ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗೀತಾಲಕ್ಷ್ಮೀ ಕೊಚ್ಚಿ
ಇತ್ತೀಚಿನ ಬರಹಗಳು: ಗೀತಾಲಕ್ಷ್ಮೀ ಕೊಚ್ಚಿ (ಎಲ್ಲವನ್ನು ಓದಿ)

ಗೀರಿ ಬೆಂಕಿಯ ಕಡ್ಡಿಯೊಂದನು
ಲಾಂದ್ರವೊಂದನು ಉರಿಸಿದೆ
ಚಿತ್ತ ಮತ್ತಿಗೆ ಮಲೆತು ತೂಗಿದೆ
ಚಂದ್ರ ಬಿಂಬವ ಮರೆತಿದೆ |

ಕಣ್ಣ ಕಪ್ಪಿನ ಕಲೆಯ ಕಾವಳ​
ಆರಿ ಹೋಯಿತು ಸುಮ್ಮನೆ
ನನ್ನ ತೀರದ ದಾಹ ಒಮ್ಮೆಲೆ
ಮಾಯವಾಯಿತು ಝುಮ್ಮನೆ |

ತಿಂಗಳನ್ನೇ ಕೆಣಕಿ ಕಂಗಳು
ಮುಗುಳು ನಗುತಿವೆ ಬಿಮ್ಮನೆ
ಇಣುಕಿ ಇರಿಯುವ ಕಿಡಿಯು ತರವೆ
ತರಲೆಯಾಗುತ ಸುಮ್ಮನೆ |

ಮನದ ಮೂಲೆಯ ಒಲವ ಮೂಟೆಗೆ
ಅರ್ಧ ಬೆಳಕಿನ ಆರ್ದ್ರತೆ
ಮತ್ತೆ ಸ್ವಪ್ನವ ಅಪ್ಪುವಂತೆಯೆ
ಪ್ರತಿಫಲನ ಕಿರಣದ ತೀಕ್ಷ್ಣತೆ |

ಸರಳ ರೇಖೆಯ ಸಲಿಲ ಪ್ರೀತಿಯು
ನನ್ನ ತಿವಿಯುವ ತೀವ್ರತೆ
ರಮಿಸಿ ರೂಪಕ ರೂಪ ಭಾವವ​
ಸೆಳೆವ ಸಂಯಮ ಸೂಕ್ಷ್ಮತೆ |