- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
ಎಲ್ಲರಿಗೂ ನಮಸ್ಕಾರ
ಸುರಭಾರತೀ ೧೪ ನೇಯ ಅಂಕಣಕ್ಕೆ ಸ್ವಾಗತ.
ದೂರದಿಂದಲೇ ಶಕುಂತಲೆಯ ಸೌಂದರ್ಯವನ್ನು ಕಂಡು ನಿರ್ವಾಣ ಅನುಭವಿಸಿದ ದುಷ್ಯಂತ, ತನ್ನ ಪ್ರಿಯತಮೆ, ಹೂವುಗಳಿಂದ ಆಚ್ಛಾದಿತವಾದ ಬಂಡೆಗೆ ಒರಗಿರುವದನ್ನು ಕಂಡನು.
ಗ್ರೀಷ್ಮದ ಧಗೆ ಧಗೆಯಲ್ಲೂ ವಸಂತದ ಉನ್ಮಾದ ತುಂಬಿದೆ!!.
ಶಕುಂತಲೆ ಹಾಗೂ ಅವಳ ಸಖಿಯರಲ್ಲಿ ಸಂವಾದ ನಡೆಯುತ್ತಿದೆ. ದುಷ್ಯಂತ ದೂರದಿಂದ ಆಲಿಸುತ್ತಾ ಇದ್ದಾನೆ.
ಸಖಿಯರು ತನಗೆ ಕಮಲಪತ್ರದಿಂದ ಗಾಳಿ ಯಾಕೆ ಬೀಸುತ್ತಿದ್ದಾರೆ ಎಂದು ಅರ್ಥ ಆಗದ ಮನಸ್ಥಿತಿ ಶಕುಂತಲೆಯದು. ಮೊದಲ ನೋಟದಲ್ಲಿಯೇ ಶಕುಂತಲೆ, ದುಷ್ಯಂತನಲ್ಲಿ ಅನುರಕ್ತಳಾದದ್ದನ್ನೂ , ಅವಳ ಮನಸು ಅಸ್ವಸ್ಥ ಆದದ್ದನ್ನೂ ಸಖಿಯರು ಗಮನಿಸಿದ್ದಾರೆ. ಅವರು ಆಶ್ರಮದ ಪವಿತ್ರ ವಾತಾವರಣದಲ್ಲಿ
ಬೆಳೆದವರು. ಪ್ರೀತಿ, ಆಕರ್ಷಣೆಗಳ ಸೋಂಕು ಅವರಿಗಿಲ್ಲ ಆದರೂ ಕಥೆಗಳನ್ನು ಓದಿ ಬಲ್ಲರು.
ಆಶ್ರಮದ ಹೆಣ್ಣು ಮಕ್ಕಳು ಓದು ಬರಹ ಬಲ್ಲವರು ಎಂಬುದನ್ನು ಇಲ್ಲಿ ಗಮನಿಸ ಬಹುದು.
ತನ್ನ ಮನದ ಆಂದೋಲನವನ್ನು ಸಖಿಯರಿಗಲ್ಲದೆ ಇನ್ಯಾರ ಮುಂದೆ ಹೇಳಿಕೊಳ್ಳಲು ಸಾಧ್ಯ!
“ತಪೋವನದ ರಕ್ಷಣೆಗಾಗಿ ಬಂದ
ರಾಜರ್ಷಿಯನ್ನು ಕಂಡಾಗಿನಿಂದ ಅವನಲ್ಲಿ ಅಭಿಲಾಷೆ ಉಂಟಾಗಿದೆ. ಅಂದಿನಿಂದ ಈ ಪರಿಯ ತಾಪ ಅನುಭವಿಸುತ್ತಿರುವೆ”
ಎಂದು ಶಕುಂತಲೆ ತನ್ನ ವ್ಯಥೆಯನ್ನು ತೋಡಿಕೊಂಡಳು.
ಅವಳ ಈ ಮಾತು ಕಿವಿಯ ಮೇಲೆ ಬೀಳುತ್ತಲೇ ದುಷ್ಯಂತನಿಗೆ ಅತೀವ ಹರ್ಷವಾಯಿತು.
“ಶ್ರುತಂ ಶ್ರೋತವ್ಯಂ “
(“ಕೇಳಲು ಯೋಗ್ಯವಾದುದನ್ನೇ ಕೇಳಿದೆ” )
ತನ್ನಂತೆಯೇ ಅವಳೂ ಕೂಡ ಮನ್ಮಥನ ಪೀಡೆಯಿಂದ ಬಳಲುತ್ತಿರುವಳು ಎಂಬ ವಿಷಯ ದುಷ್ಯಂತನಿಗೆ ಸಂತಸವನ್ನು ತಂದಿದೆ.
ಬೇಸಿಗೆಯ ಕೊನೆಗೆ, ಆವೃತವಾದ ದಟ್ಟ ಕಪ್ಪು ಮೋಡ ಜನತೆಗೆ ,ಮಳೆ ಬರುವ ಸೂಚನೆ ಕೊಟ್ಟಾಗ ಆಗುವ ಸಂತೋಷವನ್ನು ಆತ ಅನುಭವಿಸುತ್ತಾನೆ.
ಇತ್ತ ಶಕುಂತಲೆಯೂ ಸಹ ತನ್ನ ಮನದ ಇಂಗಿತವನ್ನು ಸಖಿಯರಿಗೆ ಅರುಹುತ್ತ ಹೇಳುವಳು.
” ಆ ರಾಜರ್ಷಿಯಿಂದ ನಾನು ಸ್ವೀಕರಿಸಲ್ಪಡಬೇಕು.
ಅನ್ಯಥಾ ಅವಶ್ಯಂ ಸಿಂಚತ ಮೆ ತಿಲೋದಕಮ್.
(ಇಲ್ಲವಾದರೆ ನನಗೆ ಎಳ್ಳು ನೀರು ಬಿಟ್ಟು ಬಿಡಿರಿ) “
ಅಂದರೆ ನನ್ನ ಆಶೆ ಬಿಟ್ಟು ಬಿಡಿ ,ನನ್ನ ಸಾವು ಖಂಡಿತ. Give up all hopes about me ಎಂದು ಸ್ಪಷ್ಟವಾಗಿ ಹೇಳಿದಳು.
ಅವಳ ಈ ಮಾತು ಕೇಳಿದಾಗ ದುಷ್ಯಂತನ ಅಳಿದುಳಿದ ಅನುಮಾನವೂ ದೂರವಾಯಿತು.
ಸಖಿ ಪ್ರಿಂಯವದೆಯೂ ಸಹ, ತನ್ನ ಪ್ರಿಯ ಸಖಿ ,ಯೋಗ್ಯನಾದ ಪುರುವಂಶದ ಲಲಾಮಭೂತನನ್ನು ಮೆಚ್ಚಿದ್ದು,ಮಹಾನದಿ ಸಾಗರವನ್ನೇ ಸೇರಿತಲ್ಲ ಎಂದು ಸಂತೋಷಿಸುವಳು.
ಮಾಧವಿ ಲತೆ, ಸುಂದರ ಹೂ ಬಿಡುವ ಬಳ್ಳಿ ಮಾವಿನ ಮರವನ್ನು ಆಧರಿಸಿದಂತೆ ಶಕುಂತಲೆಗೆ ಒಳ್ಳೆಯ ಆಶ್ರಯ ದೊರಕಿತೆಂದು ಅವಳಿಗೆ ಆನಂದ.
ಪ್ರಿಂಯವದೆ ಚಲ್ಲಾಟದ ಹುಡುಗಿ ಆದರೆ, ಅನಸೂಯ ಸ್ವಲ್ಪ ಗಂಭೀರ ಸ್ವಭಾವದವಳು. ಆತ್ಮೀಯ ಗೆಳತಿ ಯ ಮನೋರಥ ಆದಷ್ಟು ಬೇಗನೇ ಈಡೇರುವಂತೆ ಹೇಗೆ ಮಾಡುವುದು ಅಲ್ಲದೆ ವಿಷಯದ ಗೌಪ್ಯತೆಯನ್ನೂ ಕಾಪಾಡಬೇಕು ಎಂಬುದು ಅವಳ ಚಿಂತೆ.
ಚಾಣಾಕ್ಷಿ ಪ್ರಿಂಯವದೆ, ರಾಜರ್ಷೀಯ ಸ್ನಿಗ್ಧ ದೃಷ್ಟಿಯಲ್ಲೂ ಪ್ರೀತಿಯನ್ನು ಗುರುತಿಸಿದಳು, ಚಿಂತೆಯಲ್ಲಿ ಅವನು ಕೃಶನಾದಂತೆ ಕಂಡನು ಆಕೆಗೆ! ಹಾಗಾಗಿ ಅವನ ಕೈಯ ಕಂಕಣ ಸಡಿಲಾಗೀ ಜಾರುತ್ತಿತ್ತು ಅನಿಸಿತು ಆಕೆಗೆ.
ಈ ಪ್ರೇಮಿಗಳ ಮಿಲನ ಹೇಗೆ ಮಾಡಿಸುವದು ಎಂದು ಚಿಂತಿಸಿ, ಒಂದು ಉಪಾಯ ಸೂಚಿಸುವಳು.
” ಒಂದು ಮದನ ಲೇಖನ …(Love letter) ಬರೆ. ಪೂಜೆಗೆ ಹೋಗುವಾಗ ಹೂಗಳ ಬುಟ್ಟಿಯಲ್ಲಿ ಇಟ್ಟು , ಆ ಪ್ರೇಮಪತ್ರ ಅವನಿಗೆ ತಲುಪಿಸುವೆ.”
“ನಿಮ್ಮ ಹೊರತು ನನಗಿನ್ನ್ಯಾರು ಹಿತವರು?. ನಿಮ್ಮ ಉಪಾಯದ ಬಗ್ಗೆ ನನಗೇನೂ ಅನುಮಾನ ಇಲ್ಲ.ಆದರೆ ಅವನು ತನ್ನನ್ನು ಸ್ವೀಕರಿಸುವನೇ ಎಂದು ನನ್ನ ಹೃದಯ ಕಂಪಿಸುತ್ತಿದೆ.”
ಎನ್ನುವಳು ಶಕುಂತಲೆ.
ಪ್ರೇಮಪತ್ರ ಬರೆದವರಲ್ಲಿ ಕಾಲಿದಾಸನ ಶಕುಂತಲೆಯೇ ಮೊದಲಿಗಳೇ ? ಇಲ್ಲ ಇಲ್ಲಾ !, ರುಕ್ಮಿಣಿ, ಶ್ರೀ ಕೃಷ್ಣನಿಗೆ ತನ್ನನ್ನು ಕರೆದುಕೊಂಡು ಹೋಗಲು ಓಲೆ ಬರೆದಳಲ್ಲವೇ!
ನಳ ದಮಯಂತಿಯರ ಪೋಸ್ಟಮನ್ ಹಂಸ ಆಗಿರಲಿಲ್ಲವೇ !
ಪ್ರಿಯತಮೆಗೆ ಸಂದೇಶ ತಲುಪಿಸಲು
ಮೇಘನನ್ನು ಕೇಳಿಕೊಳ್ಳಲಿಲ್ಲವೇ ಯಕ್ಷ !
(ನಮ್ಮ ವರ್ತಮಾನದ ಯುಗದಲ್ಲಿ ಯಾರ ಮೇಲೆಯೂ ಅವಲಂಬಿಸುವ ಕಾರಣವೇ ಇಲ್ಲ ಅಲ್ಲವೇ !
Charge ಆದ ಮೊಬೈಲ್ ಸರ್ವಶಕ್ತ.
ಹೃದಯದಿಂದ ಹೃದಯಕ್ಕೆ ಮಾತ್ರ ಕೇಳಿಸುತ್ತದೆ ಸಲ್ಲಾಪ !!)
” ಅಯಂ ಸ: ತೆ ತಿಷ್ಠತಿ ಸಂಗಮೋತ್ಸುಕ:
ವಿಶಂಸೆ ಭೀರು ಯತ: ಅವಧೀರಣಾಮ್
ಲಭೇತ ವಾ ಪ್ರಾರ್ಥಯಿತಾ ನ ವಾ ಶ್ರಿಯಂ
ಶ್ರಿಯಾ ದುರಾಪ: ಕಥಮ್ ಈಪ್ಸಿತೊಭವೇತ್”
ದುಷ್ಯಂತ ಮನಸಿನಲ್ಲಿಯೇ ಸಂತೋಷಿಸುತ್ತಾನೆ ಶಕುಂತಲೆ ತನ್ನಲ್ಲಿ ಅನುರಕ್ತಳಾಗಿರುವದನ್ನು ಅರಿತು! ಅದನ್ನೇ ಈ ಸ್ವಗತದಲ್ಲಿ ಹೇಳುವನು.
” ನಿನ್ನ ಸಮಾಗಮಕ್ಕಾಗಿಯೇ ಕಾಯುತ್ತಾ ನಿಂತಿರುವ ನನ್ನಿಂದ ನಕಾರಾತ್ಮಕ ಉತ್ತರವನ್ನು ಸರ್ವಥಾ ನಿರೀಕ್ಷೆ ಮಾಡಬೇಡ.
ಪ್ರಾರ್ಥನೆ ಮಾಡಿದಾಗ ಕೂಡ ಲಕ್ಷ್ಮೀ ಲಭಿಸುವಳೆಂಬ ಭರವಸೆ ಇರಲಾರದು. ಅಂಥದರಲ್ಲಿ ಲಕ್ಷ್ಮಿಯೇ ಇಲ್ಲಿ ಒಲಿದು ಬರುತ್ತಿರುವಾಗ ನಿರಾಕರಿಸಲು ಸಾಧ್ಯವೇ ಇಲ್ಲ.”
ಶಕುಂತಲೆಯ ಸಖಿಯರು ಕಮಲ ಪತ್ರ ಕೊಟ್ಟು ಅದರ ಮೇಲೆ ಉಗುರಿನಿಂದ ಪ್ರೇಮಸಂದೇಶ ಬರೆಯಲು ಹೇಳುವರು.
ಈಗ, ನೆಲದಲ್ಲಿ ಹೊಟ್ಟೆಯ ಮೇಲೆ ಮಲಗಿ , ಕಾಲುಗಳನ್ನು ಹಿಂದೆ ಮಡಿಸಿಕೊಂಡು,ಏನು ಬರೆಯಲಿ ಎಂದು ಚಿಂತಾಮಗ್ನಳಾದ ಶಕುಂತಲೆಯ ಚಿತ್ರ ನಿಮ್ಮ ಕಣ್ಣ ಮುಂದೆ ಬಂದಿತಲ್ಲವೇ?
ತಾನು ಬರೆದ ಒಕ್ಕಣೆಯನ್ನು ಶಕುಂತಲೆ ಸಖಿಯರಿಗೆ ಓದಿ ತೋರಿಸುವಳು.
” ತವ ನ ಜಾನೆ ಹೃದಯಂ ಮಮ ಪುನಃ
ಕಾಮೊ ದಿವಾ ಅಪಿ ರಾತ್ರಾವಪಿ
ನಿರ್ಘೃಣ ತಪತಿ ಬಲೀಯಸ್ತ್ವಯಿ
ವೃತ್ತಮನೋರಥಾಯಾ ಅಂಗಾನಿ”
” ನಿನ್ನ ಮನಸನ್ನ ನಾನು ಅರಿಯೆ.
ಆದರೆ ನಿನ್ನಲ್ಲಿ ಅನುರಾಗ ಹೊಂದಿದ ನನ್ನ ಅಂಗಾಂಗಳನ್ನು ಹೊಕ್ಕು ಈ ಮನ್ಮಥ ಹಗಲು ರಾತ್ರಿ ನೋವನ್ನುಂಟು ಮಾಡುತ್ತಿರುವನು”.
ದುಷ್ಯಂತನ ಮನವನ್ನು ಇನ್ನೂ ಅರಿಯದ ನಾಯಕಿ , ನಾಯಕನನ್ನು ನಿರ್ಘೃಣ, (O cruel one) ಎಂದು ಕರೆದಿದ್ದಾಳೆ.
ಇದಕ್ಕೆ ಉತ್ತರ ಎಂಬಂತೆ ದುಷ್ಯಂತನೂ ಅವರ ಸಮೀಪಕ್ಕೆ ಬರುತ್ತ ಹೇಳುವನು.
” ತಪತಿ ತನುಗಾತ್ರಿ ಮದನ:
ತ್ವಾಮ್ ಅನಿಶಂ ಮಾಂ ಪುನ: ದಹತ್ಯೇವ ಗ್ಲಪಯತಿ ಯಥಾ ಶಶಾಂಕಮ್
ನ ತಥಾ ಹಿ ಕುಮುದ್ವತೀಂ ದಿವಸ: “
“ಹೇ ,ಲತಾಂಗೀ ,
ಮದನ ನಿನಗೆ ಕೇವಲ ನೋವು ಉಂಟು ಮಾಡಿರಬಹುದು.
ಆದರೆ ನನ್ನನ್ನು ಅವನು ಸುಟ್ಟೇ ಬಿಟ್ಟಿದ್ದಾನೆ. ಸೂರ್ಯ ಕುಮುದ್ವತಿ ( ಚಂದ್ರಬಿಂಬದಿಂದ ಅರಳುವ ಕಮಲ)ಯನ್ನು ಕೇವಲ ಬಾಡುವಂತೆ ಮಾಡುವನು. ಆದರೆ ಚಂದ್ರನನ್ನು ಪೂರ್ಣವಾಗಿ ಮರೆ ಮಾಡಿ ಬಿಡುವನಲ್ಲ!! “
ಇಲ್ಲಿ ಕವಿ, ದುಷ್ಯಂತನನ್ನು ಚಂದ್ರನಿಗೆ ಹೋಲಿಸಿದ್ದನ್ನು ಗಮನಿಸ ಬೇಕು.ಕಾರಣ ಮನ್ಮಥನಿಂದ ಅವನು ಪೂರ್ಣ ಕಾಣೆಯಾಗಿದ್ದಾನೆ.
ಶಕುಂತಲೆಯನ್ನು ಕುಮುದ್ವತಿಗೆ ಹೋಲಿಸಿ ,ಅವಳು ಮದನನ ತಾಪದ ಝಳದಿಂದ ಬಾಡಿರುವುದನ್ನು ಸೂಚಿಸಿದ್ದಾನೆ .
ಸಖಿಯರಿಬ್ಬರೂ ಎದ್ದು, ಶಕುಂತಲೆಯ ಮನೋರಥವೇ ಸಾಕ್ಷಾತ್ ಮೂರ್ತಿವೆತ್ತು ಬಂದಂತೆ ಭಾವಿಸಿ, ಮಹಾರಾಜನ ಸ್ವಾಗತವನ್ನು ಕೋರುತ್ತಾರೆ.
” ಈ ಶಿಲೆಯ ಭಾಗವನ್ನು ಅಲಂಕರಿಸಬೇಕು “
ಎಂದು ಅವನಿಗೆ ಆಸನ ಏರ್ಪಡಿಸಿದರು.
ಮೂರನೇ ಅಂಕದ ಎರಡನೇ ಭಾಗ ದೀರ್ಘವಾಯಿತೇನೋ.
ಇಲ್ಲಿಗೆ ಒಂದು ವಾರದ ವಿರಾಮ!
😀😀
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..