- ಗಜಲ್ - ಆಗಸ್ಟ್ 15, 2023
- ದರ್ಜೆ ಎರಡನೆಯದೇ - ಅಕ್ಟೋಬರ್ 23, 2022
- ಅಮೋಘಸಿದ್ಧ ಜನಪದ ಮಹಾಕಾವ್ಯ - ಅಕ್ಟೋಬರ್ 18, 2021
ಹಗಲಿಗೊಂದು ಇರುಳಿಗೊಂದು
ನವನವೀನ ಶೈಲಿಗಳ
ಆಕರ್ಷಣೆಗೆ ಒಳಗಾಗುವ
ಪಂಚರಂಗಿಗಳ ನಡುವೆ
ಆಯುಷ್ಯ ತೀರುವವರೆಗೂ
ತೀರದ ಗುರಿ ಆರದ ಸಾಧನೆಯೇರಿದ
ವಿಶ್ವಕ್ಕೆ ಭ್ರಾತೃತ್ವದ ಮಹತ್ವ ಸಾರಿದ
ವಿವೇಕಾನಂದರಂತಹವರು ನೆನಪಾಗುತ್ತಾರೆ…
ವಿಲಾಸಿ ರೆಕ್ಕೆಗಳ ಆಸೆಗಳಿಗೆ ಮರುಳಾಗಿ
ಕುರುಡು ವ್ಯಾಮೋಹಗಳ ಆಜೀವ ದಾಸರಾಗಿ
ತಮ್ಮತನವ ಗಿರವಿಯಿಟ್ಟು ಪಾಶಗಳಿಗೆ ಗುರಿಯಾಗುವವರ ಮಧ್ಯೆ
ಅರಮನೆಯ ನೆರಳ ನೆನೆಯದೆ
ವೈಭೋಗಕ್ಕೆ ಆಶಿಸದೆ ಸಿರಿಸಂಪತ್ತನ್ನು ಆಳದೆ
ಬಯಲೊಳಗೆ ಬೆತ್ತಲಾಗಿ
ಅನುಭಾವದ ವಿರಕ್ತಳಾಗಿ
ಅಧ್ಯಾತ್ಮದ ಜೊತೆಸಾಗಿದ ಅನುರಾಗಕ್ಕೆ
ಅಕ್ಕನಂತಹವರು ನೆನಪಾಗುತ್ತಾರೆ…
ಅನುಕ್ಷಣವೂ ಬಣ್ಣಧರಿಸುವ ಗೋಸುಂಬೆಗಳಾಗಿ
ವ್ಯಕ್ತಿತ್ವದ ತುಲಾಭಾರಗಳನ್ನು
ಧನಕನಕಗಳಿಂದ ತೂಗುವ ತಕ್ಕಡಿಗಳೆದುರು
ಧರಿಸಿದ್ದ ಜನಿವಾರ ಎಸೆದು
ಮೌಂಜಿಯ ಹರಿದು ನವ್ಯದುಕೂಲವ ತೊರೆದು
ಲಿಂಗಕ್ಕೂ ಭೇದವೆಣಿಸದೆ
ಕೋಟ್ಯಂತರ ಮುಮುಕ್ಷುಗಳ ಸನ್ಮಾರ್ಗವ ಕಂಡು ಆತ್ಮ ತೃಪ್ತಗೊಂಡು
ಸುಮುಹೂರ್ತವೇ ಗಂಡುರೂಪಾಗಿ
ಭಕ್ತಿಗೇ ಭಂಡಾರಿಯಾದ ಕ್ರಾಂತಿಯ ಶಿಶು
ಬಸವಣ್ಣನಂತಹವರು ನೆನಪಾಗುತ್ತಾರೆ..
ಸಿರಿತನದ ಸುಪ್ಪತ್ತಿಗೆಯಲಿ
ಅಜೀರ್ಣ ನಿದ್ರಾಹೀನತೆಗಳಿಂದ ನರಳುವವರ ನಡುವೆ
ಭೂತಾಯಿಯ ಮಡಿಲಲ್ಲಿ ಅಂಬರದ ಹೊದಿಕೆ ಹೊದ್ದು ಬೋರಲು ಮಲಗಿದ
ಹಸಿದ ಜೀವಗಳು ನೆನಪಾಗುತ್ತಾರೆ..
ಕುಡಿಗಳಿಗಾಗಿ ಹಂಬಲಿಸಿ
ಹರಕೆ ಉಪವಾಸ ವ್ರತಗಳಿಗಾಗಿ ದೈವೀ ವೃಕ್ಷಗಳ ಪ್ರದಕ್ಷಿಣೆ ಹಾಕುವವರ ನಡುವೆ
ರೆಕ್ಕೆ ಬಲಿತು ಗೂಡ ತೊರೆದ ಹಕ್ಕಿಗಳ ನೆನೆದು
ಇಳಿಸಂಜೆಯ ಏಕಾಂತದ ಸಂಗಾತಿಗಳಾಗಿ ಸಮಯ ದೂಡುವ ವೃದ್ಧರು ನೆನಪಾಗುತ್ತಾರೆ..
ಬದುಕಿನ ವೈರುಧ್ಯಗಳ ಬಿರುಗಾಳಿಗೆ ತರಗೆಲೆಗಳಾಗಿ ಹಾರಿಹೋದವರ ನಡುವೆ
ಗಡಿ ದೇಶ ಭಾಷೆ ಭಕ್ತಿಗಾಗಿ ಜೀವತೆತ್ತ ಅದೆಷ್ಟೋ ಹುತಾತ್ಮರು ನೆನಪಾಗುತ್ತಾರೆ..
ನಿತ್ಯ ನೆನಪಾಗುತ್ತಾರೆ
ನೆನಪಾಗುತ್ತಲೇ ಇರುತ್ತಾರೆ
ಕೊನೆಗೆ…
ಆದರ್ಶಗಳಿಗೂ ಮೀರಿದ ಹೆಸರಾಗಿಬಿಡುತ್ತಾರೆ…
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ