ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ಇದ್ದಕ್ಕಿದ್ದ ಹಾಗೆ ನಮ್ಮ ಫ್ಲಾಟಿನ ಕೆಳಗಡೆಯಿಂದ ವಾಗ್ವಾದ ಕೇಳಿಬಂತು. ಬಾಲ್ಕನಿಗೆ ಹೋಗಿ ನೋಡಿದಾಗ ಒಂದು ಡೆಲಿವರಿ ವಾಹನದ ಡ್ರೈವರ್ ಯಾರನ್ನೋ ಬೈಯುತ್ತ ಕೆಳಗಿಳಿದು ಬಂದು ಅಲ್ಲಿ ವಾಹನಗಳನ್ನು ಸಾಲಾಗಿ ನಿಲ್ಲಿಸುವ ಜವಾಬ್ದಾರಿ ಹೊತ್ತ ಸೆಕ್ಯುರಿಟಿಯವನೊಂದಿಗೆ ಜೋರು ಜೋರಾಗಿ ಕನ್ನಡದಲ್ಲಿ ಹೊಲಸು ಮಾತುಗಳೊಂದಿಗೆ ಜಗಳಕ್ಕೆ ಇಳಿದದ್ದು ಕಂಡುಬಂತು. ಮಾಮೂಲಿನಂತೆ ಸೆಕ್ಯುರಿಟಿ ಗಾರ್ಡು ಯಾವ ಬಿಹಾರಿಯೋ, ಒರಿಯಾದವನೋ ಅಗಿದ್ದು ಅವನಿಗೆ ಕನ್ನಡ ಅರ್ಥವಾಗಲಿಲ್ಲ. ಅವನು ಹಿಂದಿ ಭಾಷೆಯಲ್ಲಿ ಅವನ ವಾದವನ್ನು ಮುಂದಿಡುತ್ತಿದ್ದ. ಆದದ್ದು ಇಷ್ಟೇ ವಾಹನದವನು ಅಲ್ಲಿರುವ ಕಾರುಗಳ ಮತ್ತು ಈ ರೀತಿಯ ವಾಹನಗಳ ಪಾರ್ಕಿಂಗ್ ಜಾಗದಲ್ಲಲ್ಲದೆ ಸ್ಕೂಟರ್ ಗಳಿಗಾಗಿ ಇಟ್ಟ ಜಾಗದಲ್ಲಿ ತನ್ನ ವಾಹನವನ್ನು ನಿಲ್ಲಿಸಿದ್ದ. ವಾಹನದವನ ವಾದ ಇಷ್ಟೇ “ ನಾನೊಂದು ಐದು ನಿಮಿಷದಲ್ಲಿ ಡೆಲಿವರಿ ಕೊಟ್ಟು ಹೊರಡುತ್ತೇನೆ. ಅಷ್ಟರಲ್ಲಿ ಏನು ಅನಾಹುತ ಆಗುತ್ತದೆ?” ಅಂತ. ಸೆಕ್ಯುರಿಟಿಯವನ ಸಂಕಟ ಅವನಿಗೇ ಗೊತ್ತು.

“ಈ ಐದು ನಿಮಿಷದಲ್ಲಿ ಬಂದು ಬಿಡುತ್ತೇನೆ” ಎನ್ನುವುದು ಸಾಧಾರಣ ಎಲ್ಲ ವಾಹನಗಳ ಯಜಮಾನರುಗಳಿಗೆ ಗೊತ್ತಿರುವ ಸೂಕ್ತಿಯೇ. ನಾವು ಎಲ್ಲಿಗಾದರೂ ನಮ್ಮ ಮೋಬೈಕಿನ ಮೇಲೋ ಅಥವಾ ಸ್ಕೂಟರ್ ಮೇಲೋ ಹೋಗುತ್ತಿರುವಾಗ ಅಕಸ್ಮಾತ್ ಏನೋ ಹೊಳೆದು, ವಾಹನ ನಿಲ್ಲಿಸಿ ತಂದುಕೊಳ್ಳಬೇಕಾದಲ್ಲಿ ಆ ಅಂಗಡಿ ಮುಂದೆಯೋ ಅಥವಾ ಕಚೇರಿ ಮುಂದೆಯೋ ವಾಹನ ನಿಲ್ಲಿಸಿ ಒಳಗೆ ಹೋಗಲು ಹೋದಾಗ, ಅಲ್ಲಿ ನೇಮಕಾತಿಗೊಂಡ ಸೆಕ್ಯುರಿಟಿಯವನು “ಇಲ್ಲಿಂದ ತೆಗೆರಿ” ಅಂದಾಗ ನಮ್ಮ ಬಾಯಿಂದ ಬರೋ ಪದಗಳು ಇವೇ. “ಜಾಸ್ತಿ ಆಗಲ್ಲ ಗುರೂ! ಒಂದೈದು ನಿಮಿಷದಲ್ಲಿ ಬಂದು ಬಿಡುತ್ತೇನೆ” ಅಂತ ಅವನ ಹತ್ತಿರ ಗೋಗರೆಯುವುದು ನಮಗೆ ಗೊತ್ತೇ ಇದೆ. ಆದರೆ ಅವನ ಕಷ್ಟ ಅವನದು.

ಒಂದು ಮೂವತ್ತು ವರ್ಷಗಳ ಹಿಂದೆ ರಸ್ತೆಗಳ ಮೇಲೆ ಇಷ್ಟೊಂದು ವಾಹನಗಳಿರಲಿಲ್ಲ. ಪ್ರತ್ಯೇಕಿಸಿ ಕಾರುಗಳು. ಈ ಮೂವತ್ತು ವರ್ಷಗಳ ಅವಧಿಯಲ್ಲಿ ಎಲ್ಲ ಆರ್ಥಿಕ ಸಂಸ್ಥೆಗಳು, ಕೆಲ ವಾಹನ ತಯಾರಿದಾರರು ಸಹ, ಎಳೆದೆಳೆದು ವಾಹನಗಳು ಕೊಳ್ಳಲು ಸಾಲ ಕೊಡಲು ಶುರುಮಾಡಿದ ಮೇಲೆ ಇವುಗಳ ಸಂಖ್ಯೆ ಜಾಸ್ತಿಯಾಯಿತು. ರಸ್ತೆಗಳು ಮಾತ್ರ ಅವಕ್ಕೆ ತಕ್ಕ ಹಾಗೆ ಅಗಲವಾಗಲಿಲ್ಲ. ಹಾಗಾಗಿ ರಸ್ತೆಗಳ ಮೇಲ್ ವಾಹನಗಳನ್ನು ಎಲ್ಲಿ ನಿಲ್ಲಿಸಬೇಕೆಂದು ತಿಳಿಯದಂತಾಯಿತು. ದೊಡ್ಡ ದೊಡ್ಡ ಮಾಲ್ ಗಳಲ್ಲಿ ಪಾರ್ಕಿಂಗ್ ಗಾಗಿಯೇ ಜಾಗ ಮಾಡಿರುತ್ತಾರೆ. ಅಲ್ಲಿಗೆ ದಾರಿತೋರಲು ಒಬ್ಬ ಗಾರ್ಡ್ ಇರುತ್ತಾನೆ. ಅಲ್ಲಿ ಸಮಸ್ಯೆಯಾಗುವುದಿಲ್ಲ. ಆದರೆ ಯಾವುದೋ ಭೂತಳಕ್ಕೆ ಹೋಗುವಂತೆ ಅನಿಸುವ ಆ ಬೇಸ್ಮೆಂಟ್ ಪಾರ್ಕಿಂಗ್ ನಲ್ಲಿ ಗಾಡಿಗಳು ನಿಲ್ಲಿಸಲು ಯಾರೂ ಅಷ್ಟು ಬೇಗ ತಯಾರಿರುವುದಿಲ್ಲ. ಮತ್ತೆ ವಾಹನ ನಿಲ್ಲಿಸಲು ಪರದಾಟ ಶುರುವಾಗುತ್ತದೆ.
ಆದರೆ ಚಿಕ್ಕ, ಪುಟ್ಟ ಅಂಗಡಿಗಳ ಮುಂದೆ ನಿಲ್ಲಿಸುವಾಗ ಸಮಸ್ಯೆ ಶುರುವಾಗುತ್ತದೆ. ಕೆಲ ಅಂಗಡಿಗಳಲ್ಲಿ ಒಬ್ಬ ಹುಡುಗ ಕುಳಿತಿರುತ್ತಾನೆ. ಅವನು ನೀವು ಗಾಡಿ ನಿಲ್ಲಿಸಿದ ತಕ್ಷಣ ಕೇಳುತ್ತಾನೆ. “ಈ ಅಂಗಡಿಯಲ್ಲಿ ಕೆಲಸಾನಾ?” ಅಂತ. “ಅಲ್ಲ” ಅಂದರೆ “ಹಾಗಾದ್ರೆ ಇಲ್ಲಿ ನಿಲ್ಲಿಸಬೇಡಿ” ಅಂತ ಆಕ್ಷೇಪ ತೆಗೆಯುತ್ತಾನೆ. ನಿಮಗೆ ಕೆಲಸವಿರುವ ಅಂಗಡಿ ಮುಂದೆ ಜಾಗವಿರುವುದಿಲ್ಲ. ದಿಕ್ಕೇ ತೋಚದಂತೆ ನೀವು ಚಡಪಡಿಸುತ್ತೀರಿ. ನನಗಂತೂ ಒಮ್ಮೆ ಮಾತಿನ ಚಕಮಕಿಯಾಯಿತು. ನಾನು ಸಿಟ್ಟಿನಲ್ಲಿ”ನಿನ್ನ ಅಂಗಡಿಯ ಜಾಗವಷ್ಟೇ ನಿನ್ನದು. ಮುಂದಿನ ಜಾಗ ಕಾರ್ಪೊರೇಷನ್ ಅವರದು. ಅಲ್ಲಿ ನಿಲ್ಸಲಿಕ್ಕೆ ನಿಂದೇನು ದೊಣ್ಣೆನಾಯಕನ ಅಪ್ಪಣೆ” ಅಂತ ಜಗಳ ಮಾಡಬೇಕಾಯಿತು.

ಇನ್ನು ಸಗಟು ವ್ಯಾಪಾರ ಕೇಂದ್ರಗಳ ಹತ್ತಿರವಂತೂ ವಾಹನಗಳ ಜಂಗುಳಿ ಹೇಳತೀರದು. ಅಲ್ಲಿ ಸರಕುಗಳನ್ನು ಸಾಗಿಸುವ ವಾಹನಗಳು, ತಳ್ಳುಗಾಡಿಗಳು, ಅಂಗಡಿಗಳವರ ವಾಹನಗಳು ಸೇರಿ ಇಡೀ ಜಾಗವನ್ನು ತುಂಬಿ ಬಿಟ್ಟಿರುತ್ತವೆ. ಎಂದಿನಿಂದಲೋ ಇದ್ದ ಆ ಮಾರುಕಟ್ಟೆಯ ರಸ್ತೆಗಳು ತುಂಬಾ ಚಿಕ್ಕದಾಗಿದ್ದು, ವಾಹನಗಳನ್ನು ನಿಲ್ಲಿಸಲು ಕಷ್ಟಪಡಬೇಕಾಗುತ್ತದೆ. ಅಲ್ಲಿಗೆ ಹೋಗಿಬಂದ ಗಾಡಿಗಳ ದೇಹಗಳ ಮೇಲೆ ತರಚು ಗಾಯಗಳು ಆಗದಿದ್ದರೆ ಆಶ್ಚರ್ಯ! ಆದರೆ ಸಮಾರಂಭಗಳಿಗೆ ಬೇಕಾದ ದೊಡ್ಡ ಮೊತ್ತದ ಸಾಮಾನುಗಳಿಗಾಗಿ ಅಲ್ಲಿಗೆ ಹೋಗಲೇಬೇಕು, ವಾಹನಗಳನ್ನಿಡಲು ಪರದಾಡಲೇ ಬೇಕು. ಇಷ್ಟು ಮೊತ್ತದಲ್ಲಿ ನೀವು ಬ್ಲಿಂಕಿಟ್, ಬಿಗ್ ಬಾಸ್ಕಟ್ ಅಂಥಾ ಡೆಲಿವರಿ ಯವರಿಗೆ ಸಹ ಹೇಳಿ ಉಪಯೋಗವಿರುವುದಿಲ್ಲ. ಖುದ್ದು ಹೋಗಿ ತಂದುಕೊಳ್ಳಬೇಕು, ಬವಣೆ ಅನುಭವಿಸಬೇಕು.

ಇನ್ನು ಡಿ-ಮಾರ್ಟ್, ಮೋರ್ ಮಾರ್ಕೆಟ್, ಜಿಯೋ ಮಾರ್ಟ್ ಗಳಂಥ ಮಾರ್ಟ್ ಗಳು ತುಂಬಾ ಜನ ಸಂಖ್ಯೆಯಿರುವ ಜಾಗದಲ್ಲಿ ತಮ್ಮ ವ್ಯಾಪಾರದ ಸಲುವಾಗಿ ತೆಗೆದುಬಿಡುತ್ತವೆ. ಅವರ ದೊಡ್ಡ ವ್ಯಾಪಾರ ಕಟ್ಟಡದ ಯಾವುದೋ ಒಂದು ಚಿಕ್ಕ ಮೂಲೆಯಲ್ಲಿ ಪಾರ್ಕಿಂಗ್ ಗಾಗಿ ಜಾಗ ಬಿಡುತ್ತವೆ. ತಿಂಗಳ ಮೊದಲವಾರದಲ್ಲಿ ಅಲ್ಲಿಗೆ ಬರುವ ಗಿರಾಕಿಗಳು ತರುವ ವಾಹನಗಳ ಲೆಕ್ಕಕ್ಕೆ ಆ ಜಾಗ ಯಾವ ಮಾತ್ರವೂ ಸಾಕಾಗದೆ, ರಸ್ತೆಗಳ ಮೇಲೆ ವಾಹನಗಳು ಹರಿದು ಬಂದು ಟ್ರಾಫಿಕ್ಕಿಗೆ ತೊಂದರೆ ಮಾಡುತ್ತವೆ. ಒಂದು ಮಾರ್ಟ್ ತೆಗೆಯುವಾಗ ಅದಕ್ಕೆ ಅನುಮತಿ ಕೊಡುವ ಸ್ಥಳೀಯ ಆಡಳಿತ ವ್ಯವಸ್ಥೆ ಕನಿಷ್ಠ ಪಕ್ಷ ಇಷ್ಟು ವಾಹನಗಳಿಗೆ ತಮ್ಮ ಕಾಂಪೌಂಡಿನಲ್ಲಿ ಇರಿಸಲು ಜಾಗ ಇದ್ದರೆ ಮಾತ್ರ ಅನುಮತಿ ಕೊಡುವುದು ಎಂದು ನಿಯಮ ಮಾಡಬೇಕು. ಇಲ್ಲದಿದ್ದಲಿ ರಸ್ತೆ ಮೇಲೆ ವಾಹನಗಳ ಜಾತರೆ, ಅದರಿಂದ ಎಲ್ಲರಿಗೂ ತೊಂದರೆ
ಸರಿ ಮತ್ತೆ ನೋಪಾರ್ಕಿಂಗ್ ಸಂಗತಿಗೆ ಬರೋಣ. ರಸ್ತೆಗಳಲ್ಲಿ ಅಲ್ಲಲ್ಲಿ ಈ ಶೀರ್ಷಿಕೆ ಹೊತ್ತ ಬೋರ್ಡನ್ನು ಹಾಕಿರುತ್ತಾರೆ. ಕೇಸುಗಳು ಜಾಸ್ತಿ ಸಿಗಲಿ ಅಂತ ಟ್ರಾಫಿಕ್ ಪೋಲೀಸರು ಅದೆಲ್ಲೋ ಕಾಣದ ಹಾಗೆ ಹಾಕಿರುತ್ತಾರೆ ಅಂತ ನನ್ನ ಅನುಮಾನ. ನಾವು ಯಾವುದೋ ಅರ್ಜೆಂಟ್ ಕೆಲಸಕ್ಕೆ ಆ ರೋಡ್ಡಲ್ಲಿ ಹೂಗುತ್ತಾ ಏನೋ ನೆನಪಾಗಿ ಆ ಬೋರ್ಡಿನ ಮುಂದುಗಡೇನೇ ನಿಲ್ಲಿಸಿರುತ್ತೇವೆ. ವಾಪಸ್ ಬರುವಾಗ ನಿಮಗೆ ಕಾದಿರುತ್ತದೆ, ನಿಮ್ಮ ವಾಹನದ ಗಾಲಿಗೊಂದು ಬೀಗ, ಕಾರಿನ ವೈಪರ್ ಗೆ ಉಂದು ಚೀಟಿ. ಅದರಲ್ಲಿ ಬೀಗ ಹಾಕಿದವರ ಮೊಬೈಲ್ ನಂಬರ್. ಕರೆ ಮಾಡಿದಾಗ ರಾಂಗ್ ಸೈಡಲ್ಲೇ ಬಂದು ನಿಮಗೆ ನಿಮ್ಮ ತಪ್ಪನ್ನ ವಿವರಿಸಿ, ನಿಯತ್ತಿನವನಾದರೆ ರಶೀತಿ ಕೊಟ್ಟು ಹಣ ಪಡೆದು, ಅಥವಾ ಕಮ್ಮಿ ಹಣಕ್ಕೆ ಸೆಟ್ಲ್ ಮಾಡಿಕೊಂಡು ಜೇಬು ತುಂಬಿಸಿಕೊಳ್ಳುವ ಬಿಳಿ ಉಡುಪಿನ ಟ್ರಾಫಿಕ್ ಪೋಲೀಸಣ್ಣ. ಹೀಗೆ ನಾನು ಎರಡು ಮೂರು ಸಲ ಸಿಕ್ಕಿ ಬಿದ್ದಿದ್ದೇನೆ. ಏನು ಮಾಡೋದು? ನಾನು ಕೊಳ್ಳಬೇಕೆಂದು ನಿಲ್ಲಿಸಿದ ಸಾಮಾನಿನ ಬೆಲೆಗೆ ಈ ಚಲಾನಿನ ಅಥವಾ ಅವನಿಗೆ ಕೊಟ್ಟ ಹಣವನ್ನು ಸೇರಿಸಿ ಅದರ ಬೆಲೆ ಇಷ್ಟಾಯಿತೆಂದು ನಿಟ್ಟುಸಿರು ಬಿಡುವುದೇ ಮಾಡಿದ್ದೇನೆ.

ಕೆಲ ಮನೆಗಳ ಗೇಟುಗಳ ಎದುರಲ್ಲಿ “ಗೇಟಿನ ಮುಂದೆ ವಾಹನ ನಿಲ್ಲಿಸಬೇಡಿ” ಅಂತ ಬೋರ್ಡು ಹಾಕಿರುವುದು ಕಂಡು ಬರುತ್ತದೆ. ಹಾಗೆ ಎಲ್ಲರೂ ಹಾಕಿರುವುದಿಲ್ಲ. ಅದರರ್ಥ ಅಲ್ಲಿ ನಿಲ್ಲಿಸಬಹುದು ಅಂತಲ್ಲ. ಒಮ್ಮೆ ನಾನು ಇದೇ ರೀತಿ ಗೇಟಿನ ಮುಂದೆ ನಿಲ್ಲಿಸಿ ವಾಪಸ್ ಬರುವಾಗ ಆ ಮನೆ ಯಜಮಾನರಿಂದ ಸರಿ ಬೈಗುಳ ತಿಂದದ್ದಿದೆ. ಪಾಪ ! ಯಾವುದೋ ಅರ್ಜೆಂಟ್ ಕೆಲಸಕ್ಕೆ ಕಾರು ತೆಗೆಯಬೇಕಿತ್ತಂತೆ. ನನ್ನ ಕಾರು ಅಡ್ಡ ಇದ್ದದ್ದರಿಂದ ಅವರಿಗೆ ತಡವಾಗಿ ಹೊಟ್ಟೆ ಉರಿದುಹೋಗಿದೆ ಅವರಿಗೆ. ಹೀಗೆ ಒಬ್ಬರ ಗೇಟಿಗೆ ಬೋರ್ಡು ಹಾಕಿದ್ದು ಕಂಡಿತ್ತು. “ನೊ ಪಾರ್ಕಿಂಗ್, ನಾಟ್ ೫ ಮಿನಿಟ್ಸ್, ನಾಟ್ ೩೦ ಸೆಕೆಂಡ್ಸ್, ನಾಟೆಟಾಲ್!!” ಅಂತ.. ಅದೆಷ್ಟು ಕಷ್ಟ ಪಟ್ಟಿರಬೇಕು ಅವರು ಅಲ್ಲವೇ !

ಅಪಾರ್ಟ್ಮೆಂಟುಗಳ ಗೇಟುಗಳ ಎದುರು ನಿಲ್ಲಿಸಲು ಹೋದಾಗ ವಾಚ್ಮನ್ ಬಂದು ನಿಮ್ಮನ್ನ ತಡೆಗಟ್ಟುತ್ತಾನೆ. ನೀವು ಅದೇ ಅಪಾರ್ಟ್ಮೆಂಟಿನಲ್ಲಿ ಕೆಲಸವಿದ್ದು ಒಳಗೆ ಹೋದಾಗ ಅವನು ನಿಮ್ಮನ್ನ ವಿಜಿಟರ್ಸ್ ಪಾರ್ಕಿಂಗ್ ತೋರಿಸುತ್ತಾನೆ. ಅಲ್ಲಿ ನೀವು ಸರಾಗ ಇಡಬಹುದು. ಇದು ದೊಡ್ಡ ದೊಡ್ಡ ಅಪಾರ್ಟ್ಮೆಂಟುಗಳಲ್ಲಿ. ಚಿಕ್ಕವುಗಳಲ್ಲಿ ನೀವು ಹೋಗುತ್ತಿರುವ ಫ್ಲಾಟಿನ ಯಜಮಾನರ ಪಾರ್ಕಿಂಗ್ ಜಾಗದಲ್ಲಿ ಇಡಬಹುದು. ಈ ಯಜಮಾನರುಗಳೆಲ್ಲರಿಗೂ ಬೇಸ್ಮ್ಂಟಲ್ಲಿ ಪಾರ್ಕಿಂಗ್ ಜಾಗವಿರುತ್ತವೆ. ಆದರೆ ಅವರು ತಮ್ಮ ಆಲಸಿತನದಿಂದ ಅವನ್ನು ವಿಜಿಟರ್ಸ್ ಪಾರ್ಕಿಂಗ್ ಗಳಲ್ಲಿ ಬಿಟ್ಟಿರುತ್ತಾರೆ. ಆಗ ಬಂದವರಿಗೆ ಜಾಗವಿರುವುದಿಲ್ಲ. ಇದೊಂದು ತಾಪತ್ರಯ ! ನಾವು ತೊಗೊಂಡು ಹೋದ ಗಾಡಿ ಎಲ್ಲಿಡಬೇಕೋ ಗೊತ್ತಾಗುವುದಿಲ್ಲ.

ಮತ್ತೊಂದು ಸೋಜಿಗದ ಪಾರ್ಕಿಂಗ್ ಪದ್ಧತಿ! ಸರಿ ಸಂಖ್ಯೆಯ ತಾರೀಕುಗಳಲ್ಲಿ ಒಂದು ಕಡೆ, ಬೆಸಿ ಸಂಖ್ಯೆಯ ತಾರೀಕುಗಳಲ್ಲಿ ಮತ್ತೊಂದು ಕಡೆ ನಿಲ್ಲಿಸಲು ಸೂಚಿಸುವ ಪದ್ದತಿ ಇದೆ. ಆಗ ಎಲ್ಲ ವಾಹನಗಳೂ ಆ ದಿಕ್ಕಿನಲ್ಲಿ ತಮ್ಮ ಎದುರಿನಲ್ಲಿರುವ ಅಂಗಡಿಗಳನ್ನು ನೋಡುವಂತೆ ಕಾಣುತ್ತದೆ. ಇದು ಸಾಧಾರಣವಾಗಿ ವಾಹನ ನಿಬಿಡ ಪ್ರದೇಶಗಳಲ್ಲಿ ಒಪ್ಪಿರುವ ಪದ್ಧತಿಯೇ ಆಗಿದೆ.
ಈ ಪಾರ್ಕಿಂಗ್ ನ ಮತ್ತೊಂದು ಮುಖ, ಪಾರ್ಕ್ ಮಾಡಿರುವ ನಿಮ್ಮ ಗಾಡಿಗಳನ್ನು ತೆಕ್ಕೊಳ್ಳೋದು. ನೀವು ತುಂಬಾ ಶಿಸ್ತಿನ ಮನುಷ್ಯರು. ಗಾಡಿಯನ್ನು ಸಾಲಿನಲ್ಲೇ ನಿಲ್ಸಿದ್ದೀರಿ. ಆದರೆ ನೀವು ಪಾರ್ಕ್ ಮಾಡಿ ಹೋದ ಮೇಲೆ ಆ ಸಾಲಿನ ಹಿಂದೆ ಮತ್ತೊಂದು ಸಾಲು ಆರಂಭವಾಗುತ್ತದೆ. ನೀವು ನಿಮ್ಮ ಕೆಲಸ ಮುಗಿಸಿ ನಿಮ್ಮ ಗಾಡಿಯನ್ನು ತೆಗೆಯಲು ಪ್ರಯತ್ನಿಸುತ್ತೀರಿ. ತುಂಬಾ ಕಷ್ಟವಾಗುತ್ತದೆ. ನಿಮ್ಮ ಅದೃಷ್ಟಕ್ಕೆ ಅಲ್ಲಿ ಪಾರ್ಕಿಂಗನ್ನು ನೋಡಿಕೊಳ್ಳುವ ಸೆಕ್ಯುರಿಟಿಯವನು ಇದ್ದು ಹಿಂದೆ ನಿಲ್ಲಿಸಿದ್ದ ಗಾಡಿಗಳನ್ನು ಆಚೆ ಈಚೆ ಸರಿಸಿ ನಿಮಗೆ ಜಾಗ ಮಾಡಿಕೊಟ್ಟಲ್ಲಿ ನೀವು ಬಚಾವಾದಿರಿ. ಇಲ್ಲದಿದ್ದರೆ ನೀವು “ಕಿಂ ಕರ್ತವ್ಯ ವಿಮೂಢಂ” ಆಗಿ ನಿಲ್ಲಬೇಕಾಗುತ್ತದೆ. ದೊಡ್ಡ ದೊಡ್ಡ ಸಮಾರಂಭಗಳಲ್ಲಿ, ಸಭೆಗಳಲ್ಲಿ ಈ ರೀತಿ ಗಾಡಿಗಳನ್ನ ತೆಗೆಯಲು ಕಷ್ಟಪಡುವುದು ಕಾಣುತ್ತದೆ.
ದೊಡ್ಡ ದೊಡ್ಡ ಹೋಟೆಲ್ ಗಳಿಗೆ ನಿಮ್ಮ ಕಚೇರಿಯ ಕೆಲಸವಾಗಿ ಯಾರನ್ನೋ ಭೇಟಿಯಾಗಲು ನೀವೇನಾದರೂ ದ್ವಿಚಕ್ರವಾಹನಗಳಲ್ಲಿ ಹೋದಲ್ಲಿ, ಅಲ್ಲಿರುವ ಗಾರ್ಡು ಮೂಗು ಮುರಿಯುತ್ತ ನಿಮ್ಮನ್ನು ನೋಡಿ, ಒಂದು ಮೂಲೆ ತೋರಿಸುತ್ತಾನೆ ಅಲ್ಲಿ ಮಡಗಿ” ಎನ್ನುತ್ತ. ಅವನ ಹೋಟೆಲ್ಲಿನ ನಕ್ಷತ್ರಗಳ ಸಲುವಾಗಿ ನಾವು ಕಾರು ಕೊಳ್ಳಲು ಆಗುತ್ತದಾ?

ಗಾಡಿ ಕೊಂಡುಕೊಳ್ಳೋದೇ ಒಂದು ಕನಸು. ಅದು ಈಗ ಸುಲಭದಲ್ಲಿ ಸಿಗುವ ಫೈನಾನ್ಸ್ ನಿಂದ ಗಾಡಿಯೇನೋ ಸಿಗುತ್ತದೆ. ಆದರೆ ಅದನ್ನಿಡಲು ಪಾರ್ಕಿಂಗ್ ಜಾಗ ಕೊಡಿಸುವ ಯಾವ ಏಜನ್ಸಿಯೂ ಇಲ್ಲ. ಬರ್ತಾ ಬರ್ತಾ ಭೂಮಿ ಸಿಗೋದೇ ಕಮ್ಮಿಯಾಗುತ್ತಿರುವಾಗ ಈ ಪಾರ್ಕಿಂಗ್ ಕಷ್ಟಗಳು ನಿರಂತರ ಮತ್ತು ಚಿರಂತನ ಅಂತ ಕಾಣುತ್ತೆ! ಏನಂತೀರಿ?