- ತೊಟ್ಟಿಕಲ್ಲು – ಕಿರು ಜಲಪಾತವೆಂಬ ಹಿರಿಯಬದುಕಿನ ರೂಪಕ - ಫೆಬ್ರುವರಿ 26, 2023
ಪ್ರವಾಸ ಕಥನ ಅಂದರೆ ಅದು ಕೇವಲ ರಸ್ತೆಗಳಿಗೆ, ದುಡ್ಡಿನ ಲೆಕ್ಕಾಚಾರಕ್ಕೆ ಸೀಮಿತವಾದ ಸಂಗತಿಯಲ್ಲ. ಅದು ನಮ್ಮ ಪ್ರಕೃತಿ, ಬದುಕು, ಜನ, ಸಂಸ್ಕೃತಿಯ ಕತೆ. ಅದು ನೆಲದ ಕತೆ. ಅಂಥ ಹಲವು ಅನುಭವಗಳನ್ನು ದಾಟಿಸಬಲ್ಲ ಅಂಕಣ ಮಾಲಿಕೆ ‘ಟೂರ್ ಡೈರೀಸ್’ನ ಮೊದಲ ಸಂಚಿಕೆ ನಿಮ್ಮ ಮುಂದೆ…
ಈ ಲೇಖನ ಬರೆಯುವಾಗ – ‘ಚೇಸಿಂಗ್ ವಾಟರ್ ಫಾಲ್ಸ್’ ಎಂಬ ಹಾಲಿವುಡ್ ಚಿತ್ರ ಬಹುವಾಗಿ ಕಾಡಿತು. ಈ ಚಿತ್ರದ ನಾಯಕಿ ಖ್ಯಾತ ಪತ್ರಿಕೆಯೊಂದರ ಯುವ ಫೋಟೋಗ್ರಾಫರ್. ಫೋಟೊಗ್ರಾಫಿ ಅವಳ ಪ್ಯಾಷನ್ ಕೂಡ. ಹೇಗಾದರೂ ಮಾಡಿ ತಾನೊಬ್ಬ ಪ್ರಸಿದ್ದ ಫೋಟೋಗ್ರಾಫರ್ ಆಗುವ ಕನಸು ಕಾಣುತ್ತಿರುತ್ತಾಳೆ.ಇವಳ ಅದೃಷ್ಟವೆಂಬಂತೆ ಈ ಪತ್ರಿಕೆಯ ಹಿರಿಯ ಫೋಟೋಗ್ರಾಫರ ಅನಾರೋಗ್ಯ ಪೀಡಿತನಾದಾಗ ಈ ಪತ್ರಿಕೆಯ ಜವಾಬ್ದಾರಿ ಅನಾಯಾಸವಾಗಿ ಇವಳ ಹೆಗಲೇರುತ್ತದೆ.
ಈ ಹೊಸ ಸವಾಲಿನ ಭಾಗವಾಗಿ ಜಗತ್ತಿಗೆ ಅನಾಮಿಕವಾಗಿ ಉಳಿದ ಕೇವಲ ಪುರಾಣಗಳಲ್ಲಿ, ಕಟ್ಟು ಕತೆಯಲ್ಲಿ ಮಾತ್ರ ಅಸ್ತಿತ್ವದಲ್ಲಿರುವಂತಹ ಜಲಪಾತದ ಚಿತ್ರಗಳ ಬೇಟೆಗೆ ಹೊರಡಲು ಅನುವಾಗುತ್ತಾಳೆ. ದಟ್ಟ ಕಾಡಿನೊಳಗೆ ಇವಳ ಗೈಡಾಗಿ ಬಂದ ಚಿತ್ರದ ನಾಯಕನೊಂದಿಗೆ ಇವಳ ಪ್ರೇಮ ಚಿಗುರಿ ಕಥೆ ಅನೇಕ ತಿರುವು ಪಡೆಯುತ್ತದೆ. ಇವಳು ಹುಡುಕುವ ಅಪರೂಪದ ಜಲಪಾತಗಳನ್ನು ಅನ್ವೇಷಿಸಿದರೂ ಅವುಗಳ ಚಿತ್ರ ತೆಗೆಯದೇ ಅದರ ಸೌಂದರ್ಯ ಜನರ ಕಣ್ಣಿಗೆ ಬೀಳದೆ ಅನಾಮಿಕವಾಗಿಯೇ ಉಳಿಯಲಿ ಎಂಬ ಇವರಿಬ್ಬರ ಆಶಯ ಬಹಳ ಇಷ್ಟವಾಯಿತು. ತನಗೆ ಸಿಗುಬಹುದಾಗಿದ್ದ ಅಪಾರ ಜನಮನ್ನಣೆ, ಹೆಸರು, ಸಂಪತ್ತು ವೃತ್ತಿ ಬದುಕಿನ ಉನ್ನತ ಸ್ಥಾನಗಳನ್ನು ನಿರಾಕರಿಸಿ ಈ ಮನುಷ್ಯ ಮುಟ್ಟದ ಜಲಪಾತಗಳ ಪಾವಿತ್ರ್ಯತೆ ಕಾಪಾಡುವ ಕಥಾ ಹಂದರ – ಈ ಆಧುನಿಕ ಜೀವನಶೈಲಿಯ ಬದುಕಿಗೊಂದು ತೋರುಬೆರಳಾಗಿ ಕಾಣಿಸಲಿ ಎಂಬ ಚಿತ್ರದ ಆದರ್ಶವನ್ನು ನೆನಪಿನಲ್ಲಿಟ್ಟುಕೊಂಡೇ ಇದನ್ನು ಬರೆಯುತ್ತಿದ್ದೇನೆ.
ಈ ಲೇಖನ ಬರೆಯುವ ಹೊತ್ತಿಗೆ ಈ ‘ತೊಟ್ಟಿಕಲ್ಲು’ ಜಲಪಾತದ ಬಗ್ಗೆ ಸಾಕಷ್ಟು ಬರಹಗಳು ಬೆಳಕು ಕಂಡಿದ್ದರೂ – ಇದರ ಪ್ರಚಾರ ಇಲ್ಲಿಯ ಸೌಂದರ್ಯಕ್ಕೆ ಮುಳುವಾಗಬಹುದೇನೋ ಎಂಬ ಅಳುಕಿನಲ್ಲೇ ಇದನ್ನು ಬರೆಯುತ್ತಿದ್ದೇನೆ.
ಸುಂದರ ಸಹಜ ತಾಣಗಳ ಮೇಲೆ ಮನುಷ್ಯನ ಹೆಜ್ಜೆ ಗುರುತುಗಳು ಪ್ರಕೃತಿಗೆ ಎಷ್ಟೊಂದು ಮಾರಕವಾಗಬಲ್ಲುದೆಂಬುದನ್ನು ಕೊಡಗಿನ ಬೆಟ್ಟಗಳ ಕಡಿದು ಹೋಂ ಸ್ಟೇಗಳನ್ನಾಗಿ ಮಾಡಿದ ಅಪಾಯ ನಮ್ಮ ಕಣ್ಣೆದುರಿಗಿದೆ. ಇತ್ತೀಚಿಗಷ್ಟೇ ಮುಳ್ಳಯ್ಯನಗಿರಿಯಲ್ಲಿ ಅರಳಿದ ನೀಲಿ ಕುರುಂಜಿ ಹೂವನ್ನು ಅದರ ಬುಡ ಸಮೇತ ಕಿತ್ತು ಕಾರಿನೊಳಗೆ ತುಂಬಿಕೊಂಡ ಮನುಷ್ಯನ ಲಾಲಸೆಗೆ ಏನು ಹೇಳಬೇಕೆಂದು ತೋಚದೆ ಕಂಗಾಲಾಗಿದ್ದೇವೆ. ವಾರಾಂತ್ಯದ ಒಂದು ದಿನ ಕುರುಂಜಿಯ ಬೆಟ್ಟದಲ್ಲಿ ಕಾರುಗಳಿಂದಾದ ಟ್ರಾಫಿಕ್ ಜಾಮ್ ನೋಡಿದರೆ ಪರಿಸ್ಥಿತಿಯ ಅರ್ಥವಾಗಬಹುದು.
*****
‘ಜಲಪಾತ’ ಎನ್ನುವ ಹೆಸರೇ ಚಂದ. ಹಿಂದಿಯಲ್ಲಿ ಝರನಾ ಎನ್ನುತ್ತಾರೆ ಅದೂ ಕೂಡ ಕಿವಿಗೆ ಇಂಪಾಗಿ ಕೇಳಿಸುತ್ತದೆ.ಇಂಗ್ಲಿಷ್ ನಲ್ಲಿ ‘ಫಾಲ್ಸ್ ‘ಎನ್ನುತ್ತಾರೆ ಇದು ಕೇಳಲು ಅಷ್ಟು ಅಪ್ಯಾಯಮಾನವಾಗಿಲ್ಲ. ಹಿಂದಿಯ ಝರನಾ ದಿಂದ ಕನ್ನಡದ ನೀರ ‘ಝರಿ’ಗಳಾದವಾ?
ಕನ್ನಡದಲ್ಲಿ ಇನ್ನೂ ಹಲವು ಹೆಸರಿವೆ – ಧಬ ಧಬೆ, ಜೋರಾಗಿ ಉಚ್ಚರಿಸಿದರೆ ಧಭ ಧಭ ಅಂತ ಬಾನಿನಿಂದ ಭುವಿಗೆ ನೀರು ಬಿದ್ದ ಶಬ್ಧವೇ ಆಗುತ್ತದೆ. ಇದಲ್ಲದೆ ಅಬ್ಬಿ,ಅಬ್ಬೆ,ಹೆಬ್ಬೆ,ದಿಡುಗ,ದಿಡಗ ಮುಂತಾದ ಸ್ಥಳೀಯ ಹೆಸರುಗಳೂ ಇವೆ.
ಜಲಪಾತವೆಂದರೆ ಥಟ್ಟನೇ ನೆನಪಿಗೆ ಬರುವ ಹೆಸರು – ಜೋಗ. ಸಾಯುವುದರೊಳಗೆ ಒಮ್ಮೆಯಾದರೂ ನೋಡಬೇಕೆಂದು ಕವಿ ಮೂಗೂರು ಮಲ್ಲಯ್ಯ ಬರೆಯುತ್ತಾರೆ,ಹಾಗೆಯೇ ದೂಧ ಸಾಗರ, ಗೊಡಚಿನ ಮಲ್ಕಿ, ಗೋಕಾಕ್ ಫಾಲ್ಸು, ಮಾಗೋಡು ಫಾಲ್ಸ್, ಶಿವನ ಸಮುದ್ರ, ಅಬ್ಬೆ, ಗಗನ ಚುಕ್ಕಿ ಪ್ರಮುಖವಾಗಿ ಕೇಳಿ ಬರುವ ಹೆಸರುಗಳು.
ಇಂತಹ ಮಳೆಗಾಲದಲ್ಲಿ ಇಡೀ ಸಹ್ಯಾದ್ರಿಯ ಸೀಮೆಯ ದೊಡ್ಡ ಜಲಪಾತಗಳ ರುದ್ರ ರಮಣೀಯತೆ ನೋಡಲು ಅದೃಷ್ಟವಿರಬೇಕು. ದೊಡ್ಡ ಜಲಪಾತಗಳ ಮಾತು ಹಾಗಿರಲಿ, ಮಳೆಗಾಲದಲಿ ಹುಟ್ಟಿ ಮಳೆಗಾಲಕೆ ಕ್ಷಣಿಕ ಆಯುಷ್ಯ ಮುಗಿಸಿಕೊಳ್ಳುವ ಕಡಿದಾದ ಕಣಿವೆಯ ರಸ್ತೆ ಪಕ್ಕದ ಸಣ್ಣ ಪುಟ್ಟ ಜಲಪಾತಗಳ ಸೌಂದರ್ಯವೇ ಅನನ್ಯ. ಮತ್ತು ಅಂತಹ ಸಣ್ಣ ಪುಟ್ಟ ಝರಿಗಳಿಗೆ ಯಾರೂ ಹೆಸರಿಟ್ಟಿರುವುದಿಲ್ಲ,ಇವೊಂಥರಾ ಬೆಳಿಗ್ಗೆ ಅರಳಿ ಸಂಜೆಗೆ ಬಾಡುವ ಹೂವಿನಂತಹವು.
ಇವುಗಳಿಗೆಲ್ಲಾ ಹೆಸರು, ಕೀರ್ತಿ ಕಿರೀಟದ ಭಾರ ಇರುವುದಿಲ್ಲ. ದೊಡ್ಡ ಧಬ ಧಬೆಯ ದರ್ಪ ಇರುವುದಿಲ್ಲ. ಹೆಸರಿಲ್ಲದೆ ಹುಟ್ಟಿ ಹೆಸರಿಲ್ಲದ ಹಾದಿ ಹಿಡಿದು ನದಿಯ ಸೇರಿ ಕೊನೆಗೆ ಅಸ್ತಿತ್ವದ ಸಣ್ಣ ಕುರುಹನ್ನೂ ಬಿಡದೆ ತಣ್ಣಗೆ ಕಡಲಿನಲ್ಲಿ ಕರಗಿ ಹೋಗುತ್ತವೆ. ನದಿ ಇಂತಹ ಸಣ್ಣ ಝರಿಗಳನ್ನು ತನ್ನ ಕೂಡುಕೊಳ್ಳುವಾಗ ಸೇರಿಸಿಕೊಳ್ಳುವಾಗ ಏನಾದರೂ ಪ್ರಶ್ನೆ ಕೇಳುತ್ತದಾ? ನಿನ್ನ ಪಯಣ, ದಾರಿ, ಆಯಾಸ, ಕಲ್ಲೆದೆಗೆ ಬಡಿಯುವಾಗಿನ ನೋವು, ತವರುಕಾಡು ಬಿಟ್ಟು ಬರಬೇಕಲ್ಲವೆನ್ನುವ ಬೇಸರ…ಎಲ್ಲವೂ ಇರಬಹುದು.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಮಡಿಲಿನಲ್ಲಿರುವ ‘ತೊಟ್ಟಿಕಲ್ಲು’ ಜಲಪಾತ ಇಂತಹ ಒಂದು ಪುಟ್ಟ ಜಲಪಾತ. ಇದನ್ನು ವೀಕ್ಷಿಸಲು ನಾವು ಬೆಳಗಿನ ಜಾವದ ಐದು ಗಂಟೆಗೆ ತಯಾರಾಗಿ ಹೊರಟಿದ್ದೆವು. ಹಿಂದಿನ ದಿನ ಇಡೀ ರಾತ್ರಿ ಬೆಂಗಳೂರಿನ ಆಸುಪಾಸು ‘ಚಿತ್ತಾ’ಮಳೆ ಜನರ ಚಿತ್ತ ಕೆಡಿಸುವಷ್ಟು ಹುಚ್ಚು ಹುಚ್ಚಾಗಿ ಬಲು ಬಿರುಸಾಗಿ ಹೊಡೆದಿತ್ತು. ಬೆಳಗಿನ ಜಾವ ನಾವು ಮನೆಯಿಂದ ಹೊರಡುವಾಗಲೂ ಮೋಡ ಮುಸುಕಿ ಮತ್ತೆ ಮಳೆಯಾಗಬಹುದೆಂಬ ಭಯದಲ್ಲೇ ನಮ್ಮ ಪಯಣ ಸಾಗಿತ್ತು. ತುಸು ದೂರ ಸಾಗಿದ ಮೇಲೆ ಮೋಡ ಮರೆಯಾಚೆಗಿನ ಕತ್ತಲು ಬೆಳಕಿನ ಸೂರ್ಯ ಕಣ್ಣಾಮುಚ್ಚಾಲೆಯಾಡತೊಡಗಿದಾಗ – ಓಹ್ ! ಇಂದು ಸಂಜೆಯವರೆಗೆ ಮಳೆಯಾಗುವುದಿಲ್ಲವೆಂಬ ಭರವಸೆ ಹುಟ್ಟಿತು.
ಸ್ಥಳೀಯರ ಭಾಷೆಯಲ್ಲಿ ‘ಟಿ.ಕೆ.ಫಾಲ್ಸ್’ ಎಂದು ಇತ್ತೀಚೆಗಷ್ಟೇ ಬೆಳಕಿಗೆ ಬಂದ ತೊಟ್ಟಿಕಲ್ಲು ಜಲಪಾತ ಮಳೆಗಾಲದೊಂದಿಗೆ ಹುಟ್ಟಿ ಮಳೆಗಾಲಕ್ಕೇ ಕೊನೆಯಾಗುವ ಪುಟ್ಟ ಜಲಪಾತವಾದರೂ ತಾನಿರುವಷ್ಟು ಹೊತ್ತು ತನ್ನ ರುದ್ರ ರಮಣೀಯತೆಯಿಂದ ಹಾಗೂ ಸಣ್ಣ ಝರಿಗಳ ಲಾಸ್ಯದ ಬೆಡಗನ್ನು ಒಡಲಿನಲ್ಲೇ ಇಟ್ಟುಕೊಂಡು ಕಾಡಿನ ನಡುವೆ ಇದ್ದೀತೋ ಇಲ್ಲವೋ ಅನುಮಾನವೆಂಬಂತೆ ಸಣ್ಣಗೆ ತಣ್ಣಗೆ ಮೊರೆಯುತ್ತಿರುತ್ತದೆ.
ಬನ್ನೇರುಘಟ್ಟ- ಕಗ್ಗಲೀಪುರ ಮುಖ್ಯ ರಸ್ತೆಯಲ್ಲಿ ಸಾಗುವಾಗ ‘ಬಯಲು ಮರದ ದೊಡ್ಡಿ’ಎಂಬ ಪುಟ್ಟ ಹಳ್ಳಿಯಿಂದ ಎಡಕೆ ತಿರುಗಿದರೆ ಕಚ್ಚಾ ರಸ್ತೆ ಸಿಗುತ್ತದೆ. ರಸ್ತೆಯಿಂದ ತುಸು ಮುಂದೆ ಸಾಗಿ ಒಂದು ಸೇತುವೆ ದಾಟಿದ ತಕ್ಷಣ ನಿಮ್ಮ ಕಿವಿ ಚುರುಕಾಗಿದ್ದರೆ ಜಲಪಾತದ ಮೊರೆತ ಕೇಳಿಸುತ್ತದೆ. ಸೇತುವೆ ಕೆಳಗಿನ ಇದೇ ಸಣ್ಣ ತೊರೆಯಂತಹ ನೀರು ಈಗಷ್ಟೇ ಜಲಪಾತದ ಬಂಡೆಗಳಿಗಪ್ಪಳಿಸಿ ಸುಖದ ಮೈ ನೋವನು ಸದ್ದು ಮಾಡದೇ ಹೇಗೆ ಹೇಳುವುದೆಂದು ತಿಳಿಯದೇ ಸದ್ದಿಲ್ಲದೇ ಹರಿಯುತ್ತಿರುತ್ತದೆ. ಈ ಸೇತುವೆ ದಾಟಿ ನೂರು ಮೀಟರಿನಾಚೆಯ ಇನ್ನೊಂದು ಸಣ್ಣ ಹಳ್ಳಿ ದಾಟಿ ಎಡಗಡೆ ತಿರುಗಿದರೆ ಕನಸಿನಂತಹ ಒಂದು ಬೆಟ್ಟ. ಆ ಬೆಟ್ಟ ಸುತ್ತಿಕೊಂಡ ಹಸಿರು – ನಿಮ್ಮ ಉಸಿರಿಗೆ ಶುದ್ಧ ಪ್ರಾಣವಾಯು ನೀಡಿ ಮೈ ಮನಸಿಗೆ ಮುದ ನೀಡಿ ಸ್ವಾಗತಿಸುತ್ತದೆ.
ಇನ್ನು ಇದರ ಮುಂದಿರುವುದು ನಿಮಗೊಂದು ಪುಟ್ಟ ಸವಾಲು. ಸಾಮಾನ್ಯವಾಗಿ ಉಳಿದ ದಿನಗಳಲ್ಲಿ ರಭಸ ಕಡಿಮೆ ಇರುವಾಗ ಸರಾಗವಾಗಿ ದಾಟಲು ಅನುವಾಗುವ ಒಂದು ಸಣ್ಣ ತೊರೆ ಈಗ ಮೈದುಂಬಿ ಹರಿಯುತ್ತಿದೆ. ಇದನ್ನು ದಾಟಲು ಧೈರ್ಯ ನಡುವೆ ನಿಜಕ್ಕೂ ಧೈರ್ಯ ಬೇಕು. ಜಲಪಾತದಿಂದ ಭೋರ್ಗೆರೆದ ಈ ಹರಿವ ಮೊಣಕಾಲುದ್ದದ ನೀರನ್ನು ನೀವು ಬಲು ಎಚ್ಚರಿಕೆಯಿಂದ ದಾಟಬೇಕು. ಸ್ವಲ್ಪವೇ ಎಚ್ಚರ ತಪ್ಪಿದರೆ ಪಕ್ಕದಲ್ಲಿರುವ ಪ್ರಪಾತಕ್ಕೆ ಬೀಳುವ ಅಪಾಯವಿರುತ್ತದೆ. ಈ ಸೇತುವೆಯನ್ನು ಯಶಸ್ವಿಯಾಗಿ ದಾಟಿದರೆ – ಅರ್ಧ ಭಯ ಗೆದ್ದಂತೆಯೇ ಸರಿ. – ಭಯದ ಮುಂದೆ ಜಯವಿದ್ದೇ ಇದೆ.
ಸಾಮಾನ್ಯವಾಗಿ ಕಡಿದಾದ ಬೆಟ್ಟಗಳು ಕೇವಲ ಚಾರಣದ ಮೋಜಿಗಾಗಿ ಅಲ್ಲ. ಅವು ಬದುಕಿನ ಪಾಠವನ್ನೇ ಕಲಿಸುತ್ತಿರುತ್ತವೆ. ಕೆಲವೇ ಕ್ಷಣಗಳ ಹಿಂದೆ ಈ ತೊರೆಯ ಕಂದಕ ದಾಟಲು ಭಯ ಪಡುತ್ತಿದ್ದ ನಡುವಯಸಿನ ವ್ಯಕ್ತಿ ಚಪ್ಪಲಿಗಳನ್ನು ತನ್ನ ನಡುಗುವ ಕೈಯೊಳಗೆ ಹಿಡಿದುಕೊಂಡು ದಾಟಿ ಈ ಬದಿ ಬಂದು ಗೆದ್ದ ಸಂಭ್ರಮವನ್ನು ನೋಡಬೇಕಿತ್ತು ನೀವು!
ಒಂದು ಸೇತುವೆ, ಒಂದು ಕಂದಕ ದಾಟಿದ ನಿಮಗೀಗ ಎತ್ತರದ ಬೆಟ್ಟವೂ ಒಂದು ಸವಾಲೊಡ್ಡುತ್ತದೆ. ಬೆಟ್ಟಕ್ಕೆ ನೇರ ದಾರಿ ಇಲ್ಲ. ಯಾತ್ರಿಗಳು ನಡೆದು ನಡೆದೇ ಇಲ್ಲೊಂದು ಕಾಲು ದಾರಿ ಸೃಷ್ಟಿಯಾಗಿದೆ. ತುಸು ಎತ್ತರದ ಮೆಟ್ಟಿಲುಗಳಿರದ ಕಡೆಗಳಲ್ಲಿ ಮರಕೆ ಸುತ್ತಿದ ಬಳ್ಳಿಗಳ ‘ಬಬೂಲ’ ಮರದ ಬಿಗಿಯಾದ ಬಳ್ಳಿಯ ಆಶ್ರಯ ಹಿಡಿದೇ ಹತ್ತಬೇಕಿರುತ್ತದೆ. ದುರದೃಷ್ಟವೆಂದರೆ ಈ ಬಳ್ಳಿಯ ತುಂಬ ಮುಳ್ಳುಗಳಿರುತ್ತವೆ. ಇಲ್ಲಿನ ಅದೃಷ್ಟವೆಂದರೆ ಯಾತ್ರಿಗಳ ಕೈ ತಾಗಿ, ಸವರಿ ಬಳ್ಳಿಗಳ ಮೇಲಿನ ಮುಳ್ಳುಗಳೂ ಸವೆದಿರುತ್ತವೆ. ಚಿಕ್ಕ ಮಕ್ಕಳು ಕಾಲೇಜಿನ ಯುವಕ/ಯುವತಿಯರು ದುಡಬುಡನೇ ಲಗುಬಗೆಯಿಂದ ಹೂ ಎತ್ತಿ ಇತ್ತಷ್ಟು ಹಗುರವಾಗಿ ಅನಾಯಾಸವಾಗಿ ಹತ್ತಿ ಮೇಲೇರಿದವರನ್ನು ಕಂಡು ವಯಸ್ಸಾದವರು ತಮ್ಮ ಇನ್ನೇನು ಇಳಿ ಹರೆಯದಲ್ಲಿ ತಮ್ಮ ಹೊಸ ಹರೆಯ ನೆನೆ ನೆನೆದುಕೊಂಡೇ ಹೆಜ್ಜೆ ತಪ್ಪದಂತೆ ಜೋಲಿ ಹೋಗದಂತೆ ಎಚ್ಚರದಲ್ಲಿ ನಡೆಯುತ್ತಿರುತ್ತಾರೆ.
ಈ ಬೆಟ್ಟ ಹತ್ತಲು ಸ್ವಲ್ಪ ಶ್ರಮ ಎಚ್ಚರ ಮತ್ತು ಶಕ್ತಿ ಬೇಡುತ್ತದೆ. ಹೀಗಾಗಿ ಆಯಾಸವಾದಾಗಲೆಲ್ಲಾ ಕುಡಿಯಲು ಪಾನೀಯ ತಿಂಡಿ ತೆಗೆದುಕೊಂಡು ಹೋಗುವುದು ಒಳಿತು. ತೊಟ್ಟಿಕಲ್ಲು ಜಲಪಾತದ ಬಳಿ ನಿಮಗೆ ತಿಂಡಿ ಪಾನೀಯದ ಯಾವುದೇ ಅಂಗಡಿಗಳಿರದ ಕಾರಣ ನೀವು ಮನೆಯಿಂದ ಅಥವ ಜಿಗಣಿ ಅಥವಾ ಕಗ್ಗಲಿಪುರ ಹೋಟೇಲುಗಳಿಂದ ತರಬೇಕಿರುತ್ತದೆ. ಈ ಬನ್ನೇರುಘಟ್ಟದ ಸಂರಕ್ಷಿತ ಈ ಕಾಡು ಆನೆಕಾರಿಡಾರಿನ (Elephant Corridor) ದಾರಿಯ ವ್ಯಾಪ್ತಿಯಲ್ಲಿ ಬರುವುದರಿಂದ ಅರಣ್ಯ ಇಲಾಖೆಯವರು ಇಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡಿಲ್ಲ. ಯಾತ್ರಿಕರು ಇದೇ ಎಚ್ಚರಿಕೆಯಲ್ಲಿ ಸದ್ದು ಗದ್ದಲು ಮಾಡದೆ ಪ್ಲಾಸ್ಟಿಕ್ ಬಿಸಾಡದೇ ಆದಷ್ಟು ಪರಿಸರ ಸ್ನೇಹಿ ಕಾಳಜಿಯಿಂದ ವರ್ತಿಸಬೇಕಿರುತ್ತದೆ. ಇಷ್ಟಾಗಿಯೂ ನಮಗೆ ಅಲ್ಲಲ್ಲಿ ಈ ಮನುಷ್ಯ ತಿಂದು ಕುಡಿದು ಎಸೆದ ತ್ಯಾಜ್ಯ ಎದುರಾಗಿ ಬಲು ಬೇಸರವಾಯಿತು. ಪ್ರವಾಸದ ಮೂಡು ಹಾಳಾಗಲು ಇಂತಹ ಒಂದೆರಡು ದೃಶ್ಯಗಳೇ ಸಾಕು. ಒಡೆದ ಸಾರಾಯಿ ಬಾಟಲಿಯ ಚೂರು ಪಾದಕೆ ತಾಗಿಸಿಕೊಂಡ ಯಾತ್ರಿಕನೊಬ್ಬ ಬರಿಗಾಲಿನಲ್ಲಿಯೇ ಇಕ್ಕಟ್ಟಾದ ದಾರಿಯ ಮೇಲೆಲ್ಲಾ ರಕ್ತ ಕಲೆ ಅಂಟಿಸಿ ನಡೆದಿದ್ದ. ಸಣ್ಣ ಮಳೆಗೆ ಚೂಪುಗಲ್ಲಿನ, ಮಣ್ಣು ದಾರಿಯಲಿ ಚಪ್ಪಲಿ ಹಾಕಿ ನಡೆದರೆ ಕಾಲುಗಳಿಗೆ ಬಿಗಿತ ಸಿಗದೆ ಜಾರುತ್ತದೆ. ಸ್ಪೋರ್ಟ್ಸ್ ಶೂಗಳು ಅನುಕೂಲವಾದರೂ ಎಲ್ಲರೂ ಈ ಶೂ ಧರಿಸಿ ಬಂದಿರುವುದಿಲ್ಲವಲ್ಲ!
ಬೆಟ್ಟ, ಹಸಿರು, ತೊರೆ ಎಡಕೆ ಬಿಟ್ಟು ನೀವೀಗ ಜಲಪಾತದ ನೀರಿನ ಮರ್ಮರ ಕಿವಿ ತುಂಬಿ ಮುದ ನೀಡುತ್ತಿರುವಾಗಲೇ ಸಾಗಿ – ಖುದ್ದು ಜಲಪಾತದ ಎದಿರು ನಿಂತರೆ – ನಿಮ್ಮ ಮುಖದಿಂದ ತುಸುವೇ ಅಡಿಯ ದೂರದಲಿ ‘ಸ್ವರ್ಣಮುಖೀ’ ಎಂಬ ನಿನ್ನೆಯ ಮಳೆಗಷ್ಟೇ ಮೈ ಮೈದುಂಬಿಕೊಂಡ ಬಂಗಾರದಂತಹ ಚೆಲುವಿಯ ಜಲಪಾತದ ಸನ್ನಿಧಿಯೊಳಗೆ ನಿಂತು ಅದರ ಭವ್ಯತೆಗೆ ಆ ಚೆಲುವಿಗೆ ಮಾತು ಹೊರಡದೆ ಮೂಕರಾಗಿ ಅದರೆದಿರು ನಿಂತಿರುತ್ತೀರಿ. ನೀರಿನ ರಭಸ ಜಾಸ್ತಿ ಇದ್ದುದರಿಂದ ಇಲ್ಲಿ ಜಲಪಾತದ ಕೆಳಗೆ ಸ್ನಾನ ಮಾಡುವುದು ಸೂಕ್ತವಲ್ಲ. ಆದರೇನು? ನಿಮಗೆ ಜಲಪಾತದಿಂದ ಗಾಳಿಯಲಿ ತೇಲಿ ಬಂದು ಸಿಡಿದ ತುಂತುರು ಹನಿಯೇ ನಿಮ್ಮ ಮೈ ಗೆ ತಾಗಿ ಹೊಸ ಪುಳಕ ಹುಟ್ಟಿಸುತ್ತದೆ. ಹತ್ತಿದ ಬೆಟ್ಟದ ನೋವು ನೀಗಿಸಿ ನಿಮಗೊಂದು ವಿಶೇಷ ದೈವಿಕತೆ ನೀಡಿರುತ್ತದೆ. ಕ್ಷಣದ ಹಿಂದಷ್ಟೇ ಸವಾಲೊಡ್ಡಿದ ಕಡಿದಾದ ಬೆಟ್ಟ ಈಗ ನಿಮ್ಮ ಕಾಲಿನ ಕೆಳಗೆ – ಈ ಸಂಭ್ರಮವನ್ನು ಕ್ಯಾಮೆರಾಗಳಲ್ಲಿ, ಮೊಬೈಲಿನಲಿ ಸರೆ ಹಿಡಿಯಲು ಹೋದರೆ – ಉಹುಂ ! ಕ್ಷಮಿಸಿ. ನಿಮ್ಮ ಕ್ಯಾಮೆರಾಗಳ ಕಣ್ಣುಗಳ ಲೆನ್ಸಿನ ಮೇಲಾಗಲೇ ಮಂಜಿನ ಹನಿ ಆವರಿಸಿ ಚಿತ್ರಗಳು ಮೂಡಿರುವುದಿಲ್ಲ…. ಮೂಡಿದರೂ ಮಂಜಿನಿಂದಾವೃತ ಮುಖ. ತೆರೆದು ನೋಡಿದರೆ ಇದು ನನ್ನ ನಿಜದ ಮುಖವೋ ! ಅಥವಾ ಮುಖವಾಡವೋ ಎಂಬಷ್ಟು ಅನುಮಾನ. ಮಂಜಿನೊಳಗೊಂದು ಮುಖವಿದೆ ತೆರೆಯಲಾರೆ- ಅದನ್ನ ಎನ್ನುವ ಕವಿಯ ಸಾಲಿನಂತೆ. ಹೀಗಾಗಿ ಆದಷ್ಟು ನಿಮ್ಮ ನಿಮ್ಮ ಚಿತ್ತಗಳಲ್ಲಿಯೇ ಈ ಸುವರ್ಣಮುಖಿಯ ಚಿತ್ರ ಕಣ್ಣು ತುಂಬಿಕೊಂಡು ಬರಬೇಕು.
ಈ ಜಲಪಾತದ ಎಡಗಡೆಯಿಂದ ತುಸು ಮೇಲೆ ಹತ್ತಿದರೆ ಇಡೀ ಜಲಪಾತದ ವಿಹಂಗಮ ನೋಟ ನೋಡಲು ಕಾಣ ಸಿಗುತ್ತದೆ. ಈಗಷ್ಟೇ ನಿದ್ದೆ ಮುಗಿಸಿ ಎದ್ದು ಬಂದ ರೇಸಿನ ಕುದುರೆಯಂತೆ ಕೆಂಬಣ್ಣದ ನೀರು ಉರುಟು ಉರುಟಾದ ಬಂಡೆಯ ಮೇಲೆ ಉರುಳುರುಳಿ ಚಿತ್ರ ಚಿತ್ತಾರವ ಕೆತ್ತಿ ಕಲೆ ಮೂಡಿಸಿ ಕಲಾವಿದನೊಬ್ಬ ತನ್ಮಯತೆಯಲ್ಲಿ ಕ್ಯಾನ್ವಾಸಿನ ಮೇಲೆ ಬಿಡಿಸಿದ ಚಿತ್ರದಂತೆ ತೋರುತ್ತದೆ. ಸುಸ್ವರದ ನದಿಯ ದನಿಗೆ ಹಿಮ್ಮೇಳದಂತೆ ಉರುಟುರುಟು ಬಂಡೆಯ ಮೈ ಒಮ್ಮೊಮ್ಮೆ ಚಂಡೆ ಮದ್ದಳೆಯಾಗಿ, ಮೃದಂಗವಾಗಿ, ನರ್ತಕಿಯ ಕಾಲಿನ ಗೆಜ್ಜೆಯ ಸದ್ದಾಗಿ, ಕೊಳಲಾಗಿ, ನದಿಯ ಕೊರಳಾಗಿ ಹಾಡಾಗಿ ಹೊನಲಾಗಿ ನದಿಯ ನೀರು ಯಾರ ಹಂಗಿಲ್ಲದೆ ಹರಿಯುತ್ತಲೇ ಇರುತ್ತದೆ.
ಬೆಟ್ಟದ ತುತ್ತ ತುರೀಯ ಈ ಸ್ಥಳದಿಂದ ಜಲಪಾತ ಮಾತ್ರವಲ್ಲ ಇಡೀ ಬನ್ನೇರುಘಟ್ಟದ ಒಂದು ಪಕ್ಷಿನೋಟವೇ ಸಿಗುತ್ತದೆ. ಮಳೆಗಾಲದಲ್ಲಿ ಬಂಡೆಗಳ ಮೇಲೆ ಹಾವಸೆ ಇರುವುದರಿಂದ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕೆಂಬ ಮಾತುಗಳನ್ನು ಸದಾ ಪುನರೆಚ್ಚರಿಸುತ್ತಲೇ ಇರಬೇಕು.
ಹರೆಯದ ಈ ಸಣ್ಣ ತೊರೆಯ ಹರಿವಿಗೆ ತನ್ನದೇ ಲಯವಿದೆ, ಲಾಸ್ಯವಿದೆ, ಯಾರೂ ಹಾಡದ ಹೊಸ ರಾಗವಿದೆ. ನದಿಯ ನಡುವಿನ ಬಂಡೆಗೆ ಕಿವಿಯಿಟ್ಟರೆ ನದಿಯ ಎದೆಯ ಬಡಿತದ ಲಬ್ ಡಬ್ ನ ಸದ್ದು ಇದೆ. ತನ್ನ ಸಣ್ಣ ಅನಾಮಿಕತೆಯಲ್ಲಿ ಎಲ್ಲೋ ಸೆಲೆಯೊಂದರ ಉದರದಲಿ ಹುಟ್ಟಿದ ಹನಿ – ಮುಂದೆ ಹನಿಗೆ ಹನಿ ಕೂಡಿ ಹಳ್ಳವಾಗಿ ಹರೆಯ ತೊರೆಯಾಗಿ ನದಿಯಾಗಿ ಕಷ್ಟಗಳ ಬಂಡೆಗೆ ಎದೆಯೊಡ್ಡಿದ ಜಲಪಾತವಾಗಿ ಹಾಡಾಗಿ ಒಂದು ದಿನ ಕಡಲು ಸೇರಿ – ಬದುಕಿನ ಸಾರ್ಥಕ ಪಯಣ ಮುಗಿಸುವ ನದಿ ನಮ್ಮ ನಿಮ್ಮ ಬದುಕಿನ ರೂಪಕವಲ್ಲದೇ ಇನ್ನೇನು ? ಅಲ್ಲವೇ !
ಕಾಡು ಬೆಟ್ಟ ಬಿಟ್ಟು ಮನೆಯ ಕಡೆಗೆ ನಡೆದವರ ಕನಸಿನ ತುಂಬ -ಜಲಪಾತ ಕಿವಿಯೊಳಗೆ ಜುಳು ಜುಳು ನಿನಾದದ ತೋಂ..ತನನ. ಎದೆಯೆಂಬುದು ನದಿಯ ನಡೆಯ ನಗಾರಿ. ಸಮಯವಿದ್ದವರು ಹೋಗಿ ಬನ್ನಿ- ಹುಷಾರಾಗಿ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ