ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಿಂಧೂರಾ ಹೆಗಡೆ
ಇತ್ತೀಚಿನ ಬರಹಗಳು: ಸಿಂಧೂರಾ ಹೆಗಡೆ (ಎಲ್ಲವನ್ನು ಓದಿ)

ಹೊಸತನದ ಮಡಿಲಲ್ಲಿ ಚಿಗುರೊಡೆದ ಕನಸುಗಳಿಗೆ ನೀರೆರೆದು ನನಸಾಗಿಸುವ ಸುಸಮಯ..ಬಿಸಿಲ ಬೇಗೆ ಸುಡುವಂತಿದ್ದರೆ ಹಾಗೊಮ್ಮೆ ಹೀಗೊಮ್ಮೆ ಮೂಡುವ ಮಳೆ ಹನಿಗಳಿಗೆ, ಧರಿತ್ರಿಯ ಒಡಲು ಸಂತಸದ ಸಾಗರದಲ್ಲಿ ತೇಲುವಂತೆ ಕನಸಲ್ಲೇ ಕಾದು ಕುಳಿತಿದ್ದ ಮನಸ್ಸುಗಳಿಗೆ ಮುದದ ಮುಂಗಾರು..

ಒಡಲಲ್ಲಿ ಕಂದಮ್ಮನ ಮುತ್ತಿನಂತೆ ಹೊತ್ತು,ಚಂದದ ಭವಿಷ್ಯದ ಕನಸುಗಳನ್ನು ನೇಯುವ ಆ ಮನಸ್ಸಿಗೆ ತೀರದ ದಾಹ ಮಗುವಿನ ಆ ಕಂಗಳ ಕಾಣಲು..ಹೇಳ ತೀರದ ಇಚ್ಛೆಗಳನ್ನು ಕಂಡು ಕನವರಿಸಿ ಸಂತಸದ ಮುಗುಳುನಗುವನ್ನು ವದನದಲ್ಲಿ ಹರಿಸುವ ಹೃದಯ, ಜೊತೆಗೊಂದಿಷ್ಟು ರಸನೆಯ ಅನಿಯಮಿತ ಬಯಕೆಗಳು. ಜೊತೆಗಾರನ ಕೈ ಹಿಡಿದು, ಪ್ರೀತಿಯ ಕುರುಹಂತಿರುವ ಆ ಕರುಳ ಬಳ್ಳಿಯ ಆಗಮನಕೆ ತುಡಿಯುವಾಗ, ಆತನ ನಯನದಲಿ ಮಿಂಚಿನ ಸಂಚಾರ; ಆಕೆಗೆ ಸುವರ್ಣ ಸೋನೆಯನ್ನೇ ಎರೆದಂತಾಗುವುದು. ಇದೊಂದು ಸನ್ನಿವೇಶವಾದರೆ ಮತ್ತೊಂದೆಡೆ, ಅರಿಯದ ಕೈಗಳ ಹಿಡಿದು, ಇಳೆಯ ಸ್ವರ್ಗದಲ್ಲಿ ಬದುಕಲೂ ಆಗದೇ, ಯಾರದ್ದೋ ಸುಪರ್ದಿಯಲ್ಲಿ ದಿನವನ್ನು ಕಳೆಯುವ ಅನಾಥ ಭಾವ. ಈಗಲೂ ಅದೇ ಭರವಸೆ, ಅದೇ ಆಶಯ. ಮಾಗಿದ ಕೈಗಳನ್ನು, ಸೊರಗಿದ ಮೊಗವನ್ನು, ತೀರದ ಮನದ ದಾಹವನ್ನು ನೀಗಿಸಲು ತನಯನೆಂಬ ಸೋನೆಯು ದೂರದ ಅಂಬರದಿಂದ ಧರೆಗುರುಳುವುದೇನೋ ಎಂಬಂತೆ. ಹಿಂದೊಮ್ಮೆ ಬಹು ಹಂಬಲದಿಂದ ಕರುಳ ಬಳ್ಳಿ ಅರ್ಕನ ಕಿರಣಗಳಂತೆ ಈ ವಸುಂಧರೆಯಲ್ಲಿ ಜ್ವಲಿಸಲಿ ಎಂದು ಕಾಯ್ದ ಹಾಗೇ, ಇಂದೂ ಸಹ ವೃದ್ಧಾಶ್ರಮದ ಬಾಗಿಲಲ್ಲಿ ನಿಂತು ತನ್ನವರಿಗಾಗಿ ಕಾಯುವ ಜೀವಗಳು..

ದಿನನಿತ್ಯ ಕಾಣುವ ಸಂಗತಿಗಳಿವು. ಗ್ರೀಷ್ಮದಂತೆ ಭರವಸೆ, ದಾಹ ತುಂಬಿದ ಕಂಗಳವು. ಪ್ರಕೃತಿಯ ಆದೇಶಗಳಿಗೆ ಕರ್ಣಾನುಕರ್ಣಿಕೆಯಾಗುವುದು ನಮ್ಮ ಕರ್ತವ್ಯ. ಆದರೆ, ಮನದ ಬಾಯಾರಿಕೆಗಳನ್ನು ನೀಗಿಸಲು ನಮ್ಮ ಸನಿಹ ಒಂದೆರಡು ಕಾರಣಗಳಿರಬಹುದು. ಯಾರ ಕನಸು ಅಸು ನೀಗುವುದು, ಯಾರ ತೃಷೆ ಪ್ರೀತಿಯ ತೊರೆಯಿಂದ ಭರ್ತಿಯಾಗುವುದೋ ಆ ದಿನಕರನಿಗೂ ಸಹ ತಿಳಿಯದು.

ಇವೆರಡು ಧ್ರುವದ ಆಸೆಗಳು ಹೇಳ ಹೆಸರಿಲ್ಲದೇ ಕ್ಷಣ ಮಾತ್ರದಲ್ಲಿ ಸರಿದೂಗಬಹುದು. ಆದರೆ, ಕೊಳದುಂಬಿದ ಕಂಗಳಿಂದ ದೇವನಲ್ಲಿ ಬೇಡುವ ಆ ಸತ್ವಹೀನ ಮುಖದ ದಾಹವನ್ನು ಹೇಗೆ ತಾನೇ ನೀಗಿಸುವನು ಆ ಭಗವಂತ. ಎದೆಯೆತ್ತರಕ್ಕೆ ಬೆಳೆದ ಮಕ್ಕಳು, ಕಣ್ಣೆದುರಿಗೆ ಪ್ರಾಣಪಕ್ಷಿಯನ್ನು ತೊರೆದು ಧಾವಂತದಲ್ಲಿ ಪರಲೋಕವನ್ನು ಸೇರಿದಾಗ, ಪುತ್ರಶೋಕಂ ನಿರಂತರಂ ಎಂಬುದೊಂದೇ ಆ ಕಂಬನಿಯ ದೂರು.

ಇವೆಲ್ಲದರ ನಡುವೆಯೂ, ಮುಂಗಾರಿನ ತಿಳಿ ತಂಗಾಳಿಗಾಗಿಯೋ, ಹಸಿರಿನ ಮಡಿಲು ತುಂಬುವ ಅಂಬರದ ಸಂಗೀತಕ್ಕಾಗಿಯೋ, ಪ್ರತಿ ಜೀವ ಜೀವನವನ್ನು ಸವೆಸುವುದು ಅದೇ ಆಸ್ಥೆ ತುಂಬಿದ​ ಆಸೆ ಕಂಗಳಿಂದ, ಅನವರತ ಕಾಯುವಿಕೆಯಿಂದ, ಗ್ರೀಷ್ಮದ ಭರವಸೆಯಿಂದ…