ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗಣೇಶನ ಕೈಯಲ್ಲಿಯ ಲಾಡು

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ನಮ್ಮ ಭಾರತೀಯರ ಅದರಲ್ಲೂ ಹಿಂದೂಗಳ ಹಬ್ಬಗಳಲ್ಲಿ ಭಾದ್ರಪದಮಾಸದಲ್ಲಿ ಬರುವ ಗಣೇಶ ಚವಿತಿ ಹಬ್ಬ ತುಂಬಾ ಮಹತ್ವಪೂರ್ಣವಾದದ್ದು. ಅದು ಬರೀ ಹಬ್ಬ ಮಾತ್ರ ಅಲ್ಲ, ಒಂದು ಸಾಮಾಜಿಕ ಚಳುವಳಿಯಾಗಿದೆ ಎಂದು ಹೇಳಿಕೊಳ್ಳಬಹುದು. ಬರೀ ಮನೆಗಳಿಗಷ್ಟೇ ಪರಿಮಿತವಾದ ಹಬ್ಬವನ್ನ ಲೋಕಮಾನ್ಯ ಬಾಲ ಗಂಗಾಧರ ತಿಲಕರು ಸಾರ್ವಜನಿಕ ಹಬ್ಬವನ್ನಾಗಿ ಪರಿವರ್ತಿಸಿ ಅದನ್ನ ಒಂದು ಸಂಘಟನಾ ಕಾರ್ಯವಾಗಿ ಮಾಡಿದ್ದು ನಮಗೆಲ್ಲ ತಿಳಿದ ವಿಷಯವೇ. ಪುಣೆಯಲ್ಲಿ ಅವರು ಹುಟ್ಟುಹಾಕಿದ ಈ ಸಾರ್ವಜನಿಕ ಗಣೇಶ ಮೂರ್ತಿ ಸ್ಥಾಪನೆ ಇಡೀ ಮಹಾರಾಷ್ಟ್ರಕ್ಕೆ ಹರಡಲು ಹೆಚ್ಚು ಸಮಯ ಬೇಕಾಗಲಿಲ್ಲ. ಅಲ್ಲಿಂದ ಮಹಾರಾಷ್ಟ್ರದ ನೆರೆರಾಷ್ಟ್ರಗಳಾದ ಗೋವಾ, ಕರ್ನಾಟಕ, ತೆಲಂಗಾಣಾ, ಆಂಧ್ರಪ್ರದೇಶಗಳಿಗೂ ಹಬ್ಬಿ ಅಲ್ಲಿ ಸಹ ಸಾರ್ವಜನಿಕ ಪಂಡಾಲುಗಳಲ್ಲಿ ಗಣಪತಿಯನ್ನು ಕೂರಿಸಿ ಸಾಮೂಹಿಕ ಹಬ್ಬವನ್ನಾಗಿ ಆಚರಿಸುವುದು ನಾವು ಕಾಣುತ್ತೇವೆ.

ವರ್ಷದಿಂದ ವರ್ಷಕ್ಕೆ ಈ ರೀತಿಯ ಸಾರ್ವಜನಿಕ ಪಂಡಾಲುಗಳು ಹೆಚ್ಚುತಲಿದ್ದು ಚತುರ್ಥಿಯ ದಿನದಿಂದ ಹಿಡಿದು ಅನಂತಚತುರ್ದಶಿಯವರೆಗೆ ಹಬ್ಬದ ವಾತಾವರಣ ಹರಡಿಕೊಂಡಿರುತ್ತದೆ. ಪಂಡಾಲುಗಳಲ್ಲಿ ಪೂಜೆಯ ಜೊತೆಗೆ ಆಯಾ ಮೊಹಲ್ಲಾದ ಹುಡುಗರು, ಹುಡುಗಿಯರು ನಡೆಸಿಕೊಡುವ ಸಾಂಸ್ಕೃತಿಕ ಕಾರ್ಯಕ್ರಮಗಳು ಹಬ್ಬಕ್ಕೆ ಒಂದು ಹೊಸ ಆಯಾಮ ಕೊಡುತ್ತವೆ. ಗಣೇಶನ ಮೂರ್ತಿಗಳನ್ನು ವಿಧವಿಧಗಳಾಗಿ ಪ್ರದರ್ಶಿಸುವುದು ನಡೆಯುವುದರಿಂದ ಅದೊಂದು ಕಲಾತ್ಮಕ ಅಭಿವ್ಯಕ್ತಿಗೆ ಸಹ ದಾರಿ ಕೊಡುತ್ತಿದೆ. ಅಂಕಿಅಂಶಗಳ ಪ್ರಕಾರ ಕಳೆದ ವರ್ಷ ಮುಂಬೈಯಲ್ಲಿ ೮೪ ಸಾವಿರಕ್ಕೂ ಹೆಚ್ಚು ಮೂರ್ತಿಗಳು ವೇದಿಕೆಗಳನ್ನುಅಲಂಕರಿಸಿದ್ದವಂತೆ.

ಮಹಾರಾಷ್ಟ್ರದ ನಂತರ ಅಷ್ಟೇ ಸಂಭ್ರಮದಲ್ಲಿ ಗಣೇಶನ ಹಬ್ಬ ಆಚರಿಸಲ್ಪಡುವುದು ಎಂದರೆ ತೆಲಂಗಾಣಾ ರಾಜ್ಯದಲ್ಲಿ ಎಂದು ಹೇಳಬಹುದು. ನವರಾತ್ರಿ, ದೀಪಾವಳಿಗಳಷ್ಟೇ ವೈಭವದಿಂದ ಈ ಹಬ್ಬವನ್ನುಇಲ್ಲಿಯ ಜನ ಮಾಡುತ್ತಾರೆ. ಒಂಬತ್ತು ದಿನಗಳು ಗಣೇಶನ ಮಂಟಪದ ಸುತ್ತೂ ಜನ ಜೀವನ ಹರಡಿಕೊಂಡಿರತ್ತೆ. ಸಂಜೆ ೭ ರಿಂದ ೧೦ರ ವರೆಗೆ ಬೇರೇ ಎಲ್ಲ ಕಾರ್ಯಕ್ರಮಗಳನ್ನ ಬದಿಗಿಟ್ಟು ಭಕ್ತರು ಪೂಜೆಗೆ ಹಾಜರಾಗಿ, ಪ್ರಸಾದನಿವೇದಿಸಿ, ತೊಗೊಂಡು ತಮ್ಮ ಭಕ್ತಿಯನ್ನು ಸಾರುತ್ತಾರೆ. ಗಣೇಶನ ವಿಸರ್ಜನೆಯ ದಿನ ಹೈದರಾಬಾದ್ ಮತ್ತು ಸಿಕಿಂದರಾಬಾದ್ ನಗರಗಳು ಬೇರೇ ಯಾವ ಚಟುವಟಿಕೆಯನ್ನು ಮಾಡುವುದಿಲ್ಲ. ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳ ಮೂಲಕ ಹಾದು ಹೋಗುವ ಗಣೇಶ ಪ್ರತಿಮೆಗಳು ಯಾವ ಅಡೆತಡೆಗಳಿಲ್ಲದೆ ವಿಸರ್ಜನೆಗೆ ತೆರಳುತ್ತವೆ. ಹಾದಿಗಳಲ್ಲಿ ಮುಸಲ್ಮಾನ ಬಾಂಧವರು ವೇದಿಕೆಗಳನ್ನು ತಯಾರು ಮಾಡಿ ಮೆರವಣಿಗೆಗಳ ಜೊತೆಗೆ ಬರುವ ಭಕ್ತರಿಗೆ ಚಿತ್ರಾನ್ನಗಳ ಪಾಕೀಟು,ನೀರು ಹಂಚುತ್ತಾ ತಮ್ಮ ವಿಶಾಲ ಭಾವನೆ ತೋರುತ್ತಾರೆ. ಕೆಲ ವರ್ಷಗಳ ಹಿಂದೆನಡೆದ ಕೋಮು ಗಲಭೆಯಲ್ಲಿ ಆದ ಜನ ಮತ್ತು ಆಸ್ತಿ ನಷ್ಟವನ್ನು ದೃಷ್ಟಿಯಲ್ಲಿಟ್ಟುಕೊಂಡು ಎರಡೂ ಧರ್ಮದ ಜನರು ಶಾಂತಿಯುತವಾಗಿ ಈ ದೊಡ್ಡ ಹಬ್ಬ ನಡೆಯಲು ಒಪ್ಪಿ ಅದನ್ನ ಕಾರ್ಯಾಚರಣೆಗೆ ತಂದಿರುವುದು ಇಲ್ಲಿಯ ವಿಶೇಷವಾಗಿದೆ. ಕಳೆದ ವರ್ಷ ೭೫ ಸಾವಿರಕ್ಕೂ ಹೆಚ್ಚು ಗಣೇಶನಮೂರ್ತಿಗಳು ಈ ಜಂಟಿನಗರಗಳಲ್ಲಿ ಕೂರಿಸಲಾಗಿತ್ತಂತೆ.

ಈ ಸಂಭ್ರಮಗಳೆಲ್ಲ ಒಂದು ಕಡೆಯಾದರೆ ತೆಲಂಗಾಣಾ ರಾಜ್ಯಕ್ಕೇ ವಿಶೇಷವೆನಿಸುವ ಒಂದು ಕಾರ್ಯಕ್ರಮ ಮಾತ್ರ ಮತ್ತೆಲ್ಲೂ ಕಾಣುವುದಿಲ್ಲ. ನೆರೆ ರಾಜ್ಯವಾದ ಮತ್ತು ಅದೇ ತೆಲುಗು ಭಾಷೆ ಮಾತಾಡುವ ಆಂಧ್ರಪ್ರದೇಶದಲ್ಲೂ ಹೆಚ್ಚಾಗಿ ಕಾಣದ ಈ ಕಾರ್ಯಕ್ರಮ ತೆಲಂಗಾಣಾಭಕ್ತರು ತಾವೇ ಕಂಡುಕೊಂಡು ಆಚರಣೆಗೆ ತಂದು ಮುಂದುವರೆಸುತ್ತಿದ್ದಾರೆ. ಅದೇ ಚವಿತಿಯ ದಿನ ಗಣೇಶನ ಕೈಯಲ್ಲಿಟ್ಟು ಒಂಬತ್ತೂ ದಿನ ಪೂಜೆಗೊಳ್ಳುವ ಲಾಡುವನ್ನು ವಿಸರ್ಜನೆಯ ದಿನ ಹರಾಜುಹಾಕುವುದು. ಹೈದರಾಬಾದಿನಿಂದ ಸುಮಾರು ೧೬ ಕಿಮೀದೂರದಲ್ಲಿರುವ ಒಂದು ಹಳ್ಳಿ (ಈಗ ನಗರ ಕಾರ್ಪೊರೇಷನ್ ಆಗಿದೆ ಬಿಡಿ) ಬಾಲಾಪೂರ್ ಎಂಬ ಊರಿನಲ್ಲಿ ೧೯೯೧೪ರಲ್ಲಿ ಪ್ರಾರಂಭವಾದ ಈ ಹರಾಜಿನ ಕಾರ್ಯಕ್ರಮ ಈಗ ಇಡೀ ತೆಲಂಗಾಣಾ ರಾಜ್ಯದಲ್ಲಿ ನಡೆಯುತ್ತದೆ. ಜಂಟಿನಗರಗಳಲ್ಲಂತೂ ಎಲ್ಲ ಪಂಡಾಲುಗಳ ಗಣೇಶರ ಲಾಡುಗಳು ಹರಾಜಿಗೆ ಒಳಗಾಗುತ್ತವೆ.

ಪಂಡಾಲುಗಳಲ್ಲಿ ಪೂಜೆ ನಡೆಸಿಕೊಡುವ ಒಬ್ಬ ಅರ್ಚಕರ ಹೇಳಿಕೆಯ ಪ್ರಕಾರ ೧೯೮೪ರ ಸುಮಾರು ಆ ಊರಿನ ಒಬ್ಬ ಅರ್ಚಕರು ದಿನವೂ ನಡೆಯುವ ಪೂಜೆಗಳಿಂದ ನಿಕ್ಷಿಪ್ತವಾದ ದೈವೀ ತರಂಗಗಳು ಆ ಪ್ರಸಾದದಲ್ಲಿ ಇರುತ್ತವೆ ಎಂದೂ ಅದನ್ನು ತೆಗೆದುಕೊಂಡು ಹೋದವರು ಸಮೃದ್ಧಿ ಪಡೆಯುವರೆಂದು ಹೇಳಿದಾಗ ಪಂಡಾಲಿನ ಆಯೋಜಕರು ಅದನ್ನುತೆಗೆದುಕೊಂಡು ಹೋದರಂತೆ. ಕಾಕತಾಳೀಯವೆಂಬಂತೆ ಅವರಿಗೆ ಮುಂದಿನವರ್ಷ ಎಲ್ಲವೂ ಕೂಡಿಬಂದು ಅವರು ಸುತ್ತಮುತ್ತಲಿನವರಿಗೆ ಹೇಳಿದರಂತೆ. ಆದರೆ ಈ ಮಾತುಗಳು ಒಂದು ದಶಕದ ಮಟ್ಟಿಗೆ ಒಂದು ಪರಂಪರೆಯಾಗುವಷ್ಟು ಪ್ರಭಾವ ಬೀರಿರಲಿಲ್ಲ. ೧೯೯೪ರಲ್ಲಿ ಮಾತ್ರ ಈ ಪ್ರಸಾದ ತೆಗೆದುಕೊಳ್ಳಲು ಪೈಪೋಟಿ ಶುರುವಾಗಿ ಲಾಡನ್ನು ಹರಾಜುಹಾಕಲಾಯಿತಂತೆ. ಅದು ಅಂದು ೪೫೦ ರುಪಾಯಿಗಳಿಗೆ ಹರಾಜಾಗಿ ಅದೇ ಗ್ರಾಮದವರಾದ ಕೊಲನ್ ಮೋಹನ್ ರೆಡ್ಡಿ ಎನ್ನುವವರು ಅದನ್ನುಗೆದ್ದುಕೊಂಡಿದ್ದರಂತೆ.

ಆ ವರ್ಷದಿಂದ ಪ್ರತಿ ವರ್ಷವೂ ಲಾಡೂ ಇನ್ನೂಹೆಚ್ಚಿನ ಇನ್ನೂ ಹೆಚ್ಚಿನ ಮೊತ್ತಕ್ಕೆ ಹರಾಜು ಹಣ ಗಳಿಸುತ್ತಿದೆ. ಕೈಯಲ್ಲಿಡುವ ಲಾಡೂವಿನ ಗಾತ್ರವೂ ಹೆಚ್ಚುತ್ತಿದೆ. ಕಳೆದ ವರ್ಷದ ಗಣೇಶನ ಲಾಡು ೨೧ಕಿಲೋದ್ದು. ಪ್ರತಿ ವರ್ಷವೂ ಬಾಲಾಪುರ್ ಗ್ರಾಮದ ಲಾಡಿನ ಹರಾಜು ಮೊತ್ತದಾಖಲೆ ಸೃಷ್ಟಿಸುತ್ತಿತ್ತು. ೨೦೨೩ರಲ್ಲಿ ಬಾಲಾಪುರ್ ಗಣೇಶನ ಲಾಡು ೨೭ ಲಕ್ಷಕ್ಕೆ ಹರಾಜಾಗಿತ್ತು. ಈ ವರ್ಷ ಅದು ೩೦.೦೧ ಲಕ್ಷಕ್ಕೆ ಹರಾಜಾಗಿದ್ದುಮೊದಲು ಗೆದ್ದುಕೊಂಡ ಕೊಲನು ವಂಶದ ಶಂಕರ್ ರೆಡ್ಡಿ ಅದನ್ನುಪಡೆದಿದ್ದಾರೆ.

ಆದರೆ, ಕಳೆದ ವರ್ಷ ಹೈದರಾಬಾದಿನ ಹೊರಪ್ರದೇಶದಲ್ಲಿರುವ ಬಂಡ್ಲಗೂಡ ಎನ್ನುವ ಪ್ರದೇಶದ ಒಂದು ಅಪಾರ್ಟ್ಮೆಂಟಿನ ಲಾಡೂ ೧.೨೬ ಕೋಟಿರುಪಾಯಿಗಳಿಗೆ ಹರಾಜಾಗಿ ದಾಖಲೆ ಸೃಷ್ಟಿಸಿತ್ತು. ಅದಕ್ಕೂ ಹಿಂದಿನ ವರ್ಷಸಹ ಅದೇ ಅಪಾರ್ಟ್ಮೆಂಟಿನವರು ೬೦.೮ ಲಕ್ಷಕ್ಕೆ ಲಾಡೂ ಹರಾಜು ಹಾಡಿ ದಾಖಲೆ ಮಾಡಿದ್ದರು. ಈ ವರ್ಷ ಅದೇ ಅಪಾರ್ಟ್ಮೆಂಟಿನ ಲಾಡು ೧.೮೭ ಕೋಟಿಗೆ ಹರಾಜಾಗಿದೆ. ಅದೇನೇ ಇದ್ದರೂ ಎಲ್ಲರೂ ಕಾತುರದಿಂದನಿರೀಕ್ಷಿಸುವುದು ಮಾತ್ರ ಬಾಲಾಪುರ್ ಲಾಡಿನ ಹರಾಜು ಮಾತ್ರ. ಅಂದಿನ ಸ್ಥಳೀಯ ನ್ಯೂಸ್ ಚಾನಲ್ ಗಳಲ್ಲಿ ಅದೇ ವಾರ್ತೆ ಬಾರಿ ಬಾರಿಗೂಬರುತ್ತಿರುತ್ತದೆ.

ಈ ರೀತಿಯ ವಿಶಿಷ್ಠ ಪದ್ಧತಿಯ ಹಿನ್ನೆಲೆ ವಿಚಾರಿಸಿದಾಗ ಗೊತ್ತಾದದ್ದು ಮುಂಚಿನ ದಿನಗಳಲ್ಲಿ ಹೀಗೆ ಲಾಡು ತೊಗೊಂಡವರು ರೈತರು. ಇಂಥ ಲಾಡುಗಳನ್ನು ಯಥೇಚ್ಛ ವಾಗಿ ತುಪ್ಪ ಬೆರೆಸಿ ತಯಾರಿಸಲಾಗುತ್ತದೆ. ಇದನ್ನು ಅವರು ತಮ್ಮ ಹೊಲಗಳಲ್ಲಿ ಚೆಲ್ಲಿದಾಗ ಇಮ್ಮಡಿ ಪೈರು ಬಂದಿತ್ತಂತೆ. ಹಾಗೆ ಸುಮಾರು ವರ್ಷಗಳ ವರೆಗೆ ರೈತರೇ ಈ ಲಾಡುವನ್ನು ಹರಾಜಿನಲ್ಲಿ ಖರೀದಿಮಾಡುತ್ತಿದ್ದರು. ಅವರ ಏಳಿಗೆ ನೋಡಿದ ರಿಯಲ್ ಎಸ್ಟೇಟ್ ವ್ಯಾಪಾರಿಗಳು, ಉದ್ದಿಮೆದಾರರು ಹರಾಜಿನಲ್ಲಿ ಲಾಡೂ ತೊಗೊಳ್ಳಲು ಶುರು ಮಾಡಿದರು. ಅವರು ಸಹ ತಮ್ಮ ತಮ್ಮ ವ್ಯಾಪಾರ ಮತ್ತು ವಹಿವಾಟುಗಳಲ್ಲಿ ವೃದ್ಧಿಕಾಣುವುದನ್ನು ಕಂಡ ಇತರೆ ಜನರು ತಾವು ಸಹ ಲಾಡನ್ನು ತೊಗೊಳ್ಳುವ ಆತುರದಲ್ಲಿ ಹರಾಜಿನ ಮೊತ್ತ ಏರಿಸುತ್ತ ಹೋದರು. ಈಗ ಹರಾಜಾಗಿಬರುವ ಮೊತ್ತ ಕೋಟಿ ರುಪಾಯಿಗಳನ್ನು ದಾಟಿರುವುದು ವಿಶೇಷ ಸಂಗತಿ.

ಸೇವಾ ಸಮಿತಿಯವರು ಬೇಕಾಗುವ ಬಿಗಿ ನಿಬಂಧನೆಗಳನ್ನು ಮಾಡುತ್ತಾ ಹರಾಜು ಅಚ್ಚುಕಟ್ಟಾಗಿ ಯಾವ ತೊಡಕುಗಳಿಲ್ಲದೇ ಸಾಗುವಂತೆ ಮಾಡುವ ಹೊಣೆಗಾರಿಕೆ ಹೊತ್ತಿರುತ್ತಾರೆ. ಕಳೆದ ಸಲ ಬಾಲಾಪುರ್ ನಲ್ಲಿ ನಡೆದ ಹರಾಜಿನಲ್ಲಿ ೩೪ ಜನ ಭಾಗವಹಿಸಿದ್ದರು. ಅವರೆಲ್ಲ ಮುಂಚಿತವಾಗಿ ಡಿಪಾಜಿಟ್ ಮಾಡಿ ತಮ್ಮ ಹೆಸರನ್ನು ನಮೂದು ಮಾಡಿಕೊಳ್ಳಬೇಕು. ಅವರು ಮಾತ್ರವೇ ಹರಾಜಿನಲ್ಲಿ ಭಾಗವಹಿಸಲು ಬಿಡುತ್ತಾರೆ.

ಹರಾಜಿನಲ್ಲಿ ಲಾಡು ಗೆದ್ದುಕೊಂಡವರನ್ನು ಸಮಿತಿಯವರು ತಾಳ ಮೇಳತಮ್ಮಟೆಗಳೊಂದಿಗೆ ಅವರ ಮನೆಗೆ ಬಿಟ್ಟು ಬರುತ್ತಾರೆ. ಗೆದ್ದುಕೊಂಡವರು ಲಾಡುವನ್ನು ತಮ್ಮ ತಲೆಯ ಮೇಲಿಟ್ಟುಕೊಂಡು ಮನೆಗೆ ತೆರಳಿ, ಅದನ್ನು ಮನೆಯಲ್ಲಿ ದೇವರ ಮುಂದೆ ಇಟ್ಟು ನಮಸ್ಕಾರ ಮಾಡಿ, ಪ್ರಸಾದವಾಗಿಸ್ವೀಕರಿಸಿ ಅಲ್ಲಿದ್ದವರಿಗೆಲ್ಲ ಹಂಚುತ್ತಾರೆ. ಕೆಲವರು ಊರಿಗೆಲ್ಲ ಹಂಚುತ್ತಾರೆ. ಮತ್ತೆ ತಮ್ಮ ಹೊಲಗಳಲ್ಲಿ ಚೆಲ್ಲುವುದರ ಮೂಲಕ ತಮ್ಮ ಆಸೆಯನ್ನುತೀರಿಸಿಕೊಳ್ಳುತ್ತಾರೆ. ಕಳೆದ ಸಲ ಗೆದ್ದುಕೊಂಡವರು ಮಾತನಾಡುತ್ತ “ ಕಳೆದ ವರ್ಷ ಸಹ ನಾನು ಹರಾಜಿನಲ್ಲಿ ಭಾಗವಹಿಸಿದ್ದೆ. ಆದರೆ ನನಗೆ ದಕ್ಕಲಿಲ್ಲ. ಈ ಸಲ ಹರಾಜು ಎಷ್ಟೇ ಎತ್ತರಕ್ಕೆ ಹೋದರೂ ಲಾಡು ಗೆಲ್ಲಬೇಕೆಂದೇ ಬಂದಿದ್ದೆ” ಎಂದಿದ್ದರು. ಇದರಿಂದ ಅವರ ನಂಬಿಕೆಯ ಆಳ ಗೊತ್ತಾಗುತ್ತದೆ ಅಲ್ಲವೇ!

ಹರಾಜಿನಲ್ಲಿ ಲಾಡು ತೊಗೊಂಡವರಿಗೆ ಮುಂದಿನ ವರ್ಷ ಗಣೇಶನನ್ನಕೂರಿಸುವ ಹೊತ್ತಿಗೆ ಹರಾಜಿನ ಮೊತ್ತ ಕೊಡುವ ವ್ಯವಧಾನವಿರುತ್ತದೆ. ಈ ರೀತಿ ಬಂದ ಹರಾಜಿನ ಹಣವನ್ನುಆ ಕಾಲನಿಯವರು ಅಥವಾ ಗಣೇಶಸೇವಾ ಸಮಿತಿಯವರು ಗಣೇಶೋತ್ಸವದ ಖರ್ಚಿಗಾಗಿ ಮತ್ತು ಕೆಲ ಸಮಾಜ ಕಾರ್ಯಗಳಿಗೆ, ಊರಿಗೆ ಬೇಕಾದ ಕೆಲ ಕೆಲಸಗಳಿಗೆ ಉಪಯೋಗಿಸುತ್ತಾರೆ. ಯಾವುದಾದರೂ ದೇವಸ್ಥಾನದ ಅಭಿವೃದ್ಧಿಗೆ ಉಪಯೋಗಿಸಲಾಗುತ್ತದೆ.

ಈ ಪದ್ಧತಿ ನಡೆದು ಬಂದ ದಾರಿ ನೋಡಿದಾಗ ಹೇಗೆ ಒಂದು ಕಾಕತಾಳಿಯ ಅನುಭವ ನಂಬಿಕೆಯಾಗಿ ಮಾರ್ಪಟ್ಟು, ಅದು ಮುಂದುವರೆದು ಪರಂಪರೆಯಾಗಿ ಬೆಳೆಯುವುದು ಕಾಣುತ್ತದೆ. ಈ ಪದ್ಧತಿಯಿಂದ ಸಮಾಜಕ್ಕೆ ಒಳಿತಾಗುತ್ತಿದೆಯೇ ವಿನಃ ಕೆಡಕಾಗುತ್ತಿಲ್ಲ. ಹರಾಜಿನಿಂದ ಬಂದ ಹಣ ಊರಿಗೆ ಅಥವಾ ಕೆಲ ಸಮಾಜ ಮುಖಿ ಕಾರ್ಯಗಳಿಗೆ ಉಪಯೋಗವಾಗುತ್ತಿರುವುದು ಕಂಡು ಬರುತ್ತಿರುವುದರಿಂದ ಇದು ಮುಂದುವರೆಯುವದರಲ್ಲಿ ತಪ್ಪೇನಿಲ್ಲ ಎಂದು ಎನಿಸುತ್ತದೆ.