ್ಣ ನ ಕಥೆಯನ್ನು ಪೋಷಿಸುತ್ತಾ ಹೋದರು ಎಂದು ಕಾಣುತ್ತೆ, ಹಾಗಾಗಿ ಕರ್ಣನ ಅಭಿಮಾನ ಎಗ್ಗಿಲ್ಲದೇ ಹೆಚ್ಚಾಯಿತು, ಅದನ್ನು ಇಂದು ಕೂಡ ಕಾಣಬಹುದು!
ಯಾಕೋ ಗೊತ್ತಿಲ್ಲ ನಮ್ಮಲ್ಲಿ ಹೆಚ್ಚಿನ ಲೇಖರು, ದೊಡ್ಡ ಬರಹಗಾರರು ಕೂಡ ಕರ್ಣನ ಬಗ್ಗೆ ಮೊದಲಿನಿಂದಲೂ soft corner ಒಂದನ್ನು ಇಟ್ಟು ಕೊಂಡೇ ಬರೆದು ಬಿಟ್ಟರು. ನಾವು ನೀವೆಲ್ಲಾ ಜಿದ್ದಿಗೆ ಬಿದ್ದವರಂತೆ ಮೈ ಮರೆತು ಓದಿ ಬಿಟ್ಟೆವು.ಓದಿ ಖುಷಿ ಆಯಿತು.ಕರ್ಣ ದುರಂತ ನಾಯಕನಂತೆ ಕಂಡ,ಅವನಿಗೆ ಎಲ್ಲಾ ಕಡೆಯಿಂದ ಮೋಸವಾಯಿತು ಎಂಬ ಅನುಕಂಪ ಹುಟ್ಟಿತು, ಕೊನೆಗೆ ಕರ್ಣ ನಮ್ಮೆಲ್ಲರ ಪಾಲಿನ ಹೀರೋ ಆದ!
“ಕರ್ಣ ಮೂಲದಲ್ಲಿ ಕೆಟ್ಟವನೇ ಇರಬಹುದು ಆದರೆ ಬರೆಯುವವರು, ಕರ್ಣ ನ ಬಗ್ಗೆ ಚೆನ್ನಾಗಿಯೇ ಬರೆದುದರಿಂದಲೇ ನಮಗೆ ಕರ್ಣ ಅಷ್ಟೊಂದು ಇಷ್ಟವಾಗಿ ಬಿಟ್ಟ.. ತಪ್ಪು ನಮ್ಮದಲ್ಲ..” ಎಂದು ನೇರವಾಗಿ ನಾವು ಓದಿದ ಲೇಖಕರ, ಕವಿಗಳ ಮೇಲೆ ಗೂಬೆ ಕೂರಿಸಿಬಿಟ್ಟರೆ ಆವಾಗ ಅದು ಸರಿ ಆದಿತೇ? ನೋಡಿ ಇಲ್ಲಿಯೇ ತಪ್ಪು ಆಗುವುದು.
ಒಂದು ಪಾತ್ರದ ಬಗ್ಗೆ ಆಗಲಿ ವ್ಯಕ್ತಿ ಬಗ್ಗೆ ಆಗಲಿ ಇಲ್ಲ ಯಾವುದೇ ವಿಷಯದ ಬಗ್ಗೆ ಆಗಲಿ ಈ ರೀತಿ ಪರ ವಿರೋಧ ವಾದ ಮತ್ತು ಭಿನ್ನ ಭಿನ್ನ ಅಭಿಪ್ರಾಯಗಳು ಇರುವುದು ಎಂದು ಗೊತ್ತಾದಾಗ ನಾವು ಮೊದಲು ಮಾಡಬೇಕಾದ ಕೆಲಸ ಎಂದರೆ,ಕೇವಲ ನಮಗೆ ಹಿತವೆನಿಸುವ ಒಂದು ದೃಷ್ಟಿಕೋನದಿಂದ ಅದನ್ನು ನೋಡದೇ ಬೇರೆ ಬೇರೆ ಆಯಾಮ ಗಳಿಂದ ಆ ವಿಷಯದ ಬಗ್ಗೆ ತಿಳಿದುಕೊಳ್ಳುವ ಕೆಲಸ ಮಾಡುತ್ತಾ ನಿಜವಾದ ಸತ್ಯದ ಕಡೆಗೆ ನಡೆದು ಹೋಗಬೇಕಾಗುತ್ತದೆ.ಅದುವೇ ನಮ್ಮ ಜವಾಬ್ದಾರಿ ಕೂಡ ಆಗಿರುತ್ತದೆ.ಆವಾಗ ಖಂಡಿತವಾಗಿಯೂ ವಿಷಯದ ಸತ್ಯಾಸತ್ಯತೆ ಗೊತ್ತಾಗುವುದು.ಇಲ್ಲದಿದ್ದರೆ ಮನಸ್ಸು ಕರ್ಣ ನನ್ನು ಕೂಡ ಅಷ್ಟು ಸುಲಭಕ್ಕೆ ಬಿಟ್ಟು ಕೊಡುವುದೇ ಇಲ್ಲ.
ಆದರೆ ನಾವೆಲ್ಲ ಹಾಗೇ ಮಾಡಿಕೊಂಡಿದ್ದೆವೆಯೇ..? ಎಂಬುದು ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ. ಅದರಲ್ಲೂ ಮುಖ್ಯವಾಗಿ ಕರ್ಣ ಅತಿಯಾಗಿ ಇಷ್ಟ ಆಗುವವರು.!
ಅದೆಲ್ಲಾ ಏನೇ ಇರಲಿ ನಿನಗೆ ಮಹಾಭಾರತದಲ್ಲಿ ಕರ್ಣ ಇಷ್ಟವೋ ಇಲ್ಲವೋ ಎಂದು ನನಗಂತು ಪ್ರಶ್ನೆ ಕೇಳಿ ಬಿಟ್ಟರೆ ಅದಕ್ಕೆ ನನ್ನ ಉತ್ತರ, ಕರ್ಣ ಇಷ್ಟ ಆದರೆ ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಇಷ್ಟ ಎಂಬುವುದಷ್ಟೇ ಆಗಿರುತ್ತದೆ.ಯಾಕೆಂದರೆ ನನಗೆ ಕರ್ಣನ ಗಿಂತಲೂ ಇಷ್ಟ ವಾಗ ಬಲ್ಲ ಪಾತ್ರಗಳು ಮಹಾಭಾರತದಲ್ಲಿ ಬೇರೆ ಇವೆ.ಅದರಲ್ಲೂ ಸ್ವಯಂ ವಾಸುದೇವನೇ ಇಷ್ಟ ಆಗಿ ಬಿಟ್ಟರೆ ಬೇರೆ ಪಾತ್ರಗಳು ಅಷ್ಟಾಗಿ ರುಚಿಸುವುದಿಲ್ಲ.
ಹೇಗೆ ಕರ್ಣ ಒಳ್ಳೆಯವ ಎಂಬ ಮನಸ್ಥಿತಿ ನನ್ನಲ್ಲಿ ಇಲ್ಲವೋ ಹಾಗೆಯೇ ಹಟಕ್ಕೆ ಬಿದ್ದು ಅವನನ್ನು ನಖಶಿಖಾಂತ ಹೇಟ್ ಮಾಡಲೇಬೇಕು ಎಂಬ ಹಪಾಹಪಿಯೂ ಕೂಡ ನನ್ನಲ್ಲಿ ಇಲ್ಲ.
ಕರ್ಣ ಅಧರ್ಮಿ ಯೇ ಆದರೂ,ಕರ್ಣ ನಿಲ್ಲದ ಕುರುಕ್ಷೇತ್ರ, ಕರ್ಣ ನಿಲ್ಲದ ಅರ್ಜುನ ಒಂದರ್ಥದಲ್ಲಿ ನನಗೆ ಸಪ್ಪೆ ಅಂತಲೇ ಅನ್ನಿಸುತ್ತದೆ ಎಂದು ಹೇಳಿ ಬಿಟ್ಟರು ಸಾಕು ನನಗೂ ಕರ್ಣ ನ ಬಗ್ಗೆ ಲೈಟ್ ಆಗಿ ಎಲ್ಲೋ ಒಂದು ಮೂಲೆಯಲ್ಲಿ ಮೃದು ಭಾವ ಇದೆ ಎಂದೇ ಆಗುತ್ತದೆಯೇ ಹೊರತು ಬೇರೆ ಏನೂ ಅನ್ನಿಸುವುದಿಲ್ಲ! ಆದರೆ ಕರ್ಣನ ಬಗ್ಗೆ ಅಭಿಮಾನ ಇದ್ದರೂ,ಇರದಿದ್ದರೂ.. ಎಷ್ಟೇ ಅಧರ್ಮಿ,ಕೆಟ್ಟವ ಆಗಿದ್ದರೂ… ಜಗತ್ತಿಗೆ ಕೂಡ ಈಗಲೂ ಧಾನ ವೆಂದ ಕೂಡಲೇ ನೆನಪಾಗುವ ಮೊದಲ ಹೆಸರು ಕರ್ಣ ನದ್ದೇ ಅಲ್ಲವೇ!!
ಅದಕ್ಕಾಗಿ ಯೇ ಹೇಳಿದ್ದು ಕರ್ಣ ನನಗೆ ಕೆಲವೊಮ್ಮೆ ಇಷ್ಟ.. ಅಷ್ಟೇ ಎಂದು.
ಮಹಾಭಾರತ ಸೀರಿಯಲ್ ನಲ್ಲಿ ಕರ್ಣ ನ ಪಾತ್ರವನ್ನು ಮಾಡಿದವರು ಅಹಂ ಶರ್ಮಾ ಎಂಬುವವರು. ಬಿಹಾರ ಮೂಲದವರು,ನಟನೆಗೂ ಮುನ್ನ ಇಂಜಿನಿಯರ್ ಕೂಡ ಹೌದು. ಅದೇ ರೀತಿ ಮಾರ್ಷಲ್ ಆರ್ಟ್ಸ್ ಪರಿಣಿತರು ಕೂಡ ಆಗಿದ್ದಾರೆ.ಆ ಮುಖಭಾವ ಎಲ್ಲಾ ನೋಡುವಾಗಲೆಲ್ಲ ಕರ್ಣ ಇದೇ ರೀತಿ ಇದ್ದನೆನೋ ಅನ್ನಿಸಿಬಿಡುತ್ತದೆ.ಅಷ್ಟು ಚೆನ್ನಾಗಿ ಅರ್ಜುನನಿಗೆ ಎದುರಾಳಿಯಾಗಿ ನಟಿಸಿದ್ದಾರೆ.ಈ ನಟ ಕೂಡ ನಿಮಗೆ ಇಷ್ಟವಾಗಬಹುದು ?
ಹೆಚ್ಚಿನ ಬರಹಗಳಿಗಾಗಿ
ನಂಬಿಕೆಯ ವರ್ಷಧಾರೆ
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ
ಕರ್ಪೂರಿ ಠಾಕೂರ್