- ಕನ್ನಡ ಕವಿಗಳಲ್ಲಿ ಪ್ರಜ್ವಲಿಸುತ್ತಿರುವ ದೀಪಮಾಲೆ - ಅಕ್ಟೋಬರ್ 27, 2024
- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
ಕವಡೆ ನೋಡದೆ ಇರುವವರಿಲ್ಲ. ಚಿನ್ನ-ಬೆಳ್ಳಿಯಷ್ಟಲ್ಲದೆ ಇದ್ದರೂ ಆಟ, ನೋಟ, ಕೂಟ ಗಳಲ್ಲಿ ಇರುವ ಇದು ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ದೈವೀಭಾವನೆಯನ್ನು ಮೂಡಿಸುವ ಇದು ಕಡಲ ತಡಿಯ ಜನರ ಕಲಸುಬಾಗಿ ಬದುಕಿಗೂ ಎರವಾಗಿದೆ. “ಕಪರ್ದಿಕಾ” ಎಂದೇ ಕರೆಸಿಕೊಂಡು ಅನೂಚಾನವಾಗಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿರುವ ಕವಡೆಯನ್ನು ನಾವೆಲ್ಲಾ ನೋಡಿರುತ್ತೇವೆ. ಹಾಗೆ ಇದೊಂದು ಬಹುಮುಖಿ ಉಪಯೋಗಿವಸ್ತು ಎಂದು ಹೇಳಬಹುದು. ಕಡಲ ತಡಿಯ ಜನರು ಕವಡೆಗಳಲ್ಲಿ ಓಲೆಗಳು, ನೆಕ್ಲೆಸ್ಗಳು, ಬ್ರೈಸ್ಲೆಟ್ಗಳು, ಬಳೆಗಳು, ಉಂಗುರ ಮೊದಲಾದ ಅನೇಕ ವಿನ್ಯಾಸವುಳ್ಳ ಆಭರಣಗಳನ್ನು ತಯಾರು ಮಾಡಿ ಪ್ರವಾಸಿಗರಿಗೆ ಮಾರಾಟಮಾಡಿ ಜೀವನ ಸಾಗಿಸುತ್ತಾರೆ. ಇದು ವೃತ್ತಿ-ಪ್ರವೃತ್ತಿಯಾಗಿಯೂ ಕೆಲವರನ್ನು ಕೈಹಿಡಿದಿದೆ. ಟ್ರೆಂಡಿ ಆಭರಣ ತಯಾರಿಕ ಕಂಪೆನಿಗಳವರು ಕವಡೆಗಳಿಂದ ಸಿದ್ಧ ಪಡಿಸಿದ ಓಲೆ, ಉಂಗುರಗಳನ್ನು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಮುಂತಾದಡೆ ಹಾಕಿ ಜನಪ್ರಿಯಗೊಳಿಸುತ್ತಿರುವುದನ್ನು ನೋಡಬಹುದು.
“ಕವಡೆ ಕಾಸಿಗೆ ಕಿಮ್ಮತ್ತಿಲ್ಲ” ಎನ್ನುವಂತಿಲ್ಲ ಕವಡೆಗೂ ಈಗ ಕಿಮ್ಮತ್ತು ಬಂದಿದೆ. ‘ಸುಕುಮಾರ ಚರಿತೆ’ಯಲ್ಲಿ ಶಾಂತಿನಾಥನ “ಇಂತೊಂದು ಕೋಟಿ ಪೊನ್ನನೊಂದು ಕವಡಿಕೆಯಂ ಕುಡುವಂಥೇನುಂ ಆಫೋಹಮಿಲ್ಲದೆ ಕೊಟ್ಟು” ಎಂಬ ವಾಕ್ಯದಲ್ಲಿ ಕವಡಿಕೆ ನಾಣ್ಯದ ರೂಪದಲ್ಲಿ ಬಳಕೆಯಾಗುತ್ತಿತ್ತು ಎನ್ನುತ್ತಾರೆ. “ಕವಡಿಕೆಯಂ ಕಾಚುಂ ಸಲ್ಲಗುಮೆ ಹೊನ್ನವೊಲೆಲ್ಲಿಯಾದೊಡಂ” ಎಂಬ ಮಾತಿನಲ್ಲಿ ಅದಕ್ಕಿದ್ದ ಅಲ್ಪ ಮೌಲ್ಯ ವ್ಯಕ್ತವಾಗುತ್ತದೆ.
ಕವಡೆಗಳು ಕಡಲ ಮೃದ್ವಂಗಿಗಳ ಪ್ರಭೇದ. ಶಂಖದಂತೆ ಹೊರಕವಚ ಮಾತ್ರ ಹೊಂದಿರುತ್ತದೆ. ಇದರಲ್ಲಿರುವ ಜೀವಿ ಬಹಳ ಮೃದುವಾಗಿರುತ್ತದೆ. ಆದ ಕಾರಣ ತನ್ನ ಸಂರಕ್ಷಣೆಗೆ ಗಟ್ಟಿಯಾದ ಹೊದಿಕೆ ಹೊಂದಿರುತ್ತದೆ. ಸರಿಸುಮಾರು ಇದೇ ಜಾತಿಗೆ ಸೇರಿದ ಕಪ್ಪೆಚಿಪ್ಪನ್ನು ದಶಕಗಳ ಹಿಂದೆ ಇದನ್ನು ಮನೆಗೆ ಸುಣ್ಣ ಬಳಿಯಲು ಬಳಸುತ್ತಿದ್ದರು.
“ಕಪರ್ದಿಕಾ” ಅಥವಾ ಇದೊಂದು ನಿಶಾಚಾರ ಪ್ರಾಣಿ ರಾತ್ರಿಯಾದೊಡನೆ ಭೇಟೆಗೆ ಇಳಿಯುತ್ತದೆ. ಇದರ ಆವಾಸ ಸ್ಥಾನ ಕಡಲೇ ಆಗಿರುತ್ತದೆ. ಸುಂದರ,ಬೆಲೆಬಾಳುವ ಕವಡೆಗಳು ಸಿಗಬೇಕಾದರೆ ಕಡಲಾಳಕ್ಕೇ ಇಳಿಯಬೇಕಾಗುತ್ತದೆ. ಇವುಗಳಲ್ಲಿ 165ಕ್ಕೂ ಮಿಕ್ಕಿ ಪ್ರಭೇದಗಳಿವೆ. ಉದ್ದ, ಆಕಾರ, ಬೆನ್ನ ಬಣ್ಣ ನೋಡಿ ಇವುಗಳ ಪ್ರಭೇದಗಳನ್ನು ಕಂಡು ಹಿಡಿಯುತ್ತಾರೆ. ಕವಡೆ ಮುಖ್ಯವಾಗಿ ಐದು ಬಣ್ಣಗಳಲ್ಲಿ ಇರುತ್ತದೆ. ಅವುಗಳಲ್ಲಿ “ಸಿಂಹ ಕವಡೆ”ಯು ಸುವರ್ಣಛಾಯೆ ಹೊಂದಿರುತ್ತದೆ. ಧೂಮ್ರವರ್ಣದಲ್ಲಿ “ವ್ಯಾಘ್ರ ಕವಡೆ”, ಹಳದಿಬಣ್ಣದಲ್ಲಿ “ಮೃಗಿಕವಡೆ” , ಬಿಳಿಯ ಬಣ್ಣದಲ್ಲಿರುವುದನ್ನು “ಹಂಸಿಕವಡೆ” ಎನ್ನುತ್ತಾರೆ. ಉದ್ದವಾದ ಕವಡೆಯನ್ನು “ವಿದಂತ” ಎನ್ನುತ್ತಾರೆ..
ಇವುಗಳು ಉಷ್ಣವಲಯದ ಕಡಲಿನಲ್ಲಿ ಇರುವವು ಎಂದಾದರೂ ತುಂಬಾ ಆಳವಲ್ಲದ ಕಡಲುಗಳಲ್ಲಿ ಇವು ಇರುತ್ತವೆ. ಭಾರತದಲ್ಲಿ ರಾಮೇಶ್ವರ, ಗುಜರಾತ್, ಬಂಗಾಳಕೊಲ್ಲಿ ಅಂಡಮಾನ್ -ನಿಕೋಬಾರ್ ದ್ವೀಪಗಳಲ್ಲಿ ಉತ್ತಮ ಜಾತಿಯ ಕವಡೆಗಳು ಸಿಗುತ್ತವೆ. “ಕವಡೆ ಕಾಸು” ಅಂದರೆ ನಾಣ್ಯಗಳಂತೆ ಇದನ್ನು ಬಹಳ ಹಿಂದೆ ಬಳಕೆ ಮಾಡಲಾಗುತ್ತಿತ್ತು. ಇವುಗಳನ್ನು ನಾಣ್ಯಕ್ಕೆ ಪರ್ಯಾಯವಾಗಿ ಹೊರತಾಗಿ ನಾಣ್ಯಕವಡೆ, ಕಿತ್ತಳೆ ಕವಡೆಗಳು ಎಂದು ಬಳಸುತ್ತಿದ್ದರು . ಕಿತ್ತಳೆ ಕವಡೆಗಳು ನೋಡಲು ಆಕಷರ್ಕವಾಗಿದ್ದು ಇವನ್ನು ಆಫ್ರಿಕಾದ ಗುಡ್ಡಗಾಡು ಜನರು ಹೆಚ್ಚಾಗಿ ಬಳಸುತ್ತಾರೆ. ಆಂಗ್ಲರು, ಡಚ್ಚರು,ಅರಬರ ವ್ಯಾಪಾರ ಮೂಲವೇ ಇದಾಗಿತ್ತು ಎನ್ನುತ್ತಾರೆ. ಆಗಿನ ಕಾಲದಲ್ಲಿ ವರ್ತರಕರು ಕವಡೆಗಳನ್ನು ಕೊಟ್ಟು ಗುಲಾಮರನ್ನು ಖರೀದಿಮಾಡುತ್ತಿದ್ದರಂತೆ. 18ನೆ ಶತಮಾನದಲ್ಲಿ ಆರು ಸಹಸ್ರ ಕವಡೆಗಳೆಂದರೆ ಒಂದು ರೂಪಾಯಾಗಿತ್ತು ಎನ್ನುತ್ತಾರೆ. ಭಾರತದಲ್ಲಿಯೂ ಕವಡೆ ನಾಣ್ಯವಾಗಿ ಚಲಾವಣೆಯಲ್ಲಿತ್ತು ಎಂದು ಸುಲೇಮಾನ್ ಎಂಬ ಪ್ರವಾಸಿ ಕೂಡ ಬರೆಯುತ್ತಾನೆ.
ಕನ್ನಡ ಸಾಹಿತ್ಯ ಚರಿತ್ರೆಯಲ್ಲೂ ಕವಡೆಯ ಉಲ್ಲೇಖವಿದೆ. ಬ್ರಹ್ಮಶಿವನ ‘ಸಮಯ ಪರೀಕ್ಷೆಯಲ್ಲಿ’ಯೂ ಕವಡೆಯ ಪ್ರಸ್ಥಾಪವಾಗಿದೆ.ಉರಿಲಿಂಗಪೆದ್ದಿ ಎಂಬ ವಚನಕಾರ ವಚನವೊಂದರಲ್ಲಿ “ಮಾಯೀರಾಣಿಯೇ ದೈವವೆಂದಾರಾಧಿಸಿಧಾತನು ಕೊರಳಿಗೆ ಕವಡೆಯ ಕಟ್ಟಿ ತಲೆಯಲ್ಲಿ ಕೆರಹ ಹೊತ್ತು ಬೇವಿನ ಸೊಪ್ಪನ್ನುಟ್ಟು ಲಜ್ಜೆಯ ನೀಗಿದ” ಎಂಬ ಮಾತನ್ನು ಉಲ್ಲೇಖಿಸುತ್ತಾನೆ. ಅಲಗುಳಿಮಣೆ ಆಡುವಾಗ ಚೌಕಾಬಾರ ಆಟದಲ್ಲಿ ಕವಡಿಕೆಯನ್ನು ಗರ ಹಾಕಲು ಬಳಸುತ್ತಾರೆ. “ಕವಡಿಕೆ ನೆತ್ತ ನಾಟಕ ಮೊಗರಂಗವೆನಿಪ ಕವಾಟ ತೆಯದು” ಎಂಬ ಕುಮಾರವ್ಯಾಸನ ,ಮಾತಿನಿಂದ ಇದೊಂದು ಬಗೆಯ ಆಟವೆಂದು ತಿಳಿಯುತ್ತದೆ. ಬಡಿಬಡಿ ತೊಂಡರ ಬಾಯನೆಂದನು ಚಕ್ರಿ
ಒಡನೆ ಮಾಗಧನ ಸೇವಕರು
ಬಡಿದರು ಹಲ್ಲೆಲ್ಲ ಕವಡೆಯ ಚೀಲವ
ಕೊಡಹಿಂದಂತುದಿರ್ದುವು ಧರೆಗೆ
ರತ್ನಾಕರವರ್ಣಿಯ ‘ಭರತೇಶ ವೈಭವ’ದಲ್ಲಿ ಉಲ್ಲೇಖವಾಗಿರುವ ಪದ್ಯ. ಭರತನ ದಿಗ್ವಿಜಯದ ಸಂದರ್ಭದಲ್ಲಿ ಬರುತ್ತದೆ. ವೃಷಭಾದ್ರಿಯಲ್ಲಿ ಅಹಂಕಾರದಿಂದ ಶಾಸನವನಮ್ನು ಕೆತ್ತಿಸುವ ಸಲುವಾಗಿ ಬಂದಿರುತ್ತಾನೆ. ಆದರೆ ಅಲ್ಲಿ ಮೊದಲೆ ಗೆದ್ದ ಅರಸರೆಲ್ಲರು ಶಾಸನವನ್ನು ಕೆತ್ತಿಸಿದ್ದರು ಅದನ್ನು ನೋಡಿದ ಭರತಚಕ್ರವರ್ತಿ ತನ್ನ ಭಟರಿಗೆ ಅದನ್ನು ಹಾಳುಗೆಡವಲು ಹೇಳಿದಾಗ ಶಾಸನವನ್ನು ಕಾಯುತ್ತಿದ್ದ ಬೆಂತರಗಳು ಭಟರನ್ನು ತಡೆಯಲು ಬಂದಾಗ ಪ್ರತಿಯಾಗಿ ಭಟರು ಬೆಂತರಗಳ
ಹಲ್ಲುಗಳನ್ನು ಉದುರಿಸಿದ್ದನ್ನು ರತ್ನಾಕರವರ್ಣಿ ಬಡಿದರು ಹಲ್ಲೆಲ್ಲ ಕವಡೆಯ ಚೀಲ ಕೊಡಹಿದಂತೆ ಎಂದು ಉದಾಹರಿಸಿ ಬರೆಯುತ್ತಾನೆ.
ಶಾಸ್ತ್ರ, ಪಂಚಾಂಗ ನೋಡುವ ಸಂದರ್ಭದಲ್ಲಿ, ಕೊರವಂಜಿ ಕಣಿ ಕೇಳುವ ಸಂದರ್ಭದಲ್ಲಿ(ಇತ್ತೀಚೆಗೆ ಕೊರವಂಜಿಗಳು, ಕಣಿ ಹೇಳುವುದೆಲ್ಲಾ ನೇಪಥ್ಯಕ್ಕೆ ಸರಿದಿದೆ . ಕೇವಲ ದಾಖಲೆಗಳಲ್ಲಿ, ಹಾಳೆಗಳಲ್ಲಿ ಚಿತ್ರಗಳಲ್ಲಿ ನೋಡುವಂತಾಗಿದೆ) ಕವಡೆ ಹಾಕುವ ಪದ್ಧತಿ ಈಗಲೂ ಇದೆ. ಸಮ- ಬೆಸ ಸಂಖ್ಯೆಗಳ ಆಧಾರದ ಮೇಲೆ ಸಮಸ್ಯೆಗಳನ್ನು ಊಹಿಸಿ ಪರಿಹಾರ ಸೂಚಿಸುತ್ತಾರೆ. ಇದು ಅವರವರ ನಂಬಿಕೆಗೆ ಬಿಟ್ಟ ವಿಚಾರ.
“ಕಂದಮ್ಮಗಳ ಕಣ್ಣಿನ ಕವಡಿಯ ತಣ್ಣನ್ನ ಜೊಮಾಲೆ ಕೊರಳೊಳಗಿತ್ತೋ ಬೇಂದ್ರೆಯವರ ‘ಕುರುಡು ಕಾಂಚಾಣ’ ಪದ್ಯದಲ್ಲಿಯೂ ಇದು ಉಲ್ಲೇಖವಾಗಿದೆ.
“ಮಾಯಾದೇವಿ” ಅಥವಾ “ಮಾಳಚಿಯ” ಭಕ್ತರು ಕಡ್ಡಾಯವಾಗಿ ಕವಡೆಯನ್ನು ಬಳಸುವುದು ವಾಡಿಕೆ. ಲಕ್ಷ್ಮಿಗೆ ಬಹುಪ್ರಿಯವಾದ ವಸ್ತು ಎಂಬ ಕಾರಣಕ್ಕೆ ಇದನ್ನು ದೇವರ ಮನೆಯಲ್ಲಿ ಸಂಖ್ಯಾಶಾಸ್ತ್ರದ ಅನುಗುಣವಾಗಿಯೂ ಪೂಜಿಸುವುದಿದೆ.ಬಂಜಾರನ್ ಮೊದಲಾದ ಜನಾಂಗದಲ್ಲಿ ಕುಪ್ಪಸ, ತಲೆಗೆ ಹಾಕುವ ವಸ್ತ್ರಗಳಲ್ಲಿ ಇವುಗಳನ್ನು ಸುಂದರವಾಗಿ ನಾಜೂಕಾಗಿ ಅಳವಡಿಸಿರುತ್ತಾರೆ. ಜೊಗತಿಯವರ ಹತ್ತಿರ ಅವರು ಆರಾಧಿಸುವ ವಸ್ತುಗಳಲ್ಲಿ ಅವರ ಬಟ್ಟೆಗಳಲ್ಲಿ ಕವಡೆ ಇದ್ದೇ ಇರುತ್ತದೆ.
ಕವಡೆಯನ್ನು “ಅರೋಗ್ಯವರ್ಧಕ” ಹಾಗು “ಆಯುಷ್ಯವರ್ಧಕ” ಎನ್ನುವುದಿದೆ. ಹಾಗಾಗಿ ಆದಿವಾಸಿಗಳಲ್ಲಿ ಮಗು ಹುಟ್ಟಿದೊಡನೆ ಕವಡೆಗೆ ರಂಧ್ರಮಾಡಿ ಕೊರಳಿಗೆ ಹಾಕುವುದು ಎತ್ತುಗಳಿಗೆ ಕಪ್ಪು ಹಗ್ಗದೊಂದಿಗೆ ಕವಡೆ ಕಟ್ಟುವುದಿದೆ. ಇತ್ತೀಚೆಗೆ ವಾಹನಗಳಲ್ಲಿಯೂ ಬಳಸುವಂತೆ ಕವಡೆಯಿಂದ ತಯಾರಾದ ವಸ್ತುಗಳು ದೊರಕುತ್ತಿವೆ. ಅಂದರೆ ದೃಷ್ಟಿದೋಷನಿವಾರಣೆಗೆ ಕವಡೆ ಅತ್ಯಂತ ಪರಿಣಾಮಕಾರಿ ಎಂಬ ನಂಬಿಕೆ ಈಗಲೂ ಇದೆ ಅನ್ನುವಹಾಗಾಯಿತು.. ಪ್ಯಾಷನ್ ಲೋಕದಲ್ಲಿ ಹೆಣ್ಣು ಮಕ್ಕಳ ದುಪಟ್ಟ, ವ್ಯಾನಿಟಿ ಬ್ಯಾಗ್, ಪೌಚ್ಗಳು, ಹೇರ್ಕ್ಲಿಪ್ ಮತ್ತು ಆಕರ್ಷಕವಾದ ಗೃಹಾಲಂಕಾರದ ವಸ್ತುಗಳಲ್ಲಿ ಅಂದರೆ ವಾಲ್ ಹ್ಯಾಂಗಿಂಗ್ಸ್ , ಹೂದಾನಿಗಳಲ್ಲಿ ಕವಡೆಯ ಉಪಯೋಗ ಮಾಡಿಕೊಂಡಿರುತ್ತಾರೆ. ಸಮಾನಮನಸ್ಕರು ಮನಸ್ಸು ಮಾಡಿದರೆ ಇದನ್ನು ಉದ್ಯಮವನ್ನಾಗಿಯೂ ಕಡಲತೀರಗಳಲ್ಲಿ ಮಾಡಬಹುದು. ಕವಡೆ ಕಾಸಿಗೆ ಕಿಮ್ಮತ್ತಿಲ್ಲ ಎಂದು ಹೇಳಿಸಿಕೊಳ್ಳುತ್ತಲೇ ಸೌಂದರ್ಯ, ಪರಂಪರೆ, ವಸ್ತ್ರ ವಿನ್ಯಾಸಗಳಲ್ಲಿ ಬೆಲೆಯನ್ನು ಗಿಟ್ಟಿಸಿಕೊಂಡಿರುವ ಕವಡೆ ನೈಸರ್ಗಿಕ ಸಂಪತ್ತೇ ಸರಿ!
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..