- ಸಾಜಿದಾ ಅಲಿಯಾಸ್ ಸಲ್ಮಾ - ಅಕ್ಟೋಬರ್ 29, 2024
- ರೇಟಿಂಗ್ ಗಳ ಧೋರಣೆ - ಅಕ್ಟೋಬರ್ 20, 2024
- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
ಭಾಷೆಯ ಉಪಯೋಗದಲ್ಲಿ ಭಾಷೆಯ ಅರ್ಥದೊಂದಗೆ ಅಥವಾ ಅರ್ಥದ ಬದಲು ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಕವಿತೆ ಎಂದಿದ್ದಾರೆ ಕವಿತೆಗೆ ಭಾಷ್ಯ ಹೇಳುವವರು. ಹಾಗೆ ಹೇಳುವವನು ಕವಿಯಾಗುತ್ತಾನೆ. ಕನ್ನಡ ಸಾಹಿತ್ಯಲೋಕದಲ್ಲಿ ಹೆಸರಾಂತ ಕವಿಗಳದೆಷ್ಟೋ ಬಂದು ಹೋಗಿದ್ದಾರೆ. ಇನ್ನೂ ಬರುತ್ತಿದ್ದಾರೆ. ಪುಂಖಾನುಪುಂಖವಾಗಿ ಕವಿತೆಗಳನ್ನು ಹೆಣೆಯುತ್ತಿದ್ದಾರೆ. ಪತ್ರಿಕೆಗಳಲ್ಲಿ, ಕವಿ ಗೋಷ್ಠಿಗಳಲ್ಲಿ ಕವಿತೆಗಳನ್ನು ಪ್ರಸ್ತುತ ಪಡೆಸುತ್ತಿದ್ದಾರೆ. ಎಷ್ಟು ವರೆಗೆ ಅಂದರೆ ಒಂದು ವೆಬ್ ಪತ್ರಿಕೆಯಂತೂ ನಮಗೆ ಕವಿತೆಗಳು ಕಳಿಸ ಬೇಡಿ ಎನ್ನುವಷ್ಟು ಮಟ್ಟಕ್ಕೆ ಕವಿತೆಗಳ ಜಲಪಾತ ಸಮೃದ್ಧಿಯಾಗಿ ಸುರೀತಿದೆ ಎನ್ನಬಹುದು. ಆದರೆ ಈ ಕವಿಗಳೆಲ್ಲರಿಗೂ ಅವಶ್ಯಕವಾಗಿ ಬೇಕಾಗಿರುವುದು ಕೇಳುವ ಕಿವಿಗಳು. ತಾವು ಬರೆದ ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟವಾದಾಗ್ಗೂ, ಕವಿಗಳಿಗೆ ತಾವು ಬರೆದ ಕವಿತೆಗಳನ್ನು ತಮ್ಮ ಮನದಾಳದ ಭಾವಗಳನ್ನು ಹೊರಹಾಕುತ್ತ ಶ್ರೋತ್ರುಗಳ ಎದುರಲ್ಲಿ ಓದುವುದು ಬೇಕೆನಿಸುತ್ತದೆ. ಪ್ರಕಟಗೊಂಡ ಬರಹಗಳು ಅವನ ಮನಸ್ಸಿಗೆ ತಂಪೆರುಯುತ್ತವೆ ನಿಜ. ಆದರೆ ಸಭೆಗಳಲ್ಲಿ, ಗೋಷ್ಟಿಗಳಲ್ಲಿ ಅವರು ಕವಿತೆ ಓದಿದಾಗ ಬೀಳುವ ಚಪ್ಪಾಳೆ ಅವರನ್ನು ಸಾರ್ಥಕ ಭಾವನೆಯತ್ತ ಕೊಂಡೊಯ್ಯುತ್ತವೆ. ಅದರ ಸಲುವಾಗಿ ಮೈಯೆಲ್ಲಾ ಕಿವಿಗಳಾಗಿಸಿ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ ಕವಿಗಳು. ಅವರ ಈ ತರದ ವರ್ತನೆಯಿಂದ ಅವರ ಮೇಲೆ ತುಂಬಾ ಜೋಕುಗಳು ಪತ್ರಿಕೆಗಳಲ್ಲಿ ಹರಿದಾಡುತ್ತಿರುತ್ತವೆ. ಆದರೂ ತಮ್ಮ ಈ ಚಾಳಿಯಿಂದ ಹೊರಬರುವುದು ಕವಿಗಳಿಗೆ ಕಷ್ಟಾನೇ.
ಅವರ ಈ ಬಲಹೀನತೆಯನ್ನು ಸದುಪಯೋಗ ಪಡೆಸಿಕೊಳ್ಳುತ್ತಾರೆ ಕಾರ್ಯಕ್ರಮಗಳ ಆಯೋಜಕರು. ಅವರಿಗೆ ತಮ್ಮ ಕಾರ್ಯಕ್ರಮಗಳಲ್ಲಿ ಜನ ಬೇಕು. ಇತ್ತೀಚಿನ ಸಭೆ ಸಮಾರಂಭಗಳಿಗೆ ಅತಿ ದುರ್ಲಭವೆಂದರೆ ಜನ. ಎಲ್ಲರೂ ತಮ್ಮ ತಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ತೊಡಗಿರುವುದು, ಇಲ್ಲ ದೂರದರ್ಶನದ ಧಾರಾವಾಹಿ, ಸಿನಿಮಾ ನೋಡುತ್ತ ಕೂಡುವುದು ಸರ್ವೇ ಸಾಮಾನ್ಯ. ಅವರನ್ನು ಮನೆಗಳಿಂದ ಹೊರಡಿಸಿ, ಕಾರ್ಯಕ್ರಮಗಳಿಗೆ ಕರೆತರುವುದು ಒಂದು ದೊಡ್ಡ ಸಾಹಸವೇ ಸರಿ. ಅದೂ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗಂತೂ ಇನ್ನೂ ದೊಡ್ಡ ಸಾಹಸ. ಸ್ವಲ್ಪ ಮಟ್ಟಿಗೆ ಸಂಗೀತ, ನೃತ್ಯ,ನಾಟಕಗಳಿಗೆ ಜನ ನೆರೆದಾರು. ಸಾಹಿತ್ಯ ಕಾರ್ಯಕ್ರಮಗಳಿಗೆ ಮಾತ್ರ ತುಂಬಾ ಕಮ್ಮಿ. ಆದರೆ ನಾನು ಮೇಲೆ ಹೇಳಿದಂತೆ ಸಾಹಿತ್ಯ ಕಾರ್ಯಕ್ರಮಕ್ಕೆ ಜನರ ಚಪ್ಪಾಳೆ ಇಲ್ಲದಿದ್ದರೆ ಮಜಾನೇ ಇರಲ್ಲ. ಮತ್ತೆ ಹೇಗೆ ? ಎಂಬ ಈ ಪ್ರಶ್ನೆಗೆ ಆಯೋಜಕರ ಉತ್ತರ ನನಗೆ ತುಂಬಾ ವ್ಯಾವಹಾರಿಕವಾಗಿ ಸಿಕ್ಕಿತು.
ಅದೊಂದು ವಿದ್ಯಾ ಸಂಸ್ಥೆಯ ಯಾವುದೋ ಚರ್ಚಾ ಕಾರ್ಯಕ್ರಮ. ವಿದ್ಯಾ ಸಂಸ್ಥೆಯವರು ತುಂಬಾ ಮುತುವರ್ಜಿಯಿಂದ ಆ ವಿಭಾಗದ ಹೆಸರಾಂತ ಕೆಲ ಅಧ್ಯಾಪಕರನ್ನೇ ಚರ್ಚೆಗೆ ಆಹ್ವಾನಿಸಿದ್ದರು. ನಗರದ ಅತಿ ಪ್ರಖ್ಯಾತ ನಾಯಕರನ್ನು ಮುಖ್ಯ ಅತಿಥಿಯಾಗಿ ಅಹ್ವಾನಿಸಲಾಯಿತು. ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ಭಾಷಾ ವಿಭಾಗಕ್ಕೆ ಸೇರಿದವರು ತುಂಬಾ ಕಮ್ಮಿ. ಹಾಗಾಗಿ ಸಭಿಕರ ಪ್ರಶ್ನೆ ಎದ್ದಿತು. ಆಯೋಜಕರು ತಮ್ಮ ಯೋಜನೆ ಹೇಳಿದರು. “ ಏನಿಲ್ಲ ರೀ ! ಕಾರ್ಯಕ್ರಮದ ಜೊತೆಗೆ ಕವಿ ಸಮ್ಮೇಳನವನ್ನು ಇಡೋಣ. ನಗರದಲ್ಲಿ ಕವಿಗಳಿಗೇನು ಕಮ್ಮಿ ! ಎಲ್ಲರನ್ನೂ ಆಹ್ವಾನಿಸೋಣ. ಫೋನಿನಲ್ಲಿ ತಿಳಿಸುವಾಗ ಕಾರ್ಯಕ್ರಮದ ಕೊನೆಯಲ್ಲಿ ಅವರೆಲ್ಲರಿಗೆ ಬಂದ ಮುಖ್ಯ ಅತಿಥಿಗಳಿಂದ ಶಾಲು ಹೊದೆಸುವ ಯೋಜನೆ ಇದೆ ಅಂತ ತಿಳಿಸೋಣ. ನಮ್ಮ ಕಾರ್ಯಕ್ರಮ ಎಲ್ಲ ಆದಮೇಲೆ ಕವಿತಾ ಪಠನ ಮತ್ತು ಸನ್ಮಾನ ಅಂತ ಇಟ್ಕೊಳ್ಳೋಣ. ಎಲ್ಲಾ ಸರಿಹೋಗುತ್ತೆ “ ಎಂದರು. ಸಂಸ್ಥೆಯವರಿಗೆ ಈ ಯೋಜನೆ ತುಂಬಾ ಹಿಡಿಸಿತು. ಹಾಗೇ ಎಲ್ಲರಿಗೂ ಫೋನ್ ಮಾಡಿ ತಿಳಿಸಿದರು. ಕಿವಿಗಳಿಗಾಗಿ ಹಾತೊರೆಯತ್ತಿದ್ದ ಕವಿಗಳು ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಮತ್ತು ತಮ್ಮ ಕಾವ್ಯ ಧಾರೆಯನ್ನು ಕಾರ್ಯಕ್ರಮಕ್ಕೆ ಬರಲಿರುವ ಅತಿಥಿಗಳಿಗೆ ಕೇಳಿಸಲು ಕಾತರರಾಗಿ ಸರಿಯಾಗಿ ಹೇಳಿದ ಸಮಯಕ್ಕೆ ಬಂದು ಕೂತರು. ಕಾರ್ಯಕ್ರಮ ಬೆಳೆಗ್ಗೆ ೧೧ ಕ್ಕೆ ಆರಂಭವಾಯಿತು. ಹೊರ ಊರುಗಳಿಂದ ಬಂದ ಅಧ್ಯಾಪಕರುಗಳು ತಮ್ಮ ಪ್ರತಿಭೆಯನ್ನು ಸಾರುತ್ತ ಭಾಷಣ ಬಿಗಿದರು. ಯಾರೂ ಸಮಯದ ಕಡೆಗೆ ನೋಡಲಿಲ್ಲ. ಅವರದೆಲ್ಲ ಮುಗಿಯುವಾಗ ಊಟದ ಸಮಯವಾಯಿತು. ಎಲ್ಲರಿಗೂ ಊಟದ ವ್ಯವಸ್ಥೆಯಾಗಿತ್ತು. ಯಾರೋ ಹಿರಿಯ ಕವಿಗಳು ನಿರ್ವಾಹಕರ ಕಿವಿಯಲ್ಲಿ ಮೆಲ್ಲನೆ ಕೇಳಿದರು “ನಮ್ಮ ಕವಿತಾ ಪಠನ ಯಾವಾಗ” ಎಂದು. “ಊಟವಾದ ತಕ್ಷಣ ಸಾರ್. ನಿಮ್ಮನ್ನು ಬೇಗ ಬಿಟ್ಟುಬಿಡುತ್ತೇವೆ” ಎನ್ನುವ ಆಶ್ವಾಸನೆ ಸಿಕ್ಕಿತು. ಊಟ ಮುಗಿಸಿ ಕೂಡುವ ವೇಳೆಗೆ ನಿರ್ವಾಹಕರು ಆಶ್ವಾಸನೆ ಕೊಟ್ಟ ಹಾಗಲ್ಲದೆ ಬೇರೇ ಕಾರ್ಯಕ್ರಮ ಪ್ರಕಟಿಸಲಾಯಿತು. “ವಿಭಾಗದ ವತಿಯಿಂದ ಹಾಜರಿದ್ದ ವಿದ್ಯಾರ್ಥಿಗಳು ಬಂದ ಅಧ್ಯಾಪಕರ ಭಾಷಣಗಳಿಂದ ತಮಗೆ ಉಪಯುಕ್ತವಾದ ಅಂಶಗಳನ್ನು ಗುರುತಿಸಿ ತಿಳಿಸಬೇಕು ಎಂದರು. ಈ ಚರ್ಚಾ ಕಾರ್ಯಕ್ರಮದ ಮುಖ್ಯ ಉದ್ದೇಶವೇ ಅದಾಗಿರುವುದರಿಂದ ಅದಕ್ಕೆ ಆದ್ಯತೆ ಕೊಡಲಾಗಿದೆ, ಇದು ಮುಗಿದ ಮೇಲೆ ಕವಿತಾ ವಾಚನ ವಿರುತ್ತದೆ” ಎಂದು ಸಾರಿದರು. ವಿಧ್ಯಾರ್ಥಿಗಳು ಸಹ ತಮಗೆ ಸಿಕ್ಕ ಅವಕಾಶವನ್ನು ಸದ್ವಿನಿಯೋಗ ಮಾಡಿಕೊಳ್ಳುತ್ತಾ ಸಮಯದ ಗಣನೆ ಇಲ್ಲದೇ ಮಾತಾಡಿದರು. ಇದೆಲ್ಲಾ ಮುಗಿಯುವಾಗ ನಾಲ್ಕೂ ಮುಕ್ಕಾಲು, ಇನ್ನು ಕವಿತಾ ವಾಚನ ಅಂತ ಪ್ರಕಟಿಸಲಾಯಿತು. ಇಷ್ಟರಲ್ಲಿ ಬಂದ ಅಧ್ಯಾಪಕರಲ್ಲಿ ಕೆಲವರು ಅಂದು ಸಂಜೆ ಬಸ್ಸಿಗೆ ಹೋಗಬೇಕಾಗಿದ್ದು,ಅವರನ್ನು ಕಳಿಸಲಾಯಿತು. ಮುಖ್ಯ ಅತಿಥಿಗಳು ಸಹ ಚಡಪಡಿಸುತ್ತಿದ್ದು ನಿರ್ವಾಹಕರಿಗೆ ಬೇಗ ಮುಗಿಸಬೇಕೆಂದು ತಿಳಿಸಿದರು. ಅವರು ಅದನ್ನೇ ಸಭೆಯಲ್ಲಿ ಹೇಳಿದರು. ಕ್ಲುಪ್ತ ಕವನಗಳು, ಬೇಗ ಬೇಗ ಓದಿ ಮುಗಿಸಬೇಕೆಂದು ವಿನಂತಿಸಿಕೊಂಡರು. ಅಷ್ಟರ ಹೊತ್ತಿಗೆ ಕವಿಗಳ ಹುರುಪು ಬತ್ತಿಹೋಗಿತ್ತು. ಯಾಂತ್ರಿಕವಾಗಿ ವೇದಿಕೆಗೆ ಹೋಗಿ ಓದಿ ಬಂದರು. ಕೆಲವರು ಓದಲಿಲ್ಲ. ಸಮಯ ಸಾಕಾಗಲಿಲ್ಲ. ಒಂದು ಮಾತು ಮಾತ್ರ ಆಯೋಜಕರು ಉಳಿಸಿಕೊಂಡಿದ್ದರು. ಎಲ್ಲರಿಗೂ ಮುಖ್ಯ ಅತಿಥಿಗಳಿಂದ ಶಾಲನ್ನು ಹೊದೆಸಿದರು. ಕಾರ್ಯಕ್ರಮ ಮುಗಿದ ಮನೆಗ ಹೊರಡುವಾಗ ಸಂಜೆ ಆರಾಗಿತ್ತು. ಎಲ್ಲರ ಮುಖಗಳಲ್ಲೂ ನಿರಾಶೆ, ಹತಾಶೆ. ಇಂಗ್ಲೀಷಿನಲ್ಲಿ ಹೇಳುವ ನುಡಿಗಟ್ಟು “ taken for a ride ನಿಜವಾಗಿತ್ತು.
ಮತ್ತೊಂದು ಸನ್ನಿವೇಶ. ಫಲಾನಾ ದಿನ ಬಹುಭಾಷಾ ಕವಿಗೋಷ್ಟಿ ಏರ್ಪಡಿಸಲಾಗಿದೆ. ಕನ್ನಡ ಭಾಷೆಯ ಐದು ಜನ ಕವಿಗಳನ್ನು ಕರೆತನ್ನಿ ಎಂದು. ಬರೀ ಇಷ್ಟೇ ಸಂದೇಶ ಬಂದಿತ್ತು. ಇಷ್ಟಕ್ಕೂ ಮುಂಚೆ ಅವರಿಂದ ಬಂದ ಸಂದೇಶದ ಮೇರೆಗೆ ಹಾಜರಾಗಿದ್ದ ಕವಿ ಸಮ್ಮೇಳನಗಳು ತುಂಬಾ ಅಚ್ಚುಕಟ್ಟಾಗಿ ನಡೆದಿದ್ದು ಕವಿಗಳು ಕವನಗಳನ್ನು ಓದಿ ಕನ್ನಡದ ಪರಿಚಯ ನೀಡಿದ್ದರು. ಅವುಗಳ ಅನುವಾದ ಸಹ ಕೊಡಬಹುದೆಂಬ ಸವಲತ್ತು ಕೊಟ್ಟಿದ್ದರು. ತಮ್ಮ ಬಗ್ಗೆ ಪರಿಚಯ ಸಹ ಸ್ವಲ್ಪ ದೀರ್ಘವಾಗೇ ಕೊಡುವ ಸೌಕರ್ಯ ಕೊಡಲಾಗಿತ್ತು. ಹಾಗಾಗಿ ಇದೇ ರೀತಿಯ ಕವಿಗೋಷ್ಠಿಯನ್ನು ತಲೆಯಲ್ಲಿ ಹೊತ್ತುಕೊಂಡು ಐದು ಜನ ಕವಿಗಳನ್ನು ಗೋಷ್ಠಿಗಾಗಿ ಆಯ್ಕೆ ಮಾಡಲಾಯಿತು. ಹಿಂದಿನ ದಿನ ಗೋಷ್ಠಿಯ ಆಹ್ವಾನ ಪತ್ರಿಕೆ ವಾಟ್ಸಪ್ ನಲ್ಲಿ ಬಂತು. ಈ ಗೋಷ್ಟಿ ಸಹ ಯಾವುದೋ ಸಂಸ್ಥೆಯ ತಮ್ಮ ಕಾರ್ಯಕ್ರಮದ ಬಾಲವಾಗಿತ್ತು. ಬೇರೇ ಬೇರೇ ಭಾಷೆಗಳ ಸುಮಾರು ೫೦ ಜನ ಕವಿಗಳು ಭಾಗವಹಿಸುತ್ತಿದ್ದರು. ಆ ಪತ್ರಿಕೆಯಲ್ಲಿ ಕವಿಗಳಿಗೆ ಒಂದು ಶಾಲು, ಜ್ಞಾಪಿಕೆಗಳ ಜೊತೆಗೆ ಸಾಹಿತ್ಯ ರತ್ನ ಎನ್ನುವ ಪ್ರಶಸ್ತಿ ಸಹ ಕೊಡಲಾಗುತ್ತದೆ ಮತ್ತು ಇಡೀ ಕಾರ್ಯಕ್ರಮ ಯೂ ಟ್ಯೂಬಿನಲ್ಲಿ ರಿಕಾರ್ಡ್ ಮಾಡಲಾಗುತ್ತದೆ ಎಂದು. ಎಲ್ಲ ಕವಿಗಳೂ ಸಮಯಕ್ಕೆ ಸರಿಯಾಗಿ ( ಇದೊಂದು ಜಾಡ್ಯ, ಸರಯಾದ ಸಮಯಕ್ಕೆ ಹಾಜರದ್ದು ಬರೀ ಕಾಯುವುದು) ಹಾಜರಾದರು. ಕಾರ್ಯಕ್ರಮ ಒಂದರ್ಧ ಗಂಟೆ ತಡವಾಗಿ ಶುರುವಾಯಿತ. ಮುಖ್ಯ ಅತಿಥಗಳು ಬೇರೇ ಯಾವುದೋ ಕಾರ್ಯಕ್ರಮದಲ್ಲಿ ಸಿಕ್ಕಿಬಿದ್ದಿದ್ದು, ತಡವಾಗ ಬಹುದು ನೀವು ಮುಂದುವರೆಸಿ ಅಂದರಂತೆ. ಸಂಸ್ಥಯ ಯಜಮಾನರು ತಮ್ಮ ಸಂಸ್ಥೆಯ ಬಗ್ಗೆ ಕೊರೆದರು. ನಂತರ ಮತ್ತಿಬ್ಬರು ಭಾಷಣ ಮಾಡಿ ನೆರೆದ ಕವಿಗಳ ಸಹನಯನ್ನು ಪರೀಕ್ಷಿಸಿದರು. ಹೇಗೂ ಅತಿಥಿಗಳು ಬರುವುದು ತಡವಾಗುವದರಿಂದ ಕವಿ ಗೋಷ್ಠಿ ಶುರು ಮಾಡಿದರು. ಅದರ ನಿರ್ವಹಣೆ ಹೊತ್ತಿದ್ದು ಒಬ್ಬ ಸಮರ್ಥ ಕವಿಗಳೇ. ಅವರು ಒಬ್ಬೊಬ್ಬರನ್ನಾಗಿ ಕರೆದು “ ನಿಮ್ಮ ಬಗ್ಗೆ ಒಂದೆರಡು ಸಾಲು ಹೇಳಿ, ಕವಿತೆಯನ್ನು ಓದಿ. ಇತರೆ ಭಾಷೆಗಳ ಕವಿತೆ ಓದುವವರು ಅದರ ಬಗ್ಗೆ ಸ್ಥಳೀಯ ಭಾಷೆಗಲ್ಲಿ ಪರಿಚಯ ಕೊಡಿ” ಎಂದು ಪ್ರಕಟಿಸಿದರು. ಅಲ್ಲಿಂದ ಶುರುವಾಯತ ನೋಡಿ ಕವಿಗಳ ಕಥಾಕಳಿ.
ಒಬ್ಬೊಬ್ಬರದ್ದು ಒಂದೊಂದೊ ತರದ ಅವಾಂತರ. ಕೆಲವರೇನೋ ತಮ್ಮ ಬಗ್ಗೆ ಹೇಳಿಕೊಳ್ಳುವುದನ್ನೇ ಮಾಡಿದರು. ಕೆಲವರು ಸಂಸ್ಥೆಯ ಯಜಮಾನರನ್ನು ಹೊಗಳಿದರು. ಮತ್ತೆ ಕೆಲವರು ನಿರ್ವಹಣೆಯ ಭಾರ ಹೊತ್ತಿದ್ದ ಕವಿಗಳಿಗೆ ತಮ್ಮ ಧನ್ಯವಾದ ಹೇಳುತ್ತ ಕಾಲ ಕಳೆದರು. ಕೆಲವರು ಸ್ಥಳೀಯ ಭಾಷೆಯ ಕವಿತೆಗಳಿಗೂ ತಾತ್ಪರ್ಯ ಹೇಳಿದರು. ಕೆಲವರು ತಾವು ಬರೆದ ಕವಿತೆಗಳಲ್ಲಿರುವ ನೀತಿಯನ್ನು ಒತ್ತಿ ಒತ್ತಿ ಹೇಳಿದರು. ಕೆಲವರು ಧರ್ಮದ ಬಗ್ಗೆ, ಸರಕಾರದ ಬಗ್ಗೆ ಕವಿತೆಗಳನ್ನು ಓದಲು ಹೋದಾಗ ನಿರ್ವಾಹಕರು ತಡೆದರು. ಒಟ್ಟಾರೆ ಅಲ್ಲೊಂದು ತಮಾಷೆ ನಡೆದ ಹಾಗಿತ್ತು.
ಅಷ್ಟರಲ್ಲಿ ಮುಖ್ಯ ಅತಿಥಿಗಳ ಸವಾರಿ ಆಗಮಿಸಿತು. ಅವರಿಗೆ ಪೋಲೀಸ್ ಎಸ್ಕಾರ್ಟ್ ಬೇರೇ. ಅವರು ಬಂದು ವೇದಿಕೆಯ ಮೇಲೆ ಕೂತು ಸನ್ನಿವೇಶಕ್ಕೆ ಹೊಂದಿಕೊಳ್ಳುವವರೆಗೆ ಕವಿತಾ ವಾಚನ ಬಂದ್. ಅವರು ಭಾಷಣ ಮಾಡಬೇಕಿತ್ತು. ನಂತರ ಎಲ್ಲ ಕವಿಗಳಿಗೂ ಸತ್ಕಾರ ಮಾಡುವ ಕಾರ್ಯಕ್ರಮ. ಅವರ ಭಾಷಣ ಎಷ್ಟು ಹೊತ್ತಾಗುತ್ತದೋ, ತಮಗೆ ಯಾವಾಗ ಓದುವ ಅವಕಾಶ ಬರುತ್ತದೋ ಎಂದು ಉಳಿದ ಕವಿಗಳಿಗೆ ಕಾತರ. ಆದರೆ ಅವರು ಪಾಪ, ಈ ಸನ್ನಿವೇಶವನ್ನು ಅರಿತವರಾಗಿದ್ದು, ಗೋಷ್ಟಿಯನ್ನು ಮುಂದುವರೆಸಲು ಹೇಳಿದರು. ಅದೊಂದು ಉಪಕಾರವಾಗಿ, ಗೋಷ್ಠಿ ಮುಂದುವರೆಯಿತು. ಕನ್ನಡದ ಕವಿಗಳು ಮಾತ್ರ ತಮಗೆ ಕೊಟ್ಟ ಸಮಯಕ್ಕೆ ಹೊಂದಿಕೊಂಡು ಚೊಕ್ಕವಾಗಿ ವಾಚನ ಮಾಡಿ ವೇದಿಕೆ ಇಳಿದರು ( ಇದು ಉತ್ಪ್ರೇಕ್ಷೆಯಲ್ಲ). ನಂತರ ಸನ್ನಿವೇಶವನ್ನರಿತ ಮುಖ್ಯ ಅತಿಥಿಗಳು ಸಂಕ್ಷಿಪ್ತವಾಗೇ ತಮ್ಮ ಸಂದೇಶವನ್ನು ಮುಗಿಸಿದರು.
ನಂತರ ಶುರುವಾಯಿತು ಸಂತೆಯಲ್ಲಿಯ ಗದ್ದಲ. ಕವಿತಾ ವಾಚನ ಮಾಡಿದ ಕವಿಗಳನ್ನು ಒಬ್ಬೊಬ್ಬರನ್ನು ಕರೆದು ಮುಖ್ಯ ಅತಿಥಿಗಳು ತಮ್ಮ ಕೈಯಿಂದ ಶಾಲನ್ನು ಹೊದೆಸಿ,ಅವರ ಕೈಗೆ ಒಂದು ಜ್ಞಾಪಿಕೆ, ಪ್ರಶಸ್ತಿ ಪತ್ರ ಕೊಡುವ ಕಾರ್ಯಕ್ರಮ. ಅಲ್ಲಿಗೇ ಗಂಟೆ ಎರಡಾಗಿತ್ತು. ಎಲ್ಲರ ಹೊಟ್ಟೆಯೂ ಹಸಿದಿತ್ತು. ಹೀಗಿರುವಾಗ ತಡವಾಗ್ತಿದ್ದರೆ ಯಾರು ತಡಕೊಳ್ಳುವುದು ? ನೂಕುನುಗ್ಗಲು. ವೇದಿಕೆಯ ಮೇಲಿನಿಂದ ಒಬ್ಬರು ಹೆಸರುಗಳನ್ನು ಓದುತ್ತಿದ್ದಾರೆ. ಕವಿಗಳು ಬಂದು ತಮ್ಮ ಸತ್ಕಾರವನ್ನು ಸ್ವೀಕರಿಸುತ್ತಿದ್ದಾರೆ. ಯಾರ ಹೆಸರು ಕರೆದರು, ಯಾರಿಗೆ ಶಾಲು ಹೊದೆಸಿದರು ಏನೂ ಗೊತ್ತಾಗುತ್ತಿಲ್ಲ. ಆ ಪ್ರಶಸ್ತಿ ಪತ್ರದ ಮೇಲೆ ಯಾರ ಹೆಸರನ್ನೂ ಬರೆದಿರಲಿಲ್ಲ.ಕೈಗೆ ಬಂದದ್ದು ಕೊಡುತ್ತಿದ್ದರು. ಸತ್ಕಾರ ಮಾಡುವ ಸ್ಥಳವೆಲ್ಲ ಗಿಜಗುಟ್ಟುತ್ತಿತ್ತು. ಯಾರ ಮುಖದ ಮೇಲೂ ಸಂತೃಪ್ತಿ ಕಾಣುತ್ತಿಲ್ಲ. ಮುಗಿಸಿ ಹೋದರೆ ಸಾಕು ಎನ್ನುವ ಭಾವ. ಅಂತೂ ಎಲ್ಲರಿಗೂ ಸತ್ಕಾರ ಮುಗಿಸಿ ವಂದನಾರ್ಪಣೆಯಾಗುವಾಗ ಮತ್ತೊಂದು ಮುಕ್ಕಾಲು ಗಂಟೆಯಾಯಿತು. ಪ್ರಶಸ್ತಿ ಪತ್ರ ಕೊಟ್ಟದ್ದು ಯಾಕೆ, ಯಾವ ಪ್ರಶಸ್ತಿ ಇದು, ಯಾವ ಸ್ಪರ್ಧೆಯಲ್ಲಿ ಗೆದ್ದದ್ದಕ್ಕೆ ಎನ್ನುವ ವಿಷಯಗಳನ್ನು ಚರ್ಚಿಸುವ ತಾಳ್ಮೆ ಯಾರಿಗೂ ಇರಲಿಲ್ಲ. ನನ್ನ ಸಹ ಕನ್ನಡ ಕವಿಗಳಿಗೆ ಮಾತ್ರ ತೀರಾ ಅಸಂತೃಪ್ತಿಯಾಗಿತ್ತು. ಆಯೋಜಕರು ಆಗಲೇ ಹೋಗಿಯಾಗಿತ್ತು. ಯಾರ ಹತ್ತಿರ ಅಸಂತೋಷ ತೋರುವುದು? ಅವರಲ್ಲೇ ಮಾತಾಡಿಕೊಂಡು ಮನೆಗಳಿಗೆ ಹಿಂತಿರುಗಿದರು. ಸಾಹಿತ್ಯದ ಬಗ್ಗೆಗಿನ ಒಲವನ್ನು ಈ ರೀತಿ ತಮ್ಮ ಸಂಸ್ಥೆಯ ಪ್ರಚಾರಕ್ಕಾಗಿ ಬಳಸಿಕೊಂಡದ್ದರ ಬಗ್ಗೆ ಕೆಟ್ಟೆನಿಸಿತ್ತು. ಕಲೆ ಒಂದು ಮಾರಾಟ ವಸ್ತುವಾಗಿತ್ತು ಅಲ್ಲಿ. ಕಿವಿಗಳಿಗಾಗಿ ಪರದಾಡುವ ಕವಿಗಳಿಗೆ ಈ ತರದ ಕವಿಗೋಷ್ಠಿಗಳು ಒಂದು ಪಾಠವಾಗಿದ್ದವು.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ