ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಯುದ್ಧವಿರೋಧಿ ಯುವಸಂಧಾನಕಿ ಅನಲೆ

ಸುಮಾ ವೀಣಾ

ಜಗತ್ತು ಇಂದಿಗೆ ಸಂಘರ್ಷದೊಂದಿಗೆ ಹೆಜ್ಜೆಯಿಡುತ್ತಿದೆ . ರಷ್ಯಾ ಮತ್ತು ಉಕ್ರೇನಿಗೆ ಇಂದು ಯುದ್ಧಕಾಲವಾಗಿದೆ. ನಿಜ ಅರ್ಥದಲ್ಲಿ ಅವರೇ ಕಷ್ಟಕ್ಕೆ ನೇರ ಭಾಗಿಗಳು. ಬೆಂಕಿ ದೂರವಿದ್ದರೂ ಆದರ ಕರಿನೆರಳು ಬಹುದೂರದವರೆಗೂ ಆವರಿಸುವಂತೆ ಪರೋಕ್ಷವಾಗಿ ನಾವೂ ಕೂಡ ಭಾಗಿಗಳಾಗುತ್ತಿದ್ದೇವೆ (ಪೆಟ್ರೋಲ್,ಚಿನ್ನದ ದರದ ಏರಿಕೆ ,ಅಡುಗೆ ತೈಲದರ ಏರಿಕೆ ಇತ್ಯಾದಿಗಳನ್ನು ಗಮನಿಸಿ) ಅನ್ನಿಸುತ್ತಿದೆ. ಯುದ್ಧಗಳು ಮಾನವ ಲೋಕದ ಮಾಯದ ಗಾಯಗಳು. ಅಹಮಿಕೆಯ ಕಾರಣಕ್ಕೆ ನಡೆದ ಒಂದೊಂದು ಯುದ್ಧಗಳೂ ಒಂದೊಂದು ಬೃಹತ್ ವೃಣವೇ. . ಈ ಯುದ್ಧದ ಸಂದರ್ಭದಲ್ಲಿ ಸಿಲುಕಿರುವ ಭಾರತೀಯನೊಬ್ಬನನ್ನು ಸ್ವದೇಶಕ್ಕೆ ಕರೆತರಲು ಆತನನ್ನು ಕರೆದರೆ ಆತ ಒಪ್ಪದೆ ‘ನನ್ನ ಮನೆಯ ಮಾಲೀಕ ಯುದ್ಧಕ್ಕೆ ತೆರಳಿದ್ದಾನೆ ಅವನ ಮಕ್ಕಳನ್ನು ಜೋಪಾನ ಮಾಡುವ ಜವಾಬ್ದಾರಿ ನನ್ನದು’ ಎಂದು ಹೇಳುವ ಯುವ ,ಮನಸ್ಸು ಮಾನವತೆಯ ಶ್ರೇಷ್ಟತೆಯನ್ನು ಸಾಬೀತು ಮಾಡಿದೆ . ಇಂಥ ಮನಸ್ಸುಗಳು ಪರಂಪರೆಯಿಂದಲೂ ನಮ್ಮ ನಡುವಿವೆ. ರಾಮಾಯಣದಲ್ಲಿ ಕ್ವಚಿತ್ತಾಗಿ ಬಂದು ಹೋಗುವ ಅನಲೆ ವಿಭೀಷಣನ ಮಗಳು. ಆ ಕಾಲದಲ್ಲಿಯೇ ಯುದ್ಧ ನಿಲ್ಲಿಸುವ ಪ್ರೇರಕ ಶಕ್ತಿಯಾಗಿ ದುಡಿಯುತ್ತಾಳೆ ಆದರೆ ಸೋಲುತ್ತಾಳೆ.

ರಾಷ್ಟ್ರಕವಿ ಕುವೆಂಪುರವರ ‘ಶ್ರೀ ರಾಮಾಯಣ ದರ್ಶನಂ’ನ ಲಂಕಾ ಸಂಪುಟದ ಎಂಟನೆಯ ಸಂಚಿಕೆ ‘ನಿನ್ನಮಗಳಲ್ತೆನ್ನವಳ್ ಅನಲೆ’! ಹಾಗು ಶ್ರೀ ಸಂಪುಟದ ಮೂರನೆ ಸಂಚಿಕೆ ‘ದೂರಮಿರದಿನ್ ಸುಗತಿ!’ ಎಂಬ ಅಧ್ಯಾಯಗಳಲ್ಲಿ ಲೋಕೋತ್ತರ ಚಿಂತನೆ ಹೊಂದಿದ್ದ ಇಂದಿನ ಯುವ ಮನಸ್ಸುಗಳಿಗೂ ಸ್ಪೂರ್ತಿಯಾಗಬಲ್ಲ ಅನಲೆಯನ್ನು ನೋಡಬಹುದು.
ಸಹೋದರನ ಅಂತಃಸ್ಥಿತಿಯ ತಿಳಿದ ವಿಭೀಷಣ ತನ್ನ ಮನೆಗೆ ತೆರಳಿದ ಬಳಿಕ ಮಗಳು ಅನಲೆಗೆ ದೊಡ್ಡಯ್ಯ ಅಸ್ವಸ್ಥಗೊಂಡಿರುವ ವಿಚಾರವನ್ನು ತಿಳಿಸಿ ದೊಡ್ಡಮ್ಮನೊಂದಿಗೆ ಆತನ ಶುಶ್ರೂಷೆ ಮಾಡಲು ಕಳುಹಿಸುತ್ತಾನೆ. ಅಂಗೈಯಲ್ಲಿ ಜೀವ ಹಿಡಿದುಕೊಂಡು ಬೆಳಗಾದ ಕೂಡಲೆ ಮತ್ತೆ ತನ್ನಣ್ಣನನ್ನು ನೋಡಲು ಹೋಗುತ್ತಾನೆ.
ತಂದೆಯನ್ನು ಕಂಡ ಕೂಡಲೆ ಅನಲೆ ದೊಡ್ಡಯ್ಯ ಸೌಖ್ಯವಿಲ್ಲ ಎಂಬ ಸಂಜ್ಞೆ ಮಾಡುತ್ತಾಳೆ. ಅವಿಂಧ್ಯ ತಡೆದರೂ ಕೂಡ ಹೆಣ್ಣು ಹೆರದ ರಾವಣನ ಕಣ್ಮಣಿಯಾಗಿದ್ದ ಅನಲೆಯ ಹಿಂದೆ ವಿಭೀಷಣ ನಡೆಯುತ್ತಾನೆ. ಚಿಂತಾಜನಕ ಸ್ಥಿತಿಯಲ್ಲಿದ್ದ ರಾವಣ ಅನಲೆಯನ್ನು ಇಲ್ಲೇ ಇರುವೆಯಾ “ ಏನಿಲ್ಲಾ ನನ್ನನ್ನು ನೀನು ಅಗಲಿದಂತೆ ಕನಸಾಯಿತಕ್ಕ ಎಂದು ಬಿಕ್ಕಳಿಸುತ್ತಾ ತಮ್ಮನನ್ನು ಮಾತನಾಡಿಸುತ್ತಾನೆ. ವಿಭೀಷಣ ಮಗಳನ್ನು ಕರೆದುಕೊಂಡು ಹೊರಡುವಾಗ ಈ ಸುಕುಮಾರಿಯನ್ನು ಕರೆದೊಯ್ದು ನನ್ನನ್ನು ಕಷ್ಟಕ್ಕೀಡುಮಾಡಬೇಡ ಎಂದು ಭಿನ್ನವಿಸಿಕೊಂಡಾಗ ಮನ್ನಿಸು ತಂದೆಯೊಡನಿದ್ದು ಧರ್ಮವನ್ನು ಸೇವಿಸುತ್ತೇನೆ ಎಂದರೆ ಇಲ್ಲಿದ್ದೆ ಧರ್ಮವನ್ನು ಸೇವಿಸು ಎಂದು ಪ್ರತಿಯಾಗಿ ರಾವಣ ಹೇಳುತ್ತಾನೆ.
ಧರ್ಮಮಂ ಪೊರಗಟ್ಟಿ ಸೇವಿಪ್ಪುದೆಂತು?
‘ಧರ್ಮವನ್ನು ಹೊರಗಟ್ಟಿದ ಮೇಲೆ ಹೇಗೆ ಸೇವಿಸಲಿ ಎಂದು ಹಾಸ್ಯಕ್ಕೆಂಬಂತೆ ನುಡಿಯುತ್ತಾಳೆ.
ನನ್ನನ್ನರಂ ನಿನ್ನನ್ನರುಳಿಯೆ ಧರ್ಮಮುದ್ಧಾರಮಾದಪುದೇ?
ರಾವಣ ಪ್ರತಿಯಾಗಿ ನನ್ನಂಥವರನ್ನು ನಿನ್ನಂಥವರು ತೊರೆದರೆ ಧರ್ಮ ಉದ್ಧಾರವಾಗುವುದೇ ಎನ್ನುತ್ತಾನೆ. ದೊಡ್ಡಪ್ಪ ಮತ್ತು ಮಗಳ ಧರ್ಮದ ಕುರಿತ ಜಿಜ್ಞಾಸೆ ಇಲ್ಲಿ ಬಹಳ ಮಾರ್ಮಿಕವಾಗಿದೆ. ಧರ್ಮ ಕಲುಷಿತವಾಗಿದೆ ಎಂಬ ಸತ್ಯ ಓದುಗರೆದಿರು ತೆರೆದಿಡುವ ಕುವೆಂಪು ಇಲ್ಲಿ ಅದ್ವಿತೀಯರು.
ಶೋಕವನದಲ್ಲಿ ತ್ರಿಜಟೆ ಯುದ್ಧದಿಂದ ತನಗಾದ ನೋವನ್ನು ಸೀತೆಯಲ್ಲಿ ಆಕ್ರೋಶದಿಂದ ತೋಡಿಕೊಳ್ಳುತ್ತಾಳೆ. ‘ಕಳೆದ ರಾತ್ರಿ ಯುದ್ಧ ರಂಗದಿಂದ ತಂದೆ ಮರಳಲಿಲ್ಲ . ನನ್ನ ತಮ್ಮ ಅವನನ್ನು ಅರಸಿ ಹೊರಟಾಗ ತಲೆಯೊಡೆದ ಸ್ಥಿತಿಯಲ್ಲಿ ಬಿದ್ದಿದ್ದ ಅವನನ್ನು ಕರೆತರಲು ಪ್ರಯತ್ನಿಸಿದರೆ ಸೈನಿಕರು ತಡೆಯೊಡ್ಡಿ ಶವವನ್ನು ನೀಡಿಲ್ಲ. ಹಾಗಾಗಿ ಕೈ ಕಾಲು ಮುರಿದು ಕೊಂಡು ಬಿದ್ದಿದ್ದ ಅಣ್ಣನನ್ನು ಮನೆಗೆ ಕರೆತಂದಿದ್ದಾನೆ. ಅವನ ಸ್ಥಿತಿ ಇನ್ನೂ ಶೋಚನೀಯವಾಗಿದೆ!. ನಾಳೆ ಏನಾಗುತ್ತದೆಯೋ? ನಿನ್ನೊಬ್ಬಳಿಂದ ಯಾರು ಯಾರಿಗೆ ಏನೇನು ಕಾದಿದೆಯೋ? ಏನೋ? ಎಂದರೆ ಸೀತೆ ‘ನಿನ್ನೊಬ್ಬಳ ಸಂಕಟಕ್ಕಲ್ಲ ಇಡೀ ಲೋಕದ ಸಂಕಟಕ್ಕೆ ನಾನೆ ಕಾರಣ ಎನ್ನುವಂತಾಗಿದೆ’ ಎಂದು ದುಃಖಿಸುತ್ತಾಳೆ. ಆದರೂ ಸೀತೆ ಧೈರ್ಯ ಮಾಡಿ ‘ನಿನ್ನ ಮಾಂಗಲ್ಯ ಭಾಗ್ಯ ಅಲುಗದಿರಲಿ’ ಎಂಬ ವಿಶ್ವಸನೀಯ ಮಾತುಗಳನ್ನಾಡುತ್ತಾಳೆ.
ಯುದ್ಧ ತಡೆಯಲು ಸೀತೆಯೇ ಸೂಕ್ತ ಎಂದೇ ನಿಶ್ಚಯಿಸಿ ಯುವ ಸಂಧಾನಕಾರಳಂತೆ ಬರುವ ಅನಲೆ ಇಲ್ಲಿ ತನ್ನ ಚಿಂತನೆಯಿಂದ ಈಗಿನ ಯುವ ಮನಸ್ಸುಗಳನ್ನು ಜಾಗೃತಗೊಳಿಸುವ ಶಕ್ತಿಯಾಗಿ ಇಲ್ಲಿ ಚಿತ್ರಿತಳಾಗಿದ್ದಾಳೆ. “ಕಾಳಗದ ಕಣಕಿಂ ಮಿಗಿಲ್ ದೊಡ್ಡಯ್ಯನರಮನೆ” ಎಂದು ಶೋಕದರಮನೆಯಾಗಿದ್ದ ರಾವಣನ ಅರಮನೆಯಿಂದ ಬಂದವಳೆ ಸೀತೆಗೆ ನಮಸ್ಕರಿಸಿದರೆ
ತಾಯ್ ಮಗಳನೆಂತಂತೆವೋಲ್ ಕಂಬನಿಯೊರೆಸಿದಳ್ ಮೊಗವ ಮುಂಡಾಡಿದಳ್” ಅರ್ಥಾತ್ ಸೀತೆ ಅನಲೆಯನ್ನು ಮಮತೆಯ ಮೂರ್ತಿಯಾಗಿ ತೋಳ್ತೆಕ್ಕೆಯಲ್ಲಿ ಸಂತೈಸುತ್ತಾಳೆ. ಇಲ್ಲಿ ಹೆಣ್ಣು ಹೆಣ್ಣಿಗೆ ಮರುಗುವ ರೀತಿಯನ್ನು ಕಾಣಬಹುದು. ಅಷ್ಟಕ್ಕೂ ಸುಮ್ಮನಿರಲಾರದ ಅನಲೆ ಸೀತೆಯನ್ನು ಕುರಿತು ‘ನಿನ್ನನ್ನು ಹೇಗೆ ಸಂತೈಸುವುದೋ ತಿಳಿಯುತ್ತಿಲ್ಲ ನನಗೇಕೆ ನಿನು ಕಣ್ಣಿರು ಸುರಿಸುತ್ತಿರುವೆ ನಿನಗೇ…. ಕಣ್ಣೀರು ಸಾಲದು. ನಿನ್ನ ಒಂದೊಂದು ಕಂಬನಿಯು ಲಂಕೆಯ ಶೋಕಸಾಗರವನ್ನು ಹಿಗ್ಗಿಸುತ್ತದೆ ಎನ್ನುವಲ್ಲಿ ಸೀತೆಯ ದುಃಖಕ್ಕೆ ಮರುಗುವುದನ್ನೂ ಕಾಣಬಹುದು. ಮತ್ತೆ ದುಃಖವನ್ನು ಹಿಮ್ಮೆಟ್ಟಿಕೊಂಡು ‘ದೊಡ್ಡಯ್ಯ ಮರಣ ಶಯ್ಯೆಯಲ್ಲಿದ್ದಾನೆ ಯುದ್ಧ ಎಲ್ಲರ ಮನಸ್ಸನ್ನು ಕಾಡುತ್ತಿದೆ ಹಿಂಸಿಸುತ್ತಿದೆ ಇದನ್ನು ಇಲ್ಲಿಗೆ ನಿಲ್ಲಿಸೋಣ! ಎನ್ನುವುದು ಆಕೆಯ ಯುದ್ಧವನ್ನು ತಡೆಯುವ, ಶಾಂತಿ ಬಯಸುವ ಮನಃಸ್ಥಿತಿಯನ್ನು ಬಿಂಬಿಸುತ್ತದೆ.
ತಾಯಿ,
ಇರ್ಕೆಲದೊಳಪ್ಪ ಹೆಣದ ಹತ್ಯೆಯಂ- ಪೆಣ್
ತಟಸ್ಥಮಿರಲೇಕೆ, ಗಂಡುಗಳಿಂತು ಮೆಯ್ ಮರೆತು,
ಕ್ರೋಧಮೂರ್ಛಿತರಾಗಿ, ಸರ್ವನಾಶಕೆ ಮಲೆತು
ಪಣೆ ಪಣೆದು ನಿಲ್ಲಲ್?

ಎಂದು ತಹತಹದಿಂದ ಉದ್ಗರಿಸುತ್ತಾ ‘ಯುದ್ಧದಿಂದ ಎರಡೂ ಕಡೆಯೂ ಸರ್ವನಾಶ ! ತಾಯಿ ಗಂಡುಗಳು ಕ್ರೋಧದಿಂದ ಮೈಮರೆತು ವಿನಾಶ ಕಾರ್ಯದಲ್ಲಿ ತೊಡಗಿರುವಾಗ ಹೆಣ್ಣು ಏಕೆ ಸುಮ್ಮನಿರಬೇಕು ? ನೀನು ಒಪ್ಪುವುದಾದರೆ ನಾನು, ದೊಡ್ಡಮ್ಮ ತಾರಾಕ್ಷಿ ಚಂದ್ರನಖಿ ಎಲ್ಲರೂ ನೆರವಾಗುತ್ತೇವೆ. ಯುದ್ಧವನ್ನು ಇಲ್ಲಿಗೆ ನಿಲ್ಲಿಸೋಣ ಎಂದು ಭಿನ್ನವಿಸಿಕೊಳ್ಳುತ್ತಾಳೆ.
ದಶಗ್ರೀವನಾತ್ಮಮುಂ ಬಗೆಯಾಗಿಹಳ್’ ಎನ್ನುತ್ತಾ ರಾವಣನ ಆತ್ಮವೂ ಮಾಗುತ್ತಿರುವ ಸೂಚನೆ ಕಂಡು ಬರುತ್ತಿದೆ. ಆದರೆ ಅವನು ಆತ್ಮಾಭಿಮಾನಿ ಹಾಗೆ ತಾನೆ ಬಂದು ಯುದ್ಧವನ್ನು ನಿಲ್ಲಿಸಲಾರ ಎನ್ನುತ್ತಲೇ ಉನ್ಮತ್ತಳಾಗಿ.
ತಡೆಯಲೀ ಕಾಳೆಗದ ಕೊಲೆಯಂ’ ಎಂದು ನಿರ್ಧಾರದ ಧ್ವನಿಯಲ್ಲಿ ಯುದ್ಧ ನಿಲ್ಲಲಿ ಎಂದು ಕಂಠೋಷ್ಟಿತವಾಗಿ ಹೇಳುತ್ತಾಳೆ. ಕೇವಲ ಹದಿನಾರು ವರ್ಷದ ಅನಲೆಯಲ್ಲಿ ಅದೆಷ್ಟು ಲೋಕೋತ್ತರವಾದ ಚಿಂತೆಯಿದೆ. ಎನ್ನುತ್ತಾ ಸೀತೆ ಅನಲೆಯನ್ನು ಉದ್ದೇಶಿಸಿ ‘ನಾನು ಅಸ್ವತಂತ್ರೆ; ನೀನು ಮತ್ತು ನಿನ್ನವರು ಸ್ವತಂತ್ರರು ತಪಸ್ಸೆ ನನಗಿರುವ ಶಕ್ತಿ’ ಎನ್ನುತ್ತಾ ನಿನ್ನ ಚಿತ್ತಭಿತ್ತಿಯ ಶಾಂತಿಯ ಬಯಕೆ ಹಿರಿದು ನಿನ್ನಾಸೆ ಫಲಿಸಲಿ ಎನ್ನುತ್ತಾಳೆ.
ಆಷ್ಟಕ್ಕೆ ತೃಪ್ತಳಾಗದ ಅನಲೆ ‘ದೇವಿ ನಿರಾಸೆಯನ್ನು ಬಿಡು ಏನಾದರೂ ಮಾಡು, ವಾನರರು ವಿಘ್ನವನ್ನು ಒಡ್ಡುತ್ತಾರೆ,ಮಿಗಿಲಾಗಿ ಮೇಘನಾದ ನಿರ್ವಿಘ್ನವಾಗಿ ಯಾಗ ಮುಗಿಸಿದರೆ ಇನ್ನೂ ಅನಾಹುತವಾಗುತ್ತದೆ. ಆದಕ್ಕೂ ಮೊದಲು ದೊಡ್ಡಯ್ಯ ಇಲ್ಲಿಗೆ ಬರುವಂತೆ ಮಾಡುವೆ ಆಗ
ದೊಡ್ಡಯ್ಯನಿಂದಿಲ್ಲಿಗೈತರಲ್,ನಮ್ಮಿದಿರ್
ತಾಯಾಗಿ ತೋರ್ಪವೋಲ್ ತೋರಿ, ಕಂದಂಗೆಂತೋ
ಅಂತೆ, ಹಿತವನೊರೆ ಸದ್ಭುದ್ಧಿಯಂ

ಎಂದು ಬೇಡಿಕೊಳ್ಳುತ್ತಾಳೆ ಅಂದರೆ ದೊಡ್ಡಯ್ಯ ಇಲ್ಲಿಗೆ ಬಂದಾಗ ‘ನೀನು ನನಗೆ ಮಮತೆ ತೋರಿದಂತೆ ಅವನಿಗೂ ತಾಯಾಗಿ ಬುದ್ಧಿ ಹೇಳು. ತಾಯಿಯಾದವಳು ತನ್ನದೇ ಗರ್ಭ ರುಧಿರ ಪ್ರವಾಹವಾಗುವುದನ್ನು ಬಯಸುವಳೆ? ಅದನ್ನು ತಡೆಯುವುದಿಲ್ಲವೇ ಅಂತೆಯೇ ನೀನು ಯುದ್ಧಕ್ಕೆ ತಡೆಯಾಗು ಎನ್ನುತ್ತಾಳೆ.
ಬಲ್ಲೆನೆನ್ನ ದೊಡ್ಡಯ್ಯನಂ
ನಾನ್. ದರ್ಪಕಾರಣಕೆಕೂರ್ಪನೆ ತೋರ್ಪನಪ್ಪೊಡಂ
ಕೂರ್ಮೆಗೆ ಮಣಿವ ಮೃದುಲತೆಯಿರ್ಪುದವನೆದೆಯ
ಕರ್ಬುನಕೆ

ಎನ್ನುತ್ತಾ ಆತ ಎಲ್ಲರ ಕಣ್ಣಿಗೆ ನಿರ್ದಯಿಯಾಗಿ ಕಾಣಬಹುದು ಆದರೆ ಅವನಂತರಂಗ ಸುಕೋಮಲವಾದದ್ದು. ಅವನಿಗೆ ಸುಗತಿಯನ್ನು ತೋರು’ ಎನ್ನುತ್ತಾಳೆ.
‘ವೈರತ್ವವನ್ನು ಇಲ್ಲಿಗೆ ನಿಲ್ಲಿಸೋಣ!’ ಎನ್ನುವುದು ಯುದ್ಧವನ್ನು ತಡೆಯುವ ಲೋಕೋಪಕಾರಿ ನೀತಿಯನ್ನು ಬಿಂಬಿಸುತ್ತದೆ. ದುರಂತವನ್ನು ಮನಗಾಣದೆ ಮುಗ್ಧವಾಗಿ ಬಿಕ್ಕುತ್ತಿದ್ದ ಅನಲೆಯ ತಲೆ ಮೈಯನ್ನು ನೇವರಿಸುತ್ತಾ ರಾವಣ ಬಂದಾಗ ‘ನನ್ನಾತ್ಮ ಏನನ್ನು ಹೇಳುತ್ತದೆಯೋ ಹಾಗೆ ಮಾಡುತ್ತೇನೆ’ ಎನ್ನುವ ನಿರ್ಧಾರಕ್ಕೆ ಸೀತೆ ಬರುತ್ತಾಳೆ.

ಇದು ‘ರಾಮಾಯಣ ದರ್ಶನಂ’ನ ಷೋಡಶಿ ಅನಲೆಯ ಯುದ್ಧ ನಿಲ್ಲಿಸುವ, ಶಾಂತಿ ಸ್ಥಾಪಿಸುವ ಯತ್ನ. ರಷ್ಯಾ ಮತ್ತು ಉಕ್ರೇನಿನ ನಡುವೆ ನಡೆಯುತ್ತಿರುವ ಯುದ್ಧಸಮಯದಲ್ಲೂ ಯುವಕರು ‘ಯುದ್ಧ ಮಾನವೀಯತೆಯ ವಿರುದ್ಧ ಮಾಡುತ್ತಿರುವ ಅಪರಾಧವೆಂದೇ ಹೇಳುತ್ತಿರುವುದು ಅತ್ಯಾಂತಿಕವಾಗಿರುವುದು. ಇದಕ್ಕಿಂತ ಮಿಗಿಲಾಗಿ ನಮ್ಮ ಕನ್ನಡದ ಹುಡುಗ ಯುದ್ಧದ ಕಿಚ್ಚಿಗೆ ಹತನಾಗಿದ್ದಾನೆ. ಹೆತ್ತೊಡಲಿನ ಸಂಕಟವನ್ನು ವಿವರಿಸಲು ಪದಗಳಿಲ್ಲ. ಇಂಥ ಎಷ್ಟು ತಾಯಿಹೃದಯಗಳು ರಷ್ಯಾ- ಉಕ್ರೇನ್ ಯುದ್ಧದಲ್ಲಿ ಕಳೆದುಕೊಂಡ ಜೀವಗಳಿಗಾಗಿ ಪರತಪಿಸುತ್ತಿವೆಯೋ ತಿಳಿದಿಲ್ಲ. ಈ ಯುದ್ಧ ಇಲ್ಲಿಗೆ ಸಾಕು ಅನ್ನಿಸುತ್ತಿದೆ.

ಇಂದಿಗೆ ಗೋಚರವಾಗುತ್ತಿರುವ ಯುದ್ಧದ ಪರಿಣಾಮದ ಚಿಕ್ಕ ಉದಾಹರಣೆಯಿದು. ಯುದ್ಧಗಳು ಪ್ರಚೋದನೆಗಾಗಿ, ಪ್ರತಿಷ್ಟೆಗಾಗಿ, ಸೇಡಿಗಾಗಿ. ಮಣ್ಣು-ಹೊನ್ನಿಗಾಗಿ ನಡೆದಿರಬಹುದು ಆದರೆ ಅದರ ಕೆಡುಕು ಮನುಕುಲವನ್ನೇ ಕಾಡುತ್ತದೆ. ಅಣುಬಾಂಬ್ ಸ್ಫೋಟದಿಂದಾದ ದುಷ್ಪರಿಣಾಮ ಇನ್ನೂ ಜೀವಂತವಾಗಿರುವಾಗಲೆ ಇಂಥ ಯುದ್ಧಗಳು ಬೇಕೇ ಎನ್ನಿಸುತ್ತದೆ. ಇಂದಿಗೆ ರಷ್ಯಾ -ಉಕ್ರೇನ್ ಯುದ್ಧ ಪ್ರಾರಂಭವಾಗಿ ಏಳು ದಿನಗಳ ಮೇಲಾಯ್ತು.. ಯಾರದು ಮೇಲುಗೈ? ಯಾರಿಗೆ ಹಿನ್ನಡೆ? ನಮಗದು ಅನವಶ್ಯಕ. ಸದ್ಯ ಆಗಿರುವ ಹಾನಿಯನ್ನು ಭರಿಸಿಕೊಳ್ಳಲು ಇನ್ನೆಷ್ಟು ದಿನಗಳು ಬೇಕೋ ? ತಿಳಿದಿಲ್ಲ . ಇನ್ನು ಜೀವಹಾನಿ ತರಿಸುವ ನೋವು ಸಂಕಟ ಯಾವುದರಿಂದಲೂ ಭರಿಸಲಾಗದ್ದು ಈ ಕ್ಷಣಕ್ಕಾದರೂ ಯುದ್ಧ ಕೊನೆಗೊಂಡು ಉಭಯರಾಷ್ಟ್ರಗಳಲ್ಲಿ ಶಾಂತಿ ನೆಲಸಲಿ ಎಂಬ ಸದಾಶಯ ನನ್ನದು. ಯುದ್ಧ ಯಾವುದಾದರೊಂದು ಮುಕ್ತಾಯವಾಗುತ್ತದೆ ಆದರೆ ಶೋಕ ಮಾತ್ರ ಹಾಗೆ ಉಳಿಯುತ್ತದೆ! ಕಾಡುತ್ತದೆ!
ಸುಮಾವೀಣಾ