ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರ ಕೃಪೆ : https://raakheeonquora.wordpress.com/2016/02/04/does-india-retain-its-name-bharat-from-king-bharata-son-of-dushyant-and-shakuntala/

ಸುರಭಾರತಿ – ೩೨

ಶ್ರೀಮತಿ ತಾರಾಮತಿ ಕುಲಕರ್ಣಿ
ಇತ್ತೀಚಿನ ಬರಹಗಳು: ಶ್ರೀಮತಿ ತಾರಾಮತಿ ಕುಲಕರ್ಣಿ (ಎಲ್ಲವನ್ನು ಓದಿ)

“ಸೀತೆಗೆ ಉಂಗುರ ಕೊಟ್ಟಿತು ಕೂಸು”
ರಾಮಾಯಣದಲ್ಲಿ ಹನುಮಂತ ಸೀತಾನ್ವೇಷಣೆಗೆ ಹೋಗುವ ಮೊದಲು ರಾಮಚಂದ್ರ ಅವನ ಕೈಯಲ್ಲಿ ತನ್ನ ಮುದ್ರಿಕೆಯ ಉಂಗುರ ಕೊಟ್ಟು “ಇದನ್ನು ಸೀತೆಗೆ ಕೊಡು. ನನ್ನ ಅಭಿಜ್ಞಾನ ಅವಳಿಗೆ‌ ಆಗುವದು” ಎಂದು ಹೇಳಿದನು.

ಸಮುದ್ರ ಉಲ್ಲಂಘನೆಯ ನಂತರ‌ ಅಶೋಕ‌ ವನದಲ್ಲಿ ಸೀತೆಯನ್ನು ಕಂಡು ತಾನು ರಾಮನ ದೂತ ಎಂದು ಖಚಿತಪಡಿಸಲು ಹನುಮಂತ ಸೀತೆಗೆ ಉಂಗುರ ಕೊಡುತ್ತಾ,

ರಾಮನಾಮಾಂಕಿತಂ ಇದಂ ಪಶ್ಯ ದೇವಿ, ಅಂಗುಲೀಯಕಮ್” ಎಂದು, ಅಳುತ್ತಿರುವ ಸೀತೆಯನ್ನು ಸಮಾಧಾನ ಪಡಿಸುವನು.

ರಾಮನ ಕರವಿಭೂಷಿತ ಉಂಗುರವನ್ನು ಸ್ವೀಕರಿಸಿ ಸೀತಾ ಮುದಿತಳಾದಳು. ಪರಿತುಷ್ಟಳಾಗಿ ಆಂಗುಲೀಯಕದ ಸ್ಥಾನದಲ್ಲಿ ತನ್ನ ಪತಿಯನ್ನೇ ಕಂಡಷ್ಟು ಹರ್ಷಿಸುವಳು. ರಾಹುಮುಕ್ತನಾದ ಚಂದ್ರನಂತೆ ಅವಳ ಕಣ್ಣುಗಳು ಹೊಳೆಯುತ್ತಿದ್ದವು.

ಇದು ರಾಮಾಯಣದ ಉಂಗುರದ ಕಥೆಯಾದರೆ ಶಾಕುಂತಲದಲ್ಲಿ ಕಳೆದ ಉಂಗುರ ದೊರಕಿ ಅಭಿಜ್ಞಾನವನ್ನು ತಂದಿತು ಅರಸನಿಗೆ.

ಉಂಗುರದ ಬೆರಳಿನಿಂದ ನಾಡಿಯೊಂದು ಹೃದಯಕ್ಕೆ, ಅನಾಹತ ಚಕ್ರಕ್ಕೆ ಹೋಗುತ್ತದೆ. ಅದನ್ನು ಕಂಡಾಗ ಧರಿಸಿದವರ ಹೃದಯ ತರಂಗಗಳು ನೋಡುವವರ ಹೃದಯವನ್ನು ನೇರವಾಗಿ ಪ್ರವೇಶಿಸಿ ಸಂದೇಶ ತಲುಪಿಸುತ್ತಿರಬೇಕು.

ಈಗ ಇಲ್ಲಿ ಮಾರೀಚರ ಆಶ್ರಮದಲ್ಲಿ ಶಕುಂತಲೆ ದುಷ್ಯಂತರ‌ ಪುನರ್ಮಿಲನ ಆಗಿದೆ. ಈ ಸಂದರ್ಭದಲ್ಲಿ ದುಷ್ಯಂತ ಮತ್ತೆ ಆ ಉಂಗುರವನ್ನು ಶಕುಂತಲೆಗೆ ಧರಿಸು ಎಂದು ಹೇಳಿದಾಗ ಶಕುಂತಲೆ ಹೀಗೆ ಹೇಳುವಳು.

ನ ಅಸ್ಯ‌ ವಿಶ್ವಸಿಮಿ. ಆರ್ಯಪುತ್ರ, ಏವ ,ಏತತ್ ಧಾರಯತು“.

“ನನಗೆ ಅದರಲ್ಲಿ ವಿಶ್ವಾಸ ಇಲ್ಲದಾಗಿದೆ!. ಆರ್ಯಪುತ್ರ, ನೀವೇ ಇದನ್ನು ಧರಿಸಿಬಿಡಿ”

ಋತುವಿನಂತಿರುವ ದುಷ್ಯಂತನನ್ನು ಲತಾ ರೂಪದ ಶಕುಂತಲೆ ಆವರಿಸಿ ಹೂವು ಎಂಬ ಉಂಗುರವನ್ನು ಧರಿಸಲು ಹೇಳಿದ ಅವನ ಆಶಯವನ್ನು ನಿರಾಕರಿಸಿದಳು. ಆ ಉಂಗುರ ತಂದ ಬವಣೆ ನೆನಪಾಗಿ ಇನ್ನು ಅದರ ಉಸಾಬರಿ ಬೇಡ ಎಂದು ನಿರ್ಧರಿಸಿದಳು ಶಕುಂತಲೆ. ಹಿಂದೆ ಆದ ವನವಾಸ ಸಾಕು. ಮತ್ತೆ ಅಂಥಾ ಅವಾಂತರ ಎದುರಿಸಲು ಅವಳು ಸಿದ್ಧಳಿಲ್ಲ.

ರಾಜದಂಪತಿಗಳು ಪುತ್ರನೊಂದಿಗೆ ಮಾರೀಚರನ್ನು ಸಮೀಪಿಸಿದರು. ಮಾರೀಚರು ಅದಿತಿಗೆ ದುಷ್ಯಂತನ ಪರಿಚಯ ಮಾಡಿಕೊಡುತ್ತಾರೆ.

ದಾಕ್ಷಾಯಣಿ,
ಪುತ್ರಸ್ಯ ತೇ ರಣಶಿರಸ್ಯಯಮ್ ಅಗ್ರಯಾಯೀ , ದುಷ್ಯಂತ ಇತಿ ಅಭಿಹಿತ: ಭುವನಸ್ಯ ಭರ್ತಾ.
ಚಾಪೇನ‌ ಯಸ್ಯ ವಿನಿವರ್ತಿತಕರ್ಮ ಜಾತಂ, ತತ್ ಕೋಟಿ ಮತ್ಕುಲಿಶಮ್ ಆಭರಣಮ್ ಮಘೋನ:

“ದಾಕ್ಷಾಯಣಿ, ಯುದ್ಧದಲ್ಲಿ ನಿನ್ನ ಮಗನ ಜೊತೆ ಯಾವಾಗಲೂ ನೇತೃತ್ವದಲ್ಲಿ ಹೋರಾಡುವ, ಜಗತ್ ರಕ್ಷಣೆ ಮಾಡುವ ರಾಜಾ ದುಷ್ಯಂತನೀತನು. ಈತನ ಶೌರ್ಯ‌ ಸಾಹಸದ ಎದುರು ಇಂದ್ರನ ವಜ್ರಾಯುಧ ಕೇವಲ ಆಭರಣ ಮಾತ್ರವಾಗಿದೆ.”

“ಇವನ ಆಕೃತಿಯೇ ನಿಮ್ಮ ಮಾತಿಗೆ ನಿದರ್ಶನವಾಗಿದೆ” ಎಂದು ಅದಿತಿ ದುಷ್ಯಂತನ ಬಗೆಗೆ ಮೆಚ್ಚುಗೆ ‌ವ್ಯಕ್ತಪಡಿಸಿದಳು.

ಈ ರೀತಿ ಇಂದ್ರನ ತಾಯಿ ತಂದೆಯರಿಂದ ದಂಪತಿಗಳಿಗೆ ಸ್ವಾಗತ ದೊರಕಿತು.

ದಕ್ಷಪ್ರಜಾಪತಿಯ ಮಗಳು ದಾಕ್ಷಾಯಣಿ ಮತ್ತು ಮರೀಚಿ ಮಹರ್ಷಿಗಳ ಮಗ ಮರೀಚ ಅಥವಾ ಕಶ್ಯಪ, ಇವರು ಪೂಜ್ಯ ದಂಪತಿಗಳು. ಇವರಿಗೆ ದ್ವಾದಶ ಆದಿತ್ಯರು ಮಕ್ಕಳು. ಈ ದಂಪತಿಗಳು ಇಲ್ಲಿ ಯಜ್ಞ ಯಾಗಾದಿ‌ ಕರ್ಮ ನಿರತರು.

ಈ ಪುಣ್ಯ ಭೂಮಿಯನ್ನು ವಿಷ್ಣು ತನ್ನ ಜನನ ಸ್ಥಾನವಾಗಿ ಆರಿಸಿದ್ದನು. ಯಜ್ಞದ ಆಹುತಿಯನ್ನು ಸ್ವಯಂ ವಿಷ್ಣುವೇ ಸ್ವೀಕರಿಸುವನು. ಎಲ್ಲರ ದೇಹವೆಂಬ ಪುರದಲ್ಲಿ ವಾಸಿಸುವವನು ಆದ್ದರಿಂ‌ದ ಇವನನ್ನು ಪುರುಷ ಎಂದು ಕರೆಯಲಾಗಿದೆ. ಅಲ್ಲದೇ ಇಡೀ ವಿಶ್ವವನ್ನು ವ್ಯಾಪಿಸಿದ‌ವ ವಿಷ್ಣು.

ಇಲ್ಲಿ ಕಶ್ಯಪ ದಂಪತಿಗಳ ಹಿರಿಮೆಯನ್ನು ಎತ್ತಿ ಹಿಡಿದಿದ್ದಾನೆ‌ ಕವಿ. ರಾಜ ದಂಪತಿಗಳು, ಪುತ್ರ ಸಹಿತರಾಗಿ ಋಷಿ ದಂಪತಿಗಳಿಗೆ ವಿನಯದಿಂದ ವಂದಿಸಿ ಆಶೀರ್ವಾದ ಪಡೆಯುವರು.

ಆಖಂಲ ಸಮ: ಭರ್ತಾ, ಜಯಂತ ಪ್ರತಿಮ: ಸುತ: .
ಆಶೀರನ್ಯಾ ನ ತೇ ಯೋಗ್ಯಾ
ಪೌಲೋಮೀ ಸದೃಶೋ ಭವ‌
.”

“ನಿನ್ನ ಪತಿ ಇಂದ್ರನಂತೆ ಮಿಂಚುತ್ತಿರುವನು. ನಿನ್ನ ಮಗ ಎರಡನೆಯ ಜಯಂತನೇ. ನೀನು ಇಂದ್ರಪತ್ನಿ ಶಚಿದೇವಿಯಂತೆ ಶೋಭಿಸುತ್ತಿರುವಿ”

ಇದು ಮಹರ್ಷಿಗಳ ಘನವಾದ ಆಶೀರ್ವಾದ.

ಪೌಲೋಮೀ ಅಂದರೆ ಶಚೀದೇವಿ, ಪುಲಮನ್ ಎಂಬ ರಾಕ್ಷಸನ ಮಗಳು. ಇವನು ಇಂದ್ರನಿಂದ ಹತನಾದವನು. ಶ್ರದ್ಧಾ ವಿತ್ತಂ ವಿಧಿ: ಚ ಇತಿ ತ್ರಿತಯಮ್ …ಶ್ರದ್ಧೆ, ಸಂಪತ್ತು, ವಿಧಿ ಈ ಮೂರು ಗುಣಗಳ ಸಮಾಗಮ ದುಷ್ಯಂತನಲ್ಲಿದೆ.

ಉದೇತಿ ಪೂರ್ವಂ ಕುಸುಮಂ ತತ:
ಫಲಂ ಘನೋದಯ: ಪ್ರಾಕ್ತ ತದನಂತರಂ‌ ಪಯ:
ನಿಮಿತ್ತ ನೈಮಿತ್ತಿಕಯೊರಯಂ ಕ್ರಮಸ್ತವ‌ ಪ್ರಸಾದಸ್ಯ ಪುರಸ್ತು ಸಂಪದ:

ಇದು ದುಷ್ಯಂತ ವಿನಮ್ರತೆಯಿಂದ ಆಡಿದ ಮಾತು…

“ಮೊದಲು ಹೂವು ವಿಕಸಿಸುವದು.
ಆಮೆಲೆ ಹಣ್ಣು ಬಿಡುವದು.
ಮೊದಲು ಮೋಡಗಳು ಮೇಲೇರುವವು ಆಮೇಲೆ ಮಳೆಗರೆಯುತ್ತವೆ.
ಇದು ಕಾರ್ಯ ಕಾರಣ ಸಂಬಂಧದ ಕ್ರಮ. ಆದರೆ ಇಲ್ಲಿ ನನಗೆ ಫಲವೇ ಮೊದಲು ದೊರಕಿದೆ!
ನಂತರ ತಮ್ಮ ದರ್ಶನ ಲಾಭ ಆಗಿದೆ.”

ಪತ್ನಿ, ಪುತ್ರ ಫಲ ದೊರಕಿದೆ.
ಇದು ಸೃಷ್ಟಿಕರ್ತನ ಕೃಪೆಯೇ.

ಆನೆ ಎದುರು ಇದ್ದಾಗ ಸಂಶಯ ಉತ್ಪನ್ನ ಆಗಿ ಆನೆಯನ್ನು ಗುರುತಿಸದೇ ಹೋದೆ.
ಶಕುಂತಲೆ ಎದುರು ಬಂದಾಗ ಗುರುತಿಸಲಿಲ್ಲ. ಆನೆ ದಾಟಿ ಹೋದ ಮೇಲೆ ಅದರ ಹೆಜ್ಜೆಯ ಗುರುತುಗಳಿಂದ, ಆಚೆ ಹೋದದ್ದು ಆನೆ ಎಂದು ಗುರುತಿಸಿದೆನಲ್ಲ. ಶಕುಂತಲೆಯ ಗುರುತು ಸಿಕ್ಕಾಗ ಕಾಲ ಮಿಂಚಿತ್ತು”. ಎಂದು ರಾಜ ಪ್ರಲಾಪಿಸುವನು ಪಶ್ಚಾತ್ತಾಪದಿಂದ.

ಆಗ ಮಾರೀಚರು ಸಮಾಧಾನಪಡಿಸುವರು.

ಅಲಮ್ ಅಪರಾಧ ಶಂಕಯಾ.
ಸಂಮೋಹ: ಅಪಿ ತ್ವಯೀ‌ ಅನುಪಪನ್ನ:. ಶ್ರೂಯತಾಮ್

“ಈ ಅಪರಾಧಿ ಮನೋಭಾವದಿಂದ ದೂರಾಗು, ಮಗನೇ! ಮಾಯೆಯ ಪ್ರಭಾವದಿಂದ ಯಾರೂ ಪಾರಾಗಲಾರರು.”

ಮೇನಕೆ ಶಕುಂತಲೆಯನ್ನು ಇಲ್ಲಿಗೆ ಕರೆದುಕೊಂಡು ಬಂದಾಗಲೇ ನಾನು ಕಂಡುಕೊಂಡಿದ್ದೆ. ಇದೆಲ್ಲ ದುರ್ವಾಸರ ಶಾಪದ ಪರಿಣಾಮ ಎಂದು. ಉಂಗುರದ ದರ್ಶನದಿಂದ ಶಾಪ ವಿಮೋಚನೆ ಆಯಿತು. ಇದನ್ನು ಕೇಳಿ ದುಷ್ಯಂತ ದೀರ್ಘ ನಿಟ್ಟುಸಿರು ಬಿಟ್ಟು, ತಾನು ಅಪರಾಧದಿಂದ ಮುಕ್ತನಾದೆನು‌ ಎಂದು ಸಮಾಧಾನ ಪಡುವನು. ಶಕುಂತಲೆಗೂ ಶಾಪದ ಸ್ಮೃತಿ ಇರಲಿಲ್ಲ. ಈ ಶಾಪದ ಕಾರಣ ದುಷ್ಯಂತ ತನ್ನನ್ನು ಮರೆತದ್ದು ಎಂಬ ಅರಿವಾಯಿತು. ಮಾರೀಚರು ಶಕುಂತಲೆಗೆ ಉಪದೇಶಿಸಿದರು

“ಶಾಪದ ಕಾರಣ ಇಷ್ಟೆಲ್ಲಾ ಅವಾಂತರ ಆಯಿತು. ಈಗ ಅಜ್ಞಾನ ದೂರಾಯಿತು. ಕನ್ನಡಿಯ ಮೇಲಿನ ಧೂಳು ಸರಿದು ಬಿಂಬ ಸ್ಪಷ್ಟವಾಗಿ ಕಾಣುತ್ತಿದೆ. ಈಗ ಪುತ್ರನ ಸಮಾಗಮದಿಂದ ಸಂತಸವನ್ನು ಆಚರಿಸಲು ಜಾತಕರ್ಮ ಸಮಾರಂಭ ಆಚರಿಸೋಣ” ಎಂದರು ಮಾರೀಚರು. ವಂಶಪ್ರತಿಷ್ಠೆಯ‌ ಈ ಸಮಾರಂಭಕ್ಕೆ ಎಲ್ಲರೂ ಉತ್ಸಾಹದಿಂದ ಸಿದ್ಧ​ರಾದರು.

ಪುತ್ರ ಚಕ್ರವರ್ತಿ ಆಗುವನೆಂದು ಭವಿಷ್ಯ ನುಡಿದರು. ಏಳು ಲೋಕಗಳನ್ನು ಯಶಸ್ವಿಯಾಗಿ ಆಳುವನು. ಈಗ ಇಲ್ಲಿ ಆಶ್ರಮದಲ್ಲಿ ಸರ್ವ ಪ್ರಾಣಿಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡು ಸರ್ವದಮನ ಎನಿಸಿದನು. ಇನ್ನು ಮುಂದೆ ಸಕಲ ಲೋಕಗಳನ್ನು ಕಾಪಾಡುವ‌ವನಾದ್ದರಿಂದ
” ಭರತ “
ಎಂಬ ಹೆಸರಿನಿಂದ ಪ್ರಸಿದ್ಧನಾಗುವನು.

ಲೋಕಸ್ಯ ಭರಣಾತ್ ಭರತ: ” ಮಾರೀಚರ ಆಶೀರ್ವಚನ ಇದು.

ತವ ಭವತು ಬಿಡೌಜಾ: ಪ್ರಾಜ್ಯವೃಷ್ಟಿ: ಪ್ರಜಾಸು.
ತ್ವಮಪಿ ವಿತತ ಯಜ್ಞ: ವಜ್ರಿಣಮ್ ಪ್ರೀಣಯಸ್ವ
ಯುಗಶತಪರಿವರ್ತಾನೇವಮ್ ಅನ್ಯೋನ್ಯ ಕೃತ್ಯೈ:
ನಯತಮ್ ಉಭಯ ಲೋಕಾನುಗ್ರಹ ಶ್ಲಾಘನೀಯ:

“ಪ್ರಜಾಹಿತಕ್ಕಾಗಿ ಇಂದ್ರದೇವ ಸಾಕಷ್ಟು ಮಳೆಗರೆಯಲಿ. ನೀನೂ ಸಹ ಯಜ್ಞ ಯಾಗಾದಿ ಕರ್ಮಗಳನ್ನು ಮಾಡುತ್ತ ಇಂದ್ರನ ಪ್ರೀತಿಗೆ ಪಾತ್ರನಾಗು. ಎರಡೂ ಲೋಕದಲ್ಲಿ ಶತ ಶತಮಾನ ನಿನ್ನ ಹೆಸರು ನಿನ್ನ ಉತ್ತಮ ಕಾರ್ಯಗಳಿಂದ ಪ್ರಸಿದ್ಧಿ ಹೊಂದಲಿ” ದುಷ್ಯಂತನನ್ನು ಆಶೀರ್ವಾದಿಸಿದರು ಮಾರೀಚ ಮಹರ್ಷಿಗಳು.

ಭರತ ವಾಕ್ಯದೊಂದಿಗೆ‌ ಏಳನೆಯ ಅಂಕ ಕೊನೆಗೊಳ್ಳಲಿದೆ.

ಎಲ್ಲರೂ ಗ್ರೂಪ್ ಫೋಟೋಗೆ ತಯಾರಾಗಿ ಬಿಡಿ !