- ಕನ್ನಡ ಕವಿಗಳಲ್ಲಿ ಪ್ರಜ್ವಲಿಸುತ್ತಿರುವ ದೀಪಮಾಲೆ - ಅಕ್ಟೋಬರ್ 27, 2024
- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
“ಬದುಕು ಹಸನಾಗಬೇಕೆಂದರೆ ಸಾಹಿತ್ಯವೇ ಅತ್ಯಂತ ಅಗತ್ಯ” ಎನ್ನುತ್ತಿದ್ದ “ಮಳಲಿ ಸರ್ ಇನ್ನಿಲ್ಲ” ಎಂದರೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ. ಹಾಸನದ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಸಂಯೋಜಕರೂ ಪ್ರಾಧ್ಯಾಪಕರೂ ಆಗಿದ್ದ ಶ್ರೀಯುತ ಮಳಲಿ ವಸಂತ್ ಕುಮಾರ್ ಅವರ ವಿದ್ಯಾರ್ಥಿನಿ ನಾನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.
1999- 2000 ದ ಶೈಕ್ಷಣಿಕ ಸಾಲಿನಲ್ಲಿ ನಮಗೆ ಅಂದರೆ ಮೊದಲ ಎಂ.ಎ ವಿದ್ಯಾರ್ಥಿಗಳಿಗೆ ‘ಕುಮಾರವ್ಯಾಸ ಭಾರತ’ವೇ ಪಠ್ಯವಾಗಿತ್ತು. “ಶ್ರೀವನತೆಯರಸನೆ ವಿಮಲ ರಾಜೀವ ಪೀಠನ ಪಿತನೆ ಜಗಕತಿಪಾವನನೆ ಸನಕಾದಿ ಸಜ್ಜನನಿಕರ ದಾತಾರ || ಎಂದು ಗದುಗಿನ ಭಾರತದ ಪೀಠಿಕಾ ಸಂಧಿಯ ಮೊದಲನೆ ಪದ್ಯದೊಂದಿಗೆ ಪ್ರಾರಂಭಿಸಿ “ತಿಳಿಯಹೇಳುವೆ ಕೃಷ್ಣ ಕಥೆಯ ಇಳೆಯ ಜಾಣರು ಮೆಚ್ಚುವಂದದಿ” ಎನ್ನುತ್ತಾ ಮಳಲಿ ಸರ್ ಉಪನ್ಯಾಸ ಆರಂಭಿಸಿದರೆ ಮೈಯೆಲ್ಲಾ ಕಿವಿಯಾಗಿ ಕಣ್ಣಾಗಿ ಕೇಳುತ್ತಿದ್ದೆವು. ನಿರಂತರ ಎರಡು ಎರಡೂವರೆ ಗಂಟೆಗಳವರೆಗೂ ನಿರ್ಗಳವಾಗಿ ವಿರಮಿಸದೆ ಉಪನ್ಯಾಸ ಮಾಡುತ್ತಿದ್ದರು. ಅರ್ಥ , ಅಲಂಕಾರಗಳನ್ನು ಹೇಳುತ್ತಾ , ಪದ್ಯಗಳಲ್ಲಿ ಬರುತ್ತಿದ್ದ ಪದಗಳನ್ನು ವಾಕ್ಯಗಳನ್ನು ಮೀಮಾಂಸೆಗೆ ಕರಾರುವಕ್ಕಾಗಿ ಅನ್ವಯಿಸಿ ಹೇಳುತ್ತಿದ್ದ ಮಳಲಿ ಸರ್ ಕನ್ನಡದ ಪ್ರಮುಖ ವಿದ್ವಾಂಸರಲ್ಲೊಬ್ಬರು.
ಕುಮಾರವ್ಯಾಸ ಭಾರತದ ಯಾವುದೇ ಭಾಗವನ್ನು ಯಾವಾಗಲಾದರೂ ಯಾವುದೇ ಪೂರ್ವ ತಯಾರಿ ಇಲ್ಲದೆ ಕೃತಿಯ ಹೊರತಾಗಿಯೂ ಗಂಟೆಗಟ್ಟಲೆ ಉಪನ್ಯಾಸ ಕೊಡುವ ಪಾಂಡಿತ್ಯ ಮಳಲಿ ಸರ್ ಅವರಲ್ಲಿತ್ತು. ! ಗ್ರಾಮ್ಯ ಸೊಗಡಿನ, ಪಾಂಡಿತ್ಯ ತುಂಬಿದ ವಿಶಿಷ್ಟ ಮಾತಿನ ಶೈಲಿ ಇವರದಾಗಿತ್ತು. ಅಂದ ಹಾಗೆ ಮಳಲಿ ಸರ್ ಒಬ್ಬ ಜಾನಪದ ವಿದ್ವಾಂಸರೂ ಹೌದು! ‘ಮಳಲಿ ಗಿಡ್ಡಮ್ಮ’ ಇವರ ಮಹತ್ವದ ಕೃತಿ. ಕುವೆಂಪುರವರ ಆಪ್ತ ಶಿಷ್ಯಬಳಗದಲ್ಲಿ ಇವರೂ ಒಬ್ಬರಾಗಿದ್ದರೆಂಬುದೂ ಇನ್ನೂ ವಿಶೇಷ.
‘ತಾನಾಜಿ’ ಕುವೆಂಪು ಅವರ ಕಥನ ಗೀತೆಗಳಲ್ಲಿ ಒಂದು. ( ತಾನಾಜಿ ಒಬ್ಬ ಮರಾಠ ದಂಡನಾಯಕ ಈತನ ಹೋರಾಟವೆ ಇಲ್ಲಿ ಗೀತೆಯಾಗಿದೆ. ಶಿವಾಜಿಯ ಪರವಾಗಿ ಉದಯಭಾನು ರಾಥೋಡನ ವಿರುದ್ಧ ಸಿಂಹಗಢದಲ್ಲಿ. ತಾನಾಜಿ ಜಿ ಮತ್ತು ನೇತಾಜಿ ಹೊರಾಡುತ್ತಾರೆ) “ಸಮರ ಧ್ವನಿಯನು ಕೇಳುತ ಕೇಳುತ ಕುದಿದನು ಮನದಲಿ ಸೂರ್ಯಾಜಿ! ಅಣ್ಣನಲ್ಲವೆ ತಾನಾಜಿ? ……. ಕರವಾಲವ ತುಡುತುಡುಕುತ ಕರದಲಿ ಕುದಿದನು ಮನದಲಿ ಸುರ್ಯಾಜಿ ! ಅಣ್ಣನಲ್ಲವೆ ತಾನಾಜಿ?” ಎಂದು ಬಹುತೇಕ ಸಂದರ್ಭಗಳಲ್ಲಿ ಉಲ್ಲೇಖಿಸುತ್ತಿದ್ದ ಈ ಕಥನ ಗೀತೆಯ ಸಾಲುಗಳು ಇಷ್ಟು ವರ್ಷಗಳಾದರೂ ಕೇಳಿಯೇ ನೆನಪಿವೆ. ಅಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಉಪನ್ಯಾಸ ನೀಡಿದ ಸರ್ ನಿಮಗೆ ಧನ್ಯವಾದಗಳು.
“ಹಸುರತ್ತಲ್! ಹಸುರಿತ್ತಲ್! ಹಸುರೆತ್ತಲ್! ಕಡಲಿನಲಿ ಹಸುರ್ಗಟ್ಟಿತೋ ಕವಿಯಾತ್ಮ” ಎಂದು ಪ್ರಕೃತಿ ಕವಿ ಕುವೆಂಪರವರನ್ನು ರಾಮಾಯಣದರ್ಶನಂ ಕೃತಿಯ ಮೂಲಕ ಅನುಸಂಧಾನಿಸಿದ ಮಳಲಿ ಸರ್ ಇನ್ನು ನೆನಪು ಮಾತ್ರ!
ಯಾವುದೇ ದಾಕ್ಷಿಣ್ಯಕ್ಕೂ ಒಳಗಾಗದೆ ಅನ್ನಿಸಿದ್ದನ್ನ ನೇರವಾಗಿ ನಿರ್ಭಿಡೆಯಿಂದ ಹೇಳಿ ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದುತ್ತಿದ್ದ,ತರಗತಿ ಮಟ್ಟದ ವಿಚಾರ ಸಂಕಿರಣಗಳಲ್ಲೂ ನಾನೊಬ್ಬ ಪ್ರೊಫೆಸರ್ ಅನ್ನುವ ಅಹಮಿಕೆ ತೊಡೆದು ಎಲ್ಲವನ್ನೂ ಸಾವಧಾನವಾಗಿ ಕೇಳಿ ತಪ್ಪುಗಳನ್ನು ಅಲ್ಲಿಯೇ ನಯವಾಗಿ ತಿದ್ದುತ್ತಿದ್ದ ಮಳಲಿ ಸರ್ ಅವರ ರೀತಿ ಇಂದಿಗೂ ಕಣ್ಣಿಗೆ ಕಟ್ಟುವಂತಿದೆ. ಕುವೆಂಪು ಚಿತ್ರಿಸಿರುವ ‘ಶೂದ್ರತಪಸ್ವಿ’ ನಾಟಕ ಕುರಿತನನ್ನ ಪ್ರಬಂಧ ಮಂಡನೆ ಸಂದರ್ಭದಲ್ಲೂ ಮಳಲಿ ಸರ್ ಇದ್ದರು ನನ್ನ ಪ್ರಬಂಧಕ್ಕೆ ಮೆಚ್ಚುಗೆ ಸೂಚಿಸಿ ಶುಭಾಶಯಗಳನ್ನೂ ಹೇಳಿದ್ದರು. ಎಷ್ಟೇ ವರ್ಷಗಳಾಗಿದ್ದರೂ ತಮ್ಮ ವಿದ್ಯಾರ್ಥಿಗಳನ್ನು ಎಷ್ಟೋ ಜನರ ನಡುವಿದ್ದರು ಗುರುತಿಸಿ ಮಾತನಾಡಿಸುತ್ತಿದ್ದ ಅವರ ಮಾತುಗಳನ್ನು ಕಳೆದುಕೊಂಡ ಭಾವ ಅವರ ಅಪಾರ ಶಿಷ್ಯವರ್ಗಕ್ಕಿದೆ ಎನ್ನುತ್ತೇನೆ.
“ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ ಸಿಡಿಲ್ಮಿಂಚಿಗೆ ನಡುಗಿತ್ತಿದೆ ಪರ್ವತ ವನಧಾತ್ರಿ ತುದಿಯಿಲ್ಲದೆ ಮೊದಲಿಲ್ಲದೆ “{ಪಕ್ಷಿಕಾಶಿ ಕವನ ಸಂಕಲನದ ವರ್ಷಭೈರವ ಕವಿತೆ} ಎಂದು ಧ್ವನಿ ಪೂರ್ಣವಾಗಿ ಗಟ್ಟಿಯಾಗಿ ಪುನರುಚ್ಛರಿಸಿ ಹೇಳುತ್ತಿದ್ದ ಮಳಲಿ ಸರ್ ಧ್ವನಿ “ಅವರಿಲ್ಲ” ಎಂದು ತಿಳಿದಾಗಿನಿಂದ ಮತ್ತೆ, ಮತ್ತೆ ಕೇಳಿಸುತ್ತಿದೆ ಮನಸ್ಸು ಭಾರವಾಗುತ್ತಿದೆ. ತುದಿಯಿಲ್ಲದ ಮೊದಲಿಲ್ಲದ ಹುಟ್ಟು ಸಾವಿನ ಹಾದಿಯಲ್ಲಿ ಲಯರುದ್ರನಿಗೆ ಕಿವಿಗೊಡುವ ,ಇಷ್ಟು ಬೇಗ ಲೀನವಾಗುವ ಆತುರವೇನಿತ್ತು? ಎಂಬ ಪ್ರಶ್ನೆಯೂ ಕಾಡುತ್ತಿದೆ.ನಿಮ್ಮ ಅಪಾರ ಶಿಷ್ಯ ವರ್ಗದ ಪರವಾಗಿ ನಿಮಗೆ ಅಂತಿಮ ವಿದಾಯ ಸರ್! ನಮಸ್ಕಾರ ಹೋಗಿ ಬನ್ನಿ!!
ಸುಮಾ ವೀಣಾ
ಹೆಚ್ಚಿನ ಬರಹಗಳಿಗಾಗಿ
ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು
ದಲಿತ ಬಂಡಾಯದ ಗಟ್ಟಿ ಧ್ವನಿ ಡಾ. ಸಿದ್ಧಲಿಂಗಯ್ಯ
ಮಿಂಚಿ ಹೋಗುವ ಮುನ್ನ…..