- ನಿಗೂಢ ಹಸ್ತಗಳು.. - ಸೆಪ್ಟೆಂಬರ್ 14, 2021
- ಮೃಗಗಳ ನಡುವೆ - ಜುಲೈ 20, 2021
- ಮೌನಸಾಕ್ಷಿ - ಮಾರ್ಚ್ 2, 2021
ಇಬ್ಬರ ನಡುವೆ ತಂದಿಟ್ಟು ತಮಾಷೆ ಮಾಡುವುದೇ ಆಯಿತು.. ಥೂ.. ಏನು ಕರ್ಮವೋ..” ಎಂದುಕೊಂಡು ಜೀಪ್ ಹತ್ತುತ್ತ ಮುಂದೆ ನೋಡಿದ ಹುಸೇನ್.
ನಿಗೂಢ ಹಸ್ತಗಳು.. ಕಥೆಯಿಂದ…(ಪೂರ್ತಿ ಕಥೆ ಕೆಳಗೆ ಓದಿ)
ಭಯಪಟ್ಟಂತೆಯೇ ಮೂರು ಚಕ್ರಗಳ ಆಟೋ ಹಾರನ್ ಇವನ ಎದೆಬಡಿತ ಹೆಚ್ಚಿಸಿತು. ಒಮ್ಮೆಗೇ ಜೀಪಿನಲ್ಲಿ ಕುಳಿತಿರುವವರ ಮುಖ ಹೊಳೆದಂತಾಯಿತು. ಜನರ ಈ ರೀತಿ ವಿಕೃತವಾಗಿ ಸಂತೋಷಪಡುತ್ತಾರೆಂಬುದು ಅವನಿಗೆ ಗೊತ್ತು. ಅವನಿಗೀಗ ಅವರ ನೋಟ ಎದುರಿಸಲಾಗುತ್ತಿಲ್ಲ.
ಹುಸೇನ್ ಗಡಿಬಿಡಿಯಾಗಿದ್ದಾನೆ. ತಾನು ಮಾಡಿದ್ದು ಸರಿಯೇ, ಹಾಗೆ ಮಾಡಬಾರದಿತ್ತೇನೋ ಎಂದುಕೊಳ್ಳುತ್ತಿದ್ದಾನೆ. ಇಲ್ಲದಿದ್ದರೆ ಇನ್ನೇನು ಮಾಡಬೇಕಿತ್ತು ಎಂದೂ ಅನಿಸುತ್ತಿದೆ. ಹಾಗೆ ಅಂದುಕೊಳ್ಳುತ್ತಲೇ ಜೀಪ್ ತಂದು ಮಸೀದಿಯ ಬಳಿ ನಿಲ್ಲಿಸಿದ. ದಿನವೂ ಮನೆಯ ಮುಂದೆ ಕಾಣುವುದೇ ಆದರೂ ಇಂದೇಕೋ ಹೊಸದಾಗಿ ಕಾಣುತ್ತಿದೆ. ಹಾವಿರುವ ಹುತ್ತದಂತೆ ಜೀಪನ್ನು ಮುಟ್ಟುವುದಕ್ಕೂ ಭಯವಾಗುತ್ತಿದೆ. ದಿನಕ್ಕೆ ಇದರ ಬಾಡಿಗೆ ಇನ್ನೂರು!
“ಏನೋ.. ಹುಸೇನ್.. ನೀನು ಬಂದಿದ್ದೀಯ. ನಿಮ್ಮ ಅಪ್ಪ ಇಲ್ಲವೇನೋ!..” ಸರಕು ತರಲು ಎರಡು ಕೈಚೀಲಗಳನ್ನು ಹಿಡಿದು ಗೊಲ್ಲಹಳ್ಳಿಗೆ ಹೊರಟಿದ್ದ ಅಜೀಜ್ ಸೇಟ್ ಜೀಪಿನಲ್ಲಿ ಕುಳಿತುಕೊಳ್ಳುತ್ತ ಕೇಳಿದ.
“ಇನ್ನೆಲ್ಲಿ ಬರುತ್ತಾನೆ. ಜೀಪ್ ಇನ್ನು ಹುಸೇನನದೇ.. ಇವನು ಇನ್ನೆರಡು ವರ್ಷ ಓಡಿಸುತ್ತಾನೆ” ನರಸಿಂಹ ಜೀಪ್ ಹತ್ತುತ್ತ ಹೇಳಿದ.
“ಆಗಲೇ.. ಅಪ್ಪನದೊಂದು ವ್ಯವಹಾರ ಮಗನದೊಂದು ವ್ಯವಹಾರಾನಾ… ಏನಪ್ಪಾ ಮದುವೆ ಆಗಿದ್ದೇ ತಡ ಬೇರೆ ಹೋದೆಯಾ..?” ಗಾಡಿ ಹತ್ತುತ್ತಲೇ ವ್ಯಂಗ್ಯವಾಗಿ ಕೇಳಿದಳು ತಿಮ್ಮಕ್ಕ.
“ಬೇರೆ ಹೋಗೋದಾ.. ಮಣ್ಣಂಗಟ್ಟೀನಾ… ಅದೊಂದು ದೊಡ್ಡ ಕತೆ. ಎರಡು ವರ್ಷದ ವಾಯಿದೆ ಮುಗಿಯಿತು. ಸುಬ್ಬಾರೆಡ್ಡಿಯ ಕತೆ ಗೊತ್ತಲ್ವಾ. ಗಡ್ಡ ಅಂಟಿದೆ ಅಂದ್ರೆ ಬೀಡಿ ಮುಟ್ಟಿಸಿಕೊಳ್ತೀನಿ ಅಂತಾನೆ. ಈಗ ಇನ್ನಷ್ಟು ಬಾಡಿಗೆ ಹೆಚ್ಚಿಸಿದ್ದಾನೆ. ಅಪ್ಪ ಸಾಕು ಅಂತ ಬಿಟ್ಟಿದ್ದನ್ನ ಮಗ ಕೈ ಹಿಡಿದಿದ್ದಾನೆ” ನರಸಿಂಹ ಮುಂದಕ್ಕೆ ಜರುಗುತ್ತ ಹೇಳಿದ.
ಹುಸೇನ್ ಯಾರ ಮಾತನ್ನೂ ಕಿವಿಗೆ ಹಾಕಿಕೊಳ್ಳಲಿಲ್ಲ. ಜೀಪಿಗೆ ಒರಗಿ ನಿಂತು ‘ಗೊಲ್ಲಹಳ್ಳಿ.. ಸಿರಿಸಿಲ್ಲ.. ಗೊಲ್ಲಹಳ್ಳಿ.. ಸಿರಿಸಿಲ್ಲ..’ ಕೂಗುತ್ತಿದ್ದಾನೆ. ಅಭ್ಯಾಸವಿಲ್ಲದ ಕೂಗಾಟ. ಹೊಸದಾಗಿದೆ, ಸ್ವಲ್ಪ ಸಂಕೋಚವೂ ಆಗುತ್ತಿದೆ. ಎಲ್ಲರೂ ತನ್ನನ್ನೇ ನೋಡುತ್ತಿರುವರೆಂದು ಮುಜುಗರವಾಗುತ್ತಿದೆ. ಒಮ್ಮೆ ರೂಢಿಯಾದರೆ ಸಂಕೋಚವಿರುವುದಿಲ್ಲವೆಂದು ಗಟ್ಟಿಯಾಗಿ ನಿರ್ಧರಿಸಿ ಒಂದೇ ಸಮನೆ ಕೂಗತೊಡಗಿದ.
ಇಬ್ಬರು ಕಾಲೇಜು ವಿದ್ಯಾರ್ಥಿಗಳು ಹತ್ತಿ ಕುಳಿತು ಮಾತಿನಲ್ಲಿ ಮುಳುಗಿದರು. ಹುಸೇನ್ ‘ಗೊಲ್ಲಪಲ್ಲಿ.. ಸಿರಿಸಿಲ್ಲ..’ ಎಂದು ಅರಚುತ್ತಲೇ ಇದ್ದಾನೆ.
“ಏಯ್.. ಐದು ಜನ ಹತ್ತಿದ್ದಾರಲ್ಲ.. ಜೀಪ್ ಹೊರಡಲಿ..” ಅಜೀಜ್ ಸೇಟ್ ಗದರುವಂತೆ ಹೇಳಿದ.
“ಏನು ಹೋಗೋದು ಸೇಟೂ.. ಸಿರಿಸಿಲ್ಲ ಪ್ಯಾಸಿಂಜರ್ ಒಬ್ಬನೂ ಇಲ್ಲ.. ಎಲ್ಲ ಮಧ್ಯೆ ಇಳಿಯುವವರೇ. ಡೀಸಲ್ ದುಡ್ಡಾದರೂ ಹೊರಡಬೇಕಲ್ಲ.. ಆಂ.. ಸಿರಿಸಿಲ್ಲ.. ಸಿರಿಸಿಲ್ಲಾ” ಎಂದು ಶುರು ಮಾಡಿದ ಹುಸೇನ್.
“ಆಟೋ ಬಂತು ಅಂತಿಟ್ಟುಕೋ ಈ ಐವರು ಕೂಡಾ ಸಿಗುವುದಿಲ್ಲ. ನಿನ್ನ ಬುದ್ಧೀಗಿಷ್ಟು” ನರಸಿಂಹ ತಗುಲಿಕೊಂಡ. “ಇವರಪ್ಪ ಹೀಗಲ್ಲ. ಇಬ್ಬರು ಹತ್ತಿದರೂ ಹೊಡಕೊಂಡು ಹೋಗುತ್ತಿದ್ದ” ತಿಮ್ಮಕ್ಕ ರಾಗ ತೆಗೆದಳು.
“ಕಾಲೇಜಿಗೆ ಟೈಮಾಯ್ತು. ಬೇಗ ಹೊರಡಲಿ” ವಿದ್ಯಾರ್ಥಿಗಳು ಹೇಳಿದರು. ಎಲ್ಲರೂ ಒಂದೊಂದು ರೀತಿ ಒತ್ತಾಯ ಮಾಡುತ್ತಿದ್ದಾರೆ. ಹುಸೇನ್ ಮನಸಿನಲ್ಲಿ ಚಾರ್ಜ್ ಲೆಕ್ಕಾಚಾರ ಮಾಡಿ ಇನ್ನು ನಾಲ್ಕು ಜನ ಹತ್ತುವವರೆಗೂ ಕದಲುವ ಮಾತೇ ಇಲ್ಲ ಎಂದು ನಿರ್ಧರಿಸಿದ.
ಈ ಮೊದಲು ಲಾರಿ ಓಡಿಸಿಕೊಂಡಿದ್ದ ಹುಸೇನ್ ಒಮ್ಮೆಯೂ ಅಪ್ಪನ ಜೊತೆ ಈ ಕೆಲಸಕ್ಕೆ ಹೋಗಿರಲಿಲ್ಲ. ಅವನಿಗಿದು ಹೊಸ ಅನುಭವ. ಅಲ್ಲಿ ಈ ತಂಟೆ ತಾಪತ್ರಯವಿರುವುದಿಲ್ಲ, ಕೂಗಾಟವಿರುವುದಿಲ್ಲ. ಇದ್ಯಾವ ತಲೆನೋವಪ್ಪ ಸ್ವಾಮೀ ಎಂದುಕೊಂಡು ಸ್ವಲ್ಪಹೊತ್ತು ಬಾನೆಟ್ ಎತ್ತಿ ಇಂಜಿನ್ ನೋಡಿದಂತೆ ಮಾಡಿದ. ಇನ್ನು ಸ್ವಲ್ಪ ಹೊತ್ತಿಗೆ ನೀರು ಹುಯ್ದ. ಇವೆಲ್ಲ ಮಾಡುತ್ತಲೇ ಯಾರಾದರೂ ಹತ್ತುತ್ತಿರುವರಾ ಎಂದು ಒಂದು ಕಣ್ಣಿಟ್ಟಿದ್ದ. ಯಾರೂ ಹತ್ತುವ ಸುಳಿವಿಲ್ಲ. ಅವನು ಬೇಕಂತಲೇ ಹೀಗೆ ಮಾಡುತ್ತಿದ್ದಾನೆಂದು ಕೂತಿದ್ದವರು ಗಮನಿಸಿದರು.
ಇನ್ನಿಬ್ಬರು ಸೇಟುಗಳು ಸರಕುಗಳ ಪಟ್ಟಿ ಕೊಟ್ಟುಹೋದರು. ಹೋಗುವಾಗ ಗೊಲ್ಲಪಲ್ಲಿ ದೊಡ್ಡ ಅಂಗಡಿಯಲ್ಲಿ ಕೊಟ್ಟರೆ ಬರುವಾಗ ಮೂಟೆಯಲ್ಲಿ ಕಟ್ಟಿ ಜೀಪಿಗೆ ಹಾಕುತ್ತಾರೆ. ಪಟ್ಟಿಯನ್ನು ಜೇಬಿಗಿಟ್ಟುಕೊಂಡು ಸಿರಿಸಿಲ್ಲ.. ಸಿರಿಸಿಲ್ಲಾ..’ ಎಂದ ಹುಸೇನ್.
“ಈಗ ಆಟೋ ಬಂದರೆ ಇವನಿಗೆ ಬುದ್ಧಿ ಬರುತ್ತೆ. ಹೋಗೋವಾಗ ದಾರಿಯಲ್ಲಿ ತುಂಬಾ ಜನ ಹತ್ತುತ್ತಾರೆ ನಡಿ” ತಿಮ್ಮಕ್ಕ ಗದರಿದಳು.
ಆಟೋ ಹೆಸರು ಕೇಳುತ್ತಲೇ ಹುಸೇನನಿಗೆ ಭಯ ಶುರುವಾಯಿತು ಆಟೋಗೆ ನಾಲ್ಕೈದು ಪ್ರಯಾಣಿಕರಾದರೆ ಸಾಕು. ಜೀಪಿಗೆ ಹತ್ತು ಹನ್ನೆರಡು ಮಂದಿಯಾದರೂ ಬೇಕು. ಸ್ವಲ್ಪ ಜನ ಜಮಾಯಿಸುವಷ್ಟು ಹೊತ್ತಿಗೆ ಆಟೋ ಬರುವುದು ಜೀಪು ಖಾಲಿಯಾಗುವುದು.. ಈ ವಿಚಾರ ದಿನವೂ ಅಪ್ಪ ಹೇಳುತ್ತಿದ್ದುದನ್ನು ಕೇಳಿದ್ದ. ಅದಕ್ಕೇ ಅವನಿಗೆ ಗಾಬರಿಯಾಗತೊಡಗಿತು.
“ಇಬ್ಬರ ನಡುವೆ ತಂದಿಟ್ಟು ತಮಾಷೆ ಮಾಡುವುದೇ ಆಯಿತು.. ಥೂ.. ಏನು ಕರ್ಮವೋ..” ಎಂದುಕೊಂಡು ಜೀಪ್ ಹತ್ತುತ್ತ ಮುಂದೆ ನೋಡಿದ ಹುಸೇನ್.
ಭಯಪಟ್ಟಂತೆಯೇ ಮೂರು ಚಕ್ರಗಳ ಆಟೋ ಹಾರನ್ ಇವನ ಎದೆಬಡಿತ ಹೆಚ್ಚಿಸಿತು. ಒಮ್ಮೆಗೇ ಜೀಪಿನಲ್ಲಿ ಕುಳಿತಿರುವವರ ಮುಖ ಹೊಳೆದಂತಾಯಿತು. ಜನರ ಈ ರೀತಿ ವಿಕೃತವಾಗಿ ಸಂತೋಷಪಡುತ್ತಾರೆಂಬುದು ಅವನಿಗೆ ಗೊತ್ತು. ಅವನಿಗೀಗ ಅವರ ನೋಟ ಎದುರಿಸಲಾಗುತ್ತಿಲ್ಲ.
ಅಷ್ಟರಲ್ಲೇ ತಿಮ್ಮಕ್ಕ “ಸರಿಯಾಗಾಯಿತು ನೋಡು ನಿನಗೆ.. ಅತಿಯಾಸೆ ಗತಿಕೇಡು. ಈಗಲೂ ನೀನು ಹೊರಡದಿದ್ದರೆ.. ಆಟೋ ಹತ್ತುತ್ತೇವೆ..” ಅವಳಿನ್ನೂ ಹೇಳುವಷ್ಟರಲ್ಲೇ ಕಾಲೇಜು ಹುಡುಗರು ಎದ್ದರು.
“ಹೋಗೋಣ.. ಕುಳಿತುಕೊಳ್ಳಿ..” ಎನ್ನುತ್ತಾ ಜೀಪ್ ಸ್ಟಾರ್ಟ್ಮಾಡಿ ರಿವರ್ಸ್ನಲ್ಲಿ ಹಿಂದಕ್ಕೆ ತಿರುಗಿಸುತ್ತ, “ಹೀಗಾದರೆ ನಾನು ಬಾಡಿಗೆ ಕಟ್ಟಿದಂತೆಯೇ” ಎಂದ. ಅವನ ಮಾತು ಜೀಪಿನ ಶಬ್ದದೊಡನೆ ಬೆರೆತುಹೋಯಿತು.
ಆತುರಾತುವಾಗಿ ಗೇರು ಬದಲಾಯಿಸುತ್ತಿದ್ದಾಗ ಇಬ್ಬರು ಶಿಕ್ಷಕರು ಕಾಣಿಸಿದರು. ಅವರು ಆಟೋದತ್ತ ಹೋಗುತ್ತಿದ್ದಾರೆ. “ಬನ್ನಿ ಸರ್.. ಪೇಟೆ ಕಡೇನೆ ಅಲ್ಲವಾ ಶಾಲೆ ಮುಂದೆ ಇಳಿಸುತ್ತೇನೆ” ನಮ್ರವಾಗಿ ಕೇಳಿದ ಹುಸೇನ್.
“ನಮ್ಮದು ಕ್ಯಾಟ್ಕಾರ್ಡ್.. ರುಪಾಯಿ ಕಡಿಮೆ ಕೊಡುತ್ತೇವೆ. ಆಗಲ್ಲ ಎಂದರೆ ಇನ್ನು ಅರ್ಧ ಗಂಟೆಗೆ ಬಸ್ ಇದೆ. ಇಳಿಯುವಾಗ ಇಷ್ಟೇನಾಅಷ್ಟೇನಾ ಎನ್ನುತ್ತೀಯೆಂದು ಮೊದಲೇ ಹೇಳುತ್ತಿದ್ದೇನೆ. ಮೊನ್ನೆ ಹಾಗೇ ಕಿರಿಕಿರಿಯಾಯಿತು” ಒಬ್ಬ ಶಿಕ್ಷಕ ಹೇಳಿದ. ಮತ್ತೊಬ್ಬ ಶಿಕ್ಷಕ ಇವನು ಏನು ಹೇಳುವನೋ ಎಂದು ಮುಖ ನೋಡುತ್ತಿದ್ದಾನೆ.
ಇಬ್ಬರನ್ನೂ ಕೊಟ್ಟಷ್ಟು ರೇಟಿಗೆ ಹತ್ತಿಸಿಕೊಂಡು ಜೀಪಿಗಿಂತಲೂ ಮೊದಲು ಹೊರಡಲು ಬಕಪಕ್ಷಿಯಂತೆ ಆಟೋ ಡ್ರೈವರ್ ಕಾಯುತ್ತಿದ್ದುದನ್ನು ಗಮನಿಸಿದ ಹುಸೇನ್ ವಿಧಿಯಿಲ್ಲದೆ ‘ಸರಿ’ ಎಷ್ಟೋ ಕೊಡಿ ಎಂದು ಇಬ್ಬರನ್ನೂ ಹತ್ತಿಸಿಕೊಂಡ. ಜೀಪ್ ಹೊರಟಿತು.
“ಇಗೋ.. ಹುಸೇನ್! ಈಗಲೇ ಹೇಳುತ್ತಿದ್ದೇನೆ. ಅವರು ಕೊಟ್ಟಷ್ಟೇ ನಾವು ಕೊಡುತ್ತೇವೆ. ಒಬ್ಬರಿಗೆ ಜಾಸ್ತಿ, ಒಬ್ಬರಿಗೆ ಕಡಿಮೆ ಅದು ಹೇಗೆ? ನಾವು ಮನುಷ್ಯರಲ್ಲವಾ..? ನಮ್ಮದೂ ಹಣಾನೇ ಅಲ್ಲವಾ..? ಹಾಗೇ ತೆಗೆದುಕೊಳ್ಳಬೇಕು” ಎಂದು ಕಡ್ಡಿ ಮುರಿದಂತೆ ಹೇಳಿದಳು ತಿಮ್ಮಕ್ಕ. ಈ ವಿಷಯ ತಮಗೆ ಸಂಬಂಧಪಟ್ಟಿದ್ದಲ್ಲವೆಂಬಂತೆ ಶಿಕ್ಷಕರಿಬ್ಬರೂ ಮೌನವಾಗಿ ಕುಳಿತರು.
ಹುಸೇನ್ ಮೆದುಳು ಕ್ಯಾಲ್ಕ್ಯುಲೇಟರಿನಂತೆ ಕೆಲಸ ಮಾಡಿತು. ಶಿಕ್ಷಕರು ಹತ್ತುವ ಮೊದಲು ಎಷ್ಟು ಬರುತ್ತಿತ್ತೋ ಅಷ್ಟೇ ಬಂದಿತು. ಎದೆ ಬಿಗಿದಂತಾಯಿತು. ತಾನು ಹಾಕಿದ ಲೆಕ್ಕಾಚಾರ ಬೇರೆ. ಬಂದದ್ದೇ ಬೇರೆ. ದಿನವೂ ಹೀಗೇ ಆಗುವಂತಿದೆ. ಮತ್ತೆ ಕೂಡಿಡುವುದು ಹೇಗೆ!
ಹುಸೇನನಿಗೆ ತಂದೆ ನೆನಪಾಗಿ ಅವನ ನೋವಿನ ಕಾರಣ ಈಗ ಮನದಟ್ಟಾಗುತ್ತಿದೆ.
ಗೇರ್ ಬದಲಾಯಿಸಿ ಜೀಪಿನ ವೇಗ ಹೆಚ್ಚಿಸಿದ ಹುಸೇನ್. ಹೇಗಾದರಾಗಲಿ, ಮುಳ್ಳಿನ ಮೇಲೆ ಬಟ್ಟೆ ಸಿಕ್ಕಿಕೊಂಡಿದೆ ನಿಧಾನವಾಗಿ ಬಿಡಿಸಿಕೊಳ್ಳಬೇಕು ಎಂದುಕೊಂಡ. ಬಟನ್ ಒತ್ತಿದ, ಟೇಪಿನಲ್ಲಿ ಹಾಡು ಶುರುವಾಯಿತು. ಶಿಕ್ಷಕರಿಬ್ಬರೂ ತಾಳ ಹಾಕತೊಡಗಿದರು. ತಾವಿರುವ ಜಾಗ, ಸುತ್ತಮುತ್ತ ಇರುವವರನ್ನು ಮರೆತಂತೆ ವಿಶ್ವಬ್ಯಾಂಕ್ ದೇಶವನ್ನು ದತ್ತು ತೆಗೆದುಕೊಂಡಿದೆಯೆಂದು ಮುಂಬರುವ ದಿನಗಳಲ್ಲಿ ಜನಜೀವನ ಘೋರವಾಗಿರುವುದೆಂದು ವಿಶ್ವ ಬ್ಯಾಂಕಿನ ಸಾಲದ ಕುರಿತು ಅವರು ಮಾತನಾಡಿಕೊಳ್ಳುತ್ತಿದ್ದರು.
ಹುಸೇನ್ ವ್ಯಂಗ್ಯವಾಗಿ ನಕ್ಕು ಎಲ್ಲಿ ಜನರು ಕಂಡರೂ ನಿಧಾನ ಮಾಡಿ ‘ಸಿರಿಸಿಲ್ಲ.. ಸಿರಿಸಿಲ್ಲ..’ ಎನ್ನುತ್ತ ಆಸೆನಿರಾಸೆಯಿಂದ ತೂಗಾಡುತ್ತ ಊರು ದಾಟಿದ. ಯಾರೋ ಕರೆದಂತಾಗಿ ತನಗೇ ಎಂಬಂತೆ ನಿಲ್ಲಿಸಿ ಅವರು ದಾಟಿ ಮುಂದೆ ಹೋದಾಗ ಬೇಸರದಿಂದ ಹೊರಟ.
ತಾನು ಜೀಪನ್ನು ತೆಗೆದುಕೊಳ್ಳಬಾರದಿತ್ತು. ಕಾಗದಗಳು ಸಹಿಗಳಾಗಿ ಕೈ ಮೀರಿದ ಮೇಲೆ ಏನು ಮಾಡುವುದಕ್ಕಾಗುತ್ತದೆ. ನಿಜ ಹೇಳಬೇಕೆಂದರೆ ಧೈರ್ಯ ಮಾಡಿ ತೆಗೆದುಕೊಂಡ. ನಾಲ್ಕು ದಿನ ಜೀಪು ದೂರವಾದುದಕ್ಕೆ ಅಪ್ಪ ಮಂಚಹಿಡಿದ. ಹೀಗಾದರೂ ಹುಷಾರಾಗುತ್ತಾನೆಂದುಕೊಂಡು ಭಾರ ಹೊತ್ತಂತಾಯಿತು. ಆದರೆ ಅಪ್ಪ ಇದನ್ನು ಯಾಕೆ ಹಿಡಿದಿಕೊಂಡು ಬಂದೆ ಎಂದು ಬಾಯಿಗೆ ಬಂದಹಾಗೆ ಬೈದ. ಈಗ ಎಲ್ಲೂ ಇಲ್ಲದ ಹಾಗಾಯಿತು ಜೀವನ. ನೋವಿನಿಂದ ಗೊಣಗಿಕೊಂಡ ಹುಸೇನ್.
ಜಲ್ಲಿ ಎದ್ದಿರುವ ಏರು ತಗ್ಗುಗಳ ರಸ್ತೆ. ಜೀಪ್ ನಿಧಾನವಾಗಿ ಬೋಡಬಂಡೆ ದಾಟಿತು. ಹುಸೇನ್ ಗೇರ್ ಬದಲಾಯಿಸಿದ. ದಾರಿಯುದ್ದಕ್ಕೂ ಜಲ್ಲಿಕಲ್ಲಿನ ರಾಶಿ.
“ವಾರದಲ್ಲಿ ಕೆಲಸ ಮುಗಿಯುತ್ತದೆಯಂತೆ. ಡಾಂಬರು ರಸ್ತೆಯಾದರೆ ಈ ಕಷ್ಟ ಇರುವುದಿಲ್ಲ” ನರಸಿಂಹ ಹೇಳಿದ. “ಕಷ್ಟ ಎಂದಿಗೂ ತಪ್ಪುವುದಿಲ್ಲ. ಅದು ಯಾವುದೋ ರೂಪದಲ್ಲಿ ನಮ್ಮನ್ನು ಹಿಂಬಾಲಿಸುತ್ತಲೇ ಇರುತ್ತದೆ. ಅಲ್ಪ ಸುಖಕ್ಕಾಗಿ ಬೆಟ್ಟದಷ್ಟು ಕಷ್ಟ ಬಂಡವಾಳದಂತೆ ಕೆಲಸ ಮಾಡುತ್ತದೆ” ಹುಸೇನನ ಒಳದನಿ ಹೇಳಿತು.
ತಿಮ್ಮಕ್ಕ “ಈ ಡಾಂಬರು ಯಾಕೆ ಬೇಕಿತ್ತು ಎಂದು ಇವನಿಗೆ ಉರಿಯುತ್ತಿರಬೇಕು. ಈಗ ಎರಡು ರುಪಾಯಿ ತೆಗೆದುಕೊಳ್ಳುವ ಕಡೆ ಮೂರು ರುಪಾಯಿ ತೆಗೆದುಕೊಳ್ಳುತ್ತಿದ್ದಾನೆ. ರಸ್ತೆ ಚೆನ್ನಾಗಾದರೆ ಬೇರೆ ಗಾಡಿಗಳು ರೋಡಿಗಿಳಿದರೆ ಇವನಿಗೆ ಅದು ಕಡಿಮೆ ಆಗತ್ತೆ ಅಂತ” ಎಂದು ವ್ಯಂಗ್ಯವಾಗಿ ಹೇಳಿದಳು.
“ಏ.. ಬಿಡು, ಪಾಪ..ಏನು ಸಂಪಾದಿಸಿಕೊಂಡರು, ಮೈಮೇಲಿದ್ದ ಒಡವೆಗಳನ್ನೂ ಮಾರಿಕೊಂಡರು. ಅವರಿಗೆ ಏರಿ ಮೇಲಿದ್ದ ಅರ್ಧ ಎಕರೆ ಬಿಟ್ಟರೆ ಎಲ್ಲೂ ಏನೂ ಇಲ್ಲ. ಎರಡು ವರ್ಷದ ಹಿಂದೆ ನಾನೇ ಪತ್ರ ಬರೆದಿದ್ದು. ನಿಜ ಹೇಳಬೇಕೆಂದರೆ ತಪ್ಪು ಮಾಡಿದರು, ಆತುರ ಪಡದೆ ಸಾಲ ಸೋಲ ಮಾಡಿ ಬ್ಯಾಂಕ್ ಮಾರ್ಜಿನ್ ಇಟ್ಟಿದ್ದರೆ ಈಗ ಜೀಪು ಉಳಿಯುತ್ತಿತ್ತು. ಈಗ ಎಲ್ಲೋ ಇದ್ದ ಸುಬ್ಬಾರೆಡ್ಡಿಯನ್ನು ತಂದು ಲಕ್ಷಾಧಿಪತಿ ಮಾಡಿದ ಹಾಗಾಯಿತು” ಅಜೀಜ್ ಸೇಟ್ ಹೇಳಿದ.
ಜೀಪ್ ನರ್ರೆಂಗಲ್ಲ ಗಡ್ಡೆ ಹತ್ತುತ್ತಿದೆ. ‘ಐದು ನಿಮಿಷಕ್ಕೆ ಕೋರುಟ್ಲಪೇಟೆ ತಲುಪುತ್ತದೆ. ಸಾಮಾನ್ಯವಾಗಿ ಅಲ್ಲಿ ಹತ್ತು ಜನ ಸಿರಿಸಿಲ್ಲ ಪ್ರಯಾಣಿಕರು ಸಿಗುತ್ತಾರೆ, ಹಾಗೇ ಸಿಕ್ಕರೆ ಚೆನ್ನಾಗಿರುತ್ತದೆ. ಸಿರಿಸಿಲ್ಲ ಸೇರಿದ ತಕ್ಷಣ ಮತ್ತೆ ಇಪ್ಪತ್ತು ಜನ ಸಿಕ್ಕಿದರೆ ಇವತ್ತು ಔಷಧಿ ಖರ್ಚು ಗಿಟ್ಟುತ್ತದೆ. ಇಷ್ಟು ಲಾಭ ಬಂದಿದೆ ಎಂದು ತೋರಿಸಿದರೆ ಅಪ್ಪನಿಗೂ ಸ್ವಲ್ಪ ತೃಪ್ತಿಯಾಗುತ್ತದೆ..’ ಎಂದುಕೊಳ್ಳುತ್ತ ಹಾರನ್ ಶಬ್ದ ಕೇಳಿ ಸೈಡ್ ಮಿರರ್ನಲ್ಲಿ ನೋಡಿದ ಹುಸೇನ್.
ಆಟೋ ಕಂಡು ಥಟ್ಟನೆ ‘ಇವನು ಮುಂದೆ ಹೋದರೆ ಒಬ್ಬ ಪ್ರಯಾಣಿಕನನ್ನೂ ಉಳಿಸುವುದಿಲ್ಲ. ಅವನಿಗಿಂತ ಮೊದಲು ಹೋಗಬೇಕು’ ಎಂದುಕೊಳ್ಳುತ್ತ ಎಸ್ಕಲೇಟರ್ ಒತ್ತಿದ, ಜೀಪ್ ವೇಗ ಪಡೆಯಿತು.
ತಿಮ್ಮಕ್ಕ ಗದರುತ್ತ “ಏಯ್ ಹುಡುಗಾ.. ಸ್ವಲ್ಪ ನಿಧಾನವಾಗಿ ಹೋಗಲಿ.. ಹೊಟ್ಟೆಯಲ್ಲಿರುವ ಕರುಳು ಬಾಯಿಗೆ ಬರುತ್ತಿದೆ, ಅಬ್ಬಾ ಅದೇನು ಎತ್ತಿಹಾಕಾಟ. ಇವರಪ್ಪ ಹೀಗಲ್ಲ ಹೊಟ್ಟೆಯಲ್ಲಿರುವ ನೀರು ಕದಲುತ್ತಿರಲಿಲ್ಲ ಹಾಗೆ ಓಡಿಸುತ್ತಿದ್ದ” ಎಂದಳು.
“ಜೀಪು ನೋಡಿದರೆ ಗೊತ್ತಾಗುವುದಿಲ್ಲವಾ.. ಎರಡು ವರ್ಷ ಓಡಿಸಿದರೂ ಹಾಗೇ ಇದೆ. ಒಂದು ಬಾರಿಯೂ ಗ್ಯಾರೇಜಿಗೆ ಹೋಗಿಲ್ಲವಂತೆ. ದೊಡ್ಡ ದೊಡ್ಡ ರಿಪೇರಿಗಳಾದರೆ ಸುಬ್ಬಾರೆಡ್ಡಿಯದೇ.. ಅದಕ್ಕೇ ಇವರ ಅಪ್ಪ ಒಂದು ಪೈಸೆ ಖರ್ಚಾಗಲಿಲ್ಲ ಎಂದು ಬೀಗಿದ” ಅಜೀಜ್ ಸೇಟ್ ಹೇಳಿದ.
“ಸುಬ್ಬಾರೆಡ್ಡಿಯೊಬ್ಬನೇ ಅಲ್ಲ ಬ್ಯಾಂಕಿನವರು ಕೂಡ ಮೆರೆದರು..” ಎನ್ನುತ್ತ ಶಿಕ್ಷಕರತ್ತ ತಿರುಗಿದ ಹುಸೇನ್ “ವಿಶ್ವಬ್ಯಾಂಕ್ ಯಾರನ್ನು ಏನು ಮಾಡಿತೋ ಆಗಲಿ ಸಾರ್.. ಈ ಗ್ರಾಮೀಣ ಬ್ಯಾಂಕ್ ನಮ್ಮ ಊರನ್ನು ದತ್ತು ತೆಗೆದುಕೊಂಡಿದೆಯೆಂದರೆ ನಮ್ಮಂತಹವರು ಆತಂಕಪಟ್ಟೆವು” ಎಂದು ಹೇಳಿದ.
“ಒಳ್ಳೆಯದು ಮಾಡಿದವರನ್ನು ತಂಪು ಹೊತ್ತಿನಲ್ಲಿ ನೆನೆಸಿಕೊಳ್ಳಬೇಕು. ಈ ಬರ ಪರಿಸ್ಥಿತಿಯಲ್ಲಿ ಬ್ಯಾಂಕ್ ಪುಣ್ಯಕ್ಕೆ ಅಷ್ಟೋ ಇಷ್ಟೋ ತಿನ್ನುತ್ತಿದ್ದೇವೆ. ಬೋರುಗಳಿಗೆ, ಪಂಪುಗಳಿಗೆ ಸಾಲ ನೀಡಿತು. ಬರಗಾಲವೆಂದು ಬಡ್ಡಿ ಮನ್ನಾ ಮಾಡಿತು. ಇನ್ನೇನು ಮಾಡಬೇಕು” ನರಸಿಂಹ ಕೋಪದಿಂದ ಹೇಳಿದ.
“ಅಂಗಡಿ ಇಡುತ್ತೇನೆಂದರೆ ಇಪ್ಪತ್ತು ಸಾವಿರ ಸಾಲ ಕೊಟ್ಟರು. ಕಂತುಗಳಲ್ಲಿ ಕಟ್ಟಿ ತೀರಿಸಿದೆ” ಸತ್ತಯ್ಯ ಸೇಟು ಹೇಳಿದ.
“ನಿನಗೇಕೆ ಸೇಟು ಸಾಲ.. ಒಳ್ಳೆ ಆದಾಯ ಇರುವವನು.. ಬ್ಯಾಂಕ್ ಸಾಲ ತಂದು ಯಾರಿಗೋ ಮೂರು ಪರ್ಸೆಂಟ್ಗೆ ಕೊಟ್ಟಿದ್ದೀಯ, ಹಾಗೂ ನಿನಗೆ ಲಾಭವೇ” ಎಂದು ಹೇಳಿ ಹಾಗೆಯೇ ಮುಂದುವರಿಸಿ “ಸೇಟು ಮಾತ್ರ ಅಲ್ಲ, ಸಾಲ ತೆಗೆದುಕೊಂಡವರೆಲ್ಲ ಕೈ ಬದಲು ನೀಡುವ ಮೂಲಕ ಸಾಲ ತೆಗೆದುಕೊಳ್ಳದವರ ಮೇಲೆ ಭಾರ ಹೊರಿಸಿದರು” ಎಂದಳು ತಿಮ್ಮಕ್ಕ.
ಹುಸೇನ್ ಜೀಪ್ ನಡೆಸುತ್ತಲೇ ಯೋಚಿಸತೊಡಗಿದ. ಎರಡು ವರ್ಷದ ಹಿಂದೆ… ಅಂದು ತಾನೂ ಅಪ್ಪ ಬ್ಯಾಂಕಿಗೆ ಹೋದಾಗ ಅವರು ಅದು ತನ್ನಿ, ಇದು ಬೇಕು, ನಾಳೆ ಬನ್ನಿ, ನಾಳಿದ್ದು.. ಇಬ್ಬರೂ ಅಲೆದಾಡಿದ್ದಷ್ಟೆ. ಕೊನೆಗೆ ಮೂವತ್ತು ಸಾವಿರ ಠೇವಣಿ ಇಡಬೇಕೆಂದರು. ಆಗ ಅಪ್ಪ “ನನ್ನ ಬಳಿ ಮೂವತ್ತು ಸಾವಿರ ಇದ್ದಿದ್ದರೆ ನಿಮ್ಮ ಬಳಿ ಏಕೆ ಬರುತ್ತೇನೆ” ನೋವಿನಿಂದ ಮ್ಯಾನೇಜರಿಗೆ ಹೇಳಿದ.
“ಬ್ಯಾಂಕ್ ನಿಯಮವೇ ಹಾಗೆ. ನೀನು ಮೂವತ್ತು ಸಾವಿರ ಡಿಪಾಸಿಟ್ ಮಾಡಿದರೆ ಉಳಿದದ್ದು ನಾವು ಕೊಡುತ್ತೇವೆ. ಜೀಪ್ ಬೇಕು ಆದರೆ ದುಡ್ಡಿಲ್ಲ ಅಂದರೆ ಹೇಗೆ, ಹಾಗೆಲ್ಲ ಸುಮ್ಮನೆ ಸಿಗುವುದಿಲ್ಲ..” ಗಡುಸಾಗಿ ಹೇಳಿದ ಬ್ಯಾಂಕ್ ಮ್ಯಾನೇಜರ್.
ಕೋಪದಿಂದ ಅಪ್ಪನ ಹಿಂದೆಯೇ ವಾಪಸ್ ಬಂದಮೇಲೆ ಹುಸೇನನಿಗೆ ಸ್ವಲ್ಪ ಕಾಡಿಬೇಡಿದ್ದರೆ ಚೆನ್ನಾಗಿತ್ತೇನೋ ಎಂದುಕೊಂಡು ಅಪ್ಪನಿಗೆ ಅದನ್ನೇ ಹೇಳಿದಾಗ ‘ಅಲ್ಲಿ ಮನುಷ್ಯರಲ್ಲವೋ… ರೂಲ್ಸ್.. ರೂಲ್ಸ್.. ಕೆಲಸ ಮಾಡುತ್ತದೆಯಂತೆ’ ಆವೇಶದಿಂದ ಹೇಳಿದ. ಹಾಗೆ ಹೇಳಿದರೂ ಕೈಕಟ್ಟಿ ಕೂರಲಿಲ್ಲ. ತಿಳಿದವರು ಯಾರೋ ಸಲಹೆ ನೀಡಿದರೆಂದು ಸುಬ್ಬಾರೆಡ್ಡಿಯ ಬಳಿ ಸಾಲ ಕೇಳಿದಾಗ “ತಿಂಗಳಿಗೆ ಆರು ಸಾವಿರ ಬ್ಯಾಂಕಿಗೆ ಕಟ್ಟಬೇಕು. ನೀನೂ ಬದುಕಬೇಕು. ನನ್ನ ಸಾಲವೂ ಕಳೀಬೇಕು. ಒಂದು ಜೀಪ್ ನಡೆಸಿ ಇಷ್ಟು ಹೇಗೆ ತೀರಿಸುತ್ತೀಯ..” ಎಂದು ಕೇಳಿದ.
ಮನಸು ನಿಲ್ಲಲಾರದೆ ಬಂದಿದ್ದನೇ ಹೊರತು ಯೋಚಿಸಿದರೆ ಈಗ ಅವನಿಗೂ ಹೌದೆನಿಸುತ್ತಿದೆ. ಇದರ ಮೇಲೆ ಸುಬ್ಬಾರೆಡ್ಡಿಯ ಸಾಲ ಮೂರು ಪರ್ಸೆಂಟ್. ತಿಂಗಳಿಗೆ ಸಾವಿರ. ಬ್ಯಾಂಕ್ ಸಾಲ ತೀರಲು ಎರಡು ವರ್ಷ ಆಗುತ್ತದೆ. ಆವರೆಗೂ ಬಡ್ಡಿಗೆ ಬಡ್ಡಿ ಅದು ಅರವತ್ತು ಸಾವಿರ ಆಗಿ ಕೂರುತ್ತದೆ ಎಂದುಕೊಂಡ.
ಸುಬ್ಬಾರೆಡ್ಡಿ ಬಹಳ ಯೋಚಿಸಿ “ಜೀಪ್ ಕೊಡಿಸುತ್ತೇನೆ. ಪ್ರತಿ ತಿಂಗಳೂ ನೀನು ಬ್ಯಾಂಕಿಗೆ ಸಾಲ ಕಟ್ಟಿಕೋ. ಎರಡು ವರ್ಷದ ನಂತರ ಆ ಹಳೆಯ ಜೀಪನ್ನು ನನ್ನ ಮುಖಕ್ಕೆಸಿ. ನನ್ನ ಕಷ್ಟವೇನೋ ನಾನು ಪಡುತ್ತೀನಿ, ಅಷ್ಟೇ ಅಲ್ಲ ದೊಡ್ಡ ದೊಡ್ಡ ರಿಪೇರಿಗೆ ಬಂದರೆ ನನ್ನ ಲೆಕ್ಕಕ್ಕೆ” ಎಂದು ವಿವರಿಸಿದ.
ಅಪ್ಪ ತನ್ನ ಕಿವಿಗಳನ್ನು ತಾನೇ ನಂಬದಾದ. ‘ನೋಡಿದೆಯೇನೋ ಹುಸೇನ್ ದೊಡ್ಡ ಗುಣ ಅಂದರೆ ದೊಡ್ಡ ಗುಣಾನೆ’ ಎಂದ. ಆಗ ತನಗೂ ನಿಜವೇ ಅನಿಸಿತು. ಯಾವ ಲಾಭವೂ ನಿರೀಕ್ಷಿಸದೆ ಎರಡು ವರ್ಷ ಸಾಲ ಕಾಯುವುದು, ನಂತರವೂ ಹಣ ಅಲ್ಲದೆ ವಸ್ತುವನ್ನೇ ತೆಗೆದುಕೊಳ್ಳುವುದು ವಿಚಿತ್ರವೆನಿಸಿದರೂ ಕೂಡಲೇ ಒಪ್ಪಿಕೊಂಡರು.
ತಾನು ಮೂವತ್ತುಸಾವಿರ ಸಾಲ ತೆಗೆದುಕೊಂಡರೆ ಎರಡು ವರ್ಷದ ನಂತರ ಜೀಪ್ ಉಳಿದರೂ ಅರವತ್ತು ಸಾವಿರ ಸಾಲವೂ ಇರುತ್ತದೆ. ಹೀಗಾದರೆ ಜೀಪೂ ಇರುವುದಿಲ್ಲ, ಸಾಲವೂ ಉಳಿಯುವುದಿಲ್ಲ. ಎರಡು ವರ್ಷದ ನಂತರ ಜೀಪ್ ಬೆಲೆ ಕೂಡ ಅಷ್ಟೇ ಇರುತ್ತದೆ. ಇನ್ನು ತನಗೇನು ನಷ್ಟ ಎಂದುಕೊಂಡ.
ಪತ್ರಗಳು ಸಿದ್ಧವಾದವು. ಪ್ರತಿದಿನ ಸಂಜೆ ಜೀಪ್ ಸುಬ್ಬಾರೆಡ್ಡಿಯ ಮನೆ ಮುಂದೆ ನಿಲ್ಲಿಸಬೇಕು. ಬೆಳಗ್ಗೆ ತೆಗೆದುಕೊಂಡುಹೋಗಬೇಕು. ಸಣ್ಣಪುಟ್ಟ ರಿಪೇರಿ ಬಿಟ್ಟು ಗ್ಯಾರೇಜ್ ರಿಪೇರಿ ಸುಬ್ಬಾರೆಡ್ಡಿಯದೇ. ಹೀಗೆ ಒಪ್ಪಂದವಾದ ನಂತರ ಕಮಾಂಡರ್ ಜೀಪ್ ಮನೆಯ ಮುಂದೆ ಬಂದಿತು. ಅದು ಬೆಳಗಿಡೀ ಅಪ್ಪನ ಕೈಲಿ ರಾತ್ರಿ ಸುಬ್ಬಾರೆಡ್ಡಿಯ ಗ್ಯಾರೇಜಿನಲ್ಲಿ ನಿವಾಸ ಹೊಂದತೊಡಗಿತು.
ರಾತ್ರಿ ಒಂದು ಹೊತ್ತಿನಲ್ಲಿ ಯಾರಿಗಾದರೂ ಹುಷಾರು ತಪ್ಪಿದಾಗ, ಹೆರಿಗೆ ನೋವು, ಮದುವೆ, ಸಮಾರಂಭಗಳಿಗೆ ಹೀಗೆ ಜೀಪಿಗೆ ಸಾಕಷ್ಟು ಗಿರಾಕಿ ಸಿಗತೊಡಗಿತು. ಅಪ್ಪ ಎರಡು ವರ್ಷ ನಾಲ್ಕು ಜನಕ್ಕೆ ಡ್ರೈವಿಂಗ್ ಕಲಿಸಿದ. ಅವರನ್ನು ಹಿಡಿದು ಹೀಗೇ ಜೀಪ್, ಆಟೋ ಕೊಡಿಸಿ ತನ್ನ ಸ್ಕೀಂನಲ್ಲಿ ಸೇರಿಸಿಕೊಂಡ ಸುಬ್ಬಾರೆಡ್ಡಿ. ಅಪ್ಪನ ಒಳ್ಳೆಯತನವನ್ನು ಬಂಡವಾಳ ಮಾಡಿಕೊಂಡ ಮೇಲೆ ಅವನ ಮನೆ ಗ್ಯಾರೇಜಾಗಿ ಬದಲಾಯಿತು. ಬೇನಾಮಿ ಹೆಸರುಗಳು, ಇತರ ಸ್ಕೀಂಗಳ ಮೂಲಕ ರೆಡ್ಡಿಗೆ ಬ್ಯಾಂಕ್ ಅತ್ತೆಮನೆಯಾಯಿತು.
ಅಪ್ಪನಿಗೆ ದಿನೇದಿನೇ ಯಜಮಾನ, ತಾನು ಕೆಲಸ ಕಲಿಸಿದ ಹುಡುಗರು ಹಾಗೂ ಗ್ರಾಮೀಣ ಬ್ಯಾಂಕ್ ಸ್ಕೀಂಗಳಿಂದಾಗಿ ಸ್ಪರ್ಧೆ ಹೆಚ್ಚಾಯಿತು. ಆ ಓಟದಲ್ಲೇ ಎರಡು ವರ್ಷ ಕಳೆಯಿತು. ಆರಂಭದಲ್ಲಿ ಐದೂ ಹತ್ತು ಕೊನೆಗೆ ಗಿರಾಕಿ ಸಿಗದೆ ಬ್ಯಾಂಕ್ ಸಾಲಕ್ಕೆ ಸೇರಿಸಬೇಕಾಯಿತು. ಕೂಡಿಟ್ಟ ಹಣವೂ ಎಲ್ಲಿ ಸೇರಬೇಕೋ ಅಲ್ಲಿಗೆ ಸೇರಿತು.
ಇನ್ನೊಂದು ವರ್ಷ ಆಗಿದ್ದರೆ ಸುಬ್ಬಾರೆಡ್ಡಿಯ ಬಾಕಿ ಕಳೆದು ತಾನು ಪಟ್ಟ ಶ್ರಮಕ್ಕೆ ಲಾಭವಾಗಿ ಜೀಪ್ ಉಳಿಯುತ್ತಿತ್ತು. ಎರಡು ವರ್ಷದ ಕಳೆದ ಹೊರತು ಸುಬ್ಬಾರೆಡ್ಡಿಯ ಒಳಸಂಚು ಅರ್ಥವಾಗಲಿಲ್ಲ. ತನ್ನ ಎರಡು ವರ್ಷದ ಶ್ರಮವೆಲ್ಲ ವ್ಯರ್ಥವಾಗಿ ತಾನು ಮತ್ತೆ ಮೊದಲಿಗೇ ಬಂದೆ. ಅವನು ಮಾತ್ರ ಹೂಡಿದ ಬಂಡವಾಳವನ್ನು ಬಡ್ಡಿ.. ಬಡ್ಡಿಗೆ ಬಡ್ಡಿ ವಸೂಲು ಮಾಡಿಕೊಂಡ ಎಂದು ಅಪ್ಪ ಪೇಚಾಡಿದ.
ಈಗ ಇನ್ನೂ ಒಂದು ಸಾವಿರ ಜಾಸ್ತಿ ಕೊಟ್ಟರೆ ಮಾತ್ರ ಬಾಡಿಗೆಗೆ ಕೊಡುತ್ತೇನೆಂದು ಸುಬ್ಬಾರೆಡ್ಡಿ ನಿರ್ದಾಕ್ಷಿಣ್ಯವಾಗಿ ಹೇಳಿದ. ಜೀಪ್ ಕೈ ಬದಲಾಗಬೇಕೆಂಬುದು ಅವನ ಲೆಕ್ಕಾಚಾರವಾಗಿತ್ತು. ಈಗಿರುವ ಬಾಡಿಗೆಯೇ ಕೊಡಲಾಗುತ್ತಿಲ್ಲ, ಇನ್ನೂ ಒಂದು ಸಾವಿರ ಎಲ್ಲಿಂದ ತರುವುದು ಎಂದು ಅಪ್ಪ ಗಾಡಿಯ ಸಹವಾಸ ಬೇಡವೆಂದು ಕೈಬಿಟ್ಟ.
“ಏಯ್ ಹುಡುಗಾ.. ಸ್ವಲ್ಪ ನಿಧಾನಕ್ಕೆ ಹೋಗಲಿ.. ಊರು ಬಂತು. ಯಾರಿಗಾದರೂ ಗುದ್ದಿದರೆ ದಂಡ ಕಟ್ಟಲು ನಿನ್ನ ಮನೆ ಸಾಕಾಗುವುದಿಲ್ಲ” ರೇಗಿದಳು ತಿಮ್ಮಕ್ಕ. ರೆಕಾರ್ಡ್ ನಿಲ್ಲಿಸಿ ಗಾಡಿಯ ವೇಗ ಕಡಿಮೆ ಮಾಡಿದ ಹುಸೇನ್. ಕೊನೆಪಕ್ಷ ನಾಲ್ಕೈದು ಜನವಾದರೂ ಹತ್ತದೆ ಇರುತ್ತಾರೆಯೇ ಎಂದು ಅವನು ಆಸೆ ಪಡುತ್ತಿರುವಾಗಲೇ ಹಂದಿ ಮರಿಯೊಂದು ಓಡಿಬಂದು ಚಕ್ರದ ಕೆಳಗೆಬಿದ್ದು ಬೊಬ್ಬಿಟ್ಟಿತು.
‘ಯಾರಾದರೂ ಬಂದರೆ ಬೆನ್ನಿಗೆ ಬಾಸುಂಡೆ ಬೀಳುತ್ತದೆ. ಬೇಗ ನಡಿ..” ಹುಸೇನನೀಗ ನಡುಗಿಹೋದ. ಹಿಂದಿನಿಂದ ಯಾರೋ ಕೂಗಿಕೊಳ್ಳುತ್ತಿದ್ದರೂ ಕೇಳಿಸಿಕೊಳ್ಳದೆ ವೇಗ ಜಾಸ್ತಿ ಮಾಡಿದ.
“ಆಂ.. ನೀನು ಆರ್ಟಿಸಿ ಯಲ್ಲಿ ಹೀಗೆ ಮಾಡಿದರೆ ಮನೆಗೆ ಕಳುಹಿಸುತ್ತಾರೆ” ಒಬ್ಬ ಶಿಕ್ಷಕ ಹೇಳಿದ. ಮತ್ತೊಬ್ಬ ಶಿಕ್ಷಕ “ಆ ಕೆಲಸ ಮೊನ್ನೆಯೇ ಆಗಿದೆ. ಲೈಸೆನ್ಸ್ನಲ್ಲಿ ಏನೋ ತಪ್ಪಾಗಿತ್ತಂತೆ” ಒತ್ತಿ ನುಡಿದ.
“ಪಾಪ.. ಇವರಪ್ಪ ಎರಡು ವರ್ಷ ಚೆನ್ನಾಗಿ ಓಡಿಸಿದ್ದ. ಕೆಲಸ ನೋಡಬೇಕೇ ಹೊರತು ಕಾಗದದ್ದೇನಿದೆ” ಎಂದು ಅಜೀಜ್ ಸೇಟ್ ಸಹಾನುಭೂತಿಯಿಂದ ಹೇಳಿದ.
“ಎಷ್ಟು ವರ್ಷ ಆದರೆ ಏನು, ಸರ್ಕಾರಕ್ಕೆ ಅದೆಲ್ಲ ಲೆಕ್ಕವಿಲ್ಲ!” ತಿಮ್ಮಕ್ಕ ಹೇಳಿದಳು. ಮಾತು ಕೇಳುತ್ತಲೇ ಪ್ರಯಾಣಿಕರ ದಾರಿ ಕಾಯುತ್ತಿದ್ದಾನೆ ಹುಸೇನ್. ಗುಂಪುಗುಂಪಾಗಿ ಜನ ಓಡಾಡುತ್ತಿದ್ದರೂ ಜೀಪ್ ಹತ್ತಿರ ಮಾತ್ರ ಯಾರೂ ಸುಳಿಯುತ್ತಿಲ್ಲ. ಭಯ, ಆತಂಕದಿಂದ ಗಂಗಮ್ಮನ ಏರಿ ದಾಟಿದ ಹುಸೇನ್.
ಕೈಲಿ ಹಣವಿಲ್ಲದೆ ಅಪ್ಪನಿಗೆ ಔಷಧಿ ಕೊಳ್ಳಲಿಲ್ಲ. ಇದ್ದಕ್ಕಿದ್ದಂತೆ ಅಪ್ಪನಿಗೆ ಜ್ವರ. ಇವತ್ತೂ ಔಷಧಿ ತೆಗೆದುಕೊಳ್ಳುವುದಕ್ಕಾಗುವುದಿಲ್ಲವೇನೋ! ಮನೆಯಲ್ಲಿ ಬೆಟ್ಟದಷ್ಟು ಆಸೆ ತೋರಿಸಿ ಬಂದಿದ್ದ. ಯಾವ ಮುಖವಿಟ್ಟುಕೊಂಡು ಮನೆಗೆ ಹೋಗಲಿ ಎಂದು ಅಸಹಾಯಕವಾಗಿ ಯೋಚಿಸುತ್ತಿದ್ದಾನೆ. ದಾರಿ ಸಾಗುತ್ತಲೇ ಇದೆ. ಸರ್ವಾಯಿಹಳ್ಳಿ, ಬೊಪ್ಪಾರ, ಗೊಲ್ಲಹಳ್ಳಿ ಡಾಂಬರ್ರೋಡ್.. ಎಲ್ಲಿಯೂ ಒಂದು ನೊಣವೂ ಇಲ್ಲ. ನಿರಾಸೆಯಿಂದ ದೊಡ್ಡ ಅಂಗಡಿ ಬಳಿ ಸೇಟುಗಳು ಕೊಟ್ಟಿದ್ದ ಚೀಟಿ ಕೊಟ್ಟು ಮುಂದೆ ಸಾಗಿದ.
“ನಿಲ್ಲಿಸು. ಕಾಲೇಜು ಬಂತು” ಹುಡುಗರಿಬ್ಬರೂ ಹಣ ಕೊಟ್ಟು ಇಳಿದು ಕಾಲೇಜು ಗೇಟಿನೊಳಗೆ ಹೋದರು. ಲೆಕ್ಕ ಹಾಕಿದರೆ ಒಂದು ರುಪಾಯಿ ಕಡಿಮೆ, ನಿಲ್ಲಿಸಿ ಕೇಳಿದರೆ ಮತ್ತೆ ಜೀಪ್ ಹತ್ತುವುದಿಲ್ಲ ಎಂದುಕೊಂಡ. ಪೇಟೆಯಲ್ಲಿ ಜನ ಪೂರ್ತಿ ಖಾಲಿಯಾದರು. ಡೀಸಲ್ ಖರ್ಚೂ ಗಿಟ್ಟಲಿಲ್ಲ. ಬಸ್ಸ್ಟ್ಯಾಂಡಿನಲ್ಲಿ ನಿಲ್ಲಿಸಲು ಹೋದಾಗ ಸರತಿಯಲ್ಲಿ ಬರುವಂತೆ ಸೂಚಿಸಿದರು. ಏಳೆಂಟು ಪ್ಯಾಸೆಂಜರ್ ಜೀಪ್ಗಳು. ಅವನ್ನು ಹಿಂದಿಕ್ಕಲು ಆಟೋಗಳು. ಎಲ್ಲದರ ಮೇಲೂ ‘ಬ್ಯಾಂಕ್ ಆರ್ಥಿಕ ಸಹಾಯ’ ಎಂಬ ಮುದ್ರೆ. ಅಬ್ಬಾ! ಮಾಲೀಕರು ಎಲ್ಲೋ ಕುಳಿತು ರಾತ್ರಿ ಹಗಲೆನ್ನದೆ ದುಡಿಯುವ ಶ್ರಮಜೀವಿಗಳನ್ನು ಬೆರಳ ತುದಿಯಲ್ಲಿ ಆಟವಾಡಿಸುತ್ತಿದ್ದಾರೆ ಎಂದುಕೊಂಡ.
ಅಲ್ಲೇ ಕಾದರೆ ಹೊತ್ತು ಮುಳುಗಿದರೂ ಗಿರಾಕಿ ಬರದ ಪರಿಸ್ಥಿತಿ. ಏನೋ ನೆನಪಾಗಿ ಮಾರ್ಕೆಟ್ನತ್ತ ಹೋಗಿ ನಿಲ್ಲಿಸಿದ ಹುಸೇನ್. ಐದು ನಿಮಿಷದಲ್ಲಿ ಜೀಪ್ ತುಂಬಿಹೋಯಿತು. ಕೆಲವರನ್ನು ಮುಂದೆ ಕುಳ್ಳಿರಿಸಿಕೊಂಡ. ತನಗೆ ಸ್ವಲ್ಪ ಮಾತ್ರ ಜಾಗ ಉಳಿಸಿಕೊಂಡ. ಕೆಲವು ತರಕಾರಿ ಬುಟ್ಟಿಗಳನ್ನು ಟಾಪ್ ಮೇಲೆ ಹಾಕಿದ. ಕೆಲವರು ಜೋಲಾಡುತ್ತ ನಿಂತರು. ಎಲ್ಲರೂ ಡೈರೆಕ್ಟೇ. ಹುಸೇನನಿಗೆ ತುಂಬಾ ಖುಷಿಯಾಯಿತು. ನಾಲ್ಕು ಟ್ರಿಪ್ ಹೀಗೆ ಸಿಕ್ಕಿದರೆ ಎರಡಲ್ಲ ಹತ್ತಾದರೂ ಕಟ್ಟಬಹುದು ಬಾಡಿಗೆ ಎಂಬ ಉತ್ಸಾಹ ಮೂಡಿತು.
ಜೀಪ್ ರಾಗೆಟ್ಲಹಳ್ಳಿಯತ್ತ ಸಾಗಿತು. ಎಷ್ಟು ವೇಗವಾಗಿ ಆಕ್ಸಲರೇಟರ್ ಒತ್ತಿದನೋ ಅದಕ್ಕಿಂತ ಜೋರಾಗಿ ಬ್ರೇಕ್ ಒತ್ತಿದ. ಜೀಪ್ ಕಿರ್ರೆಂದಿತು. ಒಳಗಿದ್ದವರು ಒಬ್ಬರಿಗೊಬ್ಬರು ಢೀ ಹೊಡೆದುಕೊಂಡರು. ನಿಂತಿದ್ದವರು ಜೋಲಿ ಹೊಡೆದು ಹಾಗೇ ಗಟ್ಟಿಯಾಗಿ ನಿಂತರು.
“ಏಯ್.. ಬೋ..ಕೆ.. ಸಾಯಿಸುತ್ತೀಯೇನೋ..?” ಯಾರೋ ಕೂಗಿದರು.
“ಇವನ ಮಕಾ ಮುಚ್ಚಾ.. ಬಾಯಿಗೆ ಮಣ್ಣು ಬೀಳಾ..” ಯಾರೋ ಯಾರನ್ನೋ ಬೈಯ್ಯುತ್ತಿದ್ದಾರೆ. ಅಡ್ಡ ಬಂದ ಲಾರಿಯನ್ನು ಹತ್ತಿಕ್ಕಿ ಜೀಪ್ ಮುಂದಕ್ಕೆ ಹೋಯಿತು. ಹಿಂದಿನಿಂದ ಅಟ್ಟಿಸಿಕೊಂಡು ಬರುತ್ತಿರುವಂತೆ ಲೋಕಲ್ ಬಸ್. ಅದು ಮುಂದೆ ಹೋಯಿತೆಂದರೆ ಮಾರ್ಗಮಧ್ಯೆ ಒಬ್ಬರೂ ಸಿಗುವುದಿಲ್ಲ.
ಜೀಪ್ ವೇಗ ಹೆಚ್ಚಿಸಿದ. ನಡುವೆ ಹತ್ತುವುದೂ.. ಇಳಿಯುವುದು.. ‘ಎಲ್ಲಿ ಹತ್ತಿಸಿಕೊಳ್ಳುತ್ತೀಯ. ತಲೆ ಮೇಲೆ ಹತ್ತಿಸಿಕೋ’ ಎನ್ನುತ್ತ ಪ್ರಯಾಣಿಕರ ಚುಚ್ಚು ಮಾತುಗಳು… ಚಿಲ್ಲರೆಗೆ ಗಲಾಟೆ.. ಒಟ್ಟಾರೆ ಜೀಪ್ ಸಿರಿಸಿಲ್ಲ ತಲುಪಿತು.
ಸ್ವಲ್ಪ ಬಿಡುವು ಸಿಕ್ಕಿ ಸ್ವಲ್ಪ ಹೊತ್ತು ಆರಾಮವಾಗಿ ಕುಳಿತುಕೊಳ್ಳುವವೇಳೆಗೆ ಮತ್ತೆ ಜನ ತುಂಬಿಹೋದರು. ಚಹಾ ಕುಡಿದು ಹತ್ತಿ ಕುಳಿತ.
ನಿರೀಕ್ಷಿಸದೆ ಇಷ್ಟು ಜನ ಹತ್ತಿದ್ದು ನೋಡಿ ಅಬ್ಬ! ವಾರಕ್ಕೆ ಮೂರು ದಿನ ಹೀಗೆ ತುಂಬಿದರೂ ಚೆನ್ನಾಗಿರುತ್ತದೆ ಎಂದುಕೊಂಡ. ತಾನು ಮಾಡಿದ್ದು ಸರಿ ಎಂಬ ನಂಬಿಕೆ ಹುಟ್ಟಿತು. ಇವತ್ತು ನಾಳೆ ಎರಡು ದಿನದ ಬಾಡಿಗೆ ಸುಬ್ಬಾರೆಡ್ಡಿಯ ಮುಖಕ್ಕೆ ಎಸೆಯುತ್ತೇನೆ ಎಂದುಕೊಂಡ.
ಪೆದ್ದೂರು ತಿರುವಿನ ಬಳಿ ಹಠಾತ್ತನೆ ಜೀಪ್ ಬ್ರೇಕ್ ಬಿದ್ದಿತು. ಮತ್ತೆ ಬೈಗುಳಗಳು, ಗೊಣಗಾಟ. ಅದಾವುದೂ ಕೇಳಿಸಿಕೊಳ್ಳಲಿಲ್ಲ ಹುಸೇನ್. ಎದುರಿಗೆ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಬಿಳಿ ಕಾರು ಮಾತ್ರ ಕಾಣಿಸಿತು. ಕಾರಿನಿಂದ ತನ್ನತ್ತಲೇ ನೋಡುತ್ತಿದ್ದ ಆರ್.ಟಿ.ಒ. ಕಾಣಿಸಿದ.
“ಇನ್ನು ನಿನ್ನ ಕೆಲಸ ಆದಂತೆಯೇ. ಹೊಸದಾಗಿ ಬಂದಿರೋ ಅಧಿಕಾರಿ” ಯಾರೋ ಹೇಳಿದರು.
“ಹೌದು, ಎಷ್ಟೋ ಅಗತ್ಯಗಳಿರುತ್ತವೆ. ಅವರಿಗೂ ಕೈ ಆಡಬೇಕಲ್ಲಾ..” ಯಾರೋ ನಕ್ಕರು. ಪೆಚ್ಚುಮುಖ ಹೊತ್ತು ಆರ್.ಸಿ. ಬುಕ್ ಮತ್ತು ಲೈಸೆನ್ಸ್ ಕೈಲಿಟ್ಟುಕೊಂಡು ಜೇಬು ಮುಟ್ಟಿಕೊಳ್ಳುತ್ತ ಹೊರಟ ಹುಸೇನ್. ಆರ್.ಟಿ.ಒ ಸಿಂಹಾಸನದ ಮೇಲೆ ಕುಳಿತ ಮಹಾರಾಜನಂತೆ ಕಾಲು ಕೂಡ ಕದಲಿಸಲಿಲ್ಲ. ಅರ್ಧ ತೆಗೆದಿದ್ದ ಕಿಟಕಿಯಿಂದ ಲೇವಾದೇವಿ ನಡೆದವು. ಅರ್ಧಗಂಟೆ ಕಾಡಿಬೇಡದ ಹೊರತು ಅಧಿಕಾರಿಯ ಮನಸು ಕರಗಲಿಲ್ಲ. ಹುಸೇನನ ಜೇಬಿನಲ್ಲಿದ್ದ ನೋಟುಗಳು, ಚಿಲ್ಲರೆಯೆಲ್ಲ ಹೊಡೆದುಕೊಳ್ಳದ ಹೊರತು ಆರ್.ಸಿ. ಬುಕ್ ಕೈಗೆ ಬರಲಿಲ್ಲ.
ಅಷ್ಟರೊಳಗೆ ಬಸ್ ಬಂದುದರಿಂದ ಪ್ರಯಾಣಿಕರೆಲ್ಲರೂ ಬಸ್ನಲ್ಲಿ ಹತ್ತಿ ಕುಳಿತರು. ಬಸ್ ಹೊರಟಿತು. ಆರ್.ಟಿ.ಒ ನಂಬಿಸಿ ಕೈಕೊಟ್ಟ. ಬರಿಗೈಲಿ ಜೀಪಿನ ಬಳಿ ಬಂದ ಹುಸೇನ್. ಜೀಪು ಖಾಲಿ ಖಾಲಿ, ಜೇಬೂ ಖಾಲಿ. ಅಳು ಬಂದಂತಾದರೂ, ‘ಸದ್ಯ ಕೇಸ್ ಹಾಕಲಿಲ್ಲ, ಒಳ್ಳೆಯದಾಯಿತು’ ಎಂದುಕೊಳ್ಳುತ್ತ ಜೀಪ್ ಹತ್ತಿದ. ಯಾವ ಕಡೆ ಹೋಗಬೇಕೋ ಅರ್ಥವಾಗಲಿಲ್ಲ. ಸ್ವಲ್ಪ ಹೊತ್ತು ಯೋಚಿಸಿ ಗಾಡಿಯನ್ನು ಸಿರಿಸಿಲ್ಲದತ್ತ ತಿರುಗಿಸಿದ.
ಅಂಬಟಲ್ಲ ದಾಟಿದಮೇಲೆ ಹಸಿವಾಗತೊಡಗಿತು. ಚಹಾ ಕುಡಿಯಲು ಕೂಡ ಚಿಲ್ಲರೆಯಿಲ್ಲ. ಅದೂ ಅಲ್ಲದೆ ಜೀಪಿನಲ್ಲಿರುವ ಡೀಸೆಲ್ನಲ್ಲಿ ಇನ್ನೆರಡು ಮೂರು ಕಿ.ಮೀ. ಮಾತ್ರ ಹೋಗುತ್ತದೆ. ರಸ್ತೆ ಪಕ್ಕ ನಿಲ್ಲಿಸಿ “ಗೊಲ್ಲಹಳ್ಳಿ.. ವನಹಳ್ಳಿ.. ವನಹಳ್ಳಿ..” ಕೂಗಿದ.
ವನಹಳ್ಳಿ ಕಾಡಿನ ಪ್ರದೇಶ. ಅತ್ತ ಬಸ್ಗಳಿರುವುದಿಲ್ಲ. ಯಾರಾದರೂ ಪ್ರಯಾಣಿಕರಿರುತ್ತಾರೆಂದು ಹುಸೇನ್ ಹೇಳಿದಾಗ ಉಳಿದ ಜೀಪುಗಳವರು ನಕ್ಕರು. ಅವರೇಕೆ ಹಾಗೆ ನಗುತ್ತಿರುವರೋ ಹುಸೇನನಿಗೆ ಗೊತ್ತು. ಅಲ್ಲಿ ರಸ್ತೆ ಸರಿಯಿಲ್ಲವಾದ್ದರಿಂದ ಜೀಪುಗಳು ಹೋಗಲಾರವು. ಯಾವಾಗಲೋ ಬರುವ ಷಟಿಲ್ ಸರ್ವಿಸ್. ಅಂದು ಸಂತೆಯಾದ್ದರಿಂದ ಲಂಬಾಣಿಗಳು ಸರಕಿಗಾಗಿ ಹೊರಗೆ ಬಂದವರಿರುತ್ತಾರೆಂದು ಲೆಕ್ಕಹಾಕಿ “ವನಹಳ್ಳಿ.. ವನಹಳ್ಳಿ..” ಮತ್ತೊಮ್ಮೆ ಕೂಗಿದ ಹುಸೇನ್. ಬಸ್ಗಳು ಹೆಚ್ಚಾಗಿ ಇಲ್ಲದ ಮಾರ್ಗ. ಹೊತ್ತಲ್ಲದ ಹೊತ್ತು. ಎರಡು ನಿಮಿಷದಲ್ಲಿ ಜನ ತುಂಬಿಹೋದರು. ಬೆನ್ನುಮೂಳೆ ಮುರಿಯುವುದು ಗ್ಯಾರಂಟಿ ಎಂದು ತಿಳಿದಿದ್ದರೂ ವಿಧಿಯಿಲ್ಲದೆ ಆ ಮಾರ್ಗಕ್ಕೆ ಹೊರಟಿದ್ದ.
ಪ್ರಯಾಣಿಕರು ಮೊದಲು ಹಣ ಕೊಡುವುದಿಲ್ಲ, ಅಬ್ಬಬ್ಬ ಅಂದರೆ ಜೀಪು ಎರಡು ಮೂರು ಕಿ.ಮೀ. ಹೋಗುತ್ತದೆ ಎಂದುಕೊಳ್ಳುತ್ತ ಸ್ಟಾರ್ಟ್ ಮಾಡಿ ಬಂಕ್ ಬಳಿ ನಿಲ್ಲಿಸಿ ಇನ್ನೂರು ರುಪಾಯಿಗೆ ಡೀಸಲ್ ಹಾಕಿಸಿದ. “ಅಣ್ಣ ಚಿಲ್ಲರೆಯಿಲ್ಲ, ಹಣ ಕೊಡಿ” ಎಂದು ಹಿಂದೆ ಬಂದು ಕೇಳಿದ. ಕೆಲವರು ಕೊಟ್ಟರು, ಕೆಲವರು ಗೊಣಗಿದರು. ಕೆಲವರಂತೂ ನಾವೇನು ಓಡಿಹೋಗುತ್ತೇವಾ ಎಂದು ಮೂಗು ಮುರಿದರು. ಡೀಸಲ್ ಹಣ ಕೊಟ್ಟು ಉಳಿದ ಐದು ರುಪಾಯಿ ಜೇಬಿಗೆ ಹಾಕಿಕೊಂಡ.
ಇಳಿಯುವವರು ಇಳಿದರು. ಒಂದಿಬ್ಬರು ಹತ್ತಿದರು. ದಾರಿಯಲ್ಲಿ ಹೋಗುತ್ತಿರುವಾಗ ಎದೆ ಭಾರವಾಗಿ ಏನೇನೋ ಯೋಚನೆ ಬರುತ್ತಿದೆ. ರೆಕಾರ್ಡ್ ಕೂಡ ಹಾಕಲಿಲ್ಲ. ಹಸಿವಿನಿಂದ ಬಳಲಿಕೆಯಾಗುತ್ತಿದೆ.
ಡಾಂಬರು ರಸ್ತೆಯಿಂದ ಮಣ್ಣಿನ ರಸ್ತೆಗೆ ಚಲಿಸುವವೇಳೆಗೆ ಸಿರಿಸಿಲ್ಲದಲ್ಲಿ ಹತ್ತಿದ ವನಹಳ್ಳಿ ಪ್ರಯಾಣಿಕರು ಹದಿಮೂರು ಜನ ಮಾತ್ರ ಇದ್ದಾರೆ. ಸಾಕು ಬಿಡು ಇದೇ ಒಳ್ಳೆಯದು ಎಂದುಕೊಂಡ. ಬರುವಾಗ ಕನಿಷ್ಟ ಇಪ್ಪತ್ತು ಜನರಾದರೂ ತಪ್ಪದೆ ಹತ್ತುತ್ತಾರೆ. ಏನಂದರೆ ಜಲ್ಲಿಕಲ್ಲುಗಳು ಟೈರಿಗೆ ಬಡಿಯದಂತೆ ಹುಷಾರಾಗಿರಬೇಕು ಎಂದುಕೊಳ್ಳುತ್ತಿರುವಾಗಲೇ ಜೀಪಿಗೆ ಬ್ರೇಕ್ ಬಿದ್ದಿತು.
ಮಫ್ತಿಯಲ್ಲಿದ್ದ ನಾಲ್ಕು ಕಾನ್ಸ್ಟೇಬಲ್ಗಳು ಜೀಪಿನ ಬಳಿ ಬಂದರು. ಅವರನ್ನು ಸಲೀಸಾಗಿ ಗುರುತುಹಿಡಿದು ಭಯ, ಆತಂಕದಿಂದ ನೋಡಿದ ಹುಸೇನ್. ಏತಕ್ಕೆ ನಿಲ್ಲಿಸಿದರೋ ಅರ್ಥವಾಯಿತು. “ಪೆಟ್ರೋಲಿಂಗ್ ಹೋಗಬೇಕು. ಸ್ಟೇಷನ್ ಬಳಿ ಇರು. ಅರ್ಧ ಗಂಟೆಯಲ್ಲಿ ಹಿಂತಿರುಗುತ್ತೇವೆ” ಎಂದು ಆದೇಶವಿತ್ತು ಉಳಿದವರನ್ನೆಲ್ಲ ಇಳಿಸಿದರು. ಹುಸೇನ್ ಜೀಪ್ ತನ್ನದಲ್ಲವೆಂದು ಸುಬ್ಬಾರೆಡ್ಡಿಯದು ಅವನಿಗೆ ಕೊಡಬೇಕಾದ ದಿನದ ಹಣದ ಲೆಕ್ಕ ಹೇಳಿ ಬೇಡಿಕೊಂಡರೂ ಅವರ ಕಿವಿಗೆ ಬೀಳಲಿಲ್ಲ. ಜೀಪು ಧೂಳೆಬ್ಬಿಸುತ್ತ ಕಾಡಿನಲ್ಲಿ ಮಾಯವಾಯಿತು. ತಮ್ಮ ಹಣ ವಾಪಸ್ ನೀಡುವಂತೆ ಪ್ರಯಾಣಿಕರು ಜಗಳ ಶುರುಮಾಡಿದರು. ಅಸಹಾಯಕನಾಗಿ ದಾರಿಯಲ್ಲೇ ಕುಸಿದು ಕುಳಿತ ಹುಸೇನ್. ಜನರು ಗೊಣಗಾಡಿಕೊಂಡು ಹೊರಟರು.
ಕಾಲೆಳೆದುಕೊಂಡು ಸ್ಟೇಷನ್ ಬಳಿ ಬಂದು ಕಾದುಕುಳಿತ ಹುಸೇನ್. ಜೀಪಿನ ಸುಳಿವಿಲ್ಲ. ಹಸಿವಾಗಿ ಜೇಬಿನಲ್ಲಿ ಚಿಲ್ಲರೆಯಿದ್ದರೂ ಖರ್ಚು ಮಾಡಬೇಕೆನಿಸಲಿಲ್ಲ. ಜೀಪಿನಲ್ಲಿ ಡೀಸೆಲ್ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಬಂದಮೇಲೆ ಅರ್ಧಲೀಟರ್ ಹಾಕಿಸಿಕೊಂಡಾದರೂ ಮನೆ ಸೇರಿಕೊಳ್ಳಬಹುದು ಎಂದುಕೊಂಡ. ಮನೆ ಸೇರಿದ ಮೇಲೆ ಸುಬ್ಬಾರೆಡ್ಡಿಗೆ ಹಣ ಹೇಗೆ ಕೊಡುವುದು ಎಂಬ ಯೋಚನೆ ಹತ್ತಿಕೊಂಡಿತು. ದಿನವೂ ಇನ್ನೂರು ಕೊಡದಿದ್ದರೆ ಕೆಲಸ ಕೆಡುತ್ತದೆ, ಮೊದಲದಿನವೇ ಪಂಗನಾಮವೆಂಬ ಕೆಟ್ಟ ಹೆಸರು.
ಒದ್ದಾಟದಲ್ಲಿಯೇ ಹೊತ್ತು ಮುಳುಗಿತು. ಪೊಲೀಸರು ಜೀಪಿನಲ್ಲಿ ಯಾರನ್ನೋ ಹಿಡಿದು ತಂದರು. ಜೀಪೆಲ್ಲ ಧೂಳು ತುಂಬಿಕೊಂಡಿದೆ. ಅನುಮಾನದಿಂದಲೇ ಜೀಪಿನ ಬಳಿ ಹೋದ. ಇರುವ ಡೀಸೆಲ್ನಲ್ಲಿ ಮನೆ ಸೇರಬಹುದು ಎಂದುಕೊಂಡ.
ಜೀಪ್ ಸ್ಟಾರ್ಟ್ ಮಾಡುತ್ತ ಇದು ಇವತ್ತೊಂದು ದಿನದ ಕತೆಯಲ್ಲ. ನಾಳೆಯೂ ಇಷ್ಟೇ! ಇದು ನನ್ನ ತಂದೆಯನ್ನು ತುಳಿಯಿತು. ನನ್ನನ್ನು ತುಳಿಯಬೇಕೆಂದು ನೋಡುತ್ತಿದೆ. ಬ್ಯಾಂಕು, ಹಣವಿರುವವರು ಹಾವುಗಳನ್ನು ಬಿಟ್ಟಂತೆ ಇವುಗಳನ್ನು ಬಿಟ್ಟರು. ನಾವು ಹಾಲು ಹಾಕಿ ಸಾಕುತ್ತಿದ್ದೇವೆ. ಪ್ರತಿದಿನ ಬಾಡಿಗೆ ಎಲ್ಲಿಂದ ಕಟ್ಟೋಣ..? ಕಟ್ಟದಿದ್ದರೆ ಕಾಗದಪತ್ರಗಳು! ಪಂಚಾಯಿತಿ, ಕೇಸುಗಳು.. ಹೇಗೆ..?
ಹುಸೇನನಿಗೆ ಜೀಪಿನ ಹಿಂದಿರುವ ನಿಗೂಢ ಮನುಷ್ಯರು.. ಅವರ ಹಿಂದಿರುವ ಸಂಸ್ಥೆಗಳು ರಕ್ತ ಹೀರುವ ಸೊಳ್ಳೆಗಳಂತೆ ಕಂಡು ಅವನ ಮನಸು ಮುರಿಯಿತು. ಸೊಳ್ಳೆಯನ್ನಾದರೂ ನಾವು ಹೊಸಕಿಹಾಕಬಹುದು. ಆದರೆ ಈ ದೊರೆ ಸಿಗುವುದಿಲ್ಲ, ಅವನು ನಮ್ಮನ್ನೇ ಹಿಂಡಿಬಿಡುತ್ತಾನೆ! ಅವನಿಗೆ ಏನೋ ಜ್ಞಾನೋದಯವಾದಂತಾಗಿ ಜೀಪಿನ ಮೇಲೆ ಹಗೆ ಹೆಚ್ಚಿತು.
ಹುಸೇನ್ ಜೀಪನ್ನು ಹೋಟೆಲ್ ಮುಂದೆ ನಿಲ್ಲಿಸಿ ತಿಂಡಿ ತಿನ್ನುವ ವೇಳೆಗೆ ಕತ್ತಲಾಗಿತ್ತು. ರಾತ್ರಿಯಾದ್ದರಿಂದ ಮನೆಯತ್ತ ಹೊರಡುವಾಗ ಹತ್ತಿಪ್ಪತ್ತು ಪ್ರಯಾಣಿಕರು ಹಣ ಹೆಚ್ಚಿಗೆ ಕೊಡುತ್ತೇವೆಂದರೂ ಹತ್ತಿಸಿಕೊಳ್ಳದೆ ಮುಂದೆ ಹೊರಟ. ಸೇಟು ಬೆಳಗ್ಗೆ ಕೊಟ್ಟ ಲಿಸ್ಟಿನ ಸರಕು ಅವನಿಗೆ ಕೊಟ್ಟು, ಅವನು ಹಣ ಕೊಡಲು ಬಂದರೂ ತೆಗೆದುಕೊಳ್ಳಲಿಲ್ಲ. ಖಾಲಿ ಜೇಬಿನಲ್ಲಿ ವರಂಗಲ್ಗೆ ಬಂದ ಹುಸೇನ್ ಜೀಪಿನಿಂದ ಇಳಿದು ಅದರ ಎದುರು ನಿಂತ. ಹೆಡ್ಲೈಟ್ ಬೆಳಕಿನ ಜೊತೆ ದಟ್ಟ ಬೆಳದಿಂಗಳು! ಕಟಕಟನೆ ಹಲ್ಲು ಕಡಿಯುತ್ತ ‘ಇದಕ್ಕೆ ಸ್ವಾಮಿ ನಿಷ್ಠೆ ಜಾಸ್ತಿ. ಸುಟ್ಟರೂ, ಗುಡ್ಡದ ಮೇಲಿಂದ ಕೆಳಗೆ ತಳ್ಳಿದರೂ ಇನ್ಶುರೆನ್ಸ್ ರೂಪದಲ್ಲಿ ಮನೆ ಮುಂದೆ ತೇಲುತ್ತದೆ, ಪ್ರಾಣವೊಂದಿಲ್ಲ ಎಂಬುದು ಬಿಟ್ಟರೆ ಪ್ರಾಣಕ್ಕೆ ಪ್ರಾಣ ತೆಗೆಯುತ್ತದೆ’ ಕೋಪದಿಂದ ಹೇಳಿ ಬಾನೆಟ್ ಎತ್ತಿದ.
ಯಂತ್ರಮರ್ಮ ತಿಳಿದಿರುವವ. ಎಲ್ಲಿ ಏನು ಮಾಡಿದನೋ ಅರ್ಧಗಂಟೆಯಲ್ಲಿ ಹೊಗೆ ಹೊತ್ತಿಕೊಂಡಿತು. ಶವ ಸುಟ್ಟ ಕಮಟು ವಾಸನೆ. ಎಷ್ಟೋ ಜನರ ರಕ್ತ ಹೀರಿ ಕತ್ತಲಲ್ಲಿ ಮುದುರಿಕೊಂಡ ಹೆಬ್ಬಾವಿನಂತೆ ಜೀಪು ನಡು ರಸ್ತೆಯಲ್ಲಿ!
‘ಇದು ಕದಲಬೇಕೆಂದರೆ ಸಾವಿರಾರು ರುಪಾಯಿ ಬೇಕು. ಇದು ಮೇಜರ್ ರಿಪೇರಿ. ರೆಡ್ಡಿಯ ಖಾತೆಗೇ ಹೋಗುತ್ತದೆ. ಸಾಯಲಿ ಮಗ. ಹಾವುಗಳನ್ನು ಬಿಡುತ್ತೀರಾ ಲುಚ್ಚಾ ನನ್ ಮಕ್ಳಾ.. ನಮಗೆ ತಿಳಿಯದೆ ಹೆಡೆಯ ನೆರಳಿಗೆ ಹೋದೆವು. ಎರಡು ಮೂರು ಬಾರಿ ಹೀಗೆ ಮಾಡಿದರೆ ರೋಗ ಕುದುರುತ್ತದೆ ನನ್ ಮಕ್ಳಿಗೆ..’ ಬಡಬಡಿಸುತ್ತ ಮನೆಯತ್ತ ನಡೆದ ಹುಸೇನ್.
ಹೆಚ್ಚಿನ ಬರಹಗಳಿಗಾಗಿ
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ
ಕಾಸಿಲ್ ಆಫ್ ಆಲ್ಬಕರ್ಕೀ