- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
ಹದಿನಾರನೇಯ ದೃಶ್ಯದ ಕೊನೆಯಲ್ಲಿ ಸೂರ್ಯೋದಯ ಚಂದ್ರ ಅಸ್ತದ ವೈಭವವನ್ನು ಕಂಡೆವು. ಇಲ್ಲಿ ಕಣ್ವ ಮಹರ್ಷಿಗಳ ಆಗಮನದ ಸೂಚನೆ ಕೊಟ್ಟಿರುವನು ಅವರ ಶಿಷ್ಯ.
ಇಂಥ ಜ್ಞಾನಿಗಳ ಆಗಮನ, ಸೂರ್ಯ ಉದಯದ ಹಿಂದಿರುವ ಧ್ವನಿ. ಚಂದಿರನ ಅಸ್ತ, ಅಜ್ಞಾನದ ಕತ್ತಲು ದೂರ ಸರಿದಂತೆ. ಚಂದಿರನ ಬೆಳಕಲ್ಲಿ ಮೋಹದ ಮೋಡಿ. ಚಂದಿರ ಸೂರ್ಯನಿಂದಲೇ ಪ್ರಕಾಶ ಪಡೆದಿದ್ದು ಸರಿಯೇ. ಆದರೆ ಸೂರ್ಯನನ್ನು ದಿಟ್ಟಿಸುವದು ಅಸಾಧ್ಯ! ಚಂದಿರನನ್ನು ದಿಟ್ಟಿಸಬಹುದು.
ಈಗ ಕಣ್ವ ಸೂರ್ಯನನ್ನು ಎದುರಿಸಲು, ಶಕುಂತಲೆಯ ಸಖಿಯರು ಹಾಗೂ ಇತರ ಶಿಷ್ಯರು ಹೆದರುತ್ತಾ ಇದ್ದಾರೆ. ಆದರೆ ಶಕುಂತಲೆಯ ಭವಿಷ್ಯಕ್ಕಾಗಿಯೇ ಯಜ್ಞದಲ್ಲಿ ತೊಡಗಿದ ಋಷಿಗಳು, ಅಶರೀರವಾಣಿಯಿಂದ ಎಲ್ಲವನ್ನೂ ತಿಳಿದಿದ್ದಾರೆ. ದುಷ್ಯಂತನ ಕುಡಿ ಅವಳ ಗರ್ಭದಲ್ಲಿ ಬೆಳೆಯುತ್ತಿರುವ ಸಂಗತಿಯ ಅರಿವೂ ಇದೆ. ಶಮಿ ವೃಕ್ಷದಲ್ಲಿ ಅಗ್ನಿ ಅಡಗಿದಂತೆ, ಲೋಕ ಕಲ್ಯಾಣಕ್ಕಾಗಿ, ದುಷ್ಯಂತನ ಅಂಶ ಶಕುಂತಲೆಯಲ್ಲಿ ಅಡಕವಾಗಿದೆ.
ಶಕುಂತಲೆಯನ್ನು ಪತಿಗ್ರಹಕ್ಕೆ ಕಳಿಸಲು ಎಲ್ಲಾ ಸಿದ್ಧತೆ ಆಗಲಿ ಎಂದು ಆದೇಶ ಕೊಡುವರು.
ಸಖಿಯರನ್ನು ಅಗಲಬೇಕಲ್ಲಾ ಎಂದು ದು:ಖಿತಳಾದ ಶಕುಂತಲೆ
” ದುರ್ಲಭಂ ಇದಾನೀಂ ಮೆ ಸಖಿ ಮಂಡನಮ್ ಭವಿಷ್ಯತಿ”
ಇನ್ನು ಮುಂದೆ ಇಂಥ ಸಖಿಯರ ಸಾಂಗತ್ಯ ದೊರಕುವದು ದುರ್ಲಭವೇ ಸರಿ ಎಂದು ಚಿಂತಿಸುತ್ತಾ ಕಣ್ಣೀರು ಹಾಕುವಳು.
” ಸಖೀ, ನ ಉಚಿತಂ ತೇ ಮಂಗಲಕಾಲೇ ರೋದಿತುಮ್ “
ಎಂದು ಸಮಾಧಾನ ಮಾಡುವರು.
ಆಶ್ರಮದ ಇತರ ಸಖಿಯರೆಲ್ಲ,
“ವೀರಮಾತೆ ಆಗು ” ಎಂದು ಅವಳನ್ನು ಹರಸುತ್ತಾ ಹೂವಿನ ಆಭರಣಗಳನ್ನು ತೊಡಿಸಿ ಗೆಳತಿಯನ್ನು ಅಲಂಕರಿಸುತ್ತಾರೆ.
ಶಕುಂತಲೆಗೆ ಸುಖಮಜ್ಜನ, ಮಂಗಳ ಸ್ನಾನ ಮಾಡಿಸಿ (ಸುಖ ಸಾಗರದಲ್ಲಿ ಮುಳುಗು ಎಂಬ ಹಾರೈಕೆ ) ಆಶ್ರಮದಲ್ಲಿ ಬೆಳೆದ ಹೂ ಬಳ್ಳಿಗಳ ಪ್ರಸಾಧನೆಗಳಿಂದ ಅವಳ ಅಲಂಕಾರ ನಡೆದಿದೆ. ಆಭರಣ ಎಂದರೆ ಬೆಲೆಬಾಳುವ ವಸ್ತುಗಳು. ಪ್ರಸಾಧನೆ ಎಂದರೆ ಅಲ್ಲಿ ಅರಳಿದ ಹೂಗಳ ಹಾರ ಬಳ್ಳಿಯಿಂದ ಕಂಕಣ, ರೇಶಿಮೆ ವಸ್ತ್ರ, ಮೈಗೆ ಅರಿಷಿಣದ ಲೇಪನ.
ಆಶ್ರಮ ವಾಸದ ಸರಳ ಜೀವನ ಶೈಲಿ ಇಲ್ಲಿ ಕಾಣಬಹುದು.
ಶಕುಂತಲೆಯ ಸಹಜ ಸೌಂದರ್ಯವನ್ನು , ಪ್ರಕೃತಿ ದತ್ತ ಆಭರಣಗಳ ಅಲಂಕಾರ ಊಹಿಸುತ್ತಿದ್ದಂತೆ , ಧುತ್ತನೆ ನನ್ನೆದುರು ಬಂದು ನಿಂತಳು ಇಂದಿನ ನವ ವಧೂ. ನಾವು ಈ ವರೆಗೆ ಕಂಡ ಕನ್ಯೆ ಇವಳೇನಾ ಎಂದು ಆಶ್ಚರ್ಯ ಎನಿಸಿತು.
ಎರಡು ಘಂಟೆ ಬ್ಯುಟಿಷಿಯನ್ ಕೈ ಗೊಂಬೆ ಆಗಿ,ಚಿನ್ನದ ಆಭರಣಗಳು ಅಲ್ಲದೇ ನಕಲೀ ವಸ್ತುಗಳನ್ನು ಹೇರಿಕೊಂಡು, ಸಾಂಪ್ರದಾಯಿಕ ಸೀರೆ ಅಲ್ಲ, ಘಾಘರಾ ಉಟ್ಟು ವೇದಿಕೆಗೆ ವರನ ಕೈಹಿಡಿದು ಬಂದಾಗ, ಗಂಟೆಗಟ್ಟಲೆ ಕಾಯ್ದ ಅತಿಥಿಗಳು ಹಸಿವೆಯಿಂದ ಭೋಜನ ಶಾಲೆಗೆ ನುಗ್ಗಿದ್ದರು!!.
ವಧೂವರರ ಕುಲಗೋತ್ರದ ಗೊಡವೆ ಅವರಿಗ್ಯಾಕೆ?
“ಮೃಷ್ಟಾನ್ನಂ ಇತರೇ ಜನಾ:”
ಭೂರಿ ಭೋಜನದಿಂದ ತುಷ್ಟರವರು.
ಮುಂಚಿನ ಕಾಲದಲ್ಲಿ ಇಡೀ ಮದುವೆಗೆ ಆಗುವ ಖರ್ಚು ಈಗ ಮದುವೆಯಲ್ಲಿ ಕೇವಲ ಮೇಕಪ್ (Makeup) ಗೆ ಆಗುವದೆಂದು ಕೇಳಿದಾಗ ಹಳೆಯ ಕಾಲದವರಿಗೆ ಹೃದಯಾಘಾತ ಆದೀತು!
ಇರಲಿ, ಅಭಿಜ್ಞಾನವಾಯಿತು, ಕ್ಷಮಿಸಿ!.
ಅಷ್ಟರಲ್ಲಿ ಗುರು ಕಣ್ವರ ಆಗಮನದ ಘೋಷಣೆ ಕೇಳಿ ಪ್ರಸ್ತುತಕ್ಕೆ ಇಳಿದಾಗ, ಸಹಜ ಸೌಂದರ್ಯದ, ನಾಚಿಕೆಯಿಂದ ಕೆಂಪಾದ ಶಕುಂತಲೆಯ ಮುಖ ಕಂಡಿತು .
ಆಗ ಗುರುಗಳು ಉಪಸ್ಥಿತರಾದರು.
ಶಕುಂತಲೆ ,ಗುರುಗಳಿಗೆ ವಂದಿಸುವ ಸಂಸ್ಕಾರವಂತೆ, ಆದರೂ ಹಿರಿಯಳಾದ ಗೌತಮಿ ಜ್ಞಾಪಿಸುವಳು.
ಶಕುಂತಲೆ
” ತಾತ ವಂದೇ.”
ಎಂದು ನಮಿಸಿದಾಗ ಕಣ್ವರ ಆಶೀರ್ವಾದ ಕೇಳಿರೀ..
“ಯಯಾತೇ: ಇವ ಶರ್ಮಿಷ್ಠಾ ಭರ್ತು: ಬಹುಮತಾ ಭವ .
ಸುತಂ ತ್ವಮ್ ಅಪಿ ಸಾಮ್ರಾಜ್ಯಂ
ಸೇವ ಪುರುಮ್ ಅವಾಪ್ನು ಹಿ.”
ಶರ್ಮಿಷ್ಠೆಯು ಯಯಾತಿಯ ಹೃದಯವನ್ನು ತನ್ನ ಸದ್ಗುಣಗಳಿಂದ, ಸದ್ವರ್ತನೆಯಿಂದ ಆಕರ್ಷಿಸಿದಂತೆ, ನೀನೂ ಕೂಡ ಪುರುವಂಶದ ಮಹಾರಾಜನನ್ನು ಸೇವಿಸು.
ರಾಜಕುಮಾರಿ ಆದರೂ, ದುರ್ದೈವ ವಶಾತ್ ಶರ್ಮಿಷ್ಠೆ, ಶುಕ್ರಾಚಾರ್ಯರ ಮಗಳು ದೇವಯಾನಿಯ ಕುತಂತ್ರದಿಂದ, ಸೇವಕಿ ಆಗಿ ಅವಳ ಜೊತೆಗೆ ಹೋಗುವಳು. ಪುರುವಂಶದ ಯಯಾತಿ, ದೇವಯಾನಿಯ ಪತಿ ಯೌವನವನ್ನು ಆಶಿಸಿದಾಗ, ಅವಳ ಮಕ್ಕಳಲ್ಲಿ ಯಾರೂ ಸಿದ್ಧರಿಲ್ಲ. ಆದರೆ ಯಯಾತಿಯಿಂದ ಶರ್ಮಿಷ್ಠೆಗೆ ಹುಟ್ಟಿದ ಪುರು, ತಂದೆಗೆ ಯೌವನವನ್ನು ಪ್ರದಾನ ಮಾಡಿದ ಕಥೆ ನಮಗೆಲ್ಲ ಗೊತ್ತೇ ಇದೆ.
ಕಣ್ವರು , ಶಕುಂತಲೆಗೆ ಶರ್ಮಿಷ್ಠೆಯಂತೆ ಆಗು ಎಂದು
ಆಶೀರ್ವದಿಸುವ ಜೊತೆಗೇ, ಶರ್ಮಿಷ್ಠೆಯಂತೆ ಕಷ್ಟ ಅನುಭವಿಸಿ
ಪರೀಕ್ಷೆಗೂ ಸಿದ್ಧಳಾಗು ಎಂದು ಸೂಚಿಸಿದರೇ? ಯಾಕೆಂದರೆ
ಮಹರ್ಷಿಗಳು ಭವಿಷ್ಯವನ್ನು ಅರಿತವರು!
ಅಥವಾ ಶರ್ಮಿಷ್ಠೆ ,ಯಯಾತಿಯರದೂ, ಶಕುಂತಲೆ ದುಷ್ಯಂತರಂತೆ ಗಾಂಧರ್ವ ವಿವಾಹ ಆಗಿದ್ದನ್ನು ನೆನಪಿಸಿ, ಉತ್ತಮ ರಾಜಕುಮಾರನನ್ನು ಪುರುವಂಶಕ್ಕೆ ಕೊಡು ಎಂದು ಆಶೀರ್ವದಿಸಿದರು ಎನ್ನಬೇಕೇ !!
ಆಗ ಗೌತಮೀ ಅನ್ನುವಳು.
“ಭಗವಾನ್,ವರ: ಖಲು ಏಷ: ನಾಶೀ:”
“ಮಹರ್ಷಿಗಳೇ ,ತಾವು ಕೊಟ್ಟದ್ದು ವರವನ್ನು, ಆಶೀರ್ವಾದ ಅಲ್ಲ “
ಯಾಕೆಂದರೆ ಆಶೀರ್ವಾದ ಸುಳ್ಳಾಗಬಹುದು ಆದರೆ “ವರ” ಎಂದೂ ಸುಳ್ಳಾಗುವದಿಲ್ಲ.
ವೀರಮಾತೆ ಆಗು. ವಿವಾಹ ಸಂಸ್ಕಾರ ಅತಿ ಮಹತ್ವದ್ದು. ನೀನು ಸ್ವಾತಂತ್ರ್ಯವನ್ನು ಬಯಸುವದೇ ಆದರೆ, ನೀನು ನೀನಾಗೇ ಇರಲು ಮದುವೆಯ ಸಂಸ್ಕಾರ ಯಾಕೆ ಬೇಕು? ಇನ್ನೊಬ್ಬರಿಗೆ ಬೇಕಾದಂತೆ ಸಹಕರಿಸೀ ಬಾಳುವದು ದಾಂಪತ್ಯ ಜೀವನ. ನಿನಗೆ ಬೇಕಾದಂತೆ ಇರಲು ವಿವಾಹ ಬೇಕಿಲ್ಲ. ಸಾಮ್ರಾಜ್ಞಿ ಆಗಲು ಗಂಡನ ಗೌರವ, ಪ್ರೀತಿಗಳಿಗೆ ಪಾತ್ರಳಾಗಬೇಕು. ಈ ಗಹನ ಉಪದೇಶವನ್ನು ಕಣ್ವರ
ಆಶೀರ್ವಾದದಲ್ಲಿ ಗ್ರಹಿಸಬೇಕು.
ಇದು ಇಂದಿನ ವನಿತೆಯರು ಆಲೋಚಿಸ ಬೇಕಾದ ಸಂದೇಶ.
ಉನ್ನತ ಶಿಕ್ಷಣ, ಸಾಕಷ್ಟು ಸಂಪಾದನೆ ಸ್ವಾರ್ಥದಿಂದ ತೆಗೆದುಕೊಳ್ಳುವ ನಿರ್ಣಯದಿಂದ ಸಾಮಾಜಿಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ.
ಯಾಕೆ ಈ ಪುರಾಣ, ಎಂದು ಬೇಜಾರಾಯಿತೇ?
ಇರಲಿ, ಶಕುಂತಲೆಯನ್ನು ಬೀಳ್ಕೊಡುವ ಸಮಯ.
ಬೇಗ ತಯಾರಾಗೀ , “ಬಿದಾಯಿ” ಗಾಗಿ, ಹೊರಡೋಣ.
ಅದೇನು ಆಗಲೇ ಕಣ್ಣೊರೆಸಿಕೊಳ್ಳುತ್ತಿರುವಿರಾ ?
ಅಲ್ಲಿ ಆಶ್ರಮ ವಾಸಿಗಳ ಹಾಗೂ ವಿಶೇಷವಾಗಿ ತಾತ ಕಣ್ವರ ದು:ಖವನ್ನು ಕವಿ ಕಾಲಿದಾಸನ ಬಾಯಿಯಿಂದಲೇ ಕೇಳೋಣ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ