- ಬದುಕಿನ ಶಾಲೆ ಮತ್ತು ಮಾಂಟೆಸರಿ - ನವೆಂಬರ್ 22, 2023
- ಸಣ್ಣದೆಲ್ಲಾ ಸಣ್ಣದಲ್ಲ… - ಜೂನ್ 24, 2023
- ‘ಪಾಕಶಾಲೆ’ಯ ನಳ! - ಮೇ 22, 2022
ಈ ಊರಿನ ಹೆಸರು ಸರಿಯಾಗಿ ಕೇಳಿಸಿಕೊಂಡಿದ್ದೇ ಪತಿರಾಯರು ಇಲ್ಲಿ ಕೆಲಸ ಸಿಕ್ಕಿದೆ ಹೊರಡಬೇಕು ಎಂದಾಗ. ಬೆಂಗಳೂರು ಇನ್ನೇನು ನನ್ನೊಳಗೂ ಹೊಕ್ಕಿತು ಎನ್ನುವಾಗ ಮತ್ತೆ ಗಂಟುಮೂಟೆ ಕಟ್ಟಬೇಕಾಗಿ ಬಂದದ್ದು ಅರೆಕ್ಷಣಕ್ಕೆ ಪಿಚ್ಚೆನಿಸಿದ್ದು ಸುಳ್ಳಲ್ಲ. ಸದಾಕಾಲ ಮತ್ತೆ ತೀರ್ಥಹಳ್ಳಿಗೆ ಹೋಗಿ ಬದುಕು ಕಟ್ಟಬೇಕು ಎಂದು ತುಡಿಯುವ ಮನಸ್ಸಿಗೆ ವಿರುದ್ಧ ದಿಕ್ಕಿನಲ್ಲಿ ವೃತ್ತಿ ಜೀವನ ಎಳೆದಾಗ ನಡೆವ ಹೊಯ್ದಾಟ ಪದಗಳಲ್ಲಿ ವಿವರಿಸಲಾಗದ್ದು. ಸಮುದ್ರದಾಚೆಗಿನ ಊರು ಎದೆಯೊಳಗೆ ಅವ್ಯಕ್ತ ಭಯ ಹುಟ್ಟಿಸಿದ್ದೂ ಹೌದು.
ಊರ ಬಗ್ಗೆ ಬರೆಯಲು ಸಾಕಷ್ಟಿದೆ. ಮತ್ತು ಹದಿನೈದು ಚಿಲ್ಲರೆ ದಿನಗಳಲ್ಲಿ ಯಾವುದಾದರೂ ಊರಿನ ಮೇಲ್ಮೈಯನ್ನು ಬರೆಯಬಹುದೇ ಹೊರತು ಅಂತರಾಳವನ್ನು ಹೊಕ್ಕಿ ನೋಡಲಾಗದು ಎಂಬ ಅನುಭವದ ಅರಿವಿದ್ದರೂ ಈ ಪುಟ್ಟ ಪುಟ್ಟ ಸಂಗತಿಗಳನ್ನು ದಾಖಲಿಸದೆ ಇರಲು ಮನಸ್ಸು ಕೇಳಲಿಲ್ಲ.
ಮಗಳ ಶಾಲೆ ಶುರುವಾಗಲು ಇನ್ನೂ ತಿಂಗಳಿದೆಯಾದ್ದರಿಂದ ಮನೆ ಮತ್ತು ಪಾರ್ಕಿನ ನಡುವೆ ನಮ್ಮಿಬ್ಬರ ಓಡಾಟ ಸಾಗಿತ್ತು. ಆದರೂ ಅವಳಿಗೆ ಏನೋ ಮಿಸ್ಸಿಂಗ್ ಭಾವ. ಕಡೆಗೆ ಪರಿಚಿತರ ಸಹಾಯದಿಂದ ವಾರದಲ್ಲಿ ಒಂದೆರಡು ದಿನ ಹತ್ತಿರದ ಕಿಂಡರ್ ಗಾರ್ಟನ್ ಗೆ(ಅಂಗನವಾಡಿ) ಕಳಿಸುವ ವ್ಯವಸ್ಥೆ ಮಾಡಿಕೊಂಡೆವು. ಹೊಸ ದೇಶ ಮತ್ತು ಭಾಷೆಯ ಸಮಸ್ಯೆಯಿದ್ದ ಕಾರಣ ಜೊತೆಗೆ ಅಮ್ಮನೂ ಬರಬೇಕು ಎಂದು ಅಂಗನವಾಡಿಯವರು ಸೂಚಿಸಿದರು. ಅಲ್ಲಿಗೆ ಮಗಳ ಜೊತೆ ನನ್ನದೂ ಈ ಊರಿನಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು.
ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಬಗ್ಗೆ ನನಗೆ ನನ್ನದೇ ಆದ ಒಂದಷ್ಟು ಕಲ್ಪನೆಗಳಿವೆ. ಯಾವುದೇ ಕಟ್ಟುಪಾಡುಗಳ ಹಂಗಿಲ್ಲದೆ ಮನಸ್ಸಿಗೆ ಬಂದಿದ್ದನ್ನು ಮಾತನಾಡುವ, ಖುಷಿ ಎನಿಸಿದ್ದನ್ನು ಮಾಡುವ ಸ್ವಾತಂತ್ರ್ಯ ಮಕ್ಕಳಿಗೆ ದೊರಕಬೇಕು ಎಂಬುದು ಯಾವತ್ತಿನ ಆಶಯ. ಅಮ್ಮನಾಗಿ ಅದರ ಕಷ್ಟಗಳ ಪರಿವು ಇದೆ. ಈ ನಿಟ್ಟಿನಲ್ಲಿ ಇಲ್ಲಿನ ಶಾಲೆ ನನಗೂ ಮಗಳಿಗೂ ಬಹಳಷ್ಟು ಸಂಭ್ರಮವನ್ನುಂಟು ಮಾಡಿತು.
ಹೇಳಲಿಕ್ಕೆ ಬಂದ ವಿಷಯ ಶಾಲೆಗೆ ಸಂಬಂಧಿಸಿದ್ದೇ ಆದರೂ ಒಂದಷ್ಟು ವಿಷಯಾಂತರವಾಯಿತು, ಇರಲಿ! ಮಗಳ ಈ ತಾತ್ಕಾಲಿಕ ಶಾಲೆಯಲ್ಲಿ ಸುಮಾರು ೨೫-೩೦ ಮಕ್ಕಳಿದ್ದಾರೆ. ಎಲ್ಲರೂ ಮುಖ ಕಂಡಾಕ್ಷಣ ನಸುನಗುತ್ತಾರೆ. ಹಾಗೆಯೇ ಆ ಪುಟ್ಟ ಪಿಂಕು ಲಂಗದ ಹುಡುಗಿಯೂ ಮೊದಲ ದಿನ ನಗುತ್ತಿದ್ದಳು. ಮಕ್ಕಳ ಒಡನಾಟದಲ್ಲಿ ನಾನೂ ಪ್ರಸನ್ನವದನೆಯಾಗಿದ್ದೆ.
ಎರಡನೇ ದಿನದಲ್ಲಿ ನಮ್ಮಿಬ್ಬರದ್ದು ಮತ್ತಷ್ಟು ನೋಟ ವಿನಿಮಯ, ಮಾತುಕತೆ ನಡೆಯಿತು. ಒಂದಷ್ಟು ಹೊತ್ತು ಜೊತೆಗಿದ್ದ ಹುಡುಗಿ ಮತ್ತೆಲ್ಲೋ ಆಟಕ್ಕೆ ಹೋದಳು. ನಾನೂ ಮಗಳ ದೇಖಾರೇಖಿಯಲ್ಲಿ ತೊಡಗಿದ್ದೆ. ಸ್ವಲ್ಪ ಹೊತ್ತಿನಲ್ಲಿ ಅಂಗಿಯ ತುದಿಯನ್ನು ಪುಟಾಣಿ ಕೈ ಒಂದು ಜಗ್ಗಿದ ಹಾಗಾಗಿ ತಿರುಗಿದರೆ ಅದೇ ಹುಡುಗಿ. ಏನನ್ನೋ ತೊದಲ್ನುಡಿಯಲ್ಲಿ ಹೇಳಿದಳು. ಉಚ್ಚಾರಣೆ(accent) ಅರ್ಥವಾಗದ ನಾನು ಮತ್ತೆ ಕೇಳಿದೆ. ‘I found you warm’ ಎಂದು ಮತ್ತೊಮ್ಮೆ ಉಲಿದು ಆಟಕ್ಕೆ ತೆರಳಿದಳು. ವಾರ್ಮ್(warm) ಎಂದರೆ ಚಳಿಗೆ ಬೆಚ್ಚಗಾಗುವುದು ಎಂದಷ್ಟೇ ಯೋಚಿಸುವ ಎಮೋಷನಲ್ ಇಂಟೆಲಿಜೆನ್ಸ್ ಹೊಂದಿರುವವಳು ನಾನು! ಬೆಪ್ಪಾಗಿ ಅವಳು ಹೋದ ಕಡೆಗೇ ನೋಡುತ್ತಾ ನಿಂತಿದ್ದೆ. ಅವಳ ಹಿಂದಿದ್ದ ಮತ್ತೊಂದು ಪುಟಾಣಿ ನನ್ನನ್ನು ಮತ್ತೆ ಕರೆದು ‘she expressed that she found you warm! You should say thanks in return’ ಎಂದಿತು. ಮತ್ತು ಆ ಕ್ಷಣಕ್ಕೆ ಅವಳ warm ನ ನಿಜಾರ್ಥ ಹೊಳೆದ ನನ್ನ ಕಣ್ಣಂಚು ಒದ್ದೊದ್ದೆ!
ಇಷ್ಟ ಎಂಬುದನ್ನು ಬಾಯಿಬಿಟ್ಟು ಹೇಳಲು ಜನ್ಮವಿಡೀ ಒದ್ದಾಡುವ ಪ್ರಪಂಚದಲ್ಲಿ ಜೀವಿಸುವ ನಾನು ಮತ್ತು ಭಾವನೆಗಳನ್ನು ಅಂತೆಯೇ ತೆರೆದಿಟ್ಟ ಆ ಹುಡುಗಿ. ಇವೆಲ್ಲದರ ನಡುವೆ ನನಗರ್ಥ ಆಗಿಲ್ಲ ಮತ್ತು ಅವಳ ಭಾವನೆಗೆ ಪ್ರತಿಸ್ಪಂದನೆ ನೀಡಿಲ್ಲ ಎಂಬುದನ್ನು ಗ್ರಹಿಸಿ ವಿವರಿಸಲು ಬಂದ ಮತ್ತೊಬ್ಬ ಪುಟಾಣಿ ಹುಡುಗ.
ಬದುಕು ಕಲಿಸುವ ಪಾಠಗಳನ್ನು ಕಲಿಯಲು ಮತ್ತೊಂದು ಜನ್ಮವೇ ಬೇಕೇನೋ. ನನ್ನದು ಎನಿಸುವ ಎಲ್ಲದರಿಂದ ಇಷ್ಟು ದೂರವಿದ್ದಾಗಲೂ ಮನಸ್ಸು ಪ್ರಫುಲ್ಲವೆನಿಸೋದು ಇಂತಹ ಸಣ್ಣ ಪುಟ್ಟ ಘಟನೆಗಳೇ. ಈ ಊರು ಇಂತಹ ವಾರ್ಮ್ ಮೂಮೆಂಟ್ಸನ್ನ (warm moments) ಮತ್ತಷ್ಟು ಕಟ್ಟಿಕೊಡಲಿ ಎಂಬುದಷ್ಟೇ ಈ ಕ್ಷಣದ ಪ್ರಾರ್ಥನೆ.
ಬದುಕೇ ಬದುಕ ಕಲಿಸು..
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..