ಇತ್ತೀಚಿನ ಬರಹಗಳು: ಸುಚಿತ್ರಾ ಹೆಗಡೆ (ಎಲ್ಲವನ್ನು ಓದಿ)
- ಪತಿತ ಪಾವನದಾಟ ಸಾಕು - ಮೇ 30, 2021
- ನಿಮಗ್ನ… - ಡಿಸಂಬರ್ 31, 2020
ಯುಗಯುಗಗಳಿಂದ ಮಿಸುಕದೆ ಮಲಗಿ
ನನ್ನೊಳಗೆ ನಾ ಬಿದ್ದು ಜಡವಾಗಿ
ಮುದ್ದೆಯಾಗಿದೆ ಮೈಮನ
ಚಳಿ ಬಿಸಿಲು ಮಳೆಯ ಮನವಿಗೆ
ಕಾಲನ ಪಾಚಿಯ ಮುಸುಕು ಸರಿದಿಲ್ಲ
ಯೋಗನಿದ್ರೆಯೋ ಮಾಯಾವಿದ್ಯೆಯೋ
ಶಾಪಗ್ರಸ್ತ ಮೈಮನಕೆ ದೀರ್ಘ ಮಂಪರು
ತಣ್ಣಗೆ ಸುಳಿವ ಗಾಳಿ ಕಿವಿಯಲಿ ಪಿಸುಗುಡುತ್ತದೆ
ಪ್ರಾಣವಾಯುವಲ್ಲ…ನಿನಗೆ ಬೇಕು ಚಲನೆ
ನಿನ್ನೊಳಗಿನ ಮರಗಟ್ಟಿದ ಅಂಗಾಂಗಗಳಿಗೆ
ಚುರುಗುಡುವ ಜೀವಂತಿಕೆಯ ಸಂವೇದನೆ
ನಿಶ್ಚಲ ದೇಹದಲಿ ನಿಜದರಿವಿನ ಆವಾಹನೆ
ಹೊರಗಿನ ರಾಮನಿಗೆ ಕಾಯುವ ಸಹನೆ
ಅದುಮಿಕೊಂಡಷ್ಟೂ ಭುಗಿಲೇಳುವ ವೇದನೆ
ಸಾಕು, ಎದ್ದೇಳು, ಮೈ ಕೊಡವಿ
ನಿನ್ನ ಕಾಲು ನಿನ್ನ ನೆಲ ನಿನ್ನ ಛಲ ನಿನ್ನ ಬಲ
ಕೊಡವಿಕೋ ತಡವಿಕೋ ನಿನ್ನಂತರಂಗವ
ಹೊಸ ಆತ್ಮಬಲದ ನೀರು ಚಿಮುಕಿಸು
ಹಳೆ(ಣೆ) ಬರಹವ ಅಳಿಸಿಬಿಡು
ಪತಿತ ಪಾವನದಾಟದ ಕಥೆಯ ನಾಯಕಿ
ಹುಟ್ಟದಿರಲಿ ಮತ್ತೆ ಮತ್ತೆ…
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ