ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹಿಂದಿರುಗಿಸಲಿ ಹೇಗೆ?

"...ನೆನಪಿಸಿಕೊ ಅದೆಷ್ಟು ಸಂಜೆಗಳ ಏಕಾಂತಗಳನ್ನು ಹಂಚಿಕೊಂಡಿದ್ದೆವು!..." ಎನ್ನುತ್ತಾ ಲೇಖಕ ಮಧುಸೂಧನ್ ಅವರು ಏನೆಲ್ಲಾ ರಿಟರ್ನ್ ಮಾಡುವ ಬಗ್ಗೆ ಬರೆಯುತ್ತಾರೆ..ಯಾಕೆ? ನಿಟ್ಟುಸಿರು ತುಂಬಿದ ಈ ಕವಿತೆ ಓದುಗರ ಅವಗಾಹನೆಗೆ..
ಕು.ಸ.ಮಧುಸೂದನ ರಂಗೇನಹಳ್ಳಿ
ಇತ್ತೀಚಿನ ಬರಹಗಳು: ಕು.ಸ.ಮಧುಸೂದನ ರಂಗೇನಹಳ್ಳಿ (ಎಲ್ಲವನ್ನು ಓದಿ)

ವಿದಾಯ ಹೇಳುವಾಗ
ಪರಸ್ಪರ ವಿನಿಮಯಿಸಿಕೊಂಡಿದ್ದನ್ನೆಲ್ಲ
ಹಿಂದಿರುಗಿಸಿಬಿಡಬೇಕೆಂಬುದು
ಪ್ರೇಮದ ಹಳೆ ನಿಯಮವಂತೆ

ಏನೆಲ್ಲ ವಿನಿಮಯಿಸಿಕೊಂಡಿದ್ದೆವು
ಹೊಸತರಲ್ಲಿ ಪ್ರೇಮಪತ್ರಗಳು
ಯಾವ್ಯಾವುದೊ ಹಬ್ಬ ಹುಣ್ಣಿಮೆಗಳ
ಗ್ರೀಟಿಂಗ್ ಕಾರ್ಡುಗಳು
ಇದೀಗ ಹಳದಿಗಟ್ಟಿರಬಹುದಾದ ಹಾಳೆಗಳ
ಹಳೆಯ ಪುಸ್ತಕಗಳು
ಮತ್ತೇನು ನೆನಪಿದೆ?

ನೀನೊಂದು ಪಟ್ಟಿ ಮಾಡು.
ಏನಿಲ್ಲ ಇಷ್ಟೇನೆ ಎಂದೆಷ್ಟು ಸುಲಭವಾಗಿ ಹೇಳಿಬಿಟ್ಟೆ

ನೆನಪಿಸಿಕೊ
ಅದೆಷ್ಟು ಸಂಜೆಗಳ
ಏಕಾಂತಗಳನ್ನು
ಹಂಚಿಕೊಂಡಿದ್ದೆವು!

ಹೇಗೆ ಹಿಂದಿರುಗಿಸುವುದು
ಸುಕ್ಕಿರದಂತೆ ನಿನ್ನ ಸೀರೆಯ ನೆರಿಗೆಗಳ
ಅವುಗಳೊಳಗೆ ಕಳೆದುಹೋದ ನನ್ನ ಯೌವನದ
ಬಿರುಬೀಸು ಗಳಿಗೆಗಳ!