- ಕೋರೋನದ ತಲ್ಲಣಗಳು - ಮೇ 24, 2020
ಸರಾಗವಾಗಿ ಹರಿಯುತ್ತಿದ್ದ ಬದುಕಿನ ಬಂಡಿ ಕನಸಿನಲ್ಲಿಯೂ ನೆನೆಸದಂತೆ ನಿಂತು ಬಿಟ್ಟಿತು.ಅದೇನಾಗಿ ಹೋಯಿತೋ,ಕಂಡರಿಯದ ವೈರಾಣವೊಂದು ಇಡಿ ಪ್ರಪಂಚವನ್ನೆ ತಲ್ಲಣಗೊಳಿಸಿಬಿಟ್ಟಿದೆ. ದೂರದ ಅದ್ಯಾವುದೋ ದೇಶದಲ್ಲಿ ಅದೆಷ್ಟೋ ಪ್ರಾಣಗಳನ್ನು ತೆಗೆಯುತ್ತಿದೆ , ಅದೆಷ್ಟೋ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ ಅಂತೆ ಅಂತ ದೃಶ್ಯ ಮಾಧ್ಯಮಗಳಲ್ಲಿ ನೋಡುತ್ತಾ ಅಯ್ಯೋ ಪಾಪ ಅಂತ ಕನಿಕರ ಪಡುತ್ತಿರುವಾಗಲೆ ದಿಢೀರನೆ ನಮ್ಮ ದೇಶಕ್ಕೂ ಆ ಕ್ಷುದ್ರ ವೈರಸ್ ಬಂದು ಅಪ್ಪಳಿಸಿದೆ ಅಂತ ಗೊತ್ತಾದಾಗ ದಿಗಿಲು ಹುಟ್ಟಿಸಿದ್ದು ನಿಜಾ.ದಿನದಿನಕ್ಕೂ ಅದರ ಹಾವಳಿ ಹೆಚ್ಚಾದಾಗ ಮನೆಯಿಂದ ಹೊರಬರಲು ಆತಂಕವಾದರೂ ಉದ್ಯೋಗದ ನಿಮಿತ್ತ ಹೊರ ಹೋಗಲೇ ಬೇಕಿತ್ತು.
ಸ್ವಂತ ವಾಹನವಿದ್ದರೂ ಬಸ್ ನಿಲ್ದಾಣದಲ್ಲಿ ಬಿಟ್ಟು, ನೂರಾರು ಜನ ಪ್ರಯಾಣಿಸುವ ಬಸ್ ನಲ್ಲಿ ಹೋಗುವಾಗ ಜೀವ ಕೈಯಲ್ಲಿಟ್ಟು ಕೊಂಡು ಹೋಗಬೇಕಾಗಿತ್ತು. ಉದ್ಯೋಗ ನಿಮಿತ್ತ ಪಯಣಿಸುವ ಹಾದಿ ರಾಷ್ಟ್ರೀಯ ಹೆದ್ದಾರಿ ಆದ್ದರಿಂದ ಸ್ವಂತ ವಾಹನದಲ್ಲಿ ಹೋಗಲು ಒಬ್ಬಳೆ ಪತ್ನಿಯನ್ನು ಕಳಿಸಲು ಪತಿಗೆ ಹಾಗು ಒಬ್ಬಳೆ ಅಮ್ಮನಿರುವ ಮಗಳಿಗೆ ಆತಂಕ. ಹಾಗಾಗಿ ಬಸ್ ನಲ್ಲಿ ಪ್ರಯಾಣ ಅನಿವಾರ್ಯ. ಬಸ್ಸಿಳಿದು ಶಾಲೆ ತಲುಪಿದ ಕೂಡಲೆ ಸೋಪಿನಿಂದ ಕೈ ತೊಳೆದು ನಂತರವೆ ಮುಂದಿನ ಕೆಲಸ.ಯಾರಾದರೂ ಕೆಮ್ಮು ಶೀತ ಜ್ವರ ಅಂದರೆ ಎದೆಯಲಿ ಪುಕ ಪುಕ.ಕರ್ತವ್ಯ ಮುಗಿಸಿ ಮತ್ತೆ ಬಸ್ಸಿನಲ್ಲಿ ಪ್ರಯಾಣ.ಮನೆಗೆ ಬಂದ ಕೂಡಲೆ ಮತ್ತೆ ಸೋಪಿನಿಂದ ತಿಕ್ಕಿ ತಿಕ್ಕಿ ಕೈ ತೊಳೆದು ಕೊಂಡ ಮೇಲೆ ಅಡುಗೆ ಮನೆ ಪ್ರವೇಶ. ಆ ಆತಂಕದ ದಿನಗಳಲ್ಲಿ ಅಂತೂ ಇಡೀ ದೇಶವೇ ಲಾಕ್ ಡೌನ್ ಅಂತ ಸರ್ಕಾರ ಘೋಷಿಸಿ ಬಿಟ್ಟಾಗ ಆತಂಕದ ನಡುವೆಯೂ ನಿರಾಳ ಭಾವ.
ಈಗ ಮನೆಯವರೆಲ್ಲ ಮನೆಯಲ್ಲಿ
ಬಂದಿಗಳು.ಹೊರಹೋಗುವಂತಿಲ್ಲ,ಯಾರೂ ಮನೆಗೆ ಬರುವಂತೆ ಇಲ್ಲ.ದಿನಾ ಟಿ.ವಿ.ನೋಡುವುದು, ಅಡುಗೆ ಮಾಡಿ ತಿನ್ನುವುದು, ಮನೆಕೆಲಸ ಮಾಡುವುದು, ಓದುವುದು, ಬರೆಯುವುದು, ಈ ರೀತಿಯ ಬದುಕು ಹೊಸದು.ಹಿಂದೆಲ್ಲ ವರ್ಷಕ್ಕೆ ಎರಡು ಬಾರಿ ತಿಂಗಾಳುಗಟ್ಟಲೆ ನಮ್ಮ ಇಲಾಖೆಯಲ್ಲಿ ರಜೆ ಸಿಗುತ್ತಿದ್ದರೂ, ಪ್ರವಾಸ, ಬಂಧು ಬಳಗದವರ ಮನೆಗೆ ಭೇಟಿ, ಅವರು ನಮ್ಮ ಮನೆಗೆ ಭೇಟಿ, ಶಾಪಿಂಗ್, ಹೋಟೆಲ್, ಮದುವೆ , ಗೃಹ ಪ್ರವೇಶ ಮುಂತಾದ ಕಾರ್ಯಕ್ರಮಗಳು ಹೀಗೆ ಮನೆಯಲ್ಲಿ ಇರುವುದೇ ಅಪರೂಪವಾಗಿತ್ತು. ಆದರೆ ಈ ರಜೆ ಹಾಗಲ್ಲ. ಇಡೀ ದಿನ ಮನೆಯಲ್ಲಿ ಸೆರೆ.
ನನಗಂತೂ ಇಂತಹ ರಜೆಯಲ್ಲಿ ಮನೆಯಲ್ಲಿಯೇ ಇರುವುದು ಮೊದಲ ಬಾರಿ.
ಮನದಲ್ಲಿ ಆತಂಕ, ತಳಮಳ, ಈ ವೈರಸ್ ನಿಂದಾಗಿ ಇಡೀ ಜೀವನದಲ್ಲಿ ಒಮ್ಮೆಯಾದರೂ ಕಾಣ ಸಿಗದ ಅನಿಶ್ಚಿತತೆಯ, ಉದ್ವೇಗದ ಅನುಭವ ಇದು.ಅಸಾಧ್ಯ ಎನಿಸಿದ ಎಲ್ಲವನ್ನೂ ಸಾಧ್ಯವಾಗಿಸಿದ ಸಂದರ್ಭದಲ್ಲಿ ಬದುಕು ಜನಗಳಿಗೆ ಏನೇನೋ ಕಲಿಸಿದೆ.ಏನಿಲ್ಲದಿದ್ದರೂ ಬದುಕುವ ಛಲ ,ಸಾವಿರಾರು ಮೈಲು ದೂರ ನಡೆದು ಬದುಕು ಉಳಿಸಿಕೊಳ್ಳುವ ಶಕ್ತಿ, ತಾಳ್ಮೆ, ನೂರಾರು ಸಂಕಷ್ಟಗಳಿಗೆ ಮಿಡಿಯುವ ಮನಸ್ಸುಗಳು,ಜಾತಿ,ಕುಲ,ಧರ್ಮಕ್ಕಿಂತ ಮಾನವೀಯತೆ ದೊಡ್ಡದು ಅನ್ನೋ ವಾಸ್ತವ ,ಶುಭ್ರ ಆಕಾಶ,ಮಲೀನತೆಯಿಂದ ಹೊರಬಂದ ಪರಿಸರ, ಮನುಷ್ಯರಿಲ್ಲದ ರಸ್ತೆಗಳಲ್ಲಿ ನಿರಾಂತಕವಾಗಿ ಕುಣಿದಾಡುತ್ತಿರುವ ಪ್ರಾಣಿ ಪಕ್ಷಿಗಳು ಇವೆಲ್ಲವೂ ಆಶಾದಾಯಕವೆ ಆಗಿದೆ. ಪ್ರಾಣವನ್ನು ಒತ್ತೆ ಇಟ್ಟು ರೋಗಿಗಳನ್ನು ಬದುಕಿಸಲು ತಮ್ಮವರೆಲ್ಲರಿಂದಲೂ ದೂರವಿದ್ದೂ ಕಷ್ಟಪಡುತ್ತಿರುವ ವೈದ್ಯ ದೇವರುಗಳು, ನರ್ಸ್ಗಳು,ದಾದಿಗಳು, ಆರೋಗ್ಯ ಇಲಾಖೆ ಯವರು,ಕಾನೂನು ಕಾಪಾಡುತ್ತಿರುವ ಪೋಲೀಸರು, ಕಷ್ಟಗಳಿಗೆ ಮರುಗಿ ಸಹಾಯ ಹಸ್ತ ನೀಡುತ್ತಿರುವ ಕರುಣಾಮಯಿಗಳು, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸ್ಪಂದಿಸುತ್ತಿರುವ ಮಾನವೀಯತೆಯ ಸಕಾರಮೂರ್ತಿಗಳು.ಈ ಸಂಕಷ್ಟದಿಂದ ಪಾರಾಗಲು ದುಡಿಯುವ ಮಂತ್ರಿ ಮಹೋದಯರು, ರಾಜಕಾರಣಿ ಗಳು ಇವರೆಲ್ಲರ ಪರಿಶ್ರಮ ಸಂಕಷ್ಟ ದಿನಗಳಲ್ಲಿ ವ್ಯರ್ಥ ವಾಗದ ಸಾರ್ಥಕ ವಾಗಲಿ.
ಆದರೆ, ಕೆಲವು ಮೂರ್ಖರಿಂದ ಅಸಹಕಾರ, ವಾಪಾಸು ಕಳ್ಳಿಯಂತೆ ಕೊರೋನ ವೈರಸ್ಸಿಗಿಂತ ವೇಗವಾಗಿ ಹಬ್ಬಿ ಸಮಾಜದ ಸ್ವಾಸ್ಥ್ಯ ಕದಡುತ್ತಿರುವ ಕೋಮುವಾದ, ಒಳಗೊಳಗೆ ಸ್ಫೋಟಗೊಳ್ಳಲು ಸಿದ್ದವಾಗಿರುವ ಕುದಿಯುತ್ತಿರುವ ಮನಸ್ಸುಗಳು , ಕೆಲಸವಿಲ್ಲದೆ ,ತಿನ್ನಲು ಅನ್ನವಿಲ್ಲದೆ ಅತಂತ್ರಗೊಂಡಿರುವ , ನಿರ್ಗತಿಕ ಕೆಲಸಗಾರರು, ಕನಿಷ್ಠ ಸವಲತ್ತುಗಳನ್ನು ಪಡೆಯಲು ಹೆಣಗಾಡುತ್ತಿರುವ ಕಾರ್ಮಿಕರು, ತಮ್ಮದಲ್ಲದ ತಪ್ಪಿಗೆ ರೋಗ ಅಂಟಿಸಿಕೊಂಡು ಸಾವಿನ ಕೂಪಕ್ಕೆ ಬೀಳುತ್ತಿರುವ ಕೆಲ ದುರಾದೃಷ್ಟ ವಂತರು, ನಿರ್ಲಕ್ಷ್ಯದಿಂದ ,ದುರಾಂಕಾರದಿಂದ , ಧರ್ಮಾಂಧ ತೆಯಿಂದ ರೋಗ ಅಂಟಿಸುತ್ತಿರುವ ನೀಚರು ಇವೆಲ್ಲವನ್ನೂ ಈ ಸಂದರ್ಭದಲ್ಲಿ ನೋಡುತ್ತಾ, ನೋಡುತ್ತಾ ಮನಸ್ಸಿನಲ್ಲೇ ತಳಮಳಿಸುವಂತಾಗಿದೆ. ಎಲ್ಲವನ್ನೂ ನೋಡುತ್ತಾ ಕಲಿಯಬೇಕಾದ ಸಮಯ.ಎಲ್ಲವು ಇದ್ದು ಏನೂ ಇಲ್ಲದ ಭಾವ. ಕಷ್ಟದ ದಿನಗಳಲ್ಲಿ ಎಲ್ಲರಿಗೂ ಒದಗಿ ಬರಲಾರದ ಅಸಹಾಯಕತೆ ಕಾಡುತ್ತಿರುವುದು ನಿಜವೇ ಆಗಿದೆ.
ಮುಂದೇನು ಅನ್ನುವ ಅನಿಶ್ಚಿತತೆ, ಈ ಮಹಾ ಖಾಯಿಲೆಯಿಂದ ಇಷ್ಟೇಲ್ಲಾ ಎಚ್ಚರಿಕೆ ವಹಿಸಿಯೂ ಬದುಕುತ್ತೇವೆಯೋ, ಬದುಕಿದರೂ ಮುಂದೇನು ಸಂಕಷ್ಟಗಳು ಕಾಡುತ್ತವೆಯೊ, ಮತ್ತೆ ಹಿಂದಿನಂತೆ ಇರಲು ಸಾಧ್ಯವೇ.ಆರ್ಥಿಕವಾಗಿ ಅದೆಷ್ಟೋ ವರ್ಷಗಳ ಹಿಂದಕ್ಕೆ ಹೋಗಬೇಕಾಗಿದೆಯೋ.ಎಲ್ಲವನ್ನು ಸರಿಪಡಿಸಲು ಇನ್ನೂ ಅದೆಷ್ಟು ವರ್ಷಗಳು ಬೇಕಾಗುತ್ತವೆಯೋ.ಊಹಿಸಿಕೊಳ್ಳಲೇ ದಿಗಿಲಾಗುತ್ತದೆ.
ಕೆಳವರ್ಗದ, ಮೇಲುವರ್ಗದ, ಸರ್ಕಾರಿ, ಖಾಸಗಿ ವರ್ಗದ ನೌಕರರು,ಕೂಲಿ ಕಾರ್ಮಿಕರು, ಗಾರ್ಮೆಂಟ್ಸ್ ಉದ್ಯೋಗಿ ಗಳು, ಸಣ್ಣ ಪುಟ್ಟ ಕೈಗಾರಿಕೆಗಳ ಮಾಲೀಕರು, ಪತ್ರಿಕೆಗಳ ಮಾಲಿಕರು,ಅಲ್ಲಿ ಕೆಲಸಗಾರರು, ಕಟ್ಟಡ ನಿರ್ಮಾಣ ಕೆಲಸ ಮಾಡುವ ಪತ್ರಕರ್ತರು , ಕೆಲಸದವರು,ರೈತರು, ಹೋಟೆಲ್ ಉದ್ಯಮ ಒಂದೇ ಎರಡೇ ಇವರೆಲ್ಲರ ಪರಿಸ್ಥಿತಿ ಮುಂದೆ ಏನಾಗಬಹುದು, ಯಾವ ರೀತಿಯ ಆರ್ಥಿಕ ಸಂಕಷ್ಟದ ಬಿರುಗಾಳಿ ಬೀಸ ಬಹುದು ಎಂಬುದನ್ನು ಊಹಿಸಿದರೆ ಎದೆ ನಡುಗುತ್ತದೆ.ಪ್ರಾಯಶ ಕೊರೋನ ವೈರಸ್ ಧಾಳಿಯ ಸಾವಿಗಿಂತಲೂ ನಂತರದ ದಿನಗಳಲ್ಲಿ ಬದುಕುವ ದಾರಿ ಮುಚ್ಚಿ ಹೋಗಿ ಸಾವು ಬಯಸುವ ಸಂಖ್ಯೆ ಹೆಚ್ಚಾಗುವ ಭಯ ಕಾಡದೆ ಇರದು.ಈ ಎಲ್ಲಾ ಭಯಗಳು ನಡುವೆಯೂ ಭರವಸೆಯ ಬೆಳಕನ್ನು ಹಿಡಿದು ಬದುಕಲೇ ಬೇಕಾಗಿದೆ.ಒಳ್ಳೆಯದಾಗಬಹುದು ಅನ್ನೂ ನಿರೀಕ್ಷೆಯಲಿ ಇವತ್ತಿನ ಆತಂಕದ ದಿನಗಳನ್ನು ತಳ್ಳಬೇಕಾಗಿದೆ.
ಹೆಚ್ಚಿನ ಬರಹಗಳಿಗಾಗಿ
ಚಾಚಾ ನೆಹರು ಮತ್ತು ನಮ್ಮ ಮಕ್ಕಳು
ಭವಿಷ್ಯದ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರು
ಹಿಂದಿ ಹೇರಿಕೆ ಸರಿಯೇ?