- ತಿರುಮಲೇಶರ ನೂರಂಕಣದ ಮನೆ - ಸೆಪ್ಟೆಂಬರ್ 11, 2020
ಕೆ.ವಿ.ತಿರುಮಲೇಶರ ಅಂಕಣ ಬರಹಗಳು ಕನ್ನಡದ ಸ್ಪಂದನಗಳನ್ನು ದೇಶಭಾಷೆಗಳ ಆಚೆಗೆ ಚಾಚಿದ ಪಿ.ಲಂಕೇಶ್, ಯು.ಆರ್.ಅನಂತಮೂರ್ತಿ, ಎಸ್.ದಿವಾಕರ್, ವೈಎನ್ಕೆ ಮುಂತಾದವರ ಮಾದರಿಯವು. ಲಂಕೇಶರು ಹೊಸಬಗೆಯ ಸಂವೇದನೆಯ ಜೊತೆಗೆ ವೈವಿಧ್ಯಮಯವಾದ ಅಭಿರುಚಿಯ ಬರಹಗಾರರನ್ನು ಎಡೆಬಿಡದೆ ಓದುತ್ತ ಅದರಿಂದ ತಾವು ಪಡೆದ ಕೆನೆಯನ್ನು ವಿಶಿಷ್ಟವಾದ ಧಾಟಿಯಲ್ಲಿ ಓದುಗನಿಗೆ ಮುಟ್ಟಿಸುತ್ತಿದ್ದರು. ವೈಎನ್ಕೆ ತಮ್ಮ ಅಂಕಣಗಳಲ್ಲಿ ಸತತವಾಗಿ ಇಂಗ್ಲಿಷ್ ಮತ್ತಿತರ ಭಾಷೆಗಳ ಬೇರೆ ಬೇರೆ ದೊಡ್ಡ ಲೇಖಕರನ್ನು ಕನ್ನಡಕ್ಕೆ ಪರಿಚಯಿಸಿದರು.
ಎಸ್.ದಿವಾಕರ್ ಅವರಂತೂ ಈ ಕೆಲಸವನ್ನು ಹಲವು ದಶಕಗಳಿಂದ ಮಾಡುತ್ತ ಬಂದಿದ್ದಾರೆ. ಅವರ ಆಸಕ್ತಿ ಹೆಚ್ಚಾಗಿ ಸೃಜನಶೀಲ ಕೃತಿಗಳ ಕಡೆಗೆ. ಅನಂತಮೂರ್ತಿಯವರು ಕೆಲವು ಪ್ರಮುಖ ಕ್ಲಾಸಿಕ್ ಬರಹಗಾರರ ಕತೆ ಕವಿತೆಗಳ ಜೊತೆಗೆ ವೈಚಾರಿಕ, ವಿಮರ್ಶಾ ಸ್ಪಂದನಗಳನ್ನೂ ಕನ್ನಡದಲ್ಲಿ ಮಿಡಿಯುವಂತೆ ಮಾಡಿದರು. ತಿರುಮಲೇಶರು ಇವರ ಸಾಲಿನಲ್ಲಿ ನಿಲ್ಲುವ ಲೇಖಕ. ಇವರ ಬರಹದ ತೋಟ ಕನ್ನಡವೇ ಆದರೂ ಅಲ್ಲಿ ಯುರೋಪ್, ಅಮೆರಿಕ, ಆಫ್ರಿಕಗಳ ಗಿಡಗಳು ಹೂ ಬಿಡುತ್ತಿರುತ್ತವೆ.
ತಮ್ಮ ಅಂಕಣ ಬರಹಗಳ ಸಂಗ್ರಹ ‘ಆಳ ನಿರಾಳ’ಕ್ಕೆ ಬರೆದ ಮುನ್ನುಡಿಯಲ್ಲಿ ಅವರು ಹೀಗೆ ಹೇಳುತ್ತಾರೆ- “ಈ ಅಂಕಣ ಬರಹಗಳನ್ನು ಶುರು ಮಾಡುತ್ತ ನನಗೆ ಅಂಕಣ ಸಾಹಿತ್ಯ ಎಂಬ ಪ್ರಕಾರದಲ್ಲಿ ಬದಲಾವಣೆ ತರುವ ಉದ್ದೇಶವಿತ್ತು. ಪತ್ರಿಕೆಗಳಲ್ಲಿನ ಹೆಚ್ಚಿನ ಅಂಕಣ ಬರಹಗಳು ರಾಜಕೀಯ ಪ್ರೇರಿತವೋ ದೈನಂದಿನ ತಾತ್ಕಾಲೀನತೆಗೆ ಸಂಬಂಧಿಸಿದವೋ ಆಗಿರುತ್ತವೆ. ಆದರೆ ವಿಜ್ಞಾನ, ತತ್ವಜ್ಞಾನ, ಇತಿಹಾಸ, ಸಾಹಿತ್ಯ ವಿಮರ್ಶೆ ಮುಂತಾದ ವಿವಿಧ ಸಂಗತಿಗಳನ್ನು ಸಾಧಾರಣ ಓದುಗರೂ ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳಬೇಕು ಎನ್ನುವುದು ನನ್ನ ಆಶಯವಾಗಿತ್ತು. ಪತ್ರಿಕೆ ಮತ್ತು ಓದುಗರು ಪ್ರಾದೇಶಿಕವಾಗಿದ್ದರೂ ಇಂದಿನ ಮನುಷ್ಯನ ಅರಿವು ಅಂತಾರಾಷ್ಟ್ರೀಯ ವ್ಯಾಪ್ತಿಯದೂ ಆಗಿರಬೇಕಾಗುತ್ತದೆ. ಪತ್ರಿಕೆಯ ಅಂಕಣದ ಮೂಲಕ ಇದು ಸಾಧ್ಯವೇ ಎಂದು ಪ್ರಯತ್ನಿಸಿದೆ. ಅರ್ಥಾತ್ ಅಂಕಣಗಳ ಸ್ವಭಾವವನ್ನೇ ಬದಲಿಸಲು ನೋಡಿದೆ.” ಎನ್ನುತ್ತಾರೆ. ತಿರುಮಲೇಶರ ಧ್ವನಿಯಲ್ಲಿ ಕನ್ನಡಕ್ಕೆ ತಾನು ಹೊಸದಾದುದನ್ನು ಕೊಡಬೇಕು ಎಂಬ ಹೊಣೆಗಾರಿಕೆಯ ಪ್ರಜ್ಞೆಯೊಂದು ಕೆಲಸ ಮಾಡುತ್ತಿದೆ. ಅದನ್ನವರು ಮಾಡಿದ್ದಾರೆ ಎಂಬುದನ್ನು ಅವರ ಅಂಕಣಗಳನ್ನು ಓದಿದರೆ ಗೊತ್ತಾಗುತ್ತದೆ.
ನನಗೆ ತಿಳಿದಂತೆ, ಪತ್ರಿಕೆಗಳಲ್ಲಿ ತಿರುಮಲೇಶ್ ಬರೆದುದು ಒಂದು ಅಂಕಣ ಮಾತ್ರ- ವಿಜಯ ಕರ್ನಾಟಕದಲ್ಲಿ ಪ್ರಕಟವಾಗುತ್ತಿದ್ದ “ಆಳ- ನಿರಾಳ’. ಮುಂದೆ ಇದರ ನಾಲ್ಕು ಸಂಪುಟಗಳು ಅಭಿನವ ಪ್ರಕಾಶನದಿಂದ ಪ್ರಕಟವಾದವು. ನಂತರ “ಕೆಂಡಸಂಪಿಗೆ’ ಜಾಲತಾಣದಲ್ಲಿ ಇವರ ಅಂಕಣಗಳು ಪ್ರಕಟವಾಗತೊಡಗಿದವು. ಪತ್ರಿಕೆಗಳ ಪದಗಳ ಮಿತಿ ಇಲ್ಲವಾದ್ದರಿಂದ ಜಾಲತಾಣದಲ್ಲಿ ಪ್ರಕಟವಾಗುತ್ತಿರುವ ಇವರ ಲೇಖನಗಳು ಹೆಚ್ಚು ಸುದೀರ್ಘ, ಸಾಕಷ್ಟು ವ್ಯಾಪ್ತಿವಿಸ್ತಾರ ಹೊಂದಿವೆ. ಪತ್ರಿಕಾ ಬರಹಗಳು ಇವರ ಚಿಂತನೆಯ ಒಂದು ಝಲಕ್‌ನ್ನು ಕಾಣಿಸಿದರೆ, ಜಾಲತಾಣಗಳ ಬರಹಗಳು ಬಹಳ ಕಾಲದ ಧ್ಯಾನದ ಫಲಗಳಂತೆ ಕಾಣಿಸುತ್ತವೆ.
ಸ್ವಭಾವತಃ ತಿರುಮಲೇಶ್ ಒಂದೇ ವಿಚಾರದಲ್ಲಿ ಅಥವಾ ಒಂದೇ ತಾತ್ವಿಕತೆಯಲ್ಲಿ ವಿರಮಿಸುವ ಸ್ವಭಾವದವರಲ್ಲ. ಅವರದು ಒಂದು ಬಗೆಯ ಜಂಗಮ ಪ್ರವೃತ್ತಿ. ಒಂದು ವಸ್ತುವನ್ನು ನೋಡುವ, ನೋಡಬೇಕಾದ ಹಲವು ಕ್ರಮಗಳನ್ನು ವಿವರಿಸುತ್ತ ಹೋಗುವುದು ಅವರ ಶೈಲಿ. ಉದಾಹರಣೆಗೆ, “ಅಜ್ಞಾನ, ವಿಜ್ಞಾನ ಮತ್ತು ತತ್ವಜ್ಞಾನ’ ಎಂಬ ಅವರ ಬರಹದಿಂದ ಆಯ್ದ ಒಂದು ಭಾಗವನ್ನು ನೋಡಿ- “ವಿಜ್ಞಾನ ಯಾವುದನ್ನೂ ಇದಮಿತ್ಥಂ ಎಂದು ಸ್ವೀಕರಿಸುವುದಿಲ್ಲ. ಪಂಡಿತವಾಣಿಗೂ ಅದರಲ್ಲಿ ಸ್ಥಾನವಿಲ್ಲ. ವಿಜ್ಞಾನ ಯಾವತ್ತೂ ಪರಿಪೂರ್ಣವಾಗಿ ಇರುವುದಿಲ್ಲ. ಬದಲಾಗುತ್ತ ಬೆಳೆಯುತ್ತ ಇರುತ್ತದೆ. ವಿಜ್ಞಾನ ಬದಲಾಗುತ್ತದೆ ಎನ್ನುವುದರಲ್ಲಿ ನಿಜಕ್ಕೂ ಅರ್ಥವಿಲ್ಲ. ನಮ್ಮ ಅರಿವು ಬದಲಾಗುತ್ತ, ಬೆಳೆಯುತ್ತ ಇರುತ್ತದೆ ಎನ್ನಬೇಕಾಗುತ್ತದೆ. ಯಾಕೆಂದರೆ ವಿಜ್ಞಾನದ ರೀತಿ ಯಾವಾಗಲೂ ಒಂದೇ ಇರುತ್ತದೆ. ವ್ಯತ್ಯಾಸವೆಂದರೆ ವಿಜ್ಞಾನ ಅನುಭವಮೂಲದ ಆಧಾರ ಬಯಸುತ್ತದೆ. ತತ್ವಜ್ಞಾನ ಕೇವಲ ತಾರ್ಕಿಕತೆಯ ಮೇಲೆ ನಿಂತಿದೆ. ಯಾವುದೇ ವಿಷಯವನ್ನು ಕೂಲಂಕಷವಾಗಿ ಚರ್ಚಿಸುವುದೇ ತತ್ವಜ್ಞಾನವಾದ್ದರಿಂದ ವಿಜ್ಞಾನ ಕೂಡಾ ತತ್ವಜ್ಞಾನಕ್ಕೆ ವಿಷಯವಾಗುತ್ತದೆ.”
ಹಾಗೆಯೇ ಒಂದು ಕೃತಿಯನ್ನು ನೋಡಬೇಕಾದಾಗ, ಓದಬೇಕಾದಾಗ, ಒಂದೇ ಬಗೆಯ ಓದಿಗೆ ಕಟ್ಟು ಬೀಳುವವರೂ ಅಲ್ಲ. ಅವರು ತಾವು ತಾವೇ ಓದುತ್ತ, ಇನ್ನೊಬ್ಬ ಓದುಗ ಈ ಕೃತಿಯನ್ನು ಹೇಗೆ ಓದಬಲ್ಲ ಎಂದೂ ಭಾವಿಸಬಲ್ಲರು. ಓದುಗನ ಮೇಲೆ ಏನನ್ನೂ ಹೇರಲು ಹೋಗದ ಬರಹಗಾರ ಅವರು. “ಯಾವುದು ಒಳ್ಳೆಯ ಸಾಹಿತ್ಯ, ಯಾವುದು ಸಾಮಾನ್ಯದ್ದು ಎನ್ನುವ ಅಳತೆಗೋಲು ಇಲ್ಲ, ನಿಜ. ಹೆಚ್ಚಿನ ಮಟ್ಟಿಗೆ ಅದು ನಮ್ಮ ನಮ್ಮ ಅನುಭವಕ್ಕೆ ಬರಬೇಕಾದ ಸಂಗತಿ. ಕೆಲವು ಓದುಗರು ಓದುತ್ತ ಬೆಳೆಯುತ್ತಾರೆ.” ಎನ್ನುವ ಈ ಮಾತನ್ನು ನೋಡಿ.
ತಿರುಮಲೇಶ್ ಸಾಹಿತ್ಯವೆಂದರೆ ಸಾಹಿತ್ಯ ಮಾತ್ರ ಎನ್ನುವ ಜಾತಿಗೆ ಸೇರಿದವರಲ್ಲ. ಅವರ ಸಾಹಿತ್ಯದಲ್ಲಿ ಅಂಕಿಅಂಶಗಳಿಂದ ಭಾಷಾಶಾಸ್ತ್ರದವರೆಗೆ, ವ್ಯಾಕರಣದಿಂದ ಚಿತ್ರಕಲೆಯವರೆಗೆ, ಗ್ರೀಕ್ ಮಿಥ್‌ಗಳಿಂದ ಭಾರತೀಯ ಪುರಾಣಗಳವರೆಗೆ, ಕಾಸರಗೋಡಿನ ಕಾರಡ್ಕದ ಬಯಲಿನಿಂದ ಅರಬ್ ದೇಶಗಳ ಮರಳುಗಾಡಿನವರೆಗೆ ಅಸಂಖ್ಯ ವಸ್ತುವಿಷಯಗಳೂ ವ್ಯಕ್ತಿಗಳೂ ಇರುತ್ತವೆ. ಉದಾಹರಣೆಗೆ, “ಬಿದಿರು, ಮಿಡಿತೆ ಮತ್ತು ಆಡಮ್ ಸ್ಮಿತ್‌ನ ಅರ್ಥಶಾಸ್ತ್ರ’ ಎನ್ನುವುದು ಅವರ ಒಂದು ಅಂಕಣ ಬರಹದ ಶೀರ್ಷಿಕೆ. ಇದನ್ನು ನೋಡಿಯೇ ಬರಹ ಎಲ್ಲಿಂದ ಎಲ್ಲಿಗೆಲ್ಲಾ ಜಿಗಿಯುತ್ತದೆ ಎಂದು ಊಹಿಸಬಹುದು. ಆ ಲೇಖನ ಪ್ರಾಗ್ಜೀವವಿಜ್ಞಾನದ ಲೇಖಕ ಸ್ಟೀಫನ್ ಜೇ ಗೋಲ್ಡ್‌ನಿಂದ ಆರಂಭವಾಗಿ ಡಾರ್ವಿನಿಸಮ್‌ನತ್ತ ಹೊರಳಿ, ಬಿದಿರಿನ ಹೂಬಿಡುವ ಸೋಜಿಗವನ್ನು ಕೆದಕಿ, ಮಿಡಿತೆಗಳ ಋತುಚಕ್ರವನ್ನು ವಿಸ್ತರಿಸಿ, ಸ್ಕಾಟಿಷ್ ಅರ್ಥಶಾಸ್ತ್ರಜ್ಞ ಆಡಮ್ ಸ್ಮಿತ್‌ನ ಜನಸಂಖ್ಯಾ ಥಿಯರಿಯತ್ತ ಹೋಗಿ, ಶತ್ರುಸಂತೃಪ್ತಿ ಎಂಬ ಕುತೂಹಲಕಾರಿ ಜೀವವಿಕಾಸದ ವಿವರದಲ್ಲಿ ಕೊನೆಗೊಳ್ಳುತ್ತದೆ. ಕೊನೆಗೂ ಅವರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿಡುತ್ತಾರೆ- “ವಿಕಾಸವಾದಕ್ಕೆ ನೇರ ಸಾಕ್ಷಿಯಿಲ್ಲ. ಯಾವುದೇ ವೈಚಾರಿಕ ವಾದಕ್ಕೆ ನೇರ ಸಾಕ್ಷಿಗಳನ್ನು ನೀಡುವುದು ಅಸಾಧ್ಯ. ಹಾಗೆ ನೀಡುವಂತಿದ್ದರೆ ಅದೊಂದು ಮಾಹಿತಿ ಮಾತ್ರ ಆಗುತ್ತದೆ. ಒಟ್ಟಿನಲ್ಲಿ ವಿದ್ಯಮಾನಗಳ ವಿವರಣೆ ಸಮಝಸವೋ ಅಲ್ಲವೋ ಎನ್ನುವುದಷ್ಟೇ ಮುಖ್ಯ.”
ಪಾಶ್ಚಾತ್ಯ ಲೇಖಕರ ಸಾಹಿತ್ಯವನ್ನು ಅಪಾರವಾಗಿ ಅಧ್ಯಯನ ಮಾಡಿದ ತಿರುಮಲೇಶರು ಅದನ್ನು ಮಂಡಿಸುವಾಗ ಮಾತ್ರ ಅದನ್ನೊಂದು ಮಾಹಿತಿಯಾಗಿಯೋ, ನಾನಿದನ್ನು ಓದಿದ್ದೇನೆ ನೋಡಿ ಎಂಬ ಶೋಬಾಜಿ ಕ್ರಮದಲ್ಲೋ ಮಂಡಿಸುವುದಿಲ್ಲ. ಆ ಓದುಗಳು ಅವರ ಅನುಭವದಲ್ಲಿ ಹದವಾದ ಪರಿಯೊಂದು ಅವರ ಮಂಡನೆಯ ಕ್ರಮದಲ್ಲಿ ನಮಗೆ ಕಾಣಸಿಗುತ್ತದೆ. ಅದರ ಜೊತೆಗೆ ಎಷ್ಟು ಬೇಕೋ ಅಷ್ಟೇ ಮಾಹಿತಿ, ಉಲ್ಲೇಖ, ವಿಶ್ಲೇಷಣೆ. ಎಲ್ಲೂ ಅವರು ತಾನು ನೋಡಿದ ನೋಟವಾಗಲೀ, ತನ್ನ ಓದಿನ ಕ್ರಮವಾಗಲೀ ನೂರಕ್ಕೆ ನೂರು ನಿಖರ ಎನ್ನಲು ಹೋಗುವುದಿಲ್ಲ. ಹಲವು ನೋಟಗಳನ್ನು ಮಂಡಿಸಿ ಅಂತಿಮ ದೃಷ್ಟಿಯನ್ನು ಓದುಗನಿಗೇ ಬಿಟ್ಟುಬಿಡುವ ಕ್ರಮ ಅವರದು.
ತಿರುಮಲೇಶರ ಬರಹದಲ್ಲಿ ಒಂದು ಬಗೆಯ ಸಂಭ್ರಮವಿರುತ್ತದೆ- ಕನ್ನಡಿಗರಿಗೆ ತಾನು ಹೊಸದೊಂದು ವಿಚಾರವನ್ನು ಪರಿಚಯಿಸುತ್ತಿದ್ದೇನೆ ಎಂಬ, ಸಾಮಾನ್ಯವಾಗಿ ಚಿಕ್ಕ ಮಕ್ಕಳಲ್ಲಿ ಕಾಣುವ ಒಂದು ಬಗೆಯ ಸಂಭ್ರಮ. ಇದು ಅವರ ಬರಹಗಳನ್ನು ಮೊನಚಾಗಿಸುವ ಬದಲು ಹೆಚ್ಚು ವಿಸ್ತಾರವಾಗಿಸುತ್ತದೆ. ಅವರ ಗದ್ಯಕ್ಕೆ ಯಾರನ್ನೂ ನೋಯಿಸುವ ಗುಣವಿಲ್ಲ, ತಾನೇ ನೋಯುವ ಒಂದು ಬಗೆಯ ಜೈನ ಯತಿಯ ಗುಣವಿದೆ. ಕೆಲವೊಮ್ಮೆ ಅವರು ಬೇಸರ ಮಾಡಿಕೊಳ್ಳುವುದು ಇದೆ- ತನ್ನ ಬರಹಗಳನ್ನು ಯಾರು ಓದುತ್ತಾರೆ, ಬಹುಶಃ ಇದು ಯಾರಿಗೂ ಬೇಕಿದ್ದಂತೆ ಕಾಣುತ್ತಿಲ್ಲ ಎಂದೆಲ್ಲ ಅವರು ಅಂಕಣದಲ್ಲಿಯೇ ಹೇಳಿಕೊಂಡದ್ದು ಉಂಟು. ಆದರೆ ಅವರ ಅಂಕಣ ಬರಹಗಳನ್ನೇ ಓದುವ ಒಂದು ವರ್ಗ ಇದೆ. ನಾಡಿನಿಂದ ದೂರವಿರುವುದರಿಂದ ಇದು ಅವರ ಅರಿವಿಗೆ ಬಂದಿರಲಾರದು.
ತಿರುಮಲೇಶರ ಕಾವ್ಯ, ಕತೆಗಳಂತೆ ಅವರ ಅಂಕಣಗಳೂ ನಮ್ಮನ್ನು ಒಂದು ವಿಚಿತ್ರ ರೀತಿಯಲ್ಲಿ ಮುಕ್ತಗೊಳಿಸುತ್ತವೆ. ಅದು ಎಂಥ ಮುಕ್ತತೆ ಎಂದರೆ, ನಾವು ಯಾವ್ಯಾವ ರೀತಿಯಲ್ಲೆಲ್ಲಾ ಚಿಂತನೆ ಮಾಡಲು ಸಾಧ್ಯವಿದೆಯಲ್ಲ ಎಂದು ಸೋಜಿಗ ಅಚ್ಚರಿ ಬೆರಗುಗಳಿಂದ ಕೂಡಿದ ಮುಕ್ತತೆ. ಉದಾಹರಣೆಗೆ, “ಇಚ್ಛಾಸ್ವಾತಂತ್ರ್ಯ- ಶೋಪೆನ್‌ಹಾವರ್‌ನ ವಿಚಾರಗಳು’ ಎಂಬ ಅವರ ಬರಹದ ಒಂದು ಭಾಗ ಅವರ ವಿಚಾರ ಮಂಡನೆಯ ಕ್ರಮ, ಶೈಲಿ, ಚಿಂತನಕ್ರಮ, ಎಲ್ಲವನ್ನೂ ಅಡಕಗೊಳಿಸಿದಂತೆ ಇದೆ- “ಇಚ್ಛಾಸ್ವಾತಂತ್ರ್ಯವನ್ನು ಇದೆಯೆಂದು ನಿರ್ಣಯಿಸುವುದು ಹೇಗೆ? ಇದೊಂದು ಸಮಸ್ಯೆಯೇ ಸರಿ. ಯಾಕೆಂದರೆ ಯಾವ ನೆಲೆಯೂ ಇದನ್ನು ನಿರ್ಣಯಿಸಲಾರದು. ನೆಲೆ ಇಲ್ಲದಿರುವುದೇ ಇಚ್ಛಾಸ್ವಾತಂತ್ರ್ಯವಾಗಿರುತ್ತ! ಮೂಲಭೂತವಾಗಿ ಮತ್ತು ಸ್ವಯಂಪೂರ್ಣವಾಗಿ ನಾವದನ್ನು ನಿರ್ಣಯಿಸಬೇಕಾಗಿರುತ್ತದೆ. ಇದು ದೇವರನ್ನು ನಿರ್ಣಯಿಸಿದಂತೆ. ದೇವರು ಇದೂ ಅಲ್ಲ, ಅದೂ ಅಲ್ಲ ಎಂದಾದರೆ ನಿರ್ಣಯಕ್ಕೆ ಮೀರಿರುತ್ತಾನೆ. ಇದರ ಕುರಿತಾಗಿ ಯೋಚಿಸಿದಂತೆ, ಸ್ಪಷ್ಟ ವಿಚಾರವೇ ನಮ್ಮನ್ನು ತ್ಯಜಿಸುತ್ತದೆ. ಯಾಕೆಂದರೆ ಇಚ್ಛಾಸ್ವಾತಂತ್ರ್ಯಕ್ಕೆ ಸಂಬಂಧಿಸಿ ನಾವು ಯಾವುದೇ ನೆಲೆಯನ್ನು ಕಲ್ಪಿಸಲಾರದ ನಿಷೇಧಕ್ಕೆ ಒಳಗಾಗುತ್ತೇವೆ.”
ಹೆಚ್ಚಿನ ಬರಹಗಳಿಗಾಗಿ
ಹಣತೆ – ನಸುಕು ಕವಿಗೋಷ್ಠಿ
ತಿರುಮಲೇಶ್ ಮೇಷ್ಟ್ರಿಗೆ
ತಿರುಮಲೇಶ್- ೮೦:ವಿಶೇಷ ಸಂಚಿಕೆ