ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನೀನೇ ಅವನಾಗಿದ್ದೆ

ಇಲ್ಲಿ ತಪ್ಪು ಯಾರದ್ದು ನಿದ್ರಿಸಿದವಳದ್ದೋ?ಬದಲಾದ ಊರುಗಳದ್ದೋ?.....(ತೇಜಾವತಿ ಹೆಚ್. ಡಿ ಅವರ ಒಂದು ಕವಿತೆ..
ತೇಜಾವತಿ ಹೆಚ್. ಡಿ. (ಖುಷಿ)
ಇತ್ತೀಚಿನ ಬರಹಗಳು: ತೇಜಾವತಿ ಹೆಚ್. ಡಿ. (ಖುಷಿ) (ಎಲ್ಲವನ್ನು ಓದಿ)

ಗಾಢ ನಿದ್ರೆಯಲ್ಲಿದ್ದೆ ನಾನು
ಅದಕ್ಕೆ ಕಾರಣ ಪಕ್ಕದಲ್ಲಿದ್ದ ನೀನು…!

ಊರುಗಳು ತಲೆದಿಂಬಾಗಿದ್ದವು
ಪ್ರಜ್ಞೆಯಿರದಷ್ಟು ಎವೆ ಮುಚ್ಚಿದ್ದವು..

ಹಿತವಾದ ಮಡಿಲಲ್ಲಿ ಮಲಗಿದವಳಿಗೆ
ಊರುಗಳು ಬದಲಾಗಿದ್ದೇ ಅರಿವಾಗಲಿಲ್ಲ..

ಕನಸಲ್ಲೇನೋ ತಲೆಯ ಸರಿಸಿದಂತಾಗಿ
ಮತ್ತೆ ಎಳೆದುಕೊಂಡು ಮಲಗೇಬಿಟ್ಟೆನು…

ತಲೆದಿಂಬ ಗಾತ್ರ ವ್ಯತ್ಯಾಸವಾದಂತಾದರೂ
ಏರಿದ್ದ ನಿದ್ರೆ ಕಣ್ಣು ತೆರೆಯಲೂ ಬಿಡಲಿಲ್ಲ..

ನಿನ್ನ ಜೋರು ಧನಿಯೇ ನನ್ನ ಎಚ್ಚರಿಸಿದ್ದು
ಆ ಗಾಢ ನಿದ್ರೆಯಲ್ಲೂ ಮೊನಚು ಮಾತು ಚುಚ್ಚಿದ್ದು..

ಕಣ್ಣರಳಿಸಿದಾಗಲೇ ತಿಳಿದದ್ದು ಆ ರಾತ್ರಿಯ ಪ್ರಯಾಣದಲ್ಲಿ
ಊಟದ ವಿರಾಮದಲ್ಲಿ ನೀ ಕೆಳಗಿಳಿದು ಹೋದದ್ದು..

ನೀ ಬರುವವರೆಗೂ ನನ್ನ ಶಿರಕ್ಕೆ ಬದಲಾದ ಊರುಗಳವೋ..
ಕಾಳಜಿಯ ಕರಗಳಾವೋ ನಾನರಿಯೆ
ಆದರೆ ಅವೂ ಕೂಡ ತಲೆದಿಂಬೇ ಆಗಿದ್ದವು ನಿನ್ನಂತೆ..

ನೀನೇಕೆ ಆ ಹೊತ್ತಲ್ಲಿ ಅಷ್ಟೊಂದು ಚೀರಾಡಿದೆ ನಿದ್ರೆಯಲ್ಲಿದ್ದವಳ ಮೇಲೆ
ಇಲ್ಲಿ ತಪ್ಪು ಯಾರದ್ದು
ನಿದ್ರಿಸಿದವಳದ್ದೋ?
ಬದಲಾದ ಊರುಗಳದ್ದೋ?

ಒಳಗಿದ್ದ ಉದ್ದೇಶವೇನೋ
ನಡೆದ ಸನ್ನಿವೇಶವೇನೋ
ಕೊಟ್ಟಿದ್ದು ಮಾತ್ರ
ಹಿತವಾದ ಅನುಭವವೇ….
ಆ ಕ್ಷಣಕ್ಕೆ ನೀನೇ ಅವನಾಗಿದ್ದೆ..